ಭಾನುವಾರ, ಜನವರಿ 19, 2020
23 °C

ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ...

ಐ.ಎಂ.ವಿಠಲಮೂರ್ತಿ Updated:

ಅಕ್ಷರ ಗಾತ್ರ : | |

ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ...

ಮ್ಮ ತಾಯಿಯ ಊರು ಬೊಮ್ಮಡಿಹಳ್ಳಿ­ಯಿಂದ ಹತ್ತಿರದ ಬೇಲೂರಿಗೆ ಶಾಲೆಗೆ ಹೋಗುತ್ತಿದ್ದೆ. ‘ಗೊಂಬೆರಾಮಯ್ಯ’ನ  ಮೇಳ 2–3 ತಿಂಗಳುಗಳ ಕಾಲ ಊರಿನಲ್ಲಿ ಬಿಡಾರ ಹೂಡುತ್ತಿತ್ತು. ಒಂದು ಎತ್ತಿನ ಗಾಡಿ, 3–4 ಕತ್ತೆಗಳ ಮೇಲೆ ತನ್ನ ಇಡೀ ‘ಸಾಮ್ರಾಜ್ಯ’ವನ್ನು ಸಾಗಿಸಿಕೊಂಡು ಬಂದು ನೆಲೆಸುತ್ತಿದ್ದ.

ಅದು ರಾಮಯ್ಯನ ‘ಮೂವಿಂಗ್‌ ಥಿಯೇಟರ್‌’. ದೊಡ್ಡ ಗಿರಿಜಾ ಮೀಸೆಯ ರಾಮಯ್ಯ ಕಥೆ ಹೇಳುತ್ತಾ, ಅಪರೂಪದ ಬಣ್ಣ ಬಣ್ಣದ ತೊಗಲು ಗೊಂಬೆಗಳನ್ನು ಕುಣಿಸುತ್ತಿದ್ದರೆ ಅದಕ್ಕೆ ಸಾಟಿಯೇ ಇರುತ್ತಿರಲಿಲ್ಲ. ರಾಮಾಯಣ, ಮಹಾಭಾರತದ ಕಥೆಗಳು, ಅಲ್ಲಿನ ರೋಚಕ ವೃತ್ತಾಂತಗಳು, ಲಕ್ಷ್ಮಣ ಶೂರ್ಪನಖಿಯ ಮೂಗು ಕತ್ತರಿಸುವ ಪ್ರಸಂಗ ಇರಬಹುದು, ಕೀಚಕನ ವಧೆ ಇರಬಹುದು... ಕಂದಪದ್ಯಗಳ ಸಾಹಿತ್ಯ, ಸಂಗೀತ, ಗೊಂಬೆಗಳ ಕುಣಿತ, ರಾಮ­ಯ್ಯನ ಆರ್ಭಟ... ಮಾಗಿ ಚಳಿಯಲ್ಲಿ ಬೆಚ್ಚನೆ ಹೊದಿಕೆ ಹೊತ್ತು, ನೋಡುವವರ ಖುಷಿ ಇಂದಿಗೂ ಮಾಸದ ನೆನಪು.ಕಾಲೇಜಿನ ದಿನಗಳಲ್ಲಿ ನನಗೆ ನಾಟಕಗಳಲ್ಲಿ ಬರಿ ಸ್ತ್ರೀ ಪಾತ್ರಗಳನ್ನೇ ನೀಡುತ್ತಿದ್ದರು. ಒಮ್ಮೆ ಅಭಿಮನ್ಯುವಿನ ಪತ್ನಿ ‘ಉತ್ತರೆ’ ಪಾತ್ರ ಮಾಡಿದ್ದೆ. ನಾಟಕ ಮುಗಿಸಿ ಗಾಂಧೀ ಬಜಾರಿನ ಬೀದಿಯಲ್ಲಿ ಪೂರ್ಣ ಪೌರಾಣಿಕ ರಾಣಿಯ ವೇಷಧಾರಿ­ಯಾಗಿ ಫೋಟೋ ತೆಗೆಸಿಕೊಳ್ಳಲು ಹೋಗಿದ್ದೆವು. ನನ್ನನ್ನು ನಿಜವಾದ ಹೆಣ್ಣೆಂದು ಭಾವಿಸಿ ಹಲವಾರು ಯುವಕರು ನನ್ನೊಂದಿಗೆ ಫೋಟೋ ತೆಗೆಸಲು ಮುಗಿಬಿದ್ದಿದ್ದು ನನಗೆ ತುಂಬಾ ಮುಜುಗರ ಉಂಟು ಮಾಡಿದ ಪ್ರಸಂಗ.ಒಂದು ಸಂಜೆ ಚಾಮರಾಜಪೇಟೆಯ ಸರ್ಕಾರಿ ಶಾಲೆಯಲ್ಲಿ ನಾಟಕದ ತಾಲೀಮು ನಡೆಯುತ್ತಿದೆ ಎಂದು ಗೆಳೆಯ ನಾಡಿಗೇರ ಶ್ರೀಕಾಂತ ಕರೆ­ದೊಯ್ದ. ‘ಸತ್ತವರ ನೆರಳು’ ನಾಟಕದ ರಿಹ­ರ್ಸಲ್ ನಡೆಯುತ್ತಿತ್ತು. ಅಲ್ಲಿ ಬಿ.ವಿ. (ಬಾಬು­ಕೋಡಿ ವೆಂಕಟರಮಣ) ಕಾರಂತರ ಪರಿಚಯ­ವಾಯ್ತು.  ‘ಪಾರ್ಟ್ ಮಾಡುತ್ತೀರ’ ಎಂದು ಕೇಳಿ­ದರು.

ಪುರಂದರದಾಸರ ರಚನೆಗಳಿಗೆ ವಿಶಿಷ್ಟ ರೀತಿಯ ರಾಗಸಂಯೋಜಿಸಿ ಸಂಗೀತ ನೀಡಿದ್ದರು. ಅವುಗಳನ್ನು ತುಂಬಾ ಜೋಷ್‌ನಿಂದ ಹಾಡುತ್ತಿದ್ದ ಕಲಾವಿದರು, ಹಾರ್ಮೋನಿಯಂ ನುಡಿಸುತ್ತಾ ತಿದ್ದಿ-–ತೀಡಿ ಕಲಿಸುತ್ತಿದ್ದ ಮೇಷ್ಟ್ರು ಕಾರಂತರು. ಗೆಳೆಯರಾದ ಗುತ್ತಿಗೇರಿ ಮಾನಪ್ಪ (ಮಾನು), ಸುರೇಶ್ ಹೆಬ್ಳೀಕರ್, ಟಿ.ಎಸ್‌.ನಾಗಾಭರಣ, ಸುಂದರರಾಜ್ ಮುಂತಾದವರು ಮಠದ ವಿಚಿತ್ರ ವೇಷ ಧರಿಸಿ ಹಾಡಿ-, ಕುಣಿಯುತ್ತಿದ್ದರು. ಕಲಿಸು­ವವರು, ಕಲಿಯುವವರು, ನೋಡಿ ಆನಂದಿಸು­ತ್ತಿ­ದ್ದ­ವರೆಲ್ಲ ಒಂದೇ ತರಂಗಾಂತರದಲ್ಲಿ ತೇಲುತ್ತಿ­ದ್ದರು. ಅಂದು ಕಾರಂತರನ್ನು ಕಂಡ ನನಗೆ ಅವರು ನಮ್ಮೂರಿನ ಗೊಂಬೆರಾಮಯ್ಯನ ಸುಧಾರಿಸಿದ ಪರಿಷ್ಕೃತ ಆವೃತ್ತಿಯಂತೆ ಕಂಡರು. ಹೆಚ್ಚು ಆಕರ್ಷಿತನಾದೆ.ಎಪ್ಪತ್ತರ ದಶಕದ ಪ್ರಾರಂಭದಲ್ಲಿ ಕಲಾ­ಕ್ಷೇತ್ರದ ಹಿಂಭಾಗ (ಇಂದಿನ ಸಂಸ ರಂಗ­ಮಂದಿರ) ಮತ್ತು ಮುಂದಿನ ಹೊರಗಡೆ ಆವರ­ಣ­ಗಳಲ್ಲಿ ಕಾರಂತರು ನಡೆಸುತ್ತಿದ್ದ ಜೋಕು­ಮಾರಸ್ವಾಮಿ, ಈಡಿಪಸ್, ಸಂಕ್ರಾಂತಿ ಹೀಗೆ ಹಲವು ನಾಟಕಗಳ ರಿಹರ್ಸಲ್ ನೋಡಿ ಬೆರ­ಗಾಗಿ ಹೋದೆ. ಅದೇನು ಏಕಾಗ್ರತೆ, ಆ ತನ್ಮಯತೆ, ತತ್‌ಕ್ಷಣದ ಸೃಜನಶೀಲತೆ, ಬದಲಾ­ವಣೆ! ಗೊಂಬೆರಾಮಯ್ಯ ಗೊಂಬೆ­ಗಳನ್ನು ಆಡಿಸಿ­ದಂತೆ ನಟ–-ನಟಿಯರು ಆಡುತ್ತಿ­ದ್ದರು. ಕಾರಂತರು ನಿಜವಾಗಿ ನನಗೆ ಒಬ್ಬ ಗಾರುಡಿ­ಗ­ನಂತೆ ಕಂಡರು.

ಕಾರಂತ, ಕಾರ್ನಾಡ, ಕಂಬಾರ, ಲಂಕೇಶ್ ಇವರೆಲ್ಲ ಯುವಕರಾಗಿ ರಾರಾಜಿ­ಸುತ್ತಿದ್ದ ಕಾಲ. ತುಘಲಕ್, ಜೋಕುಮಾರ­ಸ್ವಾಮಿ ಹಾಗೂ ಸಂಕ್ರಾಂತಿ ನಾಟಕಗಳನ್ನು ಆಡಿಸುವ ಮೂಲಕ ಕಾರಂತರು ರಾತ್ರಿ ಬೆಳಗಾ­ಗು­ವುದರಲ್ಲಿ ಈ ನಾಟಕಕಾರರನ್ನು ಪ್ರಸಿದ್ಧಗೊಳಿ­ಸಿದ್ದರು. ಅಂದು ಇಡೀ ಕಲಾಕ್ಷೇತ್ರದ ಆವರಣ­ದಲ್ಲಿ ತುಂಬಿ ತುಳುಕುತ್ತಿದ್ದ ಸಂಭ್ರಮ ಈಗ ಬರೀ ನೆನಪಷ್ಟೇ.ಸುಮಾರು ೧೦-–೧೨ ವರ್ಷಗಳ ನಂತರ ಸಂಸ್ಕೃತಿ ಇಲಾಖೆ ನಿರ್ದೇಶಕನಾಗಿದ್ದ ನನ್ನನ್ನು ಭೇಟಿ­ಯಾಗಲು ಕಾರಂತರು ಬಂದರು. ಭೋಪಾಲ್‌ನ ರಂಗ ಮಂಡಲದ ನಿರ್ದೇಶಕ­ರಾಗಿ ಅಲ್ಲಿನ ಹಲವು ಹಿಂದಿ ನಾಟಕಗಳನ್ನು ಕರ್ನಾಟಕ­ದಲ್ಲಿ ಪ್ರದರ್ಶಿಸುವ ಬಗ್ಗೆ ಚರ್ಚಿಸಲು ಬಂದಿ­ದ್ದರು. ‘ಸತ್ತವರ ನೆರಳು’ ನಾಟಕದ ರಿಹರ್ಸಲ್‌­ನಲ್ಲಿ ಭೇಟಿಯಾಗಿದ್ದನ್ನು ನೆನಪಿಸಿದೆ. ನೀವು ಆ್ಯಕ್ಟರ್‌ ಆಗಬೇಕಿತ್ತು ಎಂದರು. ನೀವು ಕನ್ನಡ ತುಂಬಾ ಚೆನ್ನಾಗಿ ಮಾತಾಡ್ತೀರ. ಈಗ ನಾಟಕ­ಗಳಲ್ಲಿ ಕನ್ನಡ ಚೆನ್ನಾಗಿ ಮಾತಾಡುವವರ ಕೊರತೆ ತುಂಬಾ ಇದೆ. ಸೀರಿಯಸ್ಸಾಗಿ ಯೋಚನೆ ಮಾಡಿ ಎಂದರು. ಕಾರಂತರ ಶಿಷ್ಯಂದಿರಾದ ಭರಣ, ಕಪ್ಪಣ್ಣ, ನಾಗೇಶ್ ಜತೆಗಿದ್ದರು.ಆ ವೇಳೆಗಾಗಲೇ ಚೋಮನದುಡಿ, ವಂಶ­ವೃಕ್ಷ, ಒಂದಾನೊಂದು ಕಾಲದಂತಹ ಸಿನಿಮಾ­ಗಳ ನಿರ್ದೇಶಕರಾಗಿ ಕಾಡು, ಘಟಶ್ರಾದ್ಧ ಹಂಸ­ಗೀತೆ ಮುಂತಾದ ಸಿನಿಮಾಗಳ ಸಂಗೀತ ನಿರ್ದೇಶ­ಕರಾಗಿ ರಾಷ್ಟ್ರಮನ್ನಣೆ ಪಡೆದಿದ್ದರು. ರಾಷ್ಟ್ರೀಯ ನಾಟಕ ಶಾಲೆ (ಎನ್‌ಎಸ್‌ಡಿ) ಮತ್ತು ರಂಗ ಮಂಡಲದಂತಹ ಪ್ರತಿಷ್ಠಿತ ಸಂಸ್ಥೆಗಳ ನಿರ್ದೇಶಕರಾಗಿ ಪ್ರಸಿದ್ಧಿಯ ಶಿಖರದಲ್ಲಿದ್ದರು.ಪ್ರಖ್ಯಾತಿಯ ಶಿಖರದ ತುದಿಯಲ್ಲಿದ್ದ ಕಾರಂತರು ಭೋಪಾಲ್‌ನಲ್ಲಿ ನಡೆದ ವಿಭಾ ಮಿಶ್ರ ಪ್ರಕರಣದಿಂದಾಗಿ ಪ್ರಪಾತಕ್ಕೆ ಬಿದ್ದಿದ್ದರು. ಇಡೀ ದೇಶದೆಲ್ಲೆಡೆ ಖ್ಯಾತನಾಮರಾಗಿದ್ದ ರಂಗ ಜಂಗಮ ಜೈಲುವಾಸಿಯಾಗಿದ್ದರು. ಅವರ ಕಷ್ಟದ ದಿನಗಳಲ್ಲಿ ಇಡೀ ಕರ್ನಾಟಕ ಅವರಿಗೆ ತೋರಿಸಿದ ಸಹಾನುಭೂತಿ ಅವಿಸ್ಮರಣೀಯ. ಸಂಕಷ್ಟದಲ್ಲಿ ಸಿಲುಕಿದ ಕಾರಂತರು ಅದರಿಂದ ಹೊರಬರುವ ಹಾದಿಗಳ ಹುಡುಕಾಟ­ದಲ್ಲಿ­ದ್ದರು. ಶಾಲೆಬಿಟ್ಟು ಊರಿಂದ ಓಡಿಹೋಗಿ ಗುಬ್ಬಿ ವೀರಣ್ಣನವರ ಗರಡಿಯಲ್ಲಿ ಪಳಗಿ, ರಾಜ್‌ಕುಮಾರ್ ಅವರ ಜೊತೆ ನಾಟಕಗಳಲ್ಲಿ ನಟಿಸಿ, ಕಾಶಿಗೆ ಹೋಗಿ ಹಿಂದಿಯಲ್ಲಿ ಪ್ರೌಢಿಮೆ ಪಡೆದು, ಎನ್‌ಎಸ್‌ಡಿ, ಸಿನಿಮಾ, ರಂಗ ಮಂಡಲ ದೇಶದೆಲ್ಲೆಡೆ ದೊಡ್ಡ ಹೆಸರು ಮಾಡಿದ ಕಾರಂತರು ಕೈಚೆಲ್ಲಿ ಕುಳಿತಿದ್ದರು. ಶೂನ್ಯಕ್ಕೆ ಬಂದು ನಿಂತು ಬಿಟ್ಟಿದ್ದರು. ಗಾರುಡಿಗನಿಗೆ ಗರ ಬಡಿದ ಹಾಗಿತ್ತು.ಕಾರಂತರನ್ನು ಕರ್ನಾಟಕಕ್ಕೆ ಕರೆತರಲು ಮುಖ್ಯ­ಮಂತ್ರಿ ರಾಮಕೃಷ್ಣ ಹೆಗಡೆಯವರು ಆಸಕ್ತಿ ಹೊಂದಿದ್ದರು. ಆ ಬಗೆಗಿನ ಸಾಧ್ಯತೆಗಳನ್ನು ಪರಿಶೀಲಿಸಿ ತಿಳಿಸುವಂತೆ ಎಂ.ಪಿ. ಪ್ರಕಾಶ್‌ ಮತ್ತು ನನಗೆ ಸೂಚಿಸಿದರು. ಕ್ರಿಮಿನಲ್ ಮೊಕದ್ದಮೆ­ಯನ್ನು ಎದುರಿಸುತ್ತಿರುವ ಕಾರಂತರನ್ನು ಅದು ಬಗೆಹರಿಯುವ ಮುನ್ನವೇ ಕರೆತಂದು ಒಂದು ಸಂಸ್ಥೆಯ ಮುಖ್ಯಸ್ಥರನ್ನಾಗಿ ಮಾಡುವ ಬಗ್ಗೆ ಪ್ರಕಾಶ್ ಅವರಿಗೆ ಸ್ವಲ್ಪ ಹಿಂಜರಿಕೆ ಇತ್ತು. ಸ್ವತಃ ಕಲಾವಿದರು ಹಾಗೂ ಕಾರಂತರ ಅಭಿಮಾನಿ­ಯಾಗಿದ್ದರೂ ಸಹ ಈ ವಿಷಯದಲ್ಲಿ ಒಂದು ಸಂದಿಗ್ಥಕ್ಕೆ ಸಿಲುಕಿದಂತೆ ಕಂಡರು.ಇಂಥ ವಿಚಿತ್ರ ಸನ್ನಿವೇಶದಲ್ಲಿ ರೂಪು­ಗೊಂಡಿದ್ದು ‘ನಾಟಕ ಕರ್ನಾಟಕ’ದ ರಂಗಾ­ಯಣ. ಪ್ರಕರಣ ನ್ಯಾಯಾಲಯದಲ್ಲಿ ಯಾವ ಸ್ಥಿತಿಯಲ್ಲಿದೆ ಎಂದು ಖುದ್ದು ತಿಳಿಯಲು ನಾನು ಕಾರಂತರು ಭೋಪಾಲ್‌ಗೆ ಹೋದೆವು. ಕಾರಂತರು ವಾಸಿಸುತ್ತಿದ್ದ ಮನೆಯಲ್ಲೇ ಉಳಿ­ದೆವು. ಅವರ ಶಿಷ್ಯ ಹೊಳ್ಳ ರುಚಿಯಾದ ಊಟ ತಯಾರಿಸಿದರು. ಕಾರಂತರು ಏನನ್ನೋ ಓದುತ್ತಾರೆ, ಹಾಡುತ್ತಾರೆ, ಜೈಲಿನಲ್ಲಿನ ಅನುಭ­ವ­ಗಳನ್ನು ಹೇಳುತ್ತಾರೆ.

ಬೆಳಿಗ್ಗೆ ಭಾರತ ಭವನ ನೋಡುವ ಬಗ್ಗೆ ಅಶೋಕ ವಾಜಪೇಯಿ ಮತ್ತು ಸ್ವಾಮಿನಾಥನ್ ಅವರ ಬಗ್ಗೆ, ಅರ್ಜುನ್ ಸಿಂಗ್ ಬಗ್ಗೆ, ಅವರ ವಿರುದ್ಧ ಭೋಪಾಲ್‌ನಲ್ಲಿ ನಡೆದ ಪಿತೂರಿಗಳ ಬಗ್ಗೆ ಮಾತಾಡುತ್ತಿದ್ದರು. ರಾತ್ರಿ­ಯಿಡೀ ಕುಡಿಯುತ್ತಿದ್ದರು. ಇಲಾಖೆಗಳ ಕೆಲಸ­ಗಳ ಒತ್ತಡದಲ್ಲಿದ್ದ ನನಗೆ ಎಲ್ಲೋ ಒಂದು ಕಡೆ, ಇದು ನನ್ನ ಕೆಲಸವಾ? ಇದು ನನಗೆ ಬೇಕಿತ್ತಾ? ಎಂಬ ಹಲವಾರು ಯೋಚ­ನೆಗಳು ಕಾಡಲು ಶುರುವಾಗಿದ್ದವು. ಕಾರಂತರು ನನ್ನನ್ನು ನಂಬಿದ್ದರು. ನನಗೆ ಬೇರೆ ದಾರಿ ಇರಲಿಲ್ಲ. ಅಂತೂ ಇಂತೂ ಕೊನೆಗೂ ನಿದ್ರೆ ಮಾಡಿದೆವು.

ಬೆಳಿಗ್ಗೆ ಕಾರಂತರೇ ಕಾಫಿ ಮಾಡಿಕೊಟ್ಟರು.

ಹಿಂದಿನ ರಾತ್ರಿಯ ಹತಾಶೆಯಿಂದ ಹೊರಬಂದು ಸ್ವಲ್ಪ ಖುಷಿಯಲ್ಲಿದ್ದರು.  ಮೊದಲು ಕಾರಂತರ ವಕೀಲ ಧರ್ಮೇಂದ್ರ ವರ್ಮಾ ಅವರೊಡನೆ ಪ್ರಕರಣದ ಬಗ್ಗೆ ತಿಳಿಯಲು ಹೋದೆವು. ಕಾರಂತರು ಏನೂ ಮಾತನಾಡಲಿಲ್ಲ. ಧರ್ಮೇಂದ್ರ ಅವರು ತಿಳಿಸಿದ ಸಾರಾಂಶ ಪ್ರಕ­ರಣ ತೀರ್ಮಾನವಾಗಲು ಇನ್ನೂ ಹಲ­ವಾರು ವರ್ಷಗಳೇ ಆಗಬಹುದು ಎಂಬುದಾಗಿತ್ತು. ಅಲ್ಲಿಂದ ಭಾರತ ಭವನಕ್ಕೆ ಹೋಗಿ ಕಲಾವಿದ ಸ್ವಾಮಿನಾಥನ್‌ ಜೊತೆ ಹರಟಿದೆವು. ಅಶೋಕ ವಾಜಪೇಯಿ ಅವರನ್ನು ನೋಡಲು ಹೋಗುತ್ತಿ­ದ್ದಾಗ ಎದುರಿನಲ್ಲಿ ಇಬ್ಬರು ಬಿಳಿ ಉಡುಗೆ ತೊಟ್ಟಿದ್ದ ಲಕ್ಷಣವಾದ ಹುಡುಗಿಯರು ಬರುತ್ತಿ­ದ್ದರು.

ಇಬ್ಬರೂ ಕಾರಂತರ ಕಾಲುಮುಟ್ಟಿ ನಮಸ್ಕರಿಸಿದರು. ಕಾರಂತರು ಅದರಲ್ಲಿ ಒಬ್ಬಳನ್ನು ವಿಭಾ ಮಿಶ್ರ ಎಂದು ಪರಿಚಯಿಸಿ­ದರು. ಸುಟ್ಟ ಗಾಯಗಳಿಂದ ಸಂಪೂರ್ಣ ಗುಣಮುಖವಾಗಿ ಸಹಜ ಸ್ಥಿತಿಗೆ ಮರಳಿದಂತಿತ್ತು. ಆದರೆ, ಘಟನೆಯಿಂದ ಆಘಾತಗೊಂಡಿದ್ದ ‘ದೈತ್ಯ ಪ್ರತಿಭೆ’ ಕಾರಂತರು ನೊಂದು ಕುಬ್ಜರಾಗಿದ್ದರು. ಇಂತಹ ಒಂದು ಅನಿವಾರ್ಯ ಸ್ಥಿತಿಯಲ್ಲಿ ಹುಟ್ಟಿದ ‘ನಾಟಕ ಕರ್ನಾಟಕ’ದ ರಂಗಾಯಣದ ಗೌರವ ಸಲಹೆಗಾರರಾಗಿ ಕೆಲಸ ಪ್ರಾರಂಭಿಸಿ­ದರು.

ಸ್ವತಃ ಕಾರಂತರಿಗೆ ಇದು ರೆಪರ್ಟರಿಯೋ ಅಥವಾ ನಾಟಕ ಶಾಲೆಯೋ ಎಂಬುದರ ಬಗ್ಗೆ ಖಚಿತ ನಿಲುವು ಇರಲಿಲ್ಲ. ಎಂ.ಪಿ. ಪ್ರಕಾಶ ಅವರ ನೇತೃತ್ವದಲ್ಲಿ ಹಿರಿಯ ರಂಗತಜ್ಞರ ಒಂದು ಸಮಾಲೋಚನ ಸಭೆ ನಡೆಯಿತು. ಆ ಸಭೆಗೆ ಕೆ.ವಿ.ಸುಬ್ಬಣ್ಣ, ಕಂಬಾರ, ಕೆ.ಮರುಳಸಿದ್ದಪ್ಪ, ಎಸ್‌.ಜಿ.ವಾಸುದೇವ, ಸಿದ್ದಲಿಂಗಯ್ಯ, ನಾಗಾಭರಣ ಇನ್ನೂ ಮುಂತಾದವರು ಆಗಮಿಸಿ ಅಭಿಪ್ರಾಯ ನೀಡಿದರು. ಆದರೆ, ಮುಂದೊಂದು ದಿನ ರಂಗಾಯಣಕ್ಕೆ ಬರಬಹುದಾದ ಸಂಕಷ್ಟದ ಬಗ್ಗೆ ಸುಬ್ಬಣ್ಣ ಮಾತ್ರ ಊಹಿಸಿ ಹೇಳಿದ್ದರು. ಅದು ಕಾರಂತರಿಗೆ ಪಥ್ಯವಾಗಲಿಲ್ಲ. ಕಾರಂತರಿಗೆ ಎಲ್ಲ ತಿಳಿದಿದೆ ಎಂದು ನಾವು ಭ್ರಮಿಸಿದೆವು.

ಸರ್ಕಾರದ ಹಂತದಲ್ಲಿ ಸಿಗಬೇಕಾದ ಒಪ್ಪಿಗೆಗಳು ಇನ್ನೂ ಬರಬೇಕಾಗಿತ್ತು. ಕಾರಂತರದು ಒಂದೇ ಹಠ. 1989ರ ಸಂಕ್ರಾಂತಿಗೆ ರಂಗಾಯಣ ಪ್ರಾರಂಭಿಸಲು ಒತ್ತಾಯಿಸಿದರು. ಪಿಎಸ್‌ಎಸ್‌ ಥಾಮಸ್‌ ಇಲಾಖೆಯ ಕಾರ್ಯದರ್ಶಿಗಳಾ­ಗಿದ್ದರು. ತುಂಬಾ ಸಂಭಾವಿತರು. ಇಲಾಖೆಯ ಚಟುವಟಿಕೆಗಳಿಗೆ ಪ್ರೋತ್ಸಾಹ ಕೊಡುತ್ತಿದ್ದರು. ರಂಗಾಯಣ ಪ್ರಾರಂಭಿಸಲು ಸರ್ಕಾರಿ ಆದೇಶ ಕೊಡಲು ಯತ್ನಿಸಿದರು.ಎರಡನೇ ಶನಿವಾರ ಮತ್ತು ಸಾಲು, ಸಾಲು ರಜೆಗಳಿಂದ ಆದೇಶ ಬರಲಿಲ್ಲ. ಕಾರಂತರು ಆಗಲೇ ಮುನಿಸಿಕೊಂಡು ಜಿನ್‌ಗೆ ಶರಣಾಗಿದ್ದರು. ನನ್ನ ವೃತ್ತಿಯ ಶಿಸ್ತನ್ನು ದಾಟಿ ಕಾರಂತರನ್ನು ಸಂತುಷ್ಟಿಗೊಳಿಸಲು ಸರ್ಕಾರಿ ಆದೇಶವಿಲ್ಲದಿದ್ದರೂ 1989ರ ಸಂಕ್ರಾಂತಿ­­ಯಂದು ಬೆಳಿಗ್ಗೆ 6ಕ್ಕೆ ರಂಗಾಯಣದ ಉದ್ಘಾಟನೆಗೆ ಅನುವು ಮಾಡಿಕೊಟ್ಟೆ. ಎಂ.ಪಿ. ಪ್ರಕಾಶ್‌ ಉದ್ಘಾಟಿಸಿದರು. ರಂಗಾಯಣಕ್ಕೆ ಕಾರಂತರು ಬಂದಮೇಲೆ ಅವರು ನನ್ನ ಕುಟುಂಬದ ಸದಸ್ಯರೇ ಆಗಿಬಿಟ್ಟರು. ಅವರ ಒಡನಾಟ ನನಗೆ ಅಪಾರ ಅನುಭವಗಳನ್ನು ಕಟ್ಟಿಕೊಟ್ಟಿದೆ.ರಂಗಾಯಣಕ್ಕೆ ಕಾಯಕಲ್ಪ ನೀಡಲು ಮಾಡಿದ ಎಲ್ಲ ಪ್ರಯತ್ನಗಳೂ ವಿಫಲವಾಗಿವೆ. ಅಲ್ಲಿ ಆಗಿರುವ ಒಂದು ಅದ್ಭುತವಾದ ಕೆಲಸ­ವೆಂದರೆ ನಾಡಿನ ಪ್ರತಿಭಾನ್ವಿತ ಕಲಾವಿದರುಗಳ ಆಯ್ಕೆ. ಹೆಮ್ಮೆ ತರುವಂತಹ ಕಲಾವಿದರನ್ನು ಕಾರಂತರು ತಯಾರು ಮಾಡಿದರು. ಅಲ್ಲಿಂದ ತರಬೇತಿ ಪಡೆದ ಮಂಡ್ಯ ರಮೇಶ್‌, ರಂಗಾ­ಯಣ ರಘು, ರಘುನಂದನ್‌, ಅರುಣ್‌ ಸಾಗರ್‌, ಮಂಗಳ ಇವರೆಲ್ಲ ನಾಟಕ, ಸಿನಿಮಾ, ಟಿವಿಯಲ್ಲಿ ದೊಡ್ಡ ಹೆಸರು ಮತ್ತು ದುಡ್ಡು ಮಾಡು­ತ್ತಿದ್ದಾ­ರೆಂದು ಭಾವಿಸಿದ್ದೇನೆ.

ಹುಲಿಗೆಪ್ಪ ಕಟ್ಟೀಮನಿ ಜೈಲಿನ ಕೈದಿಗಳಿಗೆ ನಾಟಕ ಮಾಡಿಸಿ ಕ್ರಿಯಾ­ಶೀಲ­ರಾಗಿದ್ದಾರೆ. ರಂಗಾಯಣಕ್ಕೆ ನಿರ್ದೇ­ಶಕ­ರಾಗಿ ಬಂದ­ವರೆಲ್ಲ ಪ್ರತಿಭಾನ್ವಿತರೇ. ಆದರೆ, ಕಾರಂತರು ಹುಟ್ಟುಹಾಕಿದ್ದ ನಿರೀಕ್ಷೆ­ಗಳನ್ನು ಸಾಧಿ­ಸಲು ಸ್ವತಃ ಕಾರಂತರೇ ಸೋತಿ­ದ್ದರು. ಉಳಿ­ದ­ವ­ರಿಂದ ನಿರೀ­ಕ್ಷಿಸುವುದು ಏನೂ ಇರಲಿಲ್ಲ. ಕಾರಂತರು ಮತ್ತು ರಂಗಾಯಣವನ್ನು ನಂಬಿ­ಬಂದ ನೌಕ­ರರು ಮತ್ತು ಕಲಾವಿದರು ಅತಂತ್ರರಾಗದಂತೆ ನೋಡಿ­ಕೊಳ್ಳುವುದಷ್ಟೇ ಈಗ ಉಳಿದಿರುವ ಕೆಲಸ.ವೈದೇಹಿಯವರು ನಿರೂಪಿಸಿರುವ ಕಾರಂತರ ಆತ್ಮಕಥೆಯ ಶೀರ್ಷಿಕೆ ‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’. ಅವರ ವ್ಯಕ್ತಿತ್ವವನ್ನು ಇದಕ್ಕಿಂತ ಸೊಗಸಾಗಿ ಕಟ್ಟಿಕೊಡಲು ಸಾಧ್ಯವಿಲ್ಲ. ಬರುವ ಸಂಕ್ರಾಂತಿಗೆ 25 ವರ್ಷಗಳನ್ನು ಪೂರೈಸುತ್ತಿರುವ ರಂಗಾಯಣ ಸಂಕ್ರಮಣ ಕಾಲದಲ್ಲಿದೆ. ಇಂದಿನ ನಾಟಕ ರಂಗದ ಅಗತ್ಯತೆ­ಗಳಿಗೆ ಬದಲಾವಣೆಗೊಂಡು ತನ್ನ ಅಸ್ತಿತ್ವ ಉಳಿಸಿ­ಕೊಳ್ಳಬೇಕೋ ಅಥವಾ ರಂಗಾಯಣ ಅಪ್ರಸ್ತುತ ಎಂದು ಅದನ್ನು ಮುಚ್ಚಬೇಕೋ ಎನ್ನುವುದನ್ನು ಶೀಘ್ರ ತೀರ್ಮಾನಿಸುವುದು ಒಳ್ಳೆಯದು.

ನಿಮ್ಮ ಅನಿಸಿಕೆ ತಿಳಿಸಿ:  editpagefeedback@prajavani.co 

ಪ್ರತಿಕ್ರಿಯಿಸಿ (+)