ಗುರುವಾರ , ಮೇ 19, 2022
23 °C

ಕನ್ನಡದ ಕೆಲಸವನ್ನು ಹೀಗೂ ಮಾಡಬಹುದು...

ಪದ್ಮರಾಜ ದಂಡಾವತಿ Updated:

ಅಕ್ಷರ ಗಾತ್ರ : | |

ಕನ್ನಡದ ಕೆಲಸವನ್ನು ಹೀಗೂ ಮಾಡಬಹುದು...

ಆ ಇಬ್ಬರೂ ಶಿಕ್ಷಕರು ನನ್ನ ಮುಂದೆ  ಹಲವು ಪುಸ್ತಕ, ಕಡತ, ಆಲ್ಬಂಗಳನ್ನು ಇಟ್ಟುಕೊಂಡು ಕುಳಿತಿದ್ದರು. ನಾನು ಕೆಲವು ತಿಂಗಳ ಹಿಂದೆ ಹೊಸ ಹುಡುಗ-ಹುಡುಗಿಯರಿಗೆ ಓದುವ, ಬರೆಯುವ ಹವ್ಯಾಸ ಕಡಿಮೆ ಆಗಿರುವ ಕುರಿತು ಅಂಕಣ ಬರೆದುದಕ್ಕೆ ಅವರು ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಂತೆ ಇತ್ತು. ಅವರೇನು ಶಿಕ್ಷಣ ಕ್ಷೇತ್ರಕ್ಕೆ ಹೆಸರಾದ ಬೆಂಗಳೂರು, ಮಂಗಳೂರು, ಮೈಸೂರು, ಧಾರವಾಡದ ಶಿಕ್ಷಕರಲ್ಲ. ಕರ್ನಾಟಕದ ಗಡಿಜಿಲ್ಲೆಯಲ್ಲಿ ಇರುವ ಹಾಳು ಕೊಂಪೆಯಂಥ ಒಂದು ಊರಿನ ಶಿಕ್ಷಕರು. ಒಬ್ಬ ಶಿಕ್ಷಕ ಕಳೆದ 20 ವರ್ಷಗಳಿಂದ ಹೊಸ ಬಗೆಯ ಶಿಕ್ಷಣದ ಕೈಂಕರ್ಯವನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡಿದ್ದರೆ ಇನ್ನೊಬ್ಬರು ಕಳೆದ 10 ವರ್ಷಗಳಿಂದ ಭಿನ್ನ ಬಗೆಯ ಶಿಕ್ಷಕ ವೃತ್ತಿ ನಡೆಸಿಕೊಂಡು ಬರುತ್ತಿದ್ದಾರೆ. ಅವರಿಬ್ಬರೂ ಕೋಲಾರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕು ಕನ್ನಮಂಗಲ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು. ಅವರಲ್ಲಿ ಹಿರಿಯ ಶಿಕ್ಷಕರ ಹೆಸರು ಎಂ.ದೇವರಾಜ್, ಕಿರಿಯ ಶಿಕ್ಷಕರ ಹೆಸರು ಎಸ್.ಕಲಾಧರ. ದೇವರಾಜ್ ಅವರಿಗೆ ಈಗ ಪಕ್ಕದ ಊರಿಗೆ ವರ್ಗವಾಗಿದೆ.ಎಲ್ಲರ ಹಾಗೆ ಇವರೂ ಟಿಸಿಎಚ್ ಮಾಡಿ ಶಿಕ್ಷಕ ವೃತ್ತಿ ಆರಿಸಿಕೊಂಡವರು. ಆದರೆ, ಟಿಸಿಎಚ್‌ನಲ್ಲಿ ತಾವು ಕಲಿತುದಕ್ಕೂ `ಕಲಿಸುವಿಕೆ~ಗೂ ಏನೇನೂ ಸಂಬಂಧವಿಲ್ಲ ಎಂದು ಶಾಲೆಯಲ್ಲಿ ಕೆಲಸ ಪ್ರಾರಂಭಿಸಿದ ಕೆಲವೇ ದಿನಗಳಲ್ಲಿ ಗೊತ್ತಾಯಿತು. ಈಗಿನ ವ್ಯವಸ್ಥೆಯಲ್ಲಿ ಒಳ್ಳೆಯ ವಿದ್ಯಾರ್ಥಿ ಎಂದರೆ ಚೆನ್ನಾಗಿ ಪಾಠ ಕೇಳುವುದು, ಕಲಿಯುವುದು, ಉತ್ತರಗಳನ್ನು ಕಂಠಪಾಠ ಮಾಡುವುದು, ಕೊಟ್ಟ ಹೋಮ್‌ವರ್ಕ್‌ನ್ನು ಅಮ್ಮ ಅಥವಾ ಅಪ್ಪನ ಕಡೆಯಿಂದಲಾದರೂ ಮಾಡಿಸಿಕೊಂಡು ಬರುವುದು ಮತ್ತು ಪರೀಕ್ಷೆಯಲ್ಲಿ ಚೆನ್ನಾಗಿ ಅಂಕ ಗಳಿಸುವುದು. ಶಿಕ್ಷಕರೂ ಹಾಗೆಯೇ ಅಂದುಕೊಂಡಿದ್ದಾರೆ; ತಂದೆ ತಾಯಿಯರ ಅಭಿಪ್ರಾಯವೂ ಅದೇ. ಶೇ 90ಕ್ಕಿಂತ ಕಡಿಮೆ ಅಂಕ ಗಳಿಸುವ ವಿದ್ಯಾರ್ಥಿ ನಾಲಾಯಕ್ ಎಂದೇ ಇಬ್ಬರದೂ ಭಾವನೆ. ಒಟ್ಟು ವಿದ್ಯಾರ್ಥಿ ಜೀವನದಲ್ಲಿ ಆತನಿಗೆ ಅಭಿವ್ಯಕ್ತಿಗೆ ದಾರಿಯೇ ಇಲ್ಲ. ಅಪ್ಪಿ ತಪ್ಪಿ ಒಬ್ಬ ವಿದ್ಯಾರ್ಥಿ ಬಾಯಿ ಬಿಟ್ಟರೆ  ಆತನ ತಲೆ ಬಡಿದು ಕೂಡ್ರಿಸುವ ಶಿಕ್ಷಕರೇ ಹೆಚ್ಚು. ಪ್ರಶ್ನೆ ಕೇಳುವವರನ್ನು ಯಾರೂ ಇಷ್ಟ ಪಡುವುದಿಲ್ಲ. `ನಿನಗೇನು ಗೊತ್ತು ಹೇಳಿದಷ್ಟನ್ನು ಮಾಡಿಕೊಂಡು ಬಾ~ ಎನ್ನುವವರೇ ಎಲ್ಲರೂ.ಕಲಾಧರ್‌ಗೆ ಇದರಲ್ಲಿ ಏನೋ ಐಬಿದೆ ಎನಿಸತೊಡಗಿತು. ದೊಡ್ಡ ದೊಡ್ಡ ಪದವಿ ಪಡೆದವರು ಕೂಡ ವೇದಿಕೆಯ ಮೇಲೆ ನಿಂತು ಮಾತನಾಡುವಾಗ ಥರ ಥರ ನಡುಗುತ್ತಾರೆ. ತನಗೆ ಅನಿಸಿದ್ದನ್ನು ನಾಲ್ಕು ವಾಕ್ಯಗಳಲ್ಲಿ ಬರೆದು ಕೊಡು ಎಂದರೆ ತಡವರಿಸುತ್ತಾರೆ. ಇದು ಪ್ರಾಥಮಿಕ ಮತ್ತು ಪ್ರೌಢ ಹಂತದಲ್ಲಿ ಅಭಿವ್ಯಕ್ತಿಗೆ ಅವಕಾಶವೇ ಇಲ್ಲದ ಶಿಕ್ಷಣ ಕ್ರಮದ ಫಲ ಎಂದು ಅವರಿಗೆ ಭಾಸವಾಗತೊಡಗಿತು. ಶಾಲೆಯಲ್ಲಿ ಗಮನವಿಟ್ಟು ಕಲಿಯದ, ಹೋಮ್ ವರ್ಕ್ ಮಾಡಿಕೊಂಡು ಬರದ, ಪರೀಕ್ಷೆಯಲ್ಲಿ ಸಾಕಷ್ಟು ಅಂಕ ಗಳಿಸದ ವಿದ್ಯಾರ್ಥಿಗೂ ಸಂವೇದನೆಗಳಿವೆ, ಕಾರಣಗಳಿವೆ, ಕತೆಗಳಿವೆ, ಹಾಡುಗಳಿವೆ, ಚಿತ್ರಗಳಿವೆ, ಎದೆಯಾಳದಲ್ಲಿ ಹೊರಹೊಮ್ಮಲಾಗದೆ ಉಳಿದ ನೂರು ಮಾತುಗಳಿವೆ ಎಂದು ಅರ್ಥ ಮಾಡಿಕೊಂಡರು. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಶಾಲೆಯ ಮಕ್ಕಳಿಗೆ ಏನಾದರೂ ಬರೆಯಿರಿ ಎಂದರು.

ಅದಕ್ಕೆ ಒಂದು ವೇದಿಕೆ ನಿರ್ಮಿಸಿದರು. `ನವಿಲ ಗರಿ~ ಎಂಬ  ತಿಂಗಳ ಪತ್ರಿಕೆ ಹುಟ್ಟು ಹಾಕಿದರು. ಪತ್ರಿಕೆಯ ಪ್ರಕಟಣೆಗೆ ತಾವೇ ಶಿಕ್ಷಕರೆಲ್ಲ ಸೇರಿ ದುಡ್ಡು ಹಾಕಿದರು. ಶಾಲೆಯ ಪಾಟಿಚೀಲದ ಭಾರದಡಿಯಲ್ಲಿ ಮೂಕವಾಗಿದ್ದ ಮಕ್ಕಳು ಮಾತನಾಡಿದ್ದು `ನವಿಲ ಗರಿ~ಯ ಮೂಲಕ. ಆರಂಭದಲ್ಲಿ ಮಕ್ಕಳು ಶಾಲೆಯ ಪಠ್ಯಪುಸ್ತಕದಲ್ಲಿ ಇದ್ದ ವಸ್ತುಗಳನ್ನೇ ಆರಿಸಿಕೊಂಡು ಬರೆದರು. ಭಾರತ ದೇಶ, ಕನ್ನಡ, ಪರಿಸರ... ಎಂದು ಗೋಳುಗಳನ್ನು ತೋಡಿಕೊಂಡರು. ಅದರ ಆಚೆ ಅವರ ಚಿಂತನೆ ಹರಿದಿರಲಿಲ್ಲ. ಕಲಾಧರ್ ಮಕ್ಕಳಿಗೆ ಹೇಳಿದರು: `ಭಾರತದ ಬಗ್ಗೆ ಬರೆಯಲು ಬೇಕಾದಷ್ಟು ಜನರು ಇದ್ದಾರೆ ಕಣ್ರಯ್ಯ, ನಿಮ್ಮ ಬಚ್ಚಲು ಮನೆಯ ಬಗ್ಗೆ ಬರೆಯಿರಿ, ಒಲೆ ಉರಿಸಲು ನಿಮ್ಮಮ್ಮ ಪಡುವ ಕಷ್ಟದ ಬಗ್ಗೆ ಬರೆಯಿರಿ, ಹೊಲದಲ್ಲಿ ಉಳುವ ನಿಮ್ಮ ತಂದೆಯ ಬಗ್ಗೆ ಬರೆಯಿರಿ. ನಿಮ್ಮ ಗದ್ದೆಯಲ್ಲಿ ತೊನೆಯುವ ಬತ್ತದ ಬಗ್ಗೆ ಬರೆಯಿರಿ, ರಾಗಿಯ ಬಗ್ಗೆ ಬರೆಯಿರಿ...~ `ಹೌದೇ? ಅದನ್ನೆಲ್ಲ ಬರೆಯಬಹುದೇ~ ಎಂದುಕೊಂಡು ಮಕ್ಕಳು ಹೊಸ ಉಮೇದಿಗೆ ಒಳಗಾದರು. ಅವರ ಭಾವ ಜಗತ್ತೇ ಬದಲಾಯಿತು. ತಮ್ಮ ಪರಿಸರದಲ್ಲಿ ಕಂಡುದರ ಬಗ್ಗೆ ಅವರು ಬರೆಯತೊಡಗಿದರು. ತಮ್ಮ ಕಷ್ಟ ಸುಖಗಳ ಬಗ್ಗೆ ಬರೆದರು. ಮಳೆಯ ಬಗ್ಗೆ ಬರೆದರು, ಗಾಳಿಯ ಬಗ್ಗೆ ಬರೆದರು.ಹಕ್ಕಿ, ನಕ್ಷತ್ರಗಳ ಬಗ್ಗೆ ಬರೆದರು... ಹಾಗೆಂದು ಎಲ್ಲವೂ ಅದ್ಭುತವಾಗಿತ್ತು ಎಂದು ಅಲ್ಲ.  ಹಳ್ಳಿಯ ಮಗುವಿನ ತೊದಲು, ಕಾಗುಣಿತ ದೋಷ ಎಲ್ಲವೂ ಅದರಲ್ಲಿ ಇತ್ತು. ಅದನ್ನು ಗುರುಗಳು ತಿದ್ದಿ ಬರೆಯುವಂತೆ ಬೆನ್ನು ತಟ್ಟಿದರು. ಮಕ್ಕಳು ಮತ್ತೆ ಬರೆದರು. ಈಗಲೂ ಬರೆಯುತ್ತಲೇ ಇದ್ದಾರೆ. ಆರು ವರ್ಷಗಳ ಕಾಲ ಸತತವಾಗಿ `ನವಿಲ ಗರಿ~ ಪ್ರಕಟವಾಯಿತು.ಕಳೆದ ವರ್ಷ 100 ಪುಟದ `ಶಾಮಂತಿ~  ಎಂಬ ಒಂದು ವಿಶೇಷಾಂಕವನ್ನೇ ಮಕ್ಕಳು ಹೊರತಂದರು. `ಶಾಮಂತಿ~ ಎಂದರೆ ಸೇವಂತಿಗೆ ಎಂದು ಅರ್ಥ. ಮಕ್ಕಳೇ ಈ ಪುಸ್ತಕಕ್ಕೆ ಈ ಹೆಸರನ್ನೂ ಕೊಟ್ಟವರು. ಅದರಲ್ಲಿ ಲೇಖನಗಳನ್ನೂ ಅವರೇ ಬರೆದರು. ಅದಕ್ಕೆ ತಕ್ಕ ಚಿತ್ರಗಳನ್ನೂ ಅವರೇ ಬಿಡಿಸಿದರು. ಆ ಪುಸ್ತಕಕ್ಕೆ `ಆದಿಮ~ದ ಕೋಟಗಾನಹಳ್ಳಿ ರಾಮಯ್ಯ ಪ್ರೀತಿಯಿಂದ ಮುನ್ನುಡಿ ಬರೆದರು.ಕಲಾಧರ್ ಒಂದು ಕಡೆ ಹೀಗೆ ಮಕ್ಕಳಿಗೆ ಅಭಿವ್ಯಕ್ತಿಯ ದಾರಿಗಳನ್ನು ತೋರಿಸುತ್ತಿದ್ದರೆ ಇತ್ತ ಎಂ.ದೇವರಾಜ್ ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬೆಳೆಸುವ ಕೆಲಸ ಮಾಡಿದರು. ಕನ್ನಮಂಗಲಕ್ಕೆ ಪತ್ರಿಕೆಗಳು ಬರುವುದಿಲ್ಲ. ತಮ್ಮ ಮನೆಗೆ ತರಿಸುವ `ಪ್ರಜಾವಾಣಿ~ ಪತ್ರಿಕೆಯನ್ನೇ ಶಾಲೆಗೆ ತೆಗೆದುಕೊಂಡು ಹೋಗಿ ಮಕ್ಕಳಿಗೆ ಓದಲು ಕೊಡುತ್ತಾರೆ.ಮುಖಪುಟದ ಮುಖ್ಯಸುದ್ದಿಗಳು ಮಾತ್ರವಲ್ಲದೇ ಅಂಕಣಗಳು, ಸುಭಾಷಿತ, ಕರುಣಾಳು ಬಾ ಬೆಳಕೆ,  ಸಾಪ್ತಾಹಿಕ ಪುರವಣಿಯಲ್ಲಿನ ಮಕ್ಕಳ ಪುಟ, ಕರ್ನಾಟಕ ದರ್ಶನ, ಕ್ರೀಡೆ, ಶಿಕ್ಷಣ ಪುರವಣಿಯ ಲೇಖನಗಳನ್ನೆಲ್ಲ ಕತ್ತರಿಸಿ ಒಂದು ಆಲ್ಬಂ ತಯಾರಿಸಿ ಆಗಾಗ ಆ ಲೇಖನಗಳನ್ನು ಓದಲು ಕೊಡುತ್ತಾರೆ. ಕನ್ನಮಂಗಲದ ಮಕ್ಕಳಿಗೆ ಮೈಸೂರು ದಸರಾ ಹೇಗಿರುತ್ತದೆ ಎಂದೂ ಗೊತ್ತಿರಲಿಲ್ಲ. `ಪ್ರಜಾವಾಣಿ~ಯಲ್ಲಿ ಬಂದ ಚಿತ್ರ ಸಹಿತ ಸುದ್ದಿಯನ್ನೇ ನೋಡಿ ತಿಳಿದುಕೊಂಡರು. ಹೊರಗಿನ ಜಗತ್ತಿಗೆ ತೆರೆದುಕೊಳ್ಳುವ ದಾರಿ ಇದು.ಒಬ್ಬ ವಿದ್ಯಾರ್ಥಿ ಏಳು ವರ್ಷಗಳ ಕಾಲ ಕನ್ನಮಂಗಲ ಶಾಲೆಯಲ್ಲಿ ಕಲಿತು ಪ್ರೌಢ ಶಿಕ್ಷಣಕ್ಕೆ ಬೇರೆ ಶಾಲೆಗೆ ಹೋಗುವಾಗ ಆತನಿಗೆ ಈ ಶಾಲೆಯ ಶಿಕ್ಷಕರೆಲ್ಲ ಸೇರಿ ಬರೆದ ಒಂದು ಪತ್ರವನ್ನು  ಕೊಡುತ್ತಾರೆ. ಆರು ಪುಟಗಳ ಕೈ ಬರಹದ ಈ ಪತ್ರದಲ್ಲಿ ಆ ವಿದ್ಯಾರ್ಥಿ ಭವಿಷ್ಯದಲ್ಲಿ  ಸಾಗಬೇಕಾದ ದಾರಿಯ ಕೈಮರ ಇರುತ್ತದೆ... “ಮುಂದಿನ ಶಾಲೆಯಲ್ಲಿ, ಕಾಲೇಜಿನಲ್ಲಿ ಓದುವ ಕಡೆ ನಿನ್ನ ಗಮನವಿರಲಿ. ಹಾಗೆಂದು ಬರೀ ಓದುವ ಹುಳುವೂ ಆಗದೇ ನಿನ್ನ ವ್ಯಕ್ತಿತ್ವವನ್ನು ರೂಪಿಸಿಕೋ. ಏಕೆಂದರೆ ಶಿಕ್ಷಣ ಎನ್ನುವುದು ಬರೀ ಅಂಕಗಳಿಗೆ ಸಂಬಂಧಿಸಿದ್ದಲ್ಲ.

 

ಅದು ನಿನ್ನ ಇಡೀ ವ್ಯಕ್ತಿತ್ವಕ್ಕೆ ಸಂಬಂಧಿಸಿದ್ದು. ನಿನ್ನ ಯೋಚನೆ, ಚಿಂತನೆ, ಮಾತು, ಕೆಲಸ, ಮೌನ, ಸಂಬಂಧ, ಸಹವಾಸ, ಅಭ್ಯಾಸ, ಹವ್ಯಾಸ ಇವೆಲ್ಲವೂ ಶಿಕ್ಷಣದ ಪ್ರತಿಫಲ. ಹೀಗೆ ನೀನು ತಯಾರಾದರೆ ಮಾತ್ರ ನೀನು ಹುಟ್ಟಿದ ಈ ದೇಶಕ್ಕೆ ನಿನ್ನಿಂದ ಏನಾದರೂ ಉಪಯೋಗವಾಗಲು ಸಾಧ್ಯ...ನಮ್ಮ ಯಾರ ಜೀವನಗಳೂ ಬರಿಯ ನಮ್ಮ ಜೀವನಗಳಲ್ಲ. ನಮ್ಮ ವೈಯಕ್ತಿಕ ಕಷ್ಟ-ಸುಖಗಳ ಜತೆಗೆ ಸಮಾಜದಿಂದಲೂ ನಾವು ಬಹಳಷ್ಟು ತೆಗೆದುಕೊಂಡಿರುತ್ತೇವೆ. ಆ ಋಣವನ್ನು ನೀನು ಸಮಾಜಕ್ಕೆ ತೀರಿಸಬೇಕು ಅಲ್ಲವೇ? ವರ್ಷಗಳ ಸಹವಾಸದಲ್ಲಿ ನಾವು ನಿನ್ನ ಮೇಲೆ ಹೂಡಿರುವ ಸಮಯದ ಬಂಡವಾಳ, ಸಮಾಜ ಹೂಡಿರುವ ದುಡ್ಡಿನ ಬಂಡವಾಳ ಇವೆಲ್ಲ ವ್ಯರ್ಥವಾಗಬಾರದು ಎಂದೇ ನಮ್ಮ ಆಸೆ...” ಪತ್ರ ಹೀಗೆಯೇ ಸಾಗುತ್ತದೆ. ಕನ್ನಮಂಗಲ ಶಾಲೆಯಿಂದ ಹೊರ ಹೋಗುವ ವಿದ್ಯಾರ್ಥಿ ಮುಂದೆ ತನ್ನ ಜೀವನದಲ್ಲಿ ಜವಾಬ್ದಾರಿಯ ಪ್ರಜೆಯಾಗಲಿ ಎಂದು ಬಯಸುತ್ತದೆ...ಈಗ ಆ ಶಾಲೆಯಲ್ಲಿ ಏನೇ ಕಾರ್ಯಕ್ರಮ ನಡೆಯಲಿ ಮಕ್ಕಳೇ ಸ್ವಾಗತಿಸುತ್ತಾರೆ. ಅವರೇ ಅತಿಥಿಗಳನ್ನು ಪರಿಚಯಿಸುತ್ತಾರೆ. ಕಾರ್ಯಕ್ರಮ ಎಷ್ಟೇ ದೊಡ್ಡದಿರಲಿ, ಅಧ್ಯಕ್ಷತೆ ಒಬ್ಬ ಮಗುವಿನದೇ ಆಗಿರುತ್ತದೆ. ಆತನೇ ಅಧ್ಯಕ್ಷ ಭಾಷಣವನ್ನೂ ಮಾಡುತ್ತಾನೆ. ಅಥವಾ ಮಾಡುತ್ತಾಳೆ. ಶಾಲೆಯ ಮುಖ್ಯೋಪಾಧ್ಯಾಯರು ಪಕ್ಕದ ಕುರ್ಚಿಯಲ್ಲಿ ಕುಳಿತುಕೊಂಡಿರುತ್ತಾರೆ ಅಷ್ಟೇ. ಕಲಾಧರ್ ಮತ್ತು ದೇವರಾಜ್ ಅವರ ಅದೃಷ್ಟ ಎಂದರೆ ಅವರ ಜತೆಗೆ ಕೆಲಸ ಮಾಡುವ ಶಾಲೆಯ ಇತರ ಎಲ್ಲ ಶಿಕ್ಷಕರು, ಶಿಡ್ಲಘಟ್ಟ, ಕೋಲಾರಗಳಲ್ಲಿ ಇರುವ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಇವರ ಬೆನ್ನು ತಟ್ಟಿದರು. ಕನ್ನಮಂಗಲ ಊರಿನ ಜನ ಇವರ ಬೆನ್ನಿಗೆ ನಿಂತರು. ಊರಿನ ಯುವಕರೆಲ್ಲ ಸೇರಿಕೊಂಡು ಕಟ್ಟಿರುವ ಸ್ನೇಹ ಯುವಕರ ಸಂಘ ತನು ಮನ ಧನದ ಸಹಾಯ ಮಾಡಿತು.ಕಲಾಧರ್ ಮತ್ತು ದೇವರಾಜ್ ಅವರಿಬ್ಬರೂ ಪ್ರಾಥಮಿಕ ಹಂತದ ಕಲಿಕೆಗೆ ಒಂದು ಹೊಸ ಭಾಷ್ಯವನ್ನೇ ಬರೆಯುತ್ತಿದ್ದಾರೆ ಎಂದು ಅನಿಸುತ್ತದೆ. ಶಿಕ್ಷಣ ಇಲಾಖೆಯು ಶಿಕ್ಷಕರ ಕಲಿಸುವ ಸಾಮರ್ಥ್ಯವನ್ನು ಉತ್ತಮ ಪಡಿಸಲು ಹತ್ತು ಹಲವು ಬಗೆಯ ತರಬೇತಿಗಳನ್ನು ಕೊಡುತ್ತಿದೆ. ದುರಂತ ಎಂದರೆ ಶಿಕ್ಷಕರಿಗೆ ಅದು ಇನ್ನೊಂದು ಹೊರೆ ಅನಿಸುತ್ತದೆ. ಜೀವನದ ಅನುಭವಗಳ ಮೂಸೆಯಿಂದ ಹೊರತೆಗೆದ ಇಂಥ ಪ್ರಯೋಗಗಳು ಮಕ್ಕಳ ಮನಸ್ಸಿನಲ್ಲಿ ಹೊಸ ಆತ್ಮವಿಶ್ವಾಸವನ್ನು ಮೂಡಿಸುವಂಥವು.ಹಳ್ಳಿಯಲ್ಲಿ ಓದುವ ಮಕ್ಕಳಲ್ಲಿ ಇರುವ ದೊಡ್ಡ ಕೊರತೆ ಅದು. ಕಲಾಧರ್ ಮತ್ತು ದೇವರಾಜ್ ಅವರ ಕಲಿಕೆಯ ಈ ಪ್ರಯೋಗಗಳು ಕನ್ನಡದ ಮನಸ್ಸುಗಳನ್ನು ಅರಳಿಸುವಲ್ಲಿ ಬಹುಮುಖ್ಯ ಎಂದು ನನಗೆ ಅನಿಸಿತು. ಹಳ್ಳಿಗಳ ಶಾಲೆಗಳಲ್ಲಿ ಮಕ್ಕಳು ಕಡಿಮೆ ಎಂದು ಅವುಗಳನ್ನು ಮುಚ್ಚುತ್ತಿರುವ, ಚಿಕ್ಕ ಪುಟ್ಟ ಊರುಗಳಲ್ಲಿಯೂ ಕಾನ್ವೆಂಟ್‌ಗಳು ತಲೆ ಎತ್ತುತ್ತಿರುವ ಈ ಸಂದರ್ಭದಲ್ಲಿ ಕನ್ನಮಂಗಲದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆಯುತ್ತಿರುವ ಇಂಥ ಪ್ರಯೋಗಗಳು ನಮ್ಮ ಮಕ್ಕಳನ್ನು ಮತ್ತೆ ಮಾತೃಭಾಷೆ ಶಿಕ್ಷಣದ ಕಡೆಗೆ ಸೆಳೆಯುವಂತೆ ಆಗಬೇಕು. ರಾಜ್ಯೋತ್ಸವ ಹೊಸ್ತಿಲಲ್ಲಿ ಇರುವ ಈ ಸಂದರ್ಭದಲ್ಲಿ ಕಲಾಧರ್ ಮತ್ತು ದೇವರಾಜ್ ಅವರಂಥ ಎಲೆ ಮರೆಯ ಶಿಕ್ಷಕರನ್ನು  ಈ ಕಾರಣಕ್ಕಾಗಿಯೇ ನೆನಪಿಸಿಕೊಳ್ಳಬೇಕು ಎಂದೂ ಅನಿಸಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.