ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆನ್ಸೆಕ್ಸ್: ವಾರದಲ್ಲಿ 2,000 ಸಾವಿರ ಅಂಶ ಕುಸಿತ..!

Last Updated 10 ಮೇ 2020, 19:45 IST
ಅಕ್ಷರ ಗಾತ್ರ

ಷೇರುಪೇಟೆಯಲ್ಲಿ ಕರಡಿ ಹಿಡಿತ ಬಿಗಿಯಾಗಿದೆ. ಒಂದು ವಾರದ ಅವಧಿಯಲ್ಲಿ ಸೆನ್ಸೆಕ್ಸ್ ಬರೋಬ್ಬರಿ 2,000 ಅಂಶಗಳನ್ನು ಕಳೆದುಕೊಂಡ ಕಾರಣ ಹಿಂದಿನ ವಾರಗಳಿಸಿದ್ದ ಶೇ 90 ರಷ್ಟು ಗಳಿಕೆ ಅಳಿಸಿಹೋಗಿದೆ. 31,642 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್ ಮತ್ತು 9,251 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ, ವಾರದ ಅವಧಿಯಲ್ಲಿ ತಲಾ ಸುಮಾರು ಶೇ 6.2 ರಷ್ಟು ಕುಸಿತ ದಾಖಲಿಸಿವೆ. ಸೆನ್ಸೆಕ್ಸ್ ಸ್ಮಾಲ್‌ಕ್ಯಾಪ್ ಮತ್ತು ಮಿಡ್ ಕ್ಯಾಪ್ ಶೇ 4 ರಿಂದ 5 ರಷ್ಟು ತಗ್ಗಿವೆ.

ಕೇಂದ್ರ ಸರ್ಕಾರದಿಂದ ಮತ್ತೊಂದು ಪ್ಯಾಕೇಜ್ ಘೋಷಣೆಯಲ್ಲಿನ ವಿಳಂಬ, ಕೋವಿಡ್ ಪ್ರಕರಣಗಳ ಹೆಚ್ಚಳ, ವಿತ್ತೀಯ ಕೊರತೆ, ಕ್ರೆಡಿಟ್ ರೇಟಿಂಗ್ ರಿಪೋರ್ಟ್‌ಗಳ ಎಚ್ಚರಿಕೆ, ಲಾಕ್‌ಡೌನ್ ಮತ್ತೆ ವಿಸ್ತರಣೆಯಾದರೆ ಆರ್ಥಿಕತೆ ಮೇಲೆ ಮತ್ತು ಕಂಪನಿಗಳ ತ್ರೈಮಾಸಿಕ ಫಲಿತಾಂಶಗಳ ಮೇಲೆ ಉಂಟಾಗುವ ನಕಾರಾತ್ಮಕ ಪರಿಣಾಮ ಹೀಗೆ ಹಲವರು ಸಂಗತಿಗಳು ಮಾರುಕಟ್ಟೆ ಸೂಚ್ಯಂಕಗಳ ಮೇಲೆ ಪರಿಣಾಮ ಬೀರಿವೆ.

ಏರಿಕೆ – ಇಳಿಕೆ : ರಿಲಯನ್ಸ್ ಇಂಡಸ್ಟ್ರೀಸ್ ಶೇ 6, ಎನ್ಐಐಟಿ ಟೆಕ್ನಾಲಜೀಸ್ ಶೇ 16, ಮಹೀಂದ್ರಾ ಆ್ಯಂಡ್ ಮಹೀಂದ್ರಾ ಶೇ 5 , ಪರ್ಸಿಸ್ಟೆಂಟ್ ಸಿಸ್ಟಮ್ಸ್ ಶೇ 11, ಎಸ್‌ಬಿಐ ಲೈಫ್ ಇನ್ಶುರೆನ್ಸ್ ಶೇ 4 ಮತ್ತು ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್ ಷೇರುಬೆಲೆ ಶೇ 22 ರಷ್ಟು ಜಿಗಿದಿವೆ. ಐಟಿಸಿ ಶೇ 13 , ಹೆಕ್ಸಾ ವೇರ್ ಶೇ 15 , ಬ್ಯಾಂಕ್ ಆಫ್ ಬರೋಡಾ ಶೇ 16 , ಆ್ಯಕ್ಸಿಸ್ ಬ್ಯಾಂಕ್ ಶೇ 14 ರಷ್ಟು ಕುಸಿತ ಕಂಡಿವೆ.

ದಿಢೀರ್ ಕುಸಿತ ಸಾಧ್ಯತೆ : ಕೋವಿಡ್ ಪ್ರಕರಣಗಳ ಹೆಚ್ಚಳದ ನಡುವೆ ಮಾರುಕಟ್ಟೆಯಲ್ಲಿ ಅನಿಶ್ಚಿತ ವಾತಾವರಣ ಇನ್ನೂ ಕೆಲ ವಾರಗಳ ಕಾಲ ಮುಂದುವರಿಯಲಿದೆ. ಕೋವಿಡ್ ಪ್ರಕರಣಗಳಲ್ಲಿ ಗಣನೀಯ ಹೆಚ್ಚಳ ಕಂಡುಬಂದರೆ ಮಾರುಕಟ್ಟೆ ದಿಢೀರ್ ಕುಸಿತ ಕಾಣುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಸದ್ಯದ ಮಟ್ಟಿಗೆ ಉತ್ತಮ ಸ್ಥಿತಿಯಲ್ಲಿರುವ ಕಂಪನಿಗಳ ಷೇರುಗಳ ಮೇಲೆ ಹೂಡಿಕೆದಾರರು ಗಮನಹರಿಸಿ ಮುನ್ನಡೆಯಬಹುದು.

ಮುನ್ನೋಟ: ಈ ವಾರ ಸುಮಾರು 50 ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ. ಮಾರುತಿ ಸುಜುಕಿ, ಬಯೋಕಾನ್, ಬಂಧನ್ ಬ್ಯಾಂಕ್ , ಕೋಟಕ್ ಮಹೀಂದ್ರಾ ಬ್ಯಾಂಕ್ , ಡಾ ರೆಡ್ಡಿಸ್ ಲ್ಯಾಬ್ಸ್ , ಹ್ಯಾವೆಲ್ಸ್, ಸಿಪ್ಲಾ, ಎಬಿಬಿ ಇಂಡಿಯಾ, ಗೋದ್ರೇಜ್ ಕನ್ಸುಮರ್ ಪ್ರಾಡಕ್ಡ್ಸ್ , ಗೋದ್ರೇಜ್ ಪ್ರಾಪರ್ಟಿಸ್, ಮೋತಿಲಾಲ್ ಓಸ್ವಾಲ್, ನಿಪ್ಪಾನ್ ಲೈಫ್ ಇಂಡಿಯಾ ಅಸೆಟ್ ಮ್ಯಾನೇಜ್‌ಮೆಂಟ್ ಕಂಪನಿ, ಟಾಟಾ ಕನ್ಸುಮರ್ ಪ್ರಾಡಕ್ಟ್ಸ್ , ಬ್ಲೂ ಸ್ಟಾರ್ , ಮಣಪ್ಪುರಂ ಫೈನಾನ್ಸ್ , ಸಿಡಿಎಸ್ಎಲ್ ಸೇರಿ ಪ್ರಮುಖ ಕಂಪನಿಗಳ ಫಲಿತಾಂಶ ಹೊರಬೀಳಲಿದೆ. ಮೇ 11 ರಂದು ಮಾರುಕಟ್ಟೆ ಐಸಿಐಸಿಐ ಬ್ಯಾಂಕ್‌ನ ತ್ರೈಮಾಸಿಕ ಫಲಿತಾಂಶಕ್ಕೆ ಪ್ರತಿಕ್ರಿಯಿಸಲಿದೆ. ಮೇ 12 ರಂದು ಮಾರ್ಚ್‌ ಕೈಗಾರಿಕೆ ಉತ್ಪಾದನೆ ದತ್ತಾಂಶ ಮತ್ತು ಗ್ರಾಹಕ ಬೆಲೆ ಸೂಚ್ಯಂಕ ಪ್ರಕಟಗೊಳ್ಳಲಿದೆ. ಮೇ 14 ರಂದು ಸಗಟು ದರ ಸೂಚ್ಯಂಕ ಪ್ರಕಟಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT