ಶುಕ್ರವಾರ, ಮಾರ್ಚ್ 5, 2021
23 °C

ಇಂಥ ಬರಿಗಾಲ ಭಗೀರಥ ಊರಿಗೊಬ್ಬ ಇದ್ದಿದ್ದರೆ...!

ಪದ್ಮರಾಜ ದಂಡಾವತಿ Updated:

ಅಕ್ಷರ ಗಾತ್ರ : | |

ಇಂಥ ಬರಿಗಾಲ ಭಗೀರಥ ಊರಿಗೊಬ್ಬ ಇದ್ದಿದ್ದರೆ...!

ಆತ ಆಗಿನ್ನೂ ಒಂಬತ್ತನೇ ತರಗತಿ ಹುಡುಗ. ಊರಿಗೆ 25 ದಿನಕ್ಕೆ ಒಮ್ಮೆ ನೀರು ಬರುತ್ತಿತ್ತು. ನಿತ್ಯ ನೀರು ಬಿಡಬೇಕು ಎಂದು ಒತ್ತಾಯಿಸಿ ಊರಿನ ಹಿರಿಯರೆಲ್ಲ ಪಟ್ಟಣದ ನಡುವಿನ ದ್ಯಾಮವ್ವನ ಕಟ್ಟೆಯ ಮೇಲೆ ಸರದಿ ಉಪವಾಸ ಕುಳಿತುಕೊಂಡಿದ್ದರು.

 

ಈ ಹುಡುಗನೂ ಒಂದು ದಿನ ಹೋಗಿ ಕುಳಿತುಕೊಂಡ. ರಾತ್ರಿ ಹೊತ್ತಾದಂತೆ ಉಪವಾಸಕ್ಕೆ ಕುಳಿತವರು ಒಬ್ಬೊಬ್ಬರೇ ಎದ್ದು ಕಟ್ಟೆಯ ಹಿಂದಿನ ಅಂಗಡಿಗೆ ಹೋಗಿ ವಾಪಸು ಬರತೊಡಗಿದರು. ಸ್ವಲ್ಪ ಹೊತ್ತಾದ ನಂತರ ಈ ಹುಡುಗನಿಗೂ ಒಳಗೆ ಕರೆದರು. ಅಲ್ಲಿ ಹೋಗಿ ನೋಡಿದರೆ ಎಲ್ಲರೂ ಬಗೆ ಬಗೆಯ ಭಕ್ಷ್ಯಭೋಜ್ಯಗಳನ್ನು ಇಟ್ಟುಕೊಂಡು ಬಾಯಿತುಂಬ ಮುಕ್ಕುತ್ತಿದ್ದರು. ಸಸ್ಯಾಹಾರಿಗಳಿಗೆ ಬೇರೆ ಊಟ. ಮತ್ತೆ ಕೆಲವರಿಗೆ ಬಾಡೂಟ!

ಹುಡುಗನಿಗೆ ಮನಸ್ಸು ಒಪ್ಪಲಿಲ್ಲ. ಹೋರಾಟಕ್ಕೆ ಮುಕ್ಕು ಬಂದಿದೆ ಎಂದು ಅನಿಸಿತು. ತಾನು ಊಟ ಮಾಡುವುದಿಲ್ಲ ಎಂದ. `ನಿನಗೆ ತಿಳಿಯುವುದಿಲ್ಲ. ಇನ್ನೂ ಚಿಕ್ಕವ. ಊಟ ಮಾಡು~ ಎಂದರು ಹಿರಿಯರು. ಹುಡುಗ ಒಪ್ಪಲಿಲ್ಲ. `ಎರಡು ಬಾಳೆ ಹಣ್ಣಾದರೂ ತಿನ್ನು~ ಎಂದರು.ಅದಕ್ಕೂ ಆತ ಒಪ್ಪಲಿಲ್ಲ. ಅವಮಾನ ಆದಂತೆ ಆಗಿ ಕಣ್ಣ ಅಂಚಿನಲ್ಲಿ ನೀರು ಬಂದು ನಿಂತವು. ಹುಡುಗ ಅಂದೇ ಅಂದುಕೊಂಡ ಯಾವುದೇ ಹೋರಾಟಕ್ಕೆ ಪ್ರಾಮಾಣಿಕತೆ ಮುಖ್ಯ ಎಂದು. ಇದು ಆಗಿದ್ದು 1985-86ರಲ್ಲಿ. ಊರು ಮುದ್ದೇಬಿಹಾಳ.ಈಗ ಆ ಹುಡುಗನಿಗೆ 40 ವಯಸ್ಸು. ಅದೇ ನೀರು ಪೂರೈಕೆಗಾಗಿ ಆತ ಕಳೆದ ಎಂಟು ಒಂಬತ್ತು ವರ್ಷಗಳಿಂದ ಹೋರಾಟ ಮಾಡಿದ್ದಾರೆ. ಅವರ ಹೆಸರು ಬಸವರಾಜ ನಂದಿಕೇಶ್ವರಮಠ.1985-86ರಿಂದ ಊರ ಜನರು ಆಗಾಗ ಪ್ರತಿಭಟನೆ, ಸರದಿ ಉಪವಾಸ ಎಂದೆಲ್ಲ ಹೋರಾಟ ಮಾಡಿದರೂ ಪ್ರಯೋಜನವೇನೂ ಆಗಿರಲಿಲ್ಲ. ಸರ್ಕಾರ ಇಂಥ ಎಷ್ಟು ಹೋರಾಟಗಳನ್ನು ನೋಡಿಲ್ಲ? 2003ರ ಡಿಸೆಂಬರ್‌ನಲ್ಲಿ ಒಂದು ದಿನ ನಂದಿಕೇಶ್ವರಮಠ, ಮತ್ತೆ ಹೋರಾಟ ಮಾಡೋಣ ಎಂದು ಸಿದ್ಧರಾದರು.ಊರಿನ ಜನ, `ನೀನೊಬ್ಬ ಹುಚ್ಚ ಸ್ವಾಮಿ~ ಎಂದು ಗೇಲಿ ಮಾಡಿದರು. ಇವರು ಎದೆಗುಂದಲಿಲ್ಲ. ಒಂದು ದೊಡ್ಡ ಕರಿಗೌನು ಹೊಲಿಸಿದರು. ಅದನ್ನು ಮೈಮೇಲೆ ಧರಿಸಿದರು. ಅದರ ಮೇಲೆ, `ಕರ್ನಾಟಕವನ್ನು ಸಿಂಗಾಪುರ ಮಾಡುವ ಮುಖ್ಯಮಂತ್ರಿಗಳೇ ಮುದ್ದೇಬಿಹಾಳವನ್ನು ಮಂಗಾಪುರ ಮಾಡುವಿರಾ?~, `ಶಾಸಕರೇ ಎಲ್ಲಿ ತಲೆಮರೆಸಿಕೊಂಡಿದ್ದೀರಿ?~, `ಬೇಕೇ ಬೇಕು ಕುಡಿಯುವ ನೀರು~ ಎಂದೆಲ್ಲ ಬರೆದುಕೊಂಡು ಓಣಿ ಓಣಿ ತಿರುಗಿ ತಾವೇ ಮುದ್ರಿಸಿದ ಐದು ಸಾವಿರ ಕರಪತ್ರಗಳನ್ನು ಹಂಚಿದರು. ಜನರಿಗೆ ಇದು ವಿಶೇಷ ಅನಿಸಿತು. ಈತ ಪ್ರಾಮಾಣಿಕ ಅನಿಸಿತು. ಎಲ್ಲರೂ ಸೇರಿಕೊಂಡು ತಹಶೀಲ್ದಾರ್ ಕಚೇರಿ ಎದುರು ಸತ್ಯಾಗ್ರಹ ಕುಳಿತರು. ಶಾಸಕ ಸಿ.ಎಸ್.ನಾಡಗೌಡರು ಕೆಲವು ದಿನ ಬಿಟ್ಟು ಶಿಬಿರಕ್ಕೆ ಬಂದರು. `ಇನ್ನು 35 ದಿನಗಳಲ್ಲಿ ನೀರು ಕೊಡುತ್ತೇವೆ.ಸತ್ಯಾಗ್ರಹ ಕೈ ಬಿಡಿ~ ಎಂದರು. 35 ದಿನಗಳಲ್ಲಿ ನೀರು ಪೂರೈಕೆ ಮಾಡುವುದು ಹೇಗೆ ಸಾಧ್ಯವಿಲ್ಲ ಎಂದು ನಂದಿಕೇಶ್ವರಮಠರು ಶಾಸಕರಿಗೇ ಮಾಹಿತಿ ಕೊಟ್ಟರು! ಆದರೂ 35 ದಿನ ಹೋರಾಟ ಮುಂದುವರಿಸುತ್ತೇವೆ. ನೀರು ಬಂದರೆ ವಾಪಸು ತೆಗೆದುಕೊಳ್ಳುತ್ತೇವೆ ಎಂದರು. ಅಂದುಕೊಂಡಂತೆಯೇ ನೀರು ಬರಲಿಲ್ಲ. ಜನರಿಗೆ ಹೋರಾಟ ಮುಂದುವರಿಸುವುದು ವ್ಯರ್ಥ ಅನಿಸತೊಡಗಿತ್ತು. ಆದರೆ ನಂದಿಕೇಶ್ವರಮಠರು ನಿರಾಶರಾಗಲಿಲ್ಲ. `ತಪಸ್ಸಿಗೆ ಫಲ ಇದ್ದೇ ಇರುತ್ತದೆ.ಇಂದಿನಿಂದ ನಾನು ಚಪ್ಪಲಿ ಧರಿಸುವುದಿಲ್ಲ~ ಎಂದು ಶಪಥ ಮಾಡಿದರು. ಅದಾಗಿ ಒಂಬತ್ತು ವರ್ಷಗಳಾಗಿವೆ. ಈಗಲೂ ಅವರು ಚಪ್ಪಲಿ ತೊಟ್ಟುಕೊಂಡಿಲ್ಲ. ಮುದ್ದೇಬಿಹಾಳದ ತಹಶೀಲ್ದಾರ್ ಕಚೇರಿಯಿಂದ ವಿಧಾನಸೌಧದ ಮುಖ್ಯಮಂತ್ರಿ ಕಚೇರಿವರೆಗೆ ಅವರು ಎಡತಾಕಿದ್ದಕ್ಕೆ ಲೆಕ್ಕವಿಲ್ಲ. ಆದರೆ, ಎಲ್ಲಿಗೆ ಹೋದರೂ ಬರಿಗಾಲಲ್ಲಿಯೇ ಹೋಗಿದ್ದಾರೆ.ಈ ಸ್ವಾಮಿಯ ಹಟ ಊರ ಜನರಿಗೆ ಒಂದು ಕಡೆ ಸೋಜಿಗ ಇನ್ನೊಂದು ಕಡೆ ಪ್ರೇರಣೆ ಎನಿಸತೊಡಗಿತು. 35 ದಿನಗಳಾದ ನಂತರ ನಂದಿಕೇಶ್ವರಮಠರು ಊರಿನ ಮುಖ್ಯರಸ್ತೆಯ ಹನುಮಂತ ದೇವರ ಗುಡಿಯಿಂದ ತಹಶೀಲ್ದಾರ್ ಕಚೇರಿವರೆಗೆ ಉರುಳು ಸೇವೆ ಮಾಡಿದರು.

 

ಅವರ ಜತೆಗೆ ಊರಿನ ಜನರೂ ಸೇರಿಕೊಂಡರು. ಸರ್ಕಾರ ಇಂಥ ಎಷ್ಟು ಉರುಳು ಸೇವೆಗಳನ್ನು ನೋಡಿಲ್ಲ? ಅದು ಜಪ್ಪಯ್ಯ ಅನ್ನಲಿಲ್ಲ. ಮತ್ತೆ ಕೆಲವು ಕಾಲ ಸರಿದು ಹೋಯಿತು. ಒಂದು ದಿನ ತಹಶೀಲ್ದಾರ್ ಕಚೇರಿ ಎದುರು ಒಂದು ಸ್ಟೂಲು ಹಾಕಿ ಅದರ ಮೇಲೆ ನಿಂತು ತಲೆಯ ಮೇಲೆ ಒಂದು ಸೈಜುಗಲ್ಲನ್ನು ಹೊತ್ತುಕೊಂಡರು. ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ಪ್ರತಿಭಟನೆ ನಡೆಯಿತು. ಒಂದು ದಿನವಲ್ಲ, ಐದು ದಿನಗಳ ಕಾಲ ಸತತವಾಗಿ ನಿಂತುಕೊಂಡರು. ಆಗಲೂ ಸರ್ಕಾರ ಎಚ್ಚೆತ್ತುಕೊಳ್ಳಲಿಲ್ಲ.ಜನರು ಜಾಗೃತರಾದರು. ಊರಿನಲ್ಲಿ `ನಗರಾಭಿವೃದ್ಧಿ ಯುವ ಹೋರಾಟ ವೇದಿಕೆ~ ಎಂಬ ಸಂಘಟನೆ ಹುಟ್ಟಿಕೊಂಡಿತು. ನಂದಿಕೇಶ್ವರಮಠರು ಸಂಚಾಲಕರಾದರು. ಜನರು ಮೂರು ದಿನ ಅಂಗಡಿ ಮುಂಗಟ್ಟು ಬಂದ್ ಮಾಡಿದರು. ಮಾಜಿ ಶಾಸಕಿ ವಿಮಲಾಬಾಯಿ ದೇಶಮುಖರು, ನಂದಿಕೇಶ್ವರಮಠರನ್ನು ಮತ್ತು ಊರಿನ ಮುಖಂಡರನ್ನು ಕರೆದುಕೊಂಡು ಬೆಂಗಳೂರಿಗೆ ಹೋಗಿ ಆಗಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರನ್ನು ಕಂಡು ವಿಷಯ ತಿಳಿಸಿದರು.

 

ಕುಮಾರಸ್ವಾಮಿಗಳು ಆಗ ನಡೆಯುತ್ತಿದ್ದ ಅಧಿವೇಶನದಲ್ಲಿ 2.30 ಕೋಟಿ ರೂಪಾಯಿ ಬಿಡುಗಡೆ ಮಾಡುವುದಾಗಿ ಪ್ರಕಟಿಸಿದರು. ಊರಿನ ಹತ್ತಿರದ ಕೃಷ್ಣಾ ನೀರಾವರಿ ಯೋಜನೆಯ ದೊಡ್ಡ ಕಾಲುವೆಯಿಂದ ನೀರು ಪೂರೈಸುವ ಈ ಯೋಜನೆ ತಾತ್ಕಾಲಿಕ ಪರಿಹಾರವಾಗಿತ್ತು. ನಂದಿಕೇಶ್ವರಮಠರ ಹೋರಾಟವನ್ನು ದೂರದಿಂದಲೇ ಗಮನಿಸಿದ್ದ ಕರ್ನಾಟಕ ಪಟ್ಟಣ ನೀರು ಸರಬರಾಜು ಮಂಡಳಿ 13.70 ಕೋಟಿ ರೂಪಾಯಿ ವೆಚ್ಚದ ಬೃಹತ್ ಯೋಜನೆಯೊಂದನ್ನು ಸಿದ್ಧಪಡಿಸಿತ್ತು.ಸರ್ಕಾರದಲ್ಲಿ ಯಾವ ಕೆಲಸವೂ ಬೇಗ ಆಗುವುದಿಲ್ಲ. ಬರೀ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ಮಾಡಿದರೆ ಸಾಲದು ಎಂದು ವಿಜಾಪುರದ ಜಿಲ್ಲಾಧಿಕಾರಿ ಕಚೇರಿ ಎದುರು ನಂದಿಕೇಶ್ವರಮಠರು 13 ದಿನಗಳ ಕಾಲ ಸ್ಟೂಲು ಇಟ್ಟುಕೊಂಡು ತಮ್ಮ ತಲೆಯ ಮೇಲೆ ಕಲ್ಲು ಹೊತ್ತುಕೊಂಡು ನಿಂತುಕೊಂಡರು.

 

ಮತ್ತೆ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ. `ಪ್ರಜಾವಾಣಿ~ಯಲ್ಲಿ ಮೊದಲ ಪುಟದಲ್ಲಿ ಎಲ್ಲ ಆವೃತ್ತಿಯಲ್ಲಿ ಸುದ್ದಿ ಬಂತು! ಟೀವಿ ವಾಹಿನಿಗಳು ಜಾಗೃತಗೊಂಡವು. ನಂದಿಕೇಶ್ವರಮಠರ ಹೋರಾಟಕ್ಕೆ ರಾಜ್ಯವ್ಯಾಪಿ ಪ್ರಚಾರ ಸಿಕ್ಕುದು ಆಗಲೇ. ಅವರಿಗೆ ಗೊತ್ತಿತ್ತು : ಬರೀ ಸರದಿ ಉಪವಾಸ, ಅಂಗಡಿ ಬಂದ್ ಮಾಡಿದರೆ ಆ ಸುದ್ದಿ ಆ ಜಿಲ್ಲೆಯ ಆವೃತ್ತಿಯಲ್ಲಿ ಮಾತ್ರ ಬರುತ್ತದೆ ಎಂದು. ಅಂತಲೇ ಅವರು ತಲೆಯ ಮೇಲೆ ಕಲ್ಲು ಹೊತ್ತುಕೊಂಡು ನಿಂತರು. ಒಂದು ದಿನವಲ್ಲ. 13 ದಿನಗಳ ಕಾಲ.ಸರ್ಕಾರವನ್ನು ಮಾತ್ರವಲ್ಲ ಸುದ್ದಿ ಮಾಧ್ಯಮಗಳನ್ನು ಜಾಗೃತಗೊಳಿಸಲೂ ಎಷ್ಟು ಕಷ್ಟಪಡಬೇಕು? ತಲೆಯ ಮೇಲೆ ಕಲ್ಲು ಹೊತ್ತುಕೊಂಡು ನಿಂತರೆ ಗಮನ ಸೆಳೆಯಬಹುದು ಎಂದು ಅವರಿಗೆ ಏಕೆ ಅನಿಸಿತು? ನಾವು ಚಿಕ್ಕವರಿದ್ದಾಗ ಉತ್ತರ ಕರ್ನಾಟಕದಲ್ಲಿ ಜಂಗಮ ಸ್ವಾಮಿಗಳು ಊರ ಮಧ್ಯದಲ್ಲಿ ಬಂದು ಮುಳ್ಳು ಆವಿಗೆಯ ಮೇಲೆ ನಿಂತುಕೊಳ್ಳುತಿದ್ದರು.ಎಷ್ಟು ಹೊತ್ತಾದರೂ ಕೆಳಗೆ ಇಳಿಯುತ್ತಿರಲಿಲ್ಲ. ಯಾರೋ ಹಿರಿಯರು ಬಂದು ಏನು ಮಾಡಬೇಕು ಎಂದು ಜಂಗಮರನ್ನು ಕೇಳುತ್ತಿದ್ದರು. ತನಗೆ 25 ಪಾವಲಿ (ನಾಲ್ಕಾಣೆ) ಕೊಟ್ಟರೆ ಕೆಳಗೆ ಇಳಿಯುತ್ತೇನೆ ಎಂದು ಅವರು ಹೇಳುತ್ತಿದ್ದರು. ಆ ಹಿರಿಯರು ಒಂದು ಟವೆಲ್ ತೆಗೆದುಕೊಂಡು ಎಲ್ಲ ಅಂಗಡಿಗಳಿಗೆ ಹೋಗಿ ಒಬ್ಬೊಬ್ಬರ ಬಳಿಯೂ ಒಂದು ನಾಲ್ಕಾಣೆ ಸಂಗ್ರಹಿಸಿ 25 ನಾಲ್ಕಾಣೆ ಮಾಡಿ ಜಂಗಮರಿಗೆ ಕೊಟ್ಟ ನಂತರವೇ ಅವರು ಮುಳ್ಳಿನ ಆವಿಗೆಯಿಂದ ಕೆಳಗೆ ಇಳಿಯುತ್ತಿದ್ದರು. ನಂದಿಕೇಶ್ವರಮಠರು ತಲೆಯ ಮೆಲೆ ಕಲ್ಲು ಹೊತ್ತುಕೊಂಡು ನಿಲ್ಲಲು ಪ್ರೇರಣೆ ಸಿಕ್ಕುದು ಇಲ್ಲಿ. ನಂದಿಕೇಶ್ವರಮಠರೂ ಜಂಗಮರು. ಆದರೆ, ಕಾವಿಧಾರಿ ಅಲ್ಲ!ನಂದಿಕೇಶ್ವರಮಠರು ಕಲ್ಲು ಹೊತ್ತು ಜಿಲ್ಲಾಧಿಕಾರಿ ಕಚೇರಿ ಮುಂದೆ ನಿಂತಿದ್ದಾಗಲೇ ಮುದ್ದೇಬಿಹಾಳದಲ್ಲಿ ಮತ್ತೆ ಬಂದ್ ಆಚರಿಸಲಾಯಿತು. `ನಮ್ಮ ಊರಿನ ಯುವಕ ನಮಗಾಗಿ ತಲೆಮೇಲೆ ಕಲ್ಲು ಹೊತ್ತುಕೊಂಡು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡುತ್ತಿದ್ದಾನೆ~ ಎಂದು ಊರಿನ ಮಂದಿ ಬಸ್ಸು, ಲಾರಿ, ಕಾರು, ಜೀಪು ತೆಗೆದುಕೊಂಡು ಜಿಲ್ಲಾಧಿಕಾರಿ ಕಚೇರಿ ಎದುರು ನೂರಾರು, ಸಾವಿರಾರು ಸಂಖ್ಯೆಯಲ್ಲಿ ಸಾಮೂಹಿಕ ಪ್ರತಿಭಟನೆ ಮಾಡಿದರು.ವಿಜಾಪುರದ ಶಾಲಾ ಕಾಲೇಜುಗಳ ಶಿಕ್ಷಕರು ಈ ಅಪರೂಪದ ಪ್ರತಿಭಟನೆಯನ್ನು ವಿದ್ಯಾರ್ಥಿಗಳಿಗೆ ತೋರಿಸಲು ತಾವೂ ಮಕ್ಕಳನ್ನು ಕರೆದುಕೊಂಡು ಬಂದರು... 13 ದಿನ ನಿಂತು ಪ್ರತಿಭಟಿಸಿದ ನಂದಿಕೇಶ್ವರಮಠರು ಮತ್ತು ಊರಿನ ಜನರೆಲ್ಲ ಸೇರಿಕೊಂಡು ಬೆಂಗಳೂರಿಗೆ ಬಂದರು. ಆಗ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರನ್ನು ಕಂಡರು. ಅವರಿಗೂ ಮಾಹಿತಿ ಸಿಕ್ಕಿತ್ತು. ಅಮೆರಿಕೆಗೆ ಹೋಗುವ ಧಾವಂತದಲ್ಲಿ ಇದ್ದ ಮುಖ್ಯಮಂತ್ರಿ 13.70 ಕೋಟಿ ರೂಪಾಯಿ ಯೋಜನೆಗೆ ಅನುಮತಿ ಕೊಟ್ಟರು. ಕೆಲಸಕ್ಕೆ ಚಾಲನೆ ಸಿಕ್ಕಿತು.ಈ ಮಧ್ಯೆ ಪುರಸಭೆಗೆ ಚುನಾವಣೆ ಬಂತು. ನಂದಿಕೇಶ್ವರಮಠರನ್ನು ಆರನೇ ವಾರ್ಡಿನ ಜನರೆಲ್ಲ ಸೇರಿ ಚುನಾವಣೆಗೆ ನಿಲ್ಲಿಸಿದರು. ಮಠರಿಗೆ ವೈಯಕ್ತಿಕವಾಗಿ ಆರ್‌ಎಸ್‌ಎಸ್ ನಂಟು. ಆದರೆ, ಬಿಜೆಪಿಯಿಂದ ಚುನಾವಣೆಗೆ ನಿಲ್ಲಲಿಲ್ಲ. ತಾನು ಹೋರಾಟ ಮಾಡುವವ.ಯಾವ ಪಕ್ಷದ ನಂಟೂ ಬೇಡ ಎಂದು ಪಕ್ಷೇತರರಾಗಿ ನಿಂತರು. ಒಂದು ಪೈಸೆ ಹಣ ಖರ್ಚು ಮಾಡಲು ಜನರು ಬಿಡಲಿಲ್ಲ. ಇವರ ವಿರುದ್ಧ ನಿಂತಿದ್ದ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಇಡುಗಂಟು ಕಳೆದುಕೊಂಡರು. ಪುರಸಭೆ ಸದಸ್ಯನಾದರೆ ಅಧಿಕಾರಿಗಳ ಜತೆಗೆ ಮಾತನಾಡಲು ಒಂದಿಷ್ಟು ಅಧಿಕಾರ ಬರುತ್ತದೆ ಎಂದೂ ನಂದಿಕೇಶ್ವರಮಠ ಅಂದುಕೊಂಡರು. ಅವರು ಅಂದುಕೊಂಡ ಹಾಗೆಯೇ ಯಾರಿಗೇ ಇವರು ಫೋನು ಮಾಡಲಿ ಎಲ್ಲರೂ ಸರಿಯಾಗಿ ಪ್ರತಿಕ್ರಿಯೆ ಕೊಡುತ್ತಿದ್ದರು. ಸಾಧ್ಯವಾದಷ್ಟು ಕೆಲಸ ಮಾಡಿಕೊಡುತ್ತಿದ್ದರು.13.70 ಕೋಟಿ ರೂಪಾಯಿಯ ಬೃಹತ್ ಯೋಜನೆ ಜಾರಿಯಾಗುವಾಗ ಏನು ಅಡಚಣೆಯಾದರೂ ಗುತ್ತಿಗೆದಾರರು ಇವರ ನೆರವನ್ನೇ ಕೇಳುತ್ತಿದ್ದರು. ಒಂದು ಸಾರಿ ಕೆಲಸಗಾರರು ಕೈಕೊಟ್ಟರು. 50 ಮಂದಿ ಕೆಲಸದವರನ್ನು ಇವರೇ ಹುಡುಕಿ ಕೊಟ್ಟರು. ಕಳೆದ ಮಾರ್ಚ್‌ನಲ್ಲಿಯೇ ಯೋಜನೆ ಸಂಪೂರ್ಣವಾಗಿ ಮುಗಿದಿದೆ. ಊರಿಗೆ ನೀರು ಪೂರೈಕೆ ಆಗುತ್ತಿದೆ. 2043ರವರೆಗೆ ಚಿಂತೆಯಿಲ್ಲ. ಇಷ್ಟೆಲ್ಲ ಕಷ್ಟಪಟ್ಟ ನಂತರ ಪೂರ್ಣಗೊಂಡ ಯೋಜನೆಯನ್ನು ಅದ್ದೂರಿಯಾಗಿ ಉದ್ಘಾಟನೆ ಮಾಡೋಣ ಎಂದು ಆಗಿನ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಅವರನ್ನು ಕನಿಷ್ಠ 20 ಸಾರಿ ಸಂಪರ್ಕಿಸಿದರು.`ನೋಡೋಣ~, `ಮಾಡೋಣ~ ಎಂದು ಅವರು ಕಾಲ ತಳ್ಳಿದರು. ಈಗ ಅವರ ಉಸ್ತುವಾರಿ ಬದಲಾಗಿ ಎಸ್.ಕೆ.ಬೆಳ್ಳುಬ್ಬಿ ಅವರಿಗೆ ಹೊಣೆ ಸಿಕ್ಕಿದೆ. ಅವರನ್ನೂ ನಂದಿಕೇಶ್ವರಮಠರು ಸಂಪರ್ಕಿಸಿದ್ದಾರೆ.ಕಳೆದ ಭಾನುವಾರ ಮುದ್ದೇಬಿಹಾಳಕ್ಕೆ ಹೋಗಿದ್ದೆ. ಬೆಂಗಳೂರಿನ ಬಸ್ಸು ಹತ್ತುವಾಗ ಈ `ಬರಿಗಾಲಿನ ಭಗೀರಥ~ ಸಿಕ್ಕಿದ್ದರು. `ನೀರು ಪೂರೈಕೆ ಘಟಕ ಉದ್ಘಾಟನೆ ಆದ ನಂತರವೇ ಚಪ್ಪಲಿ ಹಾಕಿಕೊಳ್ಳುತ್ತೇನೆ~ ಎಂದರು. ಊರಿಗೆ ವಾಪಸು ಬಂದ ನಂತರ ಅವರ ಕಥೆಯನ್ನೆಲ್ಲ ಕೇಳಿದೆ.ಮುದ್ದೇಬಿಹಾಳದ ಜನ ಈಗ ನೀರು ಕುಡಿಯುವುದಕ್ಕಿಂತ ಮುಂಚೆ ಬಸವರಾಜ ನಂದಿಕೇಶ್ವರಮಠರ ಹೆಸರನ್ನು ಹೇಳಬೇಕು. ಇಂಥ ಒಬ್ಬ ನಿಸ್ಪೃಹ, ಪ್ರಾಮಾಣಿಕ ಹೋರಾಟಗಾರ ಇಲ್ಲದೇ ಇದ್ದರೆ ಆ ಊರಿಗೆ ನೀರು ಬರುತ್ತಿತ್ತು ಎಂದು ಅನಿಸುವುದಿಲ್ಲ. ಕರ್ನಾಟಕದಲ್ಲಿ ಇಂಥ ಮುದ್ದೇಬಿಹಾಳಗಳು ಎಷ್ಟಿವೆ ಗೊತ್ತಿಲ್ಲ. ನಿಮ್ಮ ಹೋರಾಟಕ್ಕೆ ಪ್ರೇರಣೆ ಬೇಕು ಎಂದರೆ ನಂದಿಕೇಶ್ವರಮಠರಿಗೆ ಫೋನ್ ಮಾಡಿರಿ (97404 91998).

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.