ಬುಧವಾರ, ಡಿಸೆಂಬರ್ 8, 2021
28 °C
ರಿಲಯನ್ಸ್‌, ಬ್ಯಾಂಕ್‌ ಷೇರುಗಳಿಗೆ ಹೆಚ್ಚು ನಷ್ಟ

ಬಿಎಸ್‌ಇ 667 ಅಂಶ ಕುಸಿತ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ದೇಶದ ಷೇರುಪೇಟೆಗಳಲ್ಲಿ ಸೋಮವಾರ ಮಾರಾಟದ ಒತ್ತಡಕ್ಕೆ ಸೂಚ್ಯಂಕಗಳು ಇಳಿಕೆ ಕಾಣುವಂತಾಯಿತು. ಇದರಿಂದ ಸತತ ನಾಲ್ಕನೇ ವಹಿವಾಟು ಅವಧಿಯಲ್ಲಿ ನಕಾರಾತ್ಮಕ ಚಟುವಟಿಕೆ ನಡೆಯಿತು. ಮುಂಬೈ ಷೇರುಪೇಟೆ (ಬಿಎಸ್‌ಇ) ಸಂವೇದಿ ಸೂಚ್ಯಂಕ 667 ಅಂಶ ಇಳಿಕೆಯಾಗಿ 36,939 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ರಾಷ್ಟ್ರೀಯ ಷೇರುಪೇಟೆ (ಎನ್‌ಎಸ್‌ಇ) ಸೂಚ್ಯಂಕ ನಿಫ್ಟಿ 182 ಅಂಶ ಇಳಿಕೆಯಾಗಿ 10,891 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ. ರಿಲಯನ್ಸ್‌ ಇಂಡಸ್ಟ್ರೀಸ್‌, ಎಚ್‌ಡಿಎಫ್‌ಸಿ ಬ್ಯಾಂಕ್‌ ಮತ್ತು ಎಚ್‌ಡಿಎಫ್‌ಸಿ ಷೇರುಗಳು ಅತಿಯಾದ ಮಾರಾಟದ ಒತ್ತಡಕ್ಕೆ ಒಳಗಾದವು. ಇದರಿಂದಾಗಿ ಸೂಚ್ಯಂಕಗಳು ಇಳಿಕೆ ಕಂಡಿದೆ ಎಂದು ವರ್ತಕರು ಹೇಳಿದ್ದಾರೆ.

ಜುಲೈ ತಿಂಗಳ ತಯಾರಿಕಾ ಚಟುವಟಿಕೆ ಸೂಚ್ಯಂಕ 47.2ರಿಂದ 46ಕ್ಕೆ ಇಳಿಕೆ ಆಗಿರುವುದು ಸಹ ಪರಿಣಾಮ ಬೀರಿದೆ. ಗುರುವಾರ ಆರ್‌ಬಿಐ ಸಭೆ ಸೇರಲಿದ್ದು, ಬಡ್ಡಿದರ ಪರಾಮರ್ಶೆ ನಡೆಸಲಿದೆ. ಆದರೆ, ಬಡ್ಡಿದರ ಕಡಿತ ಮಾಡುವುದೇ ಅಥವಾ ಇಲ್ಲವೇ ಎನ್ನುವ ಬಗ್ಗೆ ಅನಿಶ್ಚಿತತೆ ಮೂಡಿರುವುದು ಸಹ ವಹಿವಾಟಿನ ಮೇಲೆ ಪರಿಣಾಮ ಬೀರುವಂತಾಗಿದೆ.

ಗರಿಷ್ಠ ನಷ್ಟ: ದಿನದ ವಹಿವಾಟಿನಲ್ಲಿ ಕೋಟಕ್‌ ಬ್ಯಾಂಕ್‌ ಷೇರು ಶೇಕಡ 4.41ರಷ್ಟು ಗರಿಷ್ಠ ನಷ್ಟ ಕಂಡಿತು. ಇಂಡಸ್‌ಇಂಡ್‌ ಬ್ಯಾಂಕ್‌, ಆ್ಯಕ್ಸಿಸ್‌ ಬ್ಯಾಂಕ್‌, ಒಎನ್‌ಜಿಸಿ, ಎಚ್‌ಡಿಎಫ್‌ಸಿ ಬ್ಯಾಂಕ್‌, ಬಜಾಜ್‌ ಆಟೊ ಮತ್ತು ರಿಲಯನ್ಸ್‌ ಇಂಡಸ್ಟ್ರಿಸ್‌ ಷೇರುಗಳ ಮೌಲ್ಯವೂ ಇಳಿಕೆಯಾಗಿದೆ.

ಗಳಿಕೆ: ಟೈಟಾನ್‌, ಟಾಟಾ ಸ್ಟೀಲ್‌, ಎಸ್‌ಬಿಐ, ಎಲ್‌ಆ್ಯಂಡ್‌ಟಿ, ಎಚ್‌ಸಿಎಲ್‌ ಟೆಕ್‌ ಮತ್ತು ಪವರ್‌ ಗ್ರಿಡ್‌ ಕಂಪನಿ ಷೇರುಗಳು ಮಾತ್ರವೇ ಗಳಿಕೆ ಕಂಡುಕೊಂಡಿವೆ.

‘ಸೂಚ್ಯಂಕಗಳ ಇಳಿಕೆಯು ಅಲ್ಪಾವಧಿಯದ್ದಾಗಿದೆ. ಗುಣಮಟ್ಟದ ಷೇರುಗಳನ್ನು ಖರೀದಿಸಲು ಇದರ ಪ್ರಯೋಜನ ಪಡೆದುಕೊಳ್ಳಬಹುದು’ ಎನ್ನುವುದು ಜಿಯೋಜಿತ್‌ ಫೈನಾನ್ಶಿಯಲ್ ಸರ್ವೀಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್ ಅಭಿಪ್ರಾಯ. ಜಾಗತಿಕ ಷೇರುಪೇಟೆಗಳಲ್ಲಿ ಸಕಾರಾತ್ಮಕ ವಹಿವಾಟು ನಡೆದಿದೆ.

ರೂಪಾಯಿ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ 20 ಪೈಸೆ ಇಳಿಕೆಯಾಗಿದ್ದು, ಒಂದು ಡಾಲರ್‌ಗೆ ₹ 75.01ರಂತೆ ವಿನಿಮಯಗೊಂಡಿತು.

ಡಾಲರ್‌ ಮೌಲ್ಯ ವೃದ್ಧಿ, ಷೇರುಪೇಟೆಗಳಲ್ಲಿ ಇಳಿಮುಖ ವಹಿವಾಟು ಮತ್ತು ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿನ ಏರಿಕೆಯು ರೂಪಾಯಿ ಮೌಲ್ಯದ ಮೇಲೆ ಪ್ರಭಾವ ಬೀರಿವೆ ಎಂದು ವರ್ತಕರು ವಿಶ್ಲೇಷಣೆ ಮಾಡಿದ್ದಾರೆ.

ಚಿನ್ನ, ಬೆಳ್ಳಿ ದರ ಏರಿಕೆ: ದೆಹಲಿ ಚಿನಿವಾರ ಪೇಟೆಯಲ್ಲಿ ಚಿನ್ನದ ದರ 10ಗ್ರಾಂಗೆ ₹ 185 ರಂತೆ ಹೆಚ್ಚಾಗಿದ್ದು, ₹ 54,678ರಲ್ಲಿ ಮಾರಾಟವಾಗಿದೆ.

ಬೆಳ್ಳಿ ದರ ಕೆ.ಜಿಗೆ ₹1,672ರಂತೆ ಹೆಚ್ಚಾಗಿ ₹ 66,742ಕ್ಕೆ ತಲುಪಿದೆ.

ಅಂಕಿ–ಅಂಶ

ನಾಲ್ಕು ದಿನಗಳ ವಹಿವಾಟು

1,553 ಅಂಶ: ಬಿಎಸ್‌ಇ ಇಳಿಕೆ

409 ಅಂಶ: ನಿಫ್ಟಿ ಇಳಿಕೆ

 

ಸೂಚ್ಯಂಕದ ಇಳಿಕೆಗೆ ಕಾರಣಗಳು

* ದೇಶದಲ್ಲಿ ಕೋವಿಡ್‌–19 ಪ್ರಕರಣಗಳ ಸಂಖ್ಯೆ ಹೆಚ್ಚಳ

* ನಿರೀಕ್ಷಿತ ಮಟ್ಟದಲ್ಲಿ ಇಲ್ಲದ ಕಂಪನಿಗಳ ತ್ರೈಮಾಸಿಕ ಫಲಿತಾಂಶ

* ರೂಪಾಯಿ ಮೌಲ್ಯ ಇಳಿಕೆ

* ಜುಲೈನ ತಯಾರಿಕಾ ಚಟುವಟಿಕೆಯಲ್ಲಿ ಇಳಿಕೆ

* ಆರ್‌ಬಿಐನಿಂದ ಬಡ್ಡಿದರ ಕಡಿತದ ಬಗ್ಗೆ ಮೂಡಿರುವ ಅನಿಶ್ಚಿತತೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು