ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಗದ ನಿರೀಕ್ಷಿತ ಪ್ಯಾಕೇಜ್; ಕರಗಿದ ಸಂಪತ್ತು

ಸೆನ್ಸೆಕ್ಸ್ 1,066 ಅಂಶ ಕುಸಿತ
Last Updated 15 ಅಕ್ಟೋಬರ್ 2020, 16:12 IST
ಅಕ್ಷರ ಗಾತ್ರ

ನವದೆಹಲಿ: ಷೇರುಪೇಟೆಯಲ್ಲಿ 10 ದಿನಗಳಿಂದ ನಡೆಯುತ್ತಿದ್ದ ಸಕಾರಾತ್ಮಕ ವಹಿವಾಟಿಗೆ ಗುರುವಾರ ತಡೆ ಬಿದ್ದಿದೆ. ವರ್ತಕರು ಷೇರುಗಳ ಮಾರಾಟಕ್ಕೆ ಹೆಚ್ಚಿನ ಗಮನ ನೀಡಿದರು. ಇದರಿಂದಾಗಿ, ಸೆನ್ಸೆಕ್ಸ್‌ 1,066 ಅಂಶಗಳಷ್ಟು ಕುಸಿತ ಕಂಡಿತು. ಹೂಡಿಕೆದಾರರ ಸಂಪತ್ತು ₹ 3.25 ಲಕ್ಷ ಕೋಟಿಯಷ್ಟು ಕರಗಿತು.

‘ಜಾಗತಿಕ ಷೇರು ಮಾರುಕಟ್ಟೆಗಳಲ್ಲಿ ಉತ್ಸಾಹದ ವಹಿವಾಟು ನಡೆದಿಲ್ಲ. ಇದು ಭಾರತದ ಷೇರು ಮಾರುಕಟ್ಟೆಗಳ ಮೇಲೆ ಪ್ರಭಾವ ಬೀರಿತು. ಅಮೆರಿಕದಲ್ಲಿ ಆರ್ಥಿಕ ಉತ್ತೇಜನ ಪ್ಯಾಕೇಜ್ ಘೋಷಣೆ ಮಾಡಲಾಗುತ್ತದೆ ಎನ್ನುವ ನಿರೀಕ್ಷೆಗಳು ಹುಸಿಯಾಗುತ್ತಿವೆ. ಯುರೋಪಿನಲ್ಲಿ ಕೋವಿಡ್–19 ಪ್ರಕರಣಗಳು ಮತ್ತೆ ಹೆಚ್ಚಾಗುತ್ತಿವೆ ಎಂಬ ಆತಂಕದ ಕಾರಣದಿಂದಾಗಿ ಮಾರುಕಟ್ಟೆಯಲ್ಲಿ ನಕಾರಾತ್ಮಕ ವಹಿವಾಟು ನಡೆದಿದೆ’ ಎಂದು ಚಾಯ್ಸ್ ಬ್ರೋಕಿಂಗ್‌ನ ಕಾರ್ಯನಿರ್ವಾಹಕ ನಿರ್ದೇಶಕ ಸುಮೀತ್ ಬಗಾದಿಯಾ ಹೇಳಿದ್ದಾರೆ.

ಏಷ್ಯನ್ ಪೇಂಟ್ಸ್‌ ಹೊರತುಪಡಿಸಿದರೆ, ಸೆನ್ಸೆಕ್ಸ್‌ನಲ್ಲಿ ವಹಿವಾಟು ನಡೆಸುವ ಎಲ್ಲ ಕಂಪನಿಗಳ ಷೇರು ಮೌಲ್ಯದಲ್ಲಿ ಕುಸಿತ ಕಂಡುಬಂತು. ಬಜಾಜ್ ಫೈನಾನ್ಸ್ ಶೇಕಡ 4.68ರಷ್ಟು ಇಳಿಕೆಯಾಯಿತು. ಟೆಕ್ ಮಹೀಂದ್ರ, ಇಂಡಸ್ ಇಂಡ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಎಸ್‌ಬಿಐ, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಭಾರ್ತಿ ಏರ್‌ಟೆಲ್‌ ಷೇರುಗಳು ಕುಸಿತ ಅನುಭವಿಸಿದವು.

‘ಭಾರಿ ಮೊತ್ತದ ಆರ್ಥಿಕ ಉತ್ತೇಜನಾ ಪ್ಯಾಕೇಜ್‌ ಭಾರತದಲ್ಲಿ ಘೋಷಣೆ ಆಗಲಿದೆ ಎಂಬ ನಿರೀಕ್ಷೆಯಲ್ಲಿ ಮಾರುಕಟ್ಟೆಯು ಏರಿಕೆಯನ್ನು ಕಂಡಿತ್ತು. ಆದರೆ, ಬಯಸಿದ ರೀತಿಯ ಆರ್ಥಿಕ ಪ್ಯಾಕೇಜ್‌ನ ಘೋಷಣೆ ಆಗಿಲ್ಲ. ಅದೇ ರೀತಿ, ಅಮೆರಿಕ ಮತ್ತು ಯುರೋಪಿನಲ್ಲಿ ಕೂಡ ಆರ್ಥಿಕ ಪ್ಯಾಕೇಜ್ ಘೋಷಣೆ ವಿಳಂಬ ಆಗುತ್ತಿರುವುದು ಸೂಚ್ಯಂಕಗಳ ಓಟಕ್ಕೆ ತಡೆಯಾಗಿದೆ. ಕೋವಿಡ್–19 ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ವರದಿಯಾಗುತ್ತಿರುವುದು ಕೂಡ ಆರ್ಥಿಕ ಚೇತರಿಕೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ’ ಎಂದು ಜಿಯೋಜಿತ್ ಹಣಕಾಸು ಸೇವಾ ಸಂಸ್ಥೆಯ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯಕ್ ವಿಶ್ಲೇಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT