ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಷೇರುಪೇಟೆಗಳ ಮೇಲೆ ಕೊರೊನಾ ಛಾಯೆ; 1,400 ಅಂಶ ಕುಸಿದ ಸೆನ್ಸೆಕ್ಸ್‌

Last Updated 12 ಏಪ್ರಿಲ್ 2021, 9:09 IST
ಅಕ್ಷರ ಗಾತ್ರ

ಬೆಂಗಳೂರು: ಮಹಾರಾಷ್ಟ್ರ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಕೊರೊನಾ ವೈರಸ್‌ ಸೋಂಕು ಪ್ರಕರಣಗಳ ಸಂಖ್ಯೆ ಏರಿಕೆಯಾಗಿರುವುದು ದೇಶದ ಷೇರುಪೇಟೆಗಳ ಮೇಲೆ ಪ್ರಭಾವ ಬೀರಿದೆ. ಸೋಮವಾರ ವಹಿವಾಟು ಆರಂಭದಲ್ಲಿ ಸೆನ್ಸೆಕ್ಸ್‌ 1,400 ಅಂಶಗಳಷ್ಟು ಕುಸಿದಿದೆ.

ಹಲವು ರಾಜ್ಯಗಳಿಗೆ ಲಾಕ್‌ಡೌನ್‌ ಭೀತಿ ಎದುರಾಗಿರುವುದು ಹೂಡಿಕೆದಾರರಲ್ಲಿ ಆತಂಕಕ್ಕೆ ಕಾರಣವಾಗಿದೆ. ಅಧಿಕ ಮಾರುಕಟ್ಟೆ ಮೌಲ್ಯ ಹೊಂದಿರುವ ಎಚ್‌ಡಿಎಫ್‌ಸಿ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌, ರಿಲಯನ್ಸ್‌ ಇಂಡಸ್ಟ್ರೀಸ್‌ ಹಾಗೂ ಐಸಿಐಸಿಐ ಬ್ಯಾಂಕ್‌ ಷೇರುಗಳ ಬೆಲೆ ಶೇ 3ರಷ್ಟು ಇಳಿಕೆಯಾಗಿದೆ. ಇಂಡಸ್‌ಇಂಡ್‌ ಬ್ಯಾಂಕ್‌ ಅತಿ ಹೆಚ್ಚು ಶೇ 8ರಷ್ಟು ನಷ್ಟಕ್ಕೆ ಒಳಗಾಗಿದೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 1,427 ಅಂಶಗಳು (ಶೇ 2.88) ಕಡಿಮೆಯಾಗಿ 48,164.32 ಅಂಶ ತಲುಪಿದರೆ, ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 431.90 ಅಂಶಗಳು (ಶೇ 2.91) ಕುಸಿದು 14,402.95 ಅಂಶಗಳಲ್ಲಿ ವಹಿವಾಟು ನಡೆದಿದೆ.

ಕೋವಿಡ್‌ ಎರಡನೇ ಅಲೆಯು ದೊಡ್ಡ ಮಟ್ಟದಲ್ಲಿ ಪರಿಣಾಮ ಉಂಟುಮಾಡಿದ್ದು, ಆರ್ಥಿಕತೆ ಮತ್ತು ಷೇರುಪೇಟೆಗಳ ಮೇಲೆ ಆಗಬಹುದಾದ ನಕಾರಾತ್ಮ ಪ್ರಭಾವವು ಹೂಡಿಕೆದಾರರಲ್ಲಿ ತಲ್ಲಣ ಸೃಷ್ಟಿಸಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಕೋವಿಡ್‌–19 ಚಿಕಿತ್ಸೆಗೆ ಬಳಕೆಯಾಗುವ ಔಷಧಗಳನ್ನು ಪೂರೈಸುವ ಸಿಪ್ಲಾ, ಡಾ.ರೆಡ್ಡೀಸ್‌ ಹಾಗೂ ಸನ್‌ ಫಾರ್ಮಾ ಕಂಪನಿಗಳ ಷೇರು ಬೆಲೆ ಶೇ 5ರವರೆಗೂ ಏರಿಕೆ ಕಂಡಿದೆ. ಟಿಸಿಎಸ್‌ ಇಂದು ಮಾರ್ಚ್‌ ತ್ರೈಮಾಸಿಕದ ಫಲಿತಾಂಶ ಪ್ರಕಟಿಸುವ ಸಾಧ್ಯತೆ ಇದೆ.

ಸೆನ್ಸೆಕ್ಸ್‌ ಕಂಪನಿಗಳ ಸಾಲಿನಲ್ಲಿ ಎಸ್‌ಬಿಐ, ಬಜಾಜ್‌ ಫೈನಾನ್ಸ್‌, ಬಜಾಜ್‌ ಆಟೊ, ಟೈಟಾನ್‌, ಬಜಾಜ್‌ ಫೀನ್‌ಸರ್ವ್‌ ಹಾಗೂ ಮಾರುತಿ ಸೇರಿದಂತೆ ಬಹುತೇಕ ಕಂಪನಿಗಳ ಷೇರು ಬೆಲೆ ಇಳಿಮುಖವಾಗಿದೆ. ಅಲ್ಪ ಗಳಿಕೆ ದಾಖಲಿಸಿದ್ದ ಇನ್ಫೊಸಿಸ್‌ ಷೇರು ಈಗ ಇಳಿಮುಖವಾಗಿದೆ.

ಕಳೆದ ಶುಕ್ರವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹653.51 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಅಮೆರಿಕನ್‌ ಡಾಲರ್‌ ಎದುರು ರೂಪಾಯಿ ಮೌಲ್ಯ ಕುಸಿದಿದ್ದು, ಪ್ರತಿ ಡಾಲರ್‌ಗೆ ₹ 74.96ರಲ್ಲಿ ವಹಿವಾಟು ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT