ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಡ್ ಕ್ಯಾಪ್: ಯಾವ ಫಂಡ್ ಸೂಕ್ತ?

Last Updated 5 ಡಿಸೆಂಬರ್ 2021, 21:19 IST
ಅಕ್ಷರ ಗಾತ್ರ

‘ಷೇರು ಮಾರುಕಟ್ಟೆ ಬಗ್ಗೆ ನನಗೆ ಹೆಚ್ಚು ತಿಳಿದಿಲ್ಲ. ಆದರೆ, ಮ್ಯೂಚುವಲ್ ಫಂಡ್‌ಗಳ ಮೂಲಕ ಹೂಡಿಕೆ ಆರಂಭಿಸುವ ಉದ್ದೇಶ ಇದೆ. ಯಾವ ಮ್ಯೂಚುವಲ್ ಫಂಡ್ ಉತ್ತಮ? ಯಾವುದರಲ್ಲಿ ಹೂಡಿಕೆ ಮಾಡಲಿ’ ಎಂದು ಅನೇಕರು ಕೇಳುತ್ತಾರೆ. ಉತ್ತಮ ಮ್ಯೂಚುವಲ್‌ ಫಂಡ್ ಯಾವುದು ಎಂಬುದನ್ನು ತೀರ್ಮಾನಿಸುವುದು ಹೇಗೆ?

ಈ ತಪ್ಪು ಮಾಡಬೇಡಿ: ಬಹುತೇಕರು ಮ್ಯೂಚುವಲ್ ಫಂಡ್ ಆಯ್ಕೆ ಮಾಡುವಾಗ ಗೂಗಲ್ ಸರ್ಚ್ ಎಂಜಿನ್‌ಗೆ ಹೋಗಿ, 2021-22ರಲ್ಲಿ ಹೂಡಿಕೆ ಮಾಡಬಹುದಾದ ಉತ್ತಮ ಮ್ಯೂಚುವಲ್ ಫಂಡ್‌ಗಳು ಯಾವುವು ಎಂಬುದನ್ನು ಹುಡುಕುತ್ತಾರೆ. ಆಗ ಒಂದು ದೊಡ್ಡ ಪಟ್ಟಿ ಬರುತ್ತದೆ. ಅದನ್ನೇ ಆಧಾರವಾಗಿ ಇಟ್ಟುಕೊಂಡು, ಕಳೆದ ನಾಲ್ಕೈದು ವರ್ಷಗಳಲ್ಲಿ ಯಾವ ಮ್ಯೂಚುವಲ್ ಫಂಡ್ ಉತ್ತಮ ಲಾಭಾಂಶ ಕೊಟ್ಟಿದೆ ಎನ್ನುವುದನ್ನು ಪರಿಗಣಿಸಿ ಹೂಡಿಕೆ ತೀರ್ಮಾನ ತೆಗೆದುಕೊಳ್ಳುತ್ತಾರೆ. ಆದರೆ ಈ ರೀತಿಯಲ್ಲಿ ನಿರ್ಧಾರ ಕೈಗೊಳ್ಳುವುದು ಸರಿ ಅಲ್ಲ.

ಯಾವುದೇ ಮ್ಯೂಚುವಲ್ ಫಂಡ್‌ನಲ್ಲಿ ಹಣ ತೊಡಗಿಸುವಾಗ ಆ ಮ್ಯೂಚುವಲ್ ಫಂಡ್‌ನ ವೆಚ್ಚ ಅನುಪಾತ (Expense Ratio) ಎಷ್ಟಿದೆ, ಆ ಮ್ಯೂಚುವಲ್ ಫಂಡ್ ಯಾವ ಕಂಪನಿಗಳಲ್ಲಿ ಮತ್ತು ಯಾವ ವಲಯಗಳಲ್ಲಿ ಹೆಚ್ಚು ಹೂಡಿಕೆ ಮಾಡಿದೆ ಎನ್ನುವ ಮಾಹಿತಿ ಬಹಳ ಮುಖ್ಯ.

ಮ್ಯೂಚುವಲ್ ಫಂಡ್ ಆಯ್ಕೆ ಹೀಗಿರಲಿ: ಮ್ಯೂಚುವಲ್ ಫಂಡ್‌ಗಳಲ್ಲಿ ಪ್ರಮುಖವಾಗಿ ಲಾರ್ಜ್, ಮಿಡ್ ಮತ್ತು ಸ್ಮಾಲ್ ಕ್ಯಾಪ್ ಎಂಬ ಮೂರು ವಿಧಗಳಿವೆ. ಲಾರ್ಜ್ ಕ್ಯಾಪ್ ಎಂದರೆ ದೊಡ್ಡ ಮಟ್ಟದಲ್ಲಿ ವ್ಯವಹಾರ ನಡೆಸುವ ಕಂಪನಿಗಳು. ಅದೇ ರೀತಿ ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಅಂದರೆ ಕ್ರಮವಾಗಿ ಮಧ್ಯಮ ಮತ್ತು ಸಣ್ಣ ಗಾತ್ರದ ಕಂಪನಿಗಳು. ನಾವೀಗ ಉತ್ತಮವಾದ ಮಿಡ್ಕ್ಯಾಪ್ ಮ್ಯೂಚುವಲ್ ಫಂಡ್‌ಗಳನ್ನು ಆಯ್ಕೆ ಮಾಡುವುದು ಹೇಗೆ ಎಂದು ತಿಳಿಯೋಣ.

ಪಟ್ಟಿಯಲ್ಲಿ ತಿಳಿಸಿರುವ ಮಿಡ್ ಕ್ಯಾಪ್ ಮ್ಯೂಚುವಲ್ ಫಂಡ್‌ಗಳನ್ನು ಪರಿಗಣಿಸಿದಾಗ, ಪಿಜಿಐಎಂ ಇಂಡಿಯಾ ಮಿಡ್ ಕ್ಯಾಪ್ಆಪರ್ಚ್ಯೂನಿಟೀಸ್ ಫಂಡ್‌ನಲ್ಲಿ ವೆಚ್ಚ ಅನುಪಾತ ಅತ್ಯಂತ ಕಡಿಮೆ, ಅಂದರೆ ಶೇ 0.32ರಷ್ಟು, ಇದೆ. ಶೇ 32.74ರಷ್ಟು ವಾರ್ಷಿಕಲಾಭಾಂಶ ನೀಡಿರುವ ಈ ಫಂಡ್ ಪ್ರಮುಖವಾಗಿ ಎಂಫಸಿಸ್, ಮೈಂಡ್ ಟ್ರೀ ಮತ್ತು ಎಬಿಬಿ ಕಂಪನಿಗಳಲ್ಲಿ ಹೂಡಿಕೆ ಮಾಡಿದೆ. ಎಂಜಿನಿಯರಿಂಗ್, ಹಣಕಾಸು ಮತ್ತು ಕಟ್ಟಡ ನಿರ್ಮಾಣ ಇಲ್ಲಿ ಆದ್ಯತೆಯ ವಲಯಗಳಾಗಿವೆ.

ಎಕ್ಸಿಸ್ ಮಿಡ್‌ ಕ್ಯಾಪ್‌ ಮ್ಯೂಚುವಲ್ ಫಂಡ್‌ನಲ್ಲಿ ವೆಚ್ಚ ಅನುಪಾತ ಶೇ 0.46ರಷ್ಟಿದೆ. ಪಿಜಿಐಎಂ ಇಂಡಿಯಾ ಮಿಡ್ ಕ್ಯಾಪ್ ಫಂಡ್‌ನವೆಚ್ಚ ಅನುಪಾತಕ್ಕಿಂತ ಇದು ಸ್ವಲ್ಪ ಹೆಚ್ಚು. ಆದರೆ ಲಾಭಾಂಶವು ಪಿಜಿಐಎಂಗಿಂತ ಕಡಿಮೆ, ಅಂದರೆ ಶೇ 27.74ರಷ್ಟು, ಇದೆ. ಚೋಳಮಂಡಲಂ ಇನ್ವೆಸ್ಟ್‌ಮೆಂಟ್ಸ್, ಐಸಿಐಸಿಐ ಬ್ಯಾಂಕ್, ಎನ್‌ಐಐಟಿ ಟೆಕ್ನಾಲಜೀಸ್ ಲಿ. ಕಂಪನಿಗಳಲ್ಲಿ ಎಕ್ಸಿಸ್ ಮಿಡ್‌ ಕ್ಯಾಪ್ ಫಂಡ್‌ ಹೂಡಿಕೆಮಾಡಿದ್ದು ಹಣಕಾಸು, ತಂತ್ರಜ್ಞಾನ ಮತ್ತು ಕೆಮಿಕಲ್ಸ್ ವಲಯಗಳಲ್ಲಿ ಹೆಚ್ಚಿನ ಹಣ ತೊಡಗಿಸಿದೆ.

ಎಸ್‌ಬಿಐ ಮ್ಯಾಗ್ನಂ ಮಿಡ್ ಕ್ಯಾಪ್ ಫಂಡ್‌ನಲ್ಲಿ ವೆಚ್ಚ ಅನುಪಾತ ಶೇ 1.08ರಷ್ಟಿದೆ. ಲಾಭಾಂಶ ಶೇ 24.7ರಷ್ಟಿದೆ. ಈಫಂಡ್‌ನಲ್ಲಿ ಸಿಕ್ಕಿರುವ ಲಾಭಾಂಶಕ್ಕೆ ಹೋಲಿಕೆ ಮಾಡಿ ನೋಡಿದರೆ
ವೆಚ್ಚ ಅನುಪಾತ ಜಾಸ್ತಿ ಇದೆ ಅನಿಸುತ್ತದೆ. ಇನ್ನು ಯುಟಿಐ ಮಿಡ್ ಕ್ಯಾಪ್ಫಂಡ್‌ನಲ್ಲೂ ವೆಚ್ಚ ಅನುಪಾತ ಶೇ 1.04ರಷ್ಟಿದ್ದು ಲಾಭಾಂಶ ಶೇ 23.76ರಷ್ಟಿದೆ. ಫಂಡ್‌ನ ವೆಚ್ಚ ಅನುಪಾತ ಹೆಚ್ಚಿಗೆ ಇದ್ದರೆ ನಿಮಗೆ ಸಿಗುವ ಲಾಭಾಂಶ ಕಡಿಮೆಯಾಗುತ್ತದೆ. ಹಾಗಾಗಿ, ವೆಚ್ಚ ಅನುಪಾತ ಹೆಚ್ಚಿಗೆ ಇರುವ ಫಂಡ್‌ಗಳ ಬಗ್ಗೆ ಎಚ್ಚರಿಕೆ ವಹಿಸಬೇಕು.

ಒಟ್ಟಾರೆಯಾಗಿ ಕಡಿಮೆ ವೆಚ್ಚ ಅನುಪಾತ ಇರುವ ಮತ್ತು ಹೆಚ್ಚು ಲಾಭಾಂಶ ಕೊಟ್ಟಿರುವ, ನೀವು ನಂಬಿಕೆ ಇಟ್ಟಿರುವ ಕಂಪನಿಗಳು ಮತ್ತು ವಲಯಗಳಲ್ಲಿ ಹೂಡಿಕೆ ಮಾಡಿರುವ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದು ಉತ್ತಮ.

ಶೇ 1ರಷ್ಟು ಗಳಿಕೆ ಕಂಡ ಸೂಚ್ಯಂಕಗಳು

ಎರಡು ವಾರಗಳಿಂದ ಇಳಿಕೆಯ ಹಾದಿ ತುಳಿದಿದ್ದ ಷೇರುಪೇಟೆ ಸೂಚ್ಯಂಕಗಳು ಮತ್ತೆ ಗಳಿಕೆಯ ಲಯಕ್ಕೆ ಮರಳಿವೆ. ಡಿಸೆಂಬರ್ 3ಕ್ಕೆ ಕೊನೆಗೊಂಡ ವಾರದಲ್ಲಿ ಸೆನ್ಸೆಕ್ಸ್ 57,696 ಅಂಶಗಳಲ್ಲಿ ವಹಿವಾಟು ಮುಗಿಸಿ ಶೇ 1ರಷ್ಟು ಗಳಿಕೆ ಕಂಡಿದ್ದರೆ 17,196 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ನಿಫ್ಟಿ ಶೇ 0.99ರಷ್ಟು ಜಿಗಿದಿದೆ. ಜಿಡಿಪಿ ಸುಧಾರಣೆ ಕಂಡಿರುವುದು, ಉತ್ಪಾದನಾ ಸೂಚ್ಯಂಕದಲ್ಲಿ ಚೇತರಿಕೆ ಸೇರಿ ಹಲವು ಅಂಶಗಳು ಜಿಗಿತಕ್ಕೆ ಕಾರಣವಾಗಿವೆ.

ವಲಯವಾರು ಪ್ರಗತಿಯಲ್ಲಿ ನಿಫ್ಟಿ ಮಾಹಿತಿ ತಂತ್ರಜ್ಞಾನ ಸೂಚ್ಯಂಕ ಶೇ 4ರಷ್ಟು ಹೆಚ್ಚಳ ಕಂಡಿದೆ. ಮಾಧ್ಯಮ ಮತ್ತು ಲೋಹ ವಲಯ ಕೂಡ ಉತ್ತಮ ಪ್ರಗತಿ ಕಂಡಿವೆ. ಆದರೆ ಫಾರ್ಮಾ ವಲಯ ಶೇ 2.5ರಷ್ಟು ಕುಸಿತ ಕಂಡಿದೆ. ಕಳೆದ ವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹ 15,809.18 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ದೇಶಿ ಸಾಂಸ್ಥಿಕ ಹೂಡಿಕೆದಾರರು ₹ 16,450.10 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ಏರಿಕೆ-ಇಳಿಕೆ: ನಿಫ್ಟಿಯಲ್ಲಿ ಎಚ್‌ಸಿಎಲ್ ಶೇ 6ರಷ್ಟು, ಟಿಸಿಎಸ್ ಶೇ 6ರಷ್ಟು, ಇಂಡಸ್ ಇಂಡ್ ಬ್ಯಾಂಕ್ ಶೇ 5ರಷ್ಟು, ಬಜಾಜ್ ಫಿನ್‌ಸರ್ವ್ ಶೇ 5ರಷ್ಟು ಮತ್ತು ಟಾಟಾ ಮೋಟರ್ಸ್ ಶೇ 4ರಷ್ಟು ಏರಿಕೆಯಾಗಿವೆ. ಸಿಪ್ಲಾ ಶೇ 6ರಷ್ಟು, ಡಿವೀಸ್ ಲ್ಯಾಬ್ ಶೇ 4ರಷ್ಟು, ಡಿಆರ್‌ಎಲ್ ಶೇ 3ರಷ್ಟು, ಏರ್‌ಟೆಲ್ ಶೇ 3 ಮತ್ತು ಹೀರೊ ಶೇ 3ರಷ್ಟು ಇಳಿಕೆಯಾಗಿವೆ.

ಮುನ್ನೋಟ: ಭಾರತೀಯ ರಿಸರ್ವ್ ಬ್ಯಾಂಕ್ ಬಡ್ಡಿ ದರ ಕುರಿತಾಗಿ ಈ ವಾರ ಕೈಗೊಳ್ಳಲಿರುವ ಹಣಕಾಸು ನೀತಿ ತೀರ್ಮಾನವು ಷೇರು
ಮಾರುಕಟ್ಟೆಗಳ ಮೇಲೆ ನೇರ ಪರಿಣಾಮ ಬೀರಲಿದೆ. ಬಡ್ಡಿ ದರ ಹೆಚ್ಚಳವಾದರೆ ಹೂಡಿಕೆದಾರರ ಪಾಲಿಗೆ ಅದು ಕಹಿ ಸುದ್ದಿ. ಕೋವಿಡ್ ಓಮೈಕ್ರಾನ್‌ ತಳಿಯು ಜಾಗತಿಕವಾಗಿ ಎಷ್ಟರ ಮಟ್ಟಿಗೆ ತೊಂದರೆ ಉಂಟುಮಾಡಲಿದೆ ಎನ್ನುವುದು ಕೂಡ ಸೂಚ್ಯಂಕಗಳ ಗತಿ ನಿರ್ಧರಿಸಲಿದೆ.
‍‍‍‍‍‍‍‍‍‍‍‍‍‍‍‍‍(ಲೇಖಕ: ಇಂಡಿಯನ್ ಮನಿ ಡಾಟ್ ಕಾಂನ ಹಣಕಾಸು ಸಲಹಾ ವಿಭಾಗದ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT