ಶುಕ್ರವಾರ, ಮೇ 29, 2020
27 °C

ಎಲ್ಲಿದ್ದೀರಿ ಜಾರ್ಜ್? ಹೇಗಿದ್ದೀರಿ ಜಾರ್ಜ್?

ಸುಧೀಂದ್ರ ಬುಧ್ಯ Updated:

ಅಕ್ಷರ ಗಾತ್ರ : | |

ಅಮೆರಿಕದ  ಯಾವುದೇ ನಗರ ಗ್ರಂಥಾಲಯದ ಒಳಹೊಕ್ಕು, ಇತಿಹಾಸ ವಿಭಾಗದ ಕಪಾಟುಗಳನ್ನು ತಡಕಿದರೆ, ಬಹುತೇಕ ಕಣ್ಣಿಗೆ ಕಾಣುವುದು ಭಾರತದ ಮೂವರು ನಾಯಕರನ್ನು ಕುರಿತ ಪುಸ್ತಕಗಳು. ಮಹಾತ್ಮ ಗಾಂಧಿ, ನೆಹರೂ ಮತ್ತು ಇಂದಿರಾ ಗಾಂಧಿ. ಭಾರತವನ್ನು ಒಗ್ಗೂಡಿಸಿದ ಲೋಹಪುರುಷ ಪಟೇಲ್, ಸಂವಿಧಾನ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಅಂಬೇಡ್ಕರ್, ಪರ್ಯಾಯ ರಾಜಕೀಯ ಚಿಂತನೆ ಎದುರಿಗಿಟ್ಟ ಜೆಪಿ, ಲೋಹಿಯಾ, ರಥಯಾತ್ರೆಯ ಮೂಲಕ ಕಾಂಗ್ರೆಸ್ಸಿಗೆ ಪರ್ಯಾಯ ಪಕ್ಷ ಕಟ್ಟಿದ ಅಡ್ವಾಣಿ, ಆರ್ಥಿಕ ಸುಧಾರಣೆಗೆ ಮುನ್ನುಡಿ ಬರೆದ ಪಿ.ವಿ.ಎನ್, ಹತ್ತಾರು ಪಕ್ಷಗಳನ್ನು ಸಂಭಾಳಿಸಿಕೊಂಡು ದೇಶವನ್ನು ಹೊಸ ಪಥದತ್ತ ಮುನ್ನಡೆಸಿದ ವಾಜಪೇಯಿ ಕುರಿತ ಪುಸ್ತಕಗಳು ಇಲ್ಲ ಎನ್ನುವಷ್ಟು ದುರ್ಲಭ.

ಇದನ್ನೂ ಓದಿ: ಮಾಜಿ ರಕ್ಷಣಾ ಸಚಿವ ಜಾರ್ಜ್‌ ಫರ್ನಾಂಡಿಸ್‌ ನಿಧನ

ಇನ್ನು ರಾಜಾಜಿ, ಜಾರ್ಜ್ ಫರ್ನಾಂಡಿಸ್‌, ಚಂದ್ರಶೇಖರ್, ನಿಜಲಿಂಗಪ್ಪ, ಕೆಂಗಲ್, ಕಾಮರಾಜ್ ಇತ್ಯಾದಿ ನಾಯಕರ ಬಗ್ಗೆ ಕಿರು ಹೊತ್ತಿಗೆಯೂ ಸೀಮೋಲ್ಲಂಘನ ಮಾಡಿ ವಿದೇಶದ ಗ್ರಂಥಾಲಯಗಳನ್ನು ತಲುಪಿರುವುದು ಅನುಮಾನವೆ. ಕಾರಣ ಹುಡುಕಹೊರಟರೆ ಅದು ಮತ್ತೊಂದು ಅಂಕಣದ ವಿಷಯವಾಗಬಹುದು. ಅದರಲ್ಲೂ ವ್ಯಕ್ತಿಚಿತ್ರಗಳನ್ನು ಗಮನಿಸುವುದಾದರೆ ಇಂದಿರಾ ಕುರಿತ ಪುಸ್ತಕಗಳು ವಿಪುಲವಾಗಿ ಸಿಗುತ್ತವೆ. ಅದಕ್ಕೆ ಅವರ ವ್ಯಕ್ತಿತ್ವ ಕಾರಣವಿರಬಹುದು. ಬಹುಶಃ ಈ ದೇಶ ಕಂಡ ರಾಜಕಾರಣಿಗಳಲ್ಲಿ ಇಷ್ಟಪಡುವವರನ್ನೂ, ದ್ವೇಷಿಸುವವರನ್ನೂ ಸಮತೂಕದಲ್ಲಿ ಹೊಂದಿದ್ದ ರಾಜಕಾರಣಿ ಎಂದರೆ ಇಂದಿರಾ ಗಾಂಧಿಯವರೇ ಇರಬೇಕು. ಹಾಗಾಗಿ ಅವರನ್ನು ‘ದುರ್ಗೆ’ ಎಂದು ಕೊಂಡಾಡುವವರೂ ಇದ್ದರು.

ಅಹಂಕಾರಿ, ಕ್ರೂರಿ ಎಂದೆಲ್ಲ ಜರಿದವರೂ ಇದ್ದರು. ಇಂದಿರಾ ಬೆನ್ನಿಗೆ ನಿಂತು ಅವರನ್ನು ಪ್ರಧಾನಿಯಾಗಿಸಿದ್ದ ಕೆಲವು ನಾಯಕರಿಗೆ ಇಂದಿರಾರನ್ನು ಸಂಪೂರ್ಣವಾಗಿ ನಿಯಂತ್ರಿಸಿ, ನೆಪಮಾತ್ರಕ್ಕೆ ಅವರನ್ನು ಹುದ್ದೆಯಲ್ಲಿ ಕೂರಿಸಿ ತಾವು ಅಧಿಕಾರ ನಡೆಸುವ ಆಸೆ ಇತ್ತು. ಆದರೆ ಇಂದಿರಾ ‘ಮೇಡಂ ಡಿಕ್ಟೇಟರ್’ ಆಗಿ ಬದಲಾಗುತ್ತಾರೆಂಬ ಯಾವ ಸುಳಿವೂ ಕಾಂಗ್ರೆಸ್ ಹಿರಿತಲೆಗಳಿಗೆ ಇರಲಿಲ್ಲ. ಬಿಡಿ, ತುರ್ತುಪರಿಸ್ಥಿತಿಯ ದಿನಗಳಲ್ಲಿ ಇಂದಿರಾರ ‘ಕಿಚನ್ ಕ್ಯಾಬಿನೆಟ್’ ಮಾಡಿದ ಅವಾಂತರಗಳು, ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಾದ ಗಾಸಿಯಂತೂ ಅಕ್ಷಮ್ಯ. ಆದರೆ ಇಡೀ ದೇಶವನ್ನು ತನ್ನ ಕಪಿಮುಷ್ಟಿಯಲ್ಲಿ ಬಂಧಿಸಹೊರಟ ಇಂದಿರಾರಿಗೆ ಸಡ್ಡು ಹೊಡೆದ ನಾಯಕರೂ ಇದ್ದರು. ಅದರಲ್ಲೂ ತುರ್ತುಪರಿಸ್ಥಿತಿ ವೇಳೆ ಜಾರ್ಜ್ ಫರ್ನಾಂಡಿಸ್ ವಹಿಸಿದ್ದ ಪಾತ್ರವನ್ನು ಮರೆಯುವುದಾದರೂ ಹೇಗೆ?

ಇದನ್ನೂ ಓದಿ: ನ್ಯೂಯಾರ್ಕ್‌ನಿಂದ ಪುತ್ರ ಬಂದ ಬಳಿಕ ಜಾರ್ಜ್‌ ಫರ್ನಾಂಡಿಸ್‌ ಅಂತ್ಯಕ್ರಿಯೆ

ಪ್ರತಿಪಕ್ಷದ ನಾಯಕರನ್ನೆಲ್ಲಾ ಬಂಧಿಸಿ ಜೈಲಿಗಟ್ಟಿದ ಮೇಲೂ, ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಾ, ಮಾರುವೇಷದಲ್ಲಿ ಇಂದಿರಾ ಆಡಳಿತಕ್ಕೆ ಬಿಸಿ ಮುಟ್ಟಿಸಲು ಕ್ರಾಂತಿಕಾರಿ ಮಾರ್ಗ ಹಿಡಿದವರು ಜಾರ್ಜ್. ಇಂದಿರಾ ಮತ್ತು ಜಾರ್ಜ್ ಅವರ ಜಗಳ್ಬಂದಿ ರೋಚಕವಾದದ್ದು. ಜಾರ್ಜ್ ರಾಷ್ಟ್ರನಾಯಕರಾಗಿ ಬೆಳೆದ ಪರಿಯೂ ಅಚ್ಚರಿ ಮೂಡಿಸುವಂತಹುದೇ. ಎಂದಿಗೂ ಇಸ್ತ್ರಿ ಕಾಣದ ಖಾದಿ ಕುರ್ತಾ– ಪೈಜಾಮ, ಚರ್ಮದ ಸಾಧಾರಣ ಚಪ್ಪಲಿ, ದಪ್ಪ ಫ್ರೇಮಿನ ಕನ್ನಡಕ, ಕೂದಲಿಗೆ ಬಾಚಣಿಗೆ ತಾಗಿಸದ ಈ ಆಸಾಮಿಯ ಮಾತಿಗೆ ಲಕ್ಷಾಂತರ ಜನ ಕಿವಿಗೊಡುತ್ತಿದ್ದರು ಎಂದರೆ ಅಚ್ಚರಿಯಲ್ಲವೇನು? ಕಾರ್ಮಿಕ ನಾಯಕ ಜಾರ್ಜ್, ವಿವಿಧ ಜವಾಬ್ದಾರಿ ನಿರ್ವಹಿಸಿ ದೇಶದ ರಕ್ಷಣಾ ಮಂತ್ರಿಯಾದಾಗಲೂ ಡೌಲು ತೋರಲಿಲ್ಲ.

ಇದನ್ನೂ ಓದಿ: ‘ಜೈಂಟ್ ಕಿಲ್ಲರ್‌’ ಎಂದೇ ಪ್ರಸಿದ್ಧರಾಗಿದ್ದ ಜಾರ್ಜ್‌

ಕೃಷ್ಣ ಮೆನನ್ ಮಾರ್ಗದ ತಮ್ಮ 3ನೇ ನಂಬರ್ ಮನೆಯ ಬಾಗಿಲನ್ನು ಸದಾ ತೆರೆದೇ ಇಟ್ಟರು. ಭದ್ರತಾ ಸಿಬ್ಬಂದಿಯನ್ನು ಗೇಟಿನಲ್ಲಿ ನಿಲ್ಲಿಸಿದವರಲ್ಲ. ಕೈಗೊಬ್ಬ ಕಾಲಿಗೊಬ್ಬ ಆಳು ಇರಲಿಲ್ಲ. ತಮ್ಮ ಬಟ್ಟೆಗಳನ್ನು ತಾವೇ ಒಗೆದುಕೊಳ್ಳುತ್ತಿದ್ದ ಜಾರ್ಜ್ ಅವರಿಗೆ ಆಳುಗಳ ಅವಶ್ಯಕತೆಯಾದರೂ ಎಲ್ಲಿತ್ತು? ಎಷ್ಟೋ ವೇಳೆ ಸಂಸತ್ತಿಗೆ ನಡೆದೇ ಹೋಗುತ್ತಿದ್ದ ಜಾರ್ಜ್, ವಿಮಾನ ಏರಿದಾಗಲೂ ಎಕಾನಮಿ ಕ್ಲಾಸ್ ಸೀಟಿನಲ್ಲೇ ಪ್ರಯಾಣಿಸುತ್ತಿದ್ದರು. ಜಾರ್ಜ್ ಅವರ ಸಾರ್ವಜನಿಕ ಜೀವನ ಆರಂಭವಾದದ್ದು ಕಾರ್ಮಿಕ ಚಳವಳಿಯಿಂದ. ಅದೇ ನಂತರ ರಾಜಕೀಯಕ್ಕೂ ಅವರನ್ನು ದೂಡಿತು. ಮೊದಲಿಗೆ 1961ರಲ್ಲಿ ಬಾಂಬೆಯ ಪುರಸಭೆಗೆ ಆಯ್ಕೆಯಾದರು.

ಅದಾಗಿ ಆರು ವರ್ಷಗಳಲ್ಲೇ ‘ಸಂಯುಕ್ತ ಸೋಷಿಯಲಿಸ್ಟ್‌ ಪಾರ್ಟಿ’ ಜಾರ್ಜ್ ಅವರನ್ನು ಕಾಂಗ್ರೆಸ್ಸಿನ ದೈತ್ಯ ನಾಯಕ ಎಸ್.ಕೆ.ಪಾಟೀಲರ ವಿರುದ್ಧ ದಕ್ಷಿಣ ಬಾಂಬೆಯಿಂದ ಲೋಕಸಭೆಗೆ ಕಣಕ್ಕಿಳಿಸಿತು. ಎಸ್.ನಿಜಲಿಂಗಪ್ಪ ಮತ್ತು ಅತುಲ್ಯ ಘೋಷ್ ಅವರೊಂದಿಗೆ ಕಾಂಗ್ರೆಸ್ಸಿನ ಸಿಂಡಿಕೇಟ್ ಸದಸ್ಯರಾಗಿದ್ದ ಪಾಟೀಲ್, ದಕ್ಷಿಣ ಬಾಂಬೆಯನ್ನು ಮೂರು ಅವಧಿಗೆ ಪ್ರತಿನಿಧಿಸಿದ್ದರು. ಅಂದಿಗೆ ಜಾರ್ಜ್, ಎಸ್.ಕೆ.ಪಾಟೀಲ್ ಎದುರು ‘ಬಚ್ಚಾ’. ಆದರೆ ಫಲಿತಾಂಶ ಬಂದಾಗ ಜಾರ್ಜ್ ಗೆಲುವಿನ ನಗೆ ಬೀರಿದ್ದರು. ‘ಜೈಂಟ್ ಕಿಲ್ಲರ್’ ಎನಿಸಿಕೊಂಡರು. ಆ ಸೋಲಿನೊಂದಿಗೆ ಎಸ್.ಕೆ.ಪಾಟೀಲ್ ರಾಜಕೀಯ ಭವಿಷ್ಯ ಕಮರಿಹೋಯಿತು. ನಂತರ ಜಾರ್ಜ್ ಹೆಸರು ದೇಶವ್ಯಾಪಿ ಮನೆಮಾತಾದದ್ದು 1974ರಲ್ಲಿ. ಅದು ಅವರು ಸಂಘಟಿಸಿದ ರೈಲ್ವೆ ಮುಷ್ಕರದ ಕಾರಣದಿಂದ.

ಮೂರು ವಾರಗಳ ರೈಲ್ವೆ ಮುಷ್ಕರ ದೇಶದ ಸಂಚಾರ ವ್ಯವಸ್ಥೆಯನ್ನೇ ಅಲ್ಲೋಲಕಲ್ಲೋಲ ಮಾಡಿತು. ಸ್ವತಃ ಇಂದಿರಾ ಗಾಂಧಿ ಜಾರ್ಜ್ ಸಾಮರ್ಥ್ಯ ಕಂಡು ಬೆರಗಾದರು. ‘ರೈಲ್ವೆ ಮುಷ್ಕರಕ್ಕೆ ಜಾರ್ಜ್ ವಿದೇಶಗಳಿಂದ ಹಣ ಪಡೆದಿದ್ದಾರೆ’ ಎಂದು ಇಂದಿರಾ ಆರೋಪಿಸಿದರು. ಕಾರ್ಮಿಕ ಸಂಘಟನೆಯನ್ನು ಒಡೆಯುವ ಕೆಲಸಕ್ಕೆ ಕೈಹಾಕಿದರು. ಇದಕ್ಕೆ ಪ್ರತಿಯಾಗಿ 1975 ಜುಲೈ 27ರಂದು ಜಾರ್ಜ್ ತೀಕ್ಷ್ಣವಾದ ಪತ್ರವೊಂದನ್ನು ಇಂದಿರಾರಿಗೆ ಬರೆದರು. ‘ಮೇಡಂ ಡಿಕ್ಟೇಟರ್, ನೀವೊಬ್ಬ ಸುಳ್ಳುಬುರುಕಿ. ನಾನು ವಿದೇಶದಿಂದ ಹಣ ಪಡೆದ ಬಗ್ಗೆ ದಾಖಲೆಯಿದ್ದರೆ ತೋರಿಸಿ. ಹಾಗೊಮ್ಮೆ ಅದು ನಿಜವೇ ಆಗಿದ್ದರೆ ನನ್ನನ್ನು ಗುಂಡು ಹೊಡೆದು ಸಾಯಿಸಿ. ಸುಳ್ಳು ಹೇಳಬೇಡಿ’ ಎಂದು ಚುಚ್ಚಿದ್ದರು.

ಇತರ ಪ್ರತಿಪಕ್ಷ ನಾಯಕರು ಜೈಲಿನಲ್ಲಿ ಕೂತು ಭೂಗತ ಪತ್ರಿಕೆಗಳ ಮೂಲಕ ಜನರನ್ನು ಎಚ್ಚರಿಸುತ್ತಿದ್ದರೆ, ಇಂದಿರಾರನ್ನು ಮಣಿಸಲು ಜಾರ್ಜ್ ಕ್ರಾಂತಿಯ ಮಾರ್ಗ ಹಿಡಿದರು. ಮದ್ದು ಗುಂಡು ಸಂಗ್ರಹಿಸಿ, ಜನರಿಗೆ ತೊಂದರೆಯಾಗದಂತೆ ಅವುಗಳನ್ನು ರಾತ್ರಿಯ ವೇಳೆ ಸರ್ಕಾರಿ ಕಚೇರಿಗಳಲ್ಲಿ ಸ್ಫೋಟಿಸುವ, ಆ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸುವ, ಜನರನ್ನು ಬಡಿದೆಬ್ಬಿಸುವ ಯೋಜನೆ ರೂಪಿಸಿದರು. ಹಿಂಸೆಯಲ್ಲದ ಉಪಟಳದಿಂದ ಸರ್ಕಾರದ ಧೋರಣೆಗಳನ್ನು ವಿರೋಧಿಸುವ ಮಾರ್ಗ ಅದು. ಬರೋಡಾದಲ್ಲಿ ಡೈನಮೈಟ್‌ಗಳನ್ನು ಜಾರ್ಜ್ ಮತ್ತು ಸ್ನೇಹಿತರು ಸಂಗ್ರಹಿಸಿದರು. ಕರ್ನಾಟಕದ ವಿಧಾನಸೌಧದ ಹೊರಗಿದ್ದ ಪಾಯಿಖಾನೆ ಒಂದರಲ್ಲಿ ಡೈನಮೈಟ್ ಇಡುವ ಯೋಜನೆಯೂ ಸಿದ್ಧವಾಗಿತ್ತು. ಆದರೆ ಅದು ಯಶ ಕಾಣಲಿಲ್ಲ.

ಜಾರ್ಜ್ ಅವರನ್ನು ಹಣಿಯಲು ಇಂದಿರಾ ಇದೇ ಕಾರಣ ಬಳಸಿಕೊಂಡರು. ಕೊನೆಗೆ ಕಲ್ಕತ್ತಾದಲ್ಲಿ ಜಾರ್ಜ್ ಅವರನ್ನು ಬಂಧಿಸಲಾಯಿತು. ಸಿಡಿಮದ್ದುಗಳ ಕಳ್ಳಸಾಗಾಣಿಕೆ ಆರೋಪ ಹೇರಿ ತಿಹಾರ್ ಜೈಲಿನಲ್ಲಿಟ್ಟರು. ‘ಬರೋಡ ಡೈನಮೈಟ್ ಕೇಸ್’ ಎಂದೇ ಅದು ಇತಿಹಾಸದಲ್ಲಿ ದಾಖಲಾಯಿತು. ತುರ್ತುಪರಿಸ್ಥಿತಿ ಮುಗಿದು ಪ್ರತಿಪಕ್ಷ ನಾಯಕರನ್ನು ಬಿಡುಗಡೆಗೊಳಿಸಿದರೂ, ಜಾರ್ಜ್ ಅವರನ್ನು ಇಂದಿರಾ ಬಂಧಿಯಾಗಿಟ್ಟರು. ಕೊನೆಗೆ ಜೈಲಿನಿಂದಲೇ ಜಾರ್ಜ್ 1977ರ ಚುನಾವಣೆಯಲ್ಲಿ ಸ್ಪರ್ಧಿಸಿ 3 ಲಕ್ಷಗಳ ದಾಖಲೆ ಮತಗಳ ಅಂತರದಿಂದ ಗೆಲುವು ಸಾಧಿಸಿದರು! ತುರ್ತುಪರಿಸ್ಥಿತಿಯ ನಂತರ ಅಸ್ತಿತ್ವಕ್ಕೆ ಬಂದ ಮೊರಾರ್ಜಿ ದೇಸಾಯಿ ನೇತೃತ್ವದ ಮೊದಲ ಕಾಂಗ್ರೆಸ್ಸೇತರ ಸರ್ಕಾರದಲ್ಲಿ ಜಾರ್ಜ್ ಕೈಗಾರಿಕಾ ಮಂತ್ರಿಯಾದರು.

ನಿಯಮಗಳನ್ನು ಉಲ್ಲಂಘಿಸಿದ್ದ ಐಬಿಎಂ ಮತ್ತು ಕೋಕಾಕೋಲ ಕಂಪೆನಿಗಳು ತಮ್ಮ ಉತ್ಪಾದನಾ ಘಟಕಗಳನ್ನು ಮುಚ್ಚಿಕೊಂಡು ಭಾರತದಿಂದ ಹೊರ ನಡೆಯಬೇಕಾಯಿತು. ವಿ.ಪಿ.ಸಿಂಗ್ ಸರ್ಕಾರದಲ್ಲಿ ರೈಲ್ವೆ ಸಚಿವರಾದಾಗ ಕೊಂಕಣ ರೈಲ್ವೆ ಯೋಜನೆ ಅನುಷ್ಠಾನಕ್ಕೆ ತಾಂತ್ರಿಕ ಅಡಚಣೆಗಳು ಎದುರಾಗಿ, ಯೋಜನೆ ಪೂರ್ಣಗೊಳ್ಳಲು ಸಾಧ್ಯವೇ ಇಲ್ಲ ಎಂಬ ಮಾತು ಕೇಳಿ ಬಂದಿತ್ತು. ಆದರೆ ಜಾರ್ಜ್ ಅಧಿಕಾರಿಗಳ ಬೆನ್ನಿಗೆ ನಿಂತು, ಮುಕ್ತ ಸ್ವಾತಂತ್ರ್ಯ ನೀಡಿ ಯೋಜನೆ ಯಶಗೊಳ್ಳುವುದಕ್ಕೆ ಕಾರಣರಾದರು. ಈ ನಡುವೆ 1984ರ ಚುನಾವಣೆಯಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದರಾದರೂ ಜಾಫರ್ ಷರೀಫ್ ಅವರ ವಿರುದ್ಧ ಸೋಲು ಅನುಭವಿಸಿದರು.

ನಂತರ ಬಿಹಾರವನ್ನೇ ತಮ್ಮ ರಾಜಕೀಯ ಕ್ಷೇತ್ರವನ್ನಾಗಿಸಿಕೊಂಡು ನಾಲ್ಕು ಅವಧಿಗೆ ಸಂಸತ್ತಿಗೆ ಆಯ್ಕೆಯಾದರು. ನಂತರ ಜಾರ್ಜ್ ಅವರ ಸೈದ್ಧಾಂತಿಕ ನಿಲುವುಗಳು ಬದಲಾದವು. ಜಾರ್ಜ್ ಬಿಜೆಪಿ ನೇತೃತ್ವದ ಎನ್.ಡಿ.ಎ ಭಾಗವಾದರು. ಪರಮಾಣು ನಿಶ್ಶಸ್ತ್ರೀಕರಣದ ಪ್ರತಿಪಾದಕರಾಗಿದ್ದ ಜಾರ್ಜ್ ರಕ್ಷಣಾ ಸಚಿವರಾಗಿದ್ದಾಗಲೇ ಭಾರತ ಅಣು ಪರೀಕ್ಷೆ ನಡೆಸಿತು! ಕಾರ್ಗಿಲ್ ಯುದ್ಧದ ಗೆಲುವು ಅವರ ಕಿರೀಟಕ್ಕೆ ಮತ್ತೊಂದು ಗರಿಯಾಯಿತು ನಿಜ, ಆದರೆ ‘ಶವಪೆಟ್ಟಿಗೆ ಹಗರಣ’ದ ಕಳಂಕವೂ ಮೆತ್ತಿಕೊಂಡಿತು. ಜಾರ್ಜ್ ರಾಜೀನಾಮೆ ಇತ್ತು, ಕೆಲ ತಿಂಗಳಲ್ಲೇ ಆರೋಪ ಮುಕ್ತರಾಗಿ ಸಂಪುಟ ಸೇರಿದರು. ಇದೆಲ್ಲದರ ಹೊರತಾಗಿ ಜಾರ್ಜ್ ಅವರಿಗಿದ್ದ ಇನ್ನೊಂದು ಮುಖ ಅನೇಕ ಓದುಗರಿಗೆ ಗೊತ್ತಿರಲಿಕ್ಕಿಲ್ಲ.

ಆರು ಮಕ್ಕಳಿದ್ದ ಮಂಗಳೂರಿನ ತುಂಬು ಕುಟುಂಬದಿಂದ ಬಂದ ಜಾರ್ಜ್, ತಮ್ಮ 16ನೆಯ ವಯಸ್ಸಿಗೆ ಚರ್ಚ್ ಒಂದರ ಪಾದ್ರಿಯಾಗಲು ಬೆಂಗಳೂರಿಗೆ ಬಂದವರು. ಮೂರು ವರ್ಷದಲ್ಲೇ ಚರ್ಚ್ ಒಳಗಿನ ಅಸಮಾನತೆಯನ್ನು ವಿರೋಧಿಸಿ ಹೊರನಡೆದರು. ತಮ್ಮ 19ನೆಯ ವಯಸ್ಸಿನಲ್ಲಿ ಮುಂಬೈ ನಗರಕ್ಕೆ ಕಾಲಿಟ್ಟಾಗ ಆಶ್ರಯವಿರಲಿಲ್ಲ. ಬಸ್ಸು, ರೈಲು ನಿಲ್ದಾಣಗಳಲ್ಲಿ ಮಲಗಿದರು. ಉದರ ಪೋಷಣೆಗೆ ಸಿಕ್ಕ ಕೆಲಸಗಳನ್ನೆಲ್ಲಾ ಮಾಡಿದರು. ಕೊನೆಗೆ ಸ್ಥಳೀಯ ಪತ್ರಿಕೆಯೊಂದರಲ್ಲಿ ಕರಡು ತಿದ್ದುವ ಹುದ್ದೆ ದೊರೆಯಿತು. ಪ್ರತಿಭೆ ಪತ್ರಕರ್ತನಾಗಿ ದುಡಿಯಲು ಅವಕಾಶ ಒದಗಿಸಿತು. ಜೊತೆಗೇ ಸಾಹಿತ್ಯದ ಗೀಳು ಬೆಳೆಯಿತು. ಲೋಹಿಯಾ ಚಿಂತನೆಗಳು ಸಮಾಜವಾದದತ್ತ ಆಕರ್ಷಿಸಿದವು. ‘ದಿ ಅದರ್ ಸೈಡ್’ ಎಂಬ ಪತ್ರಿಕೆಯನ್ನೂ ತಂದರು.

ಬಿಡುವಿಲ್ಲದ ಕೆಲಸ, ಚಳವಳಿಗಳ ಮಧ್ಯೆಯೂ ಕನ್ನಡ ಕಾದಂಬರಿಗಳನ್ನು ಓದಿ ವಿಮರ್ಶೆ ಬರೆಯುತ್ತಿದ್ದರು. ಅದಾಗ ಜನಪ್ರಿಯಗೊಂಡಿದ್ದ  ಗಿರಿಯವರ ‘ಗತಿ ಸ್ಥಿತಿ’ ಕಾದಂಬರಿಗೆ ಅನಂತಮೂರ್ತಿಯವರು ಪತ್ರಿಕೆಯೊಂದರಲ್ಲಿ ಬರೆದ ವಿಮರ್ಶೆ ಓದಿ, ಪ್ರತಿಯಾಗಿ ಜಾರ್ಜ್ ತಾವೇ ಒಂದು ವಿಮರ್ಶೆ ಬರೆದಿದ್ದನ್ನು ಅನಂತಮೂರ್ತಿ ತಮ್ಮ ಆತ್ಮಕತೆ ‘ಸುರಗಿ’ಯಲ್ಲಿ ನೆನಪಿಸಿಕೊಂಡಿದ್ದಾರೆ. ಕನ್ನಡ, ಕೊಂಕಣಿ, ಇಂಗ್ಲಿಷ್, ಹಿಂದಿ, ತುಳು, ಮರಾಠಿ, ತಮಿಳು, ಉರ್ದು, ಮಲಯಾಳಂ, ಲ್ಯಾಟಿನ್ ಹೀಗೆ ಹತ್ತು ಭಾಷೆಗಳಲ್ಲಿ ಮಾತನಾಡುವ ಸಾಮರ್ಥ್ಯ ಜಾರ್ಜ್ ಅವರಿಗಿತ್ತು! ಇಂತಹ ಮೇರು ನಾಯಕನ ರಾಜಕೀಯ ಜೀವನ, ಸಾರ್ವಜನಿಕ ಬದುಕು 2004ರ ಎನ್.ಡಿ.ಎ ಸೋಲಿನ ತರುವಾಯ ಮಸುಕಾಯಿತು.

ಮರುಚುನಾವಣೆಯಲ್ಲಿ ಜಾರ್ಜ್ ಸ್ಪರ್ಧಿಸಿದರಾದರೂ, ಠೇವಣಿ ಕಳೆದುಕೊಂಡರು. 2009ರಲ್ಲಿ ರಾಜ್ಯಸಭೆಗೆ ಜಾರ್ಜ್ ಅವರನ್ನು ಅವಿರೋಧವಾಗಿ ಕಳುಹಿಸಲಾಯಿತು. ಆದರೆ ಜಾರ್ಜ್ ಆರೋಗ್ಯ, ಸಕ್ರಿಯ ರಾಜ್ಯಸಭಾ ಸದಸ್ಯನಾಗಿ ಕೆಲಸ ಮಾಡಲು ಬಿಡಲಿಲ್ಲ. ಸರಳತೆಗೆ ಹೆಸರಾಗಿದ್ದ, ತಮ್ಮ ಬಟ್ಟೆಗಳನ್ನು ತಾವೇ ಒಗೆದುಕೊಳ್ಳುತ್ತಿದ್ದ ಜಾರ್ಜ್, ವಯಸ್ಸು 70 ದಾಟಿದ ಮೇಲೂ ಸಿಯಾಚಿನ್ ಪ್ರದೇಶಕ್ಕೆ 18 ಬಾರಿ ಭೇಟಿ ಕೊಟ್ಟಿದ್ದ ಜಾರ್ಜ್, ಅಲ್ಜೈಮರ್ ಮತ್ತು ಪಾರ್ಕಿನ್ಸನ್ ರೋಗಕ್ಕೆ ತುತ್ತಾಗಿ ಮಂಕಾದರು. ದುರಂತವೆಂದರೆ ಜಾರ್ಜ್ ಯಾರ ಸುಪರ್ದಿಯಲ್ಲಿರಬೇಕು ಎಂಬ ಬಗ್ಗೆಯೇ ತಕಾರಾರು ಎದ್ದಿತು, ಆಸ್ತಿ ಹಕ್ಕಿಗಾಗಿ ವ್ಯಾಜ್ಯಗಳು ನಡೆದವು.  

ಕಳೆದ ವರ್ಷ ದೆಹಲಿಯ ಇಂಡಿಯಾ ಇಂಟರ್‌ನ್ಯಾಷನಲ್ ಸೆಂಟರಿನಲ್ಲಿ ನಡೆದ ‘Strengthening Democracy in Asia’ ಕುರಿತ ಸಮ್ಮೇಳನದಲ್ಲಿ ಟಿಬೆಟಿಯನ್‌ ಧರ್ಮಗುರು ದಲೈಲಾಮಾ ‘ಜಾರ್ಜ್ ಫರ್ನಾಂಡಿಸ್ ಭಾರತದ ಒಬ್ಬ ಮೇರು ನಾಯಕ. ಟಿಬೆಟ್ ಪರವಾಗಿ ಸದಾ ದನಿ ಎತ್ತಿದವರು. ಬಹುಶಃ ನನ್ನ ಅವರ ನಂಟು ಜನ್ಮಾಂತರದ್ದು’ ಎಂದಿದ್ದರು. ಮೊನ್ನೆ ಜೂನ್ 3ರಂದು ಜಾರ್ಜ್ 86ನೇ ವರ್ಷಕ್ಕೆ ಕಾಲಿಟ್ಟರು. ಯಾರೊಬ್ಬರೂ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದಂತೆ ಕಾಣಲಿಲ್ಲ. ಜೂನ್ 25ರಂದು ತುರ್ತುಪರಿಸ್ಥಿತಿ ಎಂಬ ಭಾರತ ಇತಿಹಾಸದ ಕರಾಳ ಅಧ್ಯಾಯಕ್ಕೆ 41 ತುಂಬಿತು. ಎಲ್ಲಿದ್ದೀರಿ ಜಾರ್ಜ್? ಹೇಗಿದ್ದೀರಿ ಜಾರ್ಜ್? ಎಂದು ಕೇಳಿದವರು ಯಾರೂ ಇದ್ದಂತಿಲ್ಲ!

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು