ಗುರುವಾರ , ಅಕ್ಟೋಬರ್ 21, 2021
24 °C
ಷೇರುಪೇಟೆಗಳಲ್ಲಿ ಮುಂದುವರಿದ ಸಕಾರಾತ್ಮಕ ವಹಿವಾಟು

4 ದಿನಗಳಲ್ಲಿ ₹ 6.09 ಲಕ್ಷ ಕೋಟಿ ವೃದ್ಧಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ದೇಶದ ಷೇರುಪೇಟೆಗಳಲ್ಲಿ ಸತತ ನಾಲ್ಕನೇ ದಿನವೂ ಸಕಾರಾತ್ಮಕ ವಹಿವಾಟು ಮುಂದುವರಿಯಿತು.

ಮುಂಬೈ ಷೇರುಪೇಟೆಯ (ಬಿಎಸ್‌ಇ) ಬಂಡವಾಳ ಮೌಲ್ಯವು ನಾಲ್ಕು ದಿನಗಳ ವಹಿವಾಟಿನಲ್ಲಿ ₹ 6.09 ಲಕ್ಷ ಕೋಟಿಗಳಷ್ಟು ವೃದ್ಧಿಯಾಗಿದೆ. ಇದರಿಂದ ಒಟ್ಟಾರೆ ಬಂಡವಾಳ ಮೌಲ್ಯ ₹ 268.30 ಲಕ್ಷ ಕೋಟಿಗಳಿಗೆ ಏರಿಕೆ ಕಂಡಿದೆ.

ನಾಲ್ಕು ದಿನಗಳಲ್ಲಿ ಬಿಎಸ್‌ಇ ಸೆನ್ಸೆಕ್ಸ್‌ 1,095 ಅಂಶಗಳಷ್ಟು ಏರಿಕೆ ಆಗಿದೆ. ನಿಫ್ಟಿ 345 ಅಂಶಗಳಷ್ಟು ಹೆಚ್ಚಾಗಿದೆ.

ಮಂಗಳವಾರದ ವಹಿವಾಟಿನಲ್ಲಿ ಬಿಎಸ್‌ಇ ಸೆನ್ಸೆಕ್ಸ್‌ 149 ಅಂಶ ಏರಿಕೆ ಕಂಡು ಹೊಸ ಎತ್ತರವಾದ 60,284 ಅಂಶಗಳಿಗೆ ತಲುಪಿತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 46 ಅಂಶ ಹೆಚ್ಚಾಗಿ 17,991 ಅಂಶಗಳ ಹೊಸ ಎತ್ತರವನ್ನು ತಲುಪಿತು.

ಬ್ಯಾಂಕಿಂಗ್‌, ಗ್ರಾಹಕ ಬಳಕೆ ವಸ್ತುಗಳು ಹಾಗೂ ವಾಹನ ವಲಯದ ಷೇರುಗಳು ಉತ್ತಮ ಖರೀದಿ ವಹಿವಾಟಿಗೆ ಒಳಗಾಗಿದ್ದರಿಂದ ಷೇರುಪೇಟೆಗಳ ವಹಿವಾಟು ಹೊಸ ಎತ್ತರಕ್ಕೆ ತಲುಪಿತು ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಜಾಗತಿಕ ಮಟ್ಟದಲ್ಲಿನ ನಕಾರಾತ್ಮಕ ಬೆಳವಣಿಗೆಯಿಂದಾಗಿ ದೇಶಿ ಷೇರುಪೇಟೆಗಳ ವಹಿವಾಟು ಚಂಚಲವಾಗಿತ್ತು. ಆ ಬಳಿಕ ಖರೀದಿ ವಹಿವಾಟಿಗೆ ಒಳಗಾಗಿ ಗಳಿಕೆಯಿಂದಿಗೆ ವಹಿವಾಟು ಅಂತ್ಯವಾಯಿತು. ಹೀಗಿದ್ದರೂ ಕಚ್ಚಾ ತೈಲ ದರ ಗರಿಷ್ಠ ಮಟ್ಟದಲ್ಲಿ ಇರುವುದು ಹಾಗೂ ರೂಪಾಯಿ ಮೌಲ್ಯ ಇಳಿಕೆ ಕಂಡಿರುವುದು ಸೂಚ್ಯಂಕದ ಏರಿಕೆಗೆ ಕಡಿವಾಣ ಹಾಕಿದವು ಎಂದು ಮೋತಿಲಾಲ್‌ ಓಸ್ವಾಲ್‌ ಹಣಕಾಸು ಸೇವೆಗಳ ಸಂಶೋಧನಾ ಮುಖ್ಯಸ್ಥ ಸಿದ್ಧಾರ್ಥ ಖೇಮ್ಕಾ ಹೇಳಿದ್ದಾರೆ.

ರೂಪಾಯಿ ಮೌಲ್ಯ ಇಳಿಕೆ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್‌ ಎದುರು ರೂಪಾಯಿ ಮೌಲ್ಯ 16 ಪೈಸೆಗಳಷ್ಟು ಇಳಿಕೆ ಕಂಡು ಒಂದು ಡಾಲರ್‌ಗೆ 75.52ರಂತೆ ವಿನಿಮಯಗೊಂಡಿತು.

ಮೂರು ದಿನಗಳ ವಹಿವಾಟಿನಲ್ಲಿ ರೂಪಾಯಿ ಮೌಲ್ಯವು ಡಾಲರ್‌ ಎದುರು 73 ಪೈಸೆಗಳಷ್ಟು ಇಳಿಕೆ ಆಗಿದೆ.

ಬ್ರೆಂಟ್ ಕಚ್ಚಾ ತೈಲ ದರವು ಶೇ 0.29ರಷ್ಟು ಹೆಚ್ಚಾಗಿ ಒಂದು ಬ್ಯಾರಲ್‌ಗೆ 83.89 ಡಾಲರ್‌ಗಳಿಗೆ ತಲುಪಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು