ಭಾನುವಾರ, ಜೂನ್ 13, 2021
22 °C

ಕಾಯಿದೆ ಪಾಲನೆ

ಗುರುರಾಜ ಕರ್ಜಗಿ Updated:

ಅಕ್ಷರ ಗಾತ್ರ : | |

ಕೆಲವೊಮ್ಮೆ ನಡೆದ ಸಣ್ಣ ಸಣ್ಣ ಘಟನೆಗಳು ಬದುಕಿನ ಗತಿಯನ್ನೇ ಬದಲಿಸಿಬಿಡುತ್ತವೆ. ಘಟನೆ ನಡೆದಾಗ ಅದೊಂದು ಸಾಮಾನ್ಯ ವಿಷಯ ಎನ್ನಿಸಬಹುದು. ಆದರೆ ಅದು ನೀಡುವ ಸಂದೇಶವನ್ನು ಗಮನಿಸಿದರೆ ವ್ಯಕ್ತಿತ್ವವನ್ನೇ ಬದಲಿಸುವ ಸಂದರ್ಭ ಎಂದು ತೋರುತ್ತದೆ.ಈ ಘಟನೆ ನಡೆದದ್ದು ಇಂಗ್ಲೆಂಡಿನಲ್ಲಿ. ಒಂದು ಭಾನುವಾರ ಬಿಡುವಿನ ದಿನವಾದ್ದರಿಂದ ಮನೆಯವರೆಲ್ಲ ಮೋಜಿನ ಪ್ರವಾಸಕ್ಕೆ ನಡೆದರು. ತಮ್ಮ ಊರಿನಿಂದ ನೂರು ಮೈಲಿಯಾಚೆ ಒಂದು ಸುಂದರವಾದ ಪ್ರವಾಸಿ ತಾಣ.ಅಲ್ಲಿ ಬೆಟ್ಟಗಳು, ನೀರಿನ ಜಲಪಾತಗಳು ಮೈಮರೆಸುವಂತಿದ್ದವು. ಅಲ್ಲಿಯೇ ಇದ್ದ ಇನ್ನೊಂದು ಬಹುದೊಡ್ಡ ಸರೋವರ ಮತ್ತೊಂದು ಆಕರ್ಷಣೆ. ಅಲ್ಲಿ ಹೋಗಿ ಮೀನು ಹಿಡಿಯುವುದು ಈ ಪರಿವಾರದಲ್ಲಿದ್ದ ತಂದೆ ಮತ್ತು ಮಗನ ಉದ್ದೇಶ.ಆ ಪ್ರವಾಸೀ ತಾಣವನ್ನು ಮನೆಯವರೆಲ್ಲ ಬೇಗನೇ ಸೇರಿದರು. ಜಲಪಾತದ ನೀರಿನಲ್ಲಿ ನೆನೆದದ್ದಾಯಿತು, ಬೆಟ್ಟ ಹತ್ತಿದ್ದಾಯಿತು, ಬೇಕಾದಷ್ಟು ಛಾಯಾಚಿತ್ರಗಳನ್ನು ತೆಗೆದದ್ದಾಯಿತು ಕೊನೆಗೆ ಹೊಟ್ಟೆ ತುಂಬ ಊಟ ಮಾಡಿದ್ದಾಯಿತು. ಪರಿವಾರದ ಉಳಿದವರು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರೆ ತಂದೆ ಮತ್ತು ಮಗ ಎದ್ದರು.ಮೀನು ಹಿಡಿಯಲು ಬೇಕಾಗುವ ಎಲ್ಲ ಉಪಕರಣಗಳನ್ನು ಚೀಲದಲ್ಲಿ ತುಂಬಿಕೊಂಡು ಸದ್ದಿಲ್ಲದೇ ಸರೋವರದ ಕಡೆಗೆ ಹೊರಟರು. ಆಗಿನ್ನೂ ಸಂಜೆ ನಾಲ್ಕೂವರೆ ಗಂಟೆ. ಆ ಪ್ರದೇಶದಲ್ಲಿ ಕತ್ತಲಾಗುವುದು ತುಂಬ ತಡ. ರಾತ್ರಿ ಒಂಬತ್ತು ಗಂಟೆಯಾದರೂ ಸಾಕಷ್ಟು ಬೆಳಕಿರುತ್ತದೆ. ಇವರು ಅಲ್ಲಿಗೆ ಹೋದಾಗ ಯಾರೂ ಇರಲಿಲ್ಲ.ಇವರೇ ಒಂದು ನಾವೆಯನ್ನು ತೆಗೆದುಕೊಂಡು ನಿಧಾನವಾಗಿ ಸರೋವರದ ಒಂದು ಭಾಗದ ಕಡೆಗೆ ತೇಲಿಸಿದರು. ಮಗ ಮೀನು ಹಿಡಿಯಲು ಬಲೆಯನ್ನು ಹರಡಿದ. ನಂತರ ತನ್ನ ಗಾಳಕ್ಕೆ ಒಂದು ಹುಳವನ್ನು ಸಿಕ್ಕಿಸಿ ನೀರಿನಲ್ಲಿ ಬಿಟ್ಟು ಕಣ್ಣು ಮುಚ್ಚಿ ಕುಳಿತ. ಈ ಮೀನು ಹಿಡಿಯುವ ಕೆಲಸಕ್ಕೆ ತಾಳ್ಮೆ ತುಂಬ ಬೇಕು. ಮೀನುಗಳಿಗೇನು ಅವಸರ ಬಂದು ಸಿಕ್ಕಿ ಹಾಕಿಕೊಳ್ಳಲು?ಗಾಳ ಬಿಟ್ಟು ಐದು ನಿಮಿಷವಾಗುವುದರಲ್ಲಿ ಗಾಳವನ್ನು ಕೆಳಗೆ ಎಳೆದಂತಾಯಿತು. ಅಂದರೆ ಮೀನು ಗಾಳಕ್ಕೆ ಸಿಕ್ಕಿದೆ ಎಂದಾಯಿತು ಎಂದುಕೊಂಡು ತರುಣ ನಿಧಾನವಾಗಿ ಗಾಳವನ್ನು ಮೇಲಕ್ಕೆ ಎಳೆಯತೊಡಗಿದ.ಎಳೆಯುವುದು ಕಷ್ಟವಾದಾಗ ಮೀನು ದೊಡ್ಡದೇ ಇರಬೇಕೆಂಬ ಭಾವನೆ ಮೂಡಿತು. ಕೊನೆಗೆ ಅದನ್ನು ಹೊರಗೆ ಎಳೆದಾಗ ಅದೊಂದು ಭಾರೀ ಮೀನು! ಇದುವರೆಗೂ ಅಷ್ಟು ದೊಡ್ಡ ಮೀನನ್ನು ಆತ ಎಂದೂ ಹಿಡಿದಿರಲಿಲ್ಲ, ಅದನ್ನು ಕೈಯಲ್ಲಿ ಕಷ್ಟಪಟ್ಟು ಎತ್ತಿಹಿಡಿದು ಅಪ್ಪನನ್ನು ಕೂಗಿದ, `ಅಪ್ಪಾ ನೋಡಿ ಎಷ್ಟು ದೊಡ್ಡ ಮೀನು!~ ಅಪ್ಪ ಮಗನ ಕೈಯಲ್ಲಿದ್ದ ಮಿನನ್ನು ನೋಡಿದರು. ಅದು ನಿಜವಾಗಿಯೂ ದೊಡ್ಡದು. ನಗೆ, ಸಂತೋಷ, ಮಗನ ಮುಖವನ್ನೆಲ್ಲ ಹರಡಿಕೊಂಡಿತು. ಅಪ್ಪ ತಮ್ಮ ವಾಚ್ ನೋಡಿಕೊಂಡರು.ಆಗ ಸಮಯ ಐದೂಕಾಲು ಗಂಟೆ. ಸರೋವರದ ಪಕ್ಕದಲ್ಲಿ ದೊಡ್ಡ ಬೋರ್ಡ್ ಮೇಲೆ  ಮೀನು ಹಿಡಿಯುವ ಸಮಯ ಸಂಜೆ ಆರರಿಂದ ಎಂಟು ಗಂಟೆ ಮಾತ್ರ  ಎಂದು ಬರೆದಿತ್ತು. ಅದನ್ನು ಮತ್ತೊಮ್ಮೆ ನೋಡಿ ಮಗನಿಗೆ ಹೇಳಿದರು, `ಇನ್ನೂ ಮೀನು ಹಿಡಿಯುವ ಸಮಯವಾಗಿಲ್ಲ.ನಿಯಮಗಳನ್ನು ಮೀರುವಂತಿಲ್ಲ. ಮೀನನ್ನು ನೀರಿಗೆ ಬಿಟ್ಟುಬಿಡು.~ ಅವರ ಧ್ವನಿಯಲ್ಲಿ ಸಲಹೆ ಇರಲಿಲ್ಲ, ಆಜ್ಞೆ ಇತ್ತು. ಬಾಲಕ ಹಾಗೆಯೇ ಮಾಡಿದ. ಅಲ್ಲಿ ಯಾವ ಅಧಿಕಾರಿಯೂ ಇರಲಿಲ್ಲ, ಮತ್ತೆ ಯಾವ ನಾವೆಯೂ ಇರಲಿಲ್ಲ. ಬೇರೆ ಜನರೂ ಇರಲಿಲ್ಲ. ಮಗ ಕೇಳಿದ, `ಅಪ್ಪಾ, ನಾವು ಆರು ಗಂಟೆಯ ಮೊದಲೇ ಮೀನು ಹಿಡಿದಿದ್ದೇನೆಂದು ಯಾರಿಗೂ ಗೊತ್ತಾಗುತ್ತಿರಲಿಲ್ಲ. ಆದರೂ ಅದನ್ನು ಬಿಟ್ಟದ್ದು ಏಕೆ? ಅದು ಎಷ್ಟು ದೊಡ್ಡ ಮೀನು ಸಿಕ್ಕಿತ್ತು.~ ಅಪ್ಪ ಹೇಳಿದರು.`ಮತ್ತೊಬ್ಬರು ನೋಡುತ್ತಾರೆಂದು ಮಾತ್ರ ಕಾಯಿದೆ ಪಾಲಿಸಿದರೆ ನೀನು ಭವ್ಯ ರಾಷ್ಟ್ರವನ್ನು ಕಟ್ಟುವ ಪ್ರಜೆ ಆಗಲಾರೆ. ಯಾರು ನೋಡದಿದ್ದರೂ ಆತ್ಮಸಾಕ್ಷಿಯಿಂದ ಕಾಯಿದೆ ಪಾಲಿಸಿದರೆ ನೀನೂ ದೊಡ್ಡವನಾಗುತ್ತೀ, ದೇಶವನ್ನು ಶ್ರೇಷ್ಠವನ್ನಾಗಿಸುತ್ತೀ. ಇದನ್ನು ಮರೆಯಬೇಡ.~ ಮಗ ಮುಂದೆ ಎಂದೂ ಅಷ್ಟು ದೊಡ್ಡ ಮೀನನ್ನು ಹಿಡಿಯಲಿಲ್ಲ, ಆದರೆ ತಂದೆಯ ಮಾತನ್ನು ಮರೆಯಲಿಲ್ಲ. ಮೂವತ್ತು ವರ್ಷಗಳ ನಂತರ ಬಹುದೊಡ್ಡ ನಾಯಕನಾಗಿ ಬೆಳೆದುನಿಂತ, ಜನರಿಗೆ ಮಾದರಿಯಾದ.ಸಮಾಜದ ಒಳಿತಿಗೆಂದು ಮಾಡಿದ ಕಾಯಿದೆಗಳನ್ನು ಪಾಲಿಸುವುದು ನಮ್ಮ ನೈತಿಕತೆ. ಯಾರೂ ಗಮನಿಸದಿದ್ದಾಗ ಕಾಯಿದೆಗಳನ್ನು ಮುರಿದು ಮೋಸಮಾಡುವುದು ಕಳ್ಳತನ. ಇಂಥ ವ್ಯವಹಾರ ನಮ್ಮನ್ನು ದೊಡ್ಡವರನ್ನಾಗಿ ಮಾಡುವುದಿಲ್ಲ.ದೇಶವನ್ನೂ ಬೇರೆಯವರ ಕಣ್ಣಿನಲ್ಲಿ ಸಣ್ಣದಾಗಿಸುತ್ತದೆ. ಇದನ್ನು ಮಕ್ಕಳಿಗೆ ಹಿರಿಯರು ನಡೆದು ತೋರಿಸಿದರೆ ಅವರೂ ಪಾಲಿಸಿಯಾರು, ಆ ಹುಡುಗ ಮೀನನ್ನು ನೀರಿಗೆ ಮರಳಿ ಬಿಟ್ಟ ಹಾಗೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.