ಸೋಮವಾರ, ಮಾರ್ಚ್ 1, 2021
23 °C

ಅಪ್ಪನ ತಪ್ಪು ಹೆಜ್ಜೆಯಲ್ಲಿ ರಾಹುಲ್‌?

ಶೇಖರ್‌ ಗುಪ್ತ Updated:

ಅಕ್ಷರ ಗಾತ್ರ : | |

ಅಪ್ಪನ ತಪ್ಪು ಹೆಜ್ಜೆಯಲ್ಲಿ ರಾಹುಲ್‌?

ಈ ದಿನಗಳಲ್ಲಿ ಯುವಜನರ ಬಗ್ಗೆ ನಮಗೆಲ್ಲ ಹೆಚ್ಚಿನ ವಿಷಯಗಳು ಗೊತ್ತಿರುವುದೇ ಇಲ್ಲ. ರಾಹುಲ್‌ ಗಾಂಧಿ ಅವರು ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರಾಗಲು ಪದೋನ್ನತಿ ಪಡೆಯಲು ಹೊರಟ ಸಂದರ್ಭದಲ್ಲಿಯೇ ಅವರು ಯಾವ ಧರ್ಮ ಪಾಲನೆ ಮಾಡುತ್ತಿದ್ದಾರೆ ಎನ್ನುವುದರ ಕುರಿತ ಹಳಸಲು ಚರ್ಚೆ ನಡೆಯುತ್ತದೆಯೇ ಅಥವಾ ಇದು ಸಂಪೂರ್ಣ ನಿಯಂತ್ರಣದಿಂದ ಕೈಜಾರಿದ ವಿದ್ಯಮಾನವೇ ಎನ್ನುವುದು ಖಚಿತವಾಗಿಲ್ಲ. ಅದೆಲ್ಲ ಏನೇ ಇರಲಿ, ರಾಹುಲ್‌ ಬದುಕಿನ ಹೊಸ ಅಧ್ಯಾಯ ಮತ್ತು ಅವರ ಪಕ್ಷದ ರಾಜಕೀಯ ಭವಿಷ್ಯದ ಹೊಸ ಚಿತ್ರಕತೆಗೆ ಮುನ್ನುಡಿಯನ್ನಂತೂ ಬರೆಯಲಾಗಿದೆ.

ಈ ಚಿತ್ರಕತೆ ತಕ್ಷಣಕ್ಕೆ ನಾಟಕೀಯವಾಗಿ ಕೊನೆಗೊಳ್ಳುವ ಸಾಧ್ಯತೆಯೂ ಇಲ್ಲ. ರಾಹುಲ್‌ ಅವರು ಬರಿದಾದ ಮೈಯಲ್ಲಿ ತಾವು ಧರಿಸಿದ ಜನಿವಾರ ತೋರಿಸಿ, ಶುದ್ಧೀಕರಣ ಸಂದರ್ಭದಲ್ಲಿ ಸಾಂಪ್ರದಾಯಿಕವಾಗಿ ತಾವು ಅದನ್ನು ಕಿವಿ ಮೇಲೆ ಹಾಕಿಕೊಳ್ಳುವುದರ ಛಾಯಾಚಿತ್ರಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹಾಕಬೇಕು. ಇಲ್ಲವೇ ತಮ್ಮ ಧಾರ್ಮಿಕ ದೀಕ್ಷೆಯ ಸಾಕ್ಷ್ಯಾಧಾರಗಳಿಗೆ ಪೂರಕವಾಗಿ ದಿನ ಮತ್ತು ಛಾಯಾಚಿತ್ರಗಳನ್ನು ಪ್ರದರ್ಶಿಸಿದರೂ ಈ ಚರ್ಚೆ ಕೊನೆಗೊಳ್ಳುವ ಸಾಧ್ಯತೆ ಇರುವುದಿಲ್ಲ. ಸೋಮನಾಥ ದೇವಸ್ಥಾನಕ್ಕೆ ಭೇಟಿಕೊಟ್ಟಾಗ ಅಲ್ಲಿನ ಸಂದರ್ಶಕರ ಪುಸ್ತಕದಲ್ಲಿ ರಾಹುಲ್‌ ಹಿಂದೂಯೇತರ ಎಂದು ಬರೆಯಲಾಗಿದೆ ಎನ್ನುವ ಬಿಜೆಪಿಯ ಕೆಟ್ಟ ಕುತಂತ್ರವನ್ನು ಸಾಬೀತುಪಡಿಸಲು ಇವೆಲ್ಲವು ಸಾಲುವುದಿಲ್ಲ.

ಈ ವಿವಾದ ತಕ್ಷಣಕ್ಕೆ ನಾಟಕೀಯವಾಗಿ ಕೊನೆಗೊಳ್ಳುವುದೂ ಇಲ್ಲ. ಈ ಹಿಂದೆ ರಾಹುಲ್ ಗಾಂಧಿ ಅವರ ನಂಬಿಕೆ ಅಥವಾ ಧಾರ್ಮಿಕತೆಯು ರಾಷ್ಟ್ರೀಯ ರಾಜಕಾರಣದಲ್ಲಿ ಯಾವತ್ತೂ ವಿವಾದಕ್ಕೆ ಎಡೆ ಮಾಡಿಕೊಟ್ಟಿರಲಿಲ್ಲ. ರಾಹುಲ್‌ ತಾಯಿ ಸೋನಿಯಾ ಅವರು ಇಟಲಿಯವರಾಗಿದ್ದರಿಂದ ಅವರ ಧರ್ಮದ ಬಗ್ಗೆ ಕೆಲಮಟ್ಟಿಗೆ ವಿವಾದ ಉಂಟಾಗಿತ್ತು. ರಾಹುಲ್‌ ಪಾಲಿಗೆ ಇಂತಹ ವಿವಾದ ಯಾವತ್ತೂ ತಳಕು ಹಾಕಿಕೊಂಡಿರಲಿಲ್ಲ. ಇದುವರೆಗೆ ಯಾರೊಬ್ಬರೂ ಅವರನ್ನು ನೀವು ಯಾವ ದೇವರನ್ನು ಪ್ರಾರ್ಥಿಸುತ್ತೀರಿ ಅಥವಾ ಎಲ್ಲ ದೇವರನ್ನೂ ಪ್ರಾರ್ಥಿಸುವೀರಾ ಎಂದೂ ಪ್ರಶ್ನಿಸಿಲ್ಲ. ಯಾರೊಬ್ಬರೂ ಅದರ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ.

ಧರ್ಮನಿರಪೇಕ್ಷತೆಗೆ ಖಚಿತವಾದ ಮತ್ತು ವ್ಯಾವಹಾರಿಕವಾದ ವ್ಯಾಖ್ಯಾನವೂ ನಮ್ಮಲ್ಲಿ ಇಲ್ಲ ಎನ್ನುವುದೂ ಚರ್ಚಾಸ್ಪದ ಸಂಗತಿಯಾಗಿದೆ. ಅದು ನೆಹರೂ ಅವರ ನಿರೀಶ್ವರವಾದದಿಂದ ವಾಜಪೇಯಿ ಅವರ ಸೌಮ್ಯ ಸ್ವರೂಪದ ಧಾರ್ಮಿಕವಲ್ಲದ ಪ್ರಜ್ಞೆ ಮತ್ತು ಜಾತ್ಯತೀತತೆಗೆ ಸಂಬಂಧಿಸಿದ ಸಾಂವಿಧಾನಿಕ ಮಿತಿಗಳನ್ನು ಅಲ್ಪಮಟ್ಟಿಗೆ ಮನ್ನಿಸುವ ನರೇಂದ್ರ ಮೋದಿ ಅವರ ನಿಲುವಿನವರೆಗೆ ಸಾಕಷ್ಟು ವ್ಯತ್ಯಾಸಗಳನ್ನು ಹೊಂದಿದೆ.

ನಾನಿಲ್ಲಿ ಎಡಪಂಥೀಯರನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಒಂದು ವೇಳೆ ನೀವು ಪಕ್ಕಾ ನಾಸ್ತಿಕರಾಗಿದ್ದರೆ ಧರ್ಮ ನಿರಪೇಕ್ಷತೆಯು ನಿಮಗೆ ಅನ್ವಯಿಸುವುದಿಲ್ಲ. ಹೀಗಾಗಿ ನಾವು ಜಾತ್ಯತೀತತೆ ಕುರಿತ ಚರ್ಚೆಯನ್ನು ದೇಶದಲ್ಲಿ ಇರುವ ಶೇ 98 ರಿಂದ ಶೇ 99ರಷ್ಟು ಆಸ್ತಿಕರಿಗೆ ಮಾತ್ರ ಅನ್ವಯಿಸಬಹುದಾಗಿದೆ.

ನಮ್ಮ ರಾಷ್ಟ್ರೀಯ ರಾಜಕಾರಣದಲ್ಲಿ ಧರ್ಮವು ಯಾವ ಪಾತ್ರ ನಿರ್ವಹಿಸುತ್ತಿದೆ ಎನ್ನುವುದು ಹೆಚ್ಚು ಆಸಕ್ತಿಕರ ವಿದ್ಯಮಾನವಾಗಿದೆ. ಇಲ್ಲಿ ಕೆಲವು ಪ್ರಶ್ನೆಗಳೂ ಎದುರಾಗುತ್ತವೆ. ನಿಮ್ಮ ರಾಜಕೀಯದಲ್ಲಿ ನೀವು ಧರ್ಮವನ್ನು ಬಳಸುವಿರಾ, ವಿವಿಧ ಧರ್ಮಗಳ ಅನುಯಾಯಿಗಳನ್ನು ನೀವು ಒಂದೇ ಬಗೆಯಲ್ಲಿ ನೋಡುವಿರಾ. ಸಂವಿಧಾನದಲ್ಲಿ ಉಲ್ಲೇಖಿಸಲಾಗಿರುವ ಧರ್ಮನಿರಪೇಕ್ಷತೆ ಕುರಿತ ಬದ್ಧತೆ ಅಥವಾ ನಿಮ್ಮ ಧಾರ್ಮಿಕ ಸಿದ್ಧಾಂತಗಳ ಪೈಕಿ ನೀವು ಯಾವುದಕ್ಕೆ ಆದ್ಯತೆ ನೀಡುವಿರಿ. ಧರ್ಮದ ಆಧಾರದ ಮೇಲೆಯೇ ನೀವು ಮತ ಕೇಳುವಿರಾ. ನಿಮಗೆ ನಿಮ್ಮ ಧಾರ್ಮಿಕ ಕ್ರಿಯಾವಿಧಿಗಳು ಗೊತ್ತೇ. ನೀವು ಅವುಗಳನ್ನು ನಿಷ್ಠೆಯಿಂದ ಪಾಲಿಸುವಿರಾ. ಹಾಗಿದ್ದರೆ ನೀವು ಅವುಗಳ ಬಗ್ಗೆ ಸಾಕ್ಷ್ಯಾಧಾರಗಳನ್ನು ನೀಡುವಿರಾ?

ನಾಸ್ತಿಕವಾದಿಗಳನ್ನು (ನೆಹರೂ), ದ್ರಾವಿಡ ಪಕ್ಷಗಳ ಸಂದೇಹವಾದಿಗಳನ್ನು, ಎಡಪಕ್ಷಗಳ ನಾಸ್ತಿಕರನ್ನು ಮತ್ತು ಅದೇ ರೀತಿಯಲ್ಲಿ ಸಾಧುಗಳು, ಮಹಂತರು ಮತ್ತು ಮುಸ್ಲಿಂ ಧರ್ಮಗುರುಗಳನ್ನೂ ದೇಶವು ನಿರಂತರವಾಗಿ ಚುನಾಯಿಸುತ್ತ ಬಂದಿದೆ.

ವಿಶಿಷ್ಟ ಸಂದರ್ಭಗಳು ಮತ್ತು ನಿರ್ದಿಷ್ಟ ಪ್ರದೇಶಗಳಲ್ಲಿ ಧರ್ಮವು ಪ್ರಮುಖ ವಿಷಯವಾದ ಸಾಕಷ್ಟು ನಿದರ್ಶನಗಳೂ ಇವೆ. ಪಂಜಾಬ್‌ನಲ್ಲಿ ಅಕಾಲಿ ದಳ, ಕೇರಳದಲ್ಲಿ ಮುಸ್ಲಿಂ ಲೀಗ್‌ ಮತ್ತು ಕೇರಳ ಕಾಂಗ್ರೆಸ್‌ ಪಕ್ಷಗಳು ಕ್ರಮವಾಗಿ ಸಿಖ್‌, ಮುಸ್ಲಿಂ ಮತ್ತು ಕ್ರೈಸ್ತ ವೋಟ್‌ ಬ್ಯಾಂಕ್‌ ಮೇಲೆ ಸಾಕಷ್ಟು ಹಿಡಿತ ಹೊಂದಿವೆ. ಹೈದರಾಬಾದ್‌ನ ಸೀಮಿತ ಪ್ರದೇಶದಲ್ಲಿ ಅಸಾದುದ್ದೀನ್‌ ಓವೈಸಿ ಪಕ್ಷದ ಪ್ರಭಾವ ಇದೆ. ಆದರೆ, ಇಲ್ಲಿಯವರೆಗೆ ಯಾರೊಬ್ಬರೂ ರಾಹುಲ್‌ ಗಾಂಧಿ ಅವರ ಧರ್ಮ ಅಥವಾ ಧಾರ್ಮಿಕ ನಂಬಿಕೆ ಬಗ್ಗೆ ಚಕಾರ ಎತ್ತಿರಲಿಲ್ಲ. ರಾಹುಲ್‌ ಟ್ವಿಟರ್‌ನಲ್ಲಿ ತಮ್ಮ ವಿರುದ್ಧ ವ್ಯಕ್ತವಾದ ಟೀಕೆಗಳನ್ನು ಗಂಭೀರವಾಗಿ ಪರಿಗಣಿಸುವವರೆಗೆ ಅವರು ಪಾಲಿಸಿಕೊಂಡು ಬರುತ್ತಿರುವ ಧರ್ಮದ ಬಗ್ಗೆ ಯಾರೊಬ್ಬರೂ ತಲೆಕೆಡಿಸಿಕೊಂಡಿರಲಿಲ್ಲ.

ಉಗ್ರರ ವಿರುದ್ಧದ ಕಾರ್ಯಾಚರಣೆ, ರಾಜಕೀಯ ಅಖಾಡ ಅಥವಾ ಕ್ರಿಕೆಟ್‌ ಅಂಗಳ ಇರಲಿ, ನೀವು ನಿಮ್ಮ ಎದುರಾಳಿಗಳ ಸಾಮರ್ಥ್ಯದ ವಿರುದ್ಧ ಹೋರಾಡುವುದಿಲ್ಲ ಎನ್ನುವುದು ರಣರಂಗದ ಮೊದಲ ನಿಯಮವಾಗಿರುತ್ತದೆ. ಎದುರಾಳಿಯು ನಿಮ್ಮ ಸಾಮರ್ಥ್ಯದ ವಿರುದ್ಧ ಹೋರಾಡುವಂತೆ ಚಿತಾವಣೆ ನೀಡುವಿರಿ. ಈಗ ಕಾಂಗ್ರೆಸ್‌ ಮತ್ತು ಬಿಜೆಪಿ ಮಧ್ಯೆ ಇದೇ ಬಗೆಯ ಹೋರಾಟದ ಸಮೀಕರಣ ಸ್ಪಷ್ಟವಾಗಿ ಕಂಡು ಬರುತ್ತಿದೆ.

ಕೆಲವರು ಉದಾರ ಇಲ್ಲವೇ ಆಕ್ರಮಣಕಾರಿ ಧರ್ಮನಿರಪೇಕ್ಷತೆ, ರಾಷ್ಟ್ರೀಯತೆ, ಧಾರ್ಮಿಕತೆಗಳನ್ನು ಪ್ರತಿಪಾದಿಸಬಹುದು. ಇನ್ನೂ ಹಲವರು ಹಿಂದುತ್ವ ಅಳವಡಿಸಿಕೊಳ್ಳಬಹುದು, ಸಂವಿಧಾನದ ಅನಿವಾರ್ಯತೆ ಕಾರಣಕ್ಕೆ ಧರ್ಮನಿರಪೇಕ್ಷತೆ ರೂಢಿಸಿಕೊಳ್ಳಬಹುದು, ಕಟ್ಟಾ ರಾಷ್ಟ್ರೀಯತೆ ಪಾಲಿಸಬಹುದು ಮತ್ತು ಮುಚ್ಚುಮರೆ ಇಲ್ಲದೇ ತಮ್ಮಿಷ್ಟದ ಧರ್ಮ ಪಾಲಿಸಬಹುದು. ಎರಡೂ ಬಣಗಳ ವಾದಕ್ಕೆ ಹೆಚ್ಚಿನ ಬಲವೇನೂ ಇಲ್ಲ. ಬಿಜೆಪಿಯ ಸಾಮರ್ಥ್ಯದ ಜತೆ ಸ್ಪರ್ಧೆಗೆ ಇಳಿಯಲು ರಾಹುಲ್‌ ಗಾಂಧಿ ಮತ್ತು ಅವರ ಸಲಹೆಗಾರರಿಗೆ ಯಾವ ಹುಚ್ಚುತನ ಆವರಿಸಿಕೊಂಡಿದೆಯೋ ತಿಳಿಯದು. ಈ ಬಗ್ಗೆ ಅನೇಕರು ಸಾಕಷ್ಟು ಕತೆಗಳನ್ನು ಬರೆಯಬಹುದು. ತಲೆಮಾರುಗಳು ಇವರ ಧೈರ್ಯದ ಬಗ್ಗೆ ಸೋಜಿಗ ಪಡಬಹುದು. ಆದರೆ, ಯುದ್ಧದಲ್ಲಿ ಸೋತ ನಂತರ ನೀವು ಮರೆಯಾಗಿ ಬಿಡುವಿರಿ.

ರಾಹುಲ್‌ ಗಾಂಧಿ ಅವರು ಕೆಲ ದೇವಸ್ಥಾನಗಳಿಗೆ ಭೇಟಿ ನೀಡುತ್ತಿರುವುದನ್ನು ನೀವೆಲ್ಲ ಗಮನಿಸುತ್ತಿರಬಹುದು. 2014ರ ನಂತರದ ದೇಶಿ ರಾಜಕಾರಣದಲ್ಲಿ ಧರ್ಮವು ರಾಷ್ಟ್ರೀಯತೆಯ ಹೊಸ ವ್ಯಾಖ್ಯಾನದಲ್ಲಿ ಯಶಸ್ವಿಯಾಗಿ ಬೆರೆತುಕೊಂಡಿರುವುದನ್ನು ನಾವೆಲ್ಲ ವಾಸ್ತವದ ನೆಲೆಯಲ್ಲಿ ಒಪ್ಪಿಕೊಳ್ಳಬೇಕಾಗಿದೆ. ರಾಜಕೀಯದ ಸ್ಥಾಪಿತ ವ್ಯವಸ್ಥೆಯಿಂದ ಅಲ್ಪಸಂಖ್ಯಾತರನ್ನು ಹೊರಗೆ ಇಡಲಾಗಿದೆ. ನೀವು ನಮಗೆ ವೋಟ್‌ ನೀಡದಿರುವುದರಿಂದ ಅಧಿಕಾರ ಹಂಚಿಕೊಳ್ಳಲು ನೀವೇಕೆ ನಮ್ಮಲ್ಲಿಗೆ ಬರುವೀರಿ ಎಂದು ಹೇಳುತ್ತಲೇ ಅವರನ್ನು ದೂರ ಇರಿಸಲಾಗಿದೆ. ಹೀಗಾಗಿ ಹಲವರಿಗೆ ನಾನು ಕೂಡ ಹಿಂದೂ ಎಂದು ಹೇಳಿಕೊಳ್ಳದೇ ಬೇರೆ ಆಯ್ಕೆಗಳೇ ಇಲ್ಲ. ನಿಮ್ಮ ಧಾರ್ಮಿಕ ನಂಬಿಕೆ ಕುರಿತು ಪಿಸುಮಾತಿನ ಪ್ರಚಾರವು ಅದರಲ್ಲೂ ವಿಶೇಷವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಬಿರುಸಾಗಿಯೇ ಸಾಗಿದೆ.

ಈ ವಿವಾದವು ಈಗ ದೇವಸ್ಥಾನ ಭೇಟಿ ಮತ್ತು ದೇವಸ್ಥಾನಕ್ಕೆ ಭೇಟಿ ನೀಡಿದವರ ನೋಂದಣಿ ಪುಸ್ತಕದಲ್ಲಿ ಸಹಿ ಹಾಕಿದ್ದರ ಆಚೆಗೂ ವಿಸ್ತರಿಸಿದೆ. ಈ ಭೇಟಿಗೆ ರಾಜಕೀಯ ಬಣ್ಣ ಬೆರೆತಿರುವುದರಲ್ಲಿ ಸಮಸ್ಯೆ ಏನೂ ಇಲ್ಲ. ಮೋದಿ ಅವರು ಗುಜರಾತ್ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿನ ಚುನಾವಣೆ ವೇಳೆಯಲ್ಲಿಯೂ ನೆಹರೂ – ಗಾಂಧಿ ಕುಟುಂಬದವರು ಸೋಮನಾಥ ದೇವಾಲಯಕ್ಕೆ ಭೇಟಿ ನೀಡುತ್ತಿದ್ದರು. ಕಾರ್ಯಕ್ರಮ ಸಂಘಟಕರು, ದೇವಸ್ಥಾನದ ಸಂದರ್ಶಕರ ಪುಸ್ತಕ ವಿವಾದಕ್ಕೆ ಎಡೆ ಮಾಡಿಕೊಡಬಹುದು ಎನ್ನುವುದನ್ನು ಮುಂಚೆಯೇ ಊಹಿಸಬಹುದಾಗಿತ್ತು. ಅದೊಂದು ಸಣ್ಣ ವಿಷಯವಾಗಿದ್ದರೂ ತುಂಬ ಸೂಕ್ಷ್ಮ ಎನ್ನುವುದನ್ನೂ ಗ್ರಹಿಸಬೇಕಾಗಿತ್ತು.

ಒಂದು ವೇಳೆ ರಾಹುಲ್‌ ಗಾಂಧಿ ಅವರು, ಬೇರೆ ರೀತಿಯಲ್ಲಿ ಇದಕ್ಕೆ ಪ್ರತಿಕ್ರಿಯಿಸಿದ್ದರೆ ಈ ಚರ್ಚೆ ಇನ್ನೊಂದು ದಿಕ್ಕಿನತ್ತ ಹೊರಳುತ್ತಿತ್ತು. ‘ದೇವರಲ್ಲಿ ನಂಬಿಕೆ ಇರಿಸಿರುವ ನಾನು ಎಲ್ಲ ಪೂಜಾಸ್ಥಳಗಳಿಗೆ ಭೇಟಿ ನೀಡುವೆ. ಒಬ್ಬರ ಸ್ವಂತ ನಂಬಿಕೆಯು ಸಂಪೂರ್ಣವಾಗಿ ವ್ಯಕ್ತಿಗತವಾದದ್ದು ಎನ್ನುವುದರಲ್ಲಿ ನಾನು ನಂಬಿಕೆ ಹೊಂದಿರುವೆ. ನನಗೆ ಹಿಂದುತ್ವದಲ್ಲಿ ನಂಬಿಕೆ ಇರುವ ಬಗ್ಗೆ ನಾನು ಇತರರಂತೆ ಗರ್ವದಿಂದ ಬೀಗುವುದಿಲ್ಲ. ಗುಜರಾತ್‌ನಲ್ಲಿ 22 ವರ್ಷಗಳ ಕಾಲ ಅಧಿಕಾರದಲ್ಲಿ ಇರುವ ಪಕ್ಷವು (ಬಿಜೆಪಿ) ನನ್ನ ಧಾರ್ಮಿಕ ನಂಬಿಕೆಯನ್ನು ಕ್ಷುಲ್ಲಕ ಮತ್ತು ಹತಾಶೆಯ ರಾಜಕೀಯ ತಂತ್ರಗಾರಿಕೆ ರೂಪದಲ್ಲಿ ಬಳಸಲು ಮುಂದಾಗಿರುವುದು ಖೇದಕರ’ ಎಂಬರ್ಥದಲ್ಲಿ ಹೇಳಿಕೆ ನೀಡಿದ್ದರೆ ಚರ್ಚೆಯ ಗತಿಯೇ ಬದಲಾಗುತ್ತಿತ್ತು.

ಆದರೆ, ಕಾಂಗ್ರೆಸ್‌ ಈ ವಿವಾದಕ್ಕೆ ಭಿನ್ನ ಬಗೆಯಲ್ಲಿ ಪ್ರತಿಕ್ರಿಯಿಸಿದೆ. ರಾಹುಲ್‌ ಅವರ ಧಾರ್ಮಿಕ ನಂಬಿಕೆ ಪ್ರಶ್ನಿಸಿರುವುದಕ್ಕೆ ತಮ್ಮ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪಕ್ಷದ ಮುಖ್ಯ ವಕ್ತಾರರಾಗಿರುವ ರಂದೀಪ್‌ ಸಿಂಗ್‌ ಸುರ್ಜೆವಾಲಾ ಅವರು, ಮಾತಿನ ಓಘದಲ್ಲಿ ‘ರಾಹುಲ್‌ ಹಿಂದೂ ಅಷ್ಟೇ ಅಲ್ಲ, ಅವರು ಜನಿವಾರವನ್ನೂ ಧರಿಸುತ್ತಾರೆ’ ಎಂದೂ ಪ್ರತಿಪಾದಿಸಿದ್ದಾರೆ.

ಪವಿತ್ರ ನೂಲು ಧರಿಸುವುದು ಎಂದರೆ ಹೆಚ್ಚು ಹಿಂದೂ ಎಂಬರ್ಥವೇ? ಬ್ರಾಹ್ಮಣರು ಸೂಚಿಸುವ ಧಾರ್ಮಿಕ ವಿಧಿವಿಧಾನಗಳನ್ನು ಶಿರಸಾವಹಿಸಿ ಪಾಲಿಸುವುದರಿಂದ, ಧರ್ಮದ ಸಂಕೇತಗಳನ್ನು ಮೈಮೇಲೆ ಧರಿಸುವುದರಿಂದ ನಮ್ಮ ದೇವರು ನಮ್ಮ ಮೇಲೆ ಹೆಚ್ಚು ಔದಾರ್ಯ ತೋರುವರೇ. ಇವೆಲ್ಲವೂ ಹಿಂದುತ್ವದ ಅರ್ಹತಾ ಮಾನದಂಡಗಳಾಗಿದ್ದರೆ ದೇಶದಲ್ಲಿನ ಕೋಟ್ಯಂತರ ಜನರು ಧಾರ್ಮಿಕ ನಂಬಿಕೆಗಳಿಂದ ಹೊರ ಬಂದು ಸ್ವಧರ್ಮ ಪರಿತ್ಯಾಗಿಗಳಾಗುತ್ತಿದ್ದರು. ವಾಸ್ತವದಲ್ಲಿ ಇವೆಲ್ಲ ನಿಜವಲ್ಲ. ಸಿಖ್‌ ಧರ್ಮ ಪ್ರತಿಪಾದಿಸುವ ಐದು ಸಂಗತಿಗಳು, ಇಸ್ಲಾಂ ಧರ್ಮದ ಸುನ್ನತಿಯಂತೆ ಹಿಂದುತ್ವವು ಯಾವುದೇ ಸಂಕೇತಗಳನ್ನು ಒತ್ತಾಯಪೂರ್ವಕವಾಗಿ ಹೇರುವುದಿಲ್ಲ.

ಇಂದಿರಾ ಗಾಂಧಿ ಅವರು 1977ರ ಚುನಾವಣೆಯಲ್ಲಿ ಸೋಲು ಕಾಣುವವರೆಗೆ ನೆಹರೂ ಮನೆತನವು ತಾನು ಪಾಲಿಸಿಕೊಂಡು ಬಂದ ಧರ್ಮವನ್ನು ಸಾರ್ವಜನಿಕ ಬದುಕಿನಿಂದ ದೂರ ಇರಿಸಿತ್ತು. ಸೋಲಿನ ಆಘಾತ ಮತ್ತು ಅದಕ್ಕೂ ಹೆಚ್ಚಾಗಿ ಸಂಜಯ್‌ ಗಾಂಧಿ ಅವರ ಅಗಲಿಕೆಯು ಇಂದಿರಾ ಅವರ ಧೋರಣೆಯನ್ನು ಬದಲಿಸಿತ್ತು. ರುದ್ರಾಕ್ಷಿ ಹೆಚ್ಚು ಢಾಳವಾಗಿ ಕಾಣಿಸಿಕೊಳ್ಳಲಾರಂಭಿಸಿತ್ತು. ಅವರ ಸುತ್ತಮುತ್ತ ಬಾಬಾಗಳು, ತಾಂತ್ರಿಕರು ಹೆಚ್ಚಾಗಿ ಠಳಾಯಿಸಲಾರಂಭಿಸಿದರು. ಕೆಲ ತಾಂತ್ರಿಕರು ಅವರಲ್ಲಿ ಅಭದ್ರತೆಯ ಭಾವನೆ ಬಿತ್ತುವಲ್ಲಿ ಯಶಸ್ವಿಯಾಗಿದ್ದರು. ತಮ್ಮ ವೈರಿಗಳು ಪಾರಿವಾಳ ಮತ್ತು ಇತರ ಪಕ್ಷಿಗಳ ಮೂಲಕವೂ ತಮಗೆ ಕೆಡುಕು ಉಂಟು ಮಾಡಲಿದ್ದಾರೆ ಎನ್ನುವ ಆತಂಕವೂ ಅವರಲ್ಲಿ ಮನೆ ಮಾಡಿತ್ತು. ಅವರ ಭದ್ರತೆಯ ಹೊಣೆ ಹೊತ್ತುಕೊಂಡಿದ್ದ ಬೇಹುಗಾರಿಕೆ ಪಡೆಯು, ಅವರ ಮನೆಯ ಕಿಟಕಿ, ವೆಂಟಿಲೇಟರ್‌ಗಳನ್ನು ಮುಚ್ಚಿ ಪಕ್ಷಿಗಳು ಒಳಪ್ರವೇಶಿಸದಂತೆ ಎಚ್ಚರವಹಿಸಿತ್ತು. ತಮ್ಮ ಈ ಧಾರ್ಮಿಕ ನಂಬಿಕೆಗಳ ಬಗ್ಗೆ ಇಂದಿರಾ ಯಾವತ್ತೂ ಅಹಂಕಾರದಿಂದ ವರ್ತಿಸಿರಲಿಲ್ಲ ಅಥವಾ ಯಾರೊಬ್ಬರೂ ಅವರನ್ನು ಈ ಬಗ್ಗೆ ಪ್ರಶ್ನಿಸಿರಲಿಲ್ಲ.

ರಾಜೀವ್‌ ಗಾಂಧಿ ಅವರು ಮುನ್ನೆಲೆಗೆ ಬಂದ ನಂತರ ಭಾರಿ ಬದಲಾವಣೆಗಳು ಕಂಡು ಬಂದವು. ಶಾ ಬಾನೊ ಪ್ರಕರಣದಲ್ಲಿ ಅವರು ಮೌಲ್ವಿಗಳ ಒತ್ತಡಕ್ಕೆ ಮಣಿದು ಸುಪ್ರೀಂ ಕೋರ್ಟ್‌ನ ತೀರ್ಪಿಗೆ ಪ್ರತಿಯಾಗಿ ಕಾಯ್ದೆಗೆ ತಿದ್ದುಪಡಿ ತಂದು ಮೊದಲ ಪ್ರಮಾದ ಎಸಗಿದರು. ಇದು ಹಿಂದೂಗಳನ್ನು ವಿಚಲಿತಗೊಳಿಸಿತು. ಸಂಸತ್ತಿನಲ್ಲಿ ಕೇವಲ ಇಬ್ಬರು ಸಂಸದರನ್ನು ಹೊಂದಿದ್ದ ಬಿಜೆಪಿಯ ಬೆಂಬಲಕ್ಕೆ ನಿಲ್ಲುವ ದೃಢ ನಿರ್ಧಾರಕ್ಕೆ ಬಂದರು. ಕಾಂಗ್ರೆಸ್‌ ಸರ್ಕಾರ ಮುಸ್ಲಿಮರ ಓಲೈಕೆಯಲ್ಲಿ ತೊಡಗಿದೆ ಎನ್ನುವ ವಾದ ಹಠಾತ್ತಾಗಿ ಮುಂಚೂಣಿಗೆ ಬಂದಿತು.

ಇದಕ್ಕೆ ಪ್ರತಿಯಾಗಿ ರಾಜೀವ್‌ ಗಾಂಧಿ ಅವರು ಒಂದರ ಮೇಲೆ ಒಂದು ತಪ್ಪುಗಳನ್ನು ಎಸಗುತ್ತ ಸಾಗಿದರು. ಬಾಬ್ರಿ ಮಸೀದಿ – ರಾಮ ಜನ್ಮಭೂಮಿ ಸ್ಥಳದ ಬೀಗ ತೆರವುಗೊಳಿಸಲು ಅನುಮತಿ ನೀಡಿದರು. ಮಂದಿರ ನಿರ್ಮಾಣದ ಶಿಲಾನ್ಯಾಸ ಅನುಮೋದಿಸಿದರು. 1989ರಲ್ಲಿ ಅಲ್ಲಿಂದಲೇ ಚುನಾವಣಾ ಪ್ರಚಾರ ಅಭಿಯಾನ ಆರಂಭಿಸಿ ರಾಮ ರಾಜ್ಯದ ಭರವಸೆ ನೀಡಿದರು.

ಆ ಚುನಾವಣೆಯ ಫಲಿತಾಂಶ ಏನಾಯಿತು ಎನ್ನುವುದು ನಮಗೆಲ್ಲ ಗೊತ್ತಿದೆ. ಕಾಂಗ್ರೆಸ್‌ ಬಲ 414 ಸ್ಥಾನಗಳಿಂದ ಅದರ ಅರ್ಧಕ್ಕೆ ಕುಸಿಯಿತು. ಮುಸ್ಲಿಂ ಬಾಹುಳ್ಯದ ಪ್ರದೇಶಗಳಲ್ಲಿ ಅವರ ವೋಟ್‌ಗಳಿಗೆ ಎರವಾಯಿತು. ಜಾತಿಯಿಂದಾಗಿ ವಿಭಜನೆಗೊಂಡಿದ್ದ ಸಮಾಜವನ್ನು ಧರ್ಮದ ಮೂಲಕ ಒಂದುಗೂಡಿಸಲು ಬಿಜೆಪಿಗೆ ಇನ್ನೊಂದು ಅವಕಾಶ ಒದಗಿತು.

ಈ ಆಘಾತದಿಂದ ಕಾಂಗ್ರೆಸ್‌ ಮತ್ತೆಂದೂ ಚೇತರಿಸಿಕೊಳ್ಳಲಿಲ್ಲ. ಆ ಸಂದರ್ಭದಲ್ಲಿ ರಾಜೀವ್‌ ಗಾಂಧಿ ಅವರನ್ನು ಹಲವಾರು ವಿವಾದಗಳು ಮುತ್ತಿಕೊಂಡಿದ್ದವು. ಆದರೆ, ಶಾ ಬಾನೊ ಪ್ರಕರಣವು ಅವರ ಮೊದಲ ಪ್ರಮಾದವಾಗಿತ್ತು. ಇದರಿಂದಾಗಿ ಅವರು ತಾವು ಪ್ರತಿಪಾದಿಸುತ್ತಿದ್ದ ಜಾತ್ಯತೀತ ಧೋರಣೆಯ ಅಡಿಪಾಯವನ್ನೇ ಕಳೆದುಕೊಂಡಿದ್ದರು. ತಪ್ಪನ್ನು ಸರಿಪಡಿಸಿಕೊಳ್ಳುವ ಧಾವಂತದಲ್ಲಿ ಮುಸ್ಲಿಮರನ್ನೂ ಕಳೆದುಕೊಂಡರು. ಮಾರ್ಗ ಮಧ್ಯೆದಲ್ಲಿಯೇ ಹಿಂದುಗಳನ್ನು ಬಿಜೆಪಿಗೆ ಕಾಣಿಕೆ ರೂಪದಲ್ಲಿ ಒಪ್ಪಿಸಿದರು. ಬಿಜೆಪಿ ಸಾಮರ್ಥ್ಯದ ವಿರುದ್ಧದ ಹೋರಾಟದಲ್ಲಿ ಅವರು ಒಂದರ ಹಿಂದೆ ಒಂದು ತಪ್ಪುಗಳನ್ನು ಎಸಗುತ್ತಲೇ ಸಾಗಿದರು.

ಒಂದು ವೇಳೆ ರಾಹುಲ್‌ ಗಾಂಧಿ ಅವರೂ ಇತಿಹಾಸಪುನರಾವರ್ತನೆಗೊಳಿಸಲು ಇಷ್ಟಪಟ್ಟರೆ ಹಾಗೆ ಮಾಡಲು ಅವರು ಸ್ವತಂತ್ರರಾಗಿದ್ದಾರೆ. ಅವರೀಗ ಪ್ರಬುದ್ಧರಾಗಿದ್ದಾರೆ, ಅಷ್ಟೇ ಅಲ್ಲ ಸದ್ಯದಲ್ಲೇ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರೂ ಆಗಲಿದ್ದಾರೆ.

(ಲೇಖಕ ‘ದಿ ಪ್ರಿಂಟ್‌’ನ ಸಂಸ್ಥಾಪಕ ಹಾಗೂ ಪ್ರಧಾನ ಸಂಪಾದಕ)

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.