ಹಕ್ಕು ಭಿಕ್ಷೆಯಾಗಿಸುವ ತಿಮಿಂಗಿಲಗಳು

7
ಹಕ್ಕಾಗಿ ತುಂಬಿಕೊಳ್ಳಬೇಕಾಗಿದ್ದ ಕಾಳು ತಕ್ಕಡಿಯಿಂದ ಭಿಕ್ಷೆಯಾಗಿ ಜಾರುತ್ತದೆ

ಹಕ್ಕು ಭಿಕ್ಷೆಯಾಗಿಸುವ ತಿಮಿಂಗಿಲಗಳು

Published:
Updated:
Deccan Herald

ಅನೇಕ ವರ್ಷಗಳಿಂದ ‘ಆಹಾರದ ಹಕ್ಕಿಗಾಗಿ ಆಂದೋಲನ’ ಹೇಳುತ್ತಲೇ ಬಂದ ಆಹಾರ ವಿತರಣಾ ಸಮಸ್ಯೆಗಳನ್ನು ಈ ಪತ್ರಿಕೆಯು (ಒಳನೋಟ, ಡಿ.9) ಬಯಲಿ ಗೆಳೆದಿದೆ. ಜೊತೆಗೆ ಸಾಮಾಜಿಕ ಹೋರಾಟಗಾರರು ದನಿ ಎತ್ತದಿದ್ದರೆ ಮಹತ್ತರ ಆಶಯದ ಯೋಜನೆಯೊಂದು ನೆಲ ಕಚ್ಚುತ್ತದೆ ಎಂಬ ಕಳವಳವನ್ನೂ ಮುಂದಿಟ್ಟಿದೆ.

ಅನೇಕ ಹೋರಾಟಗಳ ಫಲವಾಗಿ ಬಂದಿದ್ದು ಆಹಾರ ಭದ್ರತಾ ಕಾನೂನು. 2013ರಲ್ಲಿ ಅಂಕದ ಪರದೆ ಜಾರುವ ಮುನ್ನ ಆಡಳಿತದ ಕೊನೆಯ ಸೀನಾಗಿ ಯುಪಿಎ ಸರ್ಕಾರ ರಾಷ್ಟ್ರೀಯ ಆಹಾರ ಭದ್ರತಾ ಕಾನೂನನ್ನು ಅಂಗೀಕರಿಸಿತು. ಸರ್ವ ಜನರ ಮಧ್ಯೆ ಇದ್ದು ಆಯ್ಕೆಯಾಗುವವರೆಗೂ ‘ಎಲ್ಲರಿಗೂ ಸಿಗಲಿ’ ಎಂದು ಸಾರ್ವತ್ರೀಕರಣದ ಮಾತಾಡಿದ್ದ ಪಕ್ಷ ವೇದಿಕೆಯೇರಿ ಮುಖ ತಿರುಗಿಸುವ ಹೊತ್ತಿಗೆ ಅದರ ಮುಖದ ಭಾವವೇ ಬದಲಾಗಿದ್ದನ್ನು ಎಲ್ಲರೂ ಕಂಡರು, ಅನುಭವಿಸಿದರು. ಜಾರಿಗೊಳ್ಳಬೇಕಾಗಿದ್ದ ಕಾನೂನನ್ನು ಪೂರ್ತಿಯಾಗಿ ಮೂರು ವರ್ಷ ತಡೆ ಹಿಡಿದು ಪರದೆಯ ಹಿಂದಣ ಅನಾಚಾರಕ್ಕೆ ಪೂರ್ತಿ ಅವಕಾಶ ಕೊಟ್ಟಿದ್ದು ಕೇಂದ್ರ ಸರ್ಕಾರ.

ಮತ್ತೆ ಮತ್ತೆ ಜನಾಂದೋಲನಗಳಾದಾಗ, ಸಾಮಾಜಿಕ ಕಾರ್ಯಕರ್ತರಿಂದ ಹಕ್ಕೊತ್ತಾಯಗಳಾದಾಗ, ಕಡೆಗೂ ನಾಲ್ಕನೇ ವರ್ಷದಲ್ಲಿ ‘ರಾಷ್ಟ್ರೀಯ ಆಹಾರ ಭದ್ರತಾ ಕಾನೂನು’ ಜಾರಿಗೊಂಡಿತು. ಅದೂ ಹೇಗೆ? ಕತ್ತು, ಕಾಲುಕೈಗಳೆಲ್ಲ ಮುರಿದ ವಿಕಲಾಂಗ ಸ್ಥಿತಿಯಲ್ಲಿ. ಯಾರಿಗೆ ಈ ದೇಶದ ನಾಗರಿಕರಾಗಿ ಸಂವಿಧಾನದ ಪ್ರಕಾರ ಘನತೆಯಿಂದ ಬದುಕಲಿಕ್ಕಾಗಿ ತುತ್ತು ಕೂಳಿನ ಜರೂರತ್ತಿತ್ತೋ ಅಂಥವರಿಗೆ ಅದು ಸಿಗಲೇಬಾರದಂಥ ಸ್ಥಿತಿಯಲ್ಲಿ. ಆಧಾರ್, ಬಯೊಮೆಟ್ರಿಕ್, ಪಿಓಎಸ್ ಮಶೀನುಗಳೆಂದು ಹೊರಗಡೆಯಿಂದ ನೋಡಲು, ಕೇಳಲು ಅತ್ಯಾಧುನಿಕ ತಂತ್ರಜ್ಞಾನದ, ಆದರೆ ಒಳಗೆ ನಿರಾಕರಣೆಯೇ ಮಂತ್ರವಾಗುಳ್ಳ ಸಾಧನಗಳನ್ನು ಕೂಡ್ರಿಸಿ, ಮನುಷ್ಯ ಮನುಷ್ಯನನ್ನು ಗುರುತಿಸಲಾಗದಂಥ ವ್ಯವಸ್ಥೆಯ ನಿರ್ಮಾಣ ಮಾಡಿ ಜಾರಿಗೊಂಡಿತು ಕಾನೂನು. ದೇಶದ ಪ್ರಜೆಗಳಾಗಿ ನಿಮ್ಮನ್ನು ಪಟ್ಟಕ್ಕೇರಿಸುವಂತಹ ಬಡ, ಅನಕ್ಷರಸ್ಥ, ಆದಿವಾಸಿ ಜನರಿಗೆ ಬದ್ಧತೆಯಿಂದ ಸರ್ಕಾರ ಕೊಡಲೇಬೇಕಾದ ಆಹಾರ, ಆರೋಗ್ಯ, ಶಿಕ್ಷಣಗಳ ಮಧ್ಯೆ ‘ಆಧಾರ್‌’ ತರಬೇಡಿರೆಂದು ಜನಾಂದೋಲನಗಳು ಮೊರೆ ಇಡುತ್ತಿದ್ದರೂ ಲೆಕ್ಕಿಸದೆ ‘ಆಧಾರ್‌’ ಭೂತವನ್ನು ತಂದು ಮಧ್ಯೆ ನಿಲ್ಲಿಸಲಾಯಿತು. ಹತ್ತಾರು ರಾಜ್ಯಗಳ ಹತ್ತಾರು ಜಿಲ್ಲೆಗಳ ಸಾವಿರಾರು ಮಂದಿ ಸಲ್ಲಿಸಿದ ಹಕ್ಕೊತ್ತಾಯಗಳೂ ಬದಲಿಸಲಾಗದಷ್ಟು ಘೋರ ಮುಷ್ಟಿಯಲ್ಲಿ ಬಂದಿಯಾಗಿವೆಯೇ ನಮ್ಮ ನೀತಿಗಳು? ಖಂಡಿತ ಬಂದಿಯಾಗಿವೆಯೆಂದು ಈ ಪತ್ರಿಕೆಯ ವರದಿಯೇ ಸಾರುತ್ತಿದೆ.

ವಿತರಣೆ ಸಾರ್ವತ್ರಿಕವಾಗಿದ್ದಾಗ ಮಾತ್ರ ಬಡವರಿಗೆ ಆಹಾರ ಸಿಗಲು ಸಾಧ್ಯ, ಎಲ್ಲರಿಗೂ ಒಂದೇ ರೀತಿಯ ಕಾರ್ಡು
ಗಳಿರಲಿ ಎಂದು ಇನ್ನಿಲ್ಲದಂತೆ ಸ್ವತಃ ಸರ್ಕಾರವೇ ರಚಿಸಿದ ಉನ್ನತ ಸಮಿತಿಯಲ್ಲಿದ್ದುಕೊಂಡು ಜಾನ್ ಡ್ರೀಝ್, ಅರುಣಾ ರಾಯ್ ಅಂಥವರು ಒತ್ತಾಯಿಸಿದರೂ ಜನರನ್ನು ಗುಂಪುಗಳನ್ನಾಗಿ ವಿಂಗಡಿಸಿಯೇಬಿಟ್ಟಿತು ಸರ್ಕಾರ. ಎಪಿಎಲ್, ಬಿಪಿಎಲ್‌ಗಳ ಬದಲಿಗೆ ಅಂತ್ಯೋದಯ, ಆದ್ಯತೆಯ ಗುಂಪುಗಳು. ಆದರೇನು ಇನ್ನೂವರೆಗೆ ಶಿಕ್ಷಣ, ಆರೋಗ್ಯ ಯೋಜನೆಗಳಿಗೆ ಬಿಪಿಎಲ್ ಕಾರ್ಡುಗಳಿಗೆ ಆದ್ಯತೆ ಮುಂದುವರೆಸುವ ಮೂಲಕ ಸರ್ಕಾರವು ತಾನೇ ಮಾಡಿದ ಕಾನೂನನ್ನು ತಾನೇ ಉಲ್ಲಂಘಿಸಿ ಬಿಪಿಎಲ್ ಕಾರ್ಡುಗಳನ್ನು ಕೊಡುತ್ತಿದೆ. ಸ್ವಗೌರವ ಕೂಡ ಇರದಂತೆ ತಿರುಚಿಕೊಂಡ ಕಾನೂನಿದು.

ಬಯೊಮೆಟ್ರಿಕ್ ಎಂಬುದು ಜನರ ಪಾಲಿಗಂತೂ ‘ಭಯೋಮೆಟ್ರಿಕ್’ ಆಗಿಬಿಟ್ಟಿದೆ. ರೇಶನ್‌ಗೆಂದು ಚೀಲ ಹಿಡಿದು ಹೋಗುವಾಗ ಆ ಚೀಲದಲ್ಲಿ ಆಹಾರ ತುಂಬಿಕೊಂಡು ಬರುವ ಭರವಸೆಯೇ ಉಳಿದಿಲ್ಲ. ಥಂಬು ಹೊಂದದೇ ವಾಪಸಾಗುವರು ಹಲವರು, ಇಬ್ಬರ ಆಧಾರ್ ಜೋಡಣೆ ಆಗಿದ್ದರೆ ಇನ್ನು ಮೂವರ ಆಧಾರ್ ಜೋಡಣೆ ಆಗಿಲ್ಲವೆಂದು ಅವರ ರೇಶನ್ ನಿರಾಕರಣೆ ಆಗಿ ಅರ್ಧ ಚೀಲ ತುಂಬಿಕೊಂಡು ಬರುವವರು ಹಲವರು. ‘ಹೋಗಲಿಬಿಡಿ, ಬಂದದ್ದಷ್ಟನ್ನೇ ಹಾಕಿ’ ಎಂದು ಚೀಲವನ್ನೊಡ್ಡಿದಾಗ ಹಕ್ಕಾಗಿ ತುಂಬಿಕೊಳ್ಳಬೇಕಾಗಿದ್ದ ಕಾಳು ತೂಕದ ತಟ್ಟೆಯಿಂದ ಭಿಕ್ಷೆಯಾಗಿ ಜಾರುತ್ತದೆ. ‘ಎಲ್ಲರದ್ದೂ ಬರಬೇಕಾಗಿದ್ದು ಹೋಯಿತೆಲ್ಲಿಗೆ’ ಎಂದು ಮುಷ್ಟಿ ಬಿಗಿದು ಮೇಜು ಗುದ್ದಿ ಕೇಳಬೇಕಾಗಿದ್ದ ನಾಗರಿಕಳು ‘ಇಷ್ಟಾದರೂ ಬಂತಲ್ಲ’ ಎಂದು, ‘ಮುಂದಿನ ರೇಶನ್ ಬರುವವರೆಗೆ ಇಷ್ಟು ಅಕ್ಕಿಯಲ್ಲಿ ಎಷ್ಟು ಜನಕ್ಕೆ ಉಣಬಡಿಸಲಿ’ ಎಂದು ಕಣ್ಣಂಚಿನ ನೀರಹನಿಯನ್ನು ಒರೆಸಿಕೊಳ್ಳುತ್ತ ತಲೆತಗ್ಗಿಸಿಕೊಂಡು ಹಿಂದಿರುಗುತ್ತಾಳೆ. ಗೌರವದ ಬದುಕು ಆ ಕಣ್ಣೀರೊಂದಿಗೆ ಮಣ್ಣು ಸೇರಿರುತ್ತದೆ.

ಗರ್ಭಿಣಿಗೆ ಮಧ್ಯಾಹ್ನದ ಬಿಸಿಯೂಟ ಮತ್ತು ಗರ್ಭಿಣಿಯಾದ 6 ತಿಂಗಳಿನಿಂದ ಮಗು ಜನಿಸಿದ ಮೂರು ತಿಂಗಳವರೆಗೂ ₹6000ಕ್ಕೆ ಕಡಿಮೆಯಿಲ್ಲದಂತೆ ಸಾಮಾಜಿಕ ಭದ್ರತಾ ವೇತನ ಕೊಡಬೇಕು ಎಂದಿದ್ದ ಕಾನೂನು ಅದು ಜಾರಿಗೊಳ್ಳುವ ಹೊತ್ತಿಗೆ ₹1000 ಕಳೆದು
ಕೊಂಡಿದ್ದಲ್ಲದೇ ನಿಬಂಧನೆಗಳ ಭಾರದಿಂದ ಜೋಲಾಡತೊಡಗಿತ್ತು. ಮಾತೆಯರಿಗೆ ವಂದಿಸುವ ಪ್ರಧಾನ ಮಂತ್ರಿ
ಗಳ ಈ ಯೋಜನೆಯು ಬಡ, ಅನಕ್ಷರಸ್ಥ, ಹಿಂದುಳಿದ ವರ್ಗಗಳ ಮಹಿಳೆಯರಿಗೆ ಸಿಗಲಿಕ್ಕೇ ಸಾಧ್ಯವಿಲ್ಲ.

ದೆಹಲಿಯ ಸಾಮಾಜಿಕ ಕಾರ್ಯಕರ್ತೆ, ಹೋರಾಟಗಾರ್ತಿ ಡಾ. ವಂದನಾ ಪ್ರಸಾದ್‌ ಎಂಬುವರು ಮಾಹಿತಿ ಹಕ್ಕಿನ ಕಾನೂನಿನಡಿ ಕಾರ್ಮಿಕ ಸಚಿವಾಲಯಕ್ಕೆ ಮಾಹಿತಿ ಹಕ್ಕಿನಡಿ ಅರ್ಜಿ ಹಾಕಿದರು. ‘ಮಹಿಳಾ ಕಟ್ಟಡ ಕಾರ್ಮಿಕರು, ಮಹಿಳಾ ಗೃಹ ಕಾರ್ಮಿಕರು ಮತ್ತು ಮಹಿಳಾ ಕೂಲಿಕಾರರಲ್ಲಿ ಕಳೆದ ಐದು ವರ್ಷದಲ್ಲಿ ಎಷ್ಟು ಜನರಿಗೆ ಮಾತೃತ್ವದ ಸಾಮಾಜಿಕ ಭದ್ರತಾ ಮೊತ್ತ ತಲುಪಿದೆ? ಎಷ್ಟು ಮಹಿಳೆಯರು ಅಸಂಘಟಿತ ವಲಯದಲ್ಲಿದ್ದಾರೆ, ಕಾನೂನಿನಲ್ಲಿ ಮಾಡಿರುವ ಬದಲಾವಣೆಯಿಂದ ಅಸಂಘಟಿತ ವಲಯದ ಮಹಿಳೆಯರಿಗೆ ತಲುಪಿಸಲು ಏನು ಯೋಜನೆಗಳಿವೆ?’ ಎಂದು ಈ ಅರ್ಜಿಯಲ್ಲಿ ಕೇಳಿದರು. ‘ಆ ದಾಖಲೆಯನ್ನಿಟ್ಟಿಲ್ಲ, ಈ ದಾಖಲೆ ನಮ್ಮ ಬಳಿ ಇಲ್ಲ’ ಎಂದೇ ಉತ್ತರಗಳು.

ಮಾಹಿತಿ ಆಯೋಗಕ್ಕೆ ದೂರು ನೀಡಿದ ಫಲವಾಗಿ ಅದು ಕಾರ್ಮಿಕ ಸಚಿವಾಲಯಕ್ಕೆ ಚಾಟಿಯೇಟು ಬೀಸಿ ತಕ್ಷಣವೇ ದಾಖಲೆಗಳೊಂದಿಗೆ ಉತ್ತರ ನೀಡಬೇಕೆಂದು ಹೇಳಿದೆ. ಆದರೇನು, ಕಾನೂನಿನಲ್ಲಿ ಮಾಡಿರುವ ರಂಧ್ರಗಳ ಮೂಲಕ ಹಣ ಹರಿಸಿ ತಮಗೆಷ್ಟು ಬಂತು ಎಂದು ಲೆಕ್ಕ ಹಾಕುತ್ತಿರುವ ಅಧಿಕಾರಿಗಳಿಗೆ, ಮಹಿಳೆಯರಿಗೆ ಮಾತೃವಂದನೆ ಸಿಕ್ಕಿತೋ ಇಲ್ಲವೋ ಲೆಕ್ಕ ಇಡಲು ಪುರುಸೊತ್ತೆಲ್ಲಿದೆ? ಒಂದು ಕಾನೂನನ್ನು ತಿರುಚುವ ಮೂಲಕ, ತಡ ಮಾಡುವ ಕೇಂದ್ರ ಸರ್ಕಾರವು ತನ್ನ ಕೆಳಗಿನ ಸರ್ಕಾರಕ್ಕೆ ಸಂದೇಶ ರವಾನಿಸಿತ್ತು, ತಾನೇನೂ ಈ ಕಾನೂನಿನ ಬಗ್ಗೆ ಗಂಭೀರವಾಗಿಲ್ಲ, ಈ ಕಾನೂನಿನ ಜಾರಿಗೆ ತನಗೆ ಒಂದಿನಿತೂ ಆಸಕ್ತಿ ಇಲ್ಲ ಎಂದು. ಆದರೆ ದೊಡ್ಡ ಗಾತ್ರದ ಕಾಳಿನ ಚೀಲಗಳಿದ್ದುವಿಲ್ಲಿ. ಅವನ್ನು ಪರಿಗಣಿಸದಿರಲಾಗುತ್ತದೆಯೇ? ಕೇಂದ್ರವು ಕೋಟೆಯನ್ನು ತೂತು ಮಾಡುತ್ತ ಹೋದಂತೆ ಇಲಿ ಹೆಗ್ಗಣಗಳು ಒಳಗೆ ಬಂದು ಸೇರಿಕೊಂಡವು. ಯಾವ ಕಾಳಿನ ಮೂಟೆ ಎಲ್ಲಿಗೆ ಹೋಗಬೇಕು, ಯಾವ ಹಣದ ಚೀಲ ಎಲ್ಲಿ ತಲುಪಬೇಕು ಎಂಬುದೆಲ್ಲ ನಿರ್ಧಾರವಾದವು. ಕೊಳ್ಳೆ ಹೊಡೆಯಲು ಕಿಂಡಿ ಕೊರೆದು ಹೆದ್ದಾರಿಗಳ ನಿರ್ಮಾಣ ಆದನಂತರವೇ ಜಾರಿಯಾದದ್ದು ಆಹಾರ ಭದ್ರತಾ ಕಾನೂನು. ಅಂಥ ಕಾನೂನಿನಿಂದ ಯಾವ ಭದ್ರತೆ ನಿರೀಕ್ಷಿಸಲು ಸಾಧ್ಯ?

ಜಾಗತಿಕ ಪೌಷ್ಟಿಕಾಂಶದ ವರದಿ ಬಿಡುಗಡೆ ಆಗಿದೆ: ಎತ್ತರವಿಲ್ಲದ 4 ಕೋಟಿ 60 ಲಕ್ಷದಷ್ಟು ಮಕ್ಕಳ ಮನೆ ಈ ಭಾರತ. ವಿಶ್ವದಲ್ಲೇ ಅತಿ ಹೆಚ್ಚು ಕುಂಠಿತ ಬೆಳವಣಿಗೆಯ ಮಕ್ಕಳಿರುವ ದೇಶವಿದೆಂದು ಅದು ಸಾರಿದೆ. ಪ್ರತಿ ಐದು ಮಕ್ಕಳಲ್ಲಿ ಇಬ್ಬರು ಕುಂಠಿತ ಬೆಳವಣಿಗೆಯವರು.
ದೇಶದ ಆಹಾರ ಅಭದ್ರತೆ ಇಷ್ಟಿರುವಾಗ ಇದಲ್ಲದೆ ಇನ್ನಾವ ಫಲಿತಾಂಶ ಕಂಡಿದ್ದರೂ ಆಶ್ಚರ್ಯವೇ ಆಗುತ್ತಿತ್ತು. ಆದರದು ಕಾಣುವುದು, ಕಾಡುವುದು ಮಾತ್ರ ಇದನ್ನೋದುವ ಕೆಲವರಿಗೆ ಮಾತ್ರವೇ ಹೊರತು ಕೊಳ್ಳೆ ಹೊಡೆಯುವಲ್ಲಿ ಮಗ್ನರಾಗಿರುವ ಆ ಹಿತಾಸಕ್ತಿಗಳಿಗಲ್ಲ.

ಬರಹ ಇಷ್ಟವಾಯಿತೆ?

 • 6

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !