ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರುಪೇಟೆಯಲ್ಲಿ ಪೇಟಿಎಂ ಷೇರು: ವಹಿವಾಟು ಮೊದಲ ದಿನವೇ ಶೇ 21ಕ್ಕೂ ಹೆಚ್ಚು ಕುಸಿತ

Last Updated 18 ನವೆಂಬರ್ 2021, 6:57 IST
ಅಕ್ಷರ ಗಾತ್ರ

ನವದೆಹಲಿ: ಪೇಟಿಎಂನ ಮಾತೃ ಸಂಸ್ಥೆ ಒನ್‌97 ಕಮ್ಯುನಿಕೇಷನ್ಸ್‌ ಲಿಮಿಟೆಡ್‌ನ ಷೇರುಗಳು ಇಂದು ವಹಿವಾಟಿಗೆ ತೆರೆದುಕೊಂಡಿದ್ದು, ಆರಂಭಿಕ ವಹಿವಾಟಿನಲ್ಲಿ ಶೇಕಡ 9ರಷ್ಟು ಕುಸಿತ ದಾಖಲಿಸಿತು.

ಕಂಪನಿಯು ಇತ್ತೀಚೆಗಷ್ಟೇ ಐಪಿಒ ಮೂಲಕ ಪ್ರತಿ ಷೇರಿಗೆ ₹2,150 ಬೆಲೆಗೆ ಷೇರು ವಿತರಣೆ ಮಾಡಿದೆ. ಗುರುವಾರ ಷೇರುಪೇಟೆ ವಹಿವಾಟು ಆರಂಭವಾಗುತ್ತಿದ್ದಂತೆ ಒನ್‌97 ಕಮ್ಯುನಿಕೇಷನ್ಸ್‌ ಲಿಮಿಟೆಡ್‌ನ ಷೇರು ಶೇಕಡ 9ರಷ್ಟು ಇಳಿಕೆಯಾಗಿ ₹1,955ತಲುಪಿತು. ನಂತರ ಮತ್ತಷ್ಟು ಕುಸಿತಕ್ಕೆ ಒಳಗಾದ ಷೇರು ಬೆಲೆ ಶೇಕಡ 20.7ರಷ್ಟು ಕಡಿಮೆಯಾಗಿ ₹1,705.55 ಮುಟ್ಟಿತು.

ಮಧ್ಯಾಹ್ನ 12ರ ವೇಳೆಗೆ ಪ್ರತಿ ಷೇರು ಬೆಲೆ ₹1,655.20ಕ್ಕೆ ಇಳಿಕೆಯಾಗಿದೆ.

ದೇಶದ ಷೇರುಪೇಟೆಗಳಲ್ಲಿ ಮಾರಾಟದ ಒತ್ತಡ ಉಂಟಾಗಿದ್ದು, ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 526.10 ಅಂಶ ಕಡಿಮೆಯಾಗಿ 59,482.23 ಅಂಶ ತಲುಪಿದೆ. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 160.50 ಅಂಶ ಕುಸಿದು 17,738.15 ಅಂಶಗಳಲ್ಲಿ ವಹಿವಾಟು ನಡೆದಿದೆ. ಆಟೊಮೊಬೈಲ್‌ ಮತ್ತು ಐಟಿ ಕಂಪನಿಗಳ ಷೇರುಗಳಲ್ಲಿ ಹೆಚ್ಚಿನ ಕುಸಿತ ದಾಖಲಾಗಿದೆ.

ಕಂಪನಿಯ ಮಾರುಕಟ್ಟೆ ಮೌಲ್ಯ ಸುಮಾರು ₹1,26,737 ಕೋಟಿ ಆಗಿದೆ. ಕಳೆದ ವಾರ ಪೇಟಿಎಂನ ₹18,300 ಕೋಟಿ ಮೊತ್ತದ ಐಪಿಒದಲ್ಲಿ 1.89 ಪಟ್ಟು ಹೆಚ್ಚು ಬಿಡ್‌ ಸಲ್ಲಿಕೆಯಾಗಿತ್ತು. ಪೇಟಿಎಂ ಐಪಿಒ ದೇಶದ ಅತಿ ದೊಡ್ಡ ಮೊತ್ತದ ಐಪಿಒ ಎಂದು ದಾಖಲಾಗಿದೆ. ಸುಮಾರು ಹತ್ತು ವರ್ಷಗಳ ಹಿಂದೆ ಕೋಲ್‌ ಇಂಡಿಯಾ ₹15,000 ಕೋಟಿ ಮೊತ್ತದ ಐಪಿಒ ನಡೆಸಿತ್ತು.

ಒಟ್ಟು 4.83 ಕೋಟಿ ಷೇರುಗಳನ್ನು ಒನ್‌97 ಕಮ್ಯುನಿಕೇಷನ್ಸ್‌ ಲಿಮಿಟೆಡ್‌ ವಿತರಿಸಿದೆ. ಷೇರುಪೇಟೆಯಿಂದ ಐಪಿಒದಲ್ಲಿ ಹೂಡಿಕೆದಾರರಿಂದ 9.14 ಕೋಟಿ ಷೇರುಗಳಿಗೆ ಬಿಡ್‌ ಸಲ್ಲಿಕೆಯಾಗಿತ್ತು. ಐಪಿಒದಲ್ಲಿ ಪ್ರತಿ ಷೇರು ಬೆಲೆ ₹2,080ರಿಂದ ₹2,150 ನಿಗದಿಯಾಗಿತ್ತು.

2000ನೇ ಇಸವಿಯಲ್ಲಿ ಆರಂಭವಾದ ಒನ್‌97 ಕಮ್ಯುನಿಕೇಷನ್ಸ್‌ ಲಿಮಿಟೆಡ್‌, ಭಾರತದ ಗ್ರಾಹಕರು ಮತ್ತು ವ್ಯಾಪಾರಿಗಳಿಗೆ ಡಿಜಿಟಲ್‌ ಸೇವೆಗಳನ್ನು ಒದಗಿಸುವ ಪ್ರಮುಖ ಸಂಸ್ಥೆಯಾಗಿ ಬೆಳೆದಿದೆ. ಹಣಕಾಸು, ಪಾವತಿ, ಹೂಡಿಕೆ ಸೇವೆಗಳಿಂದ ಹಿಡಿದು ವಸ್ತುಗಳ ಖರೀದಿ, ಬುಕ್ಕಿಂಗ್‌ ವರೆಗೂ ಹಲವು ಸೇವೆಗಳನ್ನು ಪೇಟಿಎಂ ಮೂಲಕ ಕಂಪನಿಯು ಒದಗಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT