ಶುಕ್ರವಾರ, ಸೆಪ್ಟೆಂಬರ್ 20, 2019
22 °C

ಕೊರೆ ಇಲ್ಲದ ವ್ಯವಸ್ಥೆ

ಗುರುರಾಜ ಕರ್ಜಗಿ
Published:
Updated:

 ಡಾ. ಕೆ.ಎಸ್. ಕೃಷ್ಣನ್ ಭಾರತ ಕಂಡಂತಹ ಅಪರೂಪದ ವಿಜ್ಞಾನಿಗಳಲ್ಲಿ  ಒಬ್ಬರು.  ಅವರು ಸರ್ ಸಿ.ವಿ. ರಾಮನ್‌ರ ಸಮಕಾಲೀನರು ಮತ್ತು ಸ್ನೇಹಿತರು. ಅವರ ಬಳಿಗೆ ಸಂಶೋಧನೆ ಮಾಡಲು ದೂರದೂರದಿಂದ ವಿದ್ಯಾರ್ಥಿಗಳು ಬರುತ್ತಿದ್ದರು.ಒಂದು ಬಾರಿ ಒಬ್ಬ ಹುಡುಗ ಸಂಶೋಧನೆಗಾಗಿ ಇವರ ತಂಡವನ್ನು ಸೇರಿಕೊಂಡ. ಡಾ. ಕೃಷ್ಣನ್ ಅವನನ್ನು ಹಿರಿಯ ವಿದ್ಯಾರ್ಥಿಗಳೊಂದಿಗೆ ಬಿಟ್ಟು ತನ್ನ ಆಸಕ್ತಿಯ ವಿಷಯವನ್ನು ಆರಿಸಿಕೊಳ್ಳಲು ಹೇಳಿದರು.  ಆ ಹುಡುಗ ಭಾರೀ ಬುದ್ಧಿವಂತನಂತೆ ಕಾಣುತ್ತಿದ್ದ. 

ಒಂದು ತಿಂಗಳು ಕಳೆಯಿತು. ಡಾ. ಕೃಷ್ಣನ್ ಹುಡುಗನನ್ನು ಕರೆದು ಯಾವ ವಿಷಯವನ್ನು ಆರಿಸಿಕೊಂಡೆ ಎಂದು ಕೇಳಿದರು. ಆತ,  ಸರ್, ನಾನೊಂದು ಅತ್ಯದ್ಭುತವಾದ ಸಂಶೋಧನೆಯನ್ನು  ಮಾಡಬೇಕೆಂದಿದ್ದೇನೆ.  ಆದ್ದರಿಂದ ವಿಷಯವನ್ನು ಇನ್ನೂ ತೀರ್ಮಾನ ಮಾಡಿಲ್ಲ  ಎಂದ. 

ಸರಿ, ಮತ್ತೊಂದು ತಿಂಗಳು ಕಳೆಯಿತು.  ಗುರುಗಳದು ಮತ್ತೆ ಅದೇ ಪ್ರಶ್ನೆ, ಶಿಷ್ಯನದು ಅದೇ ಉತ್ತರ.  ಮೂರು ತಿಂಗಳು ಕಳೆದ ಮೇಲೂ ಅದೇ ಉತ್ತರ ಬಂದಾಗ ಡಾ. ಕೃಷ್ಣನ್,  ನೋಡಪ್ಪ ಹುಡುಗ, ಪ್ರಾರಂಭದಲ್ಲೇ ಯಾವ ಸಂಶೋಧನೆಯೂ ಅದ್ಭುತವಾಗಿರುವುದಿಲ್ಲ.  ಚಿಂತನೆ ಬೆಳೆದಂತೆ ಅದ್ಭುತವಾಗುತ್ತದೆ.  ಪರಿಪೂರ್ಣ, ಆದರ್ಶವಾದ ಸಂಶೋಧನೆಯನ್ನೇ ಹುಡುಕುತ್ತ ಹೋದರೆ ನೀನು ಮುದುಕನಾಗಿಬಿಡುತ್ತೀಯ.  ನಿನಗೆ ತೋಚಿದ ವಿಷಯದ ಮೇಲೆ ಸಂಶೋಧನೆ ಮಾಡು, ಅದು ಮುಂದುವರೆದಂತೆ ಹೊಸ ಆಯಾಮಗಳು ದೊರೆತಾವು  ಎಂದರು.  ಹುಡುಗ ಸಂಶೋಧನೆ ಪ್ರಾರಂಭಿಸಿದ.ಇದನ್ನು ನೆನೆದಾಗ ಕಣ್ಣ ಮುಂದೆ ಬಂದದ್ದು ಜಾನ್ ಸ್ಟೀನ್‌ಬೆಕ್‌ನ ಖ್ಯಾತ ಕಥೆ  ದ ಪರ್ಲ್  (ಮುತ್ತು).  ಈ ಕಥೆಯಲ್ಲಿ ಸಮುದ್ರ ತೀರದಲ್ಲಿ ಅಡ್ಡಾಡುತ್ತಿರುವಾಗ ಒಬ್ಬ ವ್ಯಕ್ತಿಗೆ ಒಂದು ಸುಂದರವಾದ ಮುತ್ತು ಸಿಗುತ್ತದೆ.  ಅದನ್ನು ಮನೆಗೆ ತಂದು ತೊಳೆದು ನೋಡಿದಾಗ ಅದೊಂದು ಅತ್ಯಂತ ಸುಂದರವಾದ ಮತ್ತು ತುಂಬ ಬೆಲೆಬಾಳುವ ಮುತ್ತು ಎಂಬುದು ಗೊತ್ತಾಗುತ್ತದೆ. 

ಅದನ್ನು ಇನ್ನೂ ಬೆಳಕಿನಲ್ಲಿ ನೋಡಿದಾಗ ಒಂದು ಬದಿಯಲ್ಲಿ  ಸಣ್ಣದಾದ ಕಪ್ಪು ಚುಕ್ಕೆ ಇರುವುದು ಕಾಣುತ್ತದೆ.  ಛೇ ಇಷ್ಟು ಚೆಲುವಾದ ಮುತ್ತಿನಲ್ಲಿ ಈ ಪುಟ್ಟ ದೋಷ ಉಳಿದುಬಿಟ್ಟಿದೆಯಲ್ಲ ಎಂಬ ಚಿಂತೆ ಬಾಧಿಸುತ್ತದೆ.  ಈ ಚಿಕ್ಕ ದೋಷವೊಂದನ್ನು ತೆಗೆದುಬಿಟ್ಟರೆ ಅದೊಂದು ಪರಿಪೂರ್ಣವಾದ ಮುತ್ತು ಆಗುತ್ತದೆಂದು ಆ ದೋಷವನ್ನು ಸರಿಪಡಿಸಲು ಹೋಗುತ್ತಾನೆ. ಮುತ್ತಿನ ಮೇಲಿನ ಒಂದು ಪದರನ್ನು ತೆಗೆದುಬಿಟ್ಟರೆ ಕಲೆ ಹೋಗುತ್ತದೆಂದು ಭಾವಿಸಿ ಅದನ್ನು ತೆಗೆದ.  ಪದರು ಹೋಯಿತು ಆದರೆ ಪುಟ್ಟ ಕಪ್ಪು ಚುಕ್ಕೆ ಅಲ್ಲಿಯೇ ಉಳಿದಿತ್ತು.  ಆತ ಮತ್ತೊಂದು ಪದರನ್ನು ತೆಗೆದ,  ಆನಂತರದ್ದನ್ನು ತೆಗೆದ. ಹೀಗೆಯೇ ಪದರು ಪದರುಗಳನ್ನು ಅತ್ಯಂತ ಕಾಳಜಿಯಿಂದ ತೆಗೆದ. ಕೊನೆಗೆ ಎಲ್ಲ ಪದರುಗಳನ್ನು ತೆಗೆದ. 

ಈಗ ಕಲೆ ಸಂಪೂರ್ಣ ಮಾಯವಾಗಿತ್ತು.  ಅದರೊಂದಿಗೆ ಮುತ್ತೂ ಮಾಯವಾಗಿತ್ತು.  ಒಂದು ಚಿಕ್ಕ ಕಲೆಯನ್ನು ತೆಗೆಯಲು  ಹೋಗಿ ಸುಂದರವಾದ ಮುತ್ತನ್ನೇ ಕಳೆದುಕೊಂಡಿದ್ದ. ಜೀವನದಲ್ಲೂ ಆದರ್ಶ, ಪರಿಪೂರ್ಣವೆಂಬುದು ಕೇವಲ ಕಲ್ಪನೆ. ಆ ಎತ್ತರವನ್ನು ಮುಟ್ಟಿದ್ದೇವೆಂದು ತಿಳಿದುಕೊಂಡಾಗ ಅಲ್ಲೂ ದೋಷಗಳು, ಕಲೆಗಳು ಕಾಣುತ್ತವೆ.  ದೂರದಲ್ಲಿ ಮತ್ತೊಂದು ಆದರ್ಶದ ಗೋಪುರ ತೋರುತ್ತದೆ.  ಅದನ್ನು ಸಾಧಿಸುವ ಪ್ರಯತ್ನ ಮತ್ತೆ ನಡೆಯುತ್ತದೆ.  ಹೀಗೆಯೇ ಹಂತ ಹಂತವಾಗಿ ಜೀವ ಉನ್ನತಿಯನ್ನು ಸಾಧಿಸುತ್ತದೆ.ಒಂದು ಕಲೆ, ಒಂದು ದೋಷ, ಒಂದು ಕೊರತೆ ಇಲ್ಲದ ವ್ಯಕ್ತಿ ಇಲ್ಲ,  ಸಮಾಜವಿಲ್ಲ, ದೇಶವಿಲ್ಲ, ಚಿಂತನೆಯಿಲ್ಲ.  ನಾವು ಮತ್ತೊಬ್ಬರನ್ನು ನೋಡಿ ಅವರೆಷ್ಟು ಚೆನ್ನಾಗಿದ್ದಾರೆ, ಪರಿಪೂರ್ಣರಾಗಿದ್ದಾರೆ ಎಂದು ಚಿಂತಿಸಿ ಸೊರಗುತ್ತೇವೆ. 

ಅವರ ಚಿಂತೆ ಅವರಿಗೇ ಗೊತ್ತು.  ಬಡವರಿಗೆ ಬಡತನದ ಚಿಂತೆ, ಶ್ರಿಮಂತರಿಗೆ ಶ್ರಿಮಂತಿಕೆಯನ್ನು ಮುಚ್ಚಿಡುವ ಚಿಂತೆ, ಅಲ್ಪನಿಗೆ ಸಾಧನೆಯ ಚಿಂತೆ, ಸಾಧಕನಿಗೆ ಸಾಧನೆಯನ್ನು ಉಳಿಸಿಕೊಳ್ಳುವ ಚಿಂತೆ. 

ಮಕ್ಕಳಿಲ್ಲದವರಿಗೆ ಮಕ್ಕಳು ಬೇಕೆಂಬ ಚಿಂತೆ, ಮಕ್ಕಳಿದ್ದವರಿಗೆ ಅವರನ್ನು ಬೆಳೆಸುವ, ಕೆಲವರಿಗೆ ಅವರನ್ನು ಸಹಿಸುವ ಚಿಂತೆ.  ಹೀಗೆ ಕೊರೆ ಇಲ್ಲದ ಆದರ್ಶ ವ್ಯವಸ್ಥೆ ಇಲ್ಲ.  ಆದ್ದರಿಂದಲೇ ದೇವರೆಂಬ ಚಿಂತನೆ ಬಂದದ್ದು. 

ಅತ್ಯಂತ ಆದರ್ಶವಾದ, ಪರಿಪೂರ್ಣವಾದ ದೇವರು ಇದ್ದಾನೆ,  ಅವನು ನಮ್ಮ ಕೊರೆಯನ್ನು ದೂರಮಾಡುತ್ತಾನೆ ಎಂಬ ನಂಬಿಕೆ ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ. 

 

Post Comments (+)