ಗುರುವಾರ , ಮೇ 6, 2021
25 °C

ಗ್ರಾಮಾಭಿವೃದ್ಧಿ: ವೈಫಲ್ಯದಿಂದ ಪಾಠ ಕಲಿಯದ ಸರ್ಕಾರ

ಎಂ ನಾಗರಾಜ್ Updated:

ಅಕ್ಷರ ಗಾತ್ರ : | |

ಗ್ರಾಮಾಭಿವೃದ್ಧಿ: ವೈಫಲ್ಯದಿಂದ ಪಾಠ ಕಲಿಯದ ಸರ್ಕಾರ

ನರ ಸಹಭಾಗಿತ್ವವಿದ್ದರೆ ಊರು ಸುಧಾ­­­ರ­ಣೆಯಾಗುತ್ತದೆ ಎಂಬುದಕ್ಕೆ ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಕೋಗನೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನಾಗರ­ಮಡುವು ಗ್ರಾಮ ಸಾಕ್ಷಿಯಾಗಿದೆ. ಹಲವಾರು ವರ್ಷಗಳಿಂದ ಕುಗ್ರಾಮಗಳಲ್ಲಿ ಒಂದಾಗಿದ್ದ ಈ ಹಳ್ಳಿಯಲ್ಲಿ ದಿಢೀರನೇ ಬದ­ಲಾ­ವಣೆಯಾಗಿದೆ.

ಇದಕ್ಕೆ ಮುಖ್ಯ ಕಾರಣ ಊರಿನ ಮಹಿಳೆಯರು. ಮನೆ–ಮಕ್ಕಳ ಮೇಲೆ ಕಾಳಜಿ ವಹಿಸುವಂತೆಯೇ, ಮಹಿಳೆ­ಯರು ಒಟ್ಟಾಗಿ ಊರಿನ ಮೇಲೂ ಕಾಳಜಿ ತೋರಿ­ದ್ದಾರೆ. ಆ ಮೂಲಕ ಗ್ರಾಮದ ಅಭ್ಯುದ­ಯಕ್ಕೆ ಕಾರಣೀಭೂತರಾಗಿದ್ದಾರೆ. ಚಕ್ಕಡಿಯೂ ಸಲೀಸಾಗಿ ಹೋಗಲಾ­ಗ­ದಂತಹ ರಸ್ತೆಗಳು; ಎಲ್ಲ ಊರುಗಳಂತೆಯೇ ರಸ್ತೆಯ ಮೇಲೇ ಹರಿಯುವ ಕೊಳಚೆ ನೀರು; ಓಡಾ­ಡಲು ಅಸಹ್ಯಪಡಬೇಕಾದ ಸ್ಥಿತಿ; ಬಯಲು ಶೌಚಾಲಯ; ರಸ್ತೆ ಒತ್ತುವರಿ... ಎಲ್ಲ­ವನ್ನೂ ಕಂಡು ರೋಸಿ ಹೋಗಿದ್ದ ಈ ಗ್ರಾಮದ ಮಹಿಳೆಯರು, ಮೊಟ್ಟ ಮೊದಲು ಮಾಡಿದ ಕೆಲಸವೆಂದರೆ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದವರ ಮನ­ವೊಲಿಕೆ! ನಂತರ ಒತ್ತುವರಿ ತೆರವುಗೊಳಿಸಿ, ರಸ್ತೆ­ಯನ್ನು ಉತ್ತಮ ಸ್ಥಿತಿಗೆ ತಂದಿದ್ದಾರೆ.

ಅಲ್ಲದೇ, ಕೊಳಚೆ ನೀರು ರಸ್ತೆಗೆ ಬಾರದಂತೆ ಚರಂಡಿ ನಿರ್ಮಿಸುವ ಮೂಲಕ ಇತರ ಹಳ್ಳಿ­ಗಳಿಗೆ ಮಾದರಿಯಾಗಿದ್ದಾರೆ. ಇದಕ್ಕಿಂತಲೂ ಮುಖ್ಯ­ವಾಗಿ ಗ್ರಾಮದಲ್ಲಿರುವ 250 ಮನೆಗಳ ಪೈಕಿ 230ಕ್ಕೆ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಿಕೊಂಡು ಗ್ರಾಮ ನೈರ್ಮಲ್ಯಕ್ಕೂ ಒತ್ತು ನೀಡಿದ್ದಾರೆ. ಊರಿನ ಕೆಲಸಕ್ಕೆ ಅಲ್ಲಿಯ ನಿವಾಸಿಗಳೆಲ್ಲರೂ ಒಟ್ಟಾಗಿ ಕೈಜೋಡಿಸಿದ್ದಾರೆ. ಇಲ್ಲಿ ಪರಸ್ಪರ ಸಹ­ಕಾರ–ಸಹಭಾಗಿತ್ವ ಕೆಲಸ ಮಾಡಿದೆ. ಜನರು ಮನಸ್ಸು ಮಾಡಿದರೆ ಎಂತಹ ಕೆಲ­ಸವೂ ಸುಲಭ ಎಂಬುದನ್ನು ನಾಗರಮಡುವು ಗ್ರಾಮ­ಸ್ಥರು ಸಾಬೀತು ಮಾಡಿದ್ದಾರೆ. ಅವರ ಈ ಕೆಲಸ ಇತರೆ ಗ್ರಾಮಗಳಿಗೆ ಆದರ್ಶಪ್ರಾಯವಾಗಿದೆ.ಸರ್ಕಾರ ರೂಪಿಸಿದ ‘ಮಾದರಿ ಗ್ರಾಮ’, ‘ಸ್ವಚ್ಛ ಗ್ರಾಮ’ ‘ಸುವರ್ಣ ಗ್ರಾಮ’ ಯೋಜನೆ­ಗಳು ಅನೇಕ ಕಡೆ ಹಳ್ಳ ಹಿಡಿದಿವೆ. ವಾಸ್ತವ ಸಂಗತಿ ಹೀಗಿರುವಾಗ ಇಂತಹ ಯಾವ ಯೋಜನೆ ಗ್ರಾಮಕ್ಕೆ ಮಂಜೂರು ಆಗಿಲ್ಲದಿ­ದ್ದರೂ ತಾಲ್ಲೂಕು ಪಂಚಾಯ್ತಿ ಕಾರ್ಯ­ನಿರ್ವಹ­ಣಾಧಿಕಾರಿ ವೈ.ಎಂ.ಹಂಪಣ್ಣ ಅವರು ನೀಡಿದ ಮಾಹಿತಿ, ಸಲಹೆ, ಸೂಚನೆಗಳನ್ನು ರೂಢಿಸಿಕೊಂಡು ಜನರೇ ಗ್ರಾಮಾಭಿವೃದ್ಧಿಗೆ ಮುಂದಾ­ದರು. ಈ ಗ್ರಾಮದ ಮಹಿಳೆಯರ ಆಸಕ್ತಿ­ಯನ್ನು ಗಮನಿಸಿದ ಹಂಪಣ್ಣ, ಸರ್ಕಾ­ರದ ವಿವಿಧ ಯೋಜನೆಗಳ ಮೂಲಕ ಹಣ ಒದಗಿಸಿ ಗ್ರಾಮವನ್ನು ಸ್ವಚ್ಛವಾಗಿಸಲು ನೆರವಾ­ಗಿ­ದ್ದಾರೆ.

ಇದೇ ರೀತಿಯ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ತಾಲ್ಲೂ­ಕಿನ ಎಲ್ಲ  86 ಗ್ರಾಮಗಳಲ್ಲೂ ಮಾಡಲಾ­ಗಿದೆ. ಆದರೆ ಶೌಚಾಲಯಗಳನ್ನು ಕಟ್ಟಿ­ಕೊಳ್ಳಲು ಮುಂದಾದ ಗ್ರಾಮಗಳ ಸಂಖ್ಯೆ ನಾಗರ­ಮಡುವು ಜತೆಗೆ ಇನ್ನೆರಡು ಮಾತ್ರ. ಉಳಿದೆಡೆ ಗ್ರಾಮ ನೈರ್ಮಲ್ಯ ಕಾರ್ಯ­ಕ್ರಮ­ಗಳ ಬಗ್ಗೆ ಜನರು ಆಸಕ್ತಿ ತೋರುತ್ತಿಲ್ಲ. ನಮ್ಮ ಊರು ಚೆನ್ನಾಗಿರುವಂತೆ ನೋಡಿಕೊಳ್ಳುವಲ್ಲಿ ನಮ್ಮ ಪಾತ್ರವೂ ಇದೆ ಎಂಬುದನ್ನು ಜನರು ಅರಿತುಕೊಂಡು ಅಭಿವೃದ್ಧಿ ಪಥದತ್ತ ಹೆಜ್ಜೆ ಇಡಲು ಮುಂದಾಗಬೇಕಿತ್ತು. ಆದರೆ ತಮ್ಮ ಹಕ್ಕಿನ ಸೌಕರ್ಯಗಳನ್ನು ಪಡೆದುಕೊಳ್ಳಬೇಕು ಎಂಬ ಅರಿವು ಇನ್ನೂ ಉಳಿದ ಊರುಗಳ ಜನರಲ್ಲಿ ಮೂಡಿಲ್ಲ ಎಂದೆನಿಸುತ್ತದೆ.

ಭಾಷಣ ಕೇಳಿ ಸುಮ್ಮನೆ ಮನೆಗೆ ಹೋಗದ ನಾಗರ­ಮಡುವು ಗ್ರಾಮದ ಸ್ತ್ರೀಶಕ್ತಿ ಸ್ವಸಹಾಯ ಸಂಘದ ಮಹಿಳೆಯರು ಗ್ರಾಮಕ್ಕೆ ಆಗ­ಬೇಕಾದ ಕೆಲಸಗಳ ಪಟ್ಟಿ ಮಾಡಿಕೊಂಡು ಅವು­ಗಳ ಜಾರಿಗೆ ಮುಂದಾದರು. ಈ ಕಾರಣ­ದಿಂದಲೇ ಇಂದು ಆ ಗ್ರಾಮ ಸುಧಾ­ರಣೆಯತ್ತ ಮುಖ ಮಾಡಿದೆ ಎಂಬುದನ್ನು ಇತರೆ ಹಳ್ಳಿಗಳ ಜನರೂ ಅರಿತು, ಅಳವಡಿಸಿಕೊಳ್ಳಬೇಕು. ಗ್ರಾಮೀಣ ಭಾಗದ ಜನರ ಅಗತ್ಯಕ್ಕೆ ಅನುಗುಣವಾಗಿ ಕಾರ್ಯ­ಕ್ರಮ­ಗಳನ್ನು ರೂಪಿಸಿದರೆ ಎಲ್ಲವೂ ಸಾಧ್ಯ­ವಾಗು­ತ್ತದೆ ಎಂಬುದಕ್ಕೆ ಈ ಊರು ನಿದ­ರ್ಶನ. ನೈರ್ಮಲೀಕರಣದ ಬಗ್ಗೆ ತಿಳಿಸಿ­ಕೊಡು­ವಾಗ ಗ್ರಾಮೀಣ ಜನರಿಗೆ ಮನಮುಟ್ಟುವಂತೆ ಹೇಳ­ಬೇಕು. ಮೊದಲು ಅವರ ವಿಶ್ವಾಸ ಗಳಿಸ­ಬೇಕು. ನಂತರ ಪರಿವರ್ತನೆ ತರಬಹುದು.ನಮ್ಮಲ್ಲಿ ಸರ್ಕಾರ ರೂಪಿಸುವ ನಾನಾ ಗ್ರಾಮೀಣಾ­ಭಿವೃದ್ಧಿ ಯೋಜನೆಗಳು ಸಮ­ರ್ಪಕ­ವಾಗಿ ಜಾರಿಯಾಗುವುದಿಲ್ಲ. ಇದಕ್ಕೆ ಮುಖ್ಯ ಕಾರಣ ಎಲ್ಲೋ ಕುಳಿತು ಹಳ್ಳಿಗೆ ಆಗ­ಬೇಕಾದ ಯೋಜನೆಯನ್ನು ರೂಪಿಸುವ ಪದ್ಧತಿ. ಇಂತಹ ಯೋಜನೆಗಳನ್ನು ಗ್ರಾಮ­ಗಳಲ್ಲಿ ಜಾರಿ ಮಾಡಲು ನಾನಾ ಅಡ್ಡಿಗಳು ಎದುರಾ­ಗುವುದು ಸಹಜ. ಆದ್ದರಿಂದಲೇ ಪಂಚಾ­ಯತ್‌ ರಾಜ್ ವ್ಯವಸ್ಥೆ ಜಾರಿಯಾದ ಮೇಲೆ ಗ್ರಾಮಗಳಿಗೆ ಅಗತ್ಯವಿರುವ ಕಾಮ­ಗಾರಿ­­ಗಳನ್ನು ಗ್ರಾಮಸಭೆಗಳಲ್ಲೇ ತೀರ್ಮಾ­ನಿ­ಸ­ಬೇಕು ಎಂಬ ನಿಯಮ ರೂಪಿಸಿರುವುದು. ಅದನ್ನು ಆಧರಿಸಿ ಸರ್ಕಾರ ನೀತಿ ರೂಪಿಸ­ಬೇಕು.

ಆದರೆ ಈಗಲೂ ಎಷ್ಟೋ ಕಡೆ ಗ್ರಾಮ­ಸಭೆಗಳೇ ನಡೆಯುವುದಿಲ್ಲ. ಇನ್ನು ಜನರಿಗೆ ಅಗತ್ಯ­ವಾದ ಯೋಜನೆಗಳನ್ನು ಕೈಗೆತ್ತಿ­ಕೊಳ್ಳು­ವುದು ಹೇಗೆ ಸಾಧ್ಯ? ಹಾಗಾಗಿಯೇ ಸರ್ಕಾರ ಘೋಷಿಸುವ ಅನೇಕ ಯೋಜನೆಗಳು ಕಾಗ­ದದ ಮೇಲೆ ಮಾತ್ರ ಇರುತ್ತವೆ. ಇಲ್ಲವೇ, ಯಾವುದೋ ಕಾಮಗಾರಿಗೆ ಮಂಜೂರಾತಿ ಪಡೆದು­ಕೊಳ್ಳುವುದರ ಹಿಂದೆ ಇನ್ನಾರದೋ ಹಿತ ಅಡಗಿರುತ್ತದೆ. ಅದರ ಅವಶ್ಯಕತೆ ಗ್ರಾಮ­ಕ್ಕಿಲ್ಲದಾಗ ಅದರ ಮೇಲೆ ಯಾರಿಗೂ ಲಕ್ಷ್ಯ­ವಿರದು. ಆಗ ಅದರ ಅನುಷ್ಠಾನವೂ ಸಮ­ರ್ಪಕ­ವಾಗಿರುವುದಿಲ್ಲ. ರೊಕ್ಕ ಖರ್ಚಾಗಿರು­ತ್ತದೆ ಅಷ್ಟೆ.

ಉತ್ತರ ಕರ್ನಾಟಕದಲ್ಲಿ ‘ಸ್ವಚ್ಛ ಗ್ರಾಮ’, ‘ಸುವರ್ಣ ಗ್ರಾಮ’ ಮತ್ತಿತರ ಯೋಜನೆ­ಗಳು ಅನುಷ್ಠಾನಗೊಂಡ ಹಳ್ಳಿಗಳಿಗೆ ಭೇಟಿ ನೀಡಿದರೆ ಈ ಮಾತಿನ ಸತ್ಯಾಂಶ ಗೊತ್ತಾ­ಗುತ್ತದೆ. ಯೋಜನೆಗಳು ಬರುವ ಮುಂಚೆ ಆ ಗ್ರಾಮಗಳು ಹೇಗಿದ್ದವೋ ಯೋಜನೆ­ಗಳ ಹಣ ವ್ಯಯವಾದ ಬಳಿಕವೂ ಹಾಗೇ ಇವೆ. ಪಂಚಾಯತ್‌ರಾಜ್ ವ್ಯವಸ್ಥೆಯ ತಿರುಳೇ ಸಹಭಾಗಿತ್ವ. ನೀತಿ ನಿರೂಪಕರು ಇದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಸಾರ್ವಜನಿ­ಕರು, ಅಧಿಕಾರಿಗಳು, ನೌಕರರು, ಚುನಾ­ಯಿತ ಪ್ರತಿನಿಧಿಗಳು ಗ್ರಾಮದ ಏಳಿಗೆಗೆ ಒಟ್ಟಾಗಿ ಕೈಜೋಡಿಸಬೇಕು. ಪರಸ್ಪರ ಸಹ­ಕಾರ, ಸಮನ್ವಯತೆ ಇದ್ದರೆ ಕೆಲಸ ಖಂಡಿತ ಆಗು­ತ್ತದೆ. ಆಗಷ್ಟೇ ರಾಮರಾಜ್ಯ ನಿರ್ಮಾಣ ಸಾಧ್ಯ. ಇಲ್ಲದಿದ್ದರೆ ಇದು ಬರೀ ಭಾಷಣದ ಸರಕಾಗುತ್ತದೆ.ಗ್ರಾಮೀಣ ಪ್ರದೇಶದಲ್ಲಿ ಅನೇಕ ಅಭಿವೃದ್ಧಿ ಕಾರ್ಯ­ಗಳ ಜಾರಿಗೆ ಸ್ವತಃ ಗ್ರಾಮ ಪಂಚಾಯ್ತಿ ಸದಸ್ಯರೇ ಅಡಚಣೆಯಾ­ಗು­ತ್ತಾರೆ ಎಂಬ ಆರೋಪಗಳನ್ನು ತಳ್ಳಿಹಾಕು­ವಂತಿಲ್ಲ. ಅದೂ ತಮ್ಮ ಗಮನಕ್ಕೆ ತರದೇ ಕಾಮ­ಗಾರಿ ಕೈಗೆತ್ತಿಕೊಳ್ಳಲಾಗಿದೆ ಅಥವಾ ತಮ್ಮ ವಿರೋಧಿ ನಿರ್ವಹಿಸಿದ ಕಾಮಗಾರಿಗೆ ಹಣ ಪಾವತಿ ಮಾಡಬಾರದು ಎಂಬಂತಹ ಕ್ಷುಲ್ಲಕ ಸಂಗತಿಗಳು ಅಭಿವೃದ್ಧಿಗೆ ಅಡ್ಡಿಯಾ­ಗಿವೆ. ಇದರಲ್ಲಿ ರಾಜಕೀಯ ಲಾಭ ಪಡೆ­ಯುವ ಹುನ್ನಾರವೂ ಅಡಗಿರುತ್ತದೆ. ಇದ­ನ್ನೆಲ್ಲಾ ಮನಗಂಡೇ ಗ್ರಾಮ ಪಂಚಾಯ್ತಿಗೆ ಪಕ್ಷಾ­­ತೀತವಾಗಿ ಚುನಾವಣೆ ನಡೆಸಲಾ­ಗು­ತ್ತಿದೆ.

ಆದರೂ ಒಂದಲ್ಲ ಒಂದು ಪಕ್ಷ­ದೊಂದಿಗೆ ಗುರುತಿಸಿಕೊಂಡಿರುವ ಸದಸ್ಯರು ಅಭಿ­ವೃದ್ಧಿಯಲ್ಲೂ ರಾಜಕೀಯವನ್ನೇ ಮಾಡು­­­ತ್ತಾರೆ. ಇದು ಸರಿಯಲ್ಲ. ಇಡೀ ಗ್ರಾಮದ ಅಭಿವೃದ್ಧಿ ಅವರ ಧ್ಯೇಯವಾಗ­ಬೇಕು. ಚುನಾಯಿತ ಪ್ರತಿನಿಧಿಗಳು ಬದ್ಧತೆ, ಪ್ರಾಮಾ­ಣಿಕತೆ, ನಿಷ್ಠೆ ರೂಢಿಸಿಕೊಂಡರೆ ಗ್ರಾಮ­ಗಳು ಅಭಿವೃದ್ಧಿ ಹೊಂದುವುದರಲ್ಲಿ ಸಂಶಯವಿಲ್ಲ. ಇನ್ನು ಇತ್ತೀಚಿನ ದಿನಗಳಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬರುವ ಸರ್ಕಾರಗಳಿಗೆ ಹೊಸ ಯೋಜನೆ­ಗಳನ್ನು ಪ್ರಕಟಿಸುವುದು ಒಂದು ರೀತಿಯ ‘ಫ್ಯಾಷನ್’ ಆಗಿದೆ. ಜತೆಗೆ ಅವನ್ನು ತಮ್ಮ ಪಕ್ಷ ಸಂಘಟನೆಗೆ ಬಳಸಿಕೊಳ್ಳುವ ಉದ್ದೇಶ ಢಾಳಾಗಿ ಎದ್ದು ಕಾಣುತ್ತದೆ. ಬರೀ ಜನ­ಪ್ರಿಯ ಯೋಜನೆಗಳು ಚುನಾವಣೆಯಲ್ಲಿ ಗೆಲುವಿನ ದಡ ಮುಟ್ಟಿಸುವುದಿಲ್ಲ ಎಂಬುದು ಗೊತ್ತಿದ್ದರೂ ಸರ್ಕಾರಗಳು ಪೈಪೋಟಿಗೆ ಬಿದ್ದಂತೆ ಇಂಥ ಕಾರ್ಯಕ್ರಮಗಳನ್ನು ಪ್ರಕಟಿ­ಸು­ತ್ತಿವೆ.

ಹೀಗಾಗಿಯೇ ನಮ್ಮಲ್ಲಿ ಯೋಜನೆ­ಗಳು ಮತ್ತು ಕಾರ್ಯಕ್ರಮಗಳು ದಂಡಿಯಾ­ಗಿವೆ. ಅವುಗಳು ಅನುಷ್ಠಾನಗೊಂಡಿವೆಯೇ? ಅವುಗಳಿಂದ ಜನರಿಗೆ ಅನುಕೂಲವಾಗಿ­ದೆಯೇ? ಸರ್ಕಾರದ ಉದ್ದೇಶ ಈಡೇರಿ­ದೆಯೇ ಎಂಬ ಕುರಿತು ಮೌಲ್ಯಮಾಪನ ನಡೆ­ಯು­ತ್ತಿಲ್ಲ. ಕಾರ್ಯಕ್ರಮಗಳ ಘೋಷ­ಣೆಗೆ ನೀಡುವ ಒತ್ತನ್ನು ರಾಜಕೀಯ ಪಕ್ಷಗಳು ಅನು­­ಷ್ಠಾನಕ್ಕೂ ನೀಡಿದ್ದಿದ್ದರೆ ಈ ವೇಳೆಗೆ ಭಾರತ ಅಭಿವೃದ್ಧಿ ಹೊಂದಿದ ದೇಶವಾಗಿರ­ಬೇಕಿತ್ತು. ಈಗಿನಂತೆ ಕನಿಷ್ಠ ಸೌಕರ್ಯಕ್ಕೂ ಜನರು ಪರದಾಡಬೇಕಾದ ಸ್ಥಿತಿ ಇರುತ್ತಿ­ರಲಿಲ್ಲ. ಇಷ್ಟಾಗಿಯೂ ವೈಫಲ್ಯಗಳಿಂದ ಸರ್ಕಾರ ಪಾಠ ಕಲಿತಿಲ್ಲದಿರುವುದು ಬೇಸರದ ಸಂಗತಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.