ಭಾನುವಾರ, ಮಾರ್ಚ್ 29, 2020
19 °C

ಕಾಂಗ್ರೆಸ್‌ನ ದರ್ಬಾರಿಗಳು

ಶೇಖರ್‌ ಗುಪ್ತ Updated:

ಅಕ್ಷರ ಗಾತ್ರ : | |

ಕಾಂಗ್ರೆಸ್‌ ಪಕ್ಷವು ಅವಸಾನದ ಅಂಚಿನಲ್ಲಿ ಇದೆ ಅಥವಾ ಈಗಾಗಲೇ  ಅದರ ಕತೆ ಮುಗಿದಿದೆ ಎನ್ನುವ ಅಭಿಪ್ರಾಯ ವ್ಯಾಪಕವಾಗಿ ಕೇಳಿ ಬರುತ್ತಿದೆ. ದೇಶದ ಅತ್ಯಂತ ಹಳೆಯ ರಾಜಕೀಯ ಪಕ್ಷವೊಂದರ ಬಗ್ಗೆ ಇಂತಹ ಅಂತಿಮ ತೀರ್ಮಾನಕ್ಕೆ ಬರದೆ, ಕಾಂಗ್ರೆಸ್‌ ಪಕ್ಷ ಈಗ ಎರಡು ಹೋಳಾಗಿದೆ ಎಂದು ಮಾತ್ರ ಹೇಳಬಹುದು.ಎರಡೂ ಬಣಗಳ ನಡುವೆ ಅಧಿಕಾರಕ್ಕಾಗಿ ಸಮರ ತಾರಕಕ್ಕೆ ಏರಿದೆ. ಈ ಕಲಹ ಪಕ್ಷವನ್ನು ಪುನಶ್ಚೇತನಗೊಳಿಸುವುದೇ, ಅದರ ಅಂತ್ಯಕ್ಕೆ ಕಾರಣವಾಗುವುದೇ ಅಥವಾ ಇದರಿಂದ ಪಕ್ಷವು ತನ್ನಷ್ಟಕ್ಕೆ ತಾನೆ ಸೋಲಿನ ಪ್ರಪಾತದಿಂದ ಮೇಲೆದ್ದು ಬರುವುದೇ ಎನ್ನುವುದನ್ನು ಕಾದು ನೋಡಬೇಕಾಗಿದೆ.

ಕಾಂಗ್ರೆಸ್‌ನ ಒಂದು ಬಣವನ್ನು ನಾವು ಬಹುತೇಕ ಸಮಯದಲ್ಲಿ ಕಾಣುತ್ತೇವೆ.ಸುದ್ದಿ ವಾಹಿನಿಗಳಲ್ಲಿ, ಪತ್ರಿಕೆಯ ಅಂಕಣ ಬರಹಗಳಲ್ಲಿ, ನವದೆಹಲಿಯ ಲೋಧಿ ಉದ್ಯಾನ, ಭಾರತ ಅಂತರರಾಷ್ಟ್ರೀಯ ಕೇಂದ್ರ (ಐಐಸಿ) ಮತ್ತಿತರ ಪ್ರಮುಖ ತಾಣಗಳಲ್ಲಿ ಪಕ್ಷದ ಅಸ್ತಿತ್ವದ ಕುರುಹು ಕಾಣಸಿಗುತ್ತದೆ. ಈ ಪ್ರಮುಖ ಬಣದ ಬಹುತೇಕ ಸದಸ್ಯರು ರಾಜ್ಯಸಭಾ ಸದಸ್ಯತ್ವ ಗಿಟ್ಟಿಸಿಕೊಳ್ಳುವಲ್ಲಿ ಸಫಲರಾಗಿರುತ್ತಾರೆ.ಸತತ ಮೂರು ಅಥವಾ  ನಾಲ್ಕನೆ ಬಾರಿಗೂ ರಾಜ್ಯಸಭೆಗೆ ಆರಿಸಿ ಬಂದಿರುವ ಈ ಮುಖಂಡರು ಪಕ್ಷದ ಆಯಕಟ್ಟಿನ ಸ್ಥಳಗಳಲ್ಲಿ ಬೀಡು ಬಿಟ್ಟಿದ್ದು, ಹೆಚ್ಚು ಪ್ರಭಾವಶಾಲಿಗಳಾಗಿದ್ದಾರೆ. ಇವರಲ್ಲಿ ಬಹುಸಂಖ್ಯಾತರು ಇದುವರೆಗೂ ಒಂದೇ ಒಂದು ಚುನಾವಣೆಯನ್ನು ನೇರ ಎದುರಿಸಿ ಗೆದ್ದು ಬಂದಿಲ್ಲ.ಪಕ್ಷದ ಕಾರ್ಯಕಾರಿ ಸಮಿತಿಯೂ ಸೇರಿದಂತೆ ನಿರ್ಧಾರ ಕೈಗೊಳ್ಳುವ ಸಮಿತಿಗಳಲ್ಲಿ ಈ ರಾಜ್ಯಸಭಾ ಸದಸ್ಯರು ಹೆಚ್ಚು ಪ್ರಭಾವಿಗಳಾಗಿ ಮೆರೆಯುತ್ತಿದ್ದಾರೆ. ಪಕ್ಷದ ಎರಡು ದರ್ಬಾರ್‌ಗಳಲ್ಲಿ ಇವರದ್ದೇ ಪಾರುಪತ್ಯ. ತುಘಲಕ್‌ ರಸ್ತೆಯಲ್ಲಿನ ಪುಟ್ಟ ದರ್ಬಾರ್‌ ಮತ್ತು ಜನಪಥ್‌ದಲ್ಲಿನ ದೊಡ್ಡ ದರ್ಬಾರ್‌ನಲ್ಲಿ ಇವರ ಮಾತಿಗೆ ಹೆಚ್ಚು ಬೆಲೆ ಇದೆ.ಇತ್ತೀಚಿನ ದಿನಗಳಲ್ಲಿ ವ್ಯಕ್ತಿಯ ಆಂಗಿಕ ಅಭಿನಯವನ್ನು ಹೆಚ್ಚು ವಿಮರ್ಶಿಸಲಾಗುತ್ತಿದೆ.  ಈ ಎರಡೂ ದರ್ಬಾರ್‌ಗಳಲ್ಲಿ ಓಡಾಡುವ ನಾಯಕ ಗಣದ ವರ್ತನೆ ಬಗ್ಗೆ ಸುದ್ದಿ ವಾಹಿನಿಗಳ ಸಿಬ್ಬಂದಿಗೆ ಕೇಳಿದರೆ ಅವರ ಅಟಾಟೋಪದ ಮತ್ತು ಅವರ ವ್ಯಕ್ತಿತ್ವದ ಸತ್ಯದ ದರ್ಶನವಾಗುತ್ತದೆ. ಅಲ್ಲಿಗೆ ಬಂದು ಹೋಗುವ ಪ್ರತಿಯೊಬ್ಬರೂ ಇನ್ನೊಬ್ಬರಿಗಿಂತ ತಾನೇ ಶ್ರೇಷ್ಠ ಎಂಬಂತೆ ವರ್ತಿಸುತ್ತಾರೆ ಎಂದು ಸುದ್ದಿ ವಾಹಿನಿ ಸಿಬ್ಬಂದಿ ಹೇಳುತ್ತಾರೆ.ಇದರಲ್ಲಿ ಕಟ್ಟುಕತೆ ಏನೂ ಇಲ್ಲ. 18ನೇ ಶತಮಾನದಲ್ಲಿ ಮೊಘಲ್‌ ಸಾಮ್ರಾಜ್ಯವು ಅಧಿಕಾರ ಕಳೆದುಕೊಂಡಿದ್ದಕ್ಕಿಂತ ಹೆಚ್ಚು ವೇಗವಾಗಿ ಅಧಿಕಾರಕ್ಕೆ ಎರವಾಗುತ್ತಿರುವ ಪಕ್ಷದಲ್ಲಿ ಈ ಪ್ರಭೃತಿಗಳೇ ಅತಿ ಹೆಚ್ಚು ಅಧಿಕಾರ ಚಲಾಯಿಸುತ್ತಾರೆ. ಇನ್ನೊಂದು ಕಾಂಗ್ರೆಸ್‌ ಬಣವು ದೆಹಲಿ ದರ್ಬಾರ್‌ ಮತ್ತು ದರ್ಬಾರಿಗಳಿಂದ ಬಹು ದೂರದಲ್ಲಿದೆ. ಪಕ್ಷದ ಏಳು ಮಂದಿ ಮುಖ್ಯಮಂತ್ರಿಗಳು ಮತ್ತು ಇತರ ಮುಖಂಡರು ತಮ್ಮೆಲ್ಲ ಅನುಯಾಯಿಗಳನ್ನು ಮತ್ತು ಪಕ್ಷದ ಅಳಿದುಳಿದ ವೋಟ್‌ ಬ್ಯಾಂಕ್‌ ಅನ್ನು ತಮ್ಮ ತಮ್ಮ ರಾಜ್ಯಗಳಲ್ಲಿ  ಹಿಡಿದಿಟ್ಟುಕೊಂಡಿದ್ದಾರೆ.ಈಶಾನ್ಯ ರಾಜ್ಯಗಳು ಗಾತ್ರದಲ್ಲಿ ಚಿಕ್ಕದಾಗಿವೆ. ಮಣಿಪುರ ಮತ್ತು ಮೇಘಾಲಯಗಳು ಪಕ್ಷದ ಪ್ರಭಾವದಿಂದ ಕೈಜಾರುವ ಹಂತದಲ್ಲಿ ಇವೆ. ಹೀಗಾಗಿ ಉಳಿದಿರುವ ಮೂವರು ಮುಖ್ಯಮಂತ್ರಿಗಳಾದ ಕರ್ನಾಟಕದ ಸಿದ್ದರಾಮಯ್ಯ, ಹಿಮಾಚಲ ಪ್ರದೇಶದ ವೀರಭದ್ರ ಸಿಂಗ್‌ ಮತ್ತು ಉತ್ತರಾಖಂಡದ ಹರೀಶ್‌ ರಾವತ್‌ ಅವರನ್ನಷ್ಟೇ ಇಲ್ಲಿ ಲೆಕ್ಕಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ಇವರೆಲ್ಲ ಯಾಕೆ ಮುಖ್ಯವಾಗಿದ್ದಾರೆ ಎಂದು ಓದುಗರು ಪ್ರಶ್ನಿಸಬಹುದು.ಈ ಮೂರೂ ರಾಜ್ಯಗಳಿಂದ ಲೋಕಸಭೆಗೆ 37 ಸಂಸತ್‌ ಸದಸ್ಯರು ಆಯ್ಕೆಯಾಗಿದ್ದಾರೆ. ಲೋಕಸಭೆಯಲ್ಲಿನ  ಪಕ್ಷದ ಬಲಾಬಲ ಕೇವಲ 45 ಇರುವಾಗ ಈ ಮೂರೂ ರಾಜ್ಯಗಳ ಕೊಡುಗೆ ಮಹತ್ವದ್ದು ಆಗಿದೆ.ಇನ್ನೊಂದೆಡೆ ಮಹಾರಾಷ್ಟ್ರದ ಅಶೋಕ್‌ ಚವ್ಹಾಣ್‌ ಅವರು ಈಗಲೂ ತಮ್ಮ ಗಾಯಗಳನ್ನು ನೆಕ್ಕುತ್ತಿದ್ದಾರೆ. ಪಂಜಾಬ್‌ನ ಅಮರಿಂದರ್‌ ಸಿಂಗ್‌ ಅವರು ಇನ್ನೂ ಅನಿಶ್ಚಿತತೆಯಲ್ಲಿ ಇದ್ದಾರೆ. ರಾಜಕೀಯವಾಗಿ ಪುನರ್ಜನ್ಮ ಸಿಗುವ ಅಥವಾ ಸಿಗದಿರುವ ಗೊಂದಲದಲ್ಲಿ ಅವರಿದ್ದಾರೆ. ಉತ್ತರ ಪ್ರದೇಶ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಒಡಿಶಾ, ಹರಿಯಾಣ, ಛತ್ತೀಸಗಡ, ಜಾರ್ಖಂಡ್‌ಗಳಲ್ಲಿ ಪಕ್ಷ ನೆಲೆ ಕಳೆದುಕೊಂಡು ಅತಂತ್ರವಾಗಿದೆ.ಪಕ್ಷದ ಅನುಭವಿ ಹಳೆಯ ಮುಖಂಡರನ್ನು ಈ ರಾಜ್ಯಗಳಿಂದ ಲಾಭದಾಯಕ ಕೆಲಸದ, ಆದರೆ ಹೆಚ್ಚು ಹೊಣೆಗಾರಿಕೆ ಇಲ್ಲದ ದೆಹಲಿ ದರ್ಬಾರಿಗೆ ಆಯ್ಕೆ ಮಾಡಿ ಕಳಿಸಲಾಗಿದೆ. ಬಹುತೇಕ ಪ್ರಕರಣಗಳಲ್ಲಿ ಈ ಮುಖಂಡರ ನಾಯಕತ್ವದಡಿಯೇ ಪಕ್ಷವು ಆಯಾ ರಾಜ್ಯಗಳಲ್ಲಿ ನೆಲಕಚ್ಚಿದೆ. ಚುನಾವಣಾ ಸಮರದಲ್ಲಿ ಇವರೆಲ್ಲರ ರಾಜಕೀಯ ಚಾಣಾಕ್ಷತೆ ಮಣ್ಣು ಮುಕ್ಕಿದೆ. ತಮ್ಮ ಪ್ರತಿಸ್ಪರ್ಧಿಗಳು ಪ್ರವರ್ಧಮಾನಕ್ಕೆ ಬರದಂತೆಯೂ ಇವರೆಲ್ಲ ನೋಡಿಕೊಂಡಿದ್ದಾರೆ.ಸದ್ಯದ ಕಾಂಗ್ರೆಸ್‌ ಪರಿಸ್ಥಿತಿಯನ್ನು ಐಪಿಎಲ್‌ನಲ್ಲಿ ಸ್ಪರ್ಧಿಸಿದ್ದ ‘ಮುಂಬೈ ಇಂಡಿಯನ್‌’ ತಂಡಕ್ಕೆ ಹೋಲಿಸಬಹುದು. ತಂಡದಲ್ಲಿ ಗರಿಷ್ಠ ಸಂಭಾವನೆ ಪಡೆದ ಖ್ಯಾತ ಆಟಗಾರರು ಇದ್ದರೂ ತಂಡದ ಸಾಧನೆ ಕಳಪೆಯಾಗಿತ್ತು. ಕಾಂಗ್ರೆಸ್‌ ಪಕ್ಷದ ಪರಿಸ್ಥಿತಿಯೂ ಇದೇ ಆಗಿದೆ. ಮೈದಾನದಲ್ಲಿ ಉತ್ತಮ ಪ್ರದರ್ಶನ ತೋರುವ ಆಟಗಾರರನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಐಪಿಎಲ್‌ ತಂಡದ ಮಾಲೀಕರು ಹೊಂದಿದ್ದಾರೆ.ಕಾಂಗ್ರೆಸ್‌ನಲ್ಲಿ ಇಂತಹ ಆಯ್ಕೆ ಪ್ರಕ್ರಿಯೆಯೂ ಇಲ್ಲ. ಇಲ್ಲಿ ಮಧ್ಯಪ್ರದೇಶದ ಉದಾಹರಣೆಯನ್ನೇ ತೆಗೆದುಕೊಳ್ಳೋಣ. ಸತತ ಮೂರು ಚುನಾವಣೆಗಳಲ್ಲಿನ ಸೋಲಿನ ನಂತರ ಪಕ್ಷ ಅಲ್ಲಿ ಅಧಿಕಾರಕ್ಕೆ ಬರುವ ಸಾಧ್ಯತೆ ನಿರೀಕ್ಷಿಸಬಹುದಾಗಿದ್ದರೂ, ಪ್ರಭಾವಶಾಲಿ ಮುಖಂಡರೇ ಕಂಡು ಬರುತ್ತಿಲ್ಲ.ಯಾವುದೇ ರಾಜಕೀಯ ಪಕ್ಷವು ಸತತವಾಗಿ ನಾಲ್ಕನೇ ಬಾರಿ ಆಯ್ಕೆಯಾಗಿ ಬರುವ ಸಾಧ್ಯತೆಯು ತುಂಬ ಕಡಿಮೆ ಇರುವುದು ಜಾಗತಿಕವಾಗಿ ಸಾಬೀತಾಗಿದೆ. ಹೀಗಾಗಿ ಕಾಂಗ್ರೆಸ್‌ ಪಕ್ಷ ಇಲ್ಲಿ ಅಧಿಕಾರಕ್ಕೆ ಮರಳುವ ಸಾಧ್ಯತೆ ಹೆಚ್ಚಿಗೆ ಇದೆ. ಆದರೆ, ದೆಹಲಿಯಲ್ಲಿ ಮಧ್ಯಪ್ರದೇಶವನ್ನು ಪ್ರತಿನಿಧಿಸುವ ಪ್ರಭಾವಶಾಲಿ ರಾಜಕಾರಣಿಯೇ ಕಂಡು ಬರುತ್ತಿಲ್ಲ. ರಾಜಸ್ತಾನ ಹೊರತುಪಡಿಸಿ ಪಕ್ಷವನ್ನು ಬಲಪಡಿಸುವ ಸಾಧ್ಯತೆ ಹೆಚ್ಚಿಗೆ ಇರುವ ಬೇರೆ ರಾಜ್ಯಗಳಲ್ಲಿ ಮುಖಂಡರನ್ನು ಬೆಳೆಸುವ ನಿಟ್ಟಿನಲ್ಲಿಯೂ ಪಕ್ಷ ಹೆಚ್ಚು ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ.ಕೇರಳದಲ್ಲಿಯೂ ಪಕ್ಷದ ಅಧಿಕಾರ ಎ.ಕೆ.ಆ್ಯಂಟನಿ ಅವರಲ್ಲಿ ಕೇಂದ್ರೀಕೃತಗೊಂಡಿದೆ. ಇವರು ರಾಜ್ಯಸಭೆಯಲ್ಲಿ ಕಾಯಂ ಸ್ಥಾನ ಹೊಂದಿದ್ದು, ಪಕ್ಷದ ದರ್ಬಾರಿನ ಪ್ರಭಾವಿ ಮುಖಂಡರಲ್ಲಿ ಒಬ್ಬರಾಗಿದ್ದಾರೆ. ಪಕ್ಷಕ್ಕೆ ಸಲಹೆ ನೀಡುವಲ್ಲಿ, ಮಾರ್ಗದರ್ಶನ ಮಾಡುವಲ್ಲಿ ಆ್ಯಂಟನಿ ಮಹತ್ವದ ಪಾತ್ರ ನಿರ್ವಹಿಸಿರಬಹುದು. ಆ ಅರ್ಹತೆಯೂ ಅವರಿಗೆ ಇರಬಹುದು.ಆದರೆ, ಕೇರಳ ಸರ್ಕಾರವು ಎರಡು ಮೂರ್ಖ ನಿರ್ಧಾರಗಳನ್ನು ಕೈಗೊಂಡ ಬಗ್ಗೆ ಉಮ್ಮನ್‌ ಚಾಂಡಿ ಅವರು ಬೇರೆಯೇ ಆದ ಸತ್ಯ ಸಂಗತಿ ಹೇಳುತ್ತಾರೆ. ಪಾನ ನಿಷೇಧ ಮತ್ತು ಇಟಲಿ ನೌಕಾಪಡೆ ಸಿಬ್ಬಂದಿ ವಿರುದ್ಧ ಕೈಗೊಂಡ ಕ್ರಮಗಳು ಪಕ್ಷಕ್ಕೆ ಹೇಗೆ ಮುಳುವಾದವು ಎನ್ನುವುದನ್ನು ಅವರು ವಿವರಿಸುತ್ತಾರೆ. ಕಾಂಗ್ರೆಸ್‌ನ ಎರಡನೇ ಬಣ ಅಥವಾ ನಾವು ಅದನ್ನು ‘ಕಾಂಗ್ರೆಸ್‌–ಬಿ’ ಎನ್ನೋಣ. ಇದು ‘ಕಾಂಗ್ರೆಸ್‌–ಎ’ ಬಣವನ್ನು ಪ್ರಶ್ನಿಸುವ ಸಾಧ್ಯತೆಯಂತೂ ಇಲ್ಲವೇ ಇಲ್ಲ.ನಾನು ನನ್ನ ನಿಲುವನ್ನು ಉತ್ಪ್ರೇಕ್ಷೆಗೊಳಿಸುತ್ತಿದ್ದೇನೆ ಎಂದು ಓದುಗರು ಭಾವಿಸಬಹುದು. ‘ರಾಜ್ಯ ವಿಧಾನಸಭೆ ಚುನಾವಣೆ ಎದುರಿಸಲಿರುವ ಪಂಜಾಬ್‌ನಲ್ಲಿ ಕಮಲ್‌ ನಾಥ್‌ಗೆ ಪಕ್ಷದ ಉಸ್ತುವಾರಿ ಹೊಣೆ ಹೊರಿಸುವ ಮುನ್ನ ಪಕ್ಷವು ನಿಮ್ಮ ಅಭಿಪ್ರಾಯ ಕೇಳಿತ್ತೇ’ ಎಂದು ಅಮರಿಂದರ್‌ ಸಿಂಗ್‌ ಅವರನ್ನು ಕೇಳಿದರೆ, ಉತ್ತರ ‘ಇಲ್ಲ’ ಎಂದೇ ಸಿಗುತ್ತದೆ. ಆದಾಗ್ಯೂ, ಸಮರ್ಥಿಸಲಾಗದ ನಿರ್ಧಾರವನ್ನು ಸಮರ್ಥಿಸುವಂತೆ ಅವರ ಮೇಲೆ ಪಕ್ಷದ ದರ್ಬಾರಿಗಳು ಒತ್ತಡ ಹೇರುತ್ತಾರೆ.ಇಂಥ ಮೂರ್ಖ ನಿರ್ಧಾರವನ್ನು ಟೀಕಿಸುವ ಸದವಕಾಶವನ್ನು ಪಕ್ಷವು ಆಮ್‌ ಆದ್ಮಿ ಪಾರ್ಟಿಗೆ ಒದಗಿಸಿಕೊಡುತ್ತದೆ. ಇದು ಪಂಜಾಬ್‌ನಲ್ಲಿ ಪಕ್ಷಕ್ಕೆ ಬರಬಹುದಾಗಿದ್ದ ವೋಟುಗಳಿಗೆ ಸಾಕಷ್ಟು ಸಂಖ್ಯೆಯಲ್ಲಿ ಕತ್ತರಿ ಹಾಕಲಿದೆ.‘ಪಂಜಾಬ್‌ನಿಂದ ರಾಜ್ಯಸಭೆಗೆ ಆಯ್ಕೆ ಮಾಡಿ ಕಳಿಸಬೇಕಾದ ಅಭ್ಯರ್ಥಿಗಳ ಬಗ್ಗೆಯೂ  ನಿಮ್ಮನ್ನು ಕೇಳಲಾಗಿತ್ತೆ’ ಎಂದು ಅಮರಿಂದರ್‌ ಸಿಂಗ್‌ ಅವರನ್ನು ಕೇಳಿದರೂ, ಅವರ ಪ್ರಾಮಾಣಿಕ ಉತ್ತರ ‘ಇಲ್ಲ’ ಎಂದೇ ಇರುತ್ತದೆ. ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದ ಅವರ ಸ್ವಂತ ಆಯ್ಕೆಗಳನ್ನೂ ಪಕ್ಷವು ನಿರ್ಲಕ್ಷಿಸಿತ್ತು. ಪಕ್ಷದ ಹಿರಿಯ ಮುಖಂಡರೊಬ್ಬರು ಕಳೆದ ವಾರ ನನ್ನೊಂದಿಗೆ ಮಾತನಾಡುತ್ತ, ಚಾಣಾಕ್ಷ ಹೇಳಿಕೆಯೊಂದನ್ನು ನೀಡಿದ್ದರು. (ಅವರು ಯಾರು ಎನ್ನುವುದು ಮುಂದಿನ ವಾರ ನಿಮಗೆ ಗೊತ್ತಾಗಲಿದೆ).‘ನಾನೊಬ್ಬ ಫೀಲ್ಡ್‌ ಮಾರ್ಷಲ್‌ ಆಗಿರದೆ ಬರೀ ಫೀಲ್ಡ್‌ ಜನರಲ್‌ ಆಗಿರುವ ಕಾರಣಕ್ಕೆ ಪಕ್ಷದ ದೆಹಲಿ ದರ್ಬಾರಿನಲ್ಲಿ ಬಹುಶಃ ನನ್ನನ್ನು ಹೆಚ್ಚು ಗಂಭೀರವಾಗಿ ಪರಿಗಣಿಸಿರಲಿಕ್ಕಿಲ್ಲ’ ಎಂದು ಅವರು ಅಲವತ್ತುಕೊಂಡಿದ್ದರು. ರಾಜಕೀಯ ಕ್ಷೇತ್ರದಲ್ಲಿ ತಳಮಟ್ಟದಲ್ಲಿ ಕೆಲಸ ಮಾಡುತ್ತ, ವೋಟು ಪಡೆಯುತ್ತ, ಸೀಟು ಗೆಲ್ಲುವವರಿಗೆ ದರ್ಬಾರ್‌ನಲ್ಲಿ ಯಾವುದೇ ಅಧಿಕಾರವಾಗಲಿ, ದನಿಯಾಗಲಿ ಇಲ್ಲ. ಪಕ್ಷದ ಚಿಂತಕರ ಚಾವಡಿಯಲ್ಲಿ ಹೆಚ್ಚು ಪ್ರಭಾವಶಾಲಿಯಾಗಿರುವವರೇ ಇಂತಹ  ನಾಯಕರ ಹಣೆಬರಹ ನಿರ್ಧರಿಸುತ್ತಾರೆ.‘ಫೀಲ್ಡ್‌ ಜನರಲ್‌’ಗಳೇ ರಾಜ್ಯ ವಿಧಾನಸಭೆಯಲ್ಲಿ ಸಾಕಷ್ಟು ಸೀಟುಗಳನ್ನು ಗೆಲ್ಲುವ ಮೂಲಕ, ತಮ್ಮ  ಮುಖಂಡರನ್ನು ರಾಜ್ಯಸಭೆಗೆ ಕಳಿಸುವಲ್ಲಿ ಸಫಲರಾಗುತ್ತಾರೆ. ಈ ರಾಜ್ಯಸಭಾ ಸ್ಥಾನಗಳಿಂದ ಪಕ್ಷ ಸೂಚಿಸುವ ಅಭ್ಯರ್ಥಿಗಳನ್ನು ಗೆಲ್ಲಿಸಿ ಕಳಿಸಿದ್ದರೂ ಆ ಬಗ್ಗೆ ಈ ಮುಖಂಡರು ಏನೊಂದೂ ಮಾತನಾಡಬಾರದು, ಏನನ್ನೂ ಪ್ರಶ್ನಿಸಬಾರದು. ಒಂದು ವೇಳೆ ಭಂಡ ಧೈರ್ಯದಿಂದ ಮಾತನಾಡಿದರೆ ಅಲ್ಲಿಗೆ ಅವರ ಕತೆ ಮುಗಿದಂತೆಯೇ ಸರಿ ಎನ್ನುವಂತಹ ಪರಿಸ್ಥಿತಿ ಕಾಂಗ್ರೆಸ್‌ನಲ್ಲಿ ಇದೆ.ಇಲ್ಲಿ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರೂ, ಬಹುಶಃ ಅವರು ಕೂಡ ಅಮರಿಂದರ್ ಸಿಂಗ್ ಅವರ ಹೇಳಿಕೆಯನ್ನೇ ಪುನರುಚ್ಚರಿಸಬಹುದು. ಬಿಜೆಪಿಯ ರಾಷ್ಟ್ರೀಯ ಮುಖಂಡರು ಮಾತ್ರ ಪಕ್ಷದ ರಾಜ್ಯ ಘಟಕದ ನಿಲುವನ್ನು ಗಂಭೀರವಾಗಿ ಪರಿಗಣಿಸಿ  ನಿರ್ಮಲಾ ಸೀತಾರಾಮನ್‌ ಅವರನ್ನು ಕರ್ನಾಟಕದಿಂದ ಕಣಕ್ಕೆ ಇಳಿಸಿದರು.ಕಾಂಗ್ರೆಸ್‌ ಪಕ್ಷದ ಭವಿಷ್ಯದ ವಿಷಯಕ್ಕೆ ಮತ್ತೆ ಮರಳುವುದಾದರೆ, ಪಕ್ಷದ ‘ಬಿ ತಂಡ’ ಬಂಡಾಯ ಎದ್ದಿರುವುದರಿಂದ ಪಕ್ಷವು ಈಗ ಅವನತಿಯತ್ತ ತ್ವರಿತವಾಗಿ ಸಾಗುತ್ತಿದೆ. ಜಗನ್‌ ಮೋಹನ್‌ ರೆಡ್ಡಿ, ಹಿಮಂತ್‌ ಬಿಸ್ವಾಸ್‌ ಶರ್ಮಾ, ಅಜಿತ್‌ ಜೋಗಿ... ಹೀಗೆ ಪಕ್ಷ ತೊರೆಯುತ್ತಿರುವವರ ಪಟ್ಟಿ ಬೆಳೆಯುತ್ತಲೇ ಇದೆ. ಮುಂಬರುವ ದಿನಗಳಲ್ಲಿ ಪಕ್ಷ ಬಿಟ್ಟು ಹೊರನಡೆಯುವ ನಾಯಕ ಗಣದ ಸಂಖ್ಯೆ ಇನ್ನೂ ಹೆಚ್ಚಬಹುದು. ತಮ್ಮನ್ನು  ಪಕ್ಷದಲ್ಲಿ ಕಡೆಗಣಿಸಲಾಗಿದೆ ಎಂದೇ ಇವರೆಲ್ಲ ದೂರುತ್ತಾರೆ. ಹಿಮಂತ್ ಬಿಸ್ವಾಸ್ ಶರ್ಮಾ ಅವರಂತೂ ಪಕ್ಷದ ಮುಖಂಡರ ವಿರುದ್ಧ ಬಹಿರಂಗವಾಗಿಯೇ ಹರಿಹಾಯ್ದಿದ್ದಾರೆ.ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿಗೆ ಸೇರ್ಪಡೆ ಮಾಡಿದ ಹೊಸ ಸದಸ್ಯರ ಪೈಕಿ  ಇತ್ತೀಚೆಗಷ್ಟೇ ಕಾಂಗ್ರೆಸ್‌ನಿಂದ ವಲಸೆ ಹೋದ ಉತ್ತರಾಖಂಡದ ವಿಜಯ್‌ ಬಹುಗುಣ ಮತ್ತು ಹಿಮಂತ್‌ ಅವರೂ ಸೇರಿದ್ದಾರೆ. ಇವರಿಬ್ಬರೂ ವಿಭಿನ್ನ ನೆಲೆಗಳಿಂದ ಒಂದೇ ಬಗೆಯ ಕತೆ ಹೇಳುತ್ತಾರೆ. ಪಕ್ಷದಲ್ಲಿ ತಮಗೆ ಮರ್ಯಾದೆ ಇಲ್ಲ, ಅಧಿಕಾರ ಇಲ್ಲ, ತಾವು ಮಾಡಬೇಕಾದ ಕೆಲಸದ ಬಗ್ಗೆ ಅರಿವಿಲ್ಲ, ರಾಜ್ಯದಲ್ಲಿ ಇನ್ನೊಂದು ವಂಶಾಡಳಿತ ಬರುತ್ತಿರುವುದರಿಂದ ತಮಗೆ ರಾಜಕೀಯ ಭವಿಷ್ಯವೇ ಇಲ್ಲ ಎನ್ನುವ ಕಾರಣಕ್ಕೆ ಹಿಮಂತ್‌ ಅವರು ಪಕ್ಷ ತೊರೆದಿದ್ದಾರೆ. ವಿಜಯ್‌ ಬಹುಗುಣ ಅವರನ್ನು ಹೊರಗಿನಿಂದ ಕರೆತಂದು ಪ್ರತಿಷ್ಠಾಪಿಸಲಾಗಿತ್ತು.ವಂಶಾಡಳಿತವೇ ಅವರ ಮುಖ್ಯ ಕೊಡುಗೆಯಾಗಿತ್ತು.  ದಿವಂಗತ ಹೇಮವತಿ ನಂದನ್‌ ಬಹುಗುಣ ಅವರ ಮಗನಾಗಿರುವ, ಉತ್ತರ ಪ್ರದೇಶದಲ್ಲಿ ಪಕ್ಷದ ಮುಖಂಡೆಯಾಗಿರುವ ರೀಟಾ ಜೋಷಿ ಅವರ ಸೋದರನಾಗಿರುವುದೇ ವಿಜಯ್‌ ಬಹುಗುಣ ಅವರ ಪ್ರಮುಖ ಅರ್ಹತೆಯಾಗಿತ್ತು. ಹರೀಶ್‌ ರಾವತ್‌ ಅವರನ್ನು ಬದಿಗಿರಿಸಿ ವಿಜಯ್‌ ಬಹುಗುಣ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಗಿತ್ತು. ತಮಗಾದ ಅವಮಾನಕ್ಕೆ ಹರೀಶ್‌ ರಾವತ್‌ ಈಗಲೂ ಸಿಟ್ಟಿನಿಂದ ಕುದಿಯುತ್ತಲೇ ಇದ್ದಾರೆ. ತಾವೇ ಬೆಳೆಸಿದ್ದ ವಿಜಯ್‌ ಬಹುಗುಣ ಅವರು ಉತ್ತರಾಖಂಡದಲ್ಲಿ ಬಿಜೆಪಿಯ ಬೆಳವಣಿಗೆಗೆ ನೆರವಾಗಲು ಕಾರಣವಾಗುತ್ತಿರುವುದಕ್ಕೆ ಕಾಂಗ್ರೆಸ್‌ ಮುಖಂಡರ ಮೂರ್ಖತನವೇ ಕಾರಣವಾಗಿದೆ.

ರಾಜ್ಯಸಭೆಗೆ ಆಯ್ಕೆಯಾಗಿರುವ ಜೈರಾಂ ರಮೇಶ್‌ ಅವರು ಕಳೆದ ವಾರ ವಿವಿಧ ಸುದ್ದಿ ವಾಹಿನಿಗಳಿಗೆ ನೀಡಿದ ಸಂದರ್ಶನದ ಸಂದರ್ಭದಲ್ಲಿ, ಹಲವಾರು ರಾಜ್ಯಗಳ ಮುಖಂಡರು ಪಕ್ಷ ತೊರೆಯುತ್ತಿರುವುದು ಏಕೆ ಎನ್ನುವ ಪ್ರಶ್ನೆ ಎದುರಾಗಿತ್ತು. ವೈಯಕ್ತಿಕ ಮಹತ್ವಾಕಾಂಕ್ಷೆ ಈಡೇರಿಸಿಕೊಳ್ಳಲು ಅವರು ಕಾಂಗ್ರೆಸ್‌ ತೊರೆದಿದ್ದಾರೆ ಎಂದು ರಮೇಶ್‌ ಉತ್ತರಿಸಿದ್ದರು.ಪಕ್ಷವು ಸರಿಯಾಗಿ ನಡೆಸಿಕೊಳ್ಳದಿದ್ದರೆ ಅವರಿಗೆ ಪಕ್ಷ ತೊರೆಯದೆ ಬೇರೆ ಮಾರ್ಗವೇ ಇರಲಿಲ್ಲ.ವಿವಾದಾತ್ಮಕ ಹೇಳಿಕೆಗಳಿಗೆ ಖ್ಯಾತರಾಗಿದ್ದ, ಹರಿಯಾಣದಲ್ಲಿ ಅಧಿಕಾರ ನಡೆಸಿದ್ದ ದೇವಿಲಾಲ್‌ ಮತ್ತು ಅವರ ಮಗ ಚೌಟಾಲಾ ಅವರು ಹಿಂದೊಮ್ಮೆ ನೀಡಿದ್ದ ಹೇಳಿಕೆ ಇಲ್ಲಿ ಉಲ್ಲೇಖನೀಯ. ‘ತೀರ್ಥಯಾತ್ರೆ ಮಾಡುವ ಉದ್ದೇಶದಿಂದ ನಾವು ರಾಜಕೀಯಕ್ಕೆ ಬಂದಿಲ್ಲ. ಅಧಿಕಾರ ಅನುಭವಿಸುವುದಕ್ಕೆ ನಾವಿಲ್ಲಿ ಇದ್ದೇವೆ’ ಎಂದು ಹೇಳಿದ್ದರು.ಹರಿಯಾಣದ ರಾಜಕೀಯದ ಬಗ್ಗೆಯೇ ಮಾತನಾಡುವುದಾದರೆ, ದಿವಂಗತ ಭಜನ್‌ಲಾಲ್‌ ಅವರ ಮಗ ಕುಲದೀಪ್‌ ಬಿಷ್ಣೋಯಿ ಅವರು ಈಗ ಕಾಂಗ್ರೆಸ್‌ಗೆ ಮರಳಿ ಬಂದಿದ್ದಾರೆ. ರಾಜಕೀಯ ಮಹತ್ವಾಕಾಂಕ್ಷೆಯೇ ಕೆಟ್ಟ ಸಂಗತಿಯಾಗಿದ್ದರೆ  ಮತ್ತು ಕಾಂಗ್ರೆಸ್ ಪಕ್ಷವು ವೈರಾಗ್ಯದ ಪ್ರತಿರೂಪವಾಗಿದ್ದರೆ ಅವರನ್ನೇಕೆ ಮರಳಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕಿತ್ತು?

(ಲೇಖಕ ಮೀಡಿಯಾಸ್ಕೇಪ್ ಪ್ರೈ.ಲಿ.ಸಂಸ್ಥಾಪಕ ಸಂಪಾದಕ ಹಾಗೂ ಅಧ್ಯಕ್ಷ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)