ಹೀಗೆ ಏಕಕಾಲಕ್ಕೆ ಎರಡೂ ಬದಿಯಿಂದ ತಪರಾಕಿ ಬೀಳಬಹುದು ಎಂಬುದನ್ನು ಬಹುಶಃ ಪಾಕಿಸ್ತಾನ ನಿರೀಕ್ಷಿಸಿರಲಿಲ್ಲ. ಇತ್ತ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಕ್ ಪ್ರೇರಿತ ಭಯೋತ್ಪಾದನೆಯನ್ನು ಚೀನಾ ಖಂಡಿಸಿದ್ದರೆ, ಅತ್ತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ನೂತನ ದಕ್ಷಿಣ ಏಷ್ಯಾ ನೀತಿ ಕುರಿತ ತಮ್ಮ ಭಾಷಣದಲ್ಲಿ ‘ಪಾಕಿಸ್ತಾನ ಉಗ್ರರ ಸ್ವರ್ಗವಾಗಿ ಬದಲಾಗಿರುವುದರ ಬಗ್ಗೆ ಅಮೆರಿಕ ಮೌನ ವಹಿಸುವುದಿಲ್ಲ’ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ ಅಮೆರಿಕ ಜೊತೆಗಿನ ದ್ವಿಪಕ್ಷೀಯ ಮಾತುಕತೆಯನ್ನು ಸ್ಥಗಿತಗೊಳಿಸುವುದಾಗಿ ಪಾಕಿಸ್ತಾನ ಮೊದಲು ಹೇಳಿತು. ಆದರೆ ಮರುದಿನ ತನ್ನ ವರಸೆ ಬದಲಿಸಿ ‘ಅಫ್ಗಾನಿಸ್ತಾನದಲ್ಲಿ ಉಗ್ರರ ನೆಲೆ ವಿಸ್ತಾರಗೊಳ್ಳದಂತೆ ತಡೆಯುವ ನಿಟ್ಟಿನಲ್ಲಿ ಅಮೆರಿಕದ ಜೊತೆಗೂಡಿ ಕೆಲಸ ಮಾಡುತ್ತೇವೆ’ ಎಂಬ ಹೇಳಿಕೆ ನೀಡಿತು. ಅಮೆರಿಕ ಮತ್ತು ಚೀನಾದ ಆರ್ಥಿಕ ಸಹಾಯ ಎಂಬ ಕೃತಕ ಉಸಿರಾಟದಲ್ಲಿರುವ ಪಾಕಿಸ್ತಾನಕ್ಕೆ, ಆ ದೇಶಗಳ ವಿರುದ್ಧ ಸೆಟೆದು ನಿಲ್ಲಲು ಸಾಧ್ಯವಿದೆಯೇ?

ಹಾಗಾದರೆ ‘ಇಸ್ಲಾಮಿಕ್ ಸ್ವರ್ಗ’ (ದರ್ ಅಲ್ ಇಸ್ಲಾಮ್) ಸೃಷ್ಟಿಸುತ್ತೇವೆ ಎಂದು ಭಾರತದ ಮುಸ್ಲಿಂ ಸಮುದಾಯವನ್ನು ಜಿನ್ನಾ ನಂಬಿಸಿದ್ದರಲ್ಲಾ, ಎಡವಿದ್ದು ಎಲ್ಲಿ? ಉತ್ತರಕ್ಕೆ ಇತಿಹಾಸದ ಪುಟಗಳನ್ನೇ ಸರಿಸಬೇಕು. 1932ರಲ್ಲಿ ಲಂಡನ್ನಿಗೆ ತೆರಳಿದ್ದ ಗಾಂಧಿ, ಲಾರ್ಡ್ ಮಿಂಟೋ ಪತ್ನಿ ಜೊತೆ ಮಾತನಾಡುತ್ತಾ ‘ಒಂದೊಮ್ಮೆ ಪ್ರತ್ಯೇಕ ಚುನಾವಣಾ ಪದ್ಧತಿಯನ್ನು ಮಿಂಟೋ ಮುಂದುಮಾಡದಿದ್ದರೆ, ನಾವು ಭಿನ್ನಾಭಿಪ್ರಾಯ ಸರಿಪಡಿಸಿಕೊಂಡು ಒಂದಾಗಿರುತ್ತಿದ್ದೆವು’ ಎಂದಿದ್ದರು. ಆಗ ಗಾಂಧಿ ಮಾತು ತಡೆದ ಲೇಡಿ ಮಿಂಟೋ ‘ಪ್ರತ್ಯೇಕ ಚುನಾವಣೆ ನಡೆಸುವ ಸಲಹೆ ಕೊಟ್ಟದ್ದು ನಿಮ್ಮ ಗುರು- ಗೋಖಲೆ’ ಎಂದಿದ್ದರು. ಗಾಂಧಿ ಕೊಂಚ ವಿಚಲಿತರಾಗಿ ‘ಗೋಖಲೆ ಒಳ್ಳೆಯ ಮನುಷ್ಯ, ಆದರೆ ಕೆಲವೊಮ್ಮೆ ಒಳ್ಳೆಯವರೂ ತಪ್ಪು ಮಾಡುತ್ತಾರೆ’ ಎಂದು ಮಾತು ಮುಗಿಸಿದ್ದರು. ಉಭಯ ಸಮುದಾಯಗಳನ್ನು ಒಂದು ಮಾಡಬೇಕು ಎಂಬ ತುಡಿತ ಗಾಂಧಿಯಲ್ಲಿತ್ತು. 1944ರ ಮೇ ತಿಂಗಳಿನಲ್ಲಿ ಕಾರಾಗೃಹದಿಂದ ಹೊರಬಂದವರೆ, ‘ಇಸ್ಲಾಂ ಅಥವಾ ಮುಸ್ಲಿಮರ ಶತ್ರುವಿನಂತೆ ನನ್ನನ್ನು ನೋಡಬೇಡಿ. ನಾನು ನಿಮ್ಮ ಮತ್ತು ಮನುಕುಲದ ಸೇವಕ ಮತ್ತು ಗೆಳೆಯ. ದಯಮಾಡಿ ಬಂದು ಭೇಟಿಯಾಗಿ’ ಎಂದು ಜಿನ್ನಾಗೆ ಪತ್ರ ಬರೆದರು. ಕೊನೆಗೆ ತಾವೇ ಜಿನ್ನಾ ಮನೆಗೆ ತೆರಳಿ ಸೆಪ್ಟೆಂಬರ್ 9 ರಿಂದ 27ರ ವರೆಗೆ ಮಾತುಕತೆ ನಡೆಸಿದರು. ಆ ಮಾತುಕತೆಯ ವಿವರಗಳನ್ನು ನೋಡಿದರೆ, ಗಾಂಧಿ ಪದೇ ಪದೇ ಜಿನ್ನಾರನ್ನು ಕ್ವೈದ್ ಎ– ಅಸಮ್ (ಮಹಾನ್ ನಾಯಕ) ಎಂದು ಸಂಬೋಧಿಸುವುದು ಕಾಣುತ್ತದೆ. ಅದಕ್ಕೆ ಪ್ರತಿಕ್ರಿಯೆಯಾಗಿ ಜಿನ್ನಾ, ‘ಮಿಸ್ಟರ್ ಗಾಂಧಿ’ ಎಂದು ಉತ್ತರ ಕೊಟ್ಟ ಉಲ್ಲೇಖಗಳು ಸಿಗುತ್ತವೆ.

ಗಾಂಧೀಜಿಯನ್ನು ಕೇವಲ ಲೀಗ್ ಮತ್ತು ಜಿನ್ನಾ ಉಪೇಕ್ಷಿಸಿದ್ದಲ್ಲ, ಆ ವೇಳೆಗಾಗಲೇ ಸ್ವತಃ ಕಾಂಗ್ರೆಸ್ ನಾಯಕರಿಗೂ ಗಾಂಧಿ ತತ್ವಗಳು ಸಾಕು ಎನಿಸಿದ್ದವು. ‘ವೇವೆಲ್ವೈ ಸ್ರಾಯ್ ಆಗಿದ್ದಷ್ಟು ದಿನ ಮಹತ್ವದ ನಿರ್ಧಾರ ಸಾಧ್ಯವಾಗದು. ನೆಹರೂ ಬಗ್ಗೆ ಪ್ರೀತಿಯಿರುವ ಮೌಂಟ್ ಬ್ಯಾಟನ್ ವೈಸ್ರಾಯ್ ಆಗಿ ಭಾರತಕ್ಕೆ ಬಂದರೆ ಒಳಿತು’ ಎಂಬ ಸಲಹೆಯನ್ನು ಕೃಷ್ಣ ಮೆನನ್ ಬ್ರಿಟನ್ ಪ್ರಭುತ್ವಕ್ಕೆ ತಲುಪಿಸಿದ್ದರು. ಅದಕ್ಕೆ ಕಾರಣವಿದೆ, ಹಿಂದೆ ಮಲೇಷ್ಯಾಕ್ಕೆ ನೆಹರೂ ಭೇಟಿ ಕೊಟ್ಟಾಗ ಅಲ್ಲಿನ ಬ್ರಿಟಿಷ್ ಸೇನೆಯ ಕಮಾಂಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಮೌಂಟ್ ಬ್ಯಾಟನ್, ನೆಹರೂ ಅವರಿಗೆ ಭವ್ಯ ಆತಿಥ್ಯ ನೀಡಿದ್ದರು. ಇಬ್ಬರ ನಡುವೆ ಸ್ನೇಹ ಚಿಗುರಿತ್ತು.

ಇತ್ತ, ಮಾತುಕತೆಯಿಂದ ವಿಳಂಬವಾಗುತ್ತಿದೆ ಎನಿಸಿ, ಮುಸ್ಲಿಂ ಲೀಗ್ 1946ರ ಆಗಸ್ಟ್ 16ರಂದು ‘Direct Action Day’ಗೆ ಕರೆಕೊಟ್ಟಿತು. ಮುಸ್ಲಿಮರ ಬೃಹತ್ ಸಭೆಯಲ್ಲಿ ಪ್ರಚೋದನಾಕಾರಿ ಮಾತುಗಳು ಬಂದವು. ಪರಿಣಾಮ ಕಲ್ಕತ್ತಾದಲ್ಲಿ ರಕ್ತದ ಕೋಡಿ ಹರಿಯಿತು. 15 ಸಾವಿರ ಮಂದಿ ರಸ್ತೆಯಲ್ಲಿ ಹೆಣವಾದರು. ಇದನ್ನು ‘Statesman’ ಪತ್ರಿಕೆಗೆ ವರದಿ ಮಾಡಿದ ಪತ್ರಕರ್ತ ಕಿಮ್ ಕ್ರಿಸ್ಟೀನ್ ‘ನಾನು ಯುದ್ಧಗಳನ್ನು ವರದಿ ಮಾಡಿದ್ದೇನೆ. ಆದರೆ ಕಲ್ಕತ್ತಾ ಹತ್ಯಾಕಾಂಡ ಅದಕ್ಕಿಂತಲೂ ಭೀಕರ’ ಎಂದು ಬರೆದಿದ್ದರು. ನಂತರ ಕೋಮು ದಳ್ಳುರಿ ನೌಕಾಲಿಗೆ ಹಬ್ಬಿತು. 1946ರ ದೀಪಾವಳಿ ಕಗ್ಗತ್ತಲಲ್ಲಿ, ಆಕ್ರಂದನದಲ್ಲಿ ಸಮಾಪ್ತಿಯಾಯಿತು.

ಇನ್ನು ಸಾಧ್ಯವಿಲ್ಲ ಎನಿಸಿ, ಬ್ರಿಟನ್ ಪ್ರಧಾನಿ ಆಟ್ಲಿ 1947ರ ಫೆಬ್ರುವರಿ 20ರಂದು ಬ್ರಿಟಿಷ್ ಸಂಸತ್ತಿನಲ್ಲಿ ಭಾರತ ತೊರೆಯುವ ಪ್ರಸ್ತಾಪ ಮಂಡಿಸಿದರು, ಕೊನೆಯ ವೈಸ್ರಾಯ್ ಆಗಿ ಮೌಂಟ್ ಬ್ಯಾಟನ್ ಅವರನ್ನು ಕಳುಹಿಸುತ್ತಿರುವುದಾಗಿ ಘೋಷಿಸಿದರು. ತಾವು ನಿರ್ಗಮಿಸುವ ಮುನ್ನ ವೇವೆಲ್, ಎರಡು ವಸ್ತುಗಳನ್ನು ಮೌಂಟ್ ಬ್ಯಾಟನ್ ಅವರಿಗೆ ಹಸ್ತಾಂತರಿಸಿದ್ದರು. ವಜ್ರದ ಹರಳುಗಳಿಂದ ಮಾಡಲಾಗಿದ್ದ ವೈಸ್ರಾಯ್ ಬ್ಯಾಡ್ಜ್ ಮತ್ತು ‘Operation Madhouse’ ಎಂಬ ಪತ್ರಗಳ ಕಡತ. ಅದರಲ್ಲಿ ಭಾರತದ ಸಮಸ್ಯೆ ಮತ್ತು ಅದಕ್ಕಿರುವ ಏಕೈಕ ಪರಿಹಾರದ ಪ್ರಸ್ತಾಪ ಇತ್ತು. ಮೌಂಟ್ ಬ್ಯಾಟನ್ ತಡ ಮಾಡದೇ ಗಾಂಧಿ, ಜಿನ್ನಾ, ನೆಹರೂ ಮತ್ತು ಪಟೇಲರ ಜೊತೆ ಪ್ರತ್ಯೇಕ ಮಾತುಕತೆ ನಡೆಸಿದರು. ‘ಜಿನ್ನಾ ನೇತೃತ್ವದ ಮುಸ್ಲಿಂ ಲೀಗ್ ಸರ್ಕಾರ ರಚಿಸಲಿ, ಮುಸ್ಲಿಮರೇ ಸಂಪುಟದ ಭಾಗವಾಗಿದ್ದರೂ ಅಡ್ಡಿಯಿಲ್ಲ. ಈ ಬಗ್ಗೆ ಕಾಂಗ್ರೆಸ್ಸನ್ನು ಒಪ್ಪಿಸುವ ಹೊಣೆ ನನ್ನದು.

ಒಟ್ಟಿನಲ್ಲಿ ವಿಭಜನೆ ಕೂಡದು’ ಎಂಬ ಪ್ರಸ್ತಾಪವನ್ನು ಗಾಂಧಿ ಮುಂದಿಟ್ಟರು. ಕಾಂಗ್ರೆಸ್ ನಾಯಕರು ಗಾಂಧಿ ಪ್ರಸ್ತಾವನೆಯನ್ನು ತಿರಸ್ಕರಿಸಿದರೆ, ಜಿನ್ನಾ ಇದೊಂದು ಕಿಡಿಗೇಡಿತನ ಎಂದು ಕರೆದರು. ತಮ್ಮ ಮಾತು ಸೋತ ಕಾರಣ ಗಾಂಧಿ ರಾಜಕೀಯವಾಗಿ ನೇಪಥ್ಯಕ್ಕೆ ಸರಿದರು. ಈ ಬಗ್ಗೆ ಸರೋಜಿನಿ ನಾಯ್ಡು ‘Gandhi was politically dead. He sees in front of him the debris of his lifework’ ಎಂದು ಬರೆದಿದ್ದರು.

ಅಂತೂ ಕೊನೆಗೆ 1947ರ ಜೂನ್ 3 ರಂದು ಮೌಂಟ್ ಬ್ಯಾಟನ್, ದೇಶ ವಿಭಜನೆಯ ನಿರ್ಣಯವನ್ನು ರೇಡಿಯೊ ಮೂಲಕ ಘೋಷಿಸಿದರು. ಜೂನ್ 4 ರಂದು ಮುಂಜಾನೆಯ ಪ್ರಾರ್ಥನೆಯ ವೇಳೆ ‘ಇದು ಬ್ರಿಟಿಷ್ ರಾಜ್ ತೀರ್ಮಾನವಲ್ಲ, ಹಿಂದೂ– ಮುಸ್ಲಿಮರ ನಡುವೆ ಬೆಳೆದಿರುವ ಹಗೆ, ಮುನಿಸು ವಿಭಜನೆ ಅನಿವಾರ್ಯ ಎನ್ನುವ ಪರಿಸ್ಥಿತಿ ಸೃಷ್ಟಿಸಿದೆ’ ಎಂದು ಗಾಂಧಿ ವಿವರಿಸುವಾಗ ಅಲ್ಲಿ ನೆರೆದಿದ್ದವನೊಬ್ಬ ‘ದೇಶ ತುಂಡು ಮಾಡುವ ಮೊದಲು ನನ್ನನ್ನು ತುಂಡು ಮಾಡಿ ಎಂದಿದ್ದಿರಲ್ಲಾ’ ಎಂದು ಪ್ರಶ್ನಿಸಿದ್ದ. ಅದಕ್ಕೆ ಗಾಂಧಿ ‘ನಾನು ಆ ಹೇಳಿಕೆ ಕೊಟ್ಟಾಗ ಜನರ ಅಭಿಪ್ರಾಯವನ್ನು ಅಭಿವ್ಯಕ್ತಿಸುತ್ತಿದ್ದೇನೆ ಎಂದು ಭಾವಿಸಿದ್ದೆ. ಆದರೆ ಜನರ ಅಭಿಪ್ರಾಯ ಭಿನ್ನ ಎಂಬುದು ಇದೀಗ ಅರಿವಾಗಿದೆ’ ಎಂದಿದ್ದರು.

ಮೌಂಟ್ ಬ್ಯಾಟನ್ ತರಾತುರಿಯಲ್ಲಿ ವಿಭಜನೆಯ ದಿನಾಂಕವನ್ನು ಪ್ರಕಟಿಸಿದರು, ಎರಡನೇ ವಿಶ್ವ ಸಮರದಲ್ಲಿ ಜಪಾನ್ ಶರಣಾದ ದಿನ ಆಗಸ್ಟ್ 15, ತಮ್ಮ ಪಾಲಿಗೆ ಅದೃಷ್ಟದ ದಿನ ಎಂಬುದು ಮೌಂಟ್ ಬ್ಯಾಟನ್ ಭಾವನೆಯಾಗಿತ್ತು. ಗಡಿರೇಖೆ ಗುರುತಿಸಲು ಕೇವಲ 72 ದಿನಗಳು ಉಳಿದಿದ್ದವು! ಗಡಿ ಸ್ಪಷ್ಟಗೊಂಡು, ಜನರ ವಲಸೆ ಆರಂಭವಾದ ಮೇಲೆ ಪೈಶಾಚಿಕ ಕೃತ್ಯಗಳು ನಡೆದವು. ಕೊಲೆ, ದರೋಡೆ, ಮಾನಭಂಗ ಎರಡೂ ಬದಿ ಆದವು. ಪಶ್ಚಿಮ ಪಂಜಾಬಿನ ಚುನ್ದ್ ಮಖಾನ್ ಎಂಬ ಊರಿನ ಮೇಲೆ ದಾಳಿಕೋರರು ಎರಗಿದಾಗ ಅಲ್ಲಿನ ಸಿಖ್ ಸಮುದಾಯ ಗುರುದ್ವಾರದಲ್ಲಿ ಜಮೆಯಾಯಿತು. ಬಂದೂಕಿನೊಂದಿಗೆ ಬಂದ ದಂಗೆಕೋರರು ಗುರುದ್ವಾರ ಸುತ್ತುವರೆದಾಗ ಪುರುಷರು ತಲವಾರು ಹಿಡಿದು ಸೆಣಸಿ ಪ್ರಾಣಾರ್ಪಣೆ ಮಾಡಿದರು, ಒಳಗೆ ಬಂದಿಯಾಗಿದ್ದ ಮಹಿಳೆಯರು ಗುರುಗ್ರಂಥ ಸಾಹೇಬ್ ಪ್ರತಿಯನ್ನು ಅಗ್ನಿ ಕುಂಡದಲ್ಲಿಟ್ಟು ಸಾಮೂಹಿಕವಾಗಿ ಅರ್ಪಿಸಿಕೊಂಡರು. ವಿಭಜನೆ ಉಂಟು ಮಾಡಬಲ್ಲ ಅವಘಡಗಳ ಅರಿವಿದ್ದೂ ಸೂಕ್ತ ಮುನ್ನೆಚ್ಚರಿಕೆ, ಸಿದ್ಧತಾ ಕ್ರಮವನ್ನು ಮೌಂಟ್ ಬ್ಯಾಟನ್ ಕೈಗೊಳ್ಳಲಿಲ್ಲ. ರಕ್ತದ ಕೋಡಿ ಹರಿಯದೇ ಇನ್ನೇನಾದೀತು?

ಪಾಕಿಸ್ತಾನದ ಹುಟ್ಟಿನೊಂದಿಗೆ ಅದರ ಭವಿಷ್ಯದ ಪ್ರಶ್ನೆ ಉದ್ಭವವಾಯಿತು. ಒಂದು ರಾಷ್ಟ್ರ ಸ್ವಾವಲಂಬಿಯಾಗಿ ಬದುಕಬಲ್ಲಷ್ಟು ಸಂಪನ್ಮೂಲ, ಮೂಲ ಸೌಕರ್ಯ ಆ ಭಾಗದಲ್ಲಿ ಇರಲಿಲ್ಲ. ಅತಿ ಹೆಚ್ಚು ಸೆಣಬು ಬೆಳೆಯುವ ಪ್ರದೇಶ ಅದಾಗಿತ್ತು ದಿಟ, ಆದರೆ ಸಂಸ್ಕರಣಾ ಘಟಕಗಳು, ಕೃಷಿ ಉತ್ಪನ್ನ ಮಾರುಕಟ್ಟೆ ಭಾರತದ ಭೂ ಪ್ರದೇಶದಲ್ಲಿತ್ತು. ದೊಡ್ಡ ದೊಡ್ಡ ಉದ್ದಿಮೆಗಳನ್ನು ನಡೆಸುತ್ತಿದ್ದ ವ್ಯಾಪಾರಿಗಳು ಸಂಪತ್ತು ಮತ್ತು ಅನುಭವದೊಂದಿಗೆ ಗಂಟು ಕಟ್ಟಿಕೊಂಡು ಭಾರತಕ್ಕೆ ಬಂದಾಗಿತ್ತು. ನಿರಾಶ್ರಿತರನ್ನು ಸಂಭಾಳಿಸುವುದರಲ್ಲಿ ಪಾಕಿಸ್ತಾನ ಏದುಸಿರುಬಿಟ್ಟಿತು. ಮುಸ್ಲಿಮರ ಸಂಖ್ಯಾಬಲ ಅಳೆದು ಭೂಭಾಗ ಪಡೆದದ್ದೇನೋ ಖರೆ, ಆದರೆ ಪಶ್ಚಿಮ ಪಾಕಿಸ್ತಾನದ ಬಂಗಾಳಿ ಮುಸ್ಲಿಮರು ಪೂರ್ವ ಪಾಕಿಸ್ತಾನದ ಮುಸ್ಲಿಮರೊಂದಿಗೆ ಬೆರೆತು ಬಾಳುವುದು ಸಾಧ್ಯವಾಗಲಿಲ್ಲ. 71ರಲ್ಲಿ ಪಾಕಿಸ್ತಾನ ಹೋಳಾಯಿತು.

ದಶಕಗಳ ಕಾಲ ಎಳೆದು ಜಗ್ಗಿದ ವಿಭಜನೆಯ ಪ್ರಸ್ತಾಪವನ್ನು ಇನ್ನೂ ಕೆಲವು ತಿಂಗಳು ಮುಂದೂಡಿದ್ದರೆ ವಿಭಜನೆ ತಪ್ಪಿಸಬಹುದಿತ್ತು ಎಂದು ಕೆಲವರು ಹೇಳುವುದಿದೆ. ಅದಕ್ಕೆ ಕೊಡುವ ಕಾರಣ ಜಿನ್ನಾರ ಅನಾರೋಗ್ಯದ್ದು. 1947ರ ಹೊತ್ತಿಗೆ ಕ್ಷಯ ಜಿನ್ನಾರ ಪುಪ್ಪಸವನ್ನು ದುರ್ಬಲಗೊಳಿಸಿತ್ತು. ಜಿನ್ನಾರಿಗೆ ಉಳಿದಿರುವುದು ಕೆಲವು ತಿಂಗಳುಗಳಷ್ಟೇ ಎಂಬ ವೈದ್ಯಕೀಯ ವರದಿಯನ್ನು ಬಾಂಬೆಯ ತಜ್ಞವೈದ್ಯ ಡಾ. ಜೆ.ಎ.ಎಲ್. ಪಟೇಲ್ ಬಳಿ ಗುಪ್ತವಾಗಿ ಇರಿಸಲಾಗಿತ್ತು. ಗಾಂಧಿ, ಮೌಂಟ್ ಬ್ಯಾಟನ್ ಮತ್ತು ನೆಹರೂ ಬಿಟ್ಟರೆ ಜಿನ್ನಾರ ಕುಟುಂಬ ವರ್ಗಕ್ಕೂ ಈ ಮಾಹಿತಿ ಇರಲಿಲ್ಲ ಎಂದು ಹೇಳಲಾಗುತ್ತದೆ. ಆದರೆ, ಎಷ್ಟೇ ಮುಂದೂಡಿದ್ದರೂ ಸಮಾಜದ ಆರೋಗ್ಯವೇ ಕೆಟ್ಟಿತ್ತಾದ್ದರಿಂದ ವಿಭಜನೆ ಅನಿವಾರ್ಯ ಎಂಬಂತಾಗಿತ್ತು ಮತ್ತು ಜಿನ್ನಾ ನೆಪವಾಗಿದ್ದರು.

ಅದೇನೇ ಇರಲಿ, ಜಿನ್ನಾ ನಿಧನಾನಂತರ ಸ್ಪಷ್ಟ ಧ್ಯೇಯೋದ್ದೇಶ ಇದ್ದ ನಾಯಕರಾರೂ ಆ ದೇಶಕ್ಕೆ ಸಿಗಲಿಲ್ಲ. ಆಡಳಿತ ಹಿಡಿದವರು ಭಾರತದ ಬಗ್ಗೆ ದ್ವೇಷವನ್ನಷ್ಟೇ ಮಸ್ತಕದಲ್ಲಿ ತುಂಬಿಕೊಂಡು ಅಮೆರಿಕದ ಕೈಗೊಂಬೆಯಾದರು. ರಾಜಕೀಯ ಹತ್ಯೆಗಳು ಸಾಮಾನ್ಯವಾದವು, ಪ್ರಜಾಪ್ರಭುತ್ವ ತೂಗುಯ್ಯಾಲೆಯಾಯಿತು. ಸರ್ವಾಧಿಕಾರ, ಮತೀಯವಾದಿ ಸರ್ಕಾರಗಳು ಪಾಕಿಸ್ತಾನವನ್ನು ಅಭಿವೃದ್ಧಿ ಪಥಕ್ಕೆ ತರಲಿಲ್ಲ. ಉಗ್ರರನ್ನು ತಯಾರು ಮಾಡುವ ಕಾರ್ಖಾನೆಯಾಗಿ ಪಾಕಿಸ್ತಾನ ಬದಲಾಯಿತು. ಇದೀಗ ತಾನು ಬೆಳೆದದ್ದನ್ನು ತಾನೇ ಉಣ್ಣುತ್ತಿದೆ. ‘ಧೂರ್ತ ರಾಷ್ಟ್ರ’, ‘ಭಯೋತ್ಪಾದಕರ ಸ್ವರ್ಗ’, ‘ಜಿಹಾದ್ ವಿಶ್ವವಿದ್ಯಾಲಯ’ ಎಂಬೆಲ್ಲಾ ಹಣೆಪಟ್ಟಿಯೊಂದಿಗೆ ಭೂಪಟದಲ್ಲಿದೆ. ಇಸ್ರೇಲ್ನಂತಹ ಕೆಲವು ರಾಷ್ಟ್ರಗಳು ಇಂದಿಗೂ ಪಾಕಿಸ್ತಾನವನ್ನು ಒಂದು ರಾಷ್ಟ್ರವಾಗಿ ಪರಿಗಣಿಸುವುದಿಲ್ಲ, ರಾಜತಾಂತ್ರಿಕ ಸಂಬಂಧ ಹೊಂದಿಲ್ಲ. ಅತ್ತ ಬಲೂಚಿಸ್ತಾನ ಪ್ರಾಂತ್ಯ ಭಾರತದೆಡೆಗೆ ಆಸೆಗಣ್ಣಿನಿಂದ ನೋಡುತ್ತಿದೆ. ಒಂದೊಮ್ಮೆ ಪ್ರತ್ಯೇಕತಾವಾದ ಬಲಗೊಂಡು ಆ ಪ್ರದೇಶವೂ ಕಡಿದು ಹೋದರೆ ಪಾಕಿಸ್ತಾನ ಇನ್ನಷ್ಟು ಕಿರಿದಾಗುತ್ತದೆ. ಹಾಗಾಗಿಯೇ ಬಲೂಚಿಸ್ತಾನದಲ್ಲಿ, ಭಾರತ ವಿಭಜನೆಗೆ ಸಂಬಂಧಿಸಿದ ಘಟನೆಗಳನ್ನು ಹೈಸ್ಕೂಲ್ ಹಂತದ ಶಾಲಾ ಪಠ್ಯದಲ್ಲಿ ಪಾಕಿಸ್ತಾನ ಸರ್ಕಾರ ತಂದಿದೆ. ತಪ್ಪು ಇತಿಹಾಸವನ್ನು ಓದಿಸುತ್ತಾ ಮಕ್ಕಳಲ್ಲಿ ಶಾಲಾ ಹಂತದಲ್ಲೇ ಭಾರತ ಕುರಿತು ಮಾತ್ಸರ್ಯದ ಬೀಜ ಬಿತ್ತುವ, ಪ್ರತೀಕಾರ ಮನೋಭಾವ ಹುಟ್ಟುಹಾಕುವ ಕೆಲಸ ಮಾಡುತ್ತಿದೆ.

ಕೊನೆಯದಾಗಿ, ಇಂಗ್ಲೆಂಡಿಗೆ ಮರಳುವ ಮುನ್ನ ಮೌಂಟ್ ಬ್ಯಾಟನ್ ‘ಪಾಕಿಸ್ತಾನ ರಚನೆ ಒಂದು ರೀತಿಯಲ್ಲಿ ತಾತ್ಕಾಲಿಕ ಡೇರೆ ನಿರ್ಮಿಸಿದಂತೆ, ಅದು ಭದ್ರ ಬುನಾದಿಯಿರುವ ಕಟ್ಟಡವಾಗಲಾರದು’ ಎಂದಿದ್ದರು. ಇಂದಿನ ಸ್ಥಿತಿಗತಿಗಳನ್ನು ಅವಲೋಕಿಸಿದರೆ ಭಯೋತ್ಪಾದನೆ, ಆರ್ಥಿಕ ಸಂಕಷ್ಟ, ರಾಜಕೀಯ ಅಸ್ಥಿರತೆ ಎಂಬ ಪ್ರಚಂಡ ಮಳೆ, ಮಾರುತಗಳ ನಡುವೆ ಆ ಡೇರೆ ಇನ್ನೆಷ್ಟು ದಿನ ಭದ್ರವಾಗಿ ಇರಬಲ್ಲದು ಎಂಬ ಪ್ರಶ್ನೆ ಮೂಡುತ್ತದೆ. ಪ್ರತ್ಯೇಕತಾವಾದ, ಮತೀಯ ದ್ವೇಷ, ಮೂಲಭೂತವಾದ ಸೃಷ್ಟಿಸಿದ ಕೆಡುಕಿನ ಕುರುಹಾಗಿ ಪಾಕಿಸ್ತಾನ ಕಾಣುತ್ತದೆ. ಭಾರತ ತುಳಿಯ ಬಾರದ ಹಾದಿಯನ್ನು ನೆನಪಿಸುತ್ತಿದೆ.

ಬಿಡಿ, ಕಾಲ ಸರಿದಂತೆ ಇತಿಹಾಸದ ಘಟನೆಗಳು ಮಾಸುತ್ತವೆ, ಕ್ರಮೇಣ ಬೇರೆಯದೇ ಬಣ್ಣ ಪಡೆದುಕೊಳ್ಳುತ್ತವೆ. ವಿರೂಪಗೊಂಡ ಇತಿಹಾಸ, ತಿರುಚಿದ ಸಂಗತಿಗಳು ಮುಂದಿನ ಪೀಳಿಗೆಯನ್ನು ಪ್ರೇರೇಪಿಸುವುದಿಲ್ಲ, ಎಚ್ಚರಿಸುವುದಿಲ್ಲ. ಭಾರತ ವಿಭಜನೆಗೆ 70 ತುಂಬಿದ ಈ ಸಂದರ್ಭದಲ್ಲಿ ನಮ್ಮ ಶಾಲಾ ಕಾಲೇಜುಗಳ ಇತಿಹಾಸ ಪಠ್ಯಗಳಲ್ಲಿ ಕಾಣಸಿಗದ ಕೆಲವು ಮಹತ್ವದ ಸಂಗತಿಗಳ ಮೆಲುಕು ಈ ಮೂರು ಲೇಖನಗಳಲ್ಲಿ ಸಾಧ್ಯವಾಗಿದೆ. ಇಷ್ಟು ಸಾಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.