ಭಾನುವಾರ, ಮೇ 16, 2021
25 °C

ಐಷಾರಾಮಿ ಬದುಕು ಬಿಟ್ಟು ಸಹಜ ಕೃಷಿಯತ್ತ ಮುಖ

ಎಂ ನಾಗರಾಜ್ Updated:

ಅಕ್ಷರ ಗಾತ್ರ : | |

ಐಷಾರಾಮಿ ಬದುಕು ಬಿಟ್ಟು ಸಹಜ ಕೃಷಿಯತ್ತ ಮುಖ

ಸಿನಿಮಾ ನಟನಾಗಬೇಕು ಎಂಬ ಭಾರಿ ಕನಸು ಹೊತ್ತು ರಾಣೆಬೆನ್ನೂರು ತಾಲ್ಲೂ­ಕಿನ ಮುದೇನೂರು ಗ್ರಾಮದ ಶಂಕರೇಗೌಡ ಗಂಗನಗೌಡ ಒಂದು ಕಾಲ­ದಲ್ಲಿ ಗಾಂಧಿನಗರದಲ್ಲಿ ಸುತ್ತು ಹಾಕಿ­ದ್ದರು. ದಾವಣಗೆರೆಯಲ್ಲಿ ಕಾಲೇಜು ವ್ಯಾಸಂಗ ಮಾಡುವಾಗ ದಿನವೂ ಎನ್‌­ಫೀಲ್ಡ್‌ ಮೋಟರ್‌ ಬೈಕ್‌ನಲ್ಲಿ ಹೋಗು­ತ್ತಿ­­ದ್ದರು. ಆ ಕಾಲದಲ್ಲಿಯೇ ಅವರ ಬಳಿ ದೇಶದ ಐಷಾರಾಮಿ ಕಾರು ಎನಿಸಿ­ಕೊಂಡಿದ್ದ ಕಾಂಟೆಸ್ಸಾ ಇತ್ತು. ಐಷಾ­ರಾಮಿ ಬದುಕಿಗೆ ಒಗ್ಗಿಕೊಂಡಿದ್ದ ಶಂಕರೇ­ಗೌಡರು ತಮ್ಮ ಈ ಎಲ್ಲ ವೈಭೋ­ಗ­ಗಳನ್ನು ಮನೆಯ ಹಿಂಭಾಗದ­ಲ್ಲಿಯೇ ಹರಿಯುವ ತುಂಗಭದ್ರಾ ಹೊಳೆ­ಯಲ್ಲಿ ತೇಲಿಬಿಟ್ಟು ಈಗ ಸಹಜ ಕೃಷಿ­ಯಲ್ಲಿ ತೊಡಗಿಕೊಂಡಿದ್ದಾರೆ. ಅತ್ಯಂತ ಸರಳ ಜೀವನ ಅಳವಡಿಸಿಕೊಳ್ಳುವ ಮೂಲಕ ಜೀವನದಲ್ಲಿ ನೆಮ್ಮದಿ ಕಂಡು­ಕೊಂಡಿ­ದ್ದಾರೆ. ಯಾವ ಚಿಂತೆಯೂ ಇಲ್ಲದ ಅವರಿಗೆ ಕನಿಷ್ಠ ತಮ್ಮ ಭೂಮಿ­ಯನ್ನು ಭ್ರಷ್ಟಮುಕ್ತಗೊಳಿಸಿದ ಹೆಮ್ಮೆ ಇದೆ.ಶಂಕರೇಗೌಡರ ಸಹಜ, ಸಮೃದ್ಧ ಕೃಷಿ ಜೀವನದ ಕುರಿತು ಗೊತ್ತಾಗಿದ್ದು ನನ್ನ ಗೆಳೆಯನಿಂದ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ನನ್ನೊಂದಿಗೆ ಪದವಿ ತರ­ಗ­ತಿ­­ಯಲ್ಲಿ ಓದುತ್ತಿದ್ದ ದಾವಣಗರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಎರೆಹಳ್ಳಿಯ ಎಂ.ಬಿ.ಹನುಮಂತಪ್ಪ ಸಹ ಇಂಗ್ಲಿಷ್‌­ನಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ ಕೃಷಿಯಲ್ಲಿ ತೊಡಗಿಕೊಂಡಿ­ದ್ದಾನೆ. ಅವನ ಕುರಿತು ಪತ್ರಿಕೆಯಲ್ಲಿ ಬಂದಿದ್ದ ಲೇಖನ ಓದಿ, ಅವನೊಂದಿಗೆ ಮಾತನಾಡುವಾಗ, ‘ನನಗಿಂತಲೂ ಉತ್ತಮ ಕೃಷಿಕರೊಬ್ಬರು ಮುದೇನೂರಿ­ನ­ಲ್ಲಿದ್ದಾರೆ’ ಎಂದಿದ್ದ. ಅವನೊಂದಿಗೆ ಮುದೇ­ನೂರಿಗೆ ಹೋದಾಗ, ಶಂಕರೇ­ಗೌಡರು, ಅವರ ಪತ್ನಿ ಸುನೀತಾ, ಮಗ ಸಚ್ಚಿದಾನಂದ ಮೂವರೂ ಹೊಲದಲ್ಲಿ ಕೆಲಸ ಮಾಡುತ್ತಿದ್ದರು. ಎಲ್ಲೆಡೆ ಕೃಷಿಗೆ ಕಾರ್ಮಿಕರೇ ಸಿಗುವುದಿಲ್ಲ ಎಂಬ ಗೊಣಗಾಟ ಕೇಳಿದರೆ ಹೊಲದ ಎಲ್ಲ ಕೆಲಸಗಳನ್ನೂ ತಾವೇ ಮಾಡಿ­ಕೊಳ್ಳು­ತ್ತಾರೆ ಈ ಕುಟುಂಬದ ಸದಸ್ಯರು. ಕೃಷಿ ಕಾರ್ಮಿಕರನ್ನು ಅವರು ನೆಚ್ಚಿಕೊಂಡಿಲ್ಲ.ಮುದೇನೂರಿನಲ್ಲಿರುವ ತಮ್ಮ ಅಡಿಕೆ–ತೆಂಗಿನ ತೋಟದಲ್ಲಿ ಧಾನ್ಯ­ಗ­ಳನ್ನು ಬೆಳೆಯಲು ಅವಕಾಶವಿಲ್ಲದ ಕಾರಣ ಶಂಕರೇಗೌಡರು ಪಕ್ಕದ ಹನು­ಮ­ನ­­ಹಳ್ಳಿಯಲ್ಲಿ ಐದು ಎಕರೆ ಹೊಲ­ವನ್ನು ಗುತ್ತಿಗೆಗೆ ಪಡೆದು ನಾನಾ ಬೆಳೆ­ಗ­ಳನ್ನು ನೈಸರ್ಗಿಕ ವಿಧಾನದಲ್ಲಿ ಬೆಳೆಯು­ತ್ತಿ­­ದ್ದಾರೆ. ಮಿಶ್ರ ಬೆಳೆಗೆ ಒತ್ತು ನೀಡಿ­ದ್ದಾರೆ. ಈ ಹೊಲದಲ್ಲಿ  ಸುಮಾರು 25 ಬಗೆಯ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಇತ್ತೀಚೆಗಷ್ಟೇ ಟೊಮೆಟೊ ಕೊಯ್ಲು ಮುಗಿದಿದೆ. ಅದರ ಬೆನ್ನಲ್ಲೇ ಶೇಂಗಾ ಕೊಯ್ಲು ಆರಂಭವಾಗಿದೆ. ಇದು ಮುಗಿ­ಯು­ತ್ತಿದ್ದಂತೆಯೇ ಸಜ್ಜೆ ಅಥವಾ ನವಣೆ ಕಟಾವಿಗೆ ಸಿದ್ಧವಾಗುತ್ತದೆ. ಅದೇ ರೀತಿ ಯೋಜಿಸಿಯೇ ಶಂಕರೇಗೌಡರು ಬಿತ್ತನೆ ಮಾಡಿ­ದ್ದಾರೆ. ಇವರು ನಾಟಿ ವಿಧಾನ­ವನ್ನು ಅನುಸರಿಸುವುದಿಲ್ಲ. ಭತ್ತ, ರಾಗಿಯನ್ನೂ ಬಿತ್ತುತ್ತಾರೆ.ಈ ಹೊಲದಲ್ಲಿ ಕೊರಲೆ, ಊದಲು, ಹಾರಕ, ಎಳ್ಳು, ಮೆಕ್ಕೆಜೋಳ, ಕೆಂಪು­ಜೋಳ, ಹೆಸರು, ಬಳ್ಳಿಹೆಸರು, ಅಲ­ಸಂದೆ, ಗುರೆಳ್ಳು (ಹುಚ್ಚೆಳ್ಳು), ಔಡಲ (ಹರಳು), ತೊಗರಿ, ಹುರುಳಿ, ಬೆಂಡೆ, ಸೌತೆ, ಸಾವೆ, ಉದ್ದು, ಬಾಳೆ ಬೆಳೆ ಮಾಡಿ­­ದ್ದಾರೆ. ಇಷ್ಟಗಲ ಹೊಲದಲ್ಲಿ ಇಷ್ಟೆಲ್ಲಾ ಬೆಳೆಗಳನ್ನು ಮಾಡಲು ಸಾಧ್ಯವೇ ಎಂದು ನೋಡಿದವರು ಮೂಗಿನ ಮೇಲೆ ಬೆರಳು ಇಟ್ಟು­ಕೊಳ್ಳು­ವಂತಹ ಕೃಷಿ ವಿಧಾನ ಅವರ­ದ್ದಾ­ಗಿದೆ. ಊರಿನ ಸಮೀಪ ಅಡಿಕೆ ತೋಟವೂ ಇದೆ. ಅಲ್ಲೂ ಮಿಶ್ರ ಬೆಳೆ ಮಾಡಿ­ದ್ದಾರೆ. ಅರಿಸಿನ, ಏಲಕ್ಕಿ, ನಾನಾ ಬಗೆಯ ಹಣ್ಣು­ಗಳು, ತರಕಾರಿ ಗಿಡಗಳು, ತೆಂಗು ಕೂಡ ಅಲ್ಲಿ ನಳನಳಿಸುತ್ತಿವೆ. ಇಲ್ಲೂ ಉಳುಮೆ ಮಾಡದೇ ಸಹಜ ಕೃಷಿ ಪದ್ಧತಿಯನ್ನೇ ಅನುಸರಿಸಲಾಗಿದೆ.ಶಂಕರೇಗೌಡರು ತಂದೆ ಕಾಲ­ದಿಂದ­ಲೂ ಕೃಷಿಕರೇ. ಅವರ ಕುಟುಂಬದಲ್ಲಿ 35 ಎಕರೆ ಜಮೀನು ಇತ್ತು. ಹಿಂದೆ ಯಂತ್ರಗಳು, ಎತ್ತುಗಳ ಬಳಕೆ­ಯಾ­ಗು­ತ್ತಿತ್ತು. ಕೃಷಿ ಕಾರ್ಮಿಕರೂ ದುಡಿಯುತ್ತಿ­ದ್ದರು. ಮಾಮೂಲಿನಂತೆ ರಾಸಾಯನಿಕ ಗೊಬ್ಬರ, ಕೀಟನಾಶಕ ಎಲ್ಲವೂ ಬಳಕೆ­ಯಾಗು­ತ್ತಿತ್ತು. ದಂಡಿಯಾಗಿ ಬೆಳೆದರೂ ಸಾಲ ಮಾತ್ರ ತೀರುತ್ತಿರಲಿಲ್ಲ. ಕಿರಾಣಿ ಅಂಗಡಿ, ದಲ್ಲಾಳಿಗಳ ಅಂಗಡಿ ಸೇರಿದಂತೆ ಎಲ್ಲೆಡೆ ಉದ್ರಿ ಪಟ್ಟಿ ಇರುತ್ತಿತ್ತು. ಇಷ್ಟು ಬೆಳೆದರೂ ತೀರದ ಸಾಲದಿಂದ ಬೇಸರ­ಗೊಂಡ ಅವರು ಉಳುಮೆಯನ್ನು ತೊರೆ­ದರು. ಆಳುಗಳಿಗೂ ವಿದಾಯ ಹೇಳಿ­ದರು. ಟ್ರ್ಯಾಕ್ಟರ್‌ ಸೇರಿದಂತೆ ಎಲ್ಲ ಯಂತ್ರೋ­­­ಪ­­ಕರಣಗಳನ್ನು ತಿರಸ್ಕರಿ­ಸಿ­ದರು. ಬದುಕಿನಲ್ಲಿ ಸರಳತೆ ರೂಢಿಸಿ­ಕೊಂ­ಡರು. ವಾಹನಗಳು ಜಾಗ ಖಾಲಿ ಮಾಡಿ­­­­­­ದವು. ಆ ಜಾಗದಲ್ಲಿ ಸೈಕಲ್‌ಗಳು ಬಂದವು. ಅವರ ಅಭಿಲಾಷೆಯನ್ನೇ ಬದು­­­­ಕಿ­­­­ನಲ್ಲಿ ರೂಢಿಸಿಕೊಂಡ ಮಡದಿ, ಮಕ್ಕಳೂ ಅವರೊಂದಿಗೆ ಕೈ ಜೋಡಿಸಿ­ದ್ದ­ರಿಂದ ಕುಟುಂಬದಲ್ಲಿ ಸಂತೃಪ್ತಿ ಇದೆ. ಎಲ್ಲ­ಕ್ಕಿಂತ ಮಿಗಿಲಾಗಿ ಆರೋಗ್ಯ ಇದೆ. ಹೊಲದಲ್ಲಿ ಬೆಳೆದ ಪದಾರ್ಥ­ಗ­ಳನ್ನೇ ಅಡುಗೆಗೆ ಬಳಸುವುದರಿಂದ ಆ ಊಟದ ರುಚಿಯನ್ನುವರ್ಣಿಸಲಾಗದು.ಬೆಳೆದ ಆಹಾರ ಧಾನ್ಯಗಳು ಮನೆ ಬಳ­ಕೆಗೆ ಮಾತ್ರ. ಉತ್ಪನ್ನ ತೀರಾ ಹೆಚ್ಚಾ­ದಾಗ ಮಾರಾಟ. ಅವನ್ನು ಸುನೀತಾ ಅವರೇ ರಾಣೆಬೆನ್ನೂರಿಗೆ ಕೊಂಡೊ­ಯ್ದು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುತ್ತಾರೆ. ಯಾವುದೇ ವಸ್ತುಗಳನ್ನು ಖರೀದಿಸುವುದಿಲ್ಲ. ಬೆಳೆದ ಪದಾರ್ಥ­ಗಳನ್ನು ಉಂಡು ಸುಖವಾಗಿ­ದ್ದಾರೆ. ಬೆಳಿಗ್ಗಿನಿಂದ ಸಂಜೆಯವರೆಗೂ ಮನೆಯ ಮೂವರೂ ದುಡಿಯುತ್ತಾರೆ. ಮೂವರ ಮಾತು ಮೃದು. ನಡತೆ ಸರಳ. ಇಡೀ ಊರಿಗೆ ಆದರ್ಶವಾಗಿದೆ ಈ ಕುಟುಂಬ. ಈ ಕುಟುಂಬದ ಕೃಷಿ ಖರ್ಚು ಸಂಪೂರ್ಣ ಶೂನ್ಯ. ಬಿತ್ತನೆ ಬೀಜ ಕೂಡ ಅವರ ಹೊಲದಲ್ಲೇ ಸಿಗುತ್ತದೆ. ಗೊಬ್ಬರ ಹಾಕು­ವುದಿಲ್ಲ. ಕಳೆ ಕೀಳುವುದಿಲ್ಲ. ಉಳುಮೆ ಮಾಡುವುದಿಲ್ಲ ಎಂದ ಮೇಲೆ ಇನ್ನು ಖರ್ಚುಬಾರದು. ಅವರಿಗೆ ಬಂದ­ದ್ದೆಲ್ಲಾ ಲಾಭವೇ. ‘ರೈತರು ಮುಖ್ಯವಾಗಿ ಸರಳ ಜೀವನ ಮೈಗೂಡಿಸಿಕೊಳ್ಳಬೇಕು. ಆಗ ಹಣಕ್ಕಾಗಿ ತುಡಿತ, ಬಡಿದಾಟ ಎಲ್ಲವೂ ತಪ್ಪುತ್ತದೆ. ಜೀವನ ಸುಂದರ­ವಾಗು­ತ್ತದೆ’ ಎಂಬ ಶಂಕರೇಗೌಡರ ಮಾತು ಅರ್ಥಪೂರ್ಣ.ನೈಸರ್ಗಿಕ ಕೃಷಿ ಪದ್ಧತಿ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುವ ಕಾರ್ಯ­ದಲ್ಲೂ ಶಂಕರೇಗೌಡರು ತೊಡಗಿದ್ದಾರೆ. ಹಾಸನ ಆಕಾಶವಾಣಿ ಕೂಡ ಇವರ ಕಾರ್ಯಕ್ರಮ ಪ್ರಸಾರ ಮಾಡಿದೆ. ಧಾರವಾ­ಡದಲ್ಲೂ ನಾನಾ ಕಡೆ ಕಾರ್ಯ­ಕ್ರಮ­ಗಳಲ್ಲಿ ಭಾಗವಹಿಸಿ ತಮ್ಮ ಅನು­ಭವ ಹಂಚಿಕೊಂಡಿದ್ದಾರೆ. ಕೃಷಿ ಇಲಾಖೆ ಕರೆಯುವ ಕಾರ್ಯಕ್ರಮದಲ್ಲಿ ಭಾಗವ­ಹಿ­ಸಿ­­ದ್ದಕ್ಕೆ ನೀಡುವ ಗೌರವ ಧನ, ಖರ್ಚು–ವೆಚ್ಚ ಪಡೆಯಲೂ ಅವರಿಗೆ ಸಂಕೋಚ. ಪತ್ರಿಕೆಗಳಲ್ಲಿ ಬರುವ ಕೃಷಿ ಮಾಹಿತಿ ಆಧರಿಸಿ, ತಮ್ಮಲ್ಲಿ ಇಲ್ಲದ ಬೆಳೆಗಳ ಬಿತ್ತನೆ ಬೀಜ ತರಲು ಎಷ್ಟು ದೂರದ ಊರಿಗಾದರೂ ಹೋಗು­ತ್ತಾರೆ. ಅದೇ ರೀತಿ ತಮ್ಮಿಂದ ಯಾರಾ­ದರೂ ಬಿತ್ತನೆ ಬೀಜ ಕೇಳಲು ಬಂದರೆ ಧಾರಾಳವಾಗಿ ಕೊಡುತ್ತಾರೆ. ಒಟ್ಟಿನಲ್ಲಿ ಸತ್ವಯುತವಾದ, ಆರೋಗ್ಯಕ್ಕೆ ಪೂರಕ­ವಾದ ಸಿರಿಧಾನ್ಯ ಉಳಿಯಬೇಕು ಎಂಬುದು ಅವರ ಇಚ್ಛೆ.ನಾಲ್ಕೈದು ಎಕರೆ ಜಮೀನು ಇದ್ದರೂ ಇದರಲ್ಲಿನ ದುಡಿಮೆ ಜೀವನಕ್ಕೆ ಸಾಲದು ಎಂದು ಪಟ್ಟಣಗಳಿಗೆ ಕೂಲಿ ಅರಸಿ ಹೋಗುವವರ ಸಂಖ್ಯೆ ವಿಪರೀತವಾಗಿದೆ. ಪಟ್ಟಣಗಳಲ್ಲಿ ದುಡಿಯಲು ಹೋಗು­ವು­ದನ್ನು ಬಿಟ್ಟು ಸಣ್ಣ–ಪುಟ್ಟ ರೈತರು ತಮ್ಮ ಜಮೀನಿನಲ್ಲಿ ಇತ್ತೀಚೆಗೆ ‘ಶ್ರೀಮಂತರ ಧಾನ್ಯ’ ಎಂದು ಕರೆಸಿಕೊಳ್ಳುತ್ತಿರುವ ಸಿರಿ ಧಾನ್ಯಗಳನ್ನು ಬೆಳೆದು ಅವುಗಳ ಮೌಲ್ಯ­ವ­ರ್ಧನೆ ಮಾಡಿ ಮಾರಾಟ ಮಾಡಿದರೆ ನೆಮ್ಮ­ದಿಯ ಜೀವನ ಸಾಗಿಸಬಹುದು. ಈ ಬೆಳೆಗಳು ಹೆಚ್ಚು ನೀರನ್ನು ಬೇಡು­ವು­ದಿಲ್ಲ. ಬರಗಾಲದಲ್ಲಿ ಬೆಳೆಯುವುದ­ಕ್ಕೆಂದೇ ಭತ್ತದ ತಳಿ ಇದೆ. ಈ ಧಾನ್ಯಗಳಿಗೆ ಹುಳು ಹತ್ತುವುದಿಲ್ಲ. ವರ್ಷಗಟ್ಟಲೆ ಇಟ್ಟು­­ಕೊಳ್ಳಬಹುದು. ಮಾರಾಟ ಮಾಡ­ದಿದ್ದರೂ ಮನೆಯವರೇ ಊಟಕ್ಕೆ ಬಳಸಿ, ಆರೋಗ್ಯವಂತರಾಗಿರಬಹುದು. ಆದರೆ ಜಮೀನಿನಲ್ಲಿ ಮೈಬಗ್ಗಿಸಿ ದುಡಿ­ಯು­ವುದಕ್ಕಿಂತ ಪಟ್ಟಣಗಳಲ್ಲಿ ಸಿಗುವ ಬಿಡಿಗಾಸೇ ನಾನಾ ಕಾರಣಗಳಿಗೆ ಅವರಿಗೆ ಹೆಚ್ಚು ಆಕರ್ಷಣೀಯವಾಗಿದೆ! ಹಾಗಾಗಿ ಜಮೀನು ಇದ್ದರೂ ಕೂಲಿಗೆ ಪಟ್ಟಣಕ್ಕೆ ಹೋಗುವ ಚಾಳಿ ಹೆಚ್ಚಾಗುತ್ತಿದೆ. ಇದನ್ನು ತೊರೆದು ಬೆಂಗಾಡಿನಲ್ಲೂ ಬೆಳೆ­ಯುವ ಸಿರಿಧಾನ್ಯ ಬೆಳೆದು ಸುಖ ಜೀವನ ಸಾಗಿಸುವತ್ತ ರೈತರು ಯೋಚಿಸಲಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.