ಮಂಗಳವಾರ, ಅಕ್ಟೋಬರ್ 26, 2021
21 °C

ಮ್ಯೂಚುವಲ್ ಫಂಡ್: ಏನಿದು ಎಕ್ಸಿಟ್ ಲೋಡ್?

ಅವಿನಾಶ್ ಕೆ.ಟಿ. Updated:

ಅಕ್ಷರ ಗಾತ್ರ : | |

ಮ್ಯೂಚುವಲ್ ಫಂಡ್ ಮೂಲಕ ಹೂಡಿಕೆ ಮಾಡುವ ಮುನ್ನ ತಿಳಿಯಬೇಕಾದ ಪ್ರಮುಖ ವಿಚಾರಗಳಲ್ಲಿ ಎಕ್ಸಿಟ್ ಲೋಡ್ ಕೂಡ ಒಂದು. ನಿರ್ದಿಷ್ಟ ಫಂಡ್‌ನಿಂದ ಅವಧಿಗೂ ಮುನ್ನ ಹೊರಬರಬೇಕಾದರೆ ಎಕ್ಸಿಟ್ ಲೋಡ್ ಶುಲ್ಕ ಅನ್ವಯ ಆಗುತ್ತದೆ. ಎಕ್ಸಿಟ್ ಲೋಡ್ ಲೆಕ್ಕಾಚಾರ ಹೇಗೆ? ಎಲ್ಲ ಸಂದರ್ಭಗಳಲ್ಲೂ ಎಕ್ಸಿಟ್ ಲೋಡ್ ಅನ್ವಯಿಸುತ್ತದೆಯೇ? ಯಾವ ಮಾದರಿಯ ಮ್ಯೂಚುವಲ್ ಫಂಡ್‌ಗಳಿಗೆ ಎಕ್ಸಿಡ್ ಲೋಡ್ ಇರುವುದಿಲ್ಲ? ಇವುಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.

ಏನಿದು ಎಕ್ಸಿಟ್ ಲೋಡ್?: ಅವಧಿಗೆ ಮುನ್ನ ಮ್ಯೂಚುವಲ್ ಫಂಡ್ ಹೂಡಿಕೆಯನ್ನು ಹಿಂಪಡೆದುಕೊಂಡರೆ ಸ್ವತ್ತು ನಿರ್ವಹಣಾ ಕಂಪನಿ
ಗಳು (ಅಸೆಟ್ ಮ್ಯಾನೇಜ್ಮೆಂಟ್ ಕಂಪನಿಗಳು) ಹೂಡಿಕೆದಾರರಿಗೆ ವಿಧಿಸುವ ಶುಲ್ಕ ಎಕ್ಸಿಟ್ ಲೋಡ್. ಹೂಡಿಕೆದಾರರು ಅವಧಿಗೆ ಮುನ್ನ ಹೂಡಿಕೆ ಮೊತ್ತ ಹಿಂಪಡೆಯುವುದನ್ನು ತಡೆಯಲು ಎಕ್ಸಿಟ್ ಲೋಡ್ ಶುಲ್ಕವನ್ನು ಸ್ವತ್ತು ನಿರ್ವಹಣಾ ಕಂಪನಿಗಳು ವಿಧಿಸುತ್ತಿವೆ. ಮ್ಯೂಚು
ವಲ್ ಫಂಡ್‌ನಿಂದ ನಿರ್ಗಮಿಸಲು ಹೂಡಿಕೆದಾರ ತೆರುವ ಶುಲ್ಕ ಎಂದು ಸರಳವಾಗಿ ಇದನ್ನು ಕರೆಯಬಹುದು. ‌

ಒಂದು ಫಂಡ್‌ನಿಂದ ಮತ್ತೊಂದು ಫಂಡ್‌ಗೆ ಹೂಡಿಕೆ ವರ್ಗಾಯಿಸುವ ಸಂದರ್ಭದಲ್ಲಿಯೂ ಎಕ್ಸಿಟ್ ಲೋಡ್ ಅನ್ವಯಿಸುತ್ತದೆ. ಹಾಗಾಗಿ ಯಾವುದೇ ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡುವ ನಿರ್ಧಾರ ತೆಗೆದುಕೊಳ್ಳುವ ಮುನ್ನ ಎಕ್ಸಿಟ್ ಲೋಡ್ ಎಷ್ಟು ಎಂದು ತಿಳಿದು ಮುಂದುವರಿಯುವುದು ಬಹಳ ಮುಖ್ಯ. ನಿರ್ದಿಷ್ಟ ಅವಧಿಗಿಂತ ಹೆಚ್ಚಿನ ಅವಧಿಗೆ ನೀವು ಹೂಡಿಕೆ ಮಾಡಿದರೆ ಎಕ್ಸಿಟ್ ಶುಲ್ಕ ಇರುವುದಿಲ್ಲ.

ಎಕ್ಸಿಟ್ ಲೋಡ್ ಲೆಕ್ಕಾಚಾರ ಹೇಗೆ?: ಉದಾಹರಣೆಗೆ ನೀವು ₹ 2000 ಹೂಡಿಕೆ ಮಾಡಿ ಮ್ಯೂಚುವಲ್ ಫಂಡ್ ಮೂಲಕ ₹ 20 ಮೌಲ್ಯದ 100 ಯೂನಿಟ್‌ಗಳನ್ನು ಖರೀದಿಸಿದ್ದೀರಿ ಎಂದಿಟ್ಟುಕೊಳ್ಳಿ. ಕ್ರಮೇಣ, ಅಂದರೆ 6 ತಿಂಗಳ ಬಳಿಕ ಆ ಪ್ರತಿ ಯೂನಿಟ್ ಬೆಲೆ ₹ 30ಕ್ಕೆ ಜಿಗಿದು ನಿಮ್ಮ ಹೂಡಿಕೆ ಮೊತ್ತ ₹ 3,000 ಆಗಿದೆ ಎಂದು ಭಾವಿಸಿ. ಈ ವೇಳೆ ನೀವು ಮ್ಯೂಚುವಲ್ ಫಂಡ್ ಹೂಡಿಕೆ ಹಿಂಪಡೆಯಲು ನಿರ್ಧರಿಸಿದರೆ ಶೇ 1ರಷ್ಟು, ಅಂದರೆ ₹ 30 ಎಕ್ಸಿಟ್ ಲೋಡ್ ಶುಲ್ಕ ತೆರಬೇಕಾಗುತ್ತದೆ. ಅಂದರೆ ₹ 3,000 ಮೌಲ್ಯದಲ್ಲಿ ₹ 2,970 ನಿಮ್ಮ ಕೈಸೇರುತ್ತದೆ. ಒಂದೊಮ್ಮೆ ನೀವು, ಹೂಡಿಕೆ ಮಾಡಿದ ಒಂದು ವರ್ಷದ ಬಳಿಕ ಮ್ಯೂಚುವಲ್ ಫಂಡ್ ಹೂಡಿಕೆ ಹಿಂಪಡೆದುಕೊಂಡರೆ ಯಾವುದೇ ನಿರ್ಗಮನ ಶುಲ್ಕ ಇಲ್ಲದ ಕಾರಣ ₹ 3,000 ನಿಮ್ಮ ಬ್ಯಾಂಕ್ ಖಾತೆಗೆ ಸಂದಾಯವಾಗುತ್ತದೆ.

ಯಾವ ಫಂಡ್‌ಗಳಿಗೆ ಎಕ್ಸಿಟ್ ಲೋಡ್?: ವಿವಿಧ ಮ್ಯೂಚುವಲ್ ಫಂಡ್‌ಗಳಲ್ಲಿ ಎಕ್ಸಿಟ್ ಲೋಡ್ ವಿವಿಧ ರೀತಿಯಲ್ಲಿರುತ್ತದೆ. ಆದರೆ ಎಲ್ಲ ಮ್ಯೂಚುವಲ್ ಫಂಡ್‌ಗಳಲ್ಲೂ ಎಕ್ಸಿಟ್ ಲೋಡ್ ಇರುವುದಿಲ್ಲ ಎನ್ನುವುದು ಮುಖ್ಯವಾಗಿ ಗಮನಿಸಬೇಕಿರುವ ಅಂಶ. ಲಿಕ್ವಿಡ್ ಫಂಡ್‌ಗಳಿಗೆ ಎಕ್ಸಿಟ್ ಲೋಡ್ ಇರುವುದಿಲ್ಲ. ಹೂಡಿಕೆದಾರ ಅಗತ್ಯ ಎನಿಸಿದಾಗ ಹೂಡಿಕೆ ಹಣ ಹಿಂಪಡೆಯಬಹುದು. ಕೆಲವು ಡೆಟ್ ಫಂಡ್‌ಗಳಲ್ಲಿ (ಸಾಲಪತ್ರ ಆಧಾರಿತ ಫಂಡ್‌ಗಳು) ಎಕ್ಸಿಟ್ ಲೋಡ್ ಇರುವುದಿಲ್ಲ, ಕೆಲವು ಫಂಡ್‌ಗಳಲ್ಲಿ ಇರುತ್ತದೆ.

ಈಕ್ವಿಟಿ ಮ್ಯೂಚುವಲ್ ಫಂಡ್ ಮತ್ತು ಹೈಬ್ರೀಡ್ ಫಂಡ್‌ಗಳಲ್ಲಿ ಅವಧಿಗೆ ಮುನ್ನ ಮ್ಯೂಚುವಲ್ ಫಂಡ್‌ನಿಂದ ಹೊರಬಂದರೆ ಎಕ್ಸಿಟ್ ಲೋಡ್ ತೆರಬೇಕಾಗುತ್ತದೆ. ಮತ್ತೊಂದು ವಿಚಾರ ನೆನಪಿರಲಿ ಮ್ಯೂಚುವಲ್ ಫಂಡ್ ಹೂಡಿಕೆ ಮಾಡಿದ ನಂತರ ನಿಮ್ಮ ಫಂಡ್ ನಷ್ಟದಲ್ಲಿದ್ದು, ಆ ವೇಳೆ ಫಂಡ್‌ನಿಂದ ಹೊರಬರಬೇಕಾದರೂ ಎಕ್ಸಿಟ್ ಲೋಡ್ ಅನ್ವಯವಾಗುತ್ತದೆ.

ಮುಂದುವರಿದ ‘ಗೂಳಿ’ ಓಟ

ಷೇರುಪೇಟೆಯಲ್ಲಿ ಗೂಳಿ ಓಟ ಜೋರಾಗಿದೆ. ಅಕ್ಟೋಬರ್ 8ಕ್ಕೆ ಕೊನೆಗೊಂಡ ವಾರದಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಭಾರಿ ಜಿಗಿತ ಕಂಡಿವೆ. 17,895 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ನಿಫ್ಟಿ ವಾರದ ಅವಧಿಯಲ್ಲಿ ಶೇ 2.7ರಷ್ಟು ಗಳಿಕೆ ಕಂಡಿದ್ದರೆ, 60,059 ಅಂಶಗಳಲ್ಲಿ ವಹಿವಾಟು ಮುಗಿಸಿರುವ ಸೆನ್ಸೆಕ್ಸ್ ಶೇ 2.2ರಷ್ಟು ಗಳಿಕೆ ಕಂಡಿದೆ. ನಿಫ್ಟಿ ಮಿಡ್ ಕ್ಯಾಪ್ 100 ಸೂಚ್ಯಂಕ ಶೇ 0.43ರಷ್ಟು ಗಳಿಸಿದ್ದರೆ, ಸ್ಮಾಲ್ ಕ್ಯಾಪ್ ಸೂಚ್ಯಂಕ ಶೇ 1.23ರಷ್ಟು ಜಿಗಿದಿದೆ.

ಬಡ್ಡಿ ದರವನ್ನು ಯಥಾಸ್ಥಿತಿಯಲ್ಲಿಡಲು ಭಾರತೀಯ ರಿಸರ್ವ್ ಬ್ಯಾಂಕ್ ತೀರ್ಮಾನಿಸಿರುವುದು, ಕಂಪನಿಗಳ ತ್ರೈಮಾಸಿಕ ಫಲಿತಾಂಶಗಳು ಉತ್ತಮವಾಗಿ ಬರುತ್ತಿರುವುದು, ಜಾಗತಿಕವಾಗಿ ಕೋವಿಡ್ ಪ್ರಕರಣಗಳು ಗಣನೀಯವಾಗಿ ಹೆಚ್ಚಳ ಕಾಣದಿರುವುದು, ಏಷ್ಯಾದ ಮಾರುಕಟ್ಟೆಗಳು ಒಳಗೊಂಡು ಪ್ರಮುಖ ಮಾರುಕಟ್ಟೆಗಳಲ್ಲಿ ಸಕಾರಾತ್ಮಕತೆ ಕಂಡುಬಂದಿರುವುದು ಸೇರಿದಂತೆ ಹಲವು ಅಂಶಗಳು ಷೇರುಪೇಟೆ ಜಿಗಿತಕ್ಕೆ ಕಾರಣವಾಗಿವೆ.

ವಲಯವಾರು ಪ್ರಗತಿಯಲ್ಲಿ ನಿಫ್ಟಿ ಐ.ಟಿ. ಸೂಚ್ಯಂಕ ಗರಿಷ್ಠ ಶೇ 4.66ರಷ್ಟು ಏರಿಕೆ ದಾಖಲಿಸಿದೆ. ಮಾಧ್ಯಮ ವಲಯ ಶೇ 4.63ರಷ್ಟು, ವಾಹನ ಉತ್ಪಾದನೆ ಶೇ 4.55ರಷ್ಟು, ರಿಯಲ್ ಎಸ್ಟೇಟ್ ಶೇ 2.93ರಷ್ಟು, ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 1.48ರಷ್ಟು, ಲೋಹ ವಲಯ ಶೇ 0.76ರಷ್ಟು ಹೆಚ್ಚಳವಾಗಿವೆ. ನಿಫ್ಟಿ ಫಾರ್ಮಾ ಮತ್ತು ಎಫ್ಎಂಸಿಜಿ ವಲಯಗಳು ಕ್ರಮವಾಗಿ ಶೇ 0.50ರಷ್ಟು ಮತ್ತು ಶೇ 1ರಷ್ಟು ಇಳಿಕೆ ಕಂಡಿವೆ.

ಏರಿಕೆ–ಇಳಿಕೆ: ನಿಫ್ಟಿಯಲ್ಲಿ ಟಾಟಾ ಮೋಟರ್ಸ್ ಶೇ 14.88ರಷ್ಟು, ಒಎನ್‌ಜಿಸಿ ಶೇ 10.14ರಷ್ಟು, ಟೈಟನ್ ಶೇ 8.96ರಷ್ಟು, ಇಂಡಸ್ ಇಂಡ್ ಬ್ಯಾಂಕ್ ಶೇ 6.37ರಷ್ಟು, ಮಹೀಂದ್ರ ಆ್ಯಂಡ್ ಮಹೀಂದ್ರ ಶೇ 6.03ರಷ್ಟು, ರಿಲಯನ್ಸ್ ಶೇ 5.85ರಷ್ಟು, ಟಿಸಿಎಸ್ ಶೇ 5.52ರಷ್ಟು, ಟೆಕ್ ಮಹೀಂದ್ರ ಶೇ 4.99ರಷ್ಟು, ಡಿವೀಸ್ ಲ್ಯಾಬ್ಸ್ ಶೇ 4.95ರಷ್ಟು, ಏಷ್ಯನ್ ಪೇಂಟ್ಸ್ ಶೇ 4.06ರಷ್ಟು, ವಿಪ್ರೋ ಶೇ 3.95ರಷ್ಟು, ಎಚ್‌ಸಿಎಲ್ ಟೆಕ್ ಶೇ 3.80ರಷ್ಟು ಜಿಗಿತ ಕಂಡಿವೆ. ಸಿಪ್ಲಾ ಶೇ 7.06ರಷ್ಟು, ಗ್ರಾಸಿಮ್ ಇಂಡಸ್ಟ್ರೀಸ್ ಶೇ 4.67ರಷ್ಟು, ಶ್ರೀ ಸಿಮೆಂಟ್ ಶೇ 4.61ರಷ್ಟು, ನೆಸ್ಲೆ ಶೇ 2.88ರಷ್ಟು, ಕೋಟಕ್ ಮಹಿಂದ್ರ ಬ್ಯಾಂಕ್ ಶೇ 2.87ರಷ್ಟು, ಹಿಂದೂಸ್ಥಾನ್ ಯುನಿ ಲಿವರ್ ಶೇ 2.37ರಷ್ಟು, ಹಿಂಡಾಲ್ಕೋ ಇಂಡಸ್ಟ್ರೀಸ್ ಶೇ 2.21ರಷ್ಟು, ಪವರ್ ಗ್ರಿಡ್ ಶೇ 2.16ರಷ್ಟು ಕುಸಿತ ಕಂಡಿವೆ.

ಮುನ್ನೋಟ: ಆರ್‌ಬಿಐ ಬಡ್ಡಿ ದರವನ್ನು ಯಥಾಸ್ಥಿತಿಯಲ್ಲಿಟ್ಟ ಕಾರಣ ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರ ಉತ್ಸಾಹ ಹೆಚ್ಚಾಗಿತ್ತು. ಆದರೆ ಅಮೆರಿಕದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯಾಗದಿರುವುದಕ್ಕೆ ಪೇಟೆ ಹೇಗೆ ಪ್ರತಿಕ್ರಿಯಿಸಲಿದೆ ಎಂಬುದನ್ನು ಕಾದುನೋಡಬೇಕಿದೆ. ಈ ವಾರ ಮೈಂಡ್ ಟ್ರೀ, ವಿಪ್ರೊ, ಎಚ್‌ಡಿಎಫ್‌ಸಿ ಬ್ಯಾಂಕ್, ಎಚ್‌ಸಿಎಲ್‌ ಟೆಕ್, ಇನ್ಫೊಸಿಸ್, ಡಿ- ಮಾರ್ಟ್, ಡೆಲ್ಟಾ ಕಾರ್ಪ್ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ. ಫಲಿತಾಂಶಗಳ ಜತೆಗೆ ದೇಶಿಯ ಮತ್ತು ಜಾಗತಿಕ ವಿದ್ಯಮಾನಗಳು ಸೂಚ್ಯಂಕಗಳ ಮೇಲೆ ಪರಿಣಾಮ ಬೀರಲಿವೆ.

(ಲೇಖಕ: ಇಂಡಿಯನ್ ಮನಿ ಡಾಟ್ ಕಾಂನ ಹಣಕಾಸು ಸಲಹಾ ವಿಭಾಗದ ಮುಖ್ಯಸ್ಥ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು