ಶನಿವಾರ, ಮೇ 21, 2022
25 °C

ಅಪ್ಪಿರಾಜ ಮತ್ತು ಶಿಕ್ಷಣ ವ್ಯವಸ್ಥೆ

ಡಾ.ಆರ್.ಬಾಲಸುಬ್ರಹ್ಮಣ್ಯಂ Updated:

ಅಕ್ಷರ ಗಾತ್ರ : | |

ರಾಷ್ಟ್ರೀಯ ಸರ್ಕಾರೇತರ ಸಂಸ್ಥೆಯೊಂದು, ದೇಶದಾದ್ಯಂತ ಮಕ್ಕಳು ಪಡೆಯುತ್ತಿರುವ ಶಿಕ್ಷಣದ ವಾರ್ಷಿಕ ಸ್ಥಿತಿಗತಿಯ ಮೇಲೆ ಬೆಳಕು ಚೆಲ್ಲುವ ವರದಿಯೊಂದನ್ನು ಇತ್ತೀಚೆಗೆ ಪ್ರಕಟಿಸಿತ್ತು. ಮಕ್ಕಳ ದಾಖಲಾತಿ ಪ್ರಮಾಣ ಶೇ 96ರಷ್ಟು ಏರಿಕೆಯಾಗಿದ್ದುದನ್ನು ಈ ಸಮೀಕ್ಷೆ ಪತ್ತೆ ಹಚ್ಚಿತ್ತು. ಆದರೆ ಇದೇ ವೇಳೆ 5ನೇ ತರಗತಿಯ ಕೇವಲ ಶೇ 53ರಷ್ಟು ಮಕ್ಕಳು ಎರಡನೇ ತರಗತಿ ಮಟ್ಟದ ಪಠ್ಯವನ್ನು ಓದಲಷ್ಟೇ ಶಕ್ತರಾಗಿದ್ದ ವಿಷಯವೂ ಹೊರಬಿದ್ದಿತ್ತು. ಇದಕ್ಕಿಂತಲೂ ಕೆಟ್ಟ ಸಂಗತಿ ಎಂದರೆ ಮೂಲ ಗಣಿತ ಕಲಿಕೆಯ ಅವರ ಸಾಮರ್ಥ್ಯವಂತೂ ಇನ್ನೂ ಹದಗೆಟ್ಟು ಹೋಗಿದ್ದುದು.ಇದಕ್ಕೆ ವ್ಯತಿರಿಕ್ತವಾಗಿ, ಮಕ್ಕಳ ಹಾಜರಾತಿ ಕೊರತೆಯಿಂದ ಕರ್ನಾಟಕದ ತುಮಕೂರು ಹಾಗೂ ಇತರ ಜಿಲ್ಲೆಗಳಲ್ಲಿ ರಾಜ್ಯ ಸರ್ಕಾರ ಕೆಲ ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚಲು ಹೊರಟಿರುವ ಸುದ್ದಿಯನ್ನು ಈಚೆಗೆ ಬಹುತೇಕ ಪತ್ರಿಕೆಗಳು ಒಳಪುಟಗಳಲ್ಲಿ ಸಣ್ಣದಾಗಿ ಪ್ರಕಟಿಸಿದ್ದವು. ಸರ್ವ ಶಿಕ್ಷಣ ಅಭಿಯಾನದಂತಹ ಯೋಜನೆಗಳ ಮೂಲಕ ಶಿಕ್ಷಣಕ್ಕೆ ಹಣ ಖರ್ಚಾಗುತ್ತಿರುವ ಪರಿಯನ್ನು ಗಮನಿಸಿದವರಿಗೆ ಭಾರತ ಸದ್ಯದಲ್ಲೇ ಜ್ಞಾನಾಧಾರಿತ ಸಮಾಜವಾಗಿ ಬದಲಾಗಲಿದೆಯೇನೋ ಎಂದು ಅನ್ನಿಸದೇ ಇರದು. ಇದಕ್ಕೆ ತಕ್ಕಂತೆ ರಾಷ್ಟ್ರೀಯ ಜ್ಞಾನ ಆಯೋಗ ಮತ್ತು ಕರ್ನಾಟಕ ಜ್ಞಾನ ಆಯೋಗಗಳು ಸಹ ಈ ನಿಟ್ಟಿನಲ್ಲಿ ಮುಂದುವರಿಯುವ ಮಾರ್ಗೋಪಾಯಗಳನ್ನು ನೀಡುವ ಪ್ರಯತ್ನವನ್ನು ಮಾಡುತ್ತಲೇ ಇವೆ. ಪ್ರಸಕ್ತ ಶಿಕ್ಷಣ ತಜ್ಞರು ಹಾಗೂ ನೀತಿ ನಿರೂಪಕರು ಇಡೀ ವಿದ್ಯಾಭ್ಯಾಸ ಮತ್ತು ಸಾಕ್ಷರತೆ ಎರಡನ್ನೂ ತುಲನೆ ಮಾಡಿ, ವಿದ್ಯಾಭ್ಯಾಸವು ಹೇಗೆ ವ್ಯಕ್ತಿ ಮತ್ತು ರಾಷ್ಟ್ರದ ಆರ್ಥಿಕ ಬೆಳವಣಿಗೆಗೆ ಪೂರಕವಾಗಿದೆ ಎಂಬುದರತ್ತ ದೃಷ್ಟಿ ಹರಿಸಿದ್ದಾರೆ. ಹಾಗಿದ್ದರೆ ಈ ಬೆಳವಣಿಗೆ ನಿಜಕ್ಕೂ ವಿದ್ಯಾಭ್ಯಾಸ ಹಾಗೂ ಅದರ ಫಲಿತಾಂಶದ ಬಗೆಗೆ ಸಮುದಾಯ ಒಪ್ಪತಕ್ಕ ವ್ಯಾಖ್ಯಾನವೇ?ಬದುಕೇ ಬದಲಾಗಬಹುದೆಂಬ ಭರವಸೆ ಹೊತ್ತು ಪ್ರತಿ ದಿನ ಶಾಲೆಗಳಿಗೆ ಹಾಜರಾಗುತ್ತಿರುವ ಸಾವಿರಾರು ಮಕ್ಕಳ ದೃಷ್ಟಿಯಿಂದ ನೋಡುವುದಾದರೆ ವಿದ್ಯಾಭ್ಯಾಸದ ನಿಜವಾದ ಅರ್ಥವಾದರೂ ಏನು? ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಪ್ರಮಾಣ ಶೇ 90 ದಾಟಿದೆ ಎಂದು ಸ್ಥಳೀಯ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ಇತ್ತೀಚೆಗೆ ನನ್ನ ಬಳಿ ಹೇಳುತ್ತಿದ್ದರು.ಹತ್ತಿ ಕೀಳುವ ಈ ಋತುವಿನಲ್ಲಿ ಹಿಂದೆ ಎಲ್ಲಾ ಮಕ್ಕಳು ಸಾಮಾನ್ಯವಾಗಿ ಆ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿದ್ದರು. ಆದರೆ ಈಗ ಈ ಸಮಯದಲ್ಲೂ ಇಷ್ಟೊಂದು ಪ್ರಮಾಣದ ಹಾಜರಾತಿ ಇದೆಯೆಂದರೆ ಅದು ನಿಜಕ್ಕೂ ಪ್ರಮುಖವಾದ ವಿಷಯವೇ; ಹೀಗಾಗಿ ಶಾಲೆಯು ಮಕ್ಕಳಿಗೆ ಬರೀ ಶಿಕ್ಷಣವನ್ನಷ್ಟೇ ನೀಡುತ್ತಿಲ್ಲ, ಸದ್ದಿಲ್ಲದೇ ಬಾಲ ಕಾರ್ಮಿಕ ಪದ್ಧತಿಯನ್ನೂ ತೊಡೆದುಹಾಕುತ್ತಿದೆ ಎಂದು ಅವರು ಹೇಳಿಕೊಂಡರು. ಆದರೆ ಕೇವಲ ಬಡತನವೊಂದೇ ಮಕ್ಕಳು ಹತ್ತಿ ಕೀಳುವುದನ್ನು ಪ್ರಚೋದಿಸುತ್ತದೆ ಎಂದು ನನಗೆ ಅನಿಸುವುದಿಲ್ಲ. ಶಾಲೆಯಿಂದ ಮಕ್ಕಳು ಹೊರಗುಳಿಯಲು ಶಿಕ್ಷಣ ವ್ಯವಸ್ಥೆಯ ಕೊಡುಗೆಯೂ ಸಾಕಷ್ಟಿದೆ ಎಂಬುದು ನನ್ನ ಬಲವಾದ ನಂಬಿಕೆ. ಏಕತಾನತೆಯಿಂದ ಕಳೆಗುಂದಿದ ಶಿಕ್ಷಕರು, ಸೃಜನಶೀಲತೆ ಇಲ್ಲದ ಪಠ್ಯ, ಕೊಳಕು- ಉಸಿರುಗಟ್ಟಿಸುವಂತಹ ಶಾಲಾ ಕೊಠಡಿಗಳು, ಶಿಕ್ಷೆಯ ಭಯ ಎಲ್ಲವೂ ಮಕ್ಕಳ ವರ್ತನೆಗೆ ತನ್ನದೇ ಆದ ಕೊಡುಗೆ ನೀಡುತ್ತವೆ. ಇದೆಲ್ಲವನ್ನೂ ಆಳವಾಗಿ ವಿಶ್ಲೇಷಿಸಿದಾಗ, ರಾಜ್ಯದ ಬಹುತೇಕ ಸರ್ಕಾರಿ ಶಾಲೆಗಳ, ಅದರಲ್ಲೂ ಗ್ರಾಮೀಣ ಮತ್ತು ಬುಡಕಟ್ಟು ಪ್ರದೇಶದ ಸಾವಿರಾರು ಮಕ್ಕಳ ಸ್ಥಿತಿಗತಿಯನ್ನು ಕಂಡಾಗ ನನ್ನ ಮನಸ್ಸು ಅಪ್ಪಿರಾಜ ಎಂಬ ವಿಶಿಷ್ಟ ಮಗುವಿನ ನೆನಪಿಗೆ ಜಾರುತ್ತದೆ.

ಸಾಹಸಪ್ರಿಯ ಅಪ್ಪಿರಾಜ

ಜೇನುಕುರುಬ ಪಂಗಡಕ್ಕೆ ಸೇರಿದ ಅಪ್ಪಿರಾಜ ದೂರದ ಆದಿವಾಸಿ ಕಾಲೊನಿಯಿಂದ ಶಾಲೆಗೆ ಬರುತ್ತಿದ್ದ. ಹೊಸಹಳ್ಳಿಯ ಆದಿವಾಸಿಗಳ ಶಾಲೆಯಲ್ಲಿ 9 ವರ್ಷಗಳ ಹಿಂದೆ ನಾನು ಮೊದಲ ಬಾರಿ ಅವನನ್ನು ಕಂಡಿದ್ದೆ. ನಾಚಿಕೆ ಸ್ವಭಾವದ ಈ ಹುಡುಗನನ್ನು ನನಗೆ ತೋರಿಸಿದ್ದ ಶಿಕ್ಷಕರೊಬ್ಬರು, ತರಗತಿಯ ಒಳಗೆ ಅಥವಾ ಹೊರಗಿನ ಚಟುವಟಿಕೆಗಳಲ್ಲಿ ಇವನನ್ನು ತೊಡಗಿಸುವುದು ದೊಡ್ಡ ಸವಾಲಿನ ಕೆಲಸವೇ ಸರಿ ಎಂದು ಹೇಳಿದ್ದರು. ಮತ್ತೊಂದು ದಿನ ನಾನು ಆ ಶಾಲೆಗೆ ಭೇಟಿ ನೀಡಿದಾಗ ಮುಖ್ಯೋಪಾಧ್ಯಾಯರು, ಶಿಕ್ಷಕರೆಲ್ಲರೂ ತೀವ್ರ ಆತಂಕದಲ್ಲಿದ್ದುದು ಕಂಡುಬಂತು. ಮಧ್ಯಾಹ್ನ ಊಟದ ಸಮಯ ಮುಗಿದ ಕೆಲ ಹೊತ್ತಿನ ಬಳಿಕ ಅಪ್ಪಿರಾಜ ಕಾಣೆಯಾಗಿದ್ದುದು ಅವರ ಗಮನಕ್ಕೆ ಬಂದಿತ್ತು. ಈ ಆತಂಕದ ಪರಿಣಾಮ ಇಡೀ ಶಾಲೆಯ ಮೇಲಾಗಿ ಒಂದು ರೀತಿಯ ಉದ್ವಿಗ್ನ ವಾತಾವರಣ ಅಲ್ಲಿ ಮನೆಮಾಡಿತ್ತು. ಅದಕ್ಕೆ ತಕ್ಕ ಕಾರಣವೂ ಇಲ್ಲದಿರಲಿಲ್ಲ. ಹೇಳಿ ಕೇಳಿ ಆ ಶಾಲೆ ಇದ್ದುದು ಬಂಡೀಪುರ ರಾಷ್ಟ್ರೀಯ ಉದ್ಯಾನದ ಅಂಚಿನಲ್ಲಿ. ಅಷ್ಟೇ ಅಲ್ಲದೆ, ಅದು ಹುಲಿ ಮತ್ತು ಚಿರತೆಯ ಚಲನವಲನಕ್ಕೂ ಹೆಸರಾದ ಪ್ರದೇಶವಾಗಿತ್ತು. ಹೀಗಾಗಿ ಎಲ್ಲರೂ ಒಂದಾಗಿ ಇಡೀ ಶಾಲೆಯ ಆವರಣವನ್ನು ಜಾಲಾಡಿದರೂ ಎಲ್ಲೂ ಅಪ್ಪಿರಾಜನ ಸುಳಿವೇ ಇರಲಿಲ್ಲ. ಅವನ ಕಾಲೊನಿಗೇನಾದರೂ ವಾಪಸ್ ಹೋಗಿರಬಹುದು ಎಂದು ಊಹಿಸಿ ಅಲ್ಲೂ ಹುಡುಕಿಯೇ ಬಿಡೋಣ ಎಂದು ನಾವು ಅಂದುಕೊಳ್ಳುವಷ್ಟರಲ್ಲೇ ಶಾಲೆಯ ಒಳಗೇ ಇರುವ ಉಗಿ ಜನರೇಟರ್‌ನ ಕೋಣೆಯೊಂದರಲ್ಲಿ ಆತ ಗಡದ್ದಾಗಿ ನಿದ್ದೆ ಹೊಡೆಯುತ್ತಿದ್ದುದು ಪತ್ತೆಯಾಯಿತು. ಅಡುಗೆ ಕೋಣೆಯ ಹೊರಭಾಗದಲ್ಲಿದ್ದ ಈ ಕೋಣೆಯಲ್ಲಿ ಜನರೇಟರ್ ಒಂದನ್ನು ಇರಿಸಲಾಗಿತ್ತು.ಅದರಿಂದ ಉತ್ಪಾದನೆಯಾಗುವ ಹಬೆಯಿಂದ ಶಾಲೆಗೆ ಬೇಕಾದ ಬಿಸಿಯೂಟ ತಯಾರಿಸಲಾಗುತ್ತಿತ್ತು. ಆ ಕೋಣೆಯಲ್ಲಿ ಅಪ್ಪಿರಾಜನನ್ನು ಕಂಡದ್ದೇ ಸಮಾಧಾನದ ನಿಟ್ಟುಸಿರು ಬಿಟ್ಟ ಶಿಕ್ಷಕರು, ತಮ್ಮನ್ನು ಈ ಪರಿಯ ಆತಂಕಕ್ಕೆ ದೂಡಿದ ಅವನನ್ನು ಸುಖನಿದ್ದೆಯಿಂದ ಎಬ್ಬಿಸಿ ಗದರಿ ತರಗತಿಗೆ ಕಳುಹಿಸಿದರು. ಬಳಿಕ, ಮಗು ಕೋಣೆಯಲ್ಲಿ ಏನು ಮಾಡುತ್ತಿತ್ತು ಎಂಬುದನ್ನು ಪತ್ತೆ ಹಚ್ಚುವಂತೆ ನಾನು ಮುಖ್ಯೋಪಾಧ್ಯಾಯರಿಗೆ ತಿಳಿಸಿದೆ.ಆಗ ಅಪ್ಪಿರಾಜ ಹೇಳಿದ ಕತೆ ಮಾತ್ರ ಅಸಾಧಾರಣವಾದುದು. ಮೂರು ಹೊತ್ತೂ ಸಸ್ಯಾಹಾರ ತಿಂದೂ ತಿಂದೂ ಅವನ ನಾಲಿಗೆ ಜಡ್ಡುಗಟ್ಟಿಹೋಗಿತ್ತಂತೆ. ಅದಕ್ಕೆ ಮಾಂಸದೂಟ ಮಾಡಲು ಅದು ತವಕಿಸುತ್ತಿತ್ತಂತೆ. ಏನೇ ಆಗಲಿ, ಶಾಲೆಯಲ್ಲಂತೂ ತನಗೆ ಬೇಕಾದ ಆಹಾರ ಸಿಗದು ಎಂಬ ಸತ್ಯ ಅಷ್ಟರಲ್ಲಿ ಅವನಿಗೆ ಮನವರಿಕೆ ಆಗಿಹೋಗಿತ್ತು.ಹಾಗಿದ್ದರೆ ಮುಂದೇನು ಮಾಡುವುದು ಎಂದು ಯೋಚಿಸಿದ ಆತ, ಜನ್ಮಜಾತವಾಗಿಯೇ ಬಂದಿದ್ದ ಪ್ರವೃತ್ತಿಯಿಂದ ತನ್ನ ಜಿಹ್ವಾಚಾಪಲ್ಯಕ್ಕೆ ಸ್ವತಃ ಪರಿಹಾರ ಕಂಡುಕೊಳ್ಳಲು ಮುಂದಾದ. ದಟ್ಟ ಗಿಡಮರಗಳಿಂದ ಆವೃತವಾಗಿದ್ದ ಇಡೀ ಶಾಲೆಯ ಆವರಣವನ್ನು ಮೆಲ್ಲಗೆ ಒಂದು ಸುತ್ತು ಹಾಕಿದಾಗ ಮಜಬೂತಾದ ಒಂದು ಐಡಿಯಾ ಅವನಿಗೆ ಹೊಳೆದೇಬಿಟ್ಟಿತು.ಎತ್ತರಕ್ಕೆ ಬೆಳೆದು ನಿಂತಿದ್ದ ಮರಗಳಲ್ಲಿ ಮೇಣ ತುಂಬಿದ ಮರವೊಂದನ್ನು ಅವನು ಆಯ್ಕೆ ಮಾಡಿಕೊಂಡ. ಅದರಿಂದ ಮೇಣವನ್ನು ಕಿತ್ತು ತೆಗೆದು ‘ಹಕ್ಕಿ ಬಲೆ’ಯೊಂದನ್ನು ಸಿದ್ಧಪಡಿಸಿಕೊಂಡ. ಸಣ್ಣ ಪಕ್ಷಿಗಳ ಆಶ್ರಯತಾಣವಾಗಿದ್ದ ಮರವೊಂದನ್ನು ಆರಿಸಿಕೊಂಡು ಸೂಕ್ತ ಸ್ಥಳ ಹುಡುಕಿ ಅಲ್ಲಿ ಆ ಬಲೆಯನ್ನು ಇರಿಸಿ ಬಂದ. ಮರುದಿನ ಪ್ರಕೃತಿ ಮಾತೆ ನಿಜಕ್ಕೂ ಅವನಿಗೆ ಒಲಿದು ಬಿಟ್ಟಿದ್ದಳು. ಆ ಪುಟ್ಟ ಹೊಟ್ಟೆ ತುಂಬುವಷ್ಟು ಗಾತ್ರದ ಹಕ್ಕಿಯೊಂದು ಅವನ ಬಲೆಗೆ ಬಿದ್ದೇ ಬಿಟ್ಟಿತ್ತು. ಕೇವಲ ಐದು ವರ್ಷದ ಆ ಬಾಲಕ ಮರ ಏರಿ, ನಿಸರ್ಗ ತನ್ನ ಪಾಲಿಗೆ ಕರುಣಿಸಿದ ಮಹತ್ವದ ಕಾಣಿಕೆಯನ್ನು ಜತನವಾಗಿ ಕೆಳಗೆ ಹೊತ್ತು ತಂದಿದ್ದ. ಆ ನಿರ್ಜೀವ ಪಕ್ಷಿಯನ್ನು ಅಂಗಿಯ ಜೇಬಿನ ಒಳಗೆ ಭದ್ರವಾಗಿ ಇರಿಸಿಕೊಂಡ ಆತ ಬೆಳಿಗ್ಗೆ ತರಗತಿಯಲ್ಲಿ ಮೌನವಾಗಿ ಕುಳಿತೇ ಮುಂದೆ ಅದನ್ನು ಏನು ಮಾಡಬೇಕೆಂಬ ಯೋಜನೆ ಹೆಣೆದ.ಹಿಂದಿನ ದಿನವೇ ಅಡುಗೆ ಕೋಣೆಯಿಂದ ತನ್ನ ಯೋಜನೆಗೆ ತಕ್ಕಂತೆ ಒಂದಷ್ಟು ಮಸಾಲೆ ಪದಾರ್ಥ ಮತ್ತು ಈರುಳ್ಳಿಯನ್ನು ಸಹ ತಂದಿಟ್ಟುಕೊಂಡಿದ್ದ. ಮಧ್ಯಾಹ್ನ ಊಟಕ್ಕೆ ಬಿಡುವ ಸ್ವಲ್ಪ ಸಮಯಕ್ಕೆ ಮೊದಲು ಉಗಿ ಜನರೇಟರ್‌ನ ಕೊಠಡಿಯ ಒಳಗೆ ಸೇರಿಕೊಂಡ. ಅಲ್ಲಿ ಹಕ್ಕಿಯ ರೆಕ್ಕೆಪುಕ್ಕ ಕಿತ್ತು ಶುಚಿಗೊಳಿಸಿ ಅಲ್ಲೇ ಮೂಲೆಯಲ್ಲಿ ಬಿದ್ದಿದ್ದ ಕಬ್ಬಿಣದ ಸಲಾಕೆಯೊಂದನ್ನು ತೆಗೆದುಕೊಂಡು ಅದಕ್ಕೆ ಹಕ್ಕಿಯ ದೇಹವನ್ನು ಸಿಕ್ಕಿಸಿದ. ಜನರೇಟರ್‌ನಿಂದ ಹೊರಡುತ್ತಿದ್ದ ಬೆಂಕಿಗೆ ಹಿಡಿದು ಚೆನ್ನಾಗಿ ಅದನ್ನು ಬೇಯಿಸಿಕೊಂಡು ಮಸಾಲೆ ಹಚ್ಚಿ ಚೆನ್ನಾಗಿ ತಿಂದು ಮುಗಿಸಿದ. ಮೊದಲೇ ಬೆಚ್ಚಗಿದ್ದ ಕೋಣೆ, ಅದರ ಜೊತೆಗೆ ಬಯಸೀ ಬಯಸೀ ಪಡೆದ ಪುಷ್ಕಳ ಭೋಜನ... ಇನ್ನು ಕೇಳಬೇಕೇ. ಹೆಚ್ಚು ಕಾಲ ನಿದ್ರೆಯನ್ನು ತಡೆಹಿಡಿಯಲು ಅವನಿಗೆ ಸಾಧ್ಯವಾಗಲೇ ಇಲ್ಲ.ಅವನ ಈ ಕತೆ ಕೇಳಿದ ನನಗೆ ಒಂದು ರೀತಿಯಲ್ಲಿ ಜ್ಞಾನೋದಯವೇ ಆದಂತಾಯಿತು. ಕೇವಲ ಐದು ವರ್ಷದ ಹುಡುಗನಿಗೆ ಹಕ್ಕಿ ಶಿಕಾರಿಗೆ ಯಾವ ಅಂಟು ಬಳಸಬೇಕು, ಅದು ಸಿಗುವ ಮರ ಯಾವುದು, ಹಕ್ಕಿಗಳನ್ನು ಹಿಡಿಯಲು ಹೇಗೆ ಬಲೆ ಬೀಸಬೇಕು ಎಂಬ ವಿವರವೆಲ್ಲವೂ ಚೆನ್ನಾಗಿ ಕರಗತವಾಗಿದೆ. ತನಗೇನು ಬೇಕೋ ಅದನ್ನು ಹೇಗೆ ಪಡೆಯಬೇಕು ಎಂಬುದರಲ್ಲಿ ಆತ ಸಹಜವಾಗಿಯೇ ನಿಷ್ಣಾತನಾಗಿದ್ದಾನೆ. ನಮ್ಮ ಶಾಲೆಗಳು ಮಕ್ಕಳಿಗೆ ಕಲಿಸಬೇಕಾದದ್ದೂ ಇದನ್ನೇ ಅಲ್ಲವೇ? ಹಾಗಿದ್ದರೆ ಈಗಾಗಲೇ ತನಗೆ ಏನೆಲ್ಲಾ ಗೊತ್ತೋ ಅದೆಲ್ಲವನ್ನೂ ಮರೆತು ತನ್ನ ಬದುಕಿನ ಭರಪೂರ 10 ವರ್ಷಗಳನ್ನು ಅಪ್ಪಿರಾಜ ಶಾಲೆಯಲ್ಲಿ ಯಾಕೆ ಕಳೆಯಬೇಕು? ಇಂತಹ ಸ್ಥಿತಿಯನ್ನು ಮಾರ್ಕ್‌ಟ್ವೇನ್‌ನ ಮಾತಿಗೆ ತಳಕು ಹಾಕಿ ಹೇಳುವುದಾದರೆ, ನಮ್ಮ ಶಾಲಾ ವಿದ್ಯಾಭ್ಯಾಸವು ಅಪ್ಪಿರಾಜನ ಸಹಜ ಶಿಕ್ಷಣದಲ್ಲಿ ಮೂಗು ತೂರಿಸದಿದ್ದರೆ ಅಷ್ಟೇ ಸಾಕು.ಶಿಕ್ಷಣವು ಸಂದರ್ಭೋಚಿತವಾಗಿರಬೇಕು ಮತ್ತು ಅಪ್ಪಿರಾಜನಂತಹ ನೂರಾರು ಮಕ್ಕಳನ್ನು ಒಳಗೊಳ್ಳುವಂತಿರಬೇಕು. ನಮ್ಮ ಶಾಲಾ ವ್ಯವಸ್ಥೆ ಇಂತಹ ಮಕ್ಕಳ ಸೃಜನಶೀಲತೆಯನ್ನು ಒರೆಗೆ ಹಚ್ಚುತ್ತದೆಂಬ ಭರವಸೆಯನ್ನು ನಮ್ಮಲ್ಲಿ ಮೂಡಿಸುವಂತಿರಬೇಕು. ಅದು ಬಿಟ್ಟು ಮಕ್ಕಳು ಇಷ್ಟಪಡದ ಮತ್ತು ಯಾವುದೇ ರೀತಿಯಲ್ಲೂ ಅವರಿಗೆ ಲಾಭವನ್ನೇ ತಂದುಕೊಡದ ಸಿದ್ಧ ಮಾದರಿಯ ಸ್ಪರ್ಧಾ ಪ್ರಪಂಚಕ್ಕೆ ಅವರನ್ನು ದೂಡುವಂತಿರಬಾರದು. ವಿದ್ಯಾಭ್ಯಾಸ ಮಕ್ಕಳಲ್ಲಿ ಸಹಜವಾಗಿಯೇ ಇರುವ ಕೌಶಲ ಮತ್ತು ಸಾಮರ್ಥ್ಯ ಪುಟಿದೇಳುವಂತೆ ಮಾಡಿ ಅವರನ್ನು ಹೊರ ಪ್ರಪಂಚದ ಬದಲಾವಣೆಗೆ ಪೂರಕವಾಗಿ ಸಜ್ಜುಗೊಳಿಸುವಂತಿರಬೇಕು.ಇದಕ್ಕೆ ಪೂರಕವಾಗಿ, ರಾಜ್ಯದಾದ್ಯಂತ ಇರುವ ನಮ್ಮ ಪಠ್ಯಕ್ರಮವು ಸಂದರ್ಭೋಚಿತವಾದ ಪ್ರಸ್ತುತತೆ ಹೊಂದಿದೆಯೇ ಮತ್ತು ಸಾಂಸ್ಕೃತಿಕವಾಗಿ ನಮಗೆ ತಕ್ಕುದಾಗಿದೆಯೇ ಎಂಬುದನ್ನು ನಾವು ಪರಾಮರ್ಶೆಗೆ ಒಳಪಡಿಸಬೇಕಾಗಿದೆ.

ಇದನ್ನೇ ಸ್ವಾಮಿ ವಿವೇಕಾನಂದರು ‘ಶಿಕ್ಷಣ ಮಾನವನಲ್ಲಿ ಸುಪ್ತವಾಗಿರುವ ಪರಿಪೂರ್ಣತೆಯನ್ನು ಹೊರತರುವಂತಿರಬೇಕು’ ಎಂದು ಹೇಳಿರುವುದು.

(ಲೇಖಕರು ಅಭಿವೃದ್ಧಿ ಕಾರ್ಯಕರ್ತರು ಮತ್ತು ಸ್ವಾಮಿ ವಿವೇಕಾನಂದ ಯುವ ಚಳವಳಿಯ ಸಂಸ್ಥಾಪಕರು. ಇ ಮೇಲ್ ವಿಳಾಸ:   drbalu@gmail.com )

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.