ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈ ಷೇರುಪೇಟೆ: ಐತಿಹಾಸಿಕ ದಾಖಲೆ

50 ಸಾವಿರದ ಗಡಿ ದಾಟಿದ ಮುಂಬೈ ಷೇರುಪೇಟೆ
Last Updated 21 ಜನವರಿ 2021, 16:33 IST
ಅಕ್ಷರ ಗಾತ್ರ

ಮುಂಬೈ: ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು (ಬಿಎಸ್‌ಇ ಸೆನ್ಸೆಕ್ಸ್) ಇದೇ ಮೊದಲ ಬಾರಿಗೆ 50 ಸಾವಿರದ ಗಡಿ ದಾಟಿದೆ. ದೇಶದ ಆರ್ಥಿಕತೆಯು ಉತ್ತಮ ಬೆಳವಣಿಗೆ ಕಾಣುವ ಆಶಾವಾದ ಮತ್ತು ಜಾಗತಿಕ ವಿದ್ಯಮಾನಗಳ ಪ್ರಭಾವದಿಂದ ಗುರುವಾರದ ವಹಿವಾಟಿನಲ್ಲಿ ಈ ಮೈಲಿಗಲ್ಲು ಸಾಧ್ಯವಾಯಿತು. ಆದರೆ, ನಂತರದಲ್ಲಿ ಲಾಭ ಗಳಿಕೆಗೆ ಒಳಗಾಗಿ ಸೂಚ್ಯಂಕವು ಇಳಿಕೆ ಕಂಡಿತು.

ಬ್ಯಾಂಕಿಂಗ್‌, ಹಣಕಾಸು ಮತ್ತು ಐ.ಟಿ. ವಲಯದ ಷೇರುಗಳು ಮಾರಾಟದ ಒತ್ತಡಕ್ಕೆ ಒಳಗಾದವು. ಇದರಿಂದಾಗಿ ಬಿಎಸ್‌ಇ ಸೂಚ್ಯಂಕ 167 ಅಂಶ ಇಳಿಕೆ ಕಂಡು 49,625 ಅಂಶಗಳಲ್ಲಿ ದಿನದ ವಹಿವಾಟು ಕೊನೆಗೊಳಿಸಿತು. ದಿನದ ವಹಿವಾಟಿನ ನಡುವಿನಲ್ಲಿ ಗರಿಷ್ಠ50,184 ಅಂಶಗಳಿಗೆ ಸೆನ್ಸೆಕ್ಸ್ ಏರಿಕೆ ಕಂಡಿತ್ತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 54 ಅಂಶ ಇಳಿಕೆಯಾಗಿ 14,590 ಅಂಶಗಳಿಗೆ ತಲುಪಿತು.‌

‘ಸೆನ್ಸೆಕ್ಸ್‌ 50 ಸಾವಿರದ ಗಡಿ ದಾಟಿದ್ದು ಮಾರುಕಟ್ಟೆ ಮತ್ತು ಹೂಡಿಕೆದಾರರಿಗೆ ಮಾತ್ರವೇ ಅಲ್ಲದೆ ಆರ್ಥಿಕತೆಯ ದೃಷ್ಟಿಯಿಂದಲೂ ವಿಶೇಷವಾದುದು. ಷೇರು ಮಾರುಕಟ್ಟೆಗಳನ್ನು ಆರ್ಥಿಕತೆಯ ಸ್ಥಿತಿಯನ್ನು ಹೇಳುವ ಸೂಚಕಗಳು ಎಂದು ತಿಳಿಯುವುದಾದರೆ, ದೇಶದ ಆರ್ಥಿಕತೆಯು ಉತ್ತಮ ಚೇತರಿಕೆಯ ಹಾದಿಯಲ್ಲಿದೆ ಎನ್ನಬಹುದು. ಆರ್ಥಿಕ ಬೆಳವಣಿಗೆ ಮತ್ತು ಕಾರ್ಪೊರೇಟ್‌ ಗಳಿಕೆಯಲ್ಲಿ ಚೇತರಿಕೆ ಮುಂದೆಯೂ ಕಂಡುಬರುತ್ತಿದ್ದರೆ ಮಾರುಕಟ್ಟೆಯು ಇನ್ನಷ್ಟು ಅಚ್ಚರಿಗಳನ್ನು ನೀಡಲಿದೆ’ ಎಂದು ಜಿಯೋಜಿತ್‌ ಹಣಕಾಸು ಸೇವೆಗಳ ಮುಖ್ಯ ಹೂಡಿಕೆ ತಜ್ಞ ವಿ.ಕೆ. ವಿಜಯಕುಮಾರ್‌ ಹೇಳಿದ್ದಾರೆ.

ಜೋ ಬೈಡನ್‌ ಅವರು ಅಮೆರಿಕದ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಜಾಗತಿಕ ಮಾರುಕಟ್ಟೆಗಳು ಏರಿಕೆ ಕಂಡವು. ಹೊಸ ಆಡಳಿತವು ಆರ್ಥಿಕ ಉತ್ತೇಜನ ಕೊಡುಗೆಗಳನ್ನು ಪ್ರಕಟಿಸುವ ನಿರೀಕ್ಷೆಯಲ್ಲಿ ಹೂಡಿಕೆದಾರರು ವಹಿವಾಟು ನಡೆಸಿದ್ದಾರೆ.

ನಷ್ಟ: ದಿನದ ವಹಿವಾಟಿನಲ್ಲಿ ಒಎನ್‌ಜಿಸಿ ಷೇರು ಶೇಕಡ 4ರಷ್ಟು ನಷ್ಟ ಕಂಡಿತು. ಭಾರ್ತಿ ಏರ್‌ಟೆಲ್‌, ಎಸ್‌ಬಿಐ, ಇಂಡಸ್‌ಇಂಡ್‌ ಬ್ಯಾಂಕ್‌, ಎನ್‌ಟಿಪಿಸಿ, ಸನ್‌ ಫಾರ್ಮಾ ಮತ್ತು ಐಟಿಸಿ ಷೇರುಗಳು ಸಹ ಇಳಿಕೆ ಕಂಡವು.

ಬಜಾಜ್ ಫೈನಾನ್ಸ್‌, ಬಜಾಜ್‌ ಆಟೊ, ರಿಲಯನ್ಸ್‌ ಇಂಡಸ್ಟ್ರೀಸ್‌, ಬಜಾಜ್‌ ಫಿನ್‌ಸರ್ವ್ ಮತ್ತು ಏಷ್ಯನ್‌ ಪೇಂಟ್ಸ್‌ ಷೇರುಗಳು ಶೇ 2.72ರವರೆಗೂ ಏರಿಕೆ ಕಂಡವು.

ವಲಯವಾರು ನಷ್ಟ: ಬಿಎಸ್‌ಇ ದೂರಸಂಪರ್ಕ, ರಿಯಲ್‌ ಎಸ್ಟೇಟ್‌, ಲೋಹ ಮತ್ತು ಆರೋಗ್ಯ ಸೇವೆಗಳ ಸೂಚ್ಯಂಕಗಳು ಶೇ 2.64ರವರೆಗೂ ನಷ್ಟ ಅನುಭವಿಸಿವೆ.

**

0.89%: ಬ್ರೆಂಟ್‌ ತೈಲ ದರದಲ್ಲಿ ಆಗಿರುವ ಇಳಿಕೆ

6 ಪೈಸೆ: ಡಾಲರ್‌ ಎದುರು ರೂಪಾಯಿ ಮೌಲ್ಯದಲ್ಲಿ ಆಗಿರುವ ಹೆಚ್ಚಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT