ಭಾನುವಾರ, ಮಾರ್ಚ್ 7, 2021
32 °C

ಗುರಿ ತಲುಪದ ಷೇರು ವಿಕ್ರಯ

ವಿಶ್ವನಾಥ ಎಸ್. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೇಂದ್ರ ಸರ್ಕಾರವು 2011ರ ನಂತರದಲ್ಲಿ ಷೇರು ವಿಕ್ರಯದ ಮೂಲಕ ಎರಡು ಬಾರಿ ಮಾತ್ರ ಬಂಡವಾಳ ಸಂಗ್ರಹಣೆಯ ಗುರಿಯನ್ನು ತಲುಪಲು ಯಶಸ್ವಿಯಾಗಿದೆ. ಗುರಿ ತಲುಪಲು ಸಾಧ್ಯವಾಗದೆ ಇರುವುದಕ್ಕೆ ಮುಖ್ಯ ಕಾರಣ ಹಣಕಾಸು ಮಾರುಕಟ್ಟೆಯಲ್ಲಿನ ಏರಿಳಿತಗಳು ಎಂಬುದು ರೇಟಿಂಗ್ಸ್‌ ಸಂಸ್ಥೆಗಳ ಅಭಿಪ್ರಾಯ.

2020–21ನೇ ಹಣಕಾಸು ವರ್ಷದಲ್ಲಿ ಷೇರು ವಿಕ್ರಯದ ಮೂಲಕ ಒಟ್ಟು ₹ 2.1 ಲಕ್ಷ ಕೋಟಿ ಸಂಗ್ರಹಿಸುವ ಗುರಿಯನ್ನು ಕೇಂದ್ರ ಹೊಂದಿದೆ. ಇದು ಇಲ್ಲಿಯವರೆಗಿನ ಅತಿ ದೊಡ್ಡ ಗುರಿ. ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆಯಲ್ಲಿ (ಡಿಐಪಿಎಎಂ) ಇರುವ ಈಚೆಗಿನ ಮಾಹಿತಿಯ ಪ್ರಕಾರ ಕೇಂದ್ರ ಸರ್ಕಾರವು ಈ ಹಣಕಾಸು ವರ್ಷದಲ್ಲಿ ಇಲ್ಲಿಯವರೆಗೆ ₹28,298.26 ಕೋಟಿಗಳನ್ನಷ್ಟೇ ಷೇರು ವಿಕ್ರಯದ ಮೂಲಕ ಸಂಗ್ರಹಿಸಿದೆ.

ಎಐ ಮಾರಾಟದ ವಿಫಲ ಯತ್ನ: ನಷ್ಟದಲ್ಲಿರುವ ಏರ್‌ ಇಂಡಿಯಾದ ಷೇರು ಮಾರಾಟ ಮಾಡಲು ಕೇಂದ್ರ ಸಚಿವ ಸಂಪುಟವು 2017ರ ಜೂನ್‌ ತಿಂಗಳಿನಲ್ಲಿ ಒಪ್ಪಿಗೆ ನೀಡಿತ್ತು. ಕಂಪನಿಯಲ್ಲಿನ ಶೇ 76ರಷ್ಟು ಷೇರುಗಳನ್ನು ಮಾರಾಟ ಮಾಡುವ ನಿರ್ಧಾರವನ್ನು ಸರ್ಕಾರವು 2018ರಲ್ಲಿ ತೆಗೆದುಕೊಂಡಿತ್ತು. ಆದರೆ ಅದಕ್ಕೆ ಸೂಕ್ತ ಸ್ಪಂದನ ಸಿಗಲಿಲ್ಲ.

ಆ ಬಳಿಕ ಶೇ 100ರಷ್ಟು ಷೇರುಗಳನ್ನು ಮಾರಾಟ ಮಾಡಲು 2019ರಲ್ಲಿ ನಿರ್ಧರಿಸಲಾಯಿತು. ಆದರೆ ಆ ಪ್ರಯತ್ನಕ್ಕೂ ಯಶಸ್ಸು ಸಿಗಲಿಲ್ಲ. ಈಗ, ಏರ್‌ ಇಂಡಿಯಾ ಖರೀದಿಗೆ ಟಾಟಾ ಸಮೂಹ ಸೇರಿದಂತೆ ಹಲವು ಕಂಪನಿಗಳು ಆಸಕ್ತಿ ತೋರಿಸಿವೆ. ಹೀಗಾಗಿ, ಈ ಬಾರಿ ಖಾಸಗೀಕರಣವು ಫಲಿಸಲಿದೆ ಎಂಬ ನಿರೀಕ್ಷೆಯಲ್ಲಿ ಕೇಂದ್ರ ಸರ್ಕಾರವಿದೆ.

ದೇಶದ ಇನ್ನೊಂದು ಪ್ರಮುಖ ಕಂಪನಿ ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್ (ಬಿಪಿಸಿಎಲ್‌) ಅನ್ನು ಖಾಸಗೀಕರಣಗೊಳಿಸುವ ಪ್ರಕ್ರಿಯೆಗೆ ಕೋವಿಡ್‌–19 ಸಾಂಕ್ರಾಮಿಕ ಅಡ್ಡಿಯಾಗಿದೆ. ಹೀಗಾಗಿ ಬಿಪಿಸಿಎಲ್‌ ಮತ್ತು ಏರ್‌ ಇಂಡಿಯಾದ ಖಾಸಗೀಕರಣ ಪ್ರಕ್ರಿಯೆಯು ಮುಂದಿನ ಹಣಕಾಸು ವರ್ಷಕ್ಕೆ ಮುಂದೂಡಿಕೆ ಆಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು