ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕ್ಯಾಶ್‌ಕರೊ’ ಬಳಸಿ ಹೆಚ್ಚು ಉಳಿಸಿ

Last Updated 26 ಏಪ್ರಿಲ್ 2016, 19:58 IST
ಅಕ್ಷರ ಗಾತ್ರ

ಅಂತರ್ಜಾಲದ ವ್ಯಾಪ್ತಿ ವಿಸ್ತರಣೆಯಿಂದ ದೇಶದಲ್ಲಿ ಆನ್‌ಲೈನ್ ಮೂಲಕ ಖರೀದಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಎರಡು ಮತ್ತು ಮೂರನೇ  ಹಂತದ ನಗರಗಳಲ್ಲಿಯೂ ಇ–ಕಾಮರ್ಸ್‌ ಹರಡಿಕೊಂಡಿದೆ. ಆನ್‌ಲೈನ್‌ನಲ್ಲಿ ಖರೀದಿಸುವಾಗ ಸ್ವಲ್ಪ ಬುದ್ಧಿ ಉಪಯೋಗಿಸಿದರೆ ಹೆಚ್ಚು ಉಳಿತಾಯ ಮಾಡಬಹುದು.

ಇ–ಕಾಮರ್ಸ್‌ ಆರಂಭದ ದಿನಗಳಲ್ಲಿ ಖುದ್ದು ಅಂಗಡಿಗೆ ಹೋಗಿ ವಸ್ತುವನ್ನು ಮುಟ್ಟಿ ನೋಡಿ ಖರೀದಿಸಲು ಮತ್ತು ಚೌಕಾಸಿ ಮಾಡಲು ಸಾಧ್ಯವಿಲ್ಲ ಎನ್ನುವ ಅಸಮಾಧಾನವಿತ್ತು. ಆದರೆ ಇದೀಗ ಹಾಗಿಲ್ಲ. ತಂತ್ರಜ್ಞಾನದಿಂದ ಸಾಕಷ್ಟು ಬದಲಾವಣೆ ಆಗಿದೆ. ಖರೀದಿಸಿದ್ದು ಗುಣಮಟ್ಟದ ವಸ್ತುವಲ್ಲ ಎಂದು ಖಾತರಿಯಾದರೆ ಅಥವಾ ಬಣ್ಣ, ಗಾತ್ರ ಸರಿ ಇಲ್ಲ ಎಂದರೆ ಅದನ್ನು ಹಿಂದಿರುಗಿಸಿ ಬೇಕಾಗಿದ್ದು ಪಡೆಯುವ ಅಥವಾ ದುಡ್ಡನ್ನೇ ಮರಳಿ ಪಡೆಯುವ ಆಯ್ಕೆಗಳಿವೆ.

ಇನ್ನು ಚೌಕಾಸಿ ವಿಷಯಕ್ಕೆ ಬರುವುದಾದರೆ, ಸ್ವತಃ ಇ–ಕಾಮರ್ಸ್‌ ಕಂಪೆನಿಗಳೇ ಡಿಸ್ಕೌಂಟ್‌, ಮೆಗಾ ಆಫರ್‌, ದೀಪಾವಳಿ ಆಫರ್‌, ಹೀಗೆ ಮುಖಬೆಲೆಗಿಂತಲೂ ಕಡಿಮೆ ದರಕ್ಕೆ ಮನೆಬಾಗಿಲಿಗೇ  ವಸ್ತುಗಳನ್ನು ನೀಡುತ್ತಿವೆ. ಇದಲ್ಲದೆ, ಕೆಲವು ಜಾಲತಾಣಗಳ ಮೂಲಕ ಇ-ಕಾಮರ್ಸ್ ಕಂಪೆನಿಗಳಲ್ಲಿ ಖರೀದಿಸಿದರೆ ಅದಕ್ಕೆ ಗ್ರಾಹಕರಿಗೆ ಇಂತಿಷ್ಟು ಹಣ ಮರಳಿಸುವ (ಕ್ಯಾಶ್‌ಬ್ಯಾಕ್‌)  ವ್ಯವಸ್ಥೆಯೂ ಇದೆ. ಇಂತಹ ಸೇವೆ ಒದಗಿಸುವ  ಕಂಪೆನಿಗಳಲ್ಲಿ ‘ಕ್ಯಾಶ್‌ಕರೊ’ ಸಹ ಒಂದು. ಗುರುಗಾಂವ್‌ ಮೂಲದ ಸ್ಟಾರ್ಟ್‌ಅಪ್ ಕಂಪೆನಿ ‘ಕ್ಯಾಶ್‌ಕರೊ’. ಸ್ವಾತಿ ಮತ್ತು ರೋಹನ್ ದಂಪತಿ 2013ರಲ್ಲಿ ಇದನ್ನು ಸ್ಥಾಪಿಸಿದರು.

‘ಇದೊಂದು ಆನ್ ಲೈನ್ ಸೇವೆ. ಈ ಜಾಲತಾಣದ ಮೂಲಕ ಖರೀದಿ ನಡೆಸಿದರೆ ಅದಕ್ಕೆ ಕ್ಯಾಶ್‌ಬ್ಯಾಕ್ ಪಡೆಯಬಹುದು. ಗ್ರಾಹಕರನ್ನು ಪರಿಚಯಿಸುವುದಕ್ಕೆ ವಿವಿಧ ಇ-ಕಾಮರ್ಸ್ ಕಂಪೆನಿಗಳು ನಮಗೆ (ಕ್ಯಾಶ್‌ಕರೊಗೆ) ಕಂಪೆನಿಗೆ ಕಮಿಷನ್‌ ನೀಡುತ್ತವೆ. ಅದರಲ್ಲಿ ಇಂತಿಷ್ಟು ಹಣವನ್ನು ನಾವು ಗ್ರಾಹಕರಿಗೆ ಕ್ಯಾಶ್‌ಬ್ಯಾಕ್ ರೂಪದಲ್ಲಿ ನೀಡುತ್ತೇವೆ’ ಎನ್ನುತ್ತಾರೆ ಸ್ವಾತಿ.

‘ಸದ್ಯಕ್ಕೆ, ಭಾರತದಲ್ಲಿಯೇ ಅತಿದೊಡ್ಡ ಕ್ಯಾಶ್‌ಬ್ಯಾಕ್‌  (ಹಣ ಮರಳಿಸುವುದು) ಕಂಪೆನಿ ಇದಾಗಿದೆ. ಹಣ ಉಳಿತಾಯ ಮಾಡಲು ಕ್ಯಾಶ್‌ಬ್ಯಾಕ್‌ ಸುಲಭ ಮಾರ್ಗ. ಆನ್‌ಲೈನ್‌ನಲ್ಲಿ ಖರೀದಿಸುವ ಪ್ರತಿಯೊಂದು ವಸ್ತುವಿಗೂ ಮರಳಿ ಹಣ ಪಡೆಯಬಹುದು. ಭಾರತದಲ್ಲಂತೂ ಉಳಿತಾಯಕ್ಕೆ ಹೆಚ್ಚು  ಆದ್ಯತೆ ನೀಡುತ್ತಾರೆ. ಹೀಗಾಗಿ, ಕ್ಯಾಶ್‌ಕರೊ ಆರಂಭಿಸಲು ಭಾರತ ಅತ್ಯಂತ ಸೂಕ್ತ ಸ್ಥಳ ಎಂದು ನಿರ್ಧರಿಸಿದೆವು ಎನ್ನುತ್ತಾರೆ ಸ್ವಾತಿ ಅಗರ್ವಾಲ್.

ಮಾರಾಟದ ಸರಕಿನ ಮೇಲೆ ಕ್ಯಾಶ್‌ಬ್ಯಾಕ್‌ ನಿರ್ಧಾರವಾಗುತ್ತದೆ. ಎಲೆಕ್ಟ್ರಾನಿಕ್‌ ಉಪಕರಣಗಳಿಗೆ ಮಾರ್ಜಿನ್‌ ಕಡಿಮೆ.  ಅದರಿಂದ ನಮಗೆ ಸಿಗುವ ಕಮಿಷನ್‌ ಸಹ ಕಡಿಮೆ. ಫ್ಯಾಷನ್‌ನಲ್ಲಿ ಕ್ಯಾಶ್‌ಬ್ಯಾಕ್‌ ಶೇ 15ರಷ್ಟಿರುತ್ತದೆ. ಮಾರ್ಜಿನ್ ಹೆಚ್ಚಿದ್ದಷ್ಟೂ ಗ್ರಾಹಕರಿಗೆ ನೀಡುವ ಕ್ಯಾಶ್ ಬ್ಯಾಕ್ ಪ್ರಮಾಣ ಹೆಚ್ಚಾಗುತ್ತದೆ. ಅಮೆಜಾನ್‌, ಜಬಾಂಗ್, ಸ್ನ್ಯಾಪ್‌ಡೀಲ್‌, ಫ್ಲಿಪ್‌ಕಾರ್ಟ್‌, ಶಾಪ್ ಕ್ಲ್ಯೂಸ್ ಹೀಗೆ ಒಂದು ಸಾವಿರಕ್ಕೂ ಅಧಿಕ  ಇ–ಕಾಮರ್ಸ್‌ ಕಂಪೆನಿಗಳೊಂದಿಗೆ ಕೆಲಸ ಮಾಡುತ್ತಿದೆ.

ಹೆಚ್ಚು ಉಳಿತಾಯ
ಕ್ಯಾಶ್‌ಕರೊದಿಂದ ಹೆಚ್ಚು ಉಳಿತಾಯ ಸಾಧ್ಯ. ಇ–ಕಾಮರ್ಸ್‌ ಕಂಪೆನಿಗಳು ನೀಡುವ ಕೊಡುಗೆಗಳು /ಡಿಸ್ಕೌಂಟ್ಸ್‌ / ಕೂಪನ್ಸ್‌ಗಳಲ್ಲದೆ ಹಣ ಪಾವತಿಸುವಾಗ ಡೆಬಿಟ್ /ಕ್ರೆಡಿಟ್ ಕಾರ್ಡ್ ಬಳಸಿದರೆ ಕೆಲವು ಬ್ಯಾಂಕ್‌ಗಳು  ವಿನಾಯ್ತಿ ನೀಡುತ್ತವೆ. ಇದೆಲ್ಲವನ್ನೂ ಒಳಗೊಂಡು ಕ್ಯಾಶ್‌ಬ್ಯಾಕ್‌ ಮೂಲಕ ಖರೀದಿ ನಡೆಸಿದ್ದಕ್ಕೆ ಹೆಚ್ಚುವರಿಯಾಗಿ ಶೇ 30ರಷ್ಟು ಹಣ ಮರಳಿ ಪಡೆಯಬಹುದು. ಉದಾಹರಣೆಗೆ ಒಂದು ಸಾವಿರ ರೂಪಾಯಿಯ ವಸ್ತು ಖರೀದಿಸಿದರೆ ಅದಕ್ಕೆ ಇ-ಕಾಮರ್ಸ್ ಕಂಪೆನಿ₹ 25 ರಿಂದ ₹  50 ಡಿಸ್ಕೌಂಟ್ ನೀಡಿದೆ ಎಂದುಕೊಳ್ಳೋಣ.

ಹಣ ಪಾವತಿಸುವಾಗ ಡೆಬಿಟ್/ಕ್ರೆಡಿಟ್ ಕಾರ್ಡ್ ಬಳಸಿದರೆ ಬ್ಯಾಂಕ್  ₹ 25  ವಿನಾಯ್ತಿ ನೀಡುತ್ತದೆ. ಅಲ್ಲಿಗೆ ₹ ಗರಿಷ್ಠ 75   ಕಡಿಮೆಯಾದರೆ ವಸ್ತುವಿನ ಬೆಲೆ ₹925ಕ್ಕೆ ತಗ್ಗುತ್ತದೆ. ಅದಾದ ಬಳಿಕ ಕ್ಯಾಶ್‌ಕರೊದಿಂದ ₹ 50 ಕ್ಯಾಶ್‌ಬ್ಯಾಕ್ ಸಹ ಸಿಗುತ್ತದೆ. ಒಟ್ಟಾರೆ ₹ 125 ಉಳಿಸಿದಂತಾಗುತ್ತದೆ. ಕನಿಷ್ಠ 250 ರೂಪಾಯಿ ಕ್ಯಾಶ್ ಬ್ಯಾಕ್ ಗಳಿಸಿದ ಮೇಲೆ ಅದನ್ನು ಖರೀದಿದಾರರ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತದೆ. ವಸ್ತುಗಳ ಗುಣಮಟ್ಟ, ದರವನ್ನು ವಿವಿಧ ಆನ್ ಲೈನ್ ಮಳಿಗೆಗಳೊಂದಿಗೆ ಹೋಲಿಸಿಯೂ ನೋಡಬಹುದು.

ಪೈಪೋಟಿ ಇಲ್ಲ
ಭಾರತದಲ್ಲಿ ಹಲವು ಕ್ಯಾಶ್‌ಬ್ಯಾಕ್‌ ಕಂಪೆನಿಗಳಿವೆ. ಆದರೆ ಅವೆಲ್ಲವೂ ಬಹಳ ಚಿಕ್ಕದಾಗಿವೆ.  ಹೀಗಾಗಿ ಪೈಪೋಟಿ ಪ್ರಶ್ನೆಯೇ ಇಲ್ಲ. LafaLafa, GoPaisa and Pennyful ಕಂಪೆನಿಗಳು ತಕ್ಕ ಮಟ್ಟಿನ ಪೈಪೋಟಿ ನೀಡುತ್ತಿವೆ. ಒಂದು ವರ್ಷದಲ್ಲಿ ಸಿಬ್ಬಂದಿ ಸಂಖ್ಯೆ 25 ರಿಂದ 72 ಕ್ಕೆ ಏರಿಕೆಯಾಗಿದೆ. ಇವರಲ್ಲಿ ಶೇ 35ರಷ್ಟು ಮಹಿಳಾ ಉದ್ಯಮಿಗಳಿದ್ದಾರೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ನೇಮಕ ಮಾಡಿಕೊಳ್ಳಲಿದ್ದೇವೆ. ಎಂದು ಸ್ವಾತಿ ಹೇಳುತ್ತಾರೆ.

ಸರ್ಕಾರದಿಂದ ಉತ್ತಮ ಬೆಂಬಲ: ಸ್ಟಾರ್ಟ್‌ಅಪ್‌ ಬಗ್ಗೆ ಸರ್ಕಾರದ ಜತೆ ಮಾತನಾಡುವುದೇ ವ್ಯರ್ಥ ಎಂದು ಈ ಮುಂಚೆ ಅನ್ನಿಸುತ್ತಿತ್ತು. ಸರಿಯಾದ ಪ್ರತಿಕ್ರಿಯೆ ಸಿಗುವುದಿಲ್ಲ. ಅಧಿಕಾರಶಾಹಿ  ಸೂಕ್ತ ರೀತಿ ಸ್ಪಂದಿಸುವುದಿಲ್ಲ. ಯಾರಿಗೋ ಲಂಚ ಕೊಡಬೇಕು ಹೀಗೆ ಇನ್ನೂ ಹಲವು ಕಾರಣಗಳಿಂದ ಮಾತನಾಡದೇ ಇರುವುದು ಒಳ್ಳೆಯದು ಎನಿಸುತ್ತಿತ್ತು. ಆದರೆ, ಪ್ರಧಾನಿ ಮೋದಿ ಅವರನ್ನು  ಭೇಟಿಯಾದಾಗ ಸ್ಟಾರ್ಟ್‌ಅಪ್‌ ಬಗ್ಗೆ ಅವರಿಗಿರುವ ಆಸಕ್ತಿ ಕಂಡು ಸಂತೋಷವಾಯಿತು. ಬಹಳ ಮುಕ್ತವಾಗಿ  ನಮ್ಮೊಂದಿಗೆ ಮಾತನಾಡಿದರು. ಹೊಸತಾಗಿ ಉದ್ಯಮ ಸ್ಥಾಪಿಸುವವರಿಗೆ ಸರ್ಕಾರದಿಂದ ಈ ರೀತಿಯ ಬೆಂಬಲ ಅಗತ್ಯ. ಆದರೆ ನಿಜವಾಗಿಯೂ ಸ್ಟಾರ್ಟ್‌ಅಪ್‌ ನೀತಿ ಜಾರಿಗೆ ಬಂದ ಮೇಲೆ ಅದು ಹೇಗಿರುತ್ತದೆ ಎನ್ನುವುದನ್ನು ಕಾದುನೋಡಬೇಕಷ್ಟೆ ಎಂದರು.

ಹೂಡಿಕೆ
2013ರಲ್ಲಿ ಕಂಪೆನಿ ಆರಂಭವಾದಾಗ ಹೂಡಿಕೆದಾರರಿಂದ 7.50 ಲಕ್ಷ ಡಾಲರ್‌ ಸಂಗ್ರಹಿಸಿದ್ದೇವೆ. ಇತ್ತೀಚೆಗೆ ಕಲಾರಿ ಕ್ಯಾಪಿಟಲ್ಸ್‌ ಸೇರಿದಂತೆ ಒಟ್ಟು ₹25 ಸಾವಿರ ಕೋಟಿ ಸಂಗ್ರಹವಾಗಿದೆ. ಉದ್ಯಮಿ ರತನ್‌ ಟಾಟಾ ಅವರೂ ಸಹ ಕಂಪೆನಿಯಲ್ಲಿ ಹೂಡಿಕೆ ಮಾಡಿದ್ದಾರೆ. ದಕ್ಷಿಣ ಭಾರತದಲ್ಲಿ ಹೆಚ್ಚು ಜನರು ಆನ್‌ಲೈನ್‌ ಮೂಲಕ ಖರೀದಿ ನಡೆಸುತ್ತಾರೆ. ಒಟ್ಟು ಗ್ರಾಹಕರಲ್ಲಿ  ಇವರ ಪ್ರಮಾಣವೇ ಶೇ 35ರಷ್ಟಿದೆ. ಬೆಂಗಳೂರು, ದೆಹಲಿ, ಹೈದರಾಬಾದ್, ತಮಿಳುನಾಡಿನಲ್ಲಿ ಅತಿ ಹೆಚ್ಚು ಖರೀದಿ ನಡೆಯುತ್ತಿದೆ.

ಶೀಘ್ರವೇ ಆ್ಯಪ್‌
ಈವರೆಗೂ ಆ್ಯಪ್ ಇಲ್ಲ ಎನ್ನುವ ಕೊರತೆ ಎದುರಾಗಿಲ್ಲ. ವಹಿವಾಟು ಕಡಿಮೆಯಾಗಿಲ್ಲ. ಆದರೆ ಶೇ 40ರಷ್ಟು ವಹಿವಾಟು ಮೊಬೈಲ್‌ ಮೂಲಕವೇ ನಡೆಯುತ್ತಿದೆ. ಹೀಗಿರುವಾಗ ಮೊಬೈಲ್ ಆ್ಯಪ್ ಇದ್ದರೆ ಗ್ರಾಹಕರಿಗೆ ಇನ್ನೂ ಉತ್ತಮ ಸೇವೆ ನೀಡಬಹುದು ಎನ್ನುವ ಉದ್ದೇಶದಿಂದ ಆ್ಯಪ್ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ.  ಮೂರು ತಿಂಗಳಿನಲ್ಲಿ ಆ್ಯಪ್‌ಮಾರುಕಟ್ಟೆಗೆ ಬರಲಿದೆ ಎಂದರು.

ಹೇಗೆ ಕೆಲಸ ಮಾಡುತ್ತದೆ
* www.cashkaro.com ಗೆ ಇ-ಮೇಲ್ ವಿಳಾಸ ನೀಡಿ ಉಚಿತವಾಗಿ ನೋಂದಣಿ ಮಾಡಿಕೊಳ್ಳಬೇಕು.

* ಲಾಗಿನ್‌ ಆದ ಮೇಲೆ ಮುಖಪುಟದಲ್ಲಿ ನೀಡಿರುವ ವಸ್ತುಗಳ ಪಟ್ಟಿಯ ಮೂಲಕ ಇಲ್ಲವೇ ಅಲ್ಲಿರುವ 1000ಕ್ಕೂ ಅಧಿಕ ಇ–ಕಾಮರ್ಸ್‌ ಕಂಪೆನಿಗಳ ಮೂಲಕ ಖರೀದಿ ಪ್ರಕ್ರಿಯೆ ಮುಂದುವರಿಸಬಹುದು.

*ಕ್ಯಾಶ್‌ಬ್ಯಾಕ್ ಜಾಲತಾಣದ ಮೂಲಕ ಇ-ಕಾಮರ್ಸ್ ಕಂಪೆನಿ ಪ್ರವೇಶಿಸುವುದರಿಂದ, ನೇರವಾಗಿ ಕಂಪೆನಿ ಜಾಲತಾಣದಲ್ಲಿ ಖರೀದಿಸಿದಾಗ ಸಿಗುವ ಡಿಸ್ಕೌಂಟ್/ಕ್ಯಾಶ್ ಬ್ಯಾಕ್‌ಗಿಂತಲೂ ಹೆಚ್ಚು ಹಣ ಸಿಗುತ್ತದೆ.

*ಖರೀದಿ ಮಾಡಿದ 72 ಗಂಟೆಗಳ ಒಳಗಾಗಿ(3 ದಿನದೊಳಗೆ) ಕ್ಯಾಶ್‌ಕರೊ ಖಾತೆಗೆ ಹಣ ಬರುತ್ತದೆ.

*ಕ್ಯಾಶ್‌ಬ್ಯಾಕ್‌ ಹಣ ಕನಿಷ್ಠ ₹250 ಆದ ಬಳಿಕ ಅದು ನೇರವಾಗಿ ಗ್ರಾಹಕರ ಖಾತೆಗೆ ವರ್ಗಾವಣೆ ಆಗುತ್ತದೆ. ಚೆಕ್‌ ರೂಪದಲ್ಲಿಯೂ ಹಣ ಪಡೆಯುವ ಆಯ್ಕೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT