ಮಂಗಳವಾರ, ಏಪ್ರಿಲ್ 13, 2021
32 °C

ಜ್ಞಾನದೀಕ್ಷೆ

ಗುರುರಾಜ ಕರ್ಜಗಿ Updated:

ಅಕ್ಷರ ಗಾತ್ರ : | |

ಜ್ಞಾನಾರ್ಜನೆಯ ಆಸೆಯೊಂದಿಗೆ ವ್ಯಕ್ತಿಯೊಬ್ಬ ಮನೆಯಿಂದ ಹೊರನಡೆದ. ಹೇಗಾದರೂ ಮಾಡಿ ಜ್ಞಾನಿಯಾದ ಗುರುಗಳನ್ನು ಪಡೆದುಕೊಂಡು ಅವರಿಂದ ಜ್ಞಾನದೀಕ್ಷೆಯನ್ನು ಹೊಂದುವುದು ಅವನ ನಿರ್ಧಾರ. ಸುತ್ತಾಡಿ, ಸುತ್ತಾಡಿ ಸುಸ್ತಾದಾಗ ಯಾರೋ ಒಬ್ಬರು ಇಂಥ ಊರಿನಲ್ಲಿ ಒಬ್ಬ ಮಹಾತ್ಮರಿದ್ದಾರೆ ಎಂದು ತಿಳಿಸಿದರು. ಈತ ಅಲ್ಲಿಗೆ ಓಡಿದ, ಮಹಾತ್ಮರನ್ನು ಕಂಡು ತನ್ನ ಆಸೆಯನ್ನು ಹೇಳಿಕೊಂಡ.ಆಗ ಆ ಸಂತರು, ‘ಆಯ್ತು, ನಿನಗೆ ಜ್ಞಾನದೀಕ್ಷೆ ನೀಡುತ್ತೇನೆ. ಆದರೆ ಅದಕ್ಕಿಂತ ಮೊದಲು ನೀನು ನನ್ನ ಅವಶ್ಯಕತೆ ಪೂರೈಸಬೇಕು. ನನಗೆ ಒಂದು ಪುಟ್ಟ ಕಂಬಳಿ ಬೇಕು. ಪ್ರತಿ ಚಳಿಗಾಲದಲ್ಲಿ ನಾನೊಂದು ಕಂಬಳಿಯನ್ನು ದಾನಮಾಡುವ ವ್ರತ ಹೊಂದಿದ್ದೇನೆ. ಆದರೆ ಈ ಬಾರಿ ನನ್ನ ಬಳಿ ಒಂದೂ ಕಂಬಳಿಯಿಲ್ಲ. ನೀನು ಒಂದನ್ನು ತಂದುಕೊಡಬಹುದೇ?’ ಎಂದು ಕೇಳಿದರು.ಅದಕ್ಕೆ ಆತ, ‘ಅದೇನು ದೊಡ್ಡ ವಿಷಯ, ಈಗಲೇ ತಂದುಬಿಡುತ್ತೇನೆ’ ಎಂದು ನಡೆದ. ಅವನು ನೇರವಾಗಿ ಕಂಬಳಿಯ ವ್ಯಾಪಾರಿಯ ಮನೆಗೆ ನಡೆದು ತನ್ನ ಅಗತ್ಯವನ್ನು ಹೇಳಿದ. ಅದಕ್ಕೆ ಅವನು, ‘ನನ್ನ ಹತ್ತಿರ ಒಂದು ಕಂಬಳಿಯೂ ಇಲ್ಲ. ಈಗೀಗ ಕಂಬಳಿಯನ್ನು ನೇಯಲು ಉಣ್ಣೆಯ ದಾರವೇ ಸಿಗುತ್ತಿಲ್ಲ. ಅದನ್ನು ತಂದುಕೊಟ್ಟರೆ ಕಂಬಳಿ ಮಾಡಿಕೊಟ್ಟೇನು’ ಎಂದ. ಈತ ಉಣ್ಣೆಯ ನೂಲನ್ನು ಮಾಡುವ ಮಳೆಯ ಮನೆಗೆ ಬಂದು ತನ್ನ ಪರಿಸ್ಥಿತಿಯನ್ನು ಹೇಳಿಕೊಂಡು ಸಹಾಯ ಕೇಳಿದ.ಆಕೆ, ‘ಹೌದಪ್ಪ, ನಿನಗೆ ಜ್ಞಾನ ಬೇಕು, ನಿಜ. ಆದರೆ ನನ್ನ ಕಷ್ಟ ನನಗೆ. ಇತ್ತೀಚಿಗೆ ಕುರುಬರು ನನಗೆ ಉಣ್ಣೆಯನ್ನೇ ತಂದುಕೊಡುತ್ತಿಲ್ಲ. ನೀನೇ ಹೋಗಿ ಒಂದಿಷ್ಟು ಉಣ್ಣೆ ತಂದುಕೊಟ್ಟರೆ, ನೂಲುಮಾಡಿ ಕೊಡುತ್ತೇನೆ’ ಎಂದಳು. ಈತ ಕುರುಬರ ಪ್ರಮುಖನ ಬಳಿಗೆ ಹೋಗಿ ತನ್ನ ಜ್ಞಾನದಾಹದ ವಿಷಯವನ್ನೆಲ್ಲ ವಿಸ್ತಾರವಾಗಿ ಹೇಳಿಕೊಂಡು ಸ್ವಲ್ಪ ಉಣ್ಣೆ ಬೇಕು ಎಂದು ಕೇಳಿದ. ಆ ಹಿರಿಯ, ‘ಅದೇನು ಜ್ಞಾನವೋ ನನಗೆ ತಿಳಿಯದು. ನನ್ನ ಸಮಸ್ಯೆ ನನಗೆ. ರಾತ್ರಿ ಕುರಿ ಕಾಯುವಾಗ ಅವು ತಪ್ಪಿಸಿಕೊಂಡು ಹೋಗಿಬಿಡುತ್ತವೆ.ಅವುಗಳನ್ನು ಕೂಡಿಹಾಕಲು ಮರದ ಬೇಲಿಯೊಂದನ್ನು ಕಟ್ಟಿಸಬೇಕಾಗಿದೆ. ನೀನು ಹೋಗಿ ಬಡಿಗನಿಂದ ಅಂಥ ಬೇಲಿಯೊಂದನ್ನು ಮಾಡಿಸಿಕೊಂಡು ಬಾ. ಅಷ್ಟರೊಳಗೆ ಉಣ್ಣೆಯನ್ನು ತೆಗೆಸಿ ಇಟ್ಟಿರುತ್ತೇನೆ.’ ಎಂದ ಈ ಜ್ಞಾನದಾಹಿ ಬಡಿಗನ ಹತ್ತಿರ ಓಡಿದ. ಆತ ತಲೆಯಮೇಲೆ ಕೈ ಹೊತ್ತುಕೊಂಡು ಕುಳಿತಿದ್ದ. ‘ಯಾಕಪ್ಪ ಏನು ಚಿಂತೆ?’ ಎಂದು ಕೇಳಿ ತನ್ನ ಸಮಸ್ಯೆಯನ್ನು ಹೇಳಿಕೊಂಡ. ಆಗ ಆ ಬಡಗಿ, ‘ಹೋಗಯ್ಯ, ಜ್ಞಾನವಂತೆ, ದಾಹವಂತೆ. ಹೋಗಿ ಕೊಳಗ ನೀರು ಕುಡಿ ಎಲ್ಲ ಸರಿಯಾಗುತ್ತದೆ. ನನಗೇ ನನ್ನ ಚಿಂತೆ ಸಾಕಾಗಿ ಹೋಗಿದೆ.ನನ್ನ ಸಮಸ್ಯೆ ಬಗೆಹರಿಯುವವರೆಗೂ ನಾನು ಯಾವ ಕೆಲಸವನ್ನೂ ಮಾಡುವುದಿಲ್ಲ’ ಎಂದು ಖಡಾಖಂಡಿತವಾಗಿ ಹೇಳಿಬಿಟ್ಟ. ಆತನ ಸಮಸ್ಯೆ ಮದುವೆ. ಇನ್ನಾರು ತಿಂಗಳಲ್ಲಿ ಮದುವೆಯಾಗಲೇಬೇಕು ಎಂದು ಜ್ಯೋತಿಷಿಗಳು ಹೇಳಿದ್ದಾರಂತೆ. ಈಗ ಆಗದಿದ್ದರೆ ಅವನ ಜೀವನದಲ್ಲೇ ಮದುವೆ ಸಾಧ್ಯವಿಲ್ಲವಂತೆ. ಅವನಿಗೆ ತಕ್ಕ ಹುಡುಗಿ ಸಿಕ್ಕುತ್ತಿಲ್ಲ.‘ನೀನೊಂದು ಒಳ್ಳೆಯ ಹೆಣ್ಣು ಹುಡುಕಿಕೊಂಡು ಬಾರಯ್ಯ. ಆಗ ನಾನೇ ಖುದ್ದಾಗಿ ನಿನಗೆ ಕುರಿ ರಕ್ಷಿಸಲು ಬೇಲಿ ಮಾಡಿಕೊಡುತ್ತೇನೆ’ ಎಂದು ಇವನನ್ನು ಕಳುಹಿಸಿಬಿಟ್ಟ. ಈತ ಜೋಲುಮೋರೆ ಹಾಕಿಕೊಂಡು ಹೊರಬಂದ. ಓಣಿ ಓಣಿ ಅಲೆದ. ಒಂದು ಔಷಧದ ಅಂಗಡಿಯಲ್ಲಿ ಒಬ್ಬ ಹಿರಿಯ ವಯಸ್ಸಿನ ಮಹಿಳೆ ಔಷಧಿಯನ್ನು ತೆಗೆದುಕೊಂಡು ಅಳುತ್ತ ನಿಂತಿದ್ದಳು. ಏನು ಕಾರಣ ಎಂದು ಕೇಳಿದಾಗ ಅವಳ ಮಗಳಿಗೆ ಆರೋಗ್ಯ ಹದಗೆಟ್ಟಿದೆ ಎಂತಲೂ, ಅದು ಮನೋರೋಗವೆಂತಲೂ ಹೇಳಿದಳು.ಈತ ಆಕೆಯೊಂದಿಗೆ ಮನೆಗೆ ಹೋದ. ಅಲ್ಲೊಬ್ಬ ತರುಣಿ ಮಲಗಿದ್ದಾಳೆ. ತುಂಬ ಸುಂದರಿ ಆಕೆ ಆದರೆ ಬಳಲಿ ಹೋಗಿದ್ದಾಳೆ. ‘ಏನಮ್ಮಾ ನಿನ್ನ ಸಮಸ್ಯೆ?’ ಎಂದು ಕೇಳಿದರೆ ಆಕೆ ಹೇಳಿದಳು, ‘ನನ್ನ ಜಾತಕದಲ್ಲಿ ಒಬ್ಬ ಬಡಿಗನೊಡನೆ ಮದುವೆ, ಅದೂ ಮುಂದಿನ ತಿಂಗಳಲ್ಲಿ ಎಂದಿದೆ. ಅದು ಸುಳ್ಳಾಗುವುದು ಸಾಧ್ಯವಿಲ್ಲ. ಆದರೆ ಅಂಥ ಬಡಿಗ ಎಲ್ಲಿದ್ದಾನೋ ಗೊತ್ತಿಲ್ಲ’ ಎಂದು ನಿಟ್ಟಿಸಿರುಬಿಟ್ಟಳು. ಈತನಿಗೆ ಮಹದಾನಂದವಾಯಿತು.ಆಕೆಯನ್ನು ಕರೆದುಕೊಂಡು ಬಡಗಿಯ ಕಡೆಗೆ ಹೋದ. ಆತ ಸಂತೋಷದಿಂದ ಒಪ್ಪಿ ಈತನಿಗೆ ಬೇಲಿ ಮಾಡಿಕೊಟ್ಟ. ಬೇಲಿಯನ್ನು ಪಡೆದು ಕುರುಬ ಉಣ್ಣೆ ಕೊಟ್ಟ, ಅದನ್ನು ತೆಗೆದುಕೊಂಡು ಮಹಿಳೆ ನೂಲು ಮಾಡಿಕೊಟ್ಟಳು. ನಂತರ ವ್ಯಾಪಾರಿ ಸುಂದರವಾದ ಕಂಬಳಿ ಮಾಡಿಕೊಟ್ಟ. ಅದನ್ನು ತೆಗೆದುಕೊಂಡು ಸಂತರತ್ತ ಈ ವ್ಯಕ್ತಿ ಧಾವಿಸಿದ. ಆಗಲೇ ಅದೆಷ್ಟು ಚಳಿಗಾಲಗಳು ಕಳೆದು ಹೋಗಿದ್ದವೋ?ಈತನ ಕಂಬಳಿ ನೋಡಿ ಆ ಸಂತ ನಕ್ಕ. ‘ಇನ್ನೂ ಜ್ಞಾನದೀಕ್ಷೆ ಬೇಕೇ ನಿನಗೆ? ಪ್ರತಿಯೊಬ್ಬರಿಗೂ ಅವರವರವೇ ಆದ ಸಮಸ್ಯೆಗಳಿವೆ. ಆ ಸಮಸ್ಯೆಗಳಿಗೆ ಪರಿಹಾರವೂ ಈ ಜಗತ್ತಿನಲ್ಲೇ ಇದೆ. ಆದರೆ ನಾವು ಅವನ್ನು ಬೇರೆಲ್ಲೋ ಹುಡುಕಿಕೊಂಡು ತಲೆಭಾರ, ಜೀವಭಾರ ಮಾಡಿಕೊಳ್ಳುತ್ತೇವೆ. ಅಂತೆಯೇ ನಿನ್ನ ಜ್ಞಾನವೂ ಸಮಸ್ಯೆಯೇ.ಅದಕ್ಕೂ ಪರಿಹಾರ ಈ ಜಗತ್ತೇ. ನಿನ್ನ ಮನಸ್ಸನ್ನು ಮುಕ್ತವಾಗಿಡು, ಜಗತ್ತಿನ ವ್ಯವಹಾರವನ್ನು ಗಮನಿಸು. ಸಾಕ್ಷೀ ಭಾವದಿಂದ ಜಗತ್ತನ್ನು ನೋಡಿದರೆ ಅದು ನಿನಗೆ ಜ್ಞಾನದ ಭಂಡಾರವನ್ನೇ ನೀಡುತ್ತದೆ. ಆದರೆ ನೀನು ಅದರಲ್ಲಿ ಸ್ಪರ್ಧಿಯಾಗಿ, ಭಾಗಿಯಾಗಿ ನಿಂತಾಗ ಬರೀ ನೋವು ಸಿಗುತ್ತದೆ. ಇದೇ ನಿನಗೆ ನೀಡಬಹುದಾದ ದೀಕ್ಷೆ’ ಎಂದ. ಈ ವ್ಯಕ್ತಿಗೆ ಅದು ಸರಿ ಎನ್ನಿಸಿತು. ಅದು ನಿಜವೂ ಅಲ್ಲವೇ?

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.