ಭಾನುವಾರ, ಮೇ 9, 2021
25 °C

ಆಧುನಿಕ ನಾಗರಿಕತೆಯ ನಿರಸನ...

ಎಚ್.ಎಸ್.ಶಿವಪ್ರಕಾಶ್ Updated:

ಅಕ್ಷರ ಗಾತ್ರ : | |

ಸುದ್ದಿಮಾಧ್ಯಮಗಳಲ್ಲಿ ನಮಗೆ ದೊರಕು­ತ್ತಿರುವ ನಿತ್ಯಘಟನೆಗಳ ವಿವರ,- ವರದಿ­ಗಳು ತೀವ್ರ ಅಂತರ್ವಿರೋಧಗಳ ಕತೆ ಹೇಳುತ್ತಿವೆ. ಒಂದು ಕಡೆ ಶಾಂತಿಸಂಧಾನಗಳು, ಸುಧಾರಣಾ­ಯತ್ನಗಳು, ಭವ್ಯಭವಿತವ್ಯದ ಘೋಷಣೆಗಳು. ವಿದ್ಯುನ್ಮಾನ ತಂತ್ರಜ್ಞಾನದ ಮಾಂತ್ರಿಕ ಶಕ್ತಿ­ಯಿಂದ, ಪ್ರಗತಿಯ ಪರಾಕಾಷ್ಠತೆಯಾಗಿರುವ ಗೋಳೀಕರಣದ ಮಂತ್ರದಂಡದಿಂದ ಸೃಷ್ಟಿ ಯಾ­ಗು­ತ್ತಿರುವ ಆದರ್ಶಲೋಕದ ನಕಾಶೆಗಳು. ಇನ್ನೊಂದು ಕಡೆ ದಾರುಣ ಹಿಂಸೆಗಳ, ಘೋರ ಅಪರಾಧಗಳ, ಭಯಂಕರ ಭ್ರಷ್ಟಾಚಾರಗಳ, ಕೊಲೆ-ಸುಲಿಗೆ-ಮಾನಭಂಗಗಳ ಕರಾಳ ಚಿತ್ರ­ಗಳು. ಬೇಲಿ ಎದ್ದು ಹೊಲಗಳನ್ನು ಮೇಯು­ತ್ತಿದೆ. ಆದರ್ಶಗಳನ್ನು ಬೋಧಿಸುವ ಆಶ್ರಮಗಳಲ್ಲಿ ಅತ್ಯಾಚಾರಗಳಾಗುತ್ತಿವೆ. ವಿದ್ಯಾಶಾಲೆಗಳಲ್ಲಿ ಹೆಂಗೂಸುಗಳ ಮಾನಭಂಗವಾಗುತ್ತಿದೆ. ಪ್ರಜಾ­ತಂತ್ರಗಳು ಪ್ರಜೆಗಳ ವಿರುದ್ಧದ ಷಡ್ಯಂತ್ರ­ಗಳಾ­ಗು­ತ್ತಿವೆ. ಸಾಗರದಷ್ಟು ಸುಖಸಾಧನಗಳು ಸೃಷ್ಟಿಯಾ­ಗಿಯೂ ಸಾಸಿವೆಯಷ್ಟು ಸಮಾಧಾನವೂ ದೊರಕ­ದಂತಾಗುತ್ತಿದೆ.

ಆಧುನಿಕ ಮಾನವಕೇಂದ್ರಿತ ಸಮಾಜ ನಿರ್ಮಾ­ಣದ ಮೊದಲ ಹಂತದಲ್ಲಿ ಬದುಕಿದ್ದ ಷೇಕ್ಸ್‌­ಪಿಯರನ ಕಲ್ಪನೆಯ ಹ್ಯಾಮ್ಲೆಟ್ಟನ ಮನಕಲಕುವ ಮಾತುಗಳು ನೆನಪಾಗುತ್ತಿವೆ.‘ಮನುಷ್ಯನೆಂಬುವನು ಅದೆಂಥಾ ಕೃತಿ! ವಿಚಾರ­­ಶಕ್ತಿಯಲ್ಲಿ ಅದೆಷ್ಟು ಶ್ರೇಷ್ಠ! ಗುಣಗಳೋ ಅನಂತ! ರೂಪ-ರೂಢಿಗಳಲ್ಲಿ ಅದೆಷ್ಟು ಸ್ಪಷ್ಟ, ಅಭಿನಂದ­ನೀಯ! ನಡವಳಿಕೆಯಲ್ಲಿ ಕಿನ್ನರನ ಹಾಗೆ! ತಿಳಿವಳಿಕೆ­ಯಲ್ಲಿ ದೇವತೆಯ ಹಾಗೆ! ಜಗತ್ತಿನ ಸೊಗಸು! ಜೀವಿಗಳಲ್ಲಿ ಉತ್ಕೃಷ್ಟ!’

ಆದರೆ ಈ ಮೆಚ್ಚುಗೆ ಮಾತುಗಳ ಸರ ಮಾ­ಲೆಯ ಕೊನೆಗೆ ಮಾನವ ಸ್ವಭಾವದ ಭ್ರಷ್ಟ­ಸಾಧ್ಯತೆ­ಯನ್ನು ಕಂಡು ಹೌಹಾರಿ ಹೀಗೆನ್ನುತ್ತಾನೆ:

‘ಆದರೂ ಯಾಕೆ ಇದೆಲ್ಲಾ ನನಗೆ ದೂಳಿನ ಸಮ?’ದೇವ-ದಾನವರ, ಸ್ವರ್ಗ-ನರಕಗಳ ವೈರುಧ್ಯ­ಗಳ ನಡುವೆ ಆಧುನಿಕಪೂರ್ವ ಸಮಾಜಗಳು ತಮ್ಮ ಪುರಾಣೇತಿಹಾಸಗಳಲ್ಲಿ ಇದೇ ಬಗೆಯ ವೈರುಧ್ಯಗಳನ್ನು ಚಿತ್ರಿಸಿಕೊಳ್ಳುತ್ತಿದ್ದವು. ಆದರೆ ಆಗಿನ್ನೂ ನಿರಂತರ ಪ್ರಗತಿಯ ಸಾಧ್ಯತೆಗಳು ಗೋಚರವಾಗಿರಲಿಲ್ಲ. ಪ್ರಗತಿ-–ದುರ್ಗತಿಗಳ ನಿರಂತರ ಆವರ್ತನಗಳಲ್ಲಿ ಜೀವರಾಶಿಯ ಏಳು­ಬೀಳು­ಗಳನ್ನು ಅವು ಕಂಡುಕೊಂಡಿದ್ದವು. ಜಗತ್ತಿನ ಪ್ರಪ್ರಥಮ ಮಹಾಕಾವ್ಯವಾದ ಮೆಸಪಟೋಮಿ­ಯಾದ  ‘ಗಿಲ್ಗೆಮಿಷ್’ ಕತೆಯ ನಾಯಕ ಮೃತ್ಯು­ವಿನ ನಿಗೂಢಗಳನ್ನು ಅರಸಲು ಹೊರಟು ವಿಫಲ­ನಾಗಿ ಮಾನವರ ಮರ್ತ್ಯಲೋಕದ ಚಲುವನ್ನು ಸವಿಯುವುದರಲ್ಲಿ ತೃಪ್ತನಾದ.ಆದರೆ, ರೆನೇ­ಸಾನ್ಸ್ ಯುಗದ ವಕ್ತಾರನಾದ ಡಾಕ್ಟರ್ ಫಾಸ್ಟಸ್ ಜಗನ್ನಿಯಂತ್ರಕ ಶಕ್ತಿಗಳನ್ನು ವಶಪಡಿಸಿ­ಕೊಂಡು ತಾನೇ ಈಶ್ವರನಂತಾದ. (ಕೊನೆಗೆ ಅವನೂ ಮಣ್ಣುಮುಕ್ಕಿದ್ದು ಬೇರೆಯ ಮಾತು). ಎಲ್ಲವನ್ನೂ ವಶಪಡಿಸಿಕೊಳ್ಳುವ ತಾಕತ್ತಿದ್ದರೂ ಎಲ್ಲವನ್ನೂ ಕಳೆದುಕೊಳ್ಳುವ ಅವನ ದುರಂತ ಅನೂಹ್ಯ ಶಕ್ತಿಗಳ ಕೈಗೊಂಬೆಯಾಗಿ ನಾಶವಾ­ಗುವ ಈಡಿಪಸ್ಸಿನ ಕತೆಗಿಂತಾ ಭಿನ್ನವಾದುದು.ಮಾನವಕೇಂದ್ರಿತ ನಾಗರಿಕತೆಯ ಉಗಮ ಕಾಲದಿಂದ ಅತಿಮಾನವ ಶಕ್ತಿಗಳ ಸೃಷ್ಟಿ-–ವಿನಾಶಕ ಶಕ್ತಿಗಳು ಮನುಷ್ಯನ ಕೈವಶವಾದವು. ಇದನ್ನು ಇಂಗ್ಲಿಷ್ ಕವಿ–-ದಾರ್ಶನಿಕ ವಿಲಿಯಂ ಬ್ಲೇಕ್ ತನ್ನ ‘ಫ್ರೆಂಚ್ ರೆವಲ್ಯೂಷನ್’ ಎಂಬ ಖಂಡಕಾವ್ಯದಲ್ಲಿ ಸಾಂಕೇತಿಕವಾಗಿ ಚಿತ್ರಿಸಿದ್ದಾನೆ. ಜಗತ್ತಿನ ಎಲ್ಲ ಪೋಪರೂ ಒಂದಾಗಿ ತಮ್ಮ ರಾಜದಂಡವನ್ನು ನ್ಯೂಟನ್ನನಿಗೆ ಸಮರ್ಪಿ­ಸು­ತ್ತಾರೆ. ಆ ಮೂಲಕ ದೈವನಿರ್ಮಿತ ಅಧಿಭೌತಿಕ ಶಕ್ತಿಗಳು ಮಾನವ­ನಿರ್ಮಿತ ವಿಜ್ಞಾನದ ವಶವರ್ತಿ­ಯಾಗುತ್ತವೆ. ಕಳೆದ ಈಚಿನ ಶತಮಾನಗಳ ಇತಿಹಾಸ ಮಾನವ­ನಿರ್ಮಿತ ಶಕ್ತಿಗಳ, ಸಿದ್ಧಾಂತ­ಗಳ ಪರಸ್ಪರ ವಿರೋಧಿಯಾದ ಸ್ವರ್ಗ–- ನರಕ ಸಾಧ್ಯತೆಗಳ ಕಥನ. ದೇವಲೋಕ– ನರಕ­ಲೋಕ­ಗಳೆರಡೂ ಈ ಲೋಕದಲ್ಲೇ.ಆಧುನಿಕ ವಿಜ್ಞಾನ– ತಂತ್ರಜ್ಞಾನಗಳ ಈ ವಿಡಂಬನೆ ಇತಿಹಾಸ ಪ್ರಸಿದ್ಧವಾದ ಮಾರ್ಕ್ಸ್ ಮತ್ತು ಮಾಲ್ಥಸ್ಸರ ಚರ್ಚೆಯಲ್ಲಿ ಬಿಂಬಿತ­ವಾಯಿತು. ಮನುಷ್ಯನ ವೈಜ್ಞಾನಿಕ ಪ್ರಗತಿಗೆ ಮಿತಿ­ಯುಂಟು, ಅದು ಅತಿರೇಕಕ್ಕೆ ಹೋದಾಗ ಪ್ರಕೃ­ತಿಯು ಕ್ಷಾಮಡಾಮರಾದಿ ವಿಕೋಪ­-ಗಳನ್ನುಂಟು­ಮಾಡಿ ತನ್ನ ಶಕ್ತಿಯನ್ನು ಮೆರೆಯುತ್ತದೆಂದ ಮಾಲ್ಥಸ್. ಪ್ರಗತಿಪೂಜಕ ಮಾರ್ಕ್ಸನಿಗೆ ಇದು ಸುತರಾಂ ಒಪ್ಪಿತವಾಗಲಿಲ್ಲ. ಅವನ ಪ್ರಕಾರ ಮಾಲ್ಥಸ್ ಚಿಂತನೆಯಲ್ಲಿ ಒಂದು ದೊಡ್ಡ ಕೊರೆ­ಯಿತ್ತು. ಸಮಕಾಲೀನ ವಿಜ್ಞಾನ, ತಂತ್ರ­ಜ್ಞಾನ­ಗಳು ಈಗಿದ್ದ ಹಾಗೇ ಇರುವುದಿಲ್ಲ. ವಿಜ್ಞಾನದ ವಿಕ­ಸನ ಸಾಧ್ಯತೆ ಸಮಕಾಲೀನ ಮಿತಿ­ಗಳನ್ನು ದಾಟಿ ಪ್ರಕೃತಿಯನ್ನು ಸಂಪೂರ್ಣ ಹದ್ದು­ಬಸ್ತಿಗೆ ತರ­ಬಲ್ಲುದು ಎಂದು ವಾದಿಸಿದ.ಆಧುನಿಕ ಇತಿಹಾಸದ ಎರಡು ನಿರ್ಣಾಯಕ ವಾದಗಳಾದ ಸಮಾಜವಾದ ಮತ್ತು ಬೂರ್ಜ್ವಾ ಉದಾರವಾದಗಳ ನಡುವೆ ಮೂಲಭೂತ ವ್ಯತ್ಯಾಸ­­ಗಳಿದ್ದರೂ ಮಾನವನಿರ್ಮಿತ ವಿಜ್ಞಾನದ ನಿರಂತರ ಪ್ರಗತಿಸಾಧ್ಯತೆಯ ಬಗೆಗಿನ ವಿಶ್ವಾಸ ಎರಡಕ್ಕೂ ಸಾಮಾನ್ಯವಾಗಿತ್ತು. ಕಳೆದ ಶತಮಾ­ನದ ವಿದ್ಯಮಾನಗಳು ಈ ವಿಶ್ವಾಸವನ್ನು ಬಹು­ಮಟ್ಟಿಗೆ ಸುಳ್ಳಾಗಿಸಿವೆ.ಇಗೋ ಈಗ ವಿಜ್ಞಾನನಿರ್ಮಿತ ಸ್ವರ್ಗ ಇನ್ನೇನು ಅಸ್ತಿತ್ವಕ್ಕೆ ಬಂದೇ ಬಿಟ್ಟಿತು ಎಂದು ಬೀಗು-­ವುದ­ರೊಳಗೆ ಎರಡು ಮಹಾನ್ ವಿಶ್ವ­ಸಮರಗಳು ಜಗತ್ತನ್ನು ಕವಿದವು. ಆನಂತರ ಮತ್ತೆ ಪುನರ್‌ ನಿರ್ಮಾಣಗಳ ಹರಸಾಹಸಗಳು. ಅನಂತರ ಪೂರ್ವ­­ಯುರೋಪಿನ ಸ್ವಯಂಘೋಷಿತ ಸಾಮ್ಯ­ವಾದಿ ಸ್ವರ್ಗಗಳು ಕುಸಿದುಹೋದದ್ದನ್ನು ಬಂಡ­ವಾಳ­ಶಾಹಿ ಜಗತ್ತು ವಿಜೃಂಭಿಸಿತು. ಆದರೆ ಈ ವಿಜೃಂಭಣೆಯೊಳಗೆ ಹೊಸ ವಿನಾಶದ ಬೀಜಗಳು ಮೊಳೆತವು.‘ಯಾಕೆ ಈ ಭೂಮಿಯಲ್ಲಿ ಶೋಕವೇ ಬೆಳೆ­ಯುತ್ತಿರುತ್ತದೆ?’ ಎಂದು ಕೇಳಿದ ಟರ್ಕಿಯ ಕ್ರಾಂತಿಕಾರಿ ಕವಿ ನಿಸ್ಸಿಂ ಹಿಕ್ಮತ್.

ಇದಕ್ಕೆ ಜವಾಬು ಸಾಮಾಜಿಕ ಬದುಕಿನಲ್ಲಾ­ಗಲಿ, ವ್ಯಕ್ತಿಜೀವನದ ವಿವರಗಳಲ್ಲಾಗಲಿ ದೊರಕು­ತ್ತಿಲ್ಲ. ‘ದೇವರ ನಗರಗಳೆಲ್ಲವೂ ಕುಸಿಯುತ್ತವೆ’ ಎಂದ ಆಲ್ಡಸ್ ಹಕ್ಸ್‌ಲಿ. ಮಾನವ ನಗರ­ಗಳಾದರೂ ಉಳಿ­ದಾವೆ?ಗ್ರೀಕ್ ಪುರಾಣದ ಕತೆಯೊಂದು ನೆನಪಾಗು­ತ್ತದೆ. ಕುದುರೆಕಾಲಿನ ಮಾನವದೇಹದ ಸೆಂಟಾರ­ರೆಂಬ ಜೀವಿಗಳಿದ್ದರಂತೆ. ಅವರ ನಾಯಕನೊಬ್ಬ ದೇವ­ತೆಗಳಿಂದ ಅಮರತೆಯ ವರ ಪಡೆದು-­ಕೊಂಡ. ಆದರೆ ಬದುಕು ಎಷ್ಟು ದುಸ್ತರ­ವಾಯಿತೆಂದರೆ ಸಾವಿಗೆ ಹಂಬಲಿಸತೊಡಗಿದ. ಸಾವಿಗಾಗಿ ಪ್ರಾರ್ಥಿಸತೊಡಗಿದ.ದೇವರುಗಳು ಮತ್ತು ನಿಯತಿಯಿಂದ ಬಿಡು­ಗಡೆ ಪಡೆದುಕೊಂಡನೆಂದು ಭ್ರಮಿಸಿದ ಆಧುನಿಕ ಮಾನವಕುಲದ ಕತೆಯ ಹಾಗಿದೆ ಇದು. ಅಮ­ರತ್ವದ ವರ ದೊರಕಿದ ನಂತರ ಇನ್ನಾವ ತೊಂದರೆ­ಗಳೂ ಬರವೆಂದು  ಭ್ರಮಿಸಿದ್ದ ಸೆಂಟಾರ­ರೊಡೆಯ. ಹಾಗಾಗಲಿಲ್ಲ.ವಿಜ್ಞಾನನಿರ್ಮಿತ ಮಾನವ ಸಮಾಜದ ಚಿಂತಕ­ವರೇಣ್ಯರು ಆಧುನಿಕ ನಾಗರಿಕತೆ ಅಸ್ತಿತ್ವಕ್ಕೆ ಬಂದೊ­ಡನೆ ಎಲ್ಲವೂ ಸರಿಯಾಗುತ್ತದೆಂದು ಕೊಂಡಿ­ದ್ದರು. ಹಾಗೂ ಆಗಲಿಲ್ಲ. ವಸಾಹತು­ಪೀಡಿತ ದೇಶಗಳ ಮಂದಿ ನಿರ್ವಸಹತೀಕರಣ ಮುಗಿದ ಕೂಡಲೆ ಸುಖೀರಾಜ್ಯ ಬರುವುದೆಂದು ಕನಸಿದರು. ಅದೂ ಆಗಲಿಲ್ಲ. ಭಾರತದ ಸ್ವಾತಂತ್ರ್ಯ­ಹೋರಾಟ ಕೊನೆಗೊಂಡಾಗ ಭಾರತ-–ಪಾಕಿಸ್ತಾನಗಳ ವಿಭಜನೆಯ ಕಾಲದ ಹತ್ಯಾಕಾಂಡ ಜರುಗಿತು. ಆಗ ಮಹಾಕವಿ ಫೈಜ್ ಅಹಮದ್ ಫೈಜ್ ಹೇಳಿದರು: ‘ಇದೊಂದು ಹುಸಿ ಅರುಣೋದಯ’.ಆಧುನಿಕ ಯುಗದ ಅದಮ್ಯ ಆಶಾವಾದಿತ್ವದ ಕುರು­ಹಾಗಿ ಹಲಬಗೆಯ ಯುಟೋಪಿಯನ್ ಚಿಂತನೆ ಮೂಡಿತು. ಷೇಕ್ಸ್‌ಪಿಯರನ ಸಮಕಾ­ಲೀನ ಥಾಮಸ್ ಮೋರ್ ತನ್ನ ಕೃತಿಯೊಂದರಲ್ಲಿ ಚಿತ್ರಿಸಿದ ಭವಿಷ್ಯದ ಆದರ್ಶಸಮಾಜಕ್ಕೆ ‘ಯುಟೋ­ಪಿಯಾ’ ಎಂಬ ಹೆಸರು ಕೊಟ್ಟಿದ್ದ. ಆದರೆ ಈ ಚಿಂತನೆಗಳ ಛಾಯೆ ಬಹುತೇಕ ಆಧುನಿಕರ ಚಿಂತನಾಧಾರೆಗಳಲ್ಲಿ ಹಾಸು­ಹೊಕ್ಕಾಗಿದೆ. ಜರ್ಮನ್ ದಾರ್ಶನಿಕ ಹೆಗೆಲ್ ತನ್ನ  ಜೀವಿತ ಕಾಲದ ಪ್ರಷ್ಯ ಸಾಮ್ರಾಜ್ಯದಲ್ಲಿ ಈ ಆದರ್ಶವನ್ನು ಕಂಡುಕೊಂಡಿದ್ದ. ಇದೇ ಆದರ್ಶವನ್ನು ಕಾರ್ಲ್ ಮಾರ್ಕ್ಸ್‌  ಭವಿಷ್ಯದ ವರ್ಗರಹಿತ ಸಮಾಜದಲ್ಲಿ ಕಂಡುಕೊಂಡಿದ್ದ. ಆದರೆ ಆ ಆದರ್ಶ ಸಮಾಜ ಯುಟೋಪಿ­ಯನ್ನರು ಹೇಳುವಂತೆ ತಾನಾಗಿ ಬರು­ವುದಿಲ್ಲ­ವೆಂದೂ ಆಧುನಿಕ ಸಮಾಜದ ಅತ್ಯಂತ ಪ್ರಗತಿ­ಪರ ವರ್ಗವಾದ ಕಾರ್ಮಿಕರ ಸಾಮೂಹಿಕ ಪ್ರಯತ್ನಗಳಿಂದ ಮಾತ್ರ ಸಾಧ್ಯ ಎಂದು ಘೋಷಿ­ಸಿದ. ಮಹಾತ್ಮ ಗಾಂಧಿಯವರು ತಮ್ಮ ಕನಸಿನ ರಾಮರಾಜ್ಯದಲ್ಲಿ ಇದನ್ನು ಕಂಡು­ಕೊಂಡರು.ಫ್ರಾನ್ಸಿನಲ್ಲಿ ಕ್ರಾಂತಿಯಾದಾಗ ಆ ಬಳಿಕ ಆದರ್ಶಸಮಾಜ ಸ್ಥಾಪನೆಯಾಗುವುದೆಂದು ಆ ಕ್ರಾಂತಿಯ ನಾಯಕರು ನಂಬಿದ್ದರು. ಆದರೆ ಆ ಕ್ರಾಂತಿಯ ಪರಿಣಾಮ ಭಯೋತ್ಪಾದಕ ಕ್ರೌರ್ಯ­ದಲ್ಲಿ, ಗಿಲೆಟಿನ್ನಿನಲ್ಲಿ ಪರ್ಯವಸಾನವಾ­ದಾಗ ದಾರ್ಶನಿಕ ಕವಿ ವಿಲಿಯಂ ಬ್ಲೇಕ್ ಘೋಷಿ­ಸಿದ: ‘ಜರುಸಲೆಮ್ಮಿನ ಆದರ್ಶವನ್ನು ಮಾನವ­ದೇಹದ ಮಿತಿಯಲ್ಲಿ ಹಿಡಿದಿಡಲಾಗದು.’ ಅಂದರೆ ಮರ್ತ್ಯ­ಜೀವನದ ಇತಿಹಾಸದಲ್ಲಿ ಆದರ್ಶ ಲೋಕವನ್ನು ಸಾಕ್ಷಾತ್ಕರಿಸಿಕೊಳ್ಳುವುದು ಸಾಧ್ಯವಿಲ್ಲ, ಕಾವ್ಯ­ಪ್ರತಿಭೆ­ಯಲ್ಲಿ ಮಾತ್ರ ಸಾಧ್ಯ ಎಂದು.ಮಾನವೇತಿಹಾಸದ ತುಮುಲಗಳು ಒಂದು ಹದಕ್ಕೆ ಬಂದು ಅಂತಿಮವಾದ ಆದರ್ಶರಾಜ್ಯ ಸ್ಥಾಪ­ನೆಯಾಗುವುದೆಂಬುದು ಎಲ್ಲ ಬಗೆಯ ಯುಟೋ­ಪಿಯನ್ ಕಲ್ಪನೆಗಳ ತಿರುಳು. ಅಕ್ಟೇ­ವಿಯೊ ಪಾಜ್ ಗುರುತಿಸಿದ ಹಾಗೆ ಸರಳ

ರೇ­ಖಾತ್ಮಕವಾದ ಕಾಲಪ್ರವಾಹ ಒಂದು ಅಂತಿಮ ಗುರಿ ತಲುಪಬಲ್ಲುದೆಂಬ ಯಹೂದಿ–-ಕ್ರೈಸ್ತ ಚಿಂತನೆ ಈ ಕಲ್ಪನೆಗಳನ್ನು ನಿರ್ಧರಿಸಿದೆ.

ಅಂತಿಮ ಆದರ್ಶ ಸಾಧ್ಯತೆಯ ಯುಟೋ­ಪಿಯನ್ ಚಿಂತನಾಧಾರೆಗಳ ಜೊತೆಜೊತೆಗೆ ಅದಕ್ಕೆ ತದ್ವಿರುದ್ಧವಾದ ಡಿಸ್ಟೋಪಿಯನ್

ಕಲ್ಪ­ನೆಯೂ ಆಧುನಿಕರನ್ನು ಕಾಡುತ್ತಾ ಬಂದಿದೆ. ಅದರ ಪ್ರಕಾರ ಕಾಲಪ್ರವಾಹ ಅಂತಿಮವಾಗಿ ವಿನಾಶದಲ್ಲಿ ಪರ್ಯವಸಾನಗೊಳ್ಳುತ್ತದೆ.ಕೋಪ­ರ್ನಿಕಸ್ಸನಿಗೆ ಮೊದಲು ಭೂಕೇಂದ್ರಿತ ವಿಶ್ವದ ಕಲ್ಪನೆಯನ್ನು ಪ್ರತಿಪಾದಿಸಿ ಚರ್ಚಿನವ­ರಿಂದ ಸುಟ್ಟುಹೋದ ಗುಯರ್ದಾನೋ ಬ್ರೂನೋ ಹೇಳಿದ್ದ: ‘ಇಡೀ ಪ್ರಪಂಚ ಕೊನೆಗೊಮ್ಮೆ ದೂಳು­ದೂಳಾಗಿ ಹೋಗುತ್ತದೆ.’ ಭವಿಷ್ಯದ ನೇತ್ಯಾತ್ಮಕ ಪೂರ್ವಕಲ್ಪನೆಗಳು ಹಲವು ಸಿದ್ಧಾಂತಗಳಲ್ಲಿ ಕಲಾ­ಕೃತಿಗಳಲ್ಲಿ ರೂಪುತಾಳಿವೆ. ಜಾರ್ಜ್ ಆರ್ವೆಲ್ಲನ ‘೧೯೮೪’ ಕಾದಂಬರಿ ಇದಕ್ಕೆ ಒಳ್ಳೆಯ ಉದಾ­ಹ­ರಣೆ.ಇನ್ನೊಂದು ಉದಾಹರಣೆ ಆಲ್ಡಸ್ ಹಕ್ಸ್‌ಲಿಯ ‘ಬ್ರೇವ್ ನ್ಯೂ ವರ್ಲ್ಡ್’ ಕಾದಂಬರಿ. ಆಧುನಿಕ ಭೌತ­ಶಾಸ್ತ್ರದ ಎರಡು ಪ್ರಧಾನ ಸಿದ್ಧಾಂತ­ಗಳಲ್ಲೂ ಇದು ಪ್ರತಿಬಿಂಬಿತ. ಮೊದಲ­ನೆ­ಯದು ಖಗೋಳಶಾಸ್ತ್ರಜ್ಞ ಸರ್ ಜೇಮ್ಸ್ ಜೀನ್ಸ್ ನಿಂದ ಪ್ರತಿಪಾದಿತವಾದ ವಿಕಸನಶೀಲ ವಿಶ್ವದ ಕಲ್ಪನೆ. ಇದರ ಪ್ರಕಾರ ಸೃಷ್ಟಿಯ ಮೊದಲಿ­ಗೊಂದು ಮಹಾನ್ ಸ್ಫೋಟ ಸಂಭವಿ­ಸಿತು. ಆಗ ಮಹಾನ್ ಶಾಖದಮುದ್ದೆಯಾಗಿದ್ದ ವಿಶ್ವವು ಸಿಡಿಯ­ಲಾ­ರಂಭಿಸಿ ನಕ್ಷತ್ರಮಂಡಲಗಳು, ಗ್ರಹೋ­ಪ­­ಗ್ರಹಗಳು ಉಂಟಾದವು. ಇವುಗಳೊ­ಳಗಿನ ಕಣ­ಗಳು ನಿರಂತರ ಸಿಡಿತದ ಪ್ರಕ್ರಿಯೆಯಲ್ಲಿ­ರುವ ಕಾರಣ ಇಡೀ ಬ್ರಹ್ಮಾಂಡ ವಿಸೃಷ್ಟಿಯ ಗುರಿಯತ್ತ ಸಾಗುತ್ತಿದೆ. ಎರಡನೆಯದು ಥರ್ಮೋ­ಡೈನಾ­ಮಿಕ್ಸ್‌ನ ಎರಡನೇ ನಿಯಮ. ಇದರ ಅನುಸಾರ ಭೌತಿಕ ವ್ಯವಸ್ಥೆಯೊಂದು ಸದಾ ಅವ್ಯವಸ್ಥೆಯ ಕಡೆಗೆ ಚಲಿಸುತ್ತಿರುತ್ತದೆ.ಯುಟೋಪಿಯನ್ ಮತ್ತು ಡಿಸ್ಟೋಪಿಯನ್ ಕಲ್ಪನೆ­ಗಳೆರಡೂ ಕಾಲವನ್ನು ಹಿಂತಿರುಗಲಾಗದ ಬಾಣವನ್ನಾಗಿ ನೋಡುತ್ತವೆ. ಅಂದರೆ ಸರಳ­ರೇಖಾತ್ಮಕವಾಗಿ ಗ್ರಹಿಸುತ್ತವೆ.ಈ ಸರಳರೇಖಾತ್ಮಕ ಕಲ್ಪನೆಯೇ ಆಧುನಿಕ ಪ್ರಗತಿ ಸಿದ್ಧಾಂತಗಳ ಬುನಾದಿಯಲ್ಲಿರುವುದು. ಆಧು­ನಿಕ ನಾಗರಿಕತೆಯೇ ನಿರಸನವಾಗುತ್ತಿರುವ ಇಂದಿನ ಸಂದರ್ಭದಲ್ಲಿ ಭಾಗಶಃ ವಾಸ್ತವವಾದ ಯುಟೋಪಿಯನ್ ಮತ್ತು ಡಿಸ್ಟೋಪಿಯನ್ ಕಲ್ಪನೆಗಳೆರಡೂ ಕೇವಲ ಕಲ್ಪನೆಗಳೆಂದು ಅರಿಯುವ ಅಗತ್ಯವಿದೆ ಅಂದರೆ ನಮ್ಮ ಜಗತ್ತು ನರಕದ ಕಡೆಗೂ ಸಾಗುತ್ತಿಲ್ಲ, ಸ್ವರ್ಗದ ಕಡೆಗೂ ಸಾಗುತ್ತಿಲ್ಲ. ಇವೆರಡನ್ನೂ ಸೃಷ್ಟಿಸುವ ಸತ್ವ ನಮ್ಮೊಳಗೇ ಇದೆ. ಒಂದರ ಬಾಯಿ ಇನ್ನೊಂದರ ತಲೆಯಾಗಿದೆ. ಈ ಜಗತ್ತು ಎಷ್ಟರಮಟ್ಟಿಗೆ ಸ್ವರ್ಗ ಅಥವಾ ನರಕ­ವಾಗಿದೆ, ಆಗುತ್ತದೆ ಎನ್ನುವುದು ನಾವು ಮತ್ತು ನಮ್ಮ ಸಮಾಜಗಳು ಮಾಡಿಕೊಳ್ಳುವ ಆಯ್ಕೆಗಳ ಮೇಲೆ ನಿಂತಿದೆ.ನಾವು ಕಟ್ಟುತ್ತಿರುವ ಸ್ವರ್ಗ ಅಥವಾ ನರಕಗಳ ಹೊಣೆಗಾರಿಕೆಯನ್ನು ಪ್ರಾಚೀನರಂತೆ ದೇವ­ಲೋಕ­­ಗಳಿಗೆ ವರ್ಗಾಯಿಸುವಂತಿಲ್ಲ ಅಥವಾ ಆಧುನಿಕರಂತೆ ಇತಿಹಾಸದೇವತೆಯ ಸ್ವಯಂ­ನಿಯಂತ್ರಿತ ತರ್ಕದ ಮೇಲೂ ಹೇರುವಂತಿಲ್ಲ. ಗತದ ಶೋಷಣೆ, ಅಪಮಾನಗಳು ನಿಜವಾ­ದರೂ ನಮ್ಮ ಅವನತಿಯ ಕಾರಣಗಳನ್ನು ಅಲ್ಲಿಗೇ ಅಂಟಿಸುವಂತಿಲ್ಲ. ನಮಗೂ ನಮ್ಮ ಜಗತ್ತಿಗೂ ನಾವೇ ಜವಾಬುದಾರರು.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.