ಭಾನುವಾರ, ಫೆಬ್ರವರಿ 28, 2021
30 °C

ಅಡ್ವಾಣಿಯವರ ಹೊಸ ಶೀರ್ಷಾಸನಗಳು!

ನಟರಾಜ್ ಹುಳಿಯಾರ್ Updated:

ಅಕ್ಷರ ಗಾತ್ರ : | |

ಅಡ್ವಾಣಿಯವರ ಹೊಸ ಶೀರ್ಷಾಸನಗಳು!

‘ನೇರ ಮನುಷ್ಯ’ ನಿಜಕ್ಕೂ ಬದಲಾದರೇ ಅಥವಾ ನವದರ್ಶನದ ಒಳಮರ್ಮ ಬೇರೆಯೇ ಇದೆಯೇ?  ನಾನಂತೂ ಎಲ್.ಕೆ. ಅಡ್ವಾಣಿ ಎಂಬ ರಾಜಕಾರಣಿಯನ್ನು ಹೆಚ್ಚೂ ಕಡಿಮೆ ಮರೆತೇಬಿಟ್ಟಿದ್ದೆ. ಆದರೆ ಅವರ ಮುಖ ನನ್ನೆದುರು ಇದ್ದಕ್ಕಿದ್ದಂತೆ ಸುಳಿದದ್ದು ಕೆಲವು ತಿಂಗಳ ಕೆಳಗೆ ಅವರು ರಾಜ್‌ಕುಮಾರ್ ಹಿರಾನಿಯವರ ‘ಪಿ.ಕೆ.’ ಎಂಬ ಜನಪ್ರಿಯ ಸಿನಿಮಾ ನೋಡಿದ ಸಂದರ್ಭದಲ್ಲಿ.  ಅಮೀರ್ ಖಾನ್ ಶೋಷಕ ದೇವರುಗಳನ್ನೂ ದೇವರುಗಳ ಏಜೆಂಟರನ್ನೂ ಗೇಲಿ ಮಾಡುವ ಆ ಸಿನಿಮಾವನ್ನು ಅಡ್ವಾಣಿ ನೋಡಿ, ಬಾಯ್ತುಂಬ ಹೊಗಳಿದ್ದನ್ನು ಅನೇಕರು ಗಮನಿಸಿರಲಿಕ್ಕಿಲ್ಲ. ಅವತ್ತು ಅವರು ‘ಯಾವುದೇ ಧರ್ಮವನ್ನು ನಾಶ ಮಾಡುವವರು ದೇಶಕ್ಕೆ ಹಾಗೂ ದೇಶದ ಏಕತೆಗೆ ದೊಡ್ಡ ಅಪಚಾರ ಮಾಡುತ್ತಾರೆ’ ಎಂದು ಸಂತನಂತೆ ಹೇಳಿದಾಗ ಅವರ ಉಗ್ರ ಅಭಿಮಾನಿಗಳು, ‘ಇದೇನು ನಮ್ಮ ನಾಯಕರು ಬಾಬರಿ ಮಸೀದಿ ಉರುಳಿಸಿದ ನಮ್ಮನ್ನೇ ಕುಟುಕುತ್ತಿದ್ದಾರಲ್ಲ!’ ಎಂದು ರೇಗಿಕೊಂಡು ‘ಕ್ಯಾ! ಪಿ.ಕೆ. ಹೈ ಕ್ಯಾ?’ ಎಂದು ಗೊಣಗಿಕೊಂಡಿರಬಹುದು!   

ಹಾಂ! ಅದೃಷ್ಟವಶಾತ್ ಅವತ್ತು ನಾನು ಅದೇ ಥಿಯೇಟರಿನಲ್ಲಿದ್ದೆ! ಅಡ್ವಾಣಿಯವರನ್ನು ಎಂದೂ ಎದುರಿಗೆ ಕಂಡಿರದ ನಾನು ಅವತ್ತು ನೋಡಿದ್ದು ಅವರನ್ನೋ ಅಥವಾ ಅವರ ಥರದ ಇನ್ನೊಬ್ಬರನ್ನೋ ಎಂಬ ಅನುಮಾನದಿಂದ ಚಣ ಸುಮ್ಮನೆ ಕೂತೆ. ಆದರೂ ಹಣೆಯಲ್ಲಿ ಕುಂಕುಮದ ನಾಮ ಎದ್ದು ಕಾಣುವ ವಯಸ್ಸಾದ ಹಿರಿಯರೊಬ್ಬರು ‘ಪಿ.ಕೆ.’ಯಲ್ಲಿ ದೇವರನ್ನು ಕುರಿತ ಟೀಕೆಗಳನ್ನು ನೋಡಿದಾಗ ಅವರೊಳಗೆ ಏನಾಗುತ್ತಿರಬಹುದು ಎಂಬ ಕುತೂಹಲದಿಂದ ಒಂದು ಚಣ ತೆರೆಯನ್ನೂ ಮತ್ತೊಂದು ಚಣ ಅವರ ಮುಖಭಾವವನ್ನೂ ಗಮನಿಸತೊಡಗಿದೆ. ಅಮೀರ್ ಖಾನ್ ಯಾವುದೋ ಗ್ರಹದಿಂದ ಬಂದು ಇಂಡಿಯಾದಲ್ಲಿ ತನ್ನ ರಿಮೋಟ್ ಕಳೆದುಕೊಂಡು ವಾಪಸ್ ತನ್ನ ಗ್ರಹಕ್ಕೆ ಹೋಗಲಾಗದೆ ಪೇಚಾಡಿದಾಗ ಅವರು ‘ಛೇ!’ ಎಂದು ನೊಂದುಕೊಂಡರು.ಅಮೀರ್ ಖಾನ್ ಗಣೇಶ, ಸರಸ್ವತಿ, ಶಿವ, ಹನುಮಂತ, ಕೃಷ್ಣ ಮುಂತಾದ ದೇವರುಗಳ ‘ಮಿಸ್ಸಿಂಗ್’ ಪೋಸ್ಟರುಗಳನ್ನು ಗೋಡೆಗೆ ಹಚ್ಚಿದಾಗ ‘ನೋ! ನೋ!’ ಎಂದು ಪ್ರತಿಭಟಿಸಲೆತ್ನಿಸಿದರು; ಮತ್ತೆ ಆ ಪೋಸ್ಟರುಗಳನ್ನು ನೋಡುತ್ತಾ ‘ಅವರೆಲ್ಲ ಮಿಸ್ಸಿಂಗ್ ಆಗಿರುವುದೂ ಸತ್ಯವಲ್ಲವೆ! ಆ ದೇವರುಗಳು ಇದ್ದಿದ್ದರೆ ನಾನು ಪ್ರಧಾನಿಯಾಗುತ್ತಿರಲಿಲ್ಲವೆ?’ ಎಂದು ಗೊಣಗಿಕೊಂಡು ಸುಮ್ಮನಾದರು. ಆದರೂ ಎಂಬತ್ತರ ದಶಕದಿಂದೀಚೆಗೆ, ದೇವರ ಇಮೇಜುಗಳನ್ನೇ ದಾಳದಂತೆ ಬಳಸಿ ರಾಜಕಾರಣ ಮಾಡಿದ್ದ ಅವರಿಗೆ ಯಾಕೋ ರೇಗಿ, ಈ ಸಿನಿಮಾದ ವಿರುದ್ಧ ಪ್ರತಿಭಟಿಸಬೇಕೆಂದು ಏಳಲೆತ್ನಿಸಿದಾಗ, ಮುಂದಿನ ದೃಶ್ಯ ಅವರನ್ನು ತಡೆದು ನಿಲ್ಲಿಸಿತು. ಯಾರೋ ತನ್ನ ಕೆನ್ನೆಗೆ ಹೊಡೆಯಲು ಬಂದಾಗ, ಅಮೀರ್ ಖಾನ್ ಒಂದು ಕೆನ್ನೆಗೆ ಕೃಷ್ಣ, ಮತ್ತೊಂದು ಕೆನ್ನೆಗೆ ಹನುಮಂತರ ಸ್ಟಿಕ್ಕರ್ ಅಂಟಿಸಿಕೊಂಡು ಬಚಾವಾದದ್ದನ್ನು ಕಂಡು ಅವರು ಮಗುವಿನ ಹಾಗೆ ಕಿಲಕಿಲ ನಗತೊಡಗಿದರು. ಅಮೀರ್ ಖಾನ್ ಶಿವನ ವೇಷಧಾರಿಯನ್ನು ನಿಜವಾದ ಶಿವನೆಂದು ತಿಳಿದು ‘ಶಿವಾ! ನನ್ನ ರಿಮೋಟ್ ಕೊಡಿಸು!’ ಎಂದು ಅವನ ಬೆನ್ನು ಬಿದ್ದಾಗಲಂತೂ ಅವರು ಬಿದ್ದು ಬಿದ್ದು ನಕ್ಕರು. ಅಡ್ವಾಣಿಯವರನ್ನು ಸಿನಿಮಾ ನೋಡಲು ಕರೆದಿದ್ದ ನಿರ್ದೇಶಕ ಹಿರಾನಿಯವರ ತಂದೆ ಈಗ ಪಾಕಿಸ್ತಾನದಲ್ಲಿರುವ ಸಿಂಧ್ ಪ್ರಾಂತದಿಂದ ಬಂದವರು. ಅಡ್ವಾಣಿ ಕರಾಚಿಯಲ್ಲಿ ಹುಟ್ಟಿದವರು.  ಸಿನಿಮಾದಲ್ಲಿ ಇಂಡಿಯಾದ ಹುಡುಗಿಗೂ ಪಾಕಿಸ್ತಾನದ ಹುಡುಗನಿಗೂ ಪ್ರೀತಿ ಶುರುವಾಗುತ್ತದೆ. ಇದೆಲ್ಲ ಅಡ್ವಾಣಿಯವರನ್ನು ಭಾವುಕರನ್ನಾಗಿಸಿದಂತಿತ್ತು. ನಾನು ಸಿನಿಮಾ ನೋಡುವುದು ಬಿಟ್ಟು ಅವರ ಮುಖವನ್ನೇ ನೋಡತೊಡಗಿದೆ. ಕಣ್ಣನ್ನು ತೆರೆ ಮೇಲೇ ನೆಟ್ಟು, ಅಡ್ವಾಣಿ ಮತ್ತೆ ನಕ್ಕರು. ಸಿಡಿಮಿಡಿಗೊಂಡರು. ಕತೆಗೆ ಕುತೂಹಲಕರ ತಿರುವು ಕೊಡುವ ಘಟನೆ ಎದುರಾಗುತ್ತದೆ: ಆ ಪ್ರೇಮಿಗಳ ಮದುವೆ ದಿನ ಚರ್ಚಿನಲ್ಲಿ ಆ ಹುಡುಗಿಗೆ ಪತ್ರವೊಂದು ಸಿಗುತ್ತದೆ: ‘ಮದುವೆ ಎನ್ನುವುದು ಎರಡು ಕುಟುಂಬಗಳ ನಡುವಣ ಬಾಂಧವ್ಯ. ನಮ್ಮ ದೇಶ, ಜನ, ಧರ್ಮ ಎಲ್ಲವೂ ಬೇರೆಯಾಗಿರುವುದರಿಂದ ನಮ್ಮವರನ್ನು ದುಃಖದಲ್ಲಿ ಮುಳುಗಿಸಿ ನಾವು ಸಂತೋಷಪಡಲಾಗದು. ನನ್ನನ್ನು ಸಂಪರ್ಕಿಸಲು ಯತ್ನಿಸಬೇಡ’. ಇದು ಯಾರೋ ಯಾರಿಗೋ ಬರೆದ ಪತ್ರ! ಹುಡುಗಿ ಅಳುತ್ತಾ ಭಾರತಕ್ಕೆ ಹಿಂದಿರುಗುತ್ತಾಳೆ. ಆದರೆ, ಸಿನಿಮಾದ ಕೊನೆಯಲ್ಲಿ ಪಾಕಿಸ್ತಾನದ ಹುಡುಗ ಭಾರತದ ಹುಡುಗಿಗಾಗಿ ನಿತ್ಯ ಕೊರಗುತ್ತಾ ಕಾಯುತ್ತಿದ್ದನ್ನು ನೋಡಿ ಅಡ್ವಾಣಿಯವರ ಗಂಟಲು ಉಬ್ಬಿದಂತಿತ್ತು.ಅವರ ಪ್ರತಿಕ್ರಿಯೆಗಳನ್ನು ನೋಡನೋಡುತ್ತಾ, ಸಿನಿಮಾ ಎಂಬ ಕಲೆ ಉತ್ತಮ ಪ್ರಭಾವ ಬೀರುವ ಬಗ್ಗೆ ಅಷ್ಟೇನೂ ವಿಶ್ವಾಸವಿರದ ನನಗೂ ಅವತ್ತು ಸಿನಿಮಾದ ಶಕ್ತಿಯ ಬಗ್ಗೆ ಕೊಂಚ ನಂಬಿಕೆ ಬರತೊಡಗಿತು.  ‘ಪಿ.ಕೆ.’ ಸಿನಿಮಾದಲ್ಲಿ ಹಿಂದೂ ದೇವತೆಗಳಿಗೆ ಅವಮಾನವಾಗಿದೆಎಂದು ಪ್ರೆಸ್ ಮೀಟ್ ಮಾಡಬೇಕೆಂದುಕೊಂಡು ಕಟುವಾದ ಇಂಗ್ಲಿಷ್ ಶಬ್ದಗಳಿಗಾಗಿ ತಡಕಾಡತೊಡಗಿದ್ದ ಅಡ್ವಾಣಿ ಸಿನಿಮಾ ಮುಗಿದ ಮೇಲೆ ಜ್ಞಾನೋದಯವಾದವರಂತೆ ಕಣ್ಣರಳಿಸಿದರು. ಥಿಯೇಟರಿನಿಂದ ಹೊರ ಬಂದಾಗ ಅವರ ಕಣ್ಣು ತುಂಬಿ ಬಂದಿತ್ತು. ಅಡ್ವಾಣಿಯವರ ಮುಖಭಾವವನ್ನು ಸರಿಯಾಗಿ ಗಮನಿಸದೆ, ಈಗ ಏನೋ ಸ್ಫೋಟ ಕಾದಿದೆ ಎಂದು ಟಿ.ವಿ.ಯವರು ಅವರತ್ತ ನುಗ್ಗತೊಡಗಿದರು. ಅಡ್ವಾಣಿ ಮುಗುಳ್ನಗುತ್ತಾ, ಮೆಲ್ಲಗೆ ‘ಇಟ್ ಈಸ್ ಎ ವಂಡರ್‌ಫುಲ್ ಅಂಡ್ ಕರೇಜಿಯಸ್ ಫಿಲ್ಮ್!’ ಎಂದರು.‘ಪಿ.ಕೆ.’ ಸಿನಿಮಾ ನೋಡಿ ಅಡ್ವಾಣಿ ಹೇಳಿದ ಮಾತುಗಳನ್ನು ಟೆಲಿವಿಷನ್ನಿನಲ್ಲಿ ಕೇಳಿಸಿಕೊಂಡಾಗ ಮೂಡಿದ ಕಾಲ್ಪನಿಕ ಚಿತ್ರಗಳನ್ನು ಮೇಲೆ ಕೊಟ್ಟಿದ್ದೇನೆ ಎಂಬುದನ್ನು ಓದುಗರಿಗೆ ಬಿಡಿಸಿ ಹೇಳಬೇಕಾಗಿಲ್ಲ! ಕಲ್ಪನೆ ಹಾಗೂ ಫ್ಯಾಂಟಸಿಗಳು ಕೂಡ ಕೆಲವು ಸಲ ವಿಚಿತ್ರ ಸತ್ಯಗಳತ್ತ ನಮ್ಮನ್ನು ಕರೆದೊಯ್ಯಬಲ್ಲವು. ಧರ್ಮವನ್ನು ರಾಜಕೀಯದ ಜೊತೆ ಬೆರಸಿ ದೇಶದುದ್ದಕ್ಕೂ ವಿಭಜನೆಯ ರಾಜಕಾರಣ ಮಾಡಿದ ಅಡ್ವಾಣಿ ‘ಪಿ.ಕೆ.’  ಬಗ್ಗೆ ನೀಡಿದ ಪ್ರತಿಕ್ರಿಯೆ ಕಂಡು ಮನುಷ್ಯರು ಒಂದಲ್ಲ ಒಂದು ದಿನ ಕೊಂಚವಾದರೂ ಬದಲಾಗುತ್ತಾರೆಂಬ ಬಗ್ಗೆ ನಂಬಿಕೆ ಇರಿಸಿಕೊಳ್ಳಬಹುದು ಎನ್ನಿಸಿತು. ಅಡ್ವಾಣಿ ‘ಪಿ.ಕೆ.’ ಥರದ ಸಿನಿಮಾವನ್ನು ಎಂಬತ್ತರ ದಶಕದಲ್ಲೇ ನೋಡಿದ್ದರೆ, ಧರ್ಮವನ್ನು ಅಷ್ಟೊಂದು ಕ್ರೂರವಾಗಿ ಬಳಸಿ ಇಂಡಿಯಾದ ವಿಶಿಷ್ಟ ಧಾರ್ಮಿಕ ಸಾಮರಸ್ಯವನ್ನು ಮುರಿಯುವ ಪಾಪಕ್ಕೆ ಕೈ ಹಾಕುತ್ತಿರಲ್ಲವೇನೋ…ಅಡ್ವಾಣಿಯವರಿಗೆ ತಡವಾಗಿಯಾದರೂ ಅರಿವು ಮೂಡಿರಬಹುದೇ? ಮನುಷ್ಯ ಯಾವ ಗಳಿಗೆಯಲ್ಲಿ ಬೇಕಾದರೂ ಬದಲಾಗಬಹುದೆ?

ಬದಲಾದರೂ ಆಗಬಹುದು ಎಂದು ಮತ್ತೆ ಅನ್ನಿಸಿದ್ದು ಮೊನ್ನೆ ಅಡ್ವಾಣಿಯವರ ಹೇಳಿಕೆ ನೋಡಿದಾಗ. ಯೋಗದ ವೈಭವೀಕರಣ ನಡೆಯುತ್ತಿರುವ ಕಾಲದಲ್ಲಿ ಅಡ್ವಾಣಿ     ಏಕ್‌ದಂ ‘ಶೀರ್ಷಾಸನ’ ಹಾಕಿದ್ದರು! ‘ಪೊಲಿಟಿಕಲ್ ಇಂಟೆನ್ಸಿವ್ ಕೇರ್ ಯೂನಿಟ್’ನಲ್ಲಿ ಮಲಗಿದಂತಿದ್ದ ಅವರು ಇದ್ದಕ್ಕಿದ್ದಂತೆ ಎದ್ದು ಹೊಸ ಐಪಿಎಲ್ (ಇಂಡಿಯನ್ ಪೊಲಿಟಿಕಲ್ ಲೀಗ್) ಶುರು ಮಾಡಿದ್ದರು! ಅಡ್ವಾಣಿ ‘ಮತ್ತೆ ದೇಶದಲ್ಲಿ ತುರ್ತು ಪರಿಸ್ಥಿತಿ ಬರದು ಎನ್ನಲಾಗದು’ ಎಂದಾಗ, ‘ಇದು ಮೋದಿ ಆಡಳಿತ ಕುರಿತ ಟೀಕೆ’ ಎಂದು ವಿರೋಧ ಪಕ್ಷಗಳು ವ್ಯಾಖ್ಯಾನಿಸಿದ್ದು ಎಲ್ಲರಿಗೂ ಗೊತ್ತಿದೆ. ರಾಜಕೀಯ ಪಕ್ಷಗಳ ಆಟ ಬಲ್ಲವರಿಗೆ ಇದು ಸುಷ್ಮಾ ಸ್ವರಾಜ್ ಪ್ರಕರಣದ ಮೇಲಿನ ಫೋಕಸ್ ಕಳೆಯಲು ಬಿಜೆಪಿಯ ಇನ್ನೊಂದು ಬಣ ಹೂಡಿದ ಆಟದಂತೆಯೂ ಕಂಡಿದ್ದರೆ ಅಚ್ಚರಿಯಲ್ಲ. ಈ ಬಗ್ಗೆ ಕೊಂಚ ದೂಳೆದ್ದ ಮೇಲೆ ಅಡ್ವಾಣಿ ಅಳೆದೂ ಸುರಿದೂ, ‘ಇಲ್ಲ! ಇಲ್ಲ! ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಮರ್ಜೆನ್ಸಿ ಬರಬಹುದು’ ಎಂದು ಸಣ್ಣ ರಾಗದಲ್ಲಿ ಹೇಳಿದ್ದಾರೆ. ಈ ಮಾತನ್ನು ಬಿಜೆಪಿಯವರು ಸರಿಯಾಗಿ ಕೇಳಿಸಿಕೊಂಡಿದ್ದರೆ, ಇದು ‘ಮತ್ತೆ ಮೋದಿ ಸರ್ಕಾರ ಬರಲಿಕ್ಕಿಲ್ಲ’ ಎಂಬ ಭವಿಷ್ಯವಾಣಿ ಎಂದು ಮಂಕಾಗಬೇಕಾಗಿತ್ತು; ಕಾಂಗ್ರೆಸ್ಸಿನವರು ಚುರುಕಾಗಿದ್ದರೆ, ‘ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ’ ಎಂದು ಅಡ್ವಾಣಿ ಭವಿಷ್ಯ ನುಡಿದಿದ್ದಾರೆ ಎಂದು ಆ ಹೇಳಿಕೆಯನ್ನು ಸ್ವಾಗತಿಸಬಹುದಾಗಿತ್ತು!ಈ ಘಟ್ಟದಲ್ಲಿ ಅಡ್ವಾಣಿಯವರ ಹಿನ್ನೆಲೆಯನ್ನು ಜ್ಞಾಪಿಸಿಕೊಳ್ಳಿ: ತುರ್ತು ಪರಿಸ್ಥಿತಿಯಲ್ಲಿ ಜೈಲಿಗೆ ಹೋದವರು. ಎಂಬತ್ತು-ತೊಂಬತ್ತರ ದಶಕದಲ್ಲಿ ದೇಶವನ್ನು ಸೀಳಿದ ರಥಯಾತ್ರೆ ಮಾಡಿ, ಬಾಬರಿ ಮಸೀದಿ ಧ್ವಂಸದ ರಾಜಕಾರಣದ ಮುಂಚೂಣಿಯಲ್ಲಿದ್ದರು. ವಿಭಜನೆಯ ರಾಜಕೀಯದ ಮೂಲಕ ಬಿಜೆಪಿಯನ್ನು ಅಧಿಕಾರಕ್ಕೆ ತರಲು ನೆರವಾದವರು. ವಾಜಪೇಯಿ ಎಂಬ ರಾಮನಿಗೆ ಲಕ್ಷ್ಮಣನಂತಿದ್ದವರು; ಒಂದಲ್ಲ ಒಂದು ದಿನ ತಾನೂ ಪ್ರಧಾನಿಯಾಗಬಹುದೆಂದು ಕಾದು ನಿಂತು ನಿಂತು ಸಾಕಾಗಿ, ಈಚೆಗೆ ಕೂತವರು. ತಮಗೆ ಕಾಯಮ್ಮಾಗಿ ಅಂಟಿಕೊಂಡ ಕೋಮುವಾದಿ ಇಮೇಜನ್ನು ಕೊಡವಿಕೊಳ್ಳಲು ಕೆಲವು ವರ್ಷಗಳ ಕೆಳಗೆ ಪಾಕಿಸ್ತಾನಕ್ಕೆ ಹೋಗಿ, ಪಾಕಿಸ್ತಾನದ ಜನಕ ಮಹಮ್ಮದಾಲಿ ಜಿನ್ನಾರನ್ನು ‘ಸೆಕ್ಯುಲರ್’ ಎಂದು ಹೊಗಳಿದವರು; ಆ ಮೂಲಕ ಮುಂದೆ ಇಂಡಿಯಾದ ಪ್ರಧಾನಿಯಾಗಲು ಬೇಕಾದ ಉದಾರವಾದಿ ಇಮೇಜೊಂದನ್ನು ಬೆಳೆಸಿಕೊಳ್ಳಲು ಯತ್ನಿಸಿದವರು.ಆದರೆ ‘ಸೆಕ್ಯುಲರ್’ ಎಂಬ ಪದವನ್ನು ಕಂಡರಾಗದ ಬಿಜೆಪಿಯಲ್ಲಿ ಅಡ್ವಾಣಿ ಆ ಪದ ಬಳಕೆಯಿಂದಾಗಿಯೇ ತೊಂದರೆಗೊಳಗಾದದ್ದು ವಿಚಿತ್ರವಾಗಿತ್ತು! ‘ಸೆಕ್ಯುಲರ್’ ಎಂಬ ಪದವನ್ನು ಬೈಗುಳದಂತೆ ಬಳಸುವ ಬಲಪಂಥೀಯರಿಗೆ ಜಿನ್ನಾರನ್ನು ‘ಸೆಕ್ಯುಲರ್’ ಎಂದದ್ದು ಮಾತ್ರ ಬೈಗುಳದಂತೆ ಕೇಳಿಸಲಿಲ್ಲ. ಅಂತೂ ಅಡ್ವಾಣಿಯವರ ಹೊಸ ಸೆಕ್ಯುಲರ್ ಮುಖವಾಡ ಕ್ಲಿಕ್ಕಾಗಲಿಲ್ಲ. ಬಿಜೆಪಿಯ ಒಂದು ಗುಂಪು ಅಡ್ವಾಣಿಯವರನ್ನು ತುಳಿಯಲು ಈ ಪದವನ್ನೇ ಬಳಸಿಕೊಂಡಿತು. ಹಾಗೆ ನೋಡಿದರೆ, ಅಡ್ವಾಣಿ, ವಾಜಪೇಯಿಗಿಂತ ಕೊಂಚ ನೇರ ಮನುಷ್ಯ. ತಾನು ಕೋಮುವಾದಿ ಎಂಬುದನ್ನು ನೇರವಾಗಿ ತೋರಿಸಿಕೊಂಡವರು. ಈ ಅಡ್ವಾಣಿ   ಮೊನ್ನೆಯ  ಲೋಕಸಭಾ ಚುನಾವಣೆ ಸಮಯದಲ್ಲಿ ನೇಪಥ್ಯಕ್ಕೆ ಸರಿಯುವಂತಾದದ್ದು ಎಲ್ಲರಿಗೂ ಗೊತ್ತಿದೆ. ಆದರೂ ‘ಅಕಸ್ಮಾತ್ ಮುಂದೆ ರಾಷ್ಟ್ರಪತಿ ಆದರೂ ಆಗಬಹುದು’ ಎಂಬ ತಮ್ಮ ಜೀವಿತದ ಕೊನೆಯ ಒಳಾಸೆಯಲ್ಲಿ ಅಡ್ವಾಣಿ ಜೀವ ಬಿಗಿ ಹಿಡಿದಿದ್ದಾರೆ ಎಂಬುದು ನನ್ನ ಊಹೆ! ಆದ್ದರಿಂದಲೇ ‘ನಾನು ಇನ್ನೂ ಇದ್ದೇನೆ’ ಎಂದು ತೋರಿಸಲು ಅವರು ಈ ಕೈಬಾಂಬ್ ಎಸೆದಿರಬಹುದು!ಆದರೂ ವೃದ್ಧ ಅಡ್ವಾಣಿಯವರ ನವದರ್ಶನದಲ್ಲಿ ಕೆಲವು ಮುಖ್ಯ ಅಂಶಗಳಿವೆ: ವಯಸ್ಸಾಗುತ್ತಾ, ಸಾವು ಇಣುಕುತ್ತಿದೆ ಎಂದು ತೀವ್ರವಾಗಿ ಅನ್ನಿಸಿದಾಗ ಮನುಷ್ಯರಿಗೆ ಹೊಸ ಸತ್ಯಗಳು ಕಾಣಿಸುವ ಸಾಧ್ಯತೆಗಳಿರುತ್ತವೆ. ಅಡ್ವಾಣಿಯವರಿಗಿರುವ ತುರ್ತು ಪರಿಸ್ಥಿತಿಯ ಆತಂಕ ನಿಜವೆನ್ನಿಸುತ್ತದೆ: ಮೊನ್ನೆ ಮ್ಯಾನ್ಮಾರಿನಲ್ಲಿ ಭಾರತ ನಡೆಸಿದ ದಾಳಿಯ ನಂತರ ಅಪ್ರಬುದ್ಧ ರಾಜಕಾರಣಿಗಳು, ಕೂಗುಮಾರಿ ಟಿ.ವಿ ಆ್ಯಂಕರ್‌ಗಳು ವೀರಾವೇಶದ ಯುದ್ಧ ಭಾಷೆಯನ್ನು ಬಳಸುತ್ತಿದ್ದಾರೆ. ಇಂಡಿಯಾದ ನೆಲಜಲವನ್ನೆಲ್ಲ ಬೇಕಾಬಿಟ್ಟಿ ಮಾರಾಟ ಮಾಡುವ ನಿರ್ದಯ ಮಾರ್ಕೆಟ್ ರಾಜಕಾರಣ ಶುರುವಾಗಿದೆ. ಸನಾತನ ಶಕ್ತಿಗಳ ಹಿಂಬಾಗಿಲ ಆಡಳಿತ ಅತಿಯಾಗತೊಡಗಿದೆ. ಇಂಥ ಕಾಲದಲ್ಲಿ ಈಗಾಗಲೇ ತುರ್ತು ಪರಿಸ್ಥಿತಿ ಜಾರಿಯಲ್ಲಿದೆ ಎಂದು ಅನೇಕರಿಗೆ ಅನ್ನಿಸಿದ್ದರೆ ಅಚ್ಚರಿಯಲ್ಲ. ತಾವು ಕಂಡ ಸತ್ಯವನ್ನು ಹೇಳಲಾಗದ ಲೇಖಕರಿಗೂ, ಪತ್ರಕರ್ತರಿಗೂ ಇದು ಅನುಭವಕ್ಕೆ ಬಂದಿರಬಹುದು. ಒಮ್ಮೆ ಜೈಲಿನಲ್ಲಿದ್ದ ಅಡ್ವಾಣಿಯವರಿಗೆ ಈಗ ದೆಹಲಿಯಲ್ಲಿ ತಮ್ಮ ಸುತ್ತ ಇರುವ ಪಹರೆ ಎಂಥದೆಂಬುದೂ ಅನುಭವಕ್ಕೆ ಬಂದಿರಬಹುದು. ಈ ಹಿನ್ನೆಲೆಯಲ್ಲಿ ಎಂಬತ್ತರ ಇಳಿಗಾಲದಲ್ಲಿ ‘ಪಿ.ಕೆ.’ ಸಿನಿಮಾ ನೋಡಿ ಅಡ್ವಾಣಿ ಕೊಂಚ ಉದಾರವಾಗಿದ್ದರೆ ಅಥವಾ ಮೋದಿ ಯುಗದ ದರ್ಪದ ರಾಜಕಾರಣ ಕಂಡು ಅವರಿಗೆ ನಿಜಕ್ಕೂ ಜ್ಞಾನೋದಯವಾಗಿದ್ದರೆ ದೇಶಕ್ಕೆ ಒಳ್ಳೆಯದು.ಕೊನೆ ಟಿಪ್ಪಣಿ: ಈವೆಂಟ್ ಮ್ಯಾನೇಜರ್‌ಗಳ ತುರ್ತು ಪರಿಸ್ಥಿತಿ

ಇಂಡಿಯಾದ ರಾಜಕಾರಣವನ್ನು ರಾಜಕಾರಣಿಗಳು ನಿಭಾಯಿಸುತ್ತಿಲ್ಲ; ಈವೆಂಟ್ ಮ್ಯಾನೇಜರ್‌ಗಳು ನಿಭಾಯಿಸುತ್ತಿದ್ದಾರೆ ಎನ್ನಿಸುತ್ತದೆ. ಎಲ್ಲವನ್ನೂ ದೃಶ್ಯಾವಳಿಗಳ ‘ಈವೆಂಟ್’ ಮಾಡಿ ನಿಜವಾದ ಸಮಸ್ಯೆಗಳನ್ನು ಹಿನ್ನೆಲೆಗೆ ಸರಿಸುವ ಆಟ ಕಳೆದೊಂದು ವರ್ಷದಿಂದ ಶುರುವಾಗಿದೆ. ಮೊನ್ನೆ ಯೋಗದ ಆಟ ಮುಗಿದ ಮೇಲೆ, ಸರ್ಕಾರಿ ಕೃಪಾಪೋಷಿತ ದೂರದರ್ಶನ ತುರ್ತು ಪರಿಸ್ಥಿತಿ ಘೋಷಿಸಿ ನಲವತ್ತು ವರ್ಷವಾಗಿರುವುದನ್ನು ಆಚರಿಸಲು ಸಿದ್ಧತೆ ಮಾಡಿಕೊಂಡಿದೆಯಂತೆ. ಹಾಗಾದರೆ ಅದು ರಾಮಜನ್ಮಭೂಮಿ ಹಿಂಸಾಚಾರದ ವಾರ್ಷಿಕ, ಸಿಖ್ ಹತ್ಯಾಕಾಂಡದ ವಾರ್ಷಿಕೋತ್ಸವ, ಗೋಧ್ರಾ ಹತ್ಯಾಕಾಂಡದ ಪುಣ್ಯತಿಥಿ ಎಲ್ಲವನ್ನೂ ಆಚರಿಸಲು ಸಿದ್ಧತೆ ಮಾಡಿಕೊಂಡಿದೆಯೆ? ಚರಿತ್ರೆಯ ಘಟನಾವಳಿಗಳನ್ನು ಕ್ಷುದ್ರ ರಾಜಕಾರಣಕ್ಕೆ ಬಳಸುವುದು ತಿರುಗುಮಾಟದ ಹಾಗೆ ಬಳಸುವವರಿಗೇ ರಿವರ್ಸ್ ಆಗಬಹುದು!       

editpagefeedback@prajavani.co.in

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.