ಗುರುವಾರ , ಮೇ 28, 2020
27 °C

ಷೇರುಪೇಟೆಗಳಲ್ಲಿ ಪುಟಿದೆದ್ದ ಖರೀದಿ ಉತ್ಸಾಹ: ಐಟಿ, ಬ್ಯಾಂಕ್‌ ವಲಯ ಗಳಿಕೆ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಷೇರುಪೇಟೆ ವಹಿವಾಟು–ಸಾಂಕೇತಿಕ ಚಿತ್ರ

ಬೆಂಗಳೂರು: ಸೋಮವಾರ ಷೇರುಪೇಟೆಗಳಲ್ಲಿ ಖರೀದಿ ಭರಾಟೆ ನಡೆದಿದೆ. ವಹಿವಾಟು ಆರಂಭದಲ್ಲಿಯೇ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 600 ಅಂಶ ಜಿಗಿದಿದೆ. ರಿಲಯನ್ಸ್‌ ಇಂಡಸ್ಟ್ರೀಸ್‌, ಎಚ್‌ಡಿಎಫ್‌ಸಿ ಹಾಗೂ ಇನ್ಫೊಸಿಸ್‌ ಕಂಪನಿಗಳ ಷೇರುಗಳಲ್ಲಿ ಹೂಡಿಕೆದಾರರು ಆಸಕ್ತಿವಹಿಸಿದ್ದಾರೆ. 

ಬೆಳಿಗ್ಗೆ 11:20ಕ್ಕೆ ಸೆನ್ಸೆಕ್ಸ್‌  681.58 ಅಂಶ ಏರಿಕೆಯೊಂದಿಗೆ 32,008.80 ಅಂಶಗಳಲ್ಲಿ ವಹಿವಾಟು ನಡೆದಿದೆ. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 186.30 ಅಂಶ (ಶೇ 2.07) ಹೆಚ್ಚಳದೊಂದಿಗೆ  9,340.70 ಅಂಶ ತಲುಪಿದೆ. ನಗದೀಕರಿಸುವಿಕೆಯಿಂದ ಒತ್ತಡಕ್ಕೆ ಸಿಲುಕಿರುವ ಮ್ಯೂಚುವಲ್‌ ಫಂಡ್‌ಗಳಲ್ಲಿ ಹಣದ ದ್ರವ್ಯತೆಗಾಗಿ ಆರ್‌ಬಿಐ ₹50,000 ಕೋಟಿ ಸಹಕಾರ ಘೋಷಣೆಯಾಗಿರುವುದು ಸಹ ಹೂಡಿಕೆದಾರರಲ್ಲಿ ಉತ್ಸಾಹಕ್ಕೆ ಕಾರಣವಾಗಿದೆ. 

ಸೆನ್ಸೆಕ್ಸ್‌ ಷೇರುಗಳ ಪೈಕಿ ರಿಲಯನ್ಸ್‌ ಇಂಡಸ್ಟ್ರೀಸ್‌, ಕೊಟ್ಯಾಕ್‌ ಬ್ಯಾಂಕ್‌, ಬಜಾಜ್‌ ಆಟೊ, ಸನ್‌ ಫಾರ್ಮಾ, ಇಂಡಸ್‌ಇಂಡ್‌ ಬ್ಯಾಂಕ್‌, ಮಾರುತಿ, ಎಚ್‌ಡಿಎಫ್‌ಸಿ, ಆ್ಯಕ್ಸಿಸ್‌ ಬ್ಯಾಂಕ್‌ ಷೇರುಗಳು ಶೇ 1ರಿಂದ ಶೇ 4 ರವರೆಗೂ ಗಳಿಕೆ ದಾಖಲಿಸಿವೆ. ಎನ್‌ಟಿಪಿಸಿ, ಪವರ್‌ಗ್ರಿಡ್‌ ಹಾಗೂ ಏಷಿಯನ್‌ ಪೇಂಟ್ಸ್‌ ಷೇರುಗಳು ನಷ್ಟ ಅನುಭವಿಸಿವೆ. 

ಇನ್ಫೊಸಿಸ್‌, ಟಿಸಿಎಸ್‌ ಸೇರಿದಂತೆ ಐಟಿ ವಲಯದ ಷೇರುಗಳು, ಲೋಹ ಹಾಗೂ ಐಟಿಸಿ ರೀತಿಯ ಎಫ್‌ಎಂಸಿಜಿ ಷೇರುಗಳು ಸಹ ಗಳಿಕೆ ಕಂಡಿವೆ. ಇನ್ನು 24 ಕ್ಯಾರೆಟ್‌ ಚಿನ್ನ ಏರುಗತಿಯಲ್ಲಿದ್ದು ₹4,785ರಲ್ಲಿ ವಹಿವಾಟು ನಡೆದಿದೆ. 

ಚೀನಾದ ಶಾಂಘೈ ಷೇರುಪೇಟೆ, ಹಾಂಗ್‌ ಕಾಂಗ್‌, ಟೋಕಿಯೊ ಹಾಗೂ ಸೋಲ್‌ ಷೇರುಪೇಟೆಗಳಲ್ಲಿ ವಹಿವಾಟು ಚೇತರಿಕೆ ಕಂಡಿದೆ. ಅಂತರರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಬ್ರೆಂಟ್‌ ಕಚ್ಚಾ ತೈಲ ಫ್ಯೂಚರ್ಸ್‌ ದರ ಶೇ 1.89ರಷ್ಟು ಇಳಿಕೆಯೊಂದಿಗೆ ಪ್ರತಿ ಬ್ಯಾರೆಲ್‌ಗೆ 24.34 ಡಾಲರ್‌ ತಲುಪಿದೆ. 

ಜಾಗತಿಕವಾಗಿ ಕೊರೊನಾ ವೈರಸ್‌ ಸೋಂಕು ಪ್ರಕರಣಗಳು 29.7 ಲಕ್ಷ ದಾಟಿದ್ದು, 2 ಲಕ್ಷ ಮಂದಿ ಸಾವಿಗೀಡಾಗಿದ್ದಾರೆ. ದೇಶದಲ್ಲಿ ಒಟ್ಟು 27,893 ಪ್ರಕರಣಗಳ ಪೈಕಿ 872 ಮಂದಿ ಮೃತಪಟ್ಟಿದ್ದಾರೆ. 

ಕಳೆದ ಎರಡು ವಾರಗಳಲ್ಲಿ ಚೇತರಿಕೆ ಕಂಡಿದ್ದ ಷೇರುಪೇಟೆ ಸೂಚ್ಯಂಕಗಳು ಏಪ್ರಿಲ್ 24 ಕ್ಕೆ ಕೊನೆಗೊಂಡ ವಾರದಲ್ಲಿ ಹಿನ್ನಡೆ ಅನುಭವಿಸಿವೆ. ‘ಕೋವಿಡ್-19’ ಸೋಂಕಿತರ ಪ್ರಮಾಣದಲ್ಲಿ ಹೆಚ್ಚಳ, ಆರ್ಥಿಕ ಚೇತರಿಕೆಗೆ ಮತ್ತೊಂದು ಪ್ಯಾಕೇಜ್ ಘೋಷಣೆಯಲ್ಲಿ ವಿಳಂಬ ಸೇರಿ ಹಲವು ಅಂಶಗಳು ಮಾರುಕಟ್ಟೆ ಕುಸಿತಕ್ಕೆ ಕಾರಣವಾಗಿವೆ. 31,327 ಅಂಶಗಳಲ್ಲಿ ವಹಿವಾಟು ಮುಗಿಸಿದ ಸೆನ್ಸೆಕ್ಸ್, ವಾರದ ಅವಧಿಯಲ್ಲಿ ಶೇ 0.83 ರಷ್ಟು ಕುಸಿತ ಕಂಡಿತು. 9,154 ಅಂಶಗಳಲ್ಲಿ ವಹಿವಾಟು ಪೂರೈಸಿರುವ ನಿಫ್ಟಿ, ವಾರಾಂತ್ಯಕ್ಕೆ ಶೇ 1.2 ರಷ್ಟು ತಗ್ಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು