ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್‌ ಹೂಡಿಕೆ ಆಕರ್ಷಣೆಗೆ ಕ್ರೌಡ್‌ ಫಂಡ್‌

Last Updated 17 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ಕ್ರೌಡ್ ಫಂಡಿಂಗ್‌... ಬಾಲಿವುಡ್‌ನ ‘3 ಈಡಿಯಟ್ಸ್’ ಚಲನಚಿತ್ರದ ಪಾತ್ರ ಪುನ್ಸುಕ್ ವಾಂಗ್ಡು ನೆನಪಿದೆಯಾ? ಈ ಪಾತ್ರ ವಾಸ್ತವಿಕವಾಗಿ ಯಶಸ್ವಿ ಉದ್ಯಮಿ ಸೋನಂ ವಾಂಗ್‌ಚುಕ್ ಅವರ ನಿಜ ಜೀವನದ ಕಥೆ!

ಸೋನಂ ವಾಂಗ್‌ಚುಕ್ ತಮ್ಮ ಉದ್ಯಮಕ್ಕೆ ಕ್ರೌಡ್ ಫಂಡ್ (ಜನ ಸಮೂಹದಿಂದ ಬಂಡವಾಳ ಸಂಗ್ರಹ) ಮೂಲಕ 1.20 ಲಕ್ಷ ಡಾಲರ್ (ಈಗಿನ ವಿದೇಶಿ ವಿನಿಮಯ ಲೆಕ್ಕದಲ್ಲಿರೂ74 ಲಕ್ಷ) ಹೂಡಿಕೆ ಗಳಿಸುವಲ್ಲಿ ಸಫಲರಾದವರು.

ಕ್ರೌಡ್ ಫಂಡ್?
ಹಣಕಾಸು ಕ್ಷೇತ್ರದಲ್ಲಿ ಕ್ರೌಂಡ್ ಫಂಡ್ ಎಂಬುದು ಒಂದು ಹೊಸ ಅನ್ವೇಷಣೆ. ಕ್ರೌಡ್ ಫಂಡಿಂಗನ್ನು ಇ-ಹೂಡಿಕೆ ಎಂದೂ ಕರೆಯಬಹುದು. ಏಕೆಂದರೆ ಆನ್‌ಲೈನ್ ಮೂಲಕವೇ ಕ್ರೌಡ್‌ಫಂಡ್‌ನಲ್ಲಿ ಹಣವನ್ನು ಹೂಡಿಕೆ ಮಾಡಲಾಗುತ್ತದೆ.

ಕ್ರೌಡ್ ಫಂಡ್‌ಗೆ ಸಣ್ಣ ಸಣ್ಣ ಮೊತ್ತವನ್ನು ಅನೇಕ ಹೂಡಿಕೆದಾರರಿಂದ ಸಂಗ್ರಹಿಸಲಾಗುತ್ತದೆ. ಸಮಾಜ ಸೇವಾ ಕಾರ್ಯಗಳಿಗೆ ದಾನಿಗಳಿಂದ ಹಣ ಸಂಗ್ರಹಿಸಲು ಇಂಟರ್‌ ನೆಟ್‌ನಲ್ಲಿ ಕ್ರೌಡ್ ಫಂಡ್ ಚಟುವಟಿಕೆ ಆರಂಭವಾಯಿತು. ಕ್ರೌಡ್ ಫಂಡ್‌ ಪ್ರಕ್ರಿಯೆಯನ್ನು ಜನಪ್ರಿಯಗೊಳಿಸಿದ್ದು ಸ್ವಯಂ ಸೇವಾ ಸಂಸ್ಥೆಗಳು.

ಚಲನಚಿತ್ರ, ಕಲೆ, ಸಂಗೀತ, ಪುಸ್ತಕಗಳ ಮುದ್ರಣ ಮತ್ತು ಮಾರಾಟ ಎಂಬ ಮಾರುಕಟ್ಟೆ ಚಟುವಟಿಕೆಗಳಿಗೆ ಅಗತ್ಯವಾದ ಬಂಡವಾಳದ ಸಂಗ್ರಹಣೆಗೂ ಕ್ರೌಡ್ ಫಂಡ್ ಬಳಕೆ ಆಯಿತು. ನಂತರ ಸಣ್ಣ ಉದ್ಯಮಿಗಳು  ಸಹ ಕ್ರೌಡ್ ಫಂಡ್ ಮೂಲಕ ಹೂಡಿಕೆ ಸಂಗ್ರಹಿಸಲಾರಂಭಿಸಿದರು.

ಭಾರತದಲ್ಲಿ ಕ್ರೌಡ್ ಫಂಡ್
ಸಮಾಜ ಸೇವೆಗೆ ದಾನಿಗಳಿಂದ ಹಣ ಸಂಗ್ರಹಿಸುವುದು ಮತ್ತು ಚಲನಚಿತ್ರ ಸಂಗೀತ, ಕಲೆ ಮೊದಲಾದ ಸೃಜನಶೀಲ ಚಟುವಟಿಕೆಗಳಿಗೂ ಅಗತ್ಯವಾದ ಹಣವನ್ನು ಸಂಗ್ರಹಿಸುವುದಕ್ಕೆ ಕ್ರೌಡ್‌ ಫಂಡ್‌ ಕ್ರಮ ಸೀಮಿತವಾಗಿದೆ.  ಕನ್ನಡದಲ್ಲಿಯೂ ಒಂದು ಚಲನಚಿತ್ರದ  (ಲೂಸಿಯಾ) ನಿರ್ಮಾಣಕ್ಕೆ ಕ್ರೌಂಡ್‌ ಫಂಡ್‌ ಮಾರ್ಗವನ್ನು ಅನುಸರಿಸಿದ ಅಪರೂಪದ ಉದಾಹರಣೆ ಇದೆ.

ಉದ್ಯಮಗಳು, ತಮ್ಮ ವಾಣಿಜ್ಯೋದ್ಯಮ  ಚಟುವಟಿಕೆಗಳಿಗೆ, ವಹಿವಾಟು ವಿಸ್ತರಣೆಗೆ ಅಗತ್ಯವಾದ ಬಂಡವಾಳವನ್ನು ಹೂಡಿಕೆದಾರರಿಂದ  ಸಂಗ್ರಹಿಸುವುದಕ್ಕಾಗಿ ಕ್ರೌಡ್ ಫಂಡ್  ಕ್ರಮ ಭಾರತದಲ್ಲಿ ಅಷ್ಟೇನೂ ಜನಪ್ರಿಯವಾಗಿಲ್ಲ. ಆದರೆ ಅಮೆರಿಕ ಮತ್ತು ಯೂರೋಪ್‌ನಲ್ಲಿ ಉದ್ಯಮಿಗಳಿಗೆ ಹೂಡಿಕೆ ಆಕರ್ಷಿಸಲು ಕ್ರೌಡ್ ಫಂಡ್ ಒಂದು ಶಕ್ತಿಶಾಲಿಯಾದಂತಹ ವೇದಿಕೆಯಾಗಿದೆ.

ಕ್ರೌಡ್ ಫಂಡ್ ವೇದಿಕೆ
ಕ್ರೌಡ್ ಫಂಡ್ ವೇದಿಕೆಗಳು ಉದ್ಯಮಿಗಳಿಗೆ ಅಗತ್ಯ ಪ್ರಮಾಣದಲ್ಲಿ ಹೂಡಿಕೆ ಸಂಗ್ರಹಿಸಲು ಸಹಕರಿಸುತ್ತವೆ. ಭಾರತದಲ್ಲಿಯೂ ಸಹ ಕೆಲವು ಕ್ರೌಡ್ ಫಂಡ್ ವೇದಿಕೆಗಳು ಅಸ್ತಿತ್ವದಲ್ಲಿವೆ.
ಕಟಪೂಲ್ಟ್, ವಿಷ್‌ಬೇರಿ, ಮಿಲಾಪ್, ಫಂಡ್ ಮೈ ಪಿಚ್, ಲೆಟ್ಸ್ ವೆಂಚರ್ ಮತ್ತು ಸ್ಟಾರ್ಟ್ ೫೧ ಮೊದಲಾದವು ಪ್ರಮುಖವಾದ ಕ್ರೌಡ್ ಫಂಡ್ ವೇದಿಕೆಗಳು.

ಈ ಕ್ರೌಡ್ ಫಂಡ್ ವೇದಿಕೆಗಳು ಆನ್‌ಲೈನ್ ಮುಖಾಂತರವೇ ಹೂಡಿಕೆಯನ್ನು ಸಂಗ್ರಹಿಸುತ್ತವೆ. ಹೀಗೆ ಸಂಗ್ರಹಿಸಿದ ಹಣವನ್ನು ಉದ್ಯಮಿಗಳಿಗೆ ನೀಡಲಾಗುತ್ತದೆ.

ಏಂಜಲ್‌ ಲಿಸ್ಟ್ ಎಂಬ ಕ್ರೌಡ್ ಫಂಡ್ ವೇದಿಕೆ ಪ್ರಪಂಚಾದ್ಯಂತ 1,300 ಉದ್ಯಮಗಳಿಗೆ 20 ಕೋಟಿ ಡಾಲರ್ (ಸುಮಾರುರೂ1230 ಕೋಟಿ) ಬಂಡವಾಳ ಸಂಗ್ರಹಿಸಿಕೊಡುವಲ್ಲಿ ಯಶಸ್ವಿಯಾಗಿದೆ. ಆದರೆ ಭಾರತದಲ್ಲಿ ದಾನ ಹಾಗೂ ಅನುದಾನ ಮಾತ್ರ ಸಂಗ್ರಹಿಸುವಲ್ಲಿ ಕ್ರೌಡ್ ಫಂಡ್ ಯಶಸ್ವಿಯಾಗಿದೆ.

ಉಳಿದಂತೆ ಸೃಜನಶೀಲ ಚಟುವಟಿಕೆಗಳ ವಿಭಾಗದಲ್ಲಿ ಅಪರೂಪಕ್ಕೆ ಇದರ ಮಾಯೆ ಗೋಚರಿಸುತ್ತದೆ.
ಭಾರತದಲ್ಲಿ ಕ್ರೌಡ್ ಫಂಡ್ ಮೂಲಕ ಬಂಡವಾಳ ಸಂಗ್ರಹಿಸುವ ಚಟುವಟಿಕೆ ಇನ್ನೂ ಆರಂಭಿಕ ಹಂತದಲ್ಲಿಯೇ ಇದೆ ಎಂದೇ ಹೇಳಬಹುದು.

ಲೆಟ್ಸ್ ವೆಂಚರ್ ವೇದಿಕೆ ಉದ್ಯಮಗಳಿಗೆ ಬಂಡವಾಳ ಸಂಗ್ರಹಿಸಲು ಕಳೆದ ವರ್ಷವಷ್ಟೇ ಕಾರ್ಯಾರಂಭ ಮಾಡಿದೆ. ಸೆನ್ಸ್ ಜಿಸ್ ಮತ್ತು ಕಾನೋವೆಟ್ ಟೆಕ್ನಾಲಿಜಿಸ್ ಕಂಪನಿಗಳು ಕ್ರೌಡ್ ಫಂಡ್ ಮೂಲಕ ಬಂಡವಾಳ ಸಂಗ್ರಹಿಸಿವೆ.

ಬಳ್ಳಿಗಾವಿಯ ಸೆನ್ಸ್‌ಜಿಸ್ ಕಂಪೆನಿ, ಕ್ರೌಡ್ ಫಂಡ್ ಮೂಲಕವೇ 47,440 ಡಾಲರ್ (₨29.18 ಲಕ್ಷ) ಬಂಡವಾಳ ಸಂಗ್ರಹಿಸಿದೆ. ಸೆನ್ಸ್‌ಜಿಸ್ ಕಿಕ್‌ಸ್ಟಾರ್ಟರ್ ವೇದಿಕೆ ಮೂಲಕ ಈ ನಿಧಿಯನ್ನು ಸಂಗ್ರಹಿಸಲು ಸಹಕಾರವಾಯಿತು. ಸೆನ್ಸ್‌ಜಿಸ್ ಕಂಪೆನಿ ಸ್ಟಾರ್ ಮತ್ತು ಫೈಂಡ್ ಎಂಬ ಉಪಕರಣವನ್ನು ಮಾರಾಟ ಮಾಡುತ್ತದೆ.

ಕ್ರೌಡ್ ಫಂಡ್ ಮೇಲೂ ನಿಯಂತ್ರಣ
ಕ್ರೌಡ್ ಫಂಡ್ ಮಾದರಿ ಭಾರತದಲ್ಲಿ ಸಮಾಜ ಸೇವಾ ಚಟುವಟಿಕೆಗಳಿಗೆ ಸೀಮಿತವಾಗಿದ್ದರೂ, ಇತ್ತೀಚಿನ ದಿನಗಳಲ್ಲಿ ಸಣ್ಣ ಉದ್ಯಮಿಗಳು, ಹೊಸದಾಗಿ ಉದ್ಯಮ ಆರಂಭಿಸಲು ಬಯಸುವವರು ಅಗತ್ಯವಾದ ಬಂಡವಾಳವನ್ನು ಸಂಗ್ರಹಿಸಲು ಇದೇ ಮಾರ್ಗವನ್ನು ಅನುಸರಿಸುತ್ತಿದ್ದಾರೆ. ಹೆಚ್ಚು ಶ್ರಮವಿಲ್ಲದ ಹಾಗೂ ವಿಶ್ವಾಸಾರ್ಹ ಎನಿಸಿಕೊಂಡಿರುವುದರಿಂ ಈ ಕ್ರೌಂಡ್‌ ಫಂಡ್‌ ಚಟುವಟಿಕೆಯನ್ನೂ ಅವಲಂಬಿಸಿದ್ದಾರೆ.

ಆನ್‌ಲೈನ್ ಮೂಲಕ ಹೂಡಿಕೆದಾರರನ್ನು ಆಕರ್ಷಿಸುವುದು ಸುಲಭ ಸಂಗತಿ. ಆರಂಭಿಕ ಹಂತದಲ್ಲಿರುವ ಉದ್ಯಮಗಳಿಗೆ ಕ್ರೌಡ್ ಫಂಡ್ ಮೂಲಕ ಬಂಡವಾಳ ಸಂಗ್ರಹಿಸುವುದು ಜನಪ್ರಿಯವಾಗುತ್ತಿದೆ. ಕ್ರೌಡ್ ಫಂಡ್‌ಗೆ ಯಾವುದೇ ಸರ್ಕಾರಿ ನಿಯಂತ್ರಣ ಇಲ್ಲ. ಲೈಸೆನ್ಸ್, ನಿಯಮಗಳು ಮತ್ತು ನಿಯಂತ್ರಣ ಇಲ್ಲ. ಬಂಡವಾಳಕ್ಕೆ ಮತ್ತು ಹೂಡಿಕೆದಾರರಿಗೆ ಹೊಣೆಗಾರಿಕೆ ಇಲ್ಲ. ಆನ್‌ಲೈನ್ ಮೂಲಕ ಬಂಡವಾಳ ಸಂಗ್ರಹಿಸುವ ಖರ್ಚು ಅತೀ ಕಡಿಮೆ. ಆದ್ದರಿಂದ ಈ ಕ್ಷೇತ್ರದಲ್ಲಿ ಹೂಡಿಕೆದಾರರು ವಂಚನೆ ಒಳಗಾಗುವುದು ಸುಲಭ.

ಆದ ಕಾರಣ ಕ್ರೌಡ್ ಫಂಡ್ ಕ್ಷೇತ್ರವನ್ನು ನಿಯಂತ್ರಿಸಲು ಸೆಕ್ಯುರಿಟೀಸ್ ಅಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI ಸೆಬಿ) ಮುಂದಾಗಿದೆ. ಕ್ರೌಡ್ ಫಂಡ್ ಚಟುವಟಿಕೆಗಳನ್ನು ನಿಯಂತ್ರಿಸಲು ಮಾರ್ಗಸೂಚಿಯನ್ನೂ ಸೆಬಿ ಪ್ರಕಟಿಸಿದೆ.

ಸೆಬಿ ೨೦೧೪ರಲ್ಲಿ ಭಾರತದಲ್ಲಿ ಕ್ರೌಡ್ ಫಂಡ್ ವಹಿವಾಟನ್ನು ನಿಯಂತ್ರಿಸಲು ಸಮಾಲೋಚನೆ ಪ್ರತಿಯನ್ನು ಪ್ರಕಟಿಸಿದೆ. ಈ ಕರಡು ಸಮಾಲೋಚನೆಯಲ್ಲಿ ಕ್ರೌಡ್ ಫಂಡ್‌ಗಳನ್ನು ನಿಯಂತ್ರಿಸಲು ಮಾರ್ಗಸೂಚಿಗಳು ಹಾಗೂ ಆನ್‌ಲೈನ್ ಬಂಡವಾಳವನ್ನು ಸಂಗ್ರಹಿಸಲು ಚೌಕಟ್ಟನ್ನು ಪ್ರಕಟಿಸಲಾಗಿದೆ. ಇದು ಕರಡು ಸಮಾಲೋಚನೆಯಾಗಿದ್ದು ಆಕ್ಷೇಪಣೆಗಳನ್ನು ಪರಿಗಣಿಸಿದ ಬಳಿಕ ಅಂತಿಮ ಮಾರ್ಗಸೂಚಿಗಳನ್ನು ಪ್ರಕಟಿಸಲಾಗುವುದು.

ಸೆಬಿ ಮಾರ್ಗಸೂಚಿ
* ಪಬ್ಲಿಕ್ ಕಂಪೆನಿಗಳು ಮಾತ್ರ ಕ್ರೌಡ್ ಫಂಡ್ ಮೂಲಕ ಬಂಡವಾಳ ಸಂಗ್ರಹಿಸಬಹುದು. ಅರ್ಹ   ಕಂಪೆನಿಗಳು ಷೇರು ಮಾರುಕಟ್ಟೆಯ ವಹಿವಾಟು ಪಟ್ಟಿಯಲ್ಲಿ ಇರಬಾರದು.

* ಕಂಪೆನಿ ಸ್ಥಾಪನೆಗೊಂಡು ನಾಲ್ಕು ವರ್ಷಗಳು ಕಳೆದಿರಬಾರದು.
* ಅರ್ಹ ಕಂಪೆನಿಯುರೂ10 ಕೋಟಿವರೆಗೆ ಮಾತ್ರವೇ ಬಂಡವಾಳ ಸಂಗ್ರಹಿಸಬಹುದು.
* ಸದ್ಯ ಅಸ್ತಿತ್ವದಲ್ಲಿರುವ ಯಾವುದೇ ಅರ್ಹ ಕಂಪೆನಿಯು, ಕ್ರೌಂಡ್‌ ಫಂಡ್ ಕ್ರಮಕ್ಕೆ
ಮುಂದಾಗಬೇಕಾದರೆ ಆ ಕಂಪೆನಿಯುರೂ೨೫ ಕೋಟಿಗಿಂತ ಹೆಚ್ಚು ವಹಿವಾಟು ಇರುವ ಉದ್ಯಮ ಸಮೂಹಕ್ಕೆ ಸಂಬಂಧಿಸಿದ್ದಾಗಿರಬಾರದು.

* ಅಧಿಕೃತ ಹೂಡಿಕೆದಾರರು ಮಾತ್ರ ಕ್ರೌಡ್ ಫಂಡ್‌ನಲ್ಲಿ ಹೂಡಿಕೆ ಮಾಡಬಹುದು.
* ಅಧಿಕೃತ ಹೂಡಿಕೆದಾರರು
* ಅರ್ಹ ಸಂಸ್ಥೆಗಳು
ಅ: ಕನಿಷ್ಠರೂ20 ಕೋಟಿ ನಿವ್ವಳ ಮೌಲ್ಯ ಇರುವ  ಕಂಪೆನಿಗಳು
ಆ:‌ಕನಿಷ್ಠರೂ2 ಕೋಟಿ ನಿವ್ವಳ ಮೌಲ್ಯದ ಉದ್ಯಮ ಅಥವಾ ಆಸ್ತಿ ಹೊಂದಿರುವ ವ್ಯಕ್ತಿ
ಇ: ಕನಿಷ್ಠರೂ10 ಲಕ್ಷ ವಾರ್ಷಿಕ ಆದಾಯ ಇರುವ ರಿಟೇಲ್ ಹೂಡಿಕೆದಾರರು

* ಕ್ರೌಡ್ ಫಂಡ್ ಸಂಗ್ರಹಿಸುವ ವೇದಿಕೆಗಳು
ಅ: ಷೇರು ಮಾರುಕಟ್ಟೆ
ಆ: ಡಿಪಾಸಿಟರಿಗಳು
ಇ: ಟೆಕ್ನಾಲಜಿ ಬಿಜಿನೆಸ್ ಇನ್‌ಕ್ಯೂಬೇಟರ್ಸ್‌
ಈ: ಪ್ರೈವೇಟ್ ಈಕ್ವಿಟಿದಾರರ ಸಂಘಗಳು.

* ಕ್ರೌಡ್ ಫಂಡ್ ಹೂಡಿಕೆಗೆ ಡಿಮ್ಯಾಟ್ ಖಾತೆ ಕಡ್ಡಾಯ ಮತ್ತು ಗರಿಷ್ಠ ಹೂಡಿಕೆದಾರರು ಸಂಖ್ಯೆ 200 ಮಾತ್ರ.

ಸೆ.ಬಿ ನಿಬಂಧನೆಗಳಿಗೆ ಆತಂಕ
ಸೆಬಿಯು ಕ್ರೌಡ್ ಫಂಡಿಂಗ್‌ ಕುರಿತು ಈಗ ಘೋಷಿಸಿರುವ ನಿಯಂತ್ರಣ ಕ್ರಮಗಳಿಗೆ ಉದ್ಯಮ ವಲಯದಿಂದ ಆತಂಕ ವ್ಯಕ್ತವಾಗಿದೆ. ನಿಯಂತ್ರಣಗಳನ್ನು ಕಾರ್ಯರೂಪಕ್ಕೆ ತಂದರೆ ಆನ್‌ಲೈನ್ ಮೂಲಕ ಬಂಡವಾಳ ಕ್ರೋಡೀಕರಣಕ್ಕೆ ತೊಡಕಾಗುತ್ತದೆ, ಪ್ರಕ್ರಿಯೆ ಮೇಲೆ ಕಡಿವಾಣ ಬೀಳುತ್ತದೆ ಎಂಬುದೇ ಉದ್ಯಮದ ಆತಂಕಕ್ಕೆ ಕಾರಣವಾಗಿದೆ.

ಕ್ರೌಡ್ ಫಂಡ್‌ಗಳನ್ನು ಈಕ್ವಿಟಿ ಕ್ರೌಡ್ ಫಂಡ್ ಹಾಗೂ ಡೆಟ್ ಕ್ರೌಡ್ ಫಂಡ್‌ಗಳು ಎಂದು ಸೆಬಿ ವಿಂಗಡಿಸಿದೆ. ಈಕ್ವಿಟಿ ಕ್ರೌಡ್ ಫಂಡ್‌ಗಳು ಷೇರುಗಳ ಮೂಲಕ ಹೂಡಿಕೆ ಸಂಗ್ರಹಿಸಿದರೆ, ಡೆಬ್ಟ್‌ ಕ್ರೌಡ್ ಫಂಡ್‌ಗಳು ಬಾಂಡ್ ಹಾಗೂ ಡಿಬೆಂಚರ್ ಮೂಲಕ ಹೂಡಿಕೆ ಸಂಗ್ರಹಿಸಬಹುದು.

ಡಿಮ್ಯಾಟ್ ಖಾತೆ ಇರುವ ವ್ಯಕ್ತಿಗಳು ಮಾತ್ರವೇ ಕ್ರೌಡ್ ಫಂಡ್‌ಗಳಲ್ಲಿ ಹೂಡಿಕೆ ಮಾಡಬಹುದು ಎಂಬ ಷರತ್ತೇ ಉದ್ಯಮ ವಲಯದ ಮುಖ್ಯ ಆತಂಕವಾಗಿದೆ.

ಅನೇಕ ಹೂಡಿಕೆದಾರರು ಮತ್ತು ದಾನಿಗಳು ಡಿಮ್ಯಾಟ್ ಖಾತೆ ಹೊಂದಿರುವುದಿಲ್ಲ. ಅಂತಹ ದಾನಿಗಳು ಕ್ರೌಡ್ ಫಂಡ್‌ ಮೂಲಕ ಹಣ ತೊಡಗಿಸುವುದಕ್ಕೆ ಸಾಧ್ಯವಾಗದು. ಇದೊಂದು ಅನಗತ್ಯವಾದ ನಿಯಂತ್ರಣ ಕ್ರಮ ಎಂಬುದು ಉದ್ಯಮ ವಲಯದ ಅಸಮಾಧಾನದ ನುಡಿ.

ಭಾರತದಲ್ಲಿರುವ ಡಿಮ್ಯಾಟ್ ಖಾತೆಗಳ ಸಂಖ್ಯೆ 2.19 ಕೋಟಿ. ಅತರ್ಜಾಲ ಬಳಕೆದಾರರ ಸಂಖ್ಯೆ 24 ಕೋಟಿ. ಹೀಗೆ ಷರತ್ತುಗಳನ್ನು ವಿಧಿಸುತ್ತಾ ಹೋದಲ್ಲಿ ಶೇ 90ರಷ್ಟು ಹೂಡಿಕೆದಾರರನ್ನು ಕ್ರೌಂಡ್ ಫಂಡ್‌ ಕ್ಷೇತ್ರದಿಂದಲೇ ಹೊರಗಿಟ್ಟಂತಾಗುತ್ತದೆ ಎನ್ನುವುದು ಕೆಲವು ಉದ್ಯಮಿಗಳ ಕಳವಳಕ್ಕೆ ಕಾರಣವಾಗಿದೆ.

ಸಣ್ಣ ಉದ್ಯಮಿಗಳು ಮತ್ತು ಆರಂಭಿಕ ಹಂತದಲ್ಲಿರುವ ಉದ್ಯಮಗಳಿಂದ ಮಾತ್ರವೇ ಕ್ರೌಡ್ ಫಂಡ್ ಮೂಲಕ ಬಂಡವಾಳ ಸಂಗ್ರಹಿಸುವ ಚಟುವಟಿಕೆ ನಡೆಯುತ್ತಿದೆ. ಅವರು ಸಾಮಾನ್ಯವಾಗಿ ಪ್ರೈವೇಟ್ ಕಂಪೆನಿ, ಪಾಲುದಾರಿಕೆ ಸಂಸ್ಥೆಗಳು ಮತ್ತು ಮಾಲೀಕರು ಆಗಿರುತ್ತಾರೆ. ಆದ್ದರಿಂದ ಪಬ್ಲಿಕ್ ಕಂಪೆನಿಗಳಿಗೆ ಮಾತ್ರ ಕ್ರೌಡ್ ಫಂಡ್‌ಗೆ ಅವಕಾಶ ನೀಡಿರುವುದರಿಂದ ಸಣ್ಣ ಉದ್ಯಮಗಳಿಗೆ ಈ ಷರತ್ತು ನುಂಗಲಾರದ ತುತ್ತಾಗಿದೆ.

ಕ್ರೌಡ್ ಫಂಡ್‌ನ ಗರಿಷ್ಠ ಹೂಡಿಕೆದಾರರ ಸಂಖ್ಯೆಯನ್ನು 200ಕ್ಕೆ ಮಿತಗೊಳಿಸಿರುವುದು ಸಹ ಈ ವಿನೂತನ ಹೂಡಿಕೆ ಸಂಗ್ರಹ ವಿಭಾಗಕ್ಕೆ ಮತ್ತೊಂದು ದೊಡ್ಡ ಕಡಿವಾಣವಾಗಿದೆ. ಹೂಡಿಕೆದಾರರ ಸಂಖ್ಯೆಯನ್ನು ಮಿತಗೊಳಿಸಿದರೆ, ಉದ್ಯಮಿಗಳಿಗೆ ಬಂಡವಾಳ ಸಂಗ್ರಹಿಸುವುದು ಕಷ್ಟವಾಗಬಹುದು ಎಂಬ ವಾದವೂ ಕೇಳಿಬರುತ್ತಿದೆ.

ಸೆಬಿ ಹೂಡಿಕೆದಾರರಿಗೆ ವಿಧಿಸಿರುವ ಆದಾಯ ಮತ್ತು ನಿವ್ವಳ ಮೊತ್ತದ ನಿಬಂಧನೆಗಳು ಸಹ ಹೂಡಿಕೆ ಸಂಗ್ರಹಿಸುವುದಕ್ಕೆ ಅಡ್ಡಿಯಾಗಲಿವೆ. ಷೇರು ಮಾರುಕಟ್ಟೆ ಹೂಡಿಕೆಗೆ ಇಲ್ಲದಿರುವ ನಿಬಂಧನೆಗಳು ಕ್ರೌಡ್ ಫಂಡ್ ಹೂಡಿಕೆಗೆ ಏಕೆ? ಎಂಬ ಪ್ರಶ್ನೆಯೂ ಇದೆ.

ಸೆಬಿ ಅಧ್ಯಕ್ಷ ಯು.ಕೆ.ಸಿನ್ಹ ಅವರು ನಿಬಂಧನೆಗಳನ್ನು ಸರಳಗೊಳಿಸುವುದಾಗಿ ಭರವಸೆ ನೀಡಿದ್ದಾರೆ. ಅವರ ಪ್ರಕಾರ ಉದ್ಯಮಿಗಳಿಗೆ ಕ್ರೌಡ್ ಫಂಡ್ ಮೂಲಕ ಹೂಡಿಕೆ ಸಂಗ್ರಹಿಸುವುದು ವಿದೇಶದಲ್ಲೂ ಕಷ್ಟವಾಗಿದೆ. ಎಲ್ಲಾ ಆಯಾಮಗಳನ್ನು ಪರಿಗಣಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಕ್ರೌಡ್ ಫಂಡ್ ವೇದಿಕೆಯನ್ನು ಷೇರು ಮಾರುಕಟ್ಟೆ ಮತ್ತು ಡಿಪಾಸಿಟರಿಗಳಿಗೆ ಸೀಮಿತಗೊಳಿಸಿರುವುದು ಈಗ ಅಸ್ತಿತ್ವದಲ್ಲಿರುವ ಕ್ರೌಂಡ್‌ ಫಂಡ್ ವೇದಿಕೆಗಳಿಗೂ ಆತಂಕ ಉಂಟು ಮಾಡಿದೆ. ಸೆಬಿ ಕೂಡಲೇ ಈ ಷರತ್ತು ಕೈಬಿಡಬೇಕು ಎಂಬುದು ವೇದಿಕೆಗಳ ಮನವಿಯೂ ಆಗಿದೆ.

ಆನ್‌ಲೈನ್ ತಂತ್ರಜ್ಞಾನ ಅತೀ ವೇಗದಲ್ಲಿ ಬದಲಾಗುತ್ತಿದೆ. ಆನ್‌ಲೈನ್ ಮೂಲಕ ಬಂಡವಾಳ ಸಂಗ್ರಹಿಸುವುದು ಸುಲಭ ಮತ್ತು ಕಡಿಮೆ ವೆಚ್ಚದ್ದಾಗಿದೆ. ಇತ್ತೀಚಿನ ದಿನಗಳಲ್ಲಿ ಉದ್ಯಮ ವಲಯದಲ್ಲಿ ಕ್ರೌಂಡ್‌ ಫಂಡ್‌ ಪ್ರಮಾಣ ವಾರ್ಷಿಕ ಶೇ ೨೦ರಂತೆ ಹೆಚ್ಚುತ್ತಿದೆ ಎಂದೂ ಸಣ್ಣ ಉದ್ಯಮಿಗಳು ಗಮನ ಸೆಳೆಯಲು ಯತ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT