ಭಾನುವಾರ, ಮೇ 9, 2021
25 °C

ಜೈಪುರದ ಸಾಹಿತ್ಯ ಜಾತ್ರೆಯಲ್ಲಿ...

ಎಚ್.ಎಸ್.ಶಿವಪ್ರಕಾಶ್ Updated:

ಅಕ್ಷರ ಗಾತ್ರ : | |

ಜೈಪುರದ ಸಾಹಿತ್ಯ ಜಾತ್ರೆಯಲ್ಲಿ...

ಜೈಪುರದ ಸಾಹಿತ್ಯಮೇಳ ಇತ್ತೀಚಿನ ವರ್ಷಗಳಲ್ಲಿ ವಿಶ್ವವಿಖ್ಯಾತ ಸಾಹಿತ್ಯಮೇಳವೆಂದು ಹೆಸರುವಾಸಿಯಾಗಿದೆ. ಹಲವಾರು ಕಾರಣಗಳಿಂದ ಅದು ಸಾಹಿತಿಗಳನ್ನು, ಸಾಹಿತ್ಯಾಸಕ್ತರನ್ನು ಸೆಳೆಯುತ್ತಿದೆ. ಎಲ್ಲಕ್ಕೂ ಮುಖ್ಯವಾಗಿ ನಮ್ಮ ಅಚ್ಚುಮೆಚ್ಚಿನ ಹಿರಿಯ ಸಾಹಿತಿಗಳು ಜಗತ್ತಿನ ಮೂಲೆ ಮೂಲೆಗಳಿಂದ ಅಲ್ಲಿಗೆ ಬರುತ್ತಾರೆ. ತಮ್ಮ ಕೃತಿಗಳನ್ನು, ವಿಚಾರಗಳನ್ನು ಹಂಚಿಕೊಳ್ಳುತ್ತಾರೆ.

ಈ ಹಿಂದೆ ವೊಲ್ ಸೊಯಿಂಕಾ, ಬನ್ ಓಕ್ರಿಯಂಥವರು ಆ ಮೇಳದಲ್ಲಿ ಪಾಲುಗೊಂಡಿದ್ದರು. ಅಂತರರಾಷ್ಟ್ರೀಯ ಮಟ್ಟದ ಬಹುಶ್ರುತ ಸಾಹಿತಿಗಳ ಜೊತೆಗೆ ರಾಷ್ಟ್ರೀಯ ಖ್ಯಾತಿಯ ಸಾಹಿತಿಗಳು ಹಿಗ್ಗಿನಿಂದ ಪಾಲುಗೊಳ್ಳುತ್ತಾರೆ. ಅಷ್ಟೇ ಅಲ್ಲದೆ ಮಾಧ್ಯಮದ ಮತ್ತು ಮನರಂಜನಾ ಉದ್ದಿಮೆಯ ಹಿರಿಯರೂ ಅಲ್ಲಿಗೆ ಬರುತ್ತಾರೆ.ಸರ್ಕಾರದ, ಸಿನಿಮಾ ರಂಗದ ನಕ್ಷತ್ರಗಳೂ ಅಲ್ಲಿ ಕಂಗೊಳಿಸಿ ಸಾಹಿತ್ಯದ ಮಹತ್ವಕ್ಕೆ, ಚಿಂತನೆಗಳ ವ್ಯಾಯಾಮಕ್ಕೆ, ಮನಸೆಳೆತದ ಇನ್ನೊಂದು ಆಯಾಮವನ್ನು ನೀಡುತ್ತಾರೆ. ಬಹುರಾಷ್ಟ್ರೀಯ ಕಂಪೆನಿಗಳ ಉದಾರ ಹಣದ ನೆರವಿನಿಂದ ಜಗಜ್ಜಾಹೀರವಾಗಿ ಜರುಗುವ ಈ ಬೃಹತ್ ಮೇಳದಲ್ಲಿ ಲಕ್ಷಾಂತರ ಜನರು ಹಣಕೊಟ್ಟು ಭಾಗವಹಿಸಲು ಬರುತ್ತಾರೆ.ಕಣ್ಣು ಕುಕ್ಕುವ ಸೆಟ್ಟಿಂಗುಗಳು, ನಯನಾನಂದಕರ ದೃಶ್ಯಗಳು, ಕರ್ಣಾನಂದಕರ ಸಂಗೀತ, ಎದೆ ಝಲ್ಲೆನಿಸುವ ಡೈಲಾಗುಗಳು..  -ನಾನು ಹುಡುಗನಾಗಿದ್ದಾಗ ನಮ್ಮ ಅಚ್ಚಿನ ಮನೆಯಲ್ಲಿ ಹಳ್ಳಿ ನಾಟಕ ನಿರ್ಮಾತೃಗಳು ತಮ್ಮ ಪ್ರದರ್ಶನಗಳ ಬಗ್ಗೆ ಮಾಡಿಸುತ್ತಿದ್ದ ಕರಪತ್ರಗಳಲ್ಲಿ ಇಂಥ ವರ್ಣನೆಗಳನ್ನು ಎಗ್ಗಿಲ್ಲದೆ ಬಳಸುತ್ತಿದ್ದರು. ಇದೇ ರೀತಿಯ ವರ್ಣನೆಗಳ ಸರಮಾಲೆಯಿಂದ ಜೈಪುರದ ಸಾಹಿತ್ಯ ಮೇಳವನ್ನು ಬಣ್ಣಿಸಿದರೆ ಅದೇನೂ ಅತಿಶಯೋಕ್ತಿಯಲ್ಲ.ಇಡೀ ಮೇಳ ನಡೆಯುವುದು ಗತಾನುಗತಿಕ ಮಹದ್ವೈಭವಗಳ ಸಂಕೇತದಂತಿರುವ ರಗುತಗೆಂಪಿನ ಕಲ್ಲಿನಲ್ಲಿ ಕಟ್ಟಿದ ಅರಮನೆಯೊಂದರ ವಿಶಾಲ ವಾತಾವರಣದಲ್ಲಿ. ಹಲವು ಗೋಷ್ಠಿಗಳು ಹಲವು ಕಡೆ ಏಕಕಾಲಕ್ಕೆ ನಡೆಯುವಂತೆ ಮಹಾಭಾರತದ ಮಯನ ಪ್ರತಿಭೆಯನ್ನು ಸರಿದೂಗುವ ಕೌಶಲದಿಂದ ಕಟ್ಟಲಾಗುವ ಟೆಂಟುಗಳ ಆಕರ್ಷಣೆಯೂ ಅದಮ್ಯವಾದುದು. ರಾಜ ವೈಭವವನ್ನು ನೆನಪಿಸುವ ಬೃಹತ್ ಭೋಜನ ಭಂಡಾರವೂ ಆಕರ್ಷಣೆಯ ಕೇಂದ್ರ.ತಮ್ಮ ಗಮಲು, ಬಣ್ಣ ಮತ್ತು ರುಚಿಗಳಿಂದ ಅನ್ನ, ರೊಟ್ಟಿ, ಪೂರಿಗಳ ರಾಶಿ, ತರಕಾರಿ ಮತ್ತು ಮಾಂಸದ ಅಡುಗೆಗಳ ಬಣ್ಣ ಬಣ್ಣದ ಕಿರುಗುಡ್ಡಗಳು, ಭೋಜನದ ಬಯಲಿನ ಮೂಲೆಗಳಲ್ಲಿ ಸಚಿತ್ರಧಾರೆಯಂತೆ ಹರಿಯುತ್ತಿರುವ ವೈನ್, ವಿಸ್ಕಿ ಮತ್ತು ಬಿಯರಿನ ಮಳಿಗೆಗಳು, ಈ ಎಲ್ಲದರ ಹಿನ್ನೆಲೆ ಮಾದಕಸಂಗೀತ. ಈ ಎಲ್ಲವೂ ಹಸಿವು ನೀಗಿಸುವುದರ ಜೊತೆಗೆ ಸರ್ವೇಂದ್ರಿಯಗಳನ್ನೂ ಸಾಕುಸಾಕೆನಿಸುವಷ್ಟು ಉಣಬಡಿಸುವ, ತಣಿಸಿ ಕುಣಿಸುವ ಸಾಧನಗಳಾಗಿರುತ್ತವೆ.ಸಾಹಿತ್ಯಾಸಕ್ತರ, ಬುದ್ಧಿಪರಾಯಣರ ಬಹುದೊಡ್ಡ ಹಿಂಡು ಜೈಪುರಕ್ಕೆ ಈ ಸಂದರ್ಭದಲ್ಲಿ ಲಗ್ಗೆಯಿಡುತ್ತದೆ. ಆದರೆ ಆ ಮೇಳಕ್ಕೆ ಬಹುದೊಡ್ಡ ಸಂಖ್ಯೆಯಲ್ಲಿ ಬಂದು ನೆರೆಯುವವರು ಇತರ ಜನವರ್ಗದವರು.ಸಾಹಿತ್ಯ, ಸಿನಿಮಾ, ಸಂಗೀತ, ಹಬ್ಬ, ಪಿಕ್‌ನಿಕ್ ಇತ್ಯಾದಿಗಳ ರಸಮಂಜರಿಯಾಗಿರುವ ಜೈಪುರ ಮೇಳಕ್ಕೆ ಶಾಲಾ ಮಕ್ಕಳು, ಕಾಲೇಜು ಹುಡುಗ-ಹುಡುಗಿಯರು, ಅಕ್ಷರಸ್ಥ ಮಧ್ಯಮ ವರ್ಗದ ಪ್ರಭೃತಿಗಳು ಬಹು ದೊಡ್ಡ ಸಂಖ್ಯೆಯಲ್ಲಿ ಬಂದು ನೆರೆಯುವುದರಿಂದ ಮೇಳದ ಆವರಣದಲ್ಲಿ ಹಲವು ಸಲ ಒಂದು ಸೂಜಿಯನ್ನೂ ತೂರಿಸಲಾಗದಷ್ಟು ಜನಸಂದಣಿ. `ಅಗೊ ಅಲ್ಲಿ ನೋಡು, ಇಲ್ಲಿ ನೋಡು' ಅಂತ ಒಬ್ಬರಿಗೊಬ್ಬರು ಹೇಳುವ ಕಾನ್ವೆಂಟ್ ಯೂನಿಫಾರಮಿನ ಬಾಲಕ-ಬಾಲಕಿಯರು,  ರಸಮಂಜರಿ ಪ್ರದರ್ಶನದ ಪ್ರೇಕ್ಷಕರು ಮಾತ್ರವಲ್ಲ, ಪ್ರೇಕ್ಷಣೀಯ ವಸ್ತುಗಳೂ ಹೌದು.ಏಕಕಾಲದಲ್ಲಿ ಹಲವು ಟೆಂಟುಗಳಲ್ಲಿ ವಿವಿಧ ಚರ್ಚೆಗಳು, ಸಂಗೀತ ಗೋಷ್ಠಿಗಳು, ಕುಣಿತದ ಕಾರ್ಯಕ್ರಮಗಳು ನಡೆಯುವುದರಿಂದ ಜನತೆ ಎಷ್ಟೋ ಸಲ ಟೆಂಟಿನಿಂದ ಟೆಂಟಿಗೆ ಹಾರಲು ಬಯಸಿ, ಪಥಭ್ರಷ್ಟರಾಗಿ ಅಂಡಲೆಯುತ್ತಿರುವ ಅಪಾರ ಜನಸಂದಣಿಯಲ್ಲಿ  ತಾವೂ ದಿಕ್ಕುಗೆಡುವುದೂ ಅಪರೂಪವೇನಲ್ಲ.ಗಂಭೀರಪ್ಪ, ಗಂಭೀರಮ್ಮಗಳು ತಮಗೆ ಬೇಕಾದ ಗೋಷ್ಠಿಗಳನ್ನು ಮೊದಲೇ ಆಯ್ದುಕೊಂಡರೂ, ಬಹುದೊಡ್ಡ ಚಿಂತಕರ ಮಂಡನೆಗಳನ್ನು ಕೇಳಿದಾಗಲೂ, ಒಮ್ಮನದಿಂದ ಕೇಳಿಸಿಕೊಂಡು ಚಿಂತನಾಪೂರ್ವಕವಾಗಿ ಪ್ರತಿಕ್ರಿಯಿಸಲು ತಕ್ಕ ಪ್ರಶಾಂತ ವಾತಾವರಣವಿರುವುದಿಲ್ಲ.ಸಾಹಿತ್ಯ ಮತು ಚಿಂತನೆಯ ವಿಪುಲತೆ ಜೈಪುರ ಮೇಳದಲ್ಲಿರುವುದು ನಿಜವಾದರೂ ಆ ವಿಪುಲತೆ ಸಾಹಿತ್ಯಕ ಹಸಿವನ್ನು ನೀಗಿಸುವಂಥದಲ್ಲ; ಅಥವಾ ಹೆಚ್ಚಿಸುವುದೂ ಅಲ್ಲ. ಸಾಹಿತ್ಯ ಮತ್ತು ಚಿಂತನಗಳ ಸುತ್ತಮುತ್ತಲ ಆಕರ್ಷಣೆಗಳತ್ತ, ಅನುಕೂಲಗಳತ್ತ, ಪ್ರಯೋಜನಗಳತ್ತ ನಮ್ಮ ಚಿತ್ತವೃತ್ತಿಗಳನ್ನು ತಿರುಗಿಸುವಂತಿರುತ್ತವೆ.ಇಲ್ಲಿ ಬಂದು ಕೃತಿಗಳನ್ನು ಓದುವ, ಭಾಷಣಗಳನ್ನು ಮಂಡಿಸುವ, ಚರ್ಚೆ ನಡೆಸುವವರಲ್ಲಿ ಅತ್ಯಂತ ಸಮರ್ಥರಿರುವುದು ನಿರ್ವಿವಾದ. ಆದರೆ ಸಾಹಿತ್ಯೇತರ ಕಾರಣಗಳಿಂದ ಹಲವು ಕಳಪೆ ಬರಹಗಾರ - ಬರಹಗಾರ್ತಿಯರೂ ಹೇಗೋ ಆಹ್ವಾನಿತರ ಪಟ್ಟಿಯೊಳಗೆ ತೂರಿಕೊಂಡುಬಿಟ್ಟಿರುತ್ತಾರೆ. ಆದ್ದರಿಂದ ಗೋಷ್ಠಿಗಳ ಒಟ್ಟು ಸ್ವರೂಪ ಮುಕ್ಕಾಗಿಬಿಡುತ್ತದೆ.ಅಂತಹವರಲ್ಲಿ ಕೆಲವರು ಭಾಷಣ ಕುಟ್ಟತೊಡಗಿದರೆ ನಿಲ್ಲಿಸುವುದೇ ಇಲ್ಲ. ಗೋಷ್ಠಿಗಳ ನಿರ್ವಾಹಕರೂ ಅವರ ಮುಂದೆ ಅಪ್ರತಿಭರಾಗುವಷ್ಟು ಭರಾಟೆಯಿಂದ ಗುಡುಗತೊಡಗುತ್ತಾರೆ. ಕೆಲ ವರ್ಷಗಳ ಹಿಂದೆ ಸ್ಥಳೀಯ ಸಾಹಿತಿಗಳಿಗೆ ಜಾಗ ಸಿಗುತ್ತಿಲ್ಲ ಎಂದು ಕೆಲವು ಸ್ಥಳೀಕ ಬರಹಗಾರರು ಕೂಗಾಡಿದ ಕಾರಣ ಅವರಲ್ಲಿ ಹೆಚ್ಚಿನ ಗಟ್ಟಿ ದನಿಯ ಕೆಲವರಿಗೆ ಅವಕಾಶ ಮಾಡಿಕೊಡುವುದು ಸಂಘಟಕರಿಗೆ ಅನಿವಾರ್ಯವಾಗಿರಬೇಕು.ಬಹುತೇಕ ಗೋಷ್ಠಿಗಳು ಇಂಗ್ಲಿಷಿನಲ್ಲಿದ್ದು ಕೆಲವು ಮಾತ್ರ ಹಿಂದಿಯಲ್ಲಿರುತ್ತವೆ. ಎರಡೂ ಕಡೆ ನಡೆಯುವ ಚರ್ಚೆಗಳನ್ನು ಗಮನಿಸಿದಾಗ ಹಿಂದಿ ಮತ್ತು ಇಂಗ್ಲಿಷ್ ಕೇವಲ ಎರಡು ಭಾಷೆಗಳಲ್ಲ, ಎರಡು ವಿಭಿನ್ನ ಸಂಸ್ಕೃತಿಗಳೆನ್ನುವುದು ಗೋಚರವಾಗುತ್ತದೆ. ಅತ್ಯಂತ ನಾಜೂಕಾದ, ವ್ಯಂಗ್ಯಪೂರ್ಣವಾದ, ಇಂದಿನ ತಾಜಾತನದ ಇಂಗ್ಲಿಷ್ ವಾಗ್ಮಿಗಳ ಶೈಲಿಗೂ ಉತ್ಪ್ರೇಕ್ಷಾಪ್ರಿಯರಾದ ಹಿಂದಿಯವರ ದನಿಗೂ ನಡುವೆ ದೂರ ಅಪಾರ.ಇಂಗ್ಲಿಷೋಪಜೀವಿಗಳು ಮೈಝುಮ್ಮೆನಿಸುವ ಪದಪುಂಜಗಳನ್ನು, ಪರಿಕಲ್ಪನೆಗಳನ್ನು ಗುಲಾಲಿನ ಹಾಗೆ ಒಬ್ಬರ ಮೇಲೊಬ್ಬರು ಚೆಲ್ಲುತ್ತಿರುತ್ತಾರೆ. ಆದರೆ ನಡುನಡುವೆ ಅಂಥ ಪದಪುಂಜಗಳ ಸಾಸನ್ನು ತಮ್ಮ ದೇಸೀ ಪರೋಟಾಗಳಿಗೆ ಲೇಪಿಸಿಕೊಳ್ಳಲು ಪ್ರಯತ್ನ ಪಡುತ್ತಿದ್ದರೂ ಅವರು ಅವರೇ, ಇವರು ಇವರೇ.ಈ ಎರಡು ಸಂಸ್ಕೃತಿಗಳ ಪಾತಳಿಗಳು, ಸುತ್ತುನೆಲೆಗಳು ಬೇರೆಯಾಗಿಯೇ ಇರುತ್ತವೆ. ಕೆಲವು ಸಲ ಒಂದನ್ನೊಂದು ಮೂಸಿ ನೋಡುತ್ತವೆಯೇ ಹೊರತು ಅವೆರಡರ ನಡುವೆ ಅರ್ಥಪೂರ್ಣವಾದ ಸಂವಾದ ನಡೆಯುವುದಿಲ್ಲ. ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಹತ್ವದ ಬರಹಗಾರರ ಸಂಗಮವಾದ ಜೈಪುರದಲ್ಲಿ ಈ ಎರಡು ಸಂಸ್ಕೃತಿಗಳ ಸಂವಾದ ನಡೆದಿದ್ದರೆ ತುಂಬಾ ಚೆನ್ನಾಗಿರುತ್ತಿತ್ತು. ಆದರೆ ಹಾಗಾಗದೆ ದೇಸೀ ಸಾಹಿತಿಗಳಿಗೆ ಅಂತರರಾಷ್ಟ್ರೀಯ ಸಂಸ್ಕೃತಿಯ ಪರಿಪ್ರೇಕ್ಷದಲ್ಲಿ ನಡೆಯುವ ಗೋಷ್ಠಿಗಳ ನಡುವೆ ಒಂದೀಸು ಕೈಯಗಲ ಜಾಗ ಕೊಡಲಾಗುವ ಬಗೆಯಲ್ಲಿ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತದೆ.ಏತನ್ಮಧ್ಯೆ ರೋಚಕವಾದ ನ್ಯೂಸ್ ಐಟಮ್ಮುಗಳ ತಲಾಷಿನಲ್ಲಿರುವ ಮಾಧ್ಯಮದ ಮಹಾಮಹೋಪಾಧ್ಯಾಯರಿಗೆ ಬಹುಮಟ್ಟಿಗೆ ಗಂಭೀರ ಚರ್ಚೆಗಳ ಬಗ್ಗೆ ಆಸಕ್ತಿ, ಅಭಿರುಚಿಗಳಿಲ್ಲದ ಕಾರಣ `ಬ್ರೇಕಿಂಗ್ ನ್ಯೂಸ್' ಏನಾದರೂ ಇದೆಯಾ ಎಂದು ಹುಡುಕುತ್ತಿರುತ್ತಾರೆ. ಸಿಕ್ಕಿದ ಕೂಡಲೇ ಅದನ್ನು ಎಲ್ಲ ಚರ್ಚೆಗಳ ಕೇಂದ್ರವೋ ಎಂಬಂತೆ ವೈಭವಿಸತೊಡಗುತ್ತಾರೆ. ಆ ಭರಾಟೆಯಲ್ಲಿ ಮೇಳದಲ್ಲಿ ನಡೆದ ಅರ್ಥಪೂರ್ಣ ಚರ್ಚೆಗಳು ಕೊಚ್ಚಿಕೊಂಡುಹೋಗುತ್ತವೆ.ಉದಾಹರಣೆ: ಹೋದ ವರ್ಷ ಇಡೀ ಮೇಳದ ವರದಿಗಳು ಏಕದಮ್ ರಶ್ದೀಕೇಂದ್ರಿತವಾಗಿಬಿಟ್ಟವು. ಮೊದಲು ರಶ್ದೀ ಬಂದಾರೋ ಬಾರರೋ ಎಂಬ ಚಿಂತೆ. ಆಮೇಲೆ ಬರುತ್ತಾರೆಂಬ, ಬರದಿರಬಹುದೆಂಬ, ಬಾರದಿರದಾರೆಂಬ ಪುಕಾರುಗಳು. ಭಾರತದಲ್ಲಿ ಬ್ಯಾನ್ ಆಗಿರುವ ಶ್ರೀಯುತರ `ಸಟಾನಿಕ್ ವರ್ಸಸ್' ನ ಭಾಗಗಳನ್ನು ಖುಲ್ಲಾ ಖುಲ್ಲಾ ಗೋಷ್ಠಿಯೊದರಲ್ಲಿ ಓದಿ ಬರಹಗಾರನ ಸ್ವಾತಂತ್ರ್ಯವನ್ನು ಎತ್ತಿಹಿಡಿಯಲೆಳೆಸಿದ ಮುಕ್ತ ವಿದೇಶೀ ಲೇಖಕರೊಬ್ಬರು ತಮ್ಮನ್ನು ಕರೆಸಿಕೊಂಡಿರುವ ಭಾರತೀಯ ಜನತೆಯ ಸರ್ಕಾರಕ್ಕೆ, ಇಲ್ಲಿನ ಅಲ್ಪಸಂಖ್ಯಾತರ ಸಂವೇದನೆಗಳಿಗೆ ಚ್ಯುತಿಯನ್ನುಂಟು ಮಾಡಿದರು.ಆದರೆ ಇದೊಂದು ವೀರಾವೇಶದ ವ್ಯಕ್ತಿಸ್ವಾತಂತ್ರ್ಯದ ಅಭಿವ್ಯಕ್ತಿಯೆನ್ನುವಂತೆ ಮಾಧ್ಯಮದ ಕೆಲವರು ಬರೆದರು. ಸರ್ಕಾರದ ಪೊಲೀಸರ ಬಂದೋಬಸ್ತಿನಲ್ಲಿ ನಡೆಯುತ್ತಿರುವ ಮೇಳದಲ್ಲಿ ಇಂಥ ವೀರಾವೇಶ ಅನಗತ್ಯವಾಗಿತ್ತು. ಕೊನೆಗೆ ರಶ್ದಿ ಮಹಾಶಯರು ಬರದಂತಾಗಿ  ಭಾಗವಹಿಸಿದ ಬರಹಗಾರರು ಸ್ವಲ್ಪ ನಿಸೂರಾದರು.ಆದರೆ ಮಾಧ್ಯಮದವರು ಎಲ್ಲ ಬರಹಗಾರರು ಎಲ್ಲ ಬರಹಗಾರರಿಗೆ ಹಾಕುತ್ತಿದ್ದ ಪ್ರಶ್ನೆ ಒಂದೆ:  `ಇದು ಬರಹಗಾರರ ಹಕ್ಕುಗಳ ಉಲ್ಲಂಘನೆಯಲ್ಲವೆ?' ಅಕ್ಕಮಹಾದೇವಿ, ಮೀರಾ, ಲಲ್ಲೆೀಶ್ವರಿ, ಕಬೀರ, ರೂಮಿ, ಸಮಕಾಲೀನ ತೀವ್ರವಾದಗಳು, ಅಲ್ಪಸಂಖ್ಯಾತ ಸಾಹಿತ್ಯ-ಇಂಥಾ ಮಹತ್ವದ ವಿಷಯಗಳ ಬಗ್ಗೆ ನಡೆದ ಗಂಭೀರ ಚರ್ಚೆಗಳಿಗೆ ಮಾಧ್ಯಮದಲ್ಲಿ ಜಾಗ ಸಿಗಲಿಲ್ಲ.ಹೀಗಾಗಿ ಚರ್ಚೆಗಳನ್ನು ಹುಟ್ಟುಹಾಕಿಸಬಹುದಾಗಿದ್ದ ಜೈಪುರದ ಮೇಳ ಸುದ್ದಿಯನ್ನು ಮಾತ್ರ ಮಾಡಿತು. ಈ ಸಾರಿಯೂ ಹಾಗೇ ಆಗಿರುವಂತಿದೆ. ಈ ಸಲ ವಿಲಕ್ಷಣ ಚಿಂತಕರಾದ ಆಶಿಶ್ ನಂದಿ ಸುದ್ದಿ ಮಾಡಿದ್ದಾರೆ. ಅಲ್ಪ ಸಂಖ್ಯಾತರು ಮತ್ತು ದಲಿತರ ನಡುವೆ ಭ್ರಷ್ಟಾಚಾರ ಅಧಿಕವಾಗಿದೆಯೆಂದು ಅಪ್ಪಣೆ ಕೊಡಿಸಿ ಇಕ್ಕಟ್ಟಿಗೆ ಸಿಕ್ಕಿಹಾಕಿಕೊಂಡಿದ್ದಾರೆ. ಪೊಲೀಸು, ಅರೆಸ್ಟ್ ವಾರಂಟುಗಳ ಸುದ್ದಿ ಬಂದೊಡನೆ `ನಾನು ಅಂದದ್ದು ಹೀಗಲ್ಲ ಹಾಗೆ' ಎಂದು ಸಮಜಾಯಿಷಿ ನೀಡಿದ್ದಾರೆ.ಕಾಂಚ ಇಲಯ್ಯನವರಂಥ ದಲಿತವಾದಿಗಳೂ, ಶಿವ ವಿಶ್ವನಾಥನ್‌ರವರಂಥ ಕಠಿಣಗ್ರಾಹ್ಯರಾದ ಸಮಾಜಚಿಂತಕರೂ ಬಹುಶಃ ನಂದಿಯವರ ಅಂತರಂಗ ವಿಪಿನ ಸಂಚಾರಿಗಳಂತೆ ಅವರು ಹೇಳಿದ್ದರ ಒಳಾರ್ಥ ಬೇರೆಯೆಂದು ಸಾಧಿಸಹೊರಟಿದ್ದಾರೆ. ಅತ್ಯಂತ ಪ್ರಗತಿಪರವೆನಿಸಿಕೊಂಡಿರುವ ಜವಾಹರಲಾಲ ವಿಶ್ವವಿದ್ಯಾಲಯದ ನನ್ನ ಕೆಲವು ಸಹೋದ್ಯೋಗಿಗಳು `ನಂದಿ ಅವರು, ಹಿಂದುಳಿದವರನ್ನು ಬೈದು ಹಾಗಂದಿಲ್ಲ, ಅವರ ಭಾಷೆ ವ್ಯಂಗ್ಯಪೂರ್ಣವಾಗಿರುವುದರಿಂದ ಹಾಗೆ ತಪ್ಪು ತಿಳಿದುಕೊಳ್ಳುವುದು ಹೊಸತಲ್ಲ, ಅಂಥ ಮಹಾನ್ ಚಿಂತಕರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸರಿಯಾಗಿ ಆಲೋಚಿಸುವರೆಲ್ಲಾ ಸಮರ್ಥಿಸಬೇಕು' ಎನ್ನುವ ಹೇಳಿಕೆಗೆ ಸಹಿ ಸಂಗ್ರಹ ಮಾಡುತ್ತಿದ್ದಾರೆ. ನಾನು ಈ ಹೇಳಿಕೆಗೆ ಸಹಿ ಹಾಕುವುದಿಲ್ಲ.ಯಾಕೆಂದರೆ ಇಂಥಾ ವ್ಯಂಗ್ಯ-ಪ್ಯಂಗ್ಯಗಳು ಒಂದು ತೆರನ ಆಂಗ್ಲೀಕೃತ ಸಾಹಿತ್ಯಕ್ಕೆ ಜೀವಾಳವಾಗಬಹುದೇ ಹೊರತು, ಜಾತಿಶೋಷಣೆ ಇನ್ನೂ ಸ್ಫೋಟಕಾವಸ್ಥೆಯಲ್ಲಿರುವ ಭಾರತದ ಒಬ್ಬ ಜವಾಬ್ದಾರಿಯುತ ಸಮಾಜಶಾಸ್ತ್ರಜ್ಞನ ಹೇಳಿಕೆಯಲ್ಲಲ್ಲ.ವರದಿಗಳ ಆಧಾರದ ಮೇಲೆ ವ್ಯಂಗ್ಯವನ್ನು ಬಿಟ್ಟು ಗ್ರಹಿಸಿದಾಗ ನಂದಿ ಅವರ ಅಭಿಪ್ರಾಯವನ್ನು ಹೀಗೆ ಸಂಗ್ರಹಿಸಬಹುದು: ಭ್ರಷ್ಟಾಚಾರವು ನಮ್ಮ ಸಮಾಜದಲ್ಲಿ ಸಮಾನತೆಯ ಹೆಬ್ಬಾಗಿಲಾಗುತ್ತಿದ್ದು, ದಲಿತರು ಮತ್ತು ಹಿಂದುಳಿದವರಿಗೆ ಮುನ್ನೇರಲು ಬೇರೆ ದಾರಿಯಿಲ್ಲ.ಸನ್ಮಾನ್ಯರ ಹೇಳಿಕೆಯ ಮುಖ್ಯಾಂಶಗಳು: 1. ದಲಿತರೂ ಹಿಂದುಳಿದವರೂ ಭ್ರಷ್ಟಾಚಾರಿಗಳು. 2. ಭ್ರಷ್ಟಾಚಾರ ಸಮಾನತೆಯ ಅಸ್ತ್ರವಾಗಿದೆ. 3. ಸಮಾನತೆಗಾಗಿ ದಲಿತರು ಭ್ರಷ್ಟಾಚಾರ ಮಾಡಿದರೆ ಭ್ರಷ್ಟಾಚಾರವನ್ನು ಖಂಡಿಸುವವರು ಸಾಂಪ್ರದಾಯಿಕ ನ್ಶೆತಿಕತೆಯ ಖೈದಿಗಳು.ಒಗಟಿನಂತೆ ಮಾತಾಡುವ ನಂದಿಯಂಥ ಸಂಕೀರ್ಣ ಬುದ್ಧಿಜೀವಿಗಳ ಮಾತು ನನ್ನಂಥ ಪಾಮರರಿಗೆ ಅರ್ಥವಾಗುವುದೇನಾರೂ ಸಾಧ್ಯವಾದರೆ ಅವರೆಂದಿರುವುದರ ತಾತ್ಪರ್ಯ ಇಷ್ಟು. ಇದು ದಲಿತರ, ಹಿಂದುಳಿದವರ ನಿಂದನೆಯಲ್ಲದಿದ್ದರೆ ಭ್ರಷ್ಟಾಚಾರದ ಸಮರ್ಥನೆ. ಅಥವಾ ಭ್ರಷ್ಟಾಚಾರದ ನಿಂದನೆಯಾಗಿದ್ದರೆ ದಲಿತರ ನಿಂದನೆ.ದಲಿತರು, ಹಿಂದುಳಿದವರೂ ಹೆಚ್ಚು ಭ್ರಷ್ಟರೆಂದು, ಮೇಲುಜಾತಿಯವರು ಕಡಿಮೆ ಭ್ರಷ್ಟರೆಂದು ಸಾಬೀತು ಮಾಡುವ ಅಂಕಿ ಅಂಶಗಳನ್ನು ಸನ್ಮಾನ್ಯರು ಸಿದ್ದಪಡಿಸಿಲ್ಲವಾಗಿ ಅವರ ನಿಂದನೆಗೆ ಯಾವ ಭದ್ರವಾದ ಬುಡವೂ ಇಲ್ಲ. ಅಸಮಾನತೆಯ ಬಹುದೊಡ್ಡ ಸಂಗಾತಿಯಾದ ಭ್ರಷ್ಟಾಚಾರವನ್ನು ಸಮಾನತೆಯ ಹಾದಿಯೆನ್ನುವುದಾಗಿ ಅವರು ಜೋಕು ಮಾಡುತ್ತಿದ್ದಾರೆ ಅಂದುಕೊಂಡರೂ ಅದೊಂದು ಅತ್ಯಂತ ಕ್ರೂರ ಜೋಕೆನ್ನದೆ ಬೇರೆ ವಿಧಿಯಿಲ್ಲ.ಬಂಗಾಳಿ ಬ್ರಾಹ್ಮಣರೆಲ್ಲ ಅಪ್ರಾಮಾಣಿಕರು ಎಂದು ಹುಂಬನೊಬ್ಬ ಹೇಳಿದರೆ ಅದು ಎಷ್ಟು ಅಪಥ್ಯವೋ ನಂದಿ ಅವರ ಮಾತೂ ಅಷ್ಟೆ. ನಂದಿ ಅವರನ್ನು ಬರಹಗಾರನ ಸ್ವಾತಂತ್ರ್ಯದ ದೃಷ್ಟಿಯಿಂದ ಸಮರ್ಥಿಸುವವರು ದಲಿತರು, ಹಿಂದುಳಿದವರು ಆ ಮಾತನ್ನು ವಿರೋಧಿಸಿ ತಮ್ಮ ಅಭಿಪ್ರಾಯ ಸ್ವಾತಂತ್ರ್ಯವನ್ನು ಪ್ರಕಟಿಸಿದಾಗ ನಂದಿ ಬ್ರಿಗೇಡ್‌ನ ಬುದ್ಧಿಜೀವಿಗಳು ಅದೇಕೆ ಅಷ್ಟು ತಲ್ಲಣಗೊಳ್ಳುತ್ತಾರೆ?ನನ್ನ ವಿಷಾದಕ್ಕೆ ಎರಡು ಕಾರಣಗಳು:

ಮುಕ್ತ ಚಿಂತನೆಯ ವೇದಿಕೆಯಾದ ಜೈಪುರ ಮೇಳ ಯಾಕೆ ಹೀಗೆ ಬರೀ ಸುದ್ದಿ ಮಾಡುವುದರಲ್ಲಿ ಪರ್ಯವಸಾನವಾಗುತ್ತಿದೆ? 

ನಮ್ಮ ಪ್ರಜಾತಂತ್ರದ ಅಸಲಾಗಬೇಕಾದ ಧರ್ಮನಿರಪೇಕ್ಷತೆ, ಸಾಮಾಜಿಕ ನ್ಯಾಯ, ಪ್ರಾಮಾಣಿಕತೆ ಮತ್ತು ಪಾರದರ್ಶಕತೆಯನ್ನು ಗೇಲಿ ಮಾಡುವ ನಂದಿಯಂಥವರ ಉದ್ದೇಶ ಮತ್ತು ಪ್ರೇರಣೆಗಳಾದರೂ ಏನಿರಬಹುದು? ಯಾವ ಒಳ ಮತ್ತು ಹೊರಗಿನ ಶಕ್ತಿಗಳು ತೆರೆಯ ಹಿಂದೆ ಸಕ್ರಿಯವಾಗಿರಬಹುದು?ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.