ಶುಕ್ರವಾರ, ಜೂಲೈ 3, 2020
28 °C

ಏನ ಹೇಳಲಿ? ಎಂತು ಹೇಳಲಿ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಏನ ಹೇಳಲಿ? ಎಂತು ಹೇಳಲಿ?

ಅಂದು ರತ್ನತ್ತೆ ನನ್ನನ್ನು ನೋಡಿದವಳೇ ಅಚ್ಚರಿಯಿಂದ `ಹುಡುಗೀ! ಎಷ್ಟುದ್ದ ಬೆಳೆದು ಬಿಟ್ಟೆ! ನನಗಿಂತಲೂ! ಹ್ಞಂ! ಅತ್ತೆ ಎಂಬ ಭಯಭಕ್ತಿ ಕೂಡ ಇಲ್ಲದೆ!!~ ಎಂದು ಹುಬ್ಬೇರಿಸಿ ಸಣ್ಣಕೆ ಹೊಡೆದು ಗೆಲುವಾಗಿ ಬರಮಾಡಿಕೊಂಡಳು.

 

ಮತ್ತೆಯೂ ಅವಳಿಗೆ ಅದದೇ ಆಶ್ಚರ್ಯ. `ನೀನು ಹುಟ್ಟಿದ್ದು ಸಹ ನೆನಪಿದೆಯಲ್ಲ ಹುಡುಗೀ. ಈಗ ನೀನೂ ದೊಡ್ಡ ಹೆಂಗಸಿನ ಹಾಗೆ ಆಗಿದ್ದೀ, ದುಡಿಯುತ್ತಿ ಅಂದರೆ ನಂಬುವುದು ಹೇಗೆ!~ ಎಂದು ತಲೆಯಿಂದ ಮುಡಿಯವರೆಗೆ ನೋಡಿದಳು. `ಅಜ್ಜಿಯದೇ ಬಣ್ಣ, ಅಗ, ನಿಲ್ಲುವ ರೀತಿ ಕೂಡ ಹಾಗೆಯೇ. ಅದು ಹೇಗೆ ಹಾರ್ಶ ಬರುತ್ತದೆ ನೋಡು~ ಎಂದು ಹರ್ಷಿಸಿದಳು.-`ಕಾಲೇಜಿಗೆ ಮಣ್ಣು ಹೊತ್ತದ್ದೇ ಬಂತು. ಸಂಪಾದನೆಯನ್ನೇ ಮಾಡಲಿಲ್ಲ. ನನಗಿಂತ ಹಿಂದಿನವರಂತೆಯೇ ಅದೇರೀತಿ ಘೈಲುಗುಟ್ಟಿದ ಗದ್ದಲದ ಮದುವೆಯಾದೆ, ಹೆತ್ತೆ, ಯಥಾಪ್ರಕಾರ ಅದೇ ಬದುಕಿನೊಳಗೆ ಬಂದೆ. ಈಗ ಏನು ಕಲಿಸಿದ್ದಾರೆ ಎನ್ನುವುದೇ ಮರೆತು ಹೋಗಿದೆ~  ಎಂದು ಸಂಕಟಪಡುವ ರತ್ನತ್ತೆ ಅವಳು. `ಏನೇ ಇರಲಿ.ನಮ್ಮನೆಯಲ್ಲಿ ನೀನೇ ಪ್ರಥಮ ಪದವೀಧರೆ~ ಅಂತ ಹೇಳಿದಾಗೆಲ್ಲ ಹೀಗೆನ್ನುವಳು. `ಈಗಿನ ಹೆಣ್ಣುಮಕ್ಕಳನ್ನು ಕಂಡರೆ ಏನು ಖುಶಿಯಾಗುತ್ತದೆ. ಕಲಿಯುವುದು, ಕೆಲಸಕ್ಕೆ ಸೇರುವುದು, ಕೈತುಂಬ ದುಡ್ಡು ತರುವುದು, ಆಮೇಲೆಯೇ ಮದುವೆಯಾಗುವುದು! ನಮ್ಮ ಹಾಗೆ ದುಡ್ಡಿಗೆ ಗಂಡನ ಕೈಕಾಣುವ ಸ್ಥಿತಿಯೇ ಅಲ್ಲ~ ಎಂದು ಇದೆಲ್ಲ ಈಗ ಸಾಮಾನ್ಯಎಂಬಂತೆ ನುಡಿವಳು.

 

ಅಲ್ಲ, ಇವರು ನನಗೆ ಕೊರತೆಯೇನೂ ಮಾಡಿಲ್ಲ. ಆದರೆ, ಯಾತಕ್ಕಾದರೂ ದುಡ್ಡು ಬೇಕು ಅಂತ ಕೇಳಿದೊಡನೆ- `ಯಾಕೆ, ಯಾವುದಕ್ಕೆ?~ ಪ್ರಶ್ನೆ ಬಂದಾಯಿತು. ಅಬ್ಬ ಅಂದಿನಿಂದಲೂ ಇದನ್ನೇ ಕೇಳೀಕೇಳೀ ಸಾಕಾಗಿಹೋಗಿದೆ. ಈಗೀಗಂತೂ ಅವರು ಹಾಗೆ ಕೇಳಿದೊಡನೆ ಒಮ್ಮೆ ನನ್ನ ಜೀವ ಹೋಗಬಾರದಾ ಅನಿಸಿಬಿಡುತ್ತದೆ.

 

ನನ್ನದೇ ಒಂದು ಉದ್ಯೋಗದ ನೆನಪಾಗುವುದೇ ಆಗ. ಒಂದು ಸಲವಂತೂ ಸಿಟ್ಟು ಬಂದು `ಬೇಕಪ್ಪ, ಯಾವುದಕ್ಕೋ. ವಿಷ ತೆಗೆದುಕೊಳ್ಳಲಿಕ್ಕೆ ಅಂತ ಎಣಿಸಿಕೊಳ್ಳಿ~ ಎಂದೆ.`ಹಾಗಾದರೆ ಕೊಡುವುದಿಲ್ಲ ಹೋಗು~. `ಇಲ್ಲ ಕೊಡಿ~. `ಇಲ್ಲ ಕೊಡುವುದಿಲ್ಲ. ನೀನು ವಿಷ ತೆಗೆದುಕೊಳ್ಳುವುದು ಸರಿಯೆ, ಕಡೆಗೆ ಜೈಲಿಗೆ ಹೋಗುವವರು ಯಾರು?~ ಎಂದರು”- ಅಂತೆಲ್ಲ ಇಲ್ಲದ್ದು ಇದ್ದದ್ದು, ಅದರಲ್ಲಿ ಬೇಕೆಂದೇ ನಗಿಸಲು ಯಾವುದು, ವಾಸ್ತವ ಯಾವುದು ತಿಳಿಯದಂತಹ ಕಥನದ ದಾಟಿಯಲ್ಲಿ ವಿಷಾದವೆಂಬಂತೆ ಹೇಳುತ್ತ ಅರೆನಗೆ ಅರೆ ಕಣ್ಮುಚ್ಚಿನಲ್ಲಿ ಅದರ ವಿರುದ್ಧಾರ್ಥವನ್ನೂ ಹೊಳೆಸಿಬಿಡುವ ಅಭಿನಯ ಶಾರದೆ ಅವಳು. ನಗುತ್ತ ನಗಿಸುವವಳು.ಮುಂಚಿನಿಂದಲೂ ಹೀಗೆಯೆ. ಸದಾ ಏನಾದರೂ ತಾಪತ್ರಯದಲ್ಲಿ ಗಂಭೀರವಾಗಿರುತಿದ್ದ ಅಪ್ಪ ಅಮ್ಮನೂ ಅವಳ ವಾಚಿಕಾಭಿನಯ ನೋಡುತ್ತ ಗೆಲುಗೊಳ್ಳುತಿದ್ದರು. ಅರ್ಥವಾಗುತ್ತಿರಲಿಲ್ಲವಾದರೂ ಅವರು ನಗುವುದು ನೋಡಿ ನಾವೂ ನಗುತಿದ್ದೆವು. ಎಲ್ಲಾದರೂ ನಗದೆ ಬಿಮ್ಮಗೆ ಮುಖ ಮಾಡಿಕೊಂಡು ಮೂಲೆಯಲ್ಲಿ ಕುಳಿತೆವೆ? ಬಂದಾಯಿತು ರತ್ನತ್ತೆ.

 

`ಏನ, ಸಿಟ್ಟ? ಯಾಕೆ? ಅಕ್ಕಳೆ ಹೂಸು ಕೊಟ್ಟಿತ?~ ಎಂದು, ಅವಳಿಗಷ್ಟೇ ಹೊಳೆಯಬಹುದಾದ ಕಲ್ಪನೆ ಹೇಳಿ ಕುಲುಕುಲುಗೊಳಿಸಿಯಾಯಿತು.ಅಚ್ಯುಮಾವನೋ, ಅವಳ ಹತ್ತು ಮಾತುಗಳಿಗೆ ಒಂದು ಮಾತಾಡುವ. ಆಕೆ ಏನೇ ಹೇಳಲಿ, ಬೇಕಾದರೆ ಎದುರೆದುರೇ ಅವನನ್ನೇ ಛೇಡಿಸುತ್ತಿರಲಿ, ಉತ್ತರ ಕೊಡಬಹುದಾದ್ದಕ್ಕೆ ಸಂಕ್ಷಿಪ್ತವಾಗಿ ಉತ್ತರಿಸಿ ಉಳಿದಂತೆ ಸುಮ್ಮನೆ ಮುಗುಳುನಗುವ.

 

ಆಕೆ ಎಷ್ಟೇ ಮಾತಾಡುತಿದ್ದರೂ `ಸಾಕಿನ್ನು ಖೈದು ಮಾಡು, ಎಷ್ಟದು ಮಾತು~ ಎಂದವನೂ ಅಲ್ಲ. ಆಡಿ ಕೆಡುವವನಲ್ಲ ಎಂಬ ಬಿರುದಾಂಕಿತ. ಆಕೆಯೇ ಒಮ್ಮೆ ನಮ್ಮಮ್ಮನ ಬಳಿ `ಅದೇನು ಅತ್ತಿಗೆ, ನಾನೂ ನೋಡುತಿದ್ದೇನೆ, ಬಿಳೀ ಇದ್ದವರಿಗೆ ಕಪ್ಪಟೆ ಗಂಡ, ಕಪ್ಪಿನವರಿಗೆ ಬಿಳೀ ಗಂಡ, ಉದ್ದದವರಿಗೆ ಗಿಡ್ಡ, ಗಿಡ್ಡದವರಿಗೆ ಉದ್ದ, ಜಾಣರಿಗೆ ಪೆದ್ದು ಪೆದ್ದರಿಗೆ ಜಾಣ, ಮಾತೇ ಬೇಡದವರಿಗೆ ವಾಚಾಳಿ, ಮಾತು ಬೇಕೆಂಬವರಿಗೆ ಮೂಕು ಬುಕ್ಕಣ್ಣ... ಹೀಗೆ ಎಲ್ಲ ತಿರುಗ ಮುರುಗಗಳೇ ಜೋಡಿಯಾಗುವುದು? ದೇವರು ನಿಜವಾಗಿಯೂ ತಲೆತಿರುಕ~ ಎಂದಳು.

 

ಅಮ್ಮ `ಹೂಂ, ನೀ ಹೇಳುವುದು ನಿಜವೇ. ಹಾಗೆ ಅದರಲ್ಲಿ ನಿನ್ನ ಅಣ್ಣಅತ್ತಿಗೆ ಜೋಡಿಯೇ ಸ್ಪೆಶಲ್ ನೋಡು~ ಅಂತಂದು ಆಕೆಯಿಂದ ಬೆನ್ನಿಗೆ ಗುಡುಮ್ಮ ಗುದ್ದಿಸಿಕೊಂಡಿದ್ದಳು.ಮನೆಗೆ ಬಂದು ನಾಕು ದಿನವಿದ್ದು `ದಿನ ಹೋದದ್ದೇ ಗೊತ್ತಾಗಲಿಲ್ಲ~ ಎನ್ನುತ್ತ ಎವೆ ಹನಿಯುತಿದ್ದಂತೆ ಅಪ್ಪಅಮ್ಮನ ಕಾಲಿಗೆರಗಿ, ಅವರದೂ ದನಿ ತೇವವಾಗಿ `ಇನ್ನು ಯಾವಾಗ ಬರುತ್ತೀ~, ಇತ್ಯಾದಿ ಕೇಳಿಸಿಕೊಂಡು ಉತ್ತರಿಸುತ್ತಾ ಮಕ್ಕಳೊಂದಿಗೆ ಅವಳು ಹೊರಟುನಿಂತಾಗ, `ಇನ್ನೊನ್ನಾಕು ದಿನ ಇದ್ದು ಹೋಗೀ ರತ್ನತ್ತೇ~ ಎಂದು ನಾವು ಬೊಬ್ಬೆ ಹೊಡೆಯುತಿದ್ದೆವು.ಮಕ್ಕಳು, ಓದು, ಮಾರ್ಕು ಅಂತೆಲ್ಲ ಇರುತ್ತಲ್ಲ ಪಾಪ. ಅವಳಿಗೆ ಹೊರಡದೆ ವಿಧಿ ಇರಲಿಲ್ಲ. ಅವರು ಒಂದು ದಡ ಮುಟ್ಟಲಿ, ಮತ್ತೆ ನೋಡಿ ಎಲ್ಲ, ತಿಂಗಳಿಗೊಮ್ಮೆ ಬರುವೆ ಎನ್ನುವಳು.ದಿನಗಳು ಮುನ್ನಡೆದಂತೆ ನಾವೂ ದೊಡವರಾಗಿ ನಮ್ಮನಮ್ಮ ಬಾಳುವೆಗೆ ಹೋದೆವು. ಅವಳ ಮಕ್ಕಳಿಬ್ಬರೋ ಬ್ರೈಟ್ ಎನ್ ಬ್ರೈಟ್  ಮಕ್ಕಳು. ಮಗಳಂತೂ ಶಾಲೆಯಲ್ಲಿ ಮಾತ್ರವಲ್ಲ, ಸಂಗೀತದಲ್ಲಿಯೂ. `ನಾವು ಭಜನೆಮಾಡುತ್ತ ಬರಿದೆ ತಾಳ ತಟ್ಟಿದ್ದೇ ಸೈ.

 

ಸಂಗೀತದೇವತೆ ಒಲಿದದ್ದು ಯಾರಿಗೆ? ಇವಳಿಗೆ! ಏನು ಕಂಡಳೋ ಇವಳಲ್ಲಿ, ನಮ್ಮಲ್ಲಿ ಕಾಣದ್ದು!~ ಎಂದು ಮೊದಮೊದಲು ಖುಷಿಯಲ್ಲೇ ಹೇಳುತಿದ್ದ ರತ್ನತ್ತೆ  `ಬೇಡ, ಸಂಗೀತ ಸಾಕು, ಇನ್ನು ಸಂಪೂರ್ಣ ಓದಿಗೇ ಮನಸ್ಸು ಕೊಡು ಅಂದರೆ ಕೇಳುವುದಿಲ್ಲ.ನಾಳೆ ಒಂದು ಒಳ್ಳೆಯ ಕೆಲಸ ಹಿಡಿಯಬೇಕಲ್ಲ, ನಮ್ಮ ಕಾಲ ಅಲ್ಲವಲ್ಲ ಇದು? ನೀನಾದರೂ ಹೇಳು ಅತ್ತಿಗೆ~ ಅಂತೆಲ್ಲ ಚಡಪಡಿಸುತಿದ್ದಳು. ಅಂತೂ ಮಗಳು ಓದಿನ ಮಜಲನ್ನೂ ದಾಟಿ ಬೇಜಾನ್ ಸಂಬಳದ ಕೆಲಸ ಪಡೆದಾಗ ಎಷ್ಟು ಸಂತೋಷ ಪಟ್ಟಳು ರತ್ನತ್ತೆ.`ಆಕೆ ಈಗ ಮುಂಚಿನಂತಿಲ್ಲ. ಆ ಗೆಲ ಕಳೆದಿದ್ದಾಳೆ. ಅಚ್ಯು ಫೋನು ಮಾಡಿದ್ದಾನೆ, ಯಾಕೋ ಮಂಕಾಗಿದ್ದಾಳಂತೆ. ಇಲ್ಲಿಗೆ ಬಾ ಅಂದರೆ ಬರುತ್ತಿಲ್ಲ, ನನಗಂತೂ ಹೋಗಿ ನೋಡಲು ಏನೇನೂ ಕೂಡದಂತಾಗಿದೆ. ಹೋಗಿ ಅವಳೊಟ್ಟಿಗೆ ಎರಡು ದಿನ ಇದ್ದು ಬಾ~- ಎಂದ ಅಮ್ಮನ ಮಾತಿಗೆ ಹೊರಟುಬಂದಿದ್ದೆ.`ನಿನ್ನ ಜೊತೆಗಿರದೆ ಎಷ್ಟು ಸಮಯ ಆಯಿತು ರತ್ನತ್ತೆ! ಅದಕ್ಕೇ, ರಜೆ ಎಳೆದು ಹಾಕಿದೆ, ಇವರಿಗೆ  ಬಡ್ಡೀಮಗನೆ ನಾಕು ದಿನಕ್ಕೆ ಬೈ  ಎಂದೆ, ಕಾರಿಗೆ ಪೆಟ್ರೋಲು ತುಂಬಿಸಿಕೊಂಡೆ, ಕುಳಿತು ರ್ರ‌್‌ರ‌್ರೈಟ್, ರತ್ನತ್ತೆ ಮನೆಗೆ ಹೋಗಲೀ ಎಂದೆ.ಅದು ನೋಡು ನಿನ್ನ ಮನೆಗೇ ಹೇಗೆ ಕರಕೊಂಡು ಬಂತು!~ ಎಂದೆ. `ಆಹ್, ಇದ್ದರೆ ಹೀಗಿರಬೇಕು ನೋಡು~ ಎಂದಳು. ತಾನು ಗಂಡನ ಸ್ಕೂಟರಿನ ಹಿಂದೆ ಕುಳಿತುಕೊಂಡು ಹೋಗುವ ಕತೆ, ಆತ ಒಮ್ಮೆ ಇವಳು ಕುಳಿತಿದ್ದಾಳೆ ಅಂದುಕೊಂಡು ಬಿಟ್ಟು ಮುಂದೆಹೋದ ಕತೆ, ತನ್ನ ವಾಹನ ಬಿಡುವ ಆಸೆ, `ಒಳ್ಳೆಯವರೆ ನಿನ್ನ ಅಚ್ಯುಮಾವ, ಆದರೆ ಅವರ ಸ್ಕೂಟರು ಮುಟ್ಟಿ ನೋಡು, ಕೈ ಉಗುರಲ್ಲಿ ಮುಟ್ಟು ಸಾಕು, ಅವರು ಗುರ್ರ‌್‌ ಅನ್ನದೇ ಇದ್ದರೆ ನನ್ನ ಹೆಸರು ನನ್ನದಲ್ಲ~,

 

ಹಾಗಾಗಿ ತಾನು ಸ್ಕೂಟರೂ ಕಲಿಯದ ಕತೆ, ಇನ್ನೂ ಮುಂತಾಗಿಯೆಲ್ಲ ಹೇಳುತ್ತ ನಗಿಸುತ್ತ, ಕೆಲಸ ಮಾಡುತಿದ್ದಂತೆ ಅಚ್ಯುಮಾವನ ಸ್ಕೂಟರ್ ಗ್‌ರ‌್ರ ಬಂತು. ನನ್ನನ್ನು ನೋಡಿದವನೆ, `ಹ್ಹ! ಬಂದೇಬಿಟ್ಟೆಯ ಒಳ್ಳೆಯದಾಯಿತು!~ ಎಂದ, ಪೆದ್ದಂಬಟ್ಟ.ಕೂಡಲೇ ರತ್ನಕ್ಕ- `ಏನು ಅವಳು ಬರುವುದು ನಿಮಗೆ ಗೊತ್ತಿತ್ತೆ?~. ಆತಗಿಂತ ಮುಂಚೆ ನಾನೇ ಎಂದೆ, `ಹೇಗೆ? ನಾನು ಬರುವುದು ನನಗೇ ಗೊತ್ತಿಲ್ಲದ ಮೇಲೆ!~. ಅಲ್ಲಿಗೆ ಮತ್ತೆ ಆತನಂತೂ ಉತ್ತರಿಸಲು ಬರುವವನಲ್ಲ. ನಾನು ಬಂದದ್ದು ರತ್ನತ್ತೆಗೆ ಮಾತಿಗೊಂದು ಜನ ಸಿಕ್ಕಿದಂತೆ, ಸಿಕ್ಕಿಕೊಂಡ ಉಸಿರು ಹೊರಒಳಗೆ ಆಡುವಹಾಗೆ ಆಯಿತಂತೆ.ಮುಂಚೆಲ್ಲ ಎಷ್ಟು ಎತ್ತರ ಕಾಣುತಿದ್ದಳು ರತ್ನತ್ತೆ. ಈಗ ನೋಡಿದರೆ ಆಕೆ ಅಷ್ಟೇನು ಎತ್ತರದ ಹೆಂಗಸಲ್ಲ. ಹೈಟಿನಲ್ಲಿ ಅವಳಿಗಿಂತ ನಾನೇ ಎತ್ತರ!

`ರತ್ನತ್ತೇ, ಇದೇನು, ನೀನು ಗಿಡ್ಡವಾದೆಯ?!~ ಛೇಡಿಸಿದೆ.`ಹೂಂ. ಮತ್ತೆ. ಹೊರಗೆ ಕೆಲಸಗಿಲಸಕ್ಕೆ ಹೋಗಿದ್ದರೆ ನಾಕು ಜನರನ್ನು ನೋಡಿ ಬೆರೆತು ಉದ್ದವಾಗಬಹುದಿತ್ತು. ಒಳಗೇ ಇದ್ದರೆ ಆಯುಷ್ಯ ಕಳೆದಂತೆ ಗಿಡ್ಡವಾಗುವುದೇ ಸೈ~.ಮುಂಚಿನಂತೆಯೇ ಕುಶಾಲು ಮಾತಾಡುತಿದ್ದೇನೆ, ಮುಂಚಿನಂತೆಯೇ ಇದ್ದೇನೆ ಎಂದು ತೋರುತಿದ್ದಾಳೆ.

 

ಕಣ್ಣಲ್ಲಿ ಮಾತ್ರ ಖಿನ್ನತೆ, ಅದರಂಚು ಮೀರಿ ಸುತ್ತ ಇಷ್ಟಗಲ ಕಪ್ಪುಗಟ್ಟಿದೆ. ಇದೇನು, ಅಚ್ಯುಮಾವನೂ ಮುಂಚಿನಂತಿಲ್ಲ. ಮಾತು ಕಡಿಮೆಯವನಾದರೂ ಹಸನ್ಮುಖಿ ಆತ, ಈಗಲೋ ನಕ್ಕರೂ ನಗೆ ಕಳೆದುಹೋದಂತೆ ಇದ್ದಾನೆ. ಯಾಕೆ, ಏನಾಯಿತು?...ಅಚ್ಯುಮಾವ - ನಮ್ಮ ಮಾಧವನ ಬಳಿ ಇರುವುದೂ ನಿಂಥರದ್ದೇ ಕಾರು. ಇನ್ನೊಂದು ತೆಗೆದುಕೊಳ್ಳುತ್ತಾನಂತೆ. ಇಬ್ಬರಿಬ್ಬರು ದುಡಿಯುತಿದ್ದಾರೆ...

ಅಚ್ಯುಮಾವ ಮಗ ದುಡಿಯುತಿದ್ದ ಕಂಪೆನಿ, ಸೊಸೆಯ ಕಂಪೆನಿ ಎಲ್ಲ ಹೇಳಿದ.ತಾವಿಬ್ಬರೂ ಮಗನಿಗೆ ಒಳ್ಳೆಯ ಕಂಪೆನಿಯಲ್ಲಿ ಕೆಲಸದಲ್ಲಿರುವವಳೇ ಬೇಕೆಂದು ತಲಾಷು ಮಾಡಿದ್ದು ಎಲ್ಲ ಹೇಳಿದ. ಇವತ್ತು ಕಂಪೆನಿ ಕಂಪೆನಿ ಮದುವೆಯಲ್ಲವೆ ಎಂದು ನಗೆಯಾಡಿದ. ತನ್ನ ಆಸಕ್ತಿಯ ವಿಚಾರಗಳಾದರೆ ಮಾತ್ರ ಎಷ್ಟೂ ಮಾತಾಡುವ ಪೈಕಿ ಅವ. ಇಲ್ಲವಾದರೆ ಮೂಕ.ನಾನು: ಸಿಟಿಯಲ್ಲಿ ಅಂಥ ಉದ್ಯೋಗ, ಇಬ್ಬರದೂ ಬೇರೆ ಬೇರೆ ಸಮಯ, ಬೇರೆ ಬೇರೆ ಕಡೆ ಕೆಲಸ, ಅಂದ ಮೇಲೆ ಎರಡು ವೆಹಿಕಲ್ ಬೇಕೇ ಬೇಕಲ್ಲ... ಅಂದಹಾಗೆ ಪ್ರತಿಮಾ (ಮಗಳು) ಈಗ...ರತ್ನತ್ತೆ: (ತಡೆದು) ಇದು ನಿನ್ನದೇ ಕಾರೆ?

ನಾನು: ಹೂಂ ರತ್ನತ್ತೆ, ನಾಳೆ ಒಂದು ರೌಂಡು ಹೋಗಿಬರುವ, ನಾನೂ ನೀನೂ ಇಬ್ಬರೆ.

ರತ್ನತ್ತೆ: ಛೆ. ಏನು ಕಾಲ ಬಂತು! ನನಗೆ ಆಶ್ಚರ್ಯವೇ ಮುಗಿಯುತ್ತಿಲ್ಲ. ಹೌದ, ನನಗೆ ಡ್ರೈವಿಂಗ್ ಹೇಳಿಕೊಡುತ್ತೀಯ?ನಾನು: ಹೋ, ಅದಕ್ಕೇನು?... ಅಲ್ಲ, ಪ್ರತಿಮಾ ಮತ್ತು ದೀಪಕ್...

ಅಚ್ಯುಮಾವ: ಯಾಕೆ ಡ್ರೈವಿಂಗ್ ನಿಂಗೆ? ಕಾರಿದೆಯನ ನಮ್ಮ ಹತ್ತಿರ?

ರತ್ನತ್ತೆ: ಇಲ್ಲದಿದ್ದರೇನು? ಕಲಿಯಬಾರದ? ಸ್ಕೂಟರು ಬಿಡಲಂತೂ ಕಲಿಯಲಿಲ್ಲ.ಊಟ, ಮಾತುಕತೆಯಲ್ಲಿ ರಾತ್ರಿ ಹತ್ತಾಯಿತು.ಅಚ್ಯುಮಾವ: ಸರಿ, ನಾನಿನ್ನು ಮಲಗುತ್ತೇನೆ, ಗುಡ್‌ನೈಟ್.

ರತ್ನತ್ತೆ: ನನ್ನದೂ ಗುಡ್‌ನೈಟ್. ನಾಳೆ ನೋಡುವ...

ಅಚ್ಯುಮಾವ ನಕ್ಕ, ರತ್ನತ್ತೆಯೂ ನಕ್ಕಳು, ನಾನೂ. ಆದರೆ ನಗೆ ಯಾಕೆ ಇಷ್ಟು, ಈ ಪರಿ, ಸಪ್ಪಗಿದೆ!ಆಚೆಈಚೆ ಇರುವ ಸಿದ್ಧ ಹಾಸಿಗೆಯ ಮಂಚದಲ್ಲಿ ಇಬ್ಬರೂ ಮಲಗಿದೆವು. ಮಲಗಿದಲ್ಲಿಂದಲೇ ನನ್ನ ಬದುಕಿನ ಬಗ್ಗೆ ಕೇಳಿದಳು ರತ್ನತ್ತೆ. ಅಭ್ಯಾಸವಾಗಿ ಹೋದಂತೆ, ಇರುವುದಕ್ಕಿಂತ ಆಕರ್ಷಕವಾಗಿ ಬಣ್ಣಿಸಿದೆ.

 

ಉದಾಹರಣೆಗೆ: ನಿತ್ಯಕ್ಕೆ ನಾವಿಬ್ಬರೂ ಗಂಡಹೆಂಡತಿ ಭೇಟಿಯಾಗುವುದೇ ಅಪರೂಪ ಎನ್ನುವ ಬದಲು `ರಜೆ ಬಂತೆಂದರೆ ಕಾರು ತೆಗೆದು ಇಬ್ಬರೇ ಎಲ್ಲಿಗಾದರೂ ಹೊರಟುಬಿಡುತ್ತೇವೆ...~- ಈ ಮಾದರಿ. `ಎಲ್ಲಿಗೆ ಏನು ಹೇಗೆ ಅಂತೆಲ್ಲ ಕೇಳುತ್ತ ಕನಸು ಕಟ್ಟಿದ್ದು ನಾನು, ಸಿಕ್ಕಿದ್ದು ನಿಂಗೆ~ ಎಂದು ಸಂತೋಷಪಟ್ಟಳು.

 

ಆದರೆ ಅದು ರತ್ನತ್ತೆಯ ಸಂತೋಷದ ದನಿ ಅಲ್ಲ, ಅದು ಕುಂದಿದೆ. ಚಿಂತಿತವಿದೆ... ಸಣ್ಣವಳು ನಾನು, ಕೇಳುವುದು ಹೇಗೆ? ಸ್ವಲ್ಪಹೊತ್ತು ಸುಮ್ಮನೇ ಇದ್ದೆವು. ಅವಳೊಳಗೂ ಏನಾಗುತಿತ್ತೋ.

ಅಮ್ಮ ಹೇಗಿದ್ದಾಳೆ?

ಹೂಂ. ತೊಂದರೆ ಇಲ್ಲ, ಏನಂದರೂ ಅಪ್ಪ ಹೋದಮೇಲೆ ಅಷ್ಟಷ್ಟೆ...

...

ಸಮಯ ಈಗ ಬಂತು ಅಂತೆನಿಸಿತು. ಮೆಲ್ಲ ಹೇಳಿದೆ. `ಆದರೂ ರತ್ನತ್ತೆ, ಅಮ್ಮನಿಗೆ ಸ್ವಂತ ಮಕ್ಕಳಿಗಿಂತ ನೀವೇ ಎಲ್ಲ ಅಚ್ಚುಮೆಚ್ಚು... ಇಲ್ಲವಾದರೆ, ನೀನೀಗ ನೋಡು, ನನ್ನ ಬಗ್ಗೆ ಕೇಳಿದೆ. ಅವಳೋ, ಫೋನು ಎತ್ತಿದ್ದೇ ಹೇಗಿದ್ದೀ ಎಂಬುದಕ್ಕಿಂತ ಮೊದಲು ನಮ್ಮ ರತ್ನ ಅಂತ ಸುರುಮಾಡುತ್ತಾಳೆ...~`ಹೂಂ, ಅಣ್ಣನಿಗಿಂತ ಒಂದು ತೂಕ ಹೆಚ್ಚು ಅವಳು ನಮಗೆ... ಅದಕ್ಕೇ ಅಲ್ಲವೆ, ಏನು ಬಂದರೂ ಅವಳೊಡನೆ ಹೇಳದೆ ನನಗೆ ಕಳೆಯದು...~

`ಎಲ್ಲ ಸುಳ್ಳೆ... ನೀನು ಏನೋ ಬೇಸರದದ್ದೀ... ಏನಂತ ಹೇಳಿದ್ದೀಯ ಅವಳಿಗೆ, ...ಹೇಳಬಾರದ?~ಧಡಕ್ಕನೆ ಎದ್ದು ಕುಳಿತಳು ರತ್ನತ್ತೆ. ತುಸು ಹೊತ್ತು ಮೌನ. ಮತ್ತೆ `ಏನಂತ ಹೇಳುವುದು? ಮಕ್ಕಳಿಂದ ನಿರಾಸೆ ಆದರೆ ನಾಲಗೆ ಏಳುವುದಿಲ್ಲ, ತಿಳಕೋ~/

`ಹ್ಞಂ!... ಅಂಥದ್ದೇನಾಯಿತೀಗ?~

`ಯಾಕೆ, ಹೇಳಲಿಲ್ಲವೆ ಪ್ರತಿಮಾ?~`ಇಲ್ಲಪ್ಪ, ಇರುವುದೇನೋ ಬೆಂಗಳೂರಿನಲ್ಲೇ ಅಂತ. ನಾವು ಮಾತಾಡದೆ ಒಬ್ಬರನ್ನೊಬ್ಬರು ನೋಡದೆ ಎಷ್ಟು ಕಾಲವಾಯಿತೋ~. 

`ಹಾಗಾದರೆ ಕೇಳು, ನಮ್ಮ ಪ್ರತಿಮಾ... ಅಂಥಾ ದೊಡ್ಡ ಕೆಲಸ ಸಿಕ್ಕಿತ್ತಲ್ಲ,... ಎಷ್ಟು, ಎಷ್ಟು ದೊಡ್ಡ ಸಂಬಳ ಅಂತೀ!~.

`ಹೂಂ, ಹೌದು, ಗೊತ್ತಿದೆ...~`... ಆಕೆ ಕೆಲಸ ಬಿಟ್ಟಿದ್ದಾಳೆ ಇವಳೇ...~ - ಅಯ್ಯ! ರತ್ನತ್ತೆ ಅಳುತ್ತಿರುವಳೆ?

ಲೈಟ್ ಹಾಕಿದೆ. ಅದು ಹೊತ್ತಿಕೊಳ್ಳುವಷ್ಟರಲ್ಲಿ, `ಲೈಟ್ ಆರಿಸು~ ಎಂದಳು. ಆರಿಸಿದೆ.

`ರತ್ನತ್ತೆ, ಅಳುತಿದ್ದೀರ? ನೀವು!~`ಹೂಂ ನಾನೆ. ಅಳದೇ ಇನ್ನೇನು ಮಾಡಲಿ ಹೇಳು. ಕೆಲಸ ಬಿಟ್ಟದ್ದಷ್ಟೇ ಅಲ್ಲವೇ, ಫುಲ್‌ಟೈಮ್ ಸಂಗೀತ ಅಂತ ಹೊರಟಿದ್ದಾಳೆ. ಅದೆಲ್ಲೋ ಚೆನ್ನೈನಲ್ಲಿ ಒಬ್ಬ ಗುರು ಇದ್ದಾರಂತೆ, ಅವರೇ ಬೇಕು ಅಂತ ಅಲ್ಲಿಗೆ ಹೋಗಿದ್ದಾಳೆ. ಇವತ್ತಿನ ದಿವಸ ಅಂಥಾ ದೊಡ್ಡ ಕೆಲಸ, ಕಾರು ಬಂಗಲೆ, ಎಲ್ಲ ಬಿಟ್ಟು ಹೋಗುವವರನ್ನು ಕಂಡಿದ್ದೀಯ ಹೇಳು~.`...~

`ಈಗ, ನಿನ್ನನ್ನು ನೋಡು. ಹೇಗಿದ್ದೀ!~

(ಇಷ್ಟೆಯ? ಸದ್ಯ!)...

`ಇಷ್ಟೆ ಅಂತ ಮಾಡಿದೆಯ? ನಾವು ಈ ಬೇಸರದಲ್ಲಿ ಹಣ್ಣಾಗಿ ಕುಳಿತಿದ್ದೇವೆ, ನಿನ್ನೆ ಸುದ್ದಿ ಬಂತು, ದೀಪಕ್ ಡಿವೋರ್ಸ್ ಕೊಡುತಾನಂತೆ... ಕೊಡದೆ ಮತ್ತೆ ಪಾಪ ಆತ ಏನು ಮಾಡುವ? ಇವಳು ಅಷ್ಟೊಳ್ಳೆ ಸಂಬಳದ ಕೆಲಸ ಬಿಟ್ಟು ಆ್ಞ ಅಂತ ಬೆಳಗೆದ್ದು ರಾಗ ತೆಗೆದರೆ? ಇವರಿಗೂ ಕಂಡಾಪಟ್ಟೆ ಬೇಜಾರಾಗಿದೆ.ಅಷ್ಟು ಖರ್ಚು ಮಾಡಿ ಕಲಿಸಿದ್ದು ನೀರಲ್ಲಿ ಹೋಮ ಆಯ್ತಲ್ಲ. ನಾವು ಸಾಯಲಿ, ಸ್ವಂತ ಗಂಡನ ಮಾತು ಸಾ ಕೇಳಲಿಲ್ಲ ಮಾರಾಯ್ತಿ... ದೊಡ್ಡ ಪುಳುಕಿ ಇವಳು!... ಕೆನ್ನೆಗೆ ಸಮಾ ಎರಡು ತಟ್ಟ ಬೇಕಾ ಬೇಡವ?...~ 

`...~

`ಅಲ್ಲ, ಹೇಳು, ಅವಳು ಮಾಡಿದ್ದು ಸರಿಯ?~ 

`...~

`ಹೇಳು ನೀನೆ~

`...~

`... ನಿದ್ದೆ ಬಂತನ?~

`...~ಆಚೆ ಹಾಲಿನಿಂದ ಉಯ್ಯಾಲೆ ತೂಗಿನ ಚುಯ್ಞ ಚುಯ್ಞ ಸದ್ದಿನೊಂದಿಗೆ ಅಚ್ಯುಮಾವನ ಮೆಲುದನಿ- (ಇವ ಮಲಗ್ಲ್ಲಿಲವೆ ಹಾಗಾದರೆ!)  `ನಿದ್ದೆ ಬಂತು ಬಹುಶ, ಬಂದ ಆಯಾಸ. ಸುಮ್ಮನಿರಬಾರದೆ?... ಎಲ್ಲ ನಮ್ಮ ಹಣೆಬರಹ~.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.