ಶನಿವಾರ, ಮಾರ್ಚ್ 6, 2021
32 °C
ಸ್ವಚ್ಛ ವಿಜಯಪುರ ನಿರ್ಮಾಣಕ್ಕಾಗಿ ಮಹಾನಗರ ಪಾಲಿಕೆ ಆಡಳಿತದ ಸಂಕಲ್ಪ

ಶಾಲಾ ಮಕ್ಕಳಿಗೆ ಸ್ವಚ್ಛತೆಯ ಪಾಠ..!

ಡಿ.ಬಿ.ನಾಗರಾಜ Updated:

ಅಕ್ಷರ ಗಾತ್ರ : | |

Deccan Herald

ವಿಜಯಪುರ: ದೇಶ–ವಿದೇಶಿ ಪ್ರವಾಸಿಗರನ್ನು ತನ್ನತ್ತ ಸೂಜಿಗಲ್ಲಿನಂತೆ ಆಕರ್ಷಿಸುವ ವಿಜಯಪುರದಲ್ಲಿ ಸ್ವಚ್ಛತೆಯದ್ದೇ ಸಮಸ್ಯೆ. ಐತಿಹಾಸಿಕ ಸ್ಮಾರಕಗಳ ಸ್ಥಳದಲ್ಲೂ ಅನೈರ್ಮಲ್ಯ ಬೆಂಬಿಡದ ಬೇತಾಳದಂತೆ ಕಾಡುತ್ತಿತ್ತು. ಮಹಾನಗರ ಪಾಲಿಕೆ ಆಡಳಿತ ಅಸ್ತಿತ್ವಕ್ಕೆ ಬಂದು ಐದು ವರ್ಷದ ಆಸುಪಾಸಾದರೂ; ಸುಧಾರಣೆ ಎಂಬುದು ಗಗನ ಕುಸುಮವಾಗಿತ್ತು.

ಪ್ರವಾಸಿಗರು ಕೆಲ ಸ್ಮಾರಕಗಳ ಬಳಿ ಮೂಗು ಮುಚ್ಚಿಕೊಂಡೇ ಸಂಚರಿಸುತ್ತಿದ್ದರು. ಜಾಗತಿಕ ಮಟ್ಟದಲ್ಲಿ ವಿಜಯಪುರದ ಮಾನ ಹರಾಜಾಗುತ್ತಿತ್ತು. ಈ ಬಗ್ಗೆ ಸಾಕಷ್ಟು ಬಾರಿ ಗಮನ ಸೆಳೆದರೂ ಸ್ಪಂದನೆ ಮಾತ್ರ ಶೂನ್ಯವಾಗಿತ್ತು... ಇದು ಸ್ವಚ್ಛತೆ, ಪಾಲಿಕೆ ಕಾರ್ಯವೈಖರಿ ಬಗ್ಗೆ ಇದೂವರೆಗಿದ್ದ ದೂರಾಗಿತ್ತು.

ಮಹಾನಗರ ಪಾಲಿಕೆಯ ಆಡಳಿತ ವರ್ಗ ಇದೀಗ ಒಂದೆರೆಡು ತಿಂಗಳಿಂದ ಸ್ವಚ್ಛತೆಗೆ ಒತ್ತು ನೀಡಿದೆ. ಇದಕ್ಕಾಗಿ ಸ್ವಚ್ಛ ವಿಜಯಪುರ ಅಭಿಯಾನ ಹಮ್ಮಿಕೊಂಡಿದ್ದು, ಹಲ ಕಾರ್ಯಕ್ರಮ ರೂಪಿಸಿ, ಅನುಷ್ಠಾನಕ್ಕೆ ತರುತ್ತಿದೆ. ಇದರ ಪರಿಣಾಮ ವಿಜಯಪುರದ ಅನೈರ್ಮಲ್ಯದ ಚಿತ್ರಣ ಬದಲಾಗುತ್ತಿದೆ.

ಸ್ವಚ್ಛ ವಿಜಯಪುರಕ್ಕಾಗಿ ಮಹಾನಗರ ಪಾಲಿಕೆ ಆಡಳಿತ ಕಸ ಚೆಲ್ಲುವ ಸ್ಥಳದಲ್ಲಿ ನಸುಕಿನಲ್ಲೇ ರಂಗೋಲಿ ಹಾಕುವ ಅಭಿಯಾನ, ಶಾಲಾ ಮಕ್ಕಳಲ್ಲಿ ಜಾಗೃತಿ ಮೂಡಿಸುವಿಕೆ, ಬೀದಿ ನಾಟಕಗಳ ಮೂಲಕ ಗಲ್ಲಿ ಗಲ್ಲಿಗಳಲ್ಲೂ ಜಾಗೃತಿ ಮೂಡಿಸುವುದು, ಮಹಿಳಾ ಕ್ರಿಕೆಟ್‌ ಆಟಗಾರ್ತಿ ರಾಜೇಶ್ವರಿ ಗಾಯಕವಾಡ್‌ ಅವರನ್ನು ಸ್ವಚ್ಛ ರಾಯಭಾರಿಯನ್ನಾಗಿ ನೇಮಿಸಿಕೊಂಡು ಅರಿವು ಮೂಡಿಸಲು ಯತ್ನಿಸುವ ಜತೆ ಜತೆಯಲ್ಲೇ, ಮಧ್ಯಾಹ್ನದ ನಂತರ ಒಂದೊಂದು ಬಡಾವಣೆಯಲ್ಲಿ ಪೌರ ಕಾರ್ಮಿಕರ ತಂಡ ರಚಿಸಿಕೊಂಡು, ಸಾಮೂಹಿಕವಾಗಿ ಸ್ವಚ್ಛತಾ ಕೆಲಸ ನಿರ್ವಹಿಸುತ್ತಿರುವುದರ ಪರಿಣಾಮ ನಗರದ ವಿವಿಧೆಡೆ ಇದೀಗ ಸ್ವಚ್ಛತೆ ಗೋಚರಿಸುತ್ತಿದೆ.

‘ಪಾಲಿಕೆಯ ನಾಲ್ವರು ಸಿವಿಲ್‌ ಎಂಜಿನಿಯರ್‌ಗಳಿಗೆ ಹೆಚ್ಚುವರಿ ಹೊಣೆಯನ್ನಾಗಿ ಪರಿಸರ, ಸ್ವಚ್ಛತೆಯ ಉಸ್ತುವಾರಿ ನೀಡಿದ್ದು, ಇವರ ಮೇಲ್ವಿಚಾರಣೆಯಲ್ಲಿ ನಿತ್ಯ ರಾತ್ರಿ 16 ವಾಹನಗಳು ಅಂಗಡಿ, ಅಂಗಡಿ ಸಂಚರಿಸಿ ಕಸ ಸಂಗ್ರಹಿಸುವುದು, ಮುಂಜಾನೆ ಮನೆ, ಮನೆಗೆ ತೆರಳಿ ಕಸ ಸಂಗ್ರಹಿಸುವ ಕೆಲಸ ನಿರ್ವಹಿಸುತ್ತಿರುವ ಪರಿಣಾಮ ನಗರದ ಚಿತ್ರಣ ಬದಲಾವಣೆಯ ಪಥದಲ್ಲಿ ಸಾಗುತ್ತಿದೆ’ ಎಂದು ಮಹಾನಗರ ಪಾಲಿಕೆಯ ಆಯುಕ್ತ ಡಾ.ಔದ್ರಾಮ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ತಿಂಗಳಿಂದ ಸ್ವಚ್ಛತೆಯ ಪಾಠ
‘ನಗರದ ಸ್ವಚ್ಛತೆಗೆ ಹಲವು ದಿಟ್ಟ ಕ್ರಮ ತೆಗೆದುಕೊಳ್ಳುವ ಜತೆ ಜಾಗೃತಿ ಮೂಡಿಸುವುದು ನಡೆದಿದೆ. ಹಲವು ಹಂತಗಳಲ್ಲಿ ಜಾಗೃತಿ ಅಭಿಯಾನ ನಡೆದಿದ್ದು, ಶಾಲಾ ಮಕ್ಕಳಿಗೆ ಪರಿಸರ ಮಾಲಿನ್ಯ ತಡೆಗಟ್ಟುವಿಕೆ, ತಮ್ಮ ಸುತ್ತಲಿನ ಪರಿಸರದಲ್ಲಿ ಸ್ವಚ್ಛತೆಯನ್ನು ಯಾವ ರೀತಿ ಕಾಪಾಡಿಕೊಳ್ಳಬೇಕು ಎಂಬುದರ ಬಗ್ಗೆ ನಿತ್ಯವೂ ತಿಳಿ ಹೇಳಲಾಗುವ ಕಾರ್ಯಕ್ರಮ ರೂಪಿಸಿಕೊಳ್ಳಲಾಗಿದೆ’ ಎಂದು ಔದ್ರಾಮ್ ತಿಳಿಸಿದರು.

‘ದಸರಾ ರಜೆಯ ಬಳಿಕ ಡಿಡಿಪಿಐ ಸಹಕಾರದೊಂದಿಗೆ ವಿನೂತನ ಅಭಿಯಾನ ನಡೆಸುತ್ತಿದ್ದೇವೆ. ಮಹಾನಗರ ಪಾಲಿಕೆಯ 12 ಆರೋಗ್ಯ ನಿರೀಕ್ಷಕರು ತಮ್ಮ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲಾ–ಕಾಲೇಜುಗಳಿಗೆ ಭೇಟಿ ನೀಡಿ, ಸ್ವಚ್ಛತೆಯ ಕುರಿತಂತೆ ಐದು ನಿಮಿಷದ ಸ್ವಚ್ಛತಾ ಪಾಠ ಬೋಧಿಸುತ್ತಿದ್ದಾರೆ.

ಸತತ ಒಂದು ತಿಂಗಳಿನಿಂದ ಈ ಕಾರ್ಯಕ್ರಮ ನಡೆದಿದ್ದು, ಇದೂವರೆಗೂ 150ಕ್ಕೂ ಹೆಚ್ಚು ಶಾಲೆಗಳನ್ನು ತಲುಪಲಾಗಿದೆ. ಇದರ ಪರಿಣಾಮ ರಸ್ತೆಯಲ್ಲಿ ಕಸ ಚೆಲ್ಲುವುದು ಶೇ 20ರಷ್ಟು ಕಡಿಮೆಯಾಗಿದೆ’ ಎಂದು ಆಯುಕ್ತರು ಹೇಳಿದರು.

‘ಆರೋಗ್ಯ ನಿರೀಕ್ಷಕರು ಶಾಲೆಯ ಆರಂಭದ ಅವಧಿ, ಪ್ರಾರ್ಥನಾ ಸಮಯಕ್ಕೆ ಸರಿಯಾಗಿ ಹಾಜರಾಗುತ್ತಾರೆ. ಕೆಲವೆಡೆ ತರಗತಿ ಅವಧಿಯಲ್ಲಿ ಭೇಟಿ ನೀಡುತ್ತಾರೆ. ನೆರೆದಿರುವ ಮಕ್ಕಳಿಗೆ ಪರಿಸರದ ಬಗ್ಗೆ ಮನದಟ್ಟಾಗುವಂತೆ ವಿವರಣೆ ನೀಡುತ್ತಾರೆ. ಯಾವ ರೀತಿ ಪರಿಸರ ಮಾಲಿನ್ಯಕ್ಕೀಡಾಗುತ್ತಿದೆ. ಇದನ್ನು ತಡೆಗಟ್ಟಲು ನಮ್ಮಿಂದ ಏನು ಮಾಡಬೇಕು ಎಂಬುದನ್ನು ತಿಳಿಸುತ್ತಾರೆ.

ಕಸವನ್ನು ರಸ್ತೆಗೆ ಚೆಲ್ಲಬಾರದು. ಮನೆಯಲ್ಲೇ ಹಸಿ ಕಸ, ಒಣ ಕಸ ಪ್ರತ್ಯೇಕಿಸಬೇಕು. ಪ್ಲಾಸ್ಟಿಕ್‌ ನಿಷೇಧಿಸಲಾಗಿದೆ. ಆದರೂ ಬಳಕೆ ಮಾಡುತ್ತಿದ್ದಾರೆ. ಇದು ಪರಿಸರಕ್ಕೆ ಒಳಿತಲ್ಲ. ಬಟ್ಟೆಯ ಚೀಲ ಬಳಸಬೇಕು. ಸ್ವಚ್ಛ ವಿಜಯಪುರ ನಗರ ನಿರ್ಮಾಣಕ್ಕೆ ನೀವುಗಳು ಸಾಥ್‌ ನೀಡಬೇಕು. ನಿಮ್ಮ ಪೋಷಕರ ಮನೋಭಾವ ಬದಲಿಸಬೇಕು ಎಂದು ಮನದಟ್ಟಾಗುವಂತೆ ವಿವರಿಸುತ್ತಾರೆ.

ಇದಕ್ಕೆ ಮಕ್ಕಳಿಂದಲೂ ಸ್ಪಂದನೆ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಇದನ್ನು ಇನ್ನೂ ಮುಂದುವರೆಸುತ್ತೇವೆ. ಹಂತ ಹಂತವಾಗಿ ಯಶಸ್ವಿಯಾಗುತ್ತೇವೆ ಎಂಬ ವಿಶ್ವಾಸ ಇದೀಗ ಪಾಲಿಕೆ ಸಿಬ್ಬಂದಿಯಲ್ಲಿ ಮೂಡುತ್ತಿದೆ’ ಎಂದು ಔದ್ರಾಮ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು