ಮುಂಬೈ(ಪಿಟಿಐ): ನಾಲ್ಕು ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ದೇಶದ ಹಣಕಾಸು ಮಾರುಕಟ್ಟೆ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ. ಷೇರುಪೇಟೆಯಲ್ಲಿ ಸೂಚ್ಯಂಕಗಳು ಭಾರಿ ಏರಿಕೆ ದಾಖಲಿಸಿದರೆ, ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿಯೂ ತನ್ನ ಮೌಲ್ಯವನ್ನು ಗಣನೀಯವಾಗಿ ಹೆಚ್ಚಿಸಿಕೊಂಡಿದೆ.
ಸೋಮವಾರದ ವಹಿವಾಟಿನಲ್ಲಿ ಮುಂಬೈ ಷೇರು ವಿನಿಮಯ ಕೇಂದ್ರದ (ಬಿಎಸ್ಇ) ಸಂವೇದಿ ಸೂಚ್ಯಂಕ ಮತ್ತು ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ (ನಿಫ್ಟಿ) ಸೂಚ್ಯಂಕ ಸೋಮವಾರ ದಾಖಲೆ ಏರಿಕೆ ಕಂಡಿವೆ.
ದಿನದ ವಹಿವಾಟಿನಲ್ಲಿ ‘ಬಿಎಸ್ಇ’ 329 ಅಂಶಗಳಷ್ಟು ಏರಿಕೆ ತೋರಿ ಹೊಸ ದಾಖಲೆಯ ಮಟ್ಟವಾದ 21,326 ಅಂಶಗಳನ್ನು ತಲುಪಿದೆ. ವಹಿವಾಟಿನ ಒಂದು ಹಂತದಲ್ಲಿ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟವಾದ 21,483 ಅಂಶಗಳವರೆಗೂ ಏರಿಕೆ ಕಂಡಿತ್ತು. ಇದರಿಂದ ಹೂಡಿಕೆದಾರರ ಸಂಪತ್ತು ಒಂದೇ ದಿನದಲ್ಲಿ ರೂ.75 ಸಾವಿರ ಕೋಟಿಯಷ್ಟು ಹೆಚ್ಚಿದ್ದು, ಷೇರುಪೇಟೆಯ ಒಟ್ಟು ಬಂಡವಾಳ ಮೌಲ್ಯ ರೂ.68.09 ಲಕ್ಷ ಕೋಟಿಗೆ ಏರಿಕೆ ಕಂಡಿದೆ.
‘ನಿಫ್ಟಿ’ ಕೂಡ 104 ಅಂಶಗಳಷ್ಟು ಜಿಗಿತ ಕಂಡು ದಿನದಂತ್ಯಕ್ಕೆ 6,363 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು. ನವೆಂಬರ್ 3ರ ನಂತರ ದಾಖಲಾಗಿರುವ ಗರಿಷ್ಠ ಮಟ್ಟ ಇದಾಗಿದೆ.
ರೂ.ಮೌಲ್ಯವರ್ಧನೆ
ಷೇರುಪೇಟೆ ಚೇತರಿಕೆಯಿಂದ ಡಾಲರ್ ವಿರುದ್ಧ ರೂಪಾಯಿ ವಿನಿಮಯ ಮೌಲ್ಯ ಸೋಮವಾರ 28 ಪೈಸೆಗಳಷ್ಟು ಏರಿಕೆ ಪಡೆದು ಕಳೆದ ಎರಡು ತಿಂಗಳಲ್ಲೇ ಗರಿಷ್ಠ ಮಟ್ಟವಾದ ರೂ.61.13 ತಲುಪಿತು. ವಹಿವಾಟಿನ ಒಂದು ಹಂತದಲ್ಲಿ ನಾಲ್ಕು ತಿಂಗಳಲ್ಲೇ ಗರಿಷ್ಠ ಮಟ್ಟವಾದ ರೂ.60.90ರವರೆಗೂ ಚೇತರಿಕೆ ಕಂಡಿತ್ತು.