ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೃತ್ತಿ ಬದುಕಿಗೆ ಹಣ ಉಳಿಸಿ

Last Updated 22 ಮಾರ್ಚ್ 2016, 19:58 IST
ಅಕ್ಷರ ಗಾತ್ರ

ಇರುವೆ ಮತ್ತು ಮಿಡತೆಯ ದೃಷ್ಟಾಂತ ನಮಗೆಲ್ಲ ಗೊತ್ತಿರುವಂತದ್ದು. ಈ ಕಥೆಯಲ್ಲಿ ಪ್ರಮುಖ ಆರ್ಥಿಕ ಸಂದೇಶವೊಂದಿದೆ. ಇರುವೆ ಬೇಸಿಗೆ ಕಾಲದಲ್ಲಿ ಕಷ್ಟಪಟ್ಟು ದುಡಿಯುತ್ತ ಚಳಿಗಾಲಕ್ಕಾಗಿ ಆಹಾರವನ್ನು ದಾಸ್ತಾನು ಮಾಡುತ್ತ ಇರುತ್ತದೆ. ಮುಂಬರುವ ಕಷ್ಟದ ಸಮಯವನ್ನು ಯೋಚಿಸದೆ ಸದಾ ಆಟದಲ್ಲಿ ತಲ್ಲೀನವಾದ ಮಿಡತೆ ಈಗಿನ ಜೀವನದಲ್ಲಿ ಸಂತೋಷ ಅನುಭವಿಸದ ಇರುವೆಯನ್ನು ಕಂಡು ತಮಾಷೆ ಮಾಡುತ್ತದೆ.

ಚಳಿಗಾಲ ಬರುತ್ತದೆ. ಈಗಾಗಲೇ ಸಾಕಷ್ಟು ಆಹಾರ ಧಾನ್ಯ ಸಂಗ್ರಹಿಸಿ ಇಟ್ಟುಕೊಂಡ ಇರುವೆ ಚಳಿಗೆ ಹೆದರದೆ ಸುಖವಾಗಿ ಜೀವನ ಸಾಗಿಸುತ್ತದೆ. ಆಹಾರ ಇಲ್ಲದೆ ಹಸಿವೆಯಿಂದ ಬಳಲಿದ ಮಿಡತೆ ಚಳಿಗೆ ಮರಗಟ್ಟಿ ಸಾಯುತ್ತದೆ. ಈ ದೃಷ್ಟಾಂತದಿಂದ ಮನುಷ್ಯರು ಕಲಿಯುವುದು ಸಾಕಷ್ಟು ಇದೆ. ನಾವು ಈಗ ಬದುಕುತ್ತಿರುವ ಸ್ಥಿತಿಗತಿಯಲ್ಲಿ ಹಣಕಾಸು ಯೋಜನೆ ರೂಪಿಸುವುದು ಅತ್ಯಂತ ಅಗತ್ಯ. ಇಂದು ನಮ್ಮೆಲ್ಲರ ಜೀವಿತಾವಧಿ ನಿಧಾನಗತಿಯಲ್ಲಿ ಹೆಚ್ಚುತ್ತಲಿದೆ.

1950ರ ದಶಕದಲ್ಲಿ ಜಗತ್ತಿನ ಒಟ್ಟು ಜನಸಂಖ್ಯೆಯಲ್ಲಿ 65 ವರ್ಷಕ್ಕಿಂತ ಹೆಚ್ಚಿನವರ ಸಂಖ್ಯೆ ಶೇ 4.9ರಷ್ಟಿತ್ತು. ಈಗ ಈ ಪ್ರಮಾಣ ಶೇ 22ರಷ್ಟಿದೆ. 2050ರ ವೇಳೆಗೆ ಈ ಪ್ರಮಾಣ ಶೇ 39.5ರಷ್ಟಕ್ಕೆ ಹೆಚ್ಚುವ ಅಂದಾಜು ಮಾಡಲಾಗಿದೆ. ಜಗತ್ತಿನಲ್ಲಿ ಜನ ಬಹಳ ಬೇಗ ವೃದ್ಧರಾಗುತ್ತಿರುವುದನ್ನೂ ಇದು ತೋರಿಸುತ್ತದೆ.

ನಿವೃತ್ತಿಯ ಯೋಜನೆ ಏಕೆ?
1947ರಲ್ಲಿ ಭಾರತೀಯರ ಜೀವಿತಾವಧಿ ಇದ್ದುದು ಸರಾಸರಿ 32 ವರ್ಷ ಮಾತ್ರ. ಇಂದು ಇದು 65 ವರ್ಷಕ್ಕಿಂತ ಹೆಚ್ಚಿಗೆ ಇದೆ.  ಜೀವಿತಾವಧಿ ಇನ್ನಷ್ಟು ಹೆಚ್ಚುವ ಲಕ್ಷಣಗಳೂ ಇವೆ. ನಿವೃತ್ತಿ ಯೋಜನೆ ರೂಪಿಸಿಕೊಳ್ಳುವುದಕ್ಕೆ ಇದೊಂದು ಪ್ರಮುಖ ಕಾರಣವಾಗಿದೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ‘ತೊಟ್ಟಿಲಿನಿಂದ ಗೋರಿಯವರೆಗೆ’ ಸಮಗ್ರ ಸಾಮಾಜಿಕ ಭದ್ರತಾ ವ್ಯವಸ್ಥೆ ಇರುತ್ತದೆ.

ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ತನ್ನೆಲ್ಲ ಪ್ರಜೆಗಳಿಗೆ ಇಂತಹ ಸಾಮಾಜಿಕ ಭದ್ರತೆ ಒದಗಿಸುವಷ್ಟು ಸಂಪನ್ಮೂಲ ಇಲ್ಲ. ದೇಶದ ಜನಸಂಖ್ಯೆಯ ಶೇ 10ರಷ್ಟು ಮಂದಿ ಮಾತ್ರ ಸರ್ಕಾರಿ ಮತ್ತು ಸಂಘಟಿತ ಖಾಸಗಿ ಕ್ಷೇತ್ರದಲ್ಲಿ ಕೆಲಸಕ್ಕಿದ್ದಾರೆ. ಇವರಿಗೆ ಸಹಜವಾಗಿಯೇ ಪಿಂಚಣಿ ಮತ್ತು ನಿವೃತ್ತಿ ಸೌಲಭ್ಯಗಳು ಸಿಗುತ್ತವೆ. ಶೇ 90ರಷ್ಟಿರುವ ಕಾರ್ಮಿಕ ವರ್ಗ, ಅಸಂಘಟಿತ ಕ್ಷೇತ್ರದಲ್ಲಿ ದುಡಿಯುತ್ತಿರುವವರು ವೃದ್ಧಾಪ್ಯದಲ್ಲಿ ಅತಂತ್ರ ಭವಿಷ್ಯವನ್ನು ಎದುರಿಸುವಂತಾಗಿದೆ. ಹೀಗಾಗಿ ನಿವೃತ್ತಿಯ ಕಾಲಕ್ಕಾಗಿ ಯೋಜನೆಯನ್ನು ರೂಪಿಸಿಕೊಳ್ಳುವುದು ಅಗತ್ಯ.

ಯಾವಾಗ ಯೋಜನೆ ಆರಂಭಿಸಬೇಕು?
ಇದಕ್ಕೆ ಸರಳ ಉತ್ತರ ಎಂದರೆ ‘ಎಷ್ಟು ಬೇಗ ಆರಂಭಿಸುತ್ತೀರೋ ಅಷ್ಟು ಉತ್ತಮ’ ಎಂಬುದು. ಉದ್ಯೋಗದ ಆರಂಭಿಕ ಹಂತದಲ್ಲೇ ನಿವೃತ್ತಿಯ ಯೋಜನೆಯನ್ನು ಆರಂಭಿಸಬೇಕು. ಹಣ ಸಂಚಯದ ಗತಿಗೆ ಹೆಚ್ಚಿನ ಸಮಯ ಕೊಟ್ಟಷ್ಟೂ, ನಿವೃತ್ತಿಯ ಕಾಲಕ್ಕೆ ಅದು ಕೊಡುವ ಫಲವೂ ಅಧಿಕವಿರುತ್ತದೆ. ನಮಗೆ ಎಷ್ಟು ಸಾಧ್ಯವೋ ಅಷ್ಟನ್ನೇ ಉಳಿತಾಯ ಮಾಡುತ್ತ ಮತ್ತು ಉಳಿತಾಯದಲ್ಲಿ ಒಂದು ಶಿಸ್ತನ್ನು ತರಲು ದೀರ್ಘಾವಧಿಯಲ್ಲಿ ಸಾಧ್ಯವಾಗುತ್ತದೆ.

ಹಂತ ಹಂತವಾಗಿ ಏರಿಕೆಯಾಗುತ್ತ ಹೋಗುವ ನಿವೃತ್ತಿ ಯೋಜನೆಯಲ್ಲಿ ನಾವು ಪ್ರತಿ ತಿಂಗಳೂ ನಿವೃತ್ತಿ ನಿಧಿಗೆ ಹಣ ಹೂಡುತ್ತ ಹೋಗುತ್ತೇವೆ. ನಾವು ನಿವೃತ್ತಿ ಹೊಂದಿದ ಬಳಿಕ ಸಂಚಯವಾದ ಈ ನಿಧಿಯನ್ನು ನಾವು ವಾಪಸ್‌ ಪಡೆಯುತ್ತೇವೆ. ಆಗ ನಮಗೆ ನಿಜವಾಗಿಯೂ ನಾವು ಮಾಡಿದ ಉಳಿತಾಯದ ಬಗ್ಗೆ ಧನ್ಯತಾ ಭಾವನೆ ಮೂಡುವಂತಾಗುತ್ತದೆ.

ಎಲ್ಲಿ ಹೂಡಿಕೆ ಮಾಡಬೇಕು?
ಸಾಮಾನ್ಯ ಹಣದುಬ್ಬರವನ್ನು ಮೆಟ್ಟಿ ನಿಂತು ಉತ್ತಮ ಗಳಿಕೆ ತಂದುಕೊಡುವ ಸಾಮರ್ಥ್ಯ ಇರುವ ಯೋಜನೆಯಲ್ಲಿ ಹಣ ಹೂಡಬೇಕು ಎಂಬುದೇ ಇದಕ್ಕೆ ಸರಳ ಉತ್ತರ. ಐತಿಹಾಸಿಕ ನೆಲೆಯಿಂದ ಹೇಳುವುದಾದರೆ ಷೇರುಗಳೇ ಹೂಡಿಕೆಗೆ ಇರುವ ಉತ್ತಮ ಅವಕಾಶ ಎನಿಸುತ್ತದೆ. ಷೇರುಗಳಲ್ಲಿ ಹೂಡಿಕೆ ಮಾಡುವಲ್ಲಿ ಅನುಸರಿಸಬೇಕಾದ ಉತ್ತಮ ಮಾರ್ಗವೆಂದರೆ ವ್ಯವಸ್ಥಿತ ಹೂಡಿಕೆ ಯೋಜನೆಗಳನ್ನು (ಎಸ್‌ಐಪಿ) ಅನುಸರಿಸುವುದು.

ವ್ಯವಸ್ಥಿತ ಹೂಡಿಕೆ
ವ್ಯವಸ್ಥಿತ ಹೂಡಿಕೆ ಯೋಜನೆ (ಎಸ್‌ಐಪಿ) ಅಡಿಯಲ್ಲಿ ಹೂಡಿಕೆದಾರ ಒಂದು ನಿರ್ದಿಷ್ಟ ಮೊತ್ತವನ್ನು ಪ್ರತಿ ತಿಂಗಳು ಹೂಡುತ್ತ ಹೋಗುತ್ತಾನೆ. ಮಾರುಕಟ್ಟೆಯಲ್ಲಿ ಏರಿಳಿತಗಳೊಂದಿಗೆ ಮಾಡುವ ಹೂಡಿಕೆಯಿಂದಾಗಿ ಸರಾಸರಿ ವೆಚ್ಚ ಕಡಿಮೆಯಾಗುತ್ತದೆ. ಮಾರುಕಟ್ಟೆಯ ಸ್ಥಿತಿಗತಿಯ ಬಗ್ಗೆ ಹೂಡಿಕೆದಾರರು ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯ ಇರುವುದಿಲ್ಲ. ದೀರ್ಘಾವಧಿಯ ಹೂಡಿಕೆಯಾದ್ದರಿಂದ ಬಡ್ಡಿಯ ಮೇಲೆ ಬಡ್ಡಿ ಸಂಚಯವಾಗುವ ಲಾಭ ದೊರೆಯುತ್ತದೆ.

ಎಷ್ಟು ಹೂಡಿಕೆ ಮಾಡಬೇಕು?
ನಿವೃತ್ತಿಗಾಗಿ ಎಷ್ಟು ಹೂಡಿಕೆ ಮಾಡಬೇಕು ಎಂಬುದು ಹಲವಾರು ವಿಷಯಗಳನ್ನು ಒಳಗೊಂಡಿದೆ. ಅದಕ್ಕಾಗಿ ಕೆಲವು ಮಾರ್ಗದರ್ಶಿಗಳನ್ನು ಅನುಸರಿಸುವುದು ಉತ್ತಮ.
1. ಈಗಿನ ಮಾಸಿಕ ವೆಚ್ಚಗಳನ್ನು ಅಂದಾಜಿಸಬೇಕು. ನಿವೃತ್ತಿಯ ನಂತರವೂ ಇದೇ ರೀತಿಯ ವೆಚ್ಚ ಮುಂದುವರಿಯುತ್ತದೆ ಎಂಬುದನ್ನು ಮನಗಾಣಬೇಕು. ದಿನಸಿ ಸಾಮಗ್ರಿ, ಬಿಲ್‌ ಪಾವತಿಯಂತಹ ವೆಚ್ಚಗಳು ಕಾಯಂ ಆಗಿ ಇರುವಂತದ್ದು, ಮಕ್ಕಳ ಶಾಲಾ ಶುಲ್ಕ, ಮನೆ ಸಾಲ ಮರುಪಾವತಿ ಮೊದಲಾದವು ಕೆಲವು ವರ್ಷಗಳ ನಂತರ ಕೊನೆಗೊಳ್ಳು
ವಂತದ್ದು. ವೆಚ್ಚಗಳನ್ನು ಲೆಕ್ಕ ಹಾಕುವುದರಲ್ಲಿ ಉಳಿತಾಯ ಯೋಜನೆಯ ಯಶಸ್ಸು ಒಂದಿಷ್ಟು ಮಟ್ಟಿಗೆ ಅಡಗಿದೆ.

2. ನಿವೃತ್ತಿಗೆ ಎಷ್ಟು ವರ್ಷ ಬಾಕಿ ಇದೆ ಎಂದು ಲೆಕ್ಕ ಹಾಕಬೇಕು.

3. ನಿವೃತ್ತಿಯ ನಂತರದ ದಿನಗಳಲ್ಲಿ ಹಣದುಬ್ಬರದ ಪರಿಣಾಮದಿಂದ ಜೀವನ ವೆಚ್ಚ ಹೆಚ್ಚುವ ನಿರೀಕ್ಷೆಯನ್ನೂ  ಇಟ್ಟುಕೊಳ್ಳಬೇಕು.

4. ನಿವೃತ್ತಿಯ ನಂತರ ಸಿಗುವ ಲಾಭವನ್ನು ಈ ಮೇಲಿನ ವೆಚ್ಚ ಏರಿಕೆಯೊಂದಿಗೆ ತುಲನೆ ಮಾಡಿ ನೋಡಿಕೊಳ್ಳಬೇಕು.

5. ನಿವೃತ್ತಿ ಜೀವನಕ್ಕಾಗಿ ಮಾಡುವ ಹೂಡಿಕೆಯು ನಿರ್ದಿಷ್ಟ ಅದಾಯದ ಆಧಾರದಲ್ಲಷ್ಟೇ ಮಾಡುವಂತದ್ದು. ಹೀಗಾಗಿ ನಿವೃತ್ತಿಯ ಬಳಿಕ ಸಿಗುವ ಗಳಿಕೆಯನ್ನೂ ಮೊದಲಾಗಿಯೇ ಲೆಕ್ಕ ಹಾಕಿಕೊಳ್ಳಬೇಕು.

6. ನೀವು 90 ವರ್ಷಕ್ಕೂ ಹೆಚ್ಚು ಸಮಯ ಬದುಕಿರುತ್ತೀರಿ ಎಂದು ಭಾವಿಸಿಕೊಳ್ಳಿ. ಆಗ ನಿಮ್ಮ ಔಷಧ ವೆಚ್ಚ ಮತ್ತು ವೈದ್ಯಕೀಯ ತಪಾಸಣೆ ವೆಚ್ಚವೂ ಹೆಚ್ಚುವುದನ್ನು ಈಗಲೇ ಅಂದಾಜಿಸಬೇಕು.

ಈ ಮೇಲಿನ ಹಂತಗಳನ್ನು ಪಾಲಿಸಿದ್ದೇ ಆದಲ್ಲಿ ನಿವೃತ್ತಿ ಯೋಜನೆಗಾಗಿ ಎಷ್ಟು ಹಣವನ್ನು ಈಗಲೇ ತೊಡಗಿಸಬೇಕು ಎಂಬುದನ್ನು ನಿರ್ಧರಿಸುವುದು ನಿಮಗೆ ಸಾಧ್ಯವಾದೀತು.
ಡಾ. ವಿ. ಕೆ. ವಿಜಯಕುಮಾರ್‌
ಜಿಯೊಜಿತ್‌ ಬಿಎನ್‌ಪಿ ಪರಿಬಾಸ್‌ ಫೈನಾನ್ಶಿಯಲ್‌
ಸರ್ವಿಸಸ್‌ನ ಹೂಡಿಕೆ ಪರಿಣತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT