ಶುಕ್ರವಾರ, ಫೆಬ್ರವರಿ 26, 2021
27 °C

ಜನಪದ ಗಮ್ಮತ್ತು : ಅಂದಿನ ಕತೆ, ಇಂದಿನ ಸಮಸ್ಯೆ

ಗಂಗಾಧರ ಮೊದಲಿಯಾರ್ Updated:

ಅಕ್ಷರ ಗಾತ್ರ : | |

ಜನಪದ ಗಮ್ಮತ್ತು : ಅಂದಿನ ಕತೆ, ಇಂದಿನ ಸಮಸ್ಯೆ

ಸ್ಪೈಡರ್‌ಮ್ಯಾನ್ ಹೊಸ ಆವೃತ್ತಿ ಇತ್ತೀಚೆಗೆ ತೆರೆ ಕಂಡಿತು. ಕನ್ನಡದಲ್ಲಿ `ಭಾಗೀರತಿ~, `ಕಠಾರಿವೀರ ಸುರಸುಂದರಾಂಗಿ~ ಅದೇ ತಿಂಗಳಲ್ಲಿ ತೆರೆಕಂಡಿತು. ಈ ಮೂರೂ ಚಿತ್ರಗಳು ಜನಪದ. ಬೆಂಗಳೂರಿನಲ್ಲಿ ಎರಡೂ ಭಾಷೆಯ ಚಿತ್ರವನ್ನು ಜನ ನೋಡಿದರು. ಜನಪದ ಎನ್ನುವುದಕ್ಕೆ ದೇಶದ, ಭಾಷೆಯ ಗಡಿ ಯಾವುದೂ ಇಲ್ಲ. ಇಂದಿನ ಸಿನಿಮಾ ಸಂಸ್ಕೃತಿ ಜಾನಪದದ ವಿಸ್ತೃತ ಆವೃತ್ತಿ.ಈಗ ಸಿನಿಮಾ ಉದ್ಯಮದಲ್ಲಿ ರಚನೆಯಾಗುತ್ತಿರುವ ಕಥಾಜಗತ್ತನ್ನು ಗಮನಿಸಿದರೆ, ಗ್ರಾಫಿಕ್ ತಂತ್ರಜ್ಞಾನದ ಪರಿಧಿಯನ್ನು ನೋಡಿದರೆ, ಟಿವಿ ಚಾನಲ್ಲುಗಳ ಸ್ಪರ್ಧೆ ಎದುರಿಸಲು ಸಿನಿಮಾದ ಜನ ಸೃಷ್ಟಿಸುತ್ತಿರುವ ಅತಿಮಾನುಷ ಕತೆಗಳನ್ನು ಕಂಡರೆ ಜಾನಪದ ದೃಶ್ಯ ಮಾಧ್ಯಮದಲ್ಲಿ ಆವಾಹನೆಯಾಗಿ ಪ್ರವಹಿಸುತ್ತಿರುವುದು ಎದ್ದು ಕಾಣುತ್ತಿದೆ.ಜಾನಪದದ ವ್ಯಾಪ್ತಿ ದೊಡ್ಡದು. ಭೂಲೋಕ ಬಿಟ್ಟು ಬಾಹ್ಯಾಕಾಶದಲ್ಲಿನ ಬೇರೊಂದು ಲೋಕದಲ್ಲಿ ಮನೆ ಮಾಡಿ ಅಲ್ಲಿನ ಜೀವಿಗಳೊಂದಿಗೆ ವ್ಯವಹರಿಸುವ ಚಿತ್ರಗಳೂ ಕೂಡ ಒಂದು ಜನಪದ ಕಲ್ಪನೆ. ಅದೃಶ್ಯ ರೂಪಗಳೊಂದಿಗೆ ನಡೆಸುವ ಸಾಹಸ, ಭೂತ, ಪಿಶಾಚಿಗಳ ಕಲ್ಪನೆ, ರಾಕ್ಷಸರೊಂದಿಗೆ ಸಂಘರ್ಷ ಹೀಗೆ ಮನುಷ್ಯನ ಕಲ್ಪನೆಗೆ ತಕ್ಕಂತೆ ದೃಶ್ಯಾವಳಿಗಳು ಬೆಳೆಯುತ್ತಾ ಹೋಗುತ್ತದೆ.ಮಾನವ ದೇವಲೋಕಕ್ಕೆ ಹೋಗಿ ಯಮನನ್ನು ಗೆದ್ದು ಬರುವ ಕಲ್ಪನೆ, ಭೂತವೊಂದನ್ನು ಬಾಟಲಿಯಲ್ಲಿಟ್ಟುಕೊಂಡು ಅದರ ಮೂಲಕ ಅಸಾಮಾನ್ಯ ಸಾಹಸಗಳನ್ನು ಮೆರೆಯುವುದು, ರಾಜ್ಯಕ್ಕಾಗಿ, ರಾಜಕುಮಾರಿಗಾಗಿ ಏಳು ಸಮುದ್ರ ದಾಟಿ ಹೋಗುವುದು ಇವೆಲ್ಲಾ ಅತಿಮಾನುಷ ಕಲ್ಪನೆಗಳು ಜನಪದದ ಖಜಾನೆಯನ್ನು ತುಂಬಿವೆ.

 

ಸಿನಿಮಾ ಆರಂಭದಿಂದಲೂ ದೃಶ್ಯವೈಭವಕ್ಕಾಗಿ ಇಂತಹ ಕತೆಗಳೇ ಜನಪದದ ಹೆಸರಿನಲ್ಲಿ ಬಂದಿವೆ. ಹ್ಯಾರಿಪಾಟರ್ ಅದಕ್ಕೆ ಮತ್ತಷ್ಟು ವಾಣಿಜ್ಯ ದೃಷ್ಟಿಕೋನವನ್ನು ತುಂಬಿತು. ಆದರೆ ಇಂತಹ ಕತೆಗಳನ್ನು ಹೆಣೆಯುವ ಜನಪದೀಯರು ಕೂಡ ಸಾಮಾಜಿಕವಾಗಿ ದುರ್ಬಲರಾಗಿದ್ದರು.ಈ ಕಟು ವ್ಯವಸ್ಥೆಯ ಒಳಗೇ ಅವರು ಎಲ್ಲ ಸುಖ, ಸಂತೋಷ, ದುಃಖ-ದುಮ್ಮಾನಗಳನ್ನು ಅನುಭವಿಸುತ್ತಿದ್ದರು. ವ್ಯವಸ್ಥೆಯೊಂದನ್ನು ರೂಪಿಸಿ, ತಾವೇ ಹಾಕಿಕೊಂಡ ಬಂಧದಲ್ಲಿ ಬರುವ ಎಲ್ಲ ಸಮಸ್ಯೆಗಳಿಗೆ ಉತ್ತರ ದೊರಕಿಸಿಕೊಳ್ಳುತ್ತಿದ್ದರು. ಅಂತಹ ಕತೆಗಳು ಎಲ್ಲ ಫ್ಯಾಂಟಸಿಗಳನ್ನು ಮೀರಿ ಗೆಲ್ಲುತ್ತವೆ. ನಿಜ ಬದುಕಿನ ಸತ್ವಭರಿತ ಕಥೆಯೇ ಅದಾಗಿದೆ. ಗರತಿಯ ಹಾಡು, ಹಬ್ಬದ ಹಾಡು, ಸಂಪ್ರದಾಯದ ಹಾಡು ಇವೆಲ್ಲಾ ಬದುಕಿನ ಕತೆಯೇ ಆಗಿದೆ.ದೂರದರ್ಶನದ ಬಹುತೇಕ ಚಾನಲ್ಲುಗಳ ಬಹುತೇಕ ಸೀರಿಯಲ್ಲುಗಳು ಜಾನಪದದ ಮೊರೆಹೋಗಿವೆ. ಸೂಪರ್‌ಮ್ಯಾನ್, ಸ್ಪೈಡರ್‌ಮ್ಯಾನ್, ಸ್ಟಾರ್‌ವಾರ್, ಹ್ಯಾರಿಪಾಟರ್ ವಿಶ್ವಜಾನಪದ ಕಥಾಲೋಕ ಬತ್ತಿ ಹೋಗಲಿಲ್ಲ ಎಂಬುದನ್ನು ಪದೇ ಪದೇ ನೆನಪಿಸುತ್ತಿವೆ. ಟಿವಿ ಚಾನಲ್ಲುಗಳಲ್ಲಿ ಪಂಚತಂತ್ರ, ಭೇತಾಳ ಕತೆಗಳು ಅತ್ಯಂತ ಜನಪ್ರಿಯ ಸೀರಿಯಲ್ಲುಗಳು. ಅನಿಮೇಶನ್ ತಂತ್ರಜ್ಞಾನ ಕೂಡ ಜನಪದದ ವಿಸ್ತೃತಭಾಗ.ಹನುಮಾನ್, ಗಣೇಶ, ತೆನಾಲಿರಾಮ ಮೊದಲಾದ ಎಲ್ಲ ಕತೆಗಳೂ ಈಗ ಅನಿಮೇಶನ್ ತಂತ್ರಜ್ಞಾನದಲ್ಲಿ ಕಿನ್ನರಲೋಕವನ್ನೇ ತೆರೆದು ತೋರಿಸುತ್ತಿವೆ.ವಿಶ್ವದಲ್ಲಿ ಇಂದು ಪ್ರಚಲಿತದಲ್ಲಿರುವ ಬಹುತೇಕ ಜಾನಪದ ಕತೆಗಳ ಮೂಲ ಭಾರತ, ಪ್ರಾಣಿಕತೆಗಳಿಗೆ ಭಾರತದ ಮೂಲ.ಋಗ್ವೇದದ ಕಾಲದಿಂದಲೂ ಜಾನಪದದ ಮೂಲವನ್ನು ಗುರುತಿಸಬಹುದು. ಪಂಚತಂತ್ರ, ಹಿತೋಪದೇಶ, ಬೇತಾಳ ಪಂಚವಿಶಂತಿ, ಶುಕಸಪ್ತತಿ, ಗುಣಾಢ್ಯನ ಬೃಹತ್ಕಥೆ, ಕಥಾಸರಿತ್ಸಾಗರ ಮುಂತಾದವು ಜನಪದ ಕತೆಗಳ ಮಹಾ ಕೋಶಗಳು.`ಕೆರೆಗೆ ಹಾರ~ - ಯಾರಿಗೆ ಗೊತ್ತಿಲ್ಲ? ಜಾನಪದ ಸಾಹಿತ್ಯದಲ್ಲಿ ಬಹು ಚರ್ಚಿತವಾಗಿರುವ ವಸ್ತು ಇದು. ಇಂದಿಗೂ ಇಂತಹ ವಸ್ತುವನ್ನು ಸಮಕಾಲೀನ ಸಮಾಜದ ಸ್ಥಿತಿಗತಿಗೆ ಒಗ್ಗಿಸಿಕೊಳ್ಳಬಹುದು ಎಂಬುದನ್ನು `ಭಾಗೀರತಿ~ ನಿರೂಪಿಸುತ್ತದೆ. ಜನಪದ ಸಾಹಿತ್ಯದ ಮೂಲಸತ್ವವೇ ಇದು.ಮೌಖಿಕದ ಮೂಲಕವೇ ರೂಪಾಂತರಗಳನ್ನು ತಾಳುವ, ಕಾಲಘಟ್ಟದ ದಾಖಲೆಗಳನ್ನು ತನ್ನೊಡಲೊಳಗೆ ಹುದುಗಿಸಿಟ್ಟುಕೊಳ್ಳುವ ಜಾನಪದ ಇಂತಹ ಐತಿಹ್ಯಗಳನ್ನು ಪ್ರತಿಯೊಂದು ಗ್ರಾಮದಲ್ಲೂ ಹೊಂದಿದೆ. ಕೆರೆಗೆಹಾರವಾಗುವ ಸೊಸೆಯ ದುರಂತ ಕತೆ ಒಂದು ಗ್ರಾಮದ, ಒಂದು ಕೆರೆಯ ಕತೆಯಾಗಿ ಮಾತ್ರ ಉಳಿದುಕೊಂಡಿಲ್ಲ.ಪ್ರತಿಯೊಂದು ಗ್ರಾಮದಲ್ಲಿರುವ ಕೆರೆ, ಕಲ್ಯಾಣಿ, ಬಾವಿ ಎಲ್ಲವುಗಳ ಹಿಂದೆಯೂ ಒಂದೊಂದು ಕತೆ ಇರುವುದನ್ನು ಕಾಣಬಹುದು. ಸೂಳೆಕೆರೆ, ಹೊಸಕೆರೆ, ಚೆಕ್ಕಾಂಬುದಿ, ರಾಯನ ಸಮುದ್ರ, ಮಾಘೇರಿ, ಹಳೇಕಟ್ಟೆ, ಕೊಂಡಕೊಳ, ಮಲ್ಲಸಾಗರ, ಕೆರೆಹೊಂಡ, ಹುಣ್ಸೆಬಾವಿ .... ಮೊದಲಾದ ಗ್ರಾಮನಾಮಗಳು ಆಯಾಯ ಊರಿನ ಸ್ವರೂಪವನ್ನು, ರಚನೆಯ ಹಿಂದಿನ ಹಿನ್ನೆಲೆಯನ್ನು ಹೇಳುತ್ತದೆ.ಅಲ್ಲದೆ ಮಾನವ ನಿರ್ಮಿತ ಕೆರೆ - ಕಟ್ಟೆ, ಕೊಳಗಳನ್ನು ಇರುವಿಕೆಯನ್ನು ಹೇಳುತ್ತದೆ. ಹಳ್ಳಿಗಳೇ ಪ್ರಧಾನವಾಗಿರುವ ನಮ್ಮ ದೇಶದ ಸಾಂಸ್ಕೃತಿಕ, ಪ್ರಾಕೃತಿಕ, ಸಾಮಾಜಿಕ ವಿವರಗಳನ್ನು ಈ ಹೆಸರುಗಳೂ ಅವುಗಳನ್ನೊಳಗೊಂಡ ಊರೂ ಹೇಳುತ್ತದೆ.ಊರೊಂದರಲ್ಲಿ ಕಟ್ಟಿಸಿದ ಕೆರೆಯಲ್ಲಿ ನೀರು ನಿಲ್ಲದೇ ಹೋದಾಗ, ಅದಕ್ಕೆ ಸೊಸೆಯೊಬ್ಬಳನ್ನು ಬಲಿ ನೀಡಿದರೆ ನೀರು ನಿಲ್ಲುತ್ತದೆ ಎನ್ನುವ ಮೂಢನಂಬಿಕೆಯ ಹಿಂದೆ ಅಂದಿನ ಕಾಲದ ವಾಸ್ತವಸ್ಥಿತಿ ಇದೆ. ಅದರ ಸತ್ಯಾಸತ್ಯತೆಗಳ ಬಗ್ಗೆ ನಿಖರ ವಿಶ್ಲೇಷಣೆ ಬೇಕಿದೆ. ಇಂತಹ ಹೆಸರುಗಳು ಕೂಡ ಚರ್ಚೆಗೆ ಗ್ರಾಸವಾಗಿರುವ ಸಂಗತಿ ಇಂದಿಗೂ ಜ್ವಲಂತವಾಗಿದೆ.

 

ಸುಮಾರು ಮೂರು ನೂರು ವರ್ಷಗಳ ಹಿಂದೆ ಚನ್ನಗಿರಿ ತಾಲೂಕಿನಲ್ಲಿ ನಿರ್ಮಾಣಗೊಂಡ ಕೆರೆಯನ್ನು `ಸೂಳೆ~ ಎಂಬ ಅಪಖ್ಯಾತಿಗೆ ಒಳಗಾದ ಶಾಂತವ್ವ ಎಂಬ ಹೆಣ್ಣೊಬ್ಬಳು ಅಪಖ್ಯಾತಿ ನಿವಾರಣೆಗಾಗಿ ಕಟ್ಟಿಸಿದಳೆಂದು ಹೇಳುತ್ತಾರೆ. ಈ ಶಾಂತವ್ವನ ಹೆಸರು ಬಹಳ ಜನಕ್ಕೆ ಗೊತ್ತಿಲ್ಲ. ಸೂಳೆ ಎಂದು ಕರೆಸಿಕೊಂಡಿದ್ದು ಒಬ್ಬ `ಅಭಾಗಿನಿ~ ಎಂದು ಮಾತ್ರ ಜನರು ಗುರುತಿಸುತ್ತಾರೆ. ಈ ಕೆರೆಗೆ ಸಂಬಂಧಿಸಿದಂತೆ ನಾಲ್ಕು ಲಘು ಕಾವ್ಯಗಳು ಮತ್ತು ಒಂದು ಕೈಫಿಯಿತ್ತು ರಚಿತವಾಗಿದೆ.

 

ಈ ಕಾವ್ಯ ಓದುಗರಿಗೆ `ಸೂಳೆಕೆರೆ~ ಹೆಸರಿನಲ್ಲಿ ತ್ಯಾಗದ ಹೊರತಾಗಿ ಯಾವುದೇ ಅಶ್ಲೀಲತೆಯೂ ಕಂಡಿಲ್ಲ. ಇತ್ತೀಚಿನ ವರ್ಷಗಳಲ್ಲಿ `ಸೂಳೆಕೆರೆ~ ಎಂಬುದು ಕೆಟ್ಟ ಅರ್ಥ ಎಂಬ ಹುಯಿಲೆದ್ದು, ಅದನ್ನು ಶಾಂತಿಸಾಗರ ಎಂದು ಮಾರ್ಪಡಿಸಿದರು.ಸೂಳೆಕೆರೆಯೆಂದೇ ಉಳಿಸಿಕೊಳ್ಳಬೇಕೆಂಬ ಪ್ರಬಲವಾದವೂ ಇದೆ. ಗ್ರಾಮನಾಮಗಳನ್ನು ಯಥಾವತ್ತಾಗಿ ಉಳಿಸಿಕೊಳ್ಳುವುದರಿಂದಾಗಿ ನಮ್ಮ ಜನಪದವನ್ನು ಉಳಿಸಿಕೊಳ್ಳಬಹುದು. ಪಾಶ್ಚಿಮಾತ್ಯ ದೇಶಗಳಲ್ಲೂ ಹಲವಾರು ಊರಿನ ಹೆಸರುಗಳನ್ನು ಮಾರ್ಪಡಿಸಿ ಹಾಗೇ ಉಳಿಸಿಕೊಂಡಿರುವ ಉದಾಹರಣೆಗಳಿವೆ. ಸಿನಿಮಾ ಒಂದು ಜನಪದ ಕಲೆ ಎಂದೇ ನಂಬಿರುವ ನಿರ್ದೇಶಕ ಬರಗೂರು ರಾಮಚಂದ್ರಪ್ಪ, `ಸಿನಿಮಾ ಮೂಲಕ ಹೊಸ ಜನಪದ ಕತೆಗಳು ಹುಟ್ಟುತ್ತಿವೆ, ಇಂತಹ ಸಾಧ್ಯತೆಯನ್ನು ವೈಜ್ಞಾನಿಕ ಜಾನಪದ~ ಎಂದು ಕರೆಯಬಹುದು ಎನ್ನುತ್ತಾರೆ. `ಭಾಗೀರತಿ~ ಸಿನಿಮಾಕ್ಕೆ ಹೊಸ ಆಯಾಮ ನೀಡಿರುವುದು ಈ ಹಿನ್ನೆಲೆಯಲ್ಲಿಯೇ ಎಂದು ಭಾಸವಾಗುತ್ತದೆ.`ಅಂದಂದಿನ ಜೀವನ ವಿಧಾನ, ಉತ್ಪಾದನೆಯ ಸಾಧನಗಳ ಒಟ್ಟು ಪರಿಣಾಮದ ಫಲವಾಗಿ ಅವಕ್ಕೆ ತಕ್ಕಂತೆ ಕತೆ, ಗೀತೆ, ಆಟ, ಆಚರಣೆಗಳೂ ರೂಪು ತಾಳುತ್ತವೆ. ಜೀವನ ವಿಧಾನ ಬದಲಾದಂತೆ ಅವೂ ಬದಲಾಗುತ್ತವೆ. ಆದ್ದರಿಂದ ಹಳೆಯದು ಮಾತ್ರವೇ ಜಾನಪದ ಎಂದು ಕರೆದು ಜಾನಪದಕ್ಕೆ ಆಧುನಿಕ ಮುಖವಿಲ್ಲವೆಂದು ಭಾವಿಸುವುದು ಸರಿಯಲ್ಲ~ ಎಂದು ವಾದಿಸುವ ಬರಗೂರು ಭಾಗೀರತಿಯನ್ನು (ಅಂದರೆ `ಕೆರೆಗೆ ಹಾರ~ ಜನಪದ ಕಥನ ಕವನವನ್ನು) ಇಂದಿನ ಪರಿಸ್ಥಿತಿಗೆ ಒಗ್ಗಿಸುವ,  ಹಿಗ್ಗಿಸುವ ಪ್ರಯತ್ನ ಮಾಡಿದ್ದಾರೆ.ಸಿನಿಮಾ ಚಲನಶೀಲ ಪರಂಪರೆಯ ಭಾಗವಾಗಿರುವುದರಿಂದ ಸಿನಿಮಾಕ್ಕೆ ಜನಪದೀಯ ಆಯಾಮಗಳು ಪ್ರಾಪ್ತವಾಗಿವೆ ಎನ್ನುವ ಅವರ ವಾದದ ಹಿನ್ನೆಲೆಯಲ್ಲಿ ಭಾಗೀರತಿಯನ್ನು ನೋಡಿದಾಗ ಇದು ಅರ್ಥವ್ಯಾಪ್ತಿಯನ್ನು ಪಡೆದುಕೊಳ್ಳುತ್ತದೆ.ಬರಗೂರು ರಾಮಚಂದ್ರಪ್ಪ ಅವರು ಭಾಗೀರತಿಯನ್ನು ಸಾಮಾಜಿಕ, ಆರ್ಥಿಕ, ಜೀವನಾಕಾಂಕ್ಷೆಗಳಾದ ಭೂಮಿ, ಬೆಳೆ, ನೀರು, ಗೆಳೆತನ, ವಾತ್ಸಲ್ಯ, ಪ್ರೀತಿ ಮೊದಲಾದ ಚೌಕಟ್ಟಿಗೆ ಒಳಪಟ್ಟಂತೆ ರೂಪಿಸಲು ಹೊರಟಿರುವುದು ವಿಶೇಷ ಅರ್ಥವನ್ನೇ ಕಲ್ಪಿಸಿದೆ. ಜನಪದರು ಹತ್ತು ಸಾವಿರ ವರ್ಷಗಳ ಹಿಂದೆಯೇ ವ್ಯವಸಾಯೋತ್ಪಾದನೆಯಲ್ಲಿ ತೊಡಗಿದವರಾಗಿದ್ದರು. ಲೆಕ್ಕಾಚಾರದಲ್ಲಿ ನಿಪುಣರಾಗಿದ್ದರು.

 

ಕೆರೆ, ಕಟ್ಟೆ, ಬಾವಿಗಳ ಕಲ್ಪನೆಯನ್ನು, ಮಹತ್ವವನ್ನು ಅರಿತವರಾಗಿದ್ದರು. ಬದುಕು ಕಟ್ಟಿಕೊಟ್ಟವರ ಬದುಕನ್ನು ಚಿತ್ರಿಸುವುದು ಇಲ್ಲಿನ ಮುಖ್ಯಗುರಿ. ಅದರೊಂದಿಗೆ ಅಷ್ಟೇ ಪ್ರಾಚೀನ ಐತಿಹ್ಯವೊಂದರಲ್ಲಿ ಇರುವ ಮೌಢ್ಯವನ್ನು ಬರಗೂರು ಲೇವಡಿ ಮಾಡುತ್ತಾರೆ. ಶೋಷಣೆಯನ್ನು ಎತ್ತಿ ಹೇಳುತ್ತಾರೆ. ಪುರೋಹಿತಶಾಹಿ ವ್ಯವಸ್ಥೆಯ ವಿರುದ್ಧ ದನಿ ಎತ್ತುತ್ತಾರೆ. “ಭಾಗೀರತಿ” ದುರಂತದ ದನಿಯಲ್ಲಿ ಆರಂಭವಾಗಿ ವಿಷಾದದ ದನಿಯಲ್ಲಿ ಮುಕ್ತಾಯವಾಗುವುದರೊಂದಿಗೆ “ಕೆರೆಗೆ ಹಾರ”ದ ಅರ್ಥವ್ಯಾಪ್ತಿಯನ್ನು ಹಿಗ್ಗಿಸಲಾಗಿದೆ.ಕಲ್ಲನಕೇರಿ ದಂಡಿನಲ್ಲಿರುವ ಮಹದೇವರಾಯ ತನ್ನ ಗ್ರಾಮದಲ್ಲಿ ಕೆರೆಯೊಂದನ್ನು ಕಟ್ಟಿಸುವುದಕ್ಕೆ ಭಾಗೀರತಿಯೇ ಪ್ರೇರಣೆ. ಕೇವಲ ಯುದ್ಧ, ಹೋರಾಟದಲ್ಲೇ ಕಾಲಕಳೆಯುವ ಬದಲು ಗ್ರಾಮದ ಜನರಿಗೆ ಉಪಯೋಗವಾಗುವಂತೆ ಕೆರೆಯೊಂದನ್ನು ಕಟ್ಟಿಸಿ, ಉಪಕಾರ ಮಾಡುವಂತೆ ಭಾಗೀರತಿ, ದಂಡಿನ ವೀರ ಮಹದೇವರಾಯನಿಗೆ ಸವಾಲು ಹಾಕುತ್ತಾಳೆ. ಅದರ ಫಲವೇ ಕೆರೆ.ಅವರಿಬ್ಬರೂ ಮದುವೆಯಾಗುವವರೆಗೆ ಕತೆ ಬೆಳೆಯುತ್ತದೆ. ಮನೆಯ ಸೊಸೆಯನ್ನು ಬಲಿಕೊಡದೆ ಕೆರೆ ನೀರು ತುಂಬುವುದಿಲ್ಲ ಎನ್ನುವುದು ಪುರೋಹಿತಶಾಹಿಯ ಕುತಂತ್ರ. ಆರಂಭಕ್ಕೆ ಭಾಗೀರತಿಯನ್ನು ಮನೆತುಂಬಿಸಿಕೊಳ್ಳುವಲ್ಲೇ ಮಲ್ಲನಗೌಡನ ಕುಟುಂಬಕ್ಕೆ ಹಿಂಜರಿಕೆಯಿರುವುದು ಕತೆಯ ಒಳಸುಳಿ. ಆರ್ಥಿಕವಾಗಿ ಉತ್ತಮವಾಗಿರುವ, ದರ್ಜೆಯಿಂದಲೂ ಮೇಲ್ಮಟ್ಟದಲ್ಲಿರುವ ಮಲ್ಲನಗೌಡನ ಕುಟುಂಬಕ್ಕೆ ಸಾಮಾಜಿಕಾರ್ಥಿಕವಾಗಿ ಹಿಂದುಳಿದಿರುವ ಭಾಗೀರತಿ ಸೊಸೆಯಾಗಿರುವುದು ಚಿತ್ರದುದ್ದಕ್ಕೂ ಎಲ್ಲೂ ಬೆಸುಗೆಯಾಗುವುದೇ ಇಲ್ಲ.ಭಾಗೀರತಿ ಒಂಟಿಯಾಗಿಯೇ ಎಲ್ಲವನ್ನೂ ಎದುರಿಸುವಲ್ಲಿ ಶೋಷಣೆಯ ಕ್ರೂರ ಮುಖ ಕಾಣುತ್ತದೆ. ಆರಂಭದಿಂದ ಕೊನೆಯವರೆಗೆ ತನ್ನ ವರ್ಗವನ್ನು ಪ್ರತಿನಿಧಿಸುವ ಒಂದೇ ಸೀರೆಯಲ್ಲಿರುವುದು ಅವಳನ್ನು ಮಲ್ಲನಗೌಡನ ಕುಟುಂಬ ಮಾನಸಿಕವಾಗಿ ಒಪ್ಪಿಕೊಂಡಿಲ್ಲ ಎನ್ನುವುದನ್ನು ಹೇಳುತ್ತದೆ. ಅಲ್ಲೇ ಅವಳು ಮೊದಲ ಬಲಿಯಾಗಿರುತ್ತಾಳೆ.

 

ಚಿತ್ರದ ಆರಂಭದಿಂದಲೇ ಬಲಿಯ ಛಾಯೆ ದಟ್ಟವಾಗಿ ಆವರಿಸಿಕೊಳ್ಳುತ್ತಾ ಹೋಗುತ್ತದೆ. ಈ ಚೌಕಟ್ಟಿನ್ಲ್ಲಲೇ ಸಾಂದರ್ಭಿಕ ಮಹತ್ವವನ್ನು ಹೇಳುವಲ್ಲಿ ಬರಗೂರು, ಜನಪದ ಕಥಾಭಂಡಾರದ ಒಡಲು ಎಷ್ಟೊಂದು ಸಮೃದ್ಧವಾಗಿದೆ ಎನ್ನುವುದನ್ನೂ ತೋರಿಸಿಕೊಡುತ್ತಾರೆ.ಕೆರೆಗಳು ಅವಸಾನವಾಗುತ್ತಿರುವ, ಕೆರೆಗಳನ್ನು ಬತ್ತಿಸಿ ಕಾಂಕ್ರಿಟ್ ಕಾಡನ್ನಾಗಿ ಪರಿವರ್ತಿಸುವ, ಕೆರೆಗಳ ಮಹತ್ವವನ್ನೂ ಅರಿಯದ ಪರಿಸ್ಥಿತಿ ತಲೆದೋರುತ್ತಿರುವ ಸಂದರ್ಭದಲ್ಲಿ `ಕೆರೆಗೆ ಹಾರ~ ವನ್ನು ನೋಡಿದಾಗ, ಬತ್ತಿ ಹೋದ ಕೆರೆಯೊಳಗಿಂದ ಎದ್ದು ಬಂದ ಅಸ್ಥಿಪಂಜರ ದುರಂತ ಕತೆಯೊಂದನ್ನು ನಮ್ಮ ಕಣ್ಣ ಮುಂದೆ ಕಟ್ಟಿಕೊಡುವಂತೆ ಕಾಣುತ್ತದೆ.ಭೂಲೋಕದಲ್ಲಿ ಯಮರಾಜ, ಯಮದೊಂಗ, ಕಠಾರಿವೀರ ಸುರಸುಂದರಾಂಗಿ ಮೊದಲಾದ ಚಿತ್ರಗಳೇ ಜನಪದ ಚಿತ್ರಗಳೆಂಬ ಭ್ರಮೆ ಹುಟ್ಟಿಸುತ್ತಿರುವ ಸಂದರ್ಭದಲ್ಲಿ `ಭಾಗೀರತಿ~ ತಣ್ಣನೆಯ ಅನುಭವ ನೀಡುವ, ಬೆಚ್ಚಿ ಬೀಳಿಸುವ, ಚಿಂತನೆಗೆ ಹಚ್ಚುವ ಕತೆಯಾಗಿ ಕಾಣುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.