ಬುಧವಾರ, ಆಗಸ್ಟ್ 17, 2022
25 °C

ವಾರದ ವಹಿವಾಟು ಸಕಾರಾತ್ಮಕ ಅಂತ್ಯ: ಸಂಪತ್ತು ₹ 5.34 ಲಕ್ಷ ಕೋಟಿ ವೃದ್ಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ದೇಶದ ಷೇರುಪೇಟೆಗಳ ವಾರದ ವಹಿವಾಟು ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ಅಂತ್ಯವಾಗಿದೆ.

ಮುಂಬೈ ಷೇರುಪೇಟೆ (ಬಿಎಸ್‌ಇ) ಸಂವೇದಿ ಸೂಚ್ಯಂಕ 930 ಅಂಶ ಹೆಚ್ಚಾಗಿ 45,080 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ. 

ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ ಹೂಡಿಕೆದಾರರು ಸಂಪತ್ತು ಮೌಲ್ಯ ₹ 5.34 ಲಕ್ಷ ಕೋಟಿಗಳಷ್ಟು ಹೆಚ್ಚಾಗಿದ್ದು ₹ 179.48 ಲಕ್ಷ ಕೋಟಿಗಳಿಗೆ ಏರಿಕೆಯಾಗಿದೆ. ನವೆಂಬರ್‌ 2 ರಿಂದ ನವೆಂಬರ್‌ 27ರವರೆಗೆ ನಡೆದಿರುವ ವಹಿವಾಟಿನಲ್ಲಿ ಹೂಡಿಕೆದಾರರ ಸಂಪತ್ತು ಮೌಲ್ಯ ₹ 16.96 ಲಕ್ಷ ಕೋಟಿಗಳಷ್ಟು ಏರಿಕೆ ಕಂಡಿದೆ.

ರಾಷ್ಟ್ರೀಯ ಷೇರುಪೇಟೆ (ಎನ್‌ಎಸ್‌ಇ) ಸೂಚ್ಯಂಕ ನಿಫ್ಟಿ 290 ಅಂಶಗಳಷ್ಟು ಹೆಚ್ಚಾಗಿ 13,259 ಅಂಶಗಳಲ್ಲಿ ವಾರದ ವಹಿವಾಟು ಅಂತ್ಯವಾಗಿದೆ.

ವಾರದ ವಹಿವಾಟಿನಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 25 ಪೈಸೆಗಳಷ್ಟು ಏರಿಕೆ ಕಂಡಿದ್ದು, ಒಂದು ಡಾಲರ್‌ಗೆ ₹ 73.80ಕ್ಕೆ ತಲುಪಿದೆ.

ಎರಡನೇ ತ್ರೈಮಾಸಿಕಕ್ಕೆ ಸಂಬಂಧಿಸಿದ ಜಿಡಿಪಿ ಅಂಕಿ–ಅಂಶಗಳು ಮಾರುಕಟ್ಟೆಯ ನಿರೀಕ್ಷೆಗಿಂತಲೂ ಉತ್ತಮವಾಗಿದೆ. ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಶೇ (–) 23.9ರಷ್ಟು ಕುಸಿತ ಕಂಡಿದ್ದು, ಎರಡನೇ ತ್ರೈಮಾಸಿಕದಲ್ಲಿ ಕುಸಿತದ ಪ್ರಮಾಣ ಕಡಿಮೆ ಆಗಿದ್ದು ಶೇ (–) 7.5ರಷ್ಟಾಗಿದೆ. ಇದು ಹೂಡಿಕೆ ಚಟುವಟಿಕೆಗಳ ಮೇಲೆ ಸಕಾರಾತ್ಮಕ ಪರಿಣಾಮ ಉಂಟುಮಾಡಿದೆ ಎಂದು ತಜ್ಞರು ಹೇಳಿದ್ದಾರೆ.

ಕೋವಿಡ್‌–19ಕ್ಕೆ ಲಸಿಕೆ ಅಭಿವೃದ್ಧಿಪಡಿಸುವಲ್ಲಿ ಆಗುತ್ತಿರುವ ಬೆಳವಣಿಗೆಯು ಜಾಗತಿಕ ಷೇರುಪೇಟೆಗಳಲ್ಲಿ ಉತ್ತಮ ವಹಿವಾಟು ನಡೆಯುವಂತೆ ಮಾಡುತ್ತಿದ್ದು, ಭಾರತದ ಷೇರುಪೇಟೆಗಳ ಮೇಲೆಯೂ ಅದರ ಪ್ರಭಾವ ಉಂಟಾಗುತ್ತಿದೆ.

ಭಾರತದ ಜಿಡಿಪಿ ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ಸಕಾರಾತ್ಮಕ ಹಾದಿಗೆ ಮರಳಲಿದೆ ಎಂದು ಆರ್‌ಬಿಐ ಶುಕ್ರವಾರ ಹೇಳಿದೆ. ಇದು ಷೇರುಪೇಟೆಗಳ ವಹಿವಾಟನ್ನು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪುವಂತೆ ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು