ಗುರುವಾರ , ಮೇ 13, 2021
44 °C
ಐಟಿ ಕಂಪನಿಗಳ ಫಲಿತಾಂಶಕ್ಕೆ ಹೂಡಿಕೆದಾರರ ಮಿಶ್ರ ಪ್ರತಿಕ್ರಿಯೆ

PV Web Exclusive | ಷೇರುಪೇಟೆಯಲ್ಲಿ ಮಿಂಚಿದ ವಿಪ್ರೊ

ವಿನಾಯಕ ಭಟ್‌ Updated:

ಅಕ್ಷರ ಗಾತ್ರ : | |

Prajavani

ಭಾರತದ ಮಾಹಿತಿ ತಂತ್ರಜ್ಞಾನ (ಐ.ಟಿ) ವಲಯದ ದಿಗ್ಗಜ ಕಂಪನಿಗಳಾದ ಟಾಟಾ ಕನ್ಸಲ್ಟನ್ಸಿ ಸರ್ವೀಸಸ್‌ (ಟಿ.ಸಿ.ಎಸ್‌), ಇನ್ಫೊಸಿಸ್‌ ಹಾಗೂ ವಿಪ್ರೊ ಕಂಪನಿಗಳ 2021ರ ಮಾರ್ಚ್‌ ತ್ರೈಮಾಸಿಕ (4Q) ಫಲಿತಾಂಶ ಕಳೆದ ವಾರ ಪ್ರಕಟಗೊಂಡಿದ್ದು, ಷೇರುಪೇಟೆಯಲ್ಲಿ ಹೂಡಿಕೆದಾರರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಮಾರುಕಟ್ಟೆ ವಿಶ್ಲೇಷಕರ ಹಾಗೂ ಹೂಡಿಕೆದಾರರ ನಿರೀಕ್ಷೆ ಮುಟ್ಟುವಲ್ಲಿ ಹಿಂದೆ ಬಿದ್ದ ಪರಿಣಾಮ ಟಿಸಿಎಸ್‌ ಹಾಗೂ ಇನ್ಫೊಸಿಸ್‌ ಕಂಪನಿಗಳ ಷೇರು ಫಲಿತಾಂಶದ ಬಳಿಕ ಮಾರಾಟದ ಒತ್ತಡಕ್ಕೆ ಸಿಲುಕಿತ್ತು. ಆದರೆ, ಕಳೆದ 10 ವರ್ಷಗಳ ಅವಧಿಯಲ್ಲಿ ಅತ್ಯುತ್ತಮ ನಾಲ್ಕನೇ ತ್ರೈಮಾಸಿಕ ಫಲಿತಾಂಶದೊಂದಿಗೆ ನಿರೀಕ್ಷೆ ಮೀರಿ ಲಾಭ ಗಳಿಸಿದ ವಿಪ್ರೊ ಕಂಪನಿಯ ಷೇರನ್ನು ಖರೀದಿಗೆ ಹೂಡಿಕೆದಾರರು ಮುಗಿಬಿದ್ದ ಪರಿಣಾಮ, ಈ ಕಂಪನಿಯು ಕೆಳಮುಖ ಮಾಡಿದ್ದ ‘ಐಟಿ ಸೂಚ್ಯಂಕ’ವನ್ನೇ ಮೇಲಕ್ಕೆ ತೆಗೆದುಕೊಂಡು ಬಂದಿದೆ.

ರಾಷ್ಟ್ರೀಯ ಷೇರುಪೇಟೆಯಲ್ಲಿ ಏಪ್ರಿಲ್‌ 9ರಂದು ₹ 3,322.25ರಲ್ಲಿ ವಹಿವಾಟು ಅಂತ್ಯಗೊಳಿಸಿದ್ದ ಟಿಸಿಎಸ್‌ ಕಂಪನಿಯ ಷೇರು, ಫಲಿತಾಂಶದ ದಿನವಾದ ಏಪ್ರಿಲ್‌ 12ರಂದು ₹ 75.70ರಷ್ಟು (ಶೇ –2.28) ಕುಸಿತ ಕಂಡಿತ್ತು. ಮರುದಿನದ ವಹಿವಾಟಿನಲ್ಲಿ ಈ ಕಂಪನಿಯ ಷೇರಿನ ಮೌಲ್ಯ ₹ 142.40 (ಶೇ –4.39) ಕುಸಿದಿರುವುದು ನಿರೀಕ್ಷಿತ ಪ್ರಮಾಣದಲ್ಲಿ ಫಲಿತಾಂಶ ಬಂದಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ.

ಟಿಸಿಎಸ್‌ ಕಂಪನಿಯ ಷೇರಿನ ಮೌಲ್ಯವು ಕಳೆದ ಒಂದು ವಾರದ ಅವಧಿಯಲ್ಲಿ ಶೇ 3.83ರಷ್ಟು ಕುಸಿದಿದೆ. ಒಂದು ತಿಂಗಳ ಅವಧಿಯಲ್ಲಿ ಶೇ 2.74ರಷ್ಟು ಹೆಚ್ಚಾಗಿದೆ. 2020ರ ಏಪ್ರಿಲ್ 16ರಂದು 52 ವಾರಗಳ ಕನಿಷ್ಠ (₹ 1,675.05) ಮಟ್ಟಕ್ಕೆ ತಲುಪಿದ್ದ ಈ ಕಂಪನಿಯ ಷೇರು, 2021ರ ಏಪ್ರಿಲ್‌ 9ರಂದು ಗರಿಷ್ಠ (₹ 3,354.35) ಮಟ್ಟಕ್ಕೆ ತಲುಪಿತ್ತು. 2020ರ ಏಪ್ರಿಲ್‌ 1ರಂದು ₹ 1,708.75ರಷ್ಟು ಮೌಲ್ಯ ಹೊಂದಿದ್ದ ಕಂಪನಿಯ ಷೇರು, ₹ 3,195.15ರಲ್ಲಿ ಈ ವಾರದ ವಹಿವಾಟು ಕೊನೆಗೊಳಿಸಿದೆ.

ಫಲಿತಾಂಶದ ಹಿಂದಿನ ದಿನವಾದ ಏಪ್ರಿಲ್‌ 13ರಂದು ಇನ್ಫೊಸಿಸ್‌ ಕಂಪನಿಯ ಷೇರು ₹ 28.60 (ಶೇ –2.01) ಕುಸಿತದೊಂದಿಗೆ ₹ 1,397.15ರಲ್ಲಿ ವಹಿವಾಟು ಅಂತ್ಯಗೊಳಿಸಿತ್ತು. ಏಪ್ರಿಲ್‌ 14ರಂದು ಕಂಪನಿಯ ಫಲಿತಾಂಶ ಪ್ರಕಟಗೊಂಡಿದ್ದು, ಅಂಬೇಡ್ಕರ್‌ ಜಯಂತಿ ಅಂಗವಾಗಿ ಅಂದು ಮಾರುಕಟ್ಟೆಗೆ ರಜೆಯ ದಿನವಾಗಿತ್ತು. ಮರುದಿನ ₹ 36.40 (ಶೇ –2.61) ಕುಸಿತ ಕಾಣುವ ಮೂಲಕ ₹ 1,360.75ರಲ್ಲಿ ವಹಿವಾಟು ಅಂತ್ಯಗೊಳಿಸಿದ್ದು, ಹೂಡಿಕೆದಾರರನ್ನು ಸೆಳೆಯುವಲ್ಲಿ ಫಲಿತಾಂಶ ಹಿಂದೆ ಬಿದ್ದಿರುವುದೇ ಇದಕ್ಕೆ ಕಾರಣವಾಗಿದೆ.ಕಳೆದ ಒಂದು ವಾರದಲ್ಲಿ ಈ ಕಂಪನಿಯ ಷೇರಿನ ಮೌಲ್ಯವು ಶೇ 6.06ರಷ್ಟು ಹಾಗೂ ಒಂದು ತಿಂಗಳಲ್ಲಿ ಶೇ 2.19ರಷ್ಟು ಕಡಿಮೆಯಾಗಿದೆ. 2020ರ ಏಪ್ರಿಲ್‌ 16ರಂದು 52 ವಾರಗಳ ಕನಿಷ್ಠ (₹ 603.50) ಮಟ್ಟಕ್ಕೆ ಕುಸಿದಿದ್ದ ಇನ್ಫೊಸಿಸ್‌ ಷೇರು, ಇದೇ ಏಪ್ರಿಲ್‌ 12ರಂದು ಗರಿಷ್ಠ (₹ 1,477.55) ಮಟ್ಟವನ್ನು ತಲುಪಿತ್ತು. 2020ರ ಏಪ್ರಿಲ್‌ 1ರಂದು ₹ 602.80ರಷ್ಟು ಮೌಲ್ಯವನ್ನು ಹೊಂದಿದ್ದ ಕಂಪನಿಯ ಷೇರು, ₹ 1,353.75ರಲ್ಲಿ ಈ ವಾರದ ವಹಿವಾಟು ಅಂತ್ಯಗೊಳಿಸಿದೆ.

ಶಕ್ತಿ ತುಂಬಿದ ವಿಪ್ರೊ: ಫಲಿತಾಂಶದ ಹಿಂದಿನ ಮಾರುಕಟ್ಟೆ ರಜೆ ಇದ್ದುದರಿಂದ ಏಪ್ರಿಲ್‌ 13ರಂದು ವಿಪ್ರೊ ಕಂಪನಿಯ ಷೇರು ₹ 13.65 (ಶೇ –3.16) ಕುಸಿತದೊಂದಿಗೆ ₹ 418.95ರಲ್ಲಿ ವಹಿವಾಟು ಅಂತ್ಯಗೊಳಿಸಿತ್ತು. ಫಲಿತಾಂಶ ಪ್ರಕಟಗೊಂಡ ಏಪ್ರಿಲ್‌ 15ರಂದು ₹ 11.75 (ಶೇ 2.80) ಏರಿಕೆಯೊಂದಿಗೆ ₹ 430.70ರಲ್ಲಿ ವಹಿವಾಟು ಕೊನೆಗೊಳಿಸಿತ್ತು. ನಿರೀಕ್ಷೆಗೂ ಮೀರಿ ಫಲಿತಾಂಶ ಬಂದಿರುವ ಸುದ್ದಿ ಷೇರುಪೇಟೆಯಲ್ಲಿ ಸಂಚಲನ ಮೂಡಿಸಿದ ಪರಿಣಾಮ ಹೂಡಿಕೆದಾರರು ವಿಪ್ರೊ ಷೇರು ಖರೀದಿಗೆ ಮುಗಿಬಿದ್ದರು. ಹೀಗಾಗಿ ಏಪ್ರಿಲ್‌ 16ರಂದು ₹ 38.50 (ಶೇ 8.94) ಏರಿಕೆಯೊಂದಿಗೆ ₹ 469.20ರಲ್ಲಿ ವಹಿವಾಟು ಅಂತ್ಯಗೊಳಿಸಿತು. ವಿಪ್ರೊ ಕಂಪನಿಯ ಷೇರಿನ ರ‍್ಯಾಲಿಯು ಅಂದು ‘ನಿಫ್ಟಿ ಐಟಿ ಸೂಚ್ಯಂಕ’ವು 314 ಅಂಶಗಳ ಏರಿಕೆ ಕಾಣುವಲ್ಲಿಯೂ ಪ್ರಮುಖ ಕೊಡುಗೆ ನೀಡಿತ್ತು.

ಒಂದು ವಾರದಲ್ಲಿ ವಿಪ್ರೊ ಷೇರಿನ ಮೌಲ್ಯವು ಶೇ 4.24 ಹಾಗೂ ಒಂದು ತಿಂಗಳಲ್ಲಿ ಶೇ 9.29ರಷ್ಟು ಹೆಚ್ಚಾಗಿದೆ. 2020ರ ಏಪ್ರಿಲ್‌ 21ರಂದು 52 ವಾರಗಳ ಕನಿಷ್ಠ (₹ 173.80) ಮಟ್ಟವನ್ನು ತಲುಪಿದ್ದ ಷೇರು, ಇದೇ ಏಪ್ರಿಲ್‌ 16ರಂದು 52 ವಾರಗಳ ಗರಿಷ್ಠ (₹ 473.65) ಮಟ್ಟಕ್ಕೆ ತಲುಪಿತ್ತು. 2020 ಏಪ್ರಿಲ್‌ 1ರಂದು ₹ 189.50ರಷ್ಟು ಮೌಲ್ಯ ಹೊಂದಿದ್ದ ಷೇರು, ₹ 469.20ರಲ್ಲಿ ಈ ವಾರದ ವಹಿವಾಟು ಅಂತ್ಯಗೊಳಿಸಿದೆ.

ವಿಪ್ರೊದಿಂದ ದಶಕದ ದಾಖಲೆ

2020ರ ಮಾರ್ಚ್‌ ತ್ರೈಮಾಸಿಕದಲ್ಲಿ ₹ 2,326 ಕೋಟಿ ಲಾಭ ಗಳಿಸಿದ್ದ ವಿಪ್ರೊ ಕಂಪನಿಯು, 2021ರ ಮಾರ್ಚ್‌ ತ್ರೈಮಾಸಿಕದಲ್ಲಿ ₹ 2,972 ಕೋಟಿ ಲಾಭ ಗಳಿಸಿದೆ. ಕಳೆದ ವರ್ಷದ ಇದೇ ಅವಧಿಯ ತ್ರೈಮಾಸಿಕಕ್ಕೆ ಹೋಲಿಸಿದಾಗ ಲಾಭ ಗಳಿಕೆಯ ಪ್ರಮಾಣದಲ್ಲಿ ಶೇ 27.77ರಷ್ಟು ಏರಿಕೆಯಾಗಿದ್ದು, ಕಂಪನಿಯ ಕಳೆದ ಹತ್ತು ವರ್ಷಗಳ ಇತಿಹಾಸದಲ್ಲೇ ಇದು ದಾಖಲೆಯ ಗಳಿಕೆ ಪ್ರಮಾಣವಾಗಿದೆ. ಹೀಗಾಗಿ ಹೂಡಿಕೆದಾರರು ವಿಪ್ರೊ ಷೇರು ಖರೀದಿಗೆ ಮುಗಿಬಿದ್ದಿದ್ದರು. 2020ರ ಹಣಕಾಸು ವರ್ಷದ ಅಂತ್ಯಕ್ಕೆ ಒಟ್ಟು ₹ 9,722 ಕೋಟಿ ಲಾಭ ಗಳಿಸಿದ್ದ ಕಂಪನಿಯು, 2021ರ ಹಣಕಾಸು ವರ್ಷದ ಅಂತ್ಯಕ್ಕೆ ಒಟ್ಟು ₹ 10,796 ಕೋಟಿ (ಶೇ 11) ಲಾಭ ಗಳಿಸಿದೆ.

2020ರ ಮಾರ್ಚ್‌ ತ್ರೈಮಾಸಿಕದಲ್ಲಿ ₹ 8,049 ಕೋಟಿ ಲಾಭ ಗಳಿಸಿದ್ದ ಟಿಸಿಎಸ್‌ ಕಂಪನಿಯು 2021ರ ಮಾರ್ಚ್‌ ತ್ರೈಮಾಸಿಕದಲ್ಲಿ ₹ 9,246 ಕೋಟಿ ಲಾಭ ಗಳಿಸಿದೆ. ಕಳೆದ ವರ್ಷದ ಇದೇ ಅವಧಿಯ ತ್ರೈಮಾಸಿಕಕ್ಕೆ ಹೋಲಿಸಿದಾಗ ಲಾಭ ಗಳಿಕೆ ಪ್ರಮಾಣದಲ್ಲಿ ಕೇವಲ ಶೇ 14.87ರಷ್ಟು ಏರಿಕೆಯಾಗಿದೆ. ಷೇರುಪೇಟೆಯ ವಿಶ್ಲೇಷಕರು ಟಿಸಿಎಸ್‌ ಕಂಪನಿಯಿಂದ ಈ ಅವಧಿಯಲ್ಲಿ ಶೇ 20ಕ್ಕಿಂತಲೂ ಹೆಚ್ಚಿನ ಏರಿಕೆಯನ್ನು ನಿರೀಕ್ಷಿಸಿದ್ದರು. 2020ರ ಹಣಕಾಸು ವರ್ಷದ ಅಂತ್ಯಕ್ಕೆ ಒಟ್ಟು ₹ 32,340 ಕೋಟಿ ಲಾಭ ಗಳಿಸಿದ್ದ ಟಿಸಿಎಸ್‌, 2021ರ ಅಂತ್ಯಕ್ಕೆ ಕೇವಲ ಒಟ್ಟು ₹ 32,430 ಕೋಟಿ ಲಾಭ ಕಂಡಿದೆ.

2020ರ ಮಾರ್ಚ್‌ ತ್ರೈಮಾಸಿಕದಲ್ಲಿ ₹ 4,321 ಕೋಟಿ ಲಾಭ ಗಳಿಸಿದ್ದ ಇನ್ಫೊಸಿಸ್‌ ಕಂಪನಿಯು, 2021ರ ಮಾರ್ಚ್‌ ತ್ರೈಮಾಸಿಕದಲ್ಲಿ ₹ 5,076 ಕೋಟಿ (ಶೇ 17) ಲಾಭ ಗಳಿಸಿದೆ.  2020ರ ಹಣಕಾಸು ವರ್ಷದ ಅಂತ್ಯಕ್ಕೆ ಒಟ್ಟು ₹ 16,954 ಕೋಟಿ ಲಾಭ ಗಳಿಸಿದ್ದ ಕಂಪನಿಯು, 2021ರ ಅಂತ್ಯಕ್ಕೆ ಒಟ್ಟು ₹ 19,351 ಕೋಟಿ (ಶೇ 16.61) ಲಾಭ ಗಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು