ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ತೂಕ ಹೆಚ್ಚಿಸಿಕೊಂಡ ಲೋಹ ವಲಯದ ಕಂಪನಿಗಳು

ಮಿನುಗಿದ ಟಾಟಾ ಸ್ಟೀಲ್‌, ಎಪಿಎಲ್‌ ಅಪೊಲೊ, ಜೆಎಸ್‌ಡಬ್ಲ್ಯು ಸ್ಟೀಲ್‌ ಷೇರು
Last Updated 7 ಆಗಸ್ಟ್ 2022, 10:38 IST
ಅಕ್ಷರ ಗಾತ್ರ

ಷೇರುಪೇಟೆಯಲ್ಲಿ ಭಾರಿ ಪ್ರಮಾಣದಲ್ಲಿ ಕುಸಿತವನ್ನು ಎದುರಿಸಿದ್ದ ಲೋಹದ ವಲಯದ ಕಂಪನಿಗಳು ಇದೀಗ ಚೇತರಿಸಿಕೊಂಡು, ತನ್ನ ‘ತೂಕ’ವನ್ನು ಹೆಚ್ಚಿಸಿಕೊಳ್ಳುತ್ತಿವೆ. ಒಂದು ತಿಂಗಳ ಅವಧಿಯಲ್ಲಿ ಶೇ 20ಕ್ಕಿಂತಲೂ ಹೆಚ್ಚು ಮೌಲ್ಯವರ್ಧನೆ ಮಾಡಿಕೊಂಡಿರುವ ಟಾಟಾ ಸ್ಟೀಲ್‌, ಎಪಿಎಲ್‌ ಅಪೊಲೊ ಟ್ಯೂಬ್‌, ಜೆಎಸ್‌ಡಬ್ಲ್ಯು ಸ್ಟೀಲ್‌ ಕಂಪನಿಗಳ ಷೇರು ಮಿನುಗುತ್ತಿವೆ...

***

ವಿದೇಶಿ ಸಾಂಸ್ಥಿಕ ಹೂಡಿಕೆದಾರರು (FII) ಬಂಡವಾಳ ತೊಡಗಿಸುವುದನ್ನು ಮುಂದುವರಿಸಿದ ಪರಿಣಾಮ ಭಾರತೀಯ ಷೇರುಪೇಟೆಯು ಈ ವಾರವೂ ‘ಹಸಿರ ಹಾದಿ’ಯಲ್ಲೇ ಮುನ್ನಡೆಯಿತು. ಭಾರಿ ಕುಸಿತಕ್ಕೆ ಒಳಗಾಗಿದ್ದ ಲೋಹ ವಲಯವೂ ಈಗ ಚೇತರಿಸಿಕೊಂಡಿದ್ದು, ತನ್ನ ‘ತೂಕ’ವನ್ನು ಹೆಚ್ಚಿಸಿಕೊಳ್ಳುತ್ತಿದೆ.

ಕಳೆದ ವಾರದ ಐದು ದಿನಗಳ ವಹಿವಾಟಿನ ಅವಧಿಯಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಒಟ್ಟು ₹ 6,992 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿರುವುದು ಭಾರತೀಯ ಷೇರುಪೇಟೆಯಲ್ಲಿ ‘ಗೂಳಿ ಸವಾರ’ರ ಉತ್ಸಾಹವನ್ನು ಹೆಚ್ಚಿಸಿದೆ.

ಮುಂಬೈ ಷೇರು ವಿನಿಯಮ ಕೇಂದ್ರದ (BSE) ಪ್ರಧಾನ ಸೂಚ್ಯಂಕ ಎಸ್‌&ಪಿ ಸೆನ್ಸೆಕ್ಸ್‌ ಒಂದು ವಾರದಲ್ಲಿ ಶೇ 1.42 ಹಾಗೂ ಒಂದು ತಿಂಗಳಲ್ಲಿ ಶೇ 9.89ರಷ್ಟು ಏರಿಕೆ ಕಂಡಿದೆ. ಇದೇ ಅವಧಿಯಲ್ಲಿ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ (NSE) ‘ನಿಫ್ಟಿ–50’ ಸೂಚ್ಯಂಕವು ಕ್ರಮವಾಗಿ ಶೇ 1.39 ಹಾಗೂ ಶೇ 10.04ರಷ್ಟು ಮೌಲ್ಯವನ್ನು ಹೆಚ್ಚಿಸಿಕೊಂಡಿದೆ. ಲೋಹ ವಲಯದ ಸೂಚ್ಯಂಕಗಳು ಈ ಎರಡೂ ಪ್ರಧಾನ ಸೂಚ್ಯಂಕಗಳನ್ನು ಮೀರಿ ತೂಕವನ್ನು ಹೆಚ್ಚಿಸಿಕೊಳ್ಳುವಲ್ಲಿ ಯಶಸ್ವಿಯಾಗಿವೆ.

‘ಬಿಎಸ್‌ಇ ಮೆಟಲ್‌’ ಸೂಚ್ಯಂಕವು ಒಂದು ವಾರದಲ್ಲಿ ಶೇ 0.90 ಹಾಗೂ ಒಂದು ತಿಂಗಳಲ್ಲಿ ಶೇ 18.78 ಏರಿಕೆಯನ್ನು ಕಂಡಿದೆ. ‘ನಿಫ್ಟಿ ಮೆಟಲ್‌’ ಸೂಚ್ಯಂಕವು ಇದೇ ಅವಧಿಯಲ್ಲಿ ಕ್ರಮವಾಗಿ ಶೇ 2.01 ಹಾಗೂ ಶೇ 19.99ರಷ್ಟು ಮೌಲ್ಯವನ್ನು ವೃದ್ಧಿಸಿಕೊಂಡಿದೆ.

‘ಬಿಎಸ್‌ಇ ಮೆಟಲ್‌’ ಸೂಚ್ಯಂಕವು ಮೂರು ತಿಂಗಳಲ್ಲಿ ಶೇ 14, ಆರು ತಿಂಗಳಲ್ಲಿ ಶೇ 9.58 ಹಾಗೂ ಒಂದು ವರ್ಷದಲ್ಲಿ ಶೇ 13.65ರಷ್ಟು ಕುಸಿತವನ್ನು ಕಂಡಿದೆ. ‘ನಿಫ್ಟಿ ಮೆಟಲ್‌’ ಸೂಚ್ಯಂಕವು ಇದೇ ಅವಧಿಯಲ್ಲಿ ಕ್ರಮವಾಗಿ ಶೇ 9.69, ಶೇ 4.01 ಹಾಗೂ ಶೇ 4.09ರಷ್ಟು ಮೌಲ್ಯವನ್ನು ಮಾತ್ರ ಕಳೆದುಕೊಂಡಿದೆ. ಕಳೆದ ಎರಡು ವರ್ಷಗಳ ಅವಧಿಯನ್ನು ಅವಲೋಕಿಸಿದಾಗ ‘ಬಿಎಸ್‌ಇ ಮೆಟಲ್‌’ ಸೂಚ್ಯಂಕ ಶೇ 121.67 ಮತ್ತು ‘ನಿಫ್ಟಿ ಮೆಟಲ್‌’ ಸೂಚ್ಯಂಕವು ಶೇ 147.19ರಷ್ಟು ಮೌಲ್ಯವನ್ನು ಹೆಚ್ಚಿಸಿಕೊಂಡಿರುವುದು ಕಂಡುಬರುತ್ತದೆ.

ಕಳೆದ ಏಪ್ರಿಲ್‌ ತಿಂಗಳಲ್ಲಿ 52 ವಾರಗಳ ಗರಿಷ್ಠ ಮಟ್ಟಕ್ಕೆ ಏರಿದ್ದ ಲೋಹದ ವಲಯದ ಸೂಚ್ಯಂಕಗಳು, ಕ್ರಮೇಣ ಕುಸಿತದ ಹಾದಿಯನ್ನು ಹಿಡಿದಿದ್ದವು. ಜೂನ್‌ ತಿಂಗಳಲ್ಲಿ ಕನಿಷ್ಠ ಮಟ್ಟಕ್ಕೆ ಕುಸಿದಿದ್ದವು. ನಂತರ ನಿಧಾನಕ್ಕೆ ಚೇತರಿಸಿಕೊಳ್ಳತೊಡಗಿದವು. ಜುಲೈ ತಿಂಗಳ ಆರಂಭದಲ್ಲಿ ಪುಟಿದೆದ್ದ ಲೋಹದ ವಲಯಗಳು ಒಂದು ತಿಂಗಳಲ್ಲೇ ‘ತೂಕ’ವನ್ನು ಶೇ 18ಕ್ಕಿಂತಲೂ ಹೆಚ್ಚು ಮಾಡಿಕೊಂಡಿರುವುದು ಗಮನಾರ್ಹ ಸಂಗತಿ.

‘ಟಾಟಾ ಸ್ಟೀಲ್‌’ ಮೌಲ್ಯ ಶೇ 24ರಷ್ಟು ಹೆಚ್ಚಳ

ರಾಷ್ಟ್ರೀಯ ಷೇರುಪೇಟೆಯಲ್ಲಿ ಕಳೆದ ಒಂದು ತಿಂಗಳ ಅವಧಿಯನ್ನು ಗಮನಿಸಿದಾಗ ಲೋಹದ ವಲಯದಲ್ಲಿ ಮೌಲ್ಯ ಹೆಚ್ಚಿಸಿಕೊಂಡಿರುವ ಕಂಪನಿಗಳ ಪೈಕಿ ‘ಟಾಟಾ ಸ್ಟೀಲ್‌’ ಮುಂಚೂಣಿಯಲ್ಲಿದೆ. ಈ ಕಂಪನಿಯ ಷೇರಿನ ಬೆಲೆ ಒಂದು ವಾರದಲ್ಲಿ ಶೇ 0.23ರಷ್ಟು ಕುಸಿತ ಕಂಡಿದ್ದರೂ ಒಂದು ತಿಂಗಳಲ್ಲಿ ಶೇ 24.80ರಷ್ಟು ಮೌಲ್ಯ ವೃದ್ಧಿಸಿಕೊಂಡು ಮಿನುಗುತ್ತಿದೆ.

ಈ ಕಂಪನಿಯ ಷೇರು ಮೂರು ತಿಂಗಳಲ್ಲಿ ಶೇ 16.41, ಆರು ತಿಂಗಳಲ್ಲಿ ಶೇ 8.74 ಹಾಗೂ ಒಂದು ವರ್ಷದಲ್ಲಿ ಶೇ 25.79ರಷ್ಟು ಬೆಲೆ ಕುಸಿತವನ್ನು ಕಂಡಿದೆ. ಆದರೆ, ಎರಡು ವರ್ಷಗಳಲ್ಲಿ ಶೇ 171.22 ಹಾಗೂ ಮೂರು ವರ್ಷಗಳಲ್ಲಿ ಶೇ 168.85ರಷ್ಟು ಬೆಲೆ ಹೆಚ್ಚಾಗಿದೆ. 2021ರ ಆಗಸ್ಟ್‌ 16ರಂದು 52 ವಾರಗಳ ಗರಿಷ್ಠ ಮಟ್ಟವನ್ನು (₹ 153.45) ತಲುಪಿದ್ದ ಕಂಪನಿಯ ಷೇರಿನ ಬೆಲೆಯು ಕಳೆದ ಜೂನ್‌ 23ರಂದು 52 ವಾರಗಳ ಕನಿಷ್ಠ ಮಟ್ಟಕ್ಕೆ (₹82.70) ಕುಸಿದಿತ್ತು. ಆಗಸ್ಟ್‌ 5ರಂದು ₹107.35ಕ್ಕೆ ವಹಿವಾಟು ಅಂತ್ಯಗೊಳಿಸಿದ್ದು, 52 ವಾರಗಳ ಕನಿಷ್ಠ ಮಟ್ಟದಿಂದ ಶೇ 29.80ರಷ್ಟು ಏರಿಕೆ ಕಂಡಿದೆ.

‘ಎಪಿಎಲ್‌ ಅಪೊಲೊ ಟ್ಯೂಬ್‌’ನ ಷೇರಿನ ಬೆಲೆಯು ಒಂದು ವಾರದಲ್ಲಿ ಶೇ 7.73 ಹಾಗೂ ತಿಂಗಳಲ್ಲಿ ಶೇ 22.20ರಷ್ಟು ಹೆಚ್ಚಾಗಿದೆ. ಮೂರು ತಿಂಗಳಲ್ಲಿ ಶೇ 2.65, ಆರು ತಿಂಗಳಲ್ಲಿ ಶೇ 13.25, ಒಂದು ವರ್ಷದಲ್ಲಿ ಶೇ 20.54, ಎರಡು ವರ್ಷಗಳಲ್ಲಿ ಶೇ 409 ಹಾಗೂ ಮೂರು ವರ್ಷಗಳಲ್ಲಿ ಶೇ 661.26ರಷ್ಟು ವೃದ್ಧಿಯಾಗಿರುವುದು ಗಮನಾರ್ಹ ಸಂಗತಿಯಾಗಿದೆ.

2021ರ ಆಗಸ್ಟ್‌ 23ರಂದು 52 ವಾರಗಳ ಕನಿಷ್ಠ ಮಟ್ಟಕ್ಕೆ (₹741.43) ಕುಸಿದಿದ್ದ ಷೇರಿನ ಬೆಲೆಯು ಕಳೆದ ವರ್ಷದ ಡಿಸೆಂಬರ್‌ 16ರಂದು 52 ವಾರಗಳ ಗರಿಷ್ಠ ಮಟ್ಟವನ್ನು (₹ 1,114.55) ತಲುಪಿತ್ತು. ₹ 1,029.60ಕ್ಕೆ ವಾರಾಂತ್ಯದ ವಹಿವಾಟು ಅಂತ್ಯಗೊಳಿಸಿರುವ ಕಂಪನಿಯ ಷೇರು 52 ವಾರಗಳ ಕನಿಷ್ಠ ಮಟ್ಟದಿಂದ ಇದುವರೆಗೆ ಶೇ 38.86ರಷ್ಟು ಏರಿಕೆ ಕಂಡಿದೆ.

ಕಳೆದ ಒಂದು ತಿಂಗಳ ಅವಧಿಯನ್ನು ಅವಲೋಕಿಸಿದಾಗ ಜೆಎಸ್‌ಡಬ್ಲ್ಯು ಸ್ಟೀಲ್‌ (ಶೇ 20.72), ಅದಾನಿ ಎಂಟರ್‌ಪ್ರೈಸಸ್‌ (ಶೇ 20.12), ಹಿಂಡಾಲ್ಕೊ (ಶೇ 18.99), ಜಿಂದಾಲ್ ಸ್ಟೀಲ್‌ (ಶೇ 18.81), ವೇದಾಂತ (ಶೇ 16.68), ಕೋಲ್‌ ಇಂಡಿಯಾ (ಶೇ 14.25), ನ್ಯಾಲ್ಕೊ (ಶೇ 11.65) ಹಾಗೂ ಸೇಲ್‌ (ಶೇ 11.49) ಮೌಲ್ಯವನ್ನು ಹೆಚ್ಚಿಸಿಕೊಂಡಿರುವ ಲೋಹ ವಲಯದ ಪ್ರಮುಖ ಕಂಪನಿಗಳಾಗಿ ಹೊರಹೊಮ್ಮಿವೆ.

ಕೇಂದ್ರ ಸರ್ಕಾರವು ಕಳೆದ ಮೇ ತಿಂಗಳಿನಿಂದ ಸ್ಟೀಲ್‌ ಉತ್ಪನ್ನಗಳ ಮೇಲೆ ಶೇ 15ರಷ್ಟು ‘ರಫ್ತು ತೆರಿಗೆ’ಯನ್ನು ವಿಧಿಸಿತ್ತು. ಇದರಿಂದಾಗಿ ಲೋಹ ವಲಯದ ಕಂಪನಿಗಳ ಷೇರು ಮಾರಾಟದ ಒತ್ತಡಕ್ಕೆ ಸಿಲುಕಿದ್ದವು. ಉಕ್ಕಿನ ಉತ್ಪಾದನೆ ಹೆಚ್ಚಾಗಿದ್ದು, ದೇಶೀಯ ಮಾರುಕಟ್ಟೆಯಲ್ಲಿ ಸ್ಟೀಲ್‌ ಬೆಲೆ ತುಸು ಇಳಿಕೆಯಾಗಿರುವುದು ಕಂಡು ಬಂದಿದೆ. ಇದು ರಫ್ತು ತೆರಿಗೆ ವಿನಾಯಿತಿಗೆ ಅವಕಾಶ ಮಾಡಿಕೊಡಬಹುದು ಎಂಬ ನಿರೀಕ್ಷೆಯನ್ನು ಉದ್ಯಮಿಗಳಲ್ಲಿ ಹುಟ್ಟುಹಾಕಿದೆ. ರಫ್ತು ತೆರಿಗೆ ಮೇಲೆ ವಿನಾಯಿತಿ ಸಿಕ್ಕರೆ ಹೂಡಿಕೆದಾರರು ಲೋಹ ವಲಯದತ್ತ ಚಿತ್ತ ಹರಿಸಲಿದ್ದು, ಲೋಹದ ಕಂಪನಿಗಳ ಷೇರು ಇನ್ನಷ್ಟು ‘ತೂಕ’ವನ್ನು ಹೆಚ್ಚಿಸಿಕೊಳ್ಳುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT