ದೇವರಿಗೇ ಕ್ಯಾಸ್ಟ್‌ ಸರ್ಟಿಫಿಕೇಟ್‌ !

7

ದೇವರಿಗೇ ಕ್ಯಾಸ್ಟ್‌ ಸರ್ಟಿಫಿಕೇಟ್‌ !

Published:
Updated:
Deccan Herald

‌‘ಅಂಜನಾತನಯ, ಏನಿದು ಅಪ್ಲಿಕೇಶನ್... ಯಾವುದಾದರೂ ಜಾಬ್‌ಗೆ ಅಪ್ಲೈ ಮಾಡುತ್ತಿರುವೆಯಾ?’ ಸಹಜ ಕುತೂಹಲದಲ್ಲಿ ಹನುಮಾನ್‌ಗೆ ಕೇಳಿದ ಲಕ್ಷ್ಮಣ.

‘ಹಾಗೇನಿಲ್ಲ ಚಿಕ್ಕ ಧಣಿ. ಭರತಖಂಡದ ‘ಉತ್ತರ’ದ ರಾಜಕುಮಾರನೊಬ್ಬ ನಾನು ದಲಿತ ಎಂದು ಫರ್ಮಾನು ಹೊರಡಿಸಿದ್ದಾನೆ. ಅದಕ್ಕಾಗಿ, ನನ್ನ ಕ್ಯಾಸ್ಟ್ ಸರ್ಟಿಫಿಕೇಟ್‌ಗೆ ಬ್ರಹ್ಮನ ಬಳಿ ಸಹಿ ಮಾಡಿಸಿಕೊಳ್ಳಲು ಹೋಗುತ್ತಿದ್ದೇನೆ'.

‘ಸರಿ ಸರಿ. ಆದರೆ, ಅದೇ ರಾಜಕುಮಾರನ ಪಕ್ಷದವರು ನಿನ್ನನ್ನು ಆರ್ಯ ಜಾತಿಯ ಮಹಾ ಪುರುಷ ಎಂದಿದ್ದಾರಲ್ಲ. ಜಾತಿ ಕಾಲಂನಲ್ಲಿ ಏನಂತ ಬರೆಸುತ್ತೀಯಾ?’ ಲಕ್ಷ್ಮಣ ಲಕ್ಷಣವಾಗಿ ಮತ್ತೊಂದು ಪ್ರಶ್ನೆ ಎಸೆದ.

'ಅದೇ ನನಗೂ ಕನ್ಫ್ಯೂಸ್ ಆಗ್ತಿದೆ. ಈ ಬಗ್ಗೆ ಬ್ರಹ್ಮನನ್ನೇ ಕಂಡು ಮಾತನಾಡಿ, ನನ್ನ ನಿಜವಾದ ಜಾತಿ ಯಾವುದು ಹೇಳು ಎಂದು ಕೇಳಬೇಕೆಂದಿದ್ದೇನೆ. ಆದರೂ, ನನ್ನ ಪರ್ಸನಲ್ ಮ್ಯಾಟರ್‌ನ ಹೀಗೆ ಓಪನ್ ಆಗಿ ಚರ್ಚಿಸ್ತಿರೋದಕ್ಕೆ ತುಂಬಾ ಸಿಟ್ಟು ಬರ್ತಿದೆ' ಆಂಜನೇಯ ಅಸಮಾಧಾನ ವ್ಯಕ್ತಪಡಿಸಿದ. ‘ನನ್ನನ್ನೇ ಬಿಡದವರು, ನಿನ್ನನ್ನು ಬಿಟ್ಟಾರೆಯೇ ಮಾರುತಿ?’ ಎನ್ನುತ್ತಾ ನಸುನಗುವಿನೊಂದಿಗೆ ಶ್ರೀರಾಮ ಪ್ರವೇಶಿಸಿದ. 'ಆದರೂ ದೇವ, ಭರತ ಖಂಡದ ಪ್ರತೀ ಹಳ್ಳಿಯಲ್ಲಿ ನನ್ನ ದೇವಸ್ಥಾನಗಳಿವೆ. ನನ್ನ ಜಾತಿ, ಕುಲ, ಕುಟುಂಬ, ಮನೆತನ ಯಾವೊಂದನ್ನೂ ಕೇಳದೇ ಜನ ನನ್ನನ್ನು ಪೂಜಿಸುತ್ತಿದ್ದಾರೆ. ಈಗ ಒಂದು ಜಾತಿಗೆ ನನ್ನನ್ನು ಸೀಮಿತಗೊಳಿಸುತ್ತಿರೋದಕ್ಕೆ ಬೇಸರವಾಗ್ತಿದೆ' ಕೈ ಮುಗಿದು ನಿಂತೇ ತನ್ನ ಅಳಲನ್ನು ತೋಡಿಕೊಂಡ ಆಂಜನೇಯ.

'ಎಲ್ಲದಕ್ಕೂ ಕಾಲವೇ ಉತ್ತರ ಹೇಳುತ್ತದೆ, ಚಿಂತಿಸದಿರು ಹನುಮ' ಎಂದು ಶ್ರೀರಾಮ ಸಮಾಧಾನ ಹೇಳಿದ. ಆಂಜನೇಯ ಮುಂದುವರಿದು ಕೇಳಿದ, 'ಆದರೂ, ಈ ನರ ಮಾನವರು ನಮ್ಮ ತಂಟೆಗೆ ಬರದಿರಲು ಏನು ಮಾಡಬೇಕು?' 'ಚುನಾವಣೆ ಬೇಗ ಮುಗಿಸಬೇಕು!' ಎಂದ ರಾಮ.‌

‘ಇನ್ನೂ ಮಲಗಿದ್ದೀಯಲ್ಲೋ... ಇವತ್ತು ಶನಿವಾರ. ಎದ್ದು ಸ್ನಾನ ಮಾಡಿ ಹನುಮಪ್ಪನ ಗುಡಿಗೆ ಹೋಗಿ ಬಾ’ ಎಂದು ಅಮ್ಮ ಮುಖಕ್ಕೆ ನೀರೆರಚುತ್ತಿದ್ದಂತೆ ನಿದ್ದೆಯಿಂದೆದ್ದೆ.

ಬರಹ ಇಷ್ಟವಾಯಿತೆ?

 • 43

  Happy
 • 8

  Amused
 • 4

  Sad
 • 1

  Frustrated
 • 2

  Angry

Comments:

0 comments

Write the first review for this !