ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ಹೊಳಪು ಹೆಚ್ಚಿಸಿಕೊಂಡ ‘ಹಳದಿ ಲೋಹ’

ಷೇರುಪೇಟೆಯಲ್ಲಿ ಶೇ 23 ಲಾಭಾಂಶ ತಂದುಕೊಟ್ಟ ‘ಗೋಲ್ಡ್‌ ಇಟಿಎಫ್‌’
Last Updated 6 ಡಿಸೆಂಬರ್ 2020, 12:43 IST
ಅಕ್ಷರ ಗಾತ್ರ
ADVERTISEMENT
""
""

ಕೋವಿಡ್‌ ಸಂಕಷ್ಟದಿಂದಾಗಿ ಷೇರುಪೇಟೆಯಲ್ಲಿ ಏರಿಳಿತವಾಗುತ್ತಿದ್ದರೂ ‘ಹಳದಿ ಲೋಹ’ವು ಹೂಡಿಕೆದಾರರಿಗೆ ಒಂದು ವರ್ಷದ ಅವಧಿಯಲ್ಲಿ ಶೇ 23ರಷ್ಟು ಲಾಭಾಂಶವನ್ನು ತಂದುಕೊಟ್ಟಿದೆ. ‘ಗೋಲ್ಡ್‌ ಇಟಿಎಫ್‌’ನಲ್ಲಿ ಬಂಡವಾಳ ತೊಡಗಿಸಿದರೂ ಒಳ್ಳೆಯ ಲಾಭ ಪಡೆದಿದ್ದಾರೆ. ಚಿನ್ನ ಹಾಗೂ ಗೋಲ್ಡ್‌ ಇಟಿಎಫ್‌ನಲ್ಲಾದ ಮೌಲ್ಯವರ್ಧನೆಯ ಒಳನೋಟ ಇಲ್ಲಿದೆ...

***

ಬದುಕಿನ ಸಂಕಷ್ಟ ಕಾಲಕ್ಕೆ ಆಸರೆಯಾಗಲಿದೆ ಎಂಬುದನ್ನು ‘ಹಳದಿ ಲೋಹ’ ಎಂದೇ ಖ್ಯಾತಿ ಪಡೆದಿರುವ ಚಿನ್ನ ಮತ್ತೆ ಸಾಬೀತುಪಡಿಸಿದೆ. ಇಡೀ ಜಗತ್ತು ಕೋವಿಡ್‌ ರೋಗದಿಂದ ತತ್ತರಿಸಿ, ಆರ್ಥಿಕತೆ ಕುಸಿದಿದ್ದರೂ ‘ಹಳದಿ ಲೋಹ’ ಮಾತ್ರ ತನ್ನ ‘ತೂಕ’ವನ್ನು ಹೆಚ್ಚಿಸಿಕೊಂಡು ಹೊಳೆಯುತ್ತಿದೆ.

ಒಂದು ವರ್ಷದ ಅವಧಿಯಲ್ಲಿ ಚಿನ್ನದ ಬೆಲೆ ಶೇ 23ರಷ್ಟು ಹೆಚ್ಚಾಗಿದೆ. ಷೇರುಪೇಟೆಯಲ್ಲಿ ‘ಗೋಲ್ಡ್‌ ಇಟಿಎಫ್‌’ನಲ್ಲಿ ಹೂಡಿಕೆ ಮಾಡಿದವರಿಗೆ ಶೇ 23ರಿಂದ ಶೇ 32ರವರೆಗೆ ಲಾಭಾಂಶವನ್ನು ತಂದುಕೊಡುವ ಮೂಲಕ ‘ಹಳದಿ ಲೋಹ’ವು ಸಂಕಷ್ಟ ಕಾಲದಲ್ಲಿ ಕೈಹಿಡಿದೆ.

2019ರ ಡಿಸೆಂಬರ್‌ 1ರಂದು ‘24 ಕ್ಯಾರೆಟ್‌’ನ 10 ಗ್ರಾಂ ಚಿನ್ನದ ಬೆಲೆಯು ₹ 39,190 ಇತ್ತು. 2020ರ ನವೆಂಬರ್‌ 30ಕ್ಕೆ ಇದರ ಬೆಲೆಯು ₹ 48,240ಕ್ಕೆ ತಲುಪಿದೆ. ಒಂದು ವರ್ಷದಲ್ಲಿ ‘ಅಪರಂಜಿ ಚಿನ್ನ’ವು ತನ್ನ ಬೆಲೆಯನ್ನು ₹ 9,050 (ಶೇ 23.09) ಹೆಚ್ಚಿಸಿಕೊಂಡಿದೆ. ಇದೇ ಅವಧಿಯಲ್ಲಿ ‘22 ಕ್ಯಾರೆಟ್‌’ನ ಚಿನ್ನದ ಬೆಲೆಯು ₹ 37,320ರಿಂದ ₹ 47,240ಕ್ಕೆ ಜಿಗಿದಿದೆ. ಒಂದು ವರ್ಷದಲ್ಲಿ ₹ 9,920 (ಶೇ 26.58) ಮೌಲ್ಯ ಹೆಚ್ಚಾಗಿದೆ.

ಜಗತ್ತಿನ ವಿವಿಧೆಡೆ ಕೋವಿಡ್‌ ವ್ಯಾಪಕವಾಗಿ ಹರಡಲು ಆರಂಭಿಸಿದ್ದ 2020ರ ಜನವರಿಯಿಂದ ಆರ್ಥಿಕತೆಯ ಮೇಲೆ ಕಾರ್ಮೋಡ ಕವಿಯತೊಡಗಿತ್ತು. ಮಾರ್ಚ್‌ ಅಂತ್ಯದಲ್ಲಿ ಭಾರತದಲ್ಲೂ ಲಾಕ್‌ಡೌನ್‌ ಜಾರಿಗೊಳಿಸಿದ್ದರಿಂದ ಷೇರುಪೇಟೆ ನೆಲಕಚ್ಚಿತ್ತು. ಆತಂಕಗೊಂಡ ಹೂಡಿಕೆದಾರರ ಚಿತ್ತ ‘ಹಳದಿ ಲೋಹ’ದ ಕಡೆಗೆ ಹರಿದಿತ್ತು. ಕ್ರಮೇಣ ಚಿನ್ನದ ಬೆಲೆ ಏರಿಕೆಯಾಗುತ್ತ ಆಗಸ್ಟ್‌ 7ರಂದು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿತ್ತು. ಅಂದು ಪೇಟೆಯಲ್ಲಿ 24 ಕ್ಯಾರೆಟ್‌ ಚಿನ್ನ ₹ 55,500 ಹಾಗೂ 22 ಕ್ಯಾರೆಟ್‌ ಚಿನ್ನ ₹ 54,500 ದರದಲ್ಲಿ ಮಾರಾಟವಾಗಿತ್ತು.

ಮುಂಬೈ ಪೇಟೆಯಲ್ಲಿ ಚಿನ್ನದ ಬೆಲೆಯ ಏರಿಳಿತ

ತಗ್ಗಿದ ಬೇಡಿಕೆ: ಲಾಕ್‌ಡೌನ್‌ ಸಡಿಲಗೊಂಡು ದೇಶದ ಆರ್ಥಿಕತೆ ಚೇತರಿಕೆಯ ಹಾದಿ ಹಿಡಿಯುತ್ತಿದ್ದಂತೆ ಹೂಡಿಕೆದಾರರು ಮತ್ತೆ ಷೇರುಪೇಟೆಯತ್ತ ಮುಖಮಾಡಿದರು. ಇದರಿಂದಾಗಿ ಚಿನ್ನದ ಮೇಲಿನ ಬೇಡಿಕೆ ಕುಸಿಯತೊಡಗಿತು. ಅಪರಂಜಿ ಚಿನ್ನದ ಬೆಲೆಯು ಜೂನ್‌ ತಿಂಗಳಲ್ಲಿ ಶೇ 2.72 ಹಾಗೂ ಜುಲೈನಲ್ಲಿ ಶೇ 8.74ರಷ್ಟು ಹೆಚ್ಚಾಗಿತ್ತು. ಆದರೆ, ಆ ಬಳಿಕ ಚಿನ್ನದ ಬೆಲೆ ಇಳಿಮುಖ ಕಾಣತೊಡಗಿತ್ತು. ಚಿನ್ನದ ಬೆಲೆಯು ಆಗಸ್ಟ್‌ನಲ್ಲಿ ಶೇ –3.74 ಹಾಗೂ ಸೆಪ್ಟೆಂಬರ್‌ನಲ್ಲಿ ಶೇ –3.48ರಷ್ಟು ಇಳಿಕೆ ಕಂಡಿತ್ತು. ಅಕ್ಟೋಬರ್‌ನಲ್ಲಿ ಶೇ 2.10ರಷ್ಟು ಏರಿಕೆ ಕಂಡಿತ್ತಾದರೂ ನವೆಂಬರ್‌ನಲ್ಲಿ ಮತ್ತೆ ಶೇ –5.34ರಷ್ಟು ಬೆಲೆ ಕುಸಿದಿದೆ. ಇದರಿಂದಾಗಿ ಕಳೆದ ಆರು ತಿಂಗಳ ಅವಧಿಯಲ್ಲಿ ಅಪರಂಜಿ ಚಿನ್ನದ ಬೆಲೆಯು ಕೇವಲ ಶೇ 2.48ರಷ್ಟು ಏರಿಕೆಯಾಗಿದೆ.

ಕೈಹಿಡಿದ ಗೋಲ್ಡ್‌ ಇಟಿಎಫ್‌: ಮಾರುಕಟ್ಟೆಯಲ್ಲಿ ನೇರವಾಗಿ ಚಿನ್ನವನ್ನು ಖರೀದಿಸುವ ಬದಲು ಡಿಮ್ಯಾಟ್‌ ಅಕೌಂಟ್‌ ಹೊಂದಿರುವವರು ಅಷ್ಟೇ ಮೌಲ್ಯದ ಚಿನ್ನವನ್ನು ಷೇರುಪೇಟೆಯಲ್ಲಿ ‘ಗೋಲ್ಡ್‌ ಎಕ್ಸ್‌ಚೇಂಜ್‌ ಟ್ರೇಡೆಡ್‌ ಫಂಡ್‌’ (ಇಟಿಎಫ್‌) ಮೂಲಕ ಎಲೆಕ್ಟ್ರಾನಿಕ್‌ ಮಾದರಿಯಲ್ಲಿ ಖರೀದಿಸಬಹುದಾಗಿದೆ. ಗೋಲ್ಡ್‌ ಇಟಿಎಫ್‌ನ ಒಂದು ಯುನಿಟ್‌ ಶೇ 99.5ರಷ್ಟು ಪರಿಶುದ್ಧವಾದ 1 ಗ್ರಾಂ ಚಿನ್ನಕ್ಕೆ ಸರಿಸಮಾನವಾಗಿದೆ. ಇತ್ತೀಚಿನ ದಿನಗಳಲ್ಲಿ ನೇರವಾಗಿ ಚಿನ್ನವನ್ನು ಖರೀದಿಸುವುದರ ಬದಲು ಷೇರುಪೇಟೆಯಲ್ಲಿ ಗೋಲ್ಡ್‌ ಇಟಿಎಫ್‌ ಮೇಲೆ ಹೂಡಿಕೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ.

ಭಾರತದಲ್ಲಿ ಗೋಲ್ಡ್‌ ಇಟಿಎಫ್‌ ಮೇಲೆ 2019ರ ಸೆಪ್ಟೆಂಬರ್‌ನಲ್ಲಿ ₹ 5,652 ಕೋಟಿ ಹೂಡಿಕೆಯಾಗಿತ್ತು. 2020ರ ಅಕ್ಟೋಬರ್‌ ಅಂತ್ಯಕ್ಕೆ ಗೋಲ್ಡ್‌ ಇಟಿಎಫ್‌ ಮೇಲಿನ ಹೂಡಿಕೆ ಪ್ರಮಾಣವು ₹ 13,969 ಕೋಟಿಗೆ ತಲುಪುವುದರೊಂದಿಗೆ ಶೇ 147.15ರಷ್ಟು ಹೆಚ್ಚಾಗಿದೆ.

ಚಿನ್ನದ ಬೆಲೆ ಏರಿಕೆ ಕಂಡಿರುವುದರ ಜೊತೆಯಲ್ಲೇ ಗೋಲ್ಡ್‌ ಇಟಿಎಫ್‌ ಸಹ ತನ್ನ ಮೌಲ್ಯವನ್ನು ಹೆಚ್ಚಿಸಿಕೊಂಡಿದೆ. ಕಳೆದ ಒಂದು ವರ್ಷದಿಂದ ಷೇರುಪೇಟೆ ಭಾರಿ ಏರಿಳಿತ ಕಾಣುತ್ತಿದೆ. ಇದರ ನಡುವೆಯೂ ಷೇರುಪೇಟೆಯಲ್ಲಿ ಅತಿ ಹೆಚ್ಚು ಬಂಡವಾಳ ಹೊಂದಿರುವ (ಮಾರ್ಕೆಟ್‌ ಕ್ಯಾಪಿಟಲೈಸೇಷನ್‌) ಐದು ಪ್ರಮುಖ ಗೋಲ್ಡ್‌ ಇಟಿಎಫ್‌ಗಳನ್ನು ಅವಲೋಕಿಸಿದಾಗ ಒಂದು ವರ್ಷದಲ್ಲಿ ಶೇ 23ರಿಂದ ಶೇ 32ರವರೆಗೆ ಲಾಭಾಂಶವನ್ನು ಹೂಡಿಕೆದಾರರಿಗೆ ತಂದುಕೊಟ್ಟಿರುವುದನ್ನು ಕಾಣಹುದಾಗಿದೆ. ಯುಟಿಐ ಗೋಲ್ಡ್‌ ಇಟಿಎಫ್‌ ಶೇ 32.73; ಬಿರ್ಲಾ ಸನ್‌ ಲೈಫ್‌ ಗೋಲ್ಡ್‌ ಇಟಿಎಫ್‌ ಶೇ 29.95; ಎಸ್‌.ಬಿ.ಐ ಗೋಲ್ಡ್‌ ಇಟಿಎಫ್‌ ಶೇ 29.03; ಐಡಿಬಿಐ ಗೋಲ್ಡ್‌ ಇಟಿಎಫ್‌ ಶೇ 28.98 ಹಾಗೂ ಎಚ್‌ಡಿಎಫ್‌ಸಿ ಗೋಲ್ಡ್‌ ಇಟಿಎಫ್‌ ಶೇ 23.62ರಷ್ಟು ಲಾಭಾಂಶವನ್ನು ತಂದುಕೊಟ್ಟಿದೆ.

ಷೇರುಪೇಟೆಯಲ್ಲಿ ಗೋಲ್ಡ್‌ ಇಟಿಎಫ್‌ಗಳ ಮೌಲ್ಯವರ್ಧನೆ

ಅಮೆರಿಕ ಅಧ್ಯಕ್ಷ ಚುನಾವಣೆ ಫಲಿತಾಂಶ ಬಂದಮೇಲೆ ಹಾಗೂ ಕೋವಿಡ್‌ಗೆ ಲಸಿಕೆ ಕಂಡುಹಿಡಿಯಲಾಗಿದೆ ಎಂಬ ಸುದ್ದಿಯ ಬಳಿಕ ಹೂಡಿಕೆದಾರರು ಮತ್ತೆ ಇಕ್ವಿಟಿ ಷೇರುಗಳ ಖರೀದಿಗೆ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಇದರಿಂದಾಗಿ ಆಗಸ್ಟ್‌ ಬಳಿಕ ಚಿನ್ನದ ಬೆಲೆಯ ಇಳಿಕೆಯ ಜೊತೆಗೆ ಗೋಲ್ಡ್‌ ಇಟಿಎಫ್‌ಗಳ ಮೌಲ್ಯವೂ ತುಸು ಕುಸಿದಿದೆ. ಇದರಿಂದಾಗಿ ಕಳೆದ ಆರು ತಿಂಗಳ ಅವಧಿಯಲ್ಲಿ ಎಸ್‌ಬಿಐ ಗೋಲ್ಡ್‌ (ಶೇ 5.61), ಬಿರ್ಲಾ ಸನ್‌ ಲೈಫ್‌ ಗೋಲ್ಡ್‌ (ಶೇ 5.25), ಯುಟಿಐ ಗೋಲ್ಡ್‌ (ಶೇ 5.08) ಹಾಗೂ ಎಚ್‌ಡಿಎಫ್‌ಸಿ ಗೊಲ್ಡ್‌ (ಶೇ 4.63) ಕಂಪನಿಗಳ ಇಟಿಎಫ್‌ನ ಮೌಲ್ಯ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ. ಆದರೆ, ಐಡಿಬಿಐ ಗೋಲ್ಡ್‌ ಇಟಿಎಫ್‌ನ ಬೆಲೆ (ಶೇ –7.47) ಈ ಅವಧಿಯಲ್ಲಿ ಕುಸಿತ ಕಂಡಿದೆ.

ಕಳೆದ ವರ್ಷ 690 ಟನ್‌ ಚಿನ್ನಕ್ಕೆ ಬೇಡಿಕೆ: ಭಾರತದಲ್ಲಿ ಒಟ್ಟು 25,000 ಟನ್‌ ಚಿನ್ನದ ದಾಸ್ತಾನು ಇದೆ. 2019ನೇ ಸಾಲಿನಲ್ಲಿ ಭಾರತವು ₹ 2.3 ಲಕ್ಷ ಕೋಟಿ ಮೌಲ್ಯದ ಚಿನ್ನವನ್ನು ಆಮದು ಮಾಡಿಕೊಂಡಿದೆ. ದೇಶದ ವಿವಿಧ ಭಾಗಗಳಿಂದ 690 ಟನ್‌ ಚಿನ್ನದ ಬೇಡಿಕೆ ಇತ್ತು ಎಂದು ವಿಶ್ವ ಚಿನ್ನ ಸಮಿತಿ ಅಂದಾಜು ಮಾಡಿದೆ.

ರಾಷ್ಟ್ರೀಯ ಮಾದರಿ ಸರ್ವೆ ಸಂಸ್ಥೆಯ ಪ್ರಕಾರ, ನಗರ ಪ್ರದೇಶದ ಪ್ರತಿ ಕುಟುಂಬವು ತಿಂಗಳಿಗೆ ಸರಾಸರಿ ₹ 494 ಹಾಗೂ ಗ್ರಾಮೀಣ ಪ್ರದೇಶದ ಕುಟುಂಬವು ₹ 233 ಅನ್ನು ಚಿನ್ನ ಹಾಗೂ ಒಡವೆಗಳಿಗೆ ವೆಚ್ಚಮಾಡುತ್ತಿದೆ. ಇದು ಗೃಹೋಪಯೋಗಿ ವಸ್ತುಗಳನ್ನು ಖರೀದಿಸುವ ಪ್ರಮಾಣದ ಶೇ 23ರಷ್ಟಾಗಲಿದೆ.

ಹಬ್ಬ ಹಾಗೂ ಮದುವೆ ಸೀಸನ್‌ನಲ್ಲಿ ಚಿನ್ನದ ಒಡವೆಗಳನ್ನು ಖರೀದಿಸುವ ಪ್ರಮಾಣ ಹೆಚ್ಚುತ್ತದೆ. ವರ್ಷದ ಒಟ್ಟು ವಹಿವಾಟಿನಲ್ಲಿ ಶೇ 20ರಷ್ಟು ಚಿನ್ನಾಭರಣದ ವಹಿವಾಟು ದೀಪಾವಳಿ ಸಂದರ್ಭದಲ್ಲೇ ನಡೆಯುತ್ತದೆ. ಕೋವಿಡ್‌ ಪ್ರಮಾಣ ತುಸು ಕಡಿಮೆಯಾಗುತ್ತಿದ್ದು, ಮದುವೆಯಂತಹ ಶುಭ ಕಾರ್ಯಗಳು ಮತ್ತೆ ನಡೆಯಲು ಶುರುವಾಗಿದೆ. ಹೀಗಾಗಿ ಮತ್ತೆ ‘ಹಳದಿ ಲೋಹ’ದ ಬೇಡಿಕೆ ಹೆಚ್ಚಾಗುವ ನಿರೀಕ್ಷೆ ಇದೆ.

ಬೆಲೆ ಏರಿಕೆಯನ್ನು ನಿಯಂತ್ರಿಸುವಲ್ಲಿ ಚಿನ್ನ ಪ್ರಮುಖ ಪಾತ್ರ ವಹಿಸುತ್ತಿದೆ. ದೀರ್ಘಕಾಲಿಕ ಹೂಡಿಕೆಗೆ ಒಳ್ಳೆಯ ಲಾಭಾಂಶವನ್ನೂ ನೀಡುತ್ತಿರುವುದರಿಂದ ಇಂದು ಹೂಡಿಕೆದಾರರ ‘ಪೋರ್ಟ್‌ಫೋಲಿಯೊ’ದಲ್ಲಿ ‘ಹಳದಿ ಲೋಹ’ವೂ ಪ್ರಮುಖ ಸ್ಥಾನ ಪಡೆದುಕೊಳ್ಳುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT