ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವ ಉದಾರವಾದ: ಮುಕ್ತ ಕಾಶ್ಮೀರ

ಕಲ್ಲೆಸೆಯುವ ಯುವಕರೆಲ್ಲರೂ ಭಾವಿ ಉಗ್ರರು ಎಂಬ ಅಭಿಪ್ರಾಯಕ್ಕೆ ಮನ್ನಣೆ ನೀಡುವ ನಾವು, ಈ ಯುವಕರ ಮನಸ್ಸನ್ನು ಅರಿಯಲು ಯತ್ನಿಸಿಯೇ ಇಲ್ಲ
Last Updated 6 ಆಗಸ್ಟ್ 2019, 20:00 IST
ಅಕ್ಷರ ಗಾತ್ರ

ಸಂವಿಧಾನದ ವಿಧಿಗಳಾದ 370 ಮತ್ತು 35ಎ ವರವಾಗಿದ್ದವೋ ಶಾಪವಾಗಿದ್ದವೋ ಎನ್ನುವುದನ್ನು ಸ್ವತಃ ಕಂಡುಂಡ ಕಾಶ್ಮೀರಿಗರೇ ಹೇಳಿದರೆ ಆ ಮಾತಿಗೆ ಹೆಚ್ಚು ತೂಕ. ಈ ವಿಧಿಗಳು ಜಾರಿಯಲ್ಲಿ ಇದ್ದುದರಿಂದಲೇ ಕಾಶ್ಮೀರದಲ್ಲಿ ಭಯೋತ್ಪಾದನಾ ಚಟುವಟಿಕೆಗಳು ಹೆಚ್ಚಾಗಿದ್ದವು ಎಂದು ಹೇಳುವುದು ಅಪ್ರಬುದ್ಧ ನಿಲುವಿನ ಲಕ್ಷಣ. ವಿಧಿ 370 ಮೂಲತಃ ಕಾಶ್ಮೀರದ ಸ್ವಾಯತ್ತೆಗೆ ಸಂಬಂಧಿಸಿದವಿಚಾರ. ಅಲ್ಲಿನ ಜನರ ಬದುಕಿಗೆ ಹತ್ತಿರವಾದ ಪ್ರಶ್ನೆಯೂ ಹೌದು. ವಿಧಿ 35ಎ ಶಾಶ್ವತ ನಿವಾಸಿಗಳ ಹಕ್ಕುಗಳನ್ನು ನಿರ್ಧರಿಸುತ್ತಿತ್ತು.

ಈ ವಿಧಿಗಳನ್ನು ಅಸಿಂಧುಗೊಳಿಸುವ ಉದ್ದೇಶ ಹೊಂದಿದ್ದ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಅದನ್ನು ಪ್ರಜಾತಾಂತ್ರಿಕ ಚೌಕಟ್ಟಿನಲ್ಲೇ ಮಾಡಬೇಕಿತ್ತು. ನಿಜ, ಕಾಶ್ಮೀರದಲ್ಲಿ ಭಯೋತ್ಪಾದನೆ ಮೂರು ದಶಕಗಳಿಗಿಂತಲೂ ಹೆಚ್ಚು ಕಾಲದಿಂದ ಸಕ್ರಿಯವಾಗಿದೆ. ಸಾವಿರಾರು ಕಾಶ್ಮೀರಿಗರು ಗುಂಡೇಟಿಗೆ ಬಲಿಯಾಗಿದ್ದಾರೆ. ಭಾರತೀಯ ಸೇನೆ ಒಂದೆಡೆಯಾದರೆ, ಪಾಕಿಸ್ತಾನ ಪ್ರೇರಿತ ಉಗ್ರರು, ಸ್ಥಳೀಯ ಉಗ್ರರು ಮತ್ತೊಂದೆಡೆ. ಈ ರೀತಿ ಸತ್ತವರಲ್ಲಿ ಅಮಾಯಕರೆಷ್ಟೋ, ಭಯೋತ್ಪಾದಕರೆಷ್ಟೋ ಈವರೆಗೂ ಅಂಕಿಅಂಶಗಳು ಲಭ್ಯವಾಗಿಲ್ಲ.

ಇನ್ನು ಕಾಶ್ಮೀರಿ ಪಂಡಿತರ ಬವಣೆ ನಿಜಕ್ಕೂ ಯೋಚಿಸಬೇಕಾದ ವಿಚಾರ. ಈ ಪಂಡಿತರು ಒಂದು ರೀತಿಯಲ್ಲಿ ಅಧಿಕಾರ ರಾಜಕಾರಣದ ಚದುರಂಗದಾಟದಲ್ಲಿ ಕಾಯಿಗಳಂತಾಗಿಬಿಟ್ಟಿದ್ದಾರೆ. ದಾಳಗಳೂ ಅಲ್ಲ. ಇತ್ತ ಉಗ್ರಗಾಮಿಗಳು– ಅತ್ತ ಸೇನೆ, ಇತ್ತ ದೆಹಲಿ ಸರ್ಕಾರ– ಅತ್ತ ರಾಜ್ಯ ಸರ್ಕಾರ. ಪಂಡಿತರ ಬಗ್ಗೆ ಗಂಗೆ– ಯಮುನೆಯನ್ನೂ ಮೀರುವಷ್ಟು ರಾಜಕೀಯ ಕಂಬನಿ ಹರಿದುಹೋಗಿದ್ದರೂ, ಕೇಂದ್ರದಲ್ಲಿಈವರೆಗೆ ಆಡಳಿತ ನಡೆಸಿದ ಯಾವ ಪಕ್ಷಕ್ಕೂ ಪಂಡಿತರ ಸಮಸ್ಯೆ ಬಗೆಹರಿಸಲು ಆಗಿಲ್ಲ ಎನ್ನುವುದು ನಿರ್ವಿವಾದ.

ಕಾಶ್ಮೀರದ ಜನಸಾಮಾನ್ಯರೊಡನೆ ಮಾತುಕತೆ ನಡೆಸುವ ಒಂದೇ ಒಂದು ಸಂದರ್ಭವನ್ನೂ ಕಳೆದ ನಾಲ್ಕು ದಶಕಗಳಲ್ಲಿ ಸೃಷ್ಟಿಸಲಾಗಿಲ್ಲ ಎಂದರೆ, ನಾವು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಇದ್ದೇವೆಯೇ ಎಂಬ ಅನುಮಾನ ಬರುತ್ತದೆ. ಕಲ್ಲೆಸೆಯುವ ಯುವಕರೆಲ್ಲರೂ ಭಾವಿ ಉಗ್ರಗಾಮಿಗಳು ಎಂಬ ಅಭಿಪ್ರಾಯಕ್ಕೆ ಮನ್ನಣೆ ನೀಡುವ ನಾವು, ಈ ಯುವಕರ ಮನಸಿನಲ್ಲೇನಿದೆ, ಏಕೆ ಉಗ್ರವಾದಕ್ಕೆ ಬಲಿಯಾಗುತ್ತಿದ್ದಾರೆ ಎಂದು ತಿಳಿಯುವ ಪ್ರಯತ್ನವನ್ನೇ ಮಾಡಿಲ್ಲ.

ಕಾಶ್ಮೀರದ ಉಗ್ರರಿಗೆ ಏನು ಬೇಕು? ಪ್ರತ್ಯೇಕತಾವಾದಿಗಳಿಗೆ ಏನು ಬೇಕು? ಪಂಡಿತರಿಗೆ ಏನು ಬೇಕು? ಪಾಕ್ ಪ್ರೇರಿತ ಉಗ್ರರಿಗೆ ಏನು ಬೇಕು ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಕಾಶ್ಮೀರದ ಜನಸಾಮಾನ್ಯರಿಗೆ, ಶ್ರಮಜೀವಿಗಳಿಗೆ, ಶೋಷಿತ ಸಮುದಾಯಗಳಿಗೆ ಏನು ಬೇಕುಎಂದು ಯಾರಾದರೂ ಕೇಳಿದ್ದೇವೆಯೇ? ಕಾಶ್ಮೀರದಲ್ಲೂ ದುಡಿಯವ ಕೈಗಳಿವೆ, ಶೋಷಣೆ ಇದೆ, ಮಾಲೀಕರಿದ್ದಾರೆ, ಶ್ರೀಮಂತಿಕೆ ಇದೆ, ದಾರಿದ್ರ್ಯ ಇದೆ. ಆದರೆ ಈ ಬಗ್ಗೆಯೂ ನಮಗೆ ನಿಖರ ಮಾಹಿತಿ ಇಲ್ಲ. ಸಾವಿನ ಸುದ್ದಿ ಮಾತ್ರ ಹರಿದುಬರುತ್ತಲೇ ಇರುತ್ತದೆ.

ಈಗ ಜಮ್ಮು ಮತ್ತು ಕಾಶ್ಮೀರ ಹೋಳಾಗಿದೆ. ಅಲ್ಲಿನ ಜನರಿಗೆ ಆಯ್ಕೆಯ ಸ್ವಾತಂತ್ರ್ಯವನ್ನೇ ನೀಡಿಲ್ಲ. ಲಡಾಕ್‌ ಜನರ ಅಭಿಪ್ರಾಯವನ್ನೂ ಕೇಳಿಲ್ಲ. ಒಪ್ಪುತ್ತಾರೆ ಬಿಡಿ, ಕೇಂದ್ರದಲ್ಲಿ ನಮಗೆ ಅಧಿಕಾರ ಇದೆಯಲ್ಲವೇ ಎನ್ನುತ್ತೇವೆ. ದುರಂತ ಎಂದರೆ, ಉಗ್ರರು, ಪ್ರತ್ಯೇಕತಾವಾದಿಗಳ ಅಭಿಪ್ರಾಯಗಳನ್ನೇ ಕಾಶ್ಮೀರಿಗರ ಅಭಿಪ್ರಾಯ ಎಂದು ನಾವು ಭಾವಿಸುತ್ತಾ ಬಂದಿದ್ದೇವೆ. ಈಗ ಕಾಶ್ಮೀರಿ ಜನಸಾಮಾನ್ಯರೇ ಈ ವಿಭಜನೆಯನ್ನು ವಿರೋಧಿಸಬಹುದು. ಆಗ ಕೇಂದ್ರ ಸರ್ಕಾರ ಹೇಗೆ ನಿಭಾಯಿಸುತ್ತದೆ? ಮತ್ತಷ್ಟು ಸೇನೆಯನ್ನು ಜಮಾಯಿಸಲಾಗುವುದೇ? ಹಾಗಾದಲ್ಲಿ ಪ್ರಯೋಜನವೇನು? ಇಷ್ಟು ದಿನವೂ ಅದನ್ನೇ ಮಾಡುತ್ತಾ ಬಂದಿದ್ದೇವೆ. ಅಂದರೆ ಪ್ರಜಾತಾಂತ್ರಿಕ ಅಭಿವ್ಯಕ್ತಿಗೆ ಅವಕಾಶವೇ ಇಲ್ಲದಂತೆ ಮಾಡಿದ್ದೇವೆ ಎನಿಸುವುದಿಲ್ಲವೇ?

ಇಲ್ಲಿ ಕೇಂದ್ರ ಸರ್ಕಾರದ ನಿಲುವನ್ನು ಒಪ್ಪುವುದು ಅಥವಾ ವಿರೋಧಿಸುವುದು ಬೇರೆ. ಜನಸಮುದಾಯಗಳ ಆಶೋತ್ತರಗಳಿಗೆ ಮಾನ್ಯತೆ ನೀಡುವುದು ಬೇರೆ. ಒಂದು ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ಇಂತಹ ನಿರ್ಧಾರ ಕೈಗೊಳ್ಳುವ ಮುನ್ನ ಸರ್ವಪಕ್ಷ ಸಭೆ ಸೇರಿಸಬಹುದಿತ್ತು. ಚರ್ಚೆ ನಡೆಸಬಹುದಿತ್ತು. ರಹಸ್ಯವಾಗಿಯೇ ನಡೆಸಬಹುದಿತ್ತು. ತಜ್ಞರ ಅಭಿಪ್ರಾಯ ಸಂಗ್ರಹಿಸಬಹುದಿತ್ತು. ಕಾಶ್ಮೀರದ ಜನಪ್ರತಿನಿಧಿಗಳೊಡನೆ, ಸಾರ್ವಜನಿಕರೊಡನೆ ಮಾತುಕತೆ ನಡೆಸಬಹುದಿತ್ತು. ಜನಾಭಿಪ್ರಾಯಕ್ಕೆ ಮನ್ನಣೆ ನೀಡಿ ನಂತರ ಕಠಿಣವೋ, ಸಡಿಲವೋ ಆದ ನಿರ್ಧಾರ ಕೈಗೊಳ್ಳಬಹುದಿತ್ತು. ಆದರೆ ಹಾಗಾಗಿಲ್ಲ. ಬಾಣಲೆಯಿಂದ ಬೆಂಕಿಗೆ ಬಿದ್ದಿದ್ದೇವೆಯೋ ಬೆಂಕಿಯೇ ಇಲ್ಲ ಎಂಬ
ಭ್ರಮೆಗೊಳಗಾಗಿದ್ದೇವೆಯೋ ಕಾದು ನೋಡಬೇಕಿದೆ.

ಕೊನೆಯದಾಗಿ, ನವ ಉದಾರವಾದ ಮತ್ತು ಬಂಡವಾಳವು ಪ್ರಶಸ್ತ ಭೂಮಿಗಾಗಿ ಹುಡುಕಾಡುತ್ತಿವೆ. ಕಾಶ್ಮೀರ ಈಗ ಮುಕ್ತವಾಗಿದೆ.35ಎ ತೆರವುಗೊಳಿಸಿರುವುದು ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ವರದಾನವಾಗಿ ಪರಿಣಮಿಸಬಹುದು. ಇದರಿಂದ ಕಾಶ್ಮೀರದಲ್ಲಿ ಉತ್ಪಾದಕತೆ ಹೆಚ್ಚಾಗಿ, ಸ್ಥಳೀಯರಿಗೆ ಉದ್ಯೋಗಾವಕಾಶ ಹೆಚ್ಚಾಗಿ ಅಲ್ಲಿನ ಜನಜೀವನ ಉತ್ತಮವಾಗುವುದಾದರೆ ಸಂತೋಷ. ಆದರೆ ಇದೇ ಬಂಡವಾಳವು ಬೃಹತ್ ದೇಶವನ್ನೇ ಮೂರಾಬಟ್ಟೆ ಮಾಡುತ್ತಿದೆ. ಹೀಗಿರುವಾಗ, ಇನ್ನು ಮುಂದೆ ಎಲ್ಲ ವಿಷಯಗಳಲ್ಲೂ ದೇಶದ ಭಾಗವೇ ಆಗಲಿರುವ ಕಾಶ್ಮೀರದ ಬಗ್ಗೆ ಪಾಪ ಎನಿಸುತ್ತದೆ. ನಾವು ಶಾಸನಗಳನ್ನು, ವಿಧಿಗಳನ್ನು ಕೊಂಚ ಹೊತ್ತು ಬದಿಗಿಟ್ಟು ಜನಸಾಮಾನ್ಯರ ಬಗ್ಗೆ ಯೋಚಿಸಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT