ಭಾನುವಾರ, ಮೇ 16, 2021
24 °C

ಜನರ ನಡುವಿರಲಿ ಹಾವೇರಿ ಜಿಲ್ಲಾಧಿಕಾರಿ ಕಚೇರಿ

ಎಂ ನಾಗರಾಜ್ Updated:

ಅಕ್ಷರ ಗಾತ್ರ : | |

ಜನರ ನಡುವಿರಲಿ ಹಾವೇರಿ ಜಿಲ್ಲಾಧಿಕಾರಿ ಕಚೇರಿ

ಜನಸಾಮಾನ್ಯರು ತಮ್ಮ ಕೆಲಸ ಕಾರ್ಯಗಳಿಗೆ ನಗರ ಅಥವಾ ಪಟ್ಟಣಗಳಿಗೆ ಬಂದರೆ ಕಾಲ್ನ­ಡಿ­ಗೆ­ಯಲ್ಲಿಯೇ ಆಯಾ ಕಚೇರಿಗಳಿಗೆ ಹೋಗಿ ಬರು­ವಂತಾ­­ಗಬೇಕು ಎಂಬ ಪರಿಕಲ್ಪನೆ ದೇಶದಲ್ಲಿ ಬಹಳ ಹಿಂದಿ­ನಿಂದಲೂ ಇದೆ. ಇದರ ಹಿಂದೆ ಹಣ–ಸಮಯ ಉಳಿತಾಯದ ದೃಷ್ಟಿ ಇತ್ತು. ಈಗಲೂ ಬಹುತೇಕ ಕಡೆ ಎಲ್ಲ ಸರ್ಕಾರಿ ಕಚೇರಿಗಳು ನಗರದ ಮಧ್ಯ­ಭಾಗ­ದ­ಲ್ಲಿಯೇ ಇವೆ. ಇದಕ್ಕೆ ಹಾವೇರಿ ಜಿಲ್ಲೆ ಮಾತ್ರ ವ್ಯತಿ­ರಿಕ್ತ­ವಾ­ಗಿದೆ. ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಜಿಲ್ಲಾ ಮಟ್ಟದ ಬಹುತೇಕ ಕಚೇರಿಗಳು ಇಲ್ಲಿ ಜನರಿಂದ ದೂರ­ವಾಗಿವೆ ಎಂದರೆ ತಪ್ಪಾಗಲಿಕ್ಕಿಲ್ಲ.ಹದಿ­ನೇಳು ವರ್ಷಗಳ ಹಿಂದೆ ಹಾವೇರಿ ಹೊಸ ಜಿಲ್ಲೆ­ಯಾಗಿ ಘೋಷಣೆಯಾಯಿತು. ಈ ಜಿಲ್ಲಾ ವ್ಯಾಪ್ತಿಯ ತಾಲ್ಲೂಕುಗಳಿಗೆ ಈ ನಗರ ಮಧ್ಯದಲ್ಲಿದೆ. ಜಿಲ್ಲಾ ಕೇಂದ್ರದ ಆಯ್ಕೆ ಈ ದೃಷ್ಟಿಯಿಂದ ಸರಿ­ಯಾ­ದುದೇ. ಆದರೆ ಆಗ ಅಧಿಕಾರದಲ್ಲಿದ್ದವರ ಎಡವಟ್ಟಿ­ನಿಂ­ದಾಗಿ ಸಾರ್ವಜನಿಕರು ಪರದಾಡುವಂತಾಗಿದೆ. ಈಗಲೂ ಹಾವೇರಿ ನಗರದ ವ್ಯಾಪ್ತಿ ಸರಿಸುಮಾರು ನಾಲ್ಕು ಕಿ.ಮೀ ಮಾತ್ರ. ಆದರೆ ಆಗಿನ ಅಧಿಕಾರಿಗಳು, ಪ್ರಭಾವಿ ಚುನಾಯಿತ ಪ್ರತಿನಿಧಿಗಳು ಜಿಲ್ಲಾಧಿಕಾರಿ ಕಚೇರಿಗೆ ನಗರದಿಂದ ಎಂಟು ಕಿ.ಮೀ ದೂರದಲ್ಲಿರುವ ದೇವಗಿರಿಯನ್ನು ಆಯ್ಕೆ ಮಾಡಿದರು! ಸ್ಥಳ ಆಯ್ಕೆ ಸಂದರ್ಭದಲ್ಲಿ ಅಧಿಕಾರಿಗಳಿಗೆ ಜನರು ಅನುಭ­ವಿಸ­ಬೇ­ಕಾದ ತೊಂದರೆ ಹೊಳೆಯಲೇ ಇಲ್ಲ. ಇನ್ನು ರಾಜ­ಕಾರ­ಣಿಗಳಿಗೆ ಬೇಕಿರುವುದು ತಮಗೆ ಸಿಗುವ ಲಾಭ.ಅದಕ್ಕಾಗಿ ಏನು ಬೇಕಿದ್ದರೂ ಮಾಡಲು ಅವರು ಸಿದ್ಧ­ರಿ­ರುತ್ತಾರೆ. ಇದೆಲ್ಲದರ ಪರಿಣಾಮ ಈಗಲೂ ಬಡ­ವರು, ರೈತರು ಒಂದು ಸಣ್ಣ–ಪುಟ್ಟ ಕೆಲಸಕ್ಕೂ ಜಿಲ್ಲಾ­ಧಿ­ಕಾರಿ ಕಚೇರಿ ಸಂಕೀರ್ಣಕ್ಕೆ ಹೋಗಿ ಬರಲು ಪರದಾ­ಡು­ವಂ­ತಾಗಿದೆ. ಇಲ್ಲಿಗೆ ಹೋಗಿಬರಲು ಬಸ್‌ ಅಥವಾ ಟಂಟಂ ಆಶ್ರಯಿಸಬೇಕಾದ ಜನರು ಪ್ರಯಾ­ಣಕ್ಕೆ ಕನಿಷ್ಠ ₨ 20 ವ್ಯಯಿಸಬೇಕಿದೆ. ಮುಂದೆ ಜನರು ಬಹಳ ತೊಂದರೆಗೆ ಒಳಗಾಗುತ್ತಾರೆ ಎಂಬುದನ್ನು ಮನ­ಗಂಡ ರಾಜ್ಯ ರೈತ ಸಂಘದವರು ಮತ್ತು ಪ್ರಜ್ಞಾ­ವಂತ ನಾಗರಿಕರು ದೇವಗಿರಿಯಲ್ಲಿ ಜಿಲ್ಲಾಧಿಕಾರಿ ಕಚೇರಿ ನಿರ್ಮಾಣ ಬೇಡ ಎಂದು ಆಗ ಹೋರಾಟ ನಡೆ­ಸಿದ್ದರು.ನಂತರವೂ ಜಿಲ್ಲಾಧಿಕಾರಿ ಕಚೇರಿಯನ್ನು ನಗ­ರಕ್ಕೆ ಸ್ಥಳಾಂತರಿಸುವಂತೆ ಪ್ರತಿಭಟನೆಗಳು ನಡೆ­ದವು. ಆದರೆ ಈ ಹೋರಾಟಗಳಿಗೆ ಕಿಂಚಿತ್ತೂ ಬೆಲೆ ಸಿಗ­ಲಿಲ್ಲ. ಇಲ್ಲಿ ಜನರ ಅನುಕೂಲಕ್ಕಿಂತ  ಪ್ರತಿಷ್ಠೆಯೇ ರಾಜ­ಕಾರಣಿಗಳಿಗೆ ಮುಖ್ಯವಾಯಿತು. ಅವರು ಹಿಡಿದ ಪಟ್ಟಿಗೆ ಸಿಕ್ಕ ಬೆಲೆ, ಬಡ ಜನರ ಕೂಗಿಗೆ ಸಿಗ­ಲಿಲ್ಲ. ಇದೀಗ ನಗರದಲ್ಲಿ  ನಾನಾ ಕಾರಣಗಳಿಗೆ ಪ್ರತಿ­ಭ­ಟನೆ ನಡೆಸಿದಾಗ,  ಜಿಲ್ಲಾಧಿಕಾರಿ ಕಚೇರಿಗೆ ಮನ­ವಿ­ಯನ್ನು ತಲುಪಿಸಲೂ ಜನರಿಗೆ ಈಗ ಸಾಧ್ಯ­ವಾ­ಗು­ತ್ತಿಲ್ಲ. ಜನರ ಬಳಿಗೆ ಆಡಳಿತ ಎಂಬ ಕಲ್ಪನೆಯಿಂದ ರೂಪು­ಗೊಂಡಿದ್ದು ಜಿಲ್ಲಾಡಳಿತ. ಅಂತಹದ್ದರಲ್ಲಿ ಒಂದು ಮನವಿ ಪತ್ರ ಸಲ್ಲಿಸಲೂ ಆಗುವುದಿಲ್ಲ ಎಂದರೆ ಇನ್ನು ಈ ಊರಿನ ಜನರು ತಮ್ಮ ಸಮಸ್ಯೆಗಳ ಬಗ್ಗೆ ಸರ್ಕಾರದ ಕಣ್ಣು ತೆರೆಸುವುದು ಹೇಗೆ?ರಾಜ–ಮಹಾರಾಜರ ಕಾಲದಿಂದ ಹಿಡಿದು ಬ್ರಿಟಿಷರ ಆಳ್ವಿ­ಕೆಯಲ್ಲೂ ಜನರಿಗೆ ಅತಿ ಅಗತ್ಯವಾದ ಕಚೇರಿ­ಗಳು, ಆಸ್ಪತ್ರೆಗಳು ಬಸ್‌ನಿಲ್ದಾಣದ ಸಮೀಪವೇ ಇರು­ತ್ತಿ­ದ್ದವು. ಆದರೆ ಈಗ ಅಂತಹ ವಾತಾವರಣ ಕಾಣೆ­ಯಾ­ಗುತ್ತಿದೆ. ಇದಕ್ಕೆ ಹಾವೇರಿ ಜಿಲ್ಲೆಯ ಜನ­ಸಾ­ಮಾ­ನ್ಯರ ಬವಣೆಯೇ ನಿದರ್ಶನವಾಗಿದೆ. ಜಿಲ್ಲೆಯ ಅಭಿ­ವೃದ್ಧಿ ಬಗ್ಗೆ ಯಾವುದೇ ಕಲ್ಪನೆ ಇಲ್ಲದ ಆಳು­ವವ­ರಿಂದಲೇ ಹಾವೇರಿ ಹಾಳಾಗಿದೆ ಎನ್ನಲು ಅಡ್ಡಿ ಇಲ್ಲ.ಹೊಸ ಜಿಲ್ಲೆ ಘೋಷಣೆಯಾದ ಸಂದರ್ಭದಲ್ಲಿ ಹಾವೇರಿ ಪುರಸಭೆ ಮಟ್ಟದಲ್ಲಿತ್ತು. ಅಂದರೆ ಊರು ಎಷ್ಟು ದೊಡ್ಡದಿತ್ತು ಎಂಬುದು ಯಾರಿಗಾದರೂ ಅರ್ಥ­­ವಾಗುತ್ತದೆ. ಜಿಲ್ಲಾ ಕೇಂದ್ರವಾದ ಬಳಿಕ ನಗರ­ಸಭೆ­ಯನ್ನಾಗಿ ಉನ್ನತೀಕರಿಸಲಾಗಿದೆ. ಆದರೆ 2011ರ ಜನಗಣತಿ ಪ್ರಕಾರ ನಗರದ ಜನಸಂಖ್ಯೆ 67,102 ಮಾತ್ರ. ಇಂತಹ ಊರಿನಲ್ಲಿ ನಗರದ ಮಧ್ಯೆ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣಕ್ಕೆ 10–20 ಎಕರೆ ಭೂಮಿ ಆಗ ಸಿಗುತ್ತಿರಲಿಲ್ಲವೇನು?ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿದೆ. ಬಹುಶಃ ಬೇರೆ ಜಿಲ್ಲೆಗಳಲ್ಲಿ ಇಂತಹ ಸ್ಥಿತಿ ಇರಲಿಕ್ಕಿಲ್ಲ. ದೇವಗಿರಿಯನ್ನು ಜಿಲ್ಲಾಧಿಕಾರಿ ಕಚೇರಿ ಸಮುಚ್ಚಯ ನಿರ್ಮಾಣಕ್ಕೆ ಆಯ್ಕೆ ಮಾಡಿ­ಕೊಳ್ಳು­­ವಾಗ, ಈ ಊರು ಎಷ್ಟು ವೇಗವಾಗಿ ಬೆಳೆ­ಯುವ ಸಾಮರ್ಥ್ಯ ಹೊಂದಿದೆ ಎಂಬುದನ್ನು ಅಂದಾ­ಜಿ­ಸುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ. ಆರ್ಥಿಕ ಬೆಳ­ವಣಿಗೆ ಮಟ್ಟವನ್ನೂ ಸರಿಯಾಗಿ ವಿಶ್ಲೇಷಿಸಿಲ್ಲ ಅಥವಾ ಇದರ ಉಸಾಬರಿ ತಮಗೇಕೆ ಎಂಬ ಧೋರಣೆ­ಯಾಗಿತ್ತೋ ಏನೋ ತಿಳಿಯದು.ಒಟ್ಟಿನಲ್ಲಿ ಆಗ ಕಾರ್ಯನಿರ್ವಹಿಸಿದ ಅಧಿಕಾರಿಗಳು, ಚುನಾ­ಯಿತ ಪ್ರತಿನಿಧಿಗಳಿಗೆ ಮುಂದಾಲೋಚನೆ ಇರಲಿಲ್ಲ ಎಂಬು­ದಂತೂ ವೇದ್ಯವಾಗುತ್ತದೆ. ಈಗಲೂ ಆರ್ಥಿಕ ಚಟು­ವಟಿಕೆ ದೃಷ್ಟಿಯಲ್ಲಿ ಹಾವೇರಿಗಿಂತ ರಾಣೆ­ಬೆನ್ನೂರು ಉತ್ತಮ. ಈ ಸಂಕೀರ್ಣದಲ್ಲಿ ಜಿಲ್ಲಾಧಿಕಾರಿ ಕಚೇರಿ ಸೇರಿ, ಜಿಲ್ಲಾ ಪಂಚಾಯ್ತಿ, ಕೃಷಿ, ಆಹಾರ ಮತ್ತು ನಾಗರಿಕ ಪೂರೈಕೆ, ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣ, ಉದ್ಯೋಗ ವಿನಿಮಯ ಕೇಂದ್ರ, ಸಾರ್ವ­ಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿ­ವೃದ್ಧಿ, ಪರಿಶಿಷ್ಟ ಜಾತಿ ಮತ್ತು ವರ್ಗಗಳ ಅಭಿವೃದ್ಧಿ ನಿಗಮ, ಆರೋಗ್ಯ, ಜಿಲ್ಲಾ ಕೈಗಾರಿಕಾ ಕೇಂದ್ರ, ಸಮಾಜ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ, ಜಿಲ್ಲಾ ಜಲಾನಯನ ಅಭಿವೃದ್ಧಿ, ಪಶುಸಂಗೋಪನೆ, ಸಹ­ಕಾರ, ಪದವಿಪೂರ್ವ ಮತ್ತು ವೃತ್ತಿ ಶಿಕ್ಷಣ, ಕಾರ್ಮಿಕ, ತೋಟಗಾರಿಕೆ, ಕರ್ನಾಟಕ ಗೃಹ ಮಂಡಳಿ (ಕೆಎಚ್‌ಬಿ) ಕಚೇರಿಗಳು ಸೇರಿದಂತೆ ಸುಮಾರು 40 ಇಲಾ­ಖೆಗಳ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ.ಕೋಟಿ­ಗಟ್ಟಲೆ ಹಣ ವ್ಯಯಿಸಿ ಕಟ್ಟಿದ ಸುಂದರ, ಬೃಹತ್‌ ಕಟ್ಟಡವೇನೋ ವಿವಿಧ ಕಚೇರಿಗಳಿಂದಾಗಿ ಭರ್ತಿ­ಯಾಗಿದೆ. ಆದರೆ ಇಲ್ಲಿಗೆ ಬರುವ ಜನ­ಸಾಮಾ­ನ್ಯರು ಮಾತ್ರ ಇದಕ್ಕಾಗಿಯೇ ಕನಿಷ್ಠ ಅರ್ಧ ದಿನ ಮೀಸಲಿಡುವಂತಾಗಿದೆ. ಆ ದಿನ ಸಂಬಂಧಪಟ್ಟ ಅಧಿಕಾರಿ ಕಚೇರಿಗೆ ಬಂದಿಲ್ಲದಿದ್ದರೆ ಹಣ– ಸಮಯ ಎಲ್ಲ ವ್ಯರ್ಥ. ಇನ್ನು ಸರ್ಕಾರಿ ವಾಹನದ ಸೌಲಭ್ಯ­ವಿ­ಲ್ಲದ ಕೆಳಹಂತದ ಅಧಿಕಾರಿಗಳು, ನೌಕರರು ಕೂಡ ಕಚೇರಿಗೆ ಹೋಗಿ ಬಂದು ಮಾಡಲು ಯಾತನೆ­ಪಡು­ತ್ತಿದ್ದಾರೆ.ವಿವಿಧ ತಾಲ್ಲೂಕುಗಳಿಂದ ಓಡಾಡುವ ಸಿಬ್ಬಂದಿಗೆ ಬಸ್‌ ಅಥವಾ ರೈಲು ತಪ್ಪುವ ಆತಂಕ ನಿತ್ಯ ಸಂಜೆ ಕಾಡುತ್ತದೆ. ಏಕೆಂದರೆ ದೇವಗಿರಿಯಿಂದ ನಗ­ರಕ್ಕೆ ಬಂದು ಅಲ್ಲಿಂದ ತಮ್ಮೂರುಗಳ ಬಸ್‌ ಅಥವಾ ರೈಲು ಹತ್ತಬೇಕು. ಸಕಾಲದಲ್ಲಿ ಬರ­ಲಾ­ಗ­ದಿದ್ದರೆ ಗಂಟೆಗಟ್ಟಲೆ ಬಸ್‌ನಿಲ್ದಾಣ ಅಥವಾ ರೈಲು ನಿಲ್ದಾಣ­ದಲ್ಲಿ ಕೊಳೆಯಬೇಕಾಗುತ್ತದಲ್ಲ ಎಂಬುದು ಅವರ ಸಂಕಟ.ಈಗಲೂ ಕಾಲ ಮಿಂಚಿಲ್ಲ. ಹಾವೇರಿಗೆ ಇತ್ತೀಚೆಗಷ್ಟೇ ವೈದ್ಯ­ಕೀಯ ಕಾಲೇಜನ್ನು ಸರ್ಕಾರ ಮಂಜೂರು ಮಾಡಿದೆ. ಬೇರೆಡೆ ಕಾಲೇಜಿಗೆ ಜಾಗ ಹುಡುಕುವ ಬದ­ಲಿಗೆ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣವನ್ನು ವೈದ್ಯಕೀಯ ಕಾಲೇಜಿಗೆ ಬಳಸಿಕೊಳ್ಳಬಹುದು. ದೇವಗಿರಿಯಲ್ಲಿ ಸುಮಾರು 147 ಎಕರೆ ಜಾಗವಿದೆ. ಸುಸಜ್ಜಿತ ಕಟ್ಟಡವಿದೆ. ಇದು ವೈದ್ಯಕೀಯ ಕಾಲೇಜಿಗೆ ಸೂಕ್ತ­ವಾಗಬಹುದು. ಅಲ್ಲಿಯೇ ಹಾಸ್ಟೆಲ್‌ ನಿರ್ಮಿ­ಸು­ವು­­ದರಿಂದ ವಿದ್ಯಾರ್ಥಿಗಳಿಗೂ ತೊಂದರೆಯಾಗದು. ಪ್ರಶಾಂತ ವಾತಾವರಣ ಕಲಿಕೆಗೂ ಅನುಕೂಲ.ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಜಿಲ್ಲಾಡಳಿತ ಕಚೇರಿ­ಯನ್ನು ನಗರಸಭೆ ವ್ಯಾಪ್ತಿಯೊಳಗೆ ತರಬೇಕು. ನಗರದ ಒಳಗೆ ಇದಕ್ಕಾಗಿ 10 ಎಕರೆ ಜಾಗ ಗುರು­ತಿ­ಸು­ವುದು ಕಷ್ಟವೇನಲ್ಲ. ಸರ್ಕಾರಿ ಭೂಮಿ ಲಭ್ಯವಿ­ಲ್ಲ­ದಿ­ದ್ದರೆ ಖಾಸಗಿಯವರಿಂದ ಖರೀದಿಸ­ಬ­ಹುದು. ಬಸ್‌­ನಿಲ್ದಾಣದಿಂದ ಒಂದೂವರೆ, ಎರಡು ಕಿ.ಮೀ ದೂರ­ದಲ್ಲಿ ಖಾಸಗಿ ಭೂಮಿ ಸಿಗುತ್ತದೆ. ಇದರ ಜತೆಗೆ ಇನ್ನೊಂದು ದಿಕ್ಕಿಗೆ (ಹಾನಗಲ್‌ ಕಡೆಗೆ) ಊರಿನಿಂದ ಆರು ಕಿ.ಮೀ  ದೂರದಲ್ಲಿರುವ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯನ್ನೂ ಸಮೀಪಕ್ಕೆ ತರುವ ಕೆಲಸ­ವಾಗಬೇಕು.ಇಲ್ಲದಿದ್ದರೆ ಹಾವೇರಿಗೆ ಅಂಟಿರುವ ‘ಹಾವೇರಿ ಜಿಲ್ಲಾಧಿಕಾರಿ, ದೇವಗಿರಿ ಜಿಲ್ಲೆ; ಎಸ್ಪಿ ಕಚೇರಿ, ಗ್ರಾಮೀಣ ಠಾಣೆ’ ಕುಹಕ ಶಾಶ್ವತವಾಗಿ ಉಳಿ­ಯು­ತ್ತದೆ. ಆಡಳಿತಾರೂಢ ಜನಪ್ರತಿನಿಧಿಗಳು ಒಣ­ಪ್ರತಿಷ್ಠೆಯನ್ನು ಬದಿಗಿಟ್ಟು ಜನರ ಹಿತ ಕಾಯುವ ಮೂಲಕ ಅವರ ಸೇವೆ ಮಾಡಬೇಕು. ಆ ಇಚ್ಛಾ­ಶಕ್ತಿ­­­ಯನ್ನು ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ತೋರಲಿ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.