ಗುರುವಾರ , ಮೇ 6, 2021
23 °C

ಟಾಕೀಸಿನ ಮಾತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟಾಕೀಸಿನ ಮಾತು

ಅದು ಸ್ವಾತಂತ್ರ್ಯೋತ್ತರ ಊರುಗಳು ನಿಧಾನವಾಗಿ ಆಧುನಿಕತೆಗೆ ತೆರೆದುಕೊಳ್ಳುತ್ತಿದ್ದ ಕಾಲ. ಟಾರುರಸ್ತೆ, ವಿದ್ಯುತ್ತಿನ, ಜೊತೆಗೇ ಹೊಸ ಬಗೆಯ ಶೌಚಗೃಹಗಳೂ ಬಲು ವಿರಳವಾಗಿ ಪ್ರವೇಶಿಸುತ್ತಿದ್ದ ಕಾಲಘಟ್ಟ. ಈ ಎಲ್ಲ ಆಧುನಿಕತೆಯ ಮುಂದುವರಿಕೆಯೋ ಎಂಬಂತೆ ಕುಂದಾಪುರದಲ್ಲಿ ಮೊತ್ತ ಮೊದಲಾಗಿ ಒಂದು ಸಿನಿಮಾ ಟಾಕೀಸು, ಅದೂ ನಮ್ಮನೆಯ ಸಸ್ಸರಿ ಎದುರೇ, ಆಯಿತು. (ಆಮೇಲೆ ಅನತಿ ಕಾಲದಲ್ಲಿಯೇ ಇನ್ನೊಂದು ಟಾಕೀಸು ಮತ್ತು ದೀರ್ಘ ಸಮಯದ ಬಳಿಕ ಮತ್ತೊಂದು ಟಾಕೀಸು ಆಗಿ, ಕುಂದಾಪುರದಲ್ಲಿ ಈಗ ಒಟ್ಟು ಮೂರು ಟಾಕೀಸುಗಳಿವೆ). ಊರುಮಂದಿಯ ಇರಸ್ತಿಕೆಗೇ ಹೊಸರಂಗು ತಂದುಕೊಟ್ಟ ದೊಡ್ಡ ಘಟನೆಯಾದ ಅದು ತೀರ ಕೆಳವರ್ಗದ ಜನರಿಂದ ಹಿಡಿದು ಮೇಲ್ವರ್ಗದ ಜನರನ್ನೂ, ಹೆಂಗಸರನ್ನೂ ಒಂದೇ ಸಲಕ್ಕೆ ಸೆಳೆದುಕೊಂಡು ಬಿಟ್ಟಿತಲ್ಲವೆ!

 

ಮೊತ್ತಮೊದಲ ಚಿತ್ರವಾಗಿ `ಶಿವಶಕ್ತಿ~ ಪೋಸ್ಟರ್ ಮೇಲೆದ್ದಿತು. ನಂತರ, ಕನ್ಯಾದಾನ, ಸೌಭಾಗ್ಯಲಕ್ಷ್ಮಿ, ದಲ್ಲಾಳಿ ಮುಂತಾಗಿ. ಮಹಿಳೆಯರ ಪ್ರವೇಶದ್ವಾರಕ್ಕೆ ಒಬ್ಬ ಮಹಿಳೆಯೇ ನೇಮಕಗೊಂಡದ್ದಂತೂ ಅನೂಹ್ಯ ಸಂಗತಿಯಾಗಿ, ಅದುವರೆಗೆ ಟೆಂಟ್‌ಟಾಕೀಸಿಗೆ ಅಪರೂಪಕ್ಕೊಮ್ಮೆ ಹೋಗುತ್ತಿದ್ದ ಒಳಮನೆಯ ಹಿರಿಕಿರಿಯರಿಗೆಲ್ಲ ಸಿನಿಮಾ ಎಂಬ ಕೌತುಕ ಕೈಗೆಟುಕುವಷ್ಟು ಹತ್ತಿರವಾಗಿ ಬಿಟ್ಟಿತು. ಅವರ ಜೀವನಗತಿಗೊಂದು ಹೊಸ ಉಮೇದು ಬಂದಿತು. ಆಗಿನ್ನೂ ರೇಡಿಯೊ ಎಲ್ಲರ ಮನೆಗೂ ಸಾಮಾನ್ಯವಾಗಿರಲಿಲ್ಲವಷ್ಟೆ? ನಮ್ಮನೆಗೆ ಅದು ಬಂದದ್ದಂತೂ ತೀರಾ ತಡವಾಗಿ, ಅರ‌್ವತ್ತರ ದಶಕದಲ್ಲಿ. ಹಾಗಾಗಿ ಸಹಜವೆಂಬಂತೆ ನಮಗೆ ಹಾಡು ಕಲಿಯುವುದಕ್ಕೂ, ಗೆಳತಿಯರೊಂದಿಗೆ ಮಾತುಕತೆಗೂ, ಕಥೆ ಹೇಳಲು ಕೇಳಲು, ಮಗು ತೂಗಲೂ, ವಧು ಪರೀಕ್ಷೆಗೂ, ವಧುವನ್ನು ಕಳಿಸಿಕೊಡಲೂ, ಭಜನೆಗೂ, ಶಾಲೆಯ ಸ್ಪರ್ಧೆಗಿರ್ಧೆಗೂ ಸುಲಭವಾಗಿ ಒದಗೊದಗಿ ಬಂದದ್ದು ಸಿನಿಮಾಕತೆ, ಸಿನಿಮಾ ಹಾಡುಗಳೆ. ಚಾವಡಿಯ ತಳಿಕಂಡಿಗೆ ಮುಖವೊತ್ತಿ ಕಿವಿಗೊಟ್ಟರೆ ಟಾಕೀಸಿನಲ್ಲಿ ನಡೆವ ಸಂಭಾಷಣೆ ಹಾಡುಗಳು ಫೈಟಿಂಗ್‌ಗಳು ಯಾವುದು ಬೇಕು, ಎಲ್ಲವೂ!ಅದಕ್ಕೆ ಮುಂಚೆ ಅಲ್ಲೇ ಪಕ್ಕದಲ್ಲಿ ನಮ್ಮೂರಿನ ಹೆಸರಾಂತ ವ್ಯಕ್ತಿಯಾಗಿದ್ದ ಗಣಪಯ್ಯ ಶೇಟ್ ಅವರ ಮಾಲೀಕತ್ವದ `ಲಕ್ಷ್ಮೀನಾರಾಯಣ ಟಾಕೀಸು~ ಎಂಬ ಮೂಕಿ ಸಿನಿಮಾ ಟೆಂಟ್ ಇತ್ತು. ಬಹುಶಃ `ಸಂಪೂರ್ಣ ರಾಮಾಯಣ~ ಚಿತ್ರವಿರಬೇಕು, ಹನುಮಂತನು ಲಂಕೆಗೆ ಹಾರುತ್ತಿದ್ದಾನೆ. ಜೊತೆಗೆ ಧ್ವನಿ `ಹನುಮಂತನು ಲಂಕೆಗೆ ಹಾರಿದನೂ...~ ಇಷ್ಟೆ, ಇಷ್ಟೇ ನೆನಪು. ಮಾತು ಬಾರದ ಆ ಮೂಕಿಸಿನಿಮಾ ಕೊಟ್ಟ ಸಂತೋಷಕ್ಕೆ ಮಿತಿಯಿದ್ದರೆ ಹೇಳುತ್ತಿದ್ದೆ. ರಾಮ ಸೀತೆ ಲಕ್ಷ್ಮಣ ಹನುಮಂತ ಅವರೆಲ್ಲ ಅದುವರೆಗೆ ನಾವು ಪುಸ್ತಕದೊಳಗಿನ ಚಿತ್ರದಲ್ಲಿ ಕಂಡಂಥದೇ ವೇಷಭೂಷಣ ಬಿಲ್ಲುಬಾಣ ತೊಟ್ಟು, ಅಲ್ಲ, ಇದೇನು, ನಮ್ಮೆದುರಿಗೇ! ಕೈಮುಗಿಯದೆ ಜೀವ ತಡೆಯುವುದಾದರೂ ಹೇಗೆ? ಶ್ರೀ ರಾಮಾಯ ನಮಃ, ರಾಮಭದ್ರಾಯ ನಮಃ, ರಾಮಚಂದ್ರಾಯ ನಮಃ... ನೆಲಕ್ಕೆ ಒಂದಾಣೆ, ಬೆಂಚಿಗೆ ಎರಡಾಣೆ, ಕುರ್ಚಿಗೆ-ಗಂಡಸರಿಗೆ-ನಾಲ್ಕು ಆಣೆ....ಆ ಕಾಲ ದಾಟಿತು, ದಾಟುತ್ತಿದ್ದಂತೆ ಸಿನಿಮಾ ಮಾತು ಕಲಿಯಿತು. `ಪಂಜಾಬ್ ಕಾ ಬೇಟಾ ಚಲೋ...!~ ಹಂಟರ್‌ವಾಲೀ, ಫಿಯರ್‌ಲೆಸ್ ನಾಡಿಯಾ...

ಮಾತು ಕಲಿಯಿತಷ್ಟೇ ಅಲ್ಲ, ಜೀವಂತ ಹಾಡತೊಡಗಿತು! ಸಂಜೆ ಶಾಲೆ ಬಿಟ್ಟಿದೆ, ಆ ಹೊತ್ತಿಗೆ ಸರಿಯಾಗಿ ಸಿನಿಮಾ ಗಾಡಿ ಊರಿಡೀ ಪ್ರದಕ್ಷಿಣೆ ಹೊರಟಿದೆ. ಗಾಡಿಯಲ್ಲಿದ್ದವರು `ನೋಟಿಸ್~ಗಳನ್ನು (ಹ್ಯಾಂಡ್‌ಬಿಲ್‌ಗೆ ನಾವು ಹೇಳುತಿದ್ದುದೆ ಹಾಗೆ) ಗಾಳಿಗೆ ತೂರುತ್ತಿದ್ದಾರೆ. ಕೆಂಪು ಹಸಿರು ಹಳದಿ ನೀಲಿ ಕಂದು ಬಿಳಿ. `ತಾರಾಗಣ~, ನಟನಟಿಯರ ಹೊರತು ಸಂಕಲನ, ನಿರ್ದೇಶನ, ಸಾಹಿತ್ಯ, ಸಂಗೀತ- ಗೊಡವೆ ಬೇಕಿಲ್ಲದ ನಾವು ಹಿಂದೆಹಿಂದೆ ಓಡಿಯೋಡಿ ಹೆಕ್ಕಿಕೊಳ್ಳುತ್ತೇವೆ. `ನಿನಗೆಷ್ಟು ಸಿಕ್ಕಿತು?~ `ನಿನಗೆಷ್ಟು?~ ಮನೆಗೆ ಬಂದು ಒಳಮನೆಗೆ ತಲುಪಿಸುತ್ತೇವೆ. ಹೋ, ಇವತ್ತಿಂದ ಈ ಸಿನಿಮವೆ? ಇತ್ಯಾದಿ ಮಾತಿಗೆ ಚಾಲೂ ಸಿಗುತ್ತದೆ. ಮಕ್ಕಳ ಮೂಲಕ ಸುದ್ದಿ ತಲುಪಿಸುವ ವಿಧಾನ ಕೇವಲ ಇಂದಿನದೇನು?ಮ್ಯಾಟಿನಿ ಶೋ, ಫಸ್ಟ್ ಶೋ, ಸೆಕೆಂಡ್ ಶೋ... ಹೊಸಹೊಸ ಶಬ್ದಗಳು. `ಮ್ಯಾಟಿನಿ ಎಂದರೆ?~ `ಮಧ್ಯಾಹ್ನದ ಪ್ರದರ್ಶನಕ್ಕೆ ಆ ಹೆಸರು ಕೊಟ್ಟಿದ್ದಾರೆ, ಅಷ್ಟೆಯ. ಅದನೆಲ್ಲ ಏನು ಕೇಳುವುದು?~ ಶಬ್ದಗಳು ಅರ್ಥದ ಹಟ ಕಳಚಿ ಇಂಗಿತದಲ್ಲೇ ತಿಳಿವ ಬಗೆಗೆ ಉದಾಹರಣೆಯಲ್ಲವೆ ಇದು? ಸಂಜೆ ಆರುಗಂಟೆಯ ಸಿನಿಮಾ ಆರಂಭವಾಗುವ ಮುಂಚೆ (ಬನ್ನಿ ಬನ್ನಿ ಸಿನಿಮಾ ನೋಡಲು ಬನ್ನಿ ಎಂದು ಕರೆವಂತೆ) ಟಾಕೀಸಿನ ಹೊರಗಿಂದ ಊರಿಗೆಲ್ಲ ಕೇಳುವ ಹಾಗೆ ದಿನವೂ ರೆಕಾರ್ಡು ಮೊಳಗುತ್ತದೆ. `ವಾತಾಪಿ ಗಣಪತಿಂ ಭಜೇ~ ಮುಗಿಯುತ್ತಲೂ `ದಿನಕರಾ ಶುಭಕರಾ~ `ಲಾರೆಲಪ್ಪ ಲಾರೆಲಪ್ಪ ಲಾರೆಲಪ್ಪದಾ...~ ಮತ್ತೂ ಒಂದಷ್ಟು. ಅಂದು ದಿನನಿತ್ಯ ಅವನ್ನು ಕೇಳಿದವರಿಗೆಲ್ಲ ಅವು ಒಂದಾದ ಮೇಲೆ ಒಂದು ಬರುವ ಸರದಿಯಂತೆ ಬಾಯಿಪಾಠ. ಕಾಲುಗಂಟೆ ಕಳೆಯುತ್ತಲೂ ರೆಕಾರ್ಡುಗಳು ಹೊರಗಿಂದ ಒಳಹೋಗಿ ಥಿಯೇಟರಿನ ಒಳಗೆ ಮಾತ್ರ ಕೇಳಲಾರಂಭಿಸುತ್ತವೆ.`ಸಿನಿಮಾಪದ್ಯ ಒಳಗೆ ಹೋಗಿಯಾಯ್ತು~ ಎಂದರೆ, ಇನ್ನೇನು ಸಿನಿಮಾ ಆರಂಭವಾಗುತ್ತದೆ ಎಂಬುದರ ಗುರುತು. ಇನ್ನೂ ತಡಮಾಡಿದರೆ ಸುರುವಿನ ಭಾಗವೆಲ್ಲ ತಪ್ಪುತ್ತದೆ. `ಏನಿಲ್ಲ, ನ್ಯೂಸ್‌ರೀಲ್ ಆದ ಮೇಲೆ ಹೋದರೂ ಸಾಕು. ಅಷ್ಟೆಲ್ಲ ಗಡಗುಟ್ಟು ಬೇಡ~ ಎನ್ನುತ್ತಿದ್ದರೂ ಸಿನಿಮಾಕ್ಕೆ ಹೊರಟವರ ಕೈಕಾಲು ತಕತಕ ವೇಗ ಹೆಚ್ಚಿಸುತ್ತದೆ. ಹೌದಲ್ಲ, ಒಳಗೆ ನ್ಯೂಸ್‌ರೀಲು ಆರಂಭವಾಗಿದೆ. ಝುಂಯ್ಞ ಶತತಂತಿ ಮೀಟಿದಂತಹ ಸೌಂಡಿನ ಹಿನ್ನೆಲೆಯಲ್ಲಿ `ಫಿಲ್ಮ್ಸ್ ಡಿವಿಜನ್~. ಅರ್ಥವಾಗದ ಗೊರಗೊರ ಇಂಗ್ಲಿಷಿನ ಹಿನ್ನೆಲೆಧ್ವನಿಗಿಂತ ಚಿತ್ರಗಳೇ ಹೆಚ್ಚು ತಿಳಿಸುತ್ತ ಚಲಿಸುತ್ತಿವೆ; ನೆಹರೂ ಇಂಥಲ್ಲಿ ಹೋಗಿದ್ದಾರೆ, ವಿಮಾನದ ಏಣಿಮೆಟ್ಟಿಲಿನಿಂದ ಇಳಿದು ಕೈಮುಗಿದು ಬರುತಿದ್ದಾರೆ. ಇನ್ನೊಮ್ಮೆ, ರಷ್ಯಾಕ್ಕೆ ಹೋಗುತ್ತಿದ್ದಾರೆ. ಅವರನ್ನು ಬೀಳ್ಕೊಡಲು ನಿಂತ ಎಲ್ಲರ ಕೈಕುಲುಕಿ ಮೆಟ್ಟಿಲು ಏರುತ್ತಿದ್ದಾರೆ. ಅವರ ಜೊತೆ ಅಗೊ ಇಂದಿರಾಗಾಂಧಿ! ನಮ್ಮಲ್ಲಿಗೆ ಬಂದಿಳಿವ ಆಚೀಚಿನ ದೇಶಗಳ ನೇತಾರರು ಅವರ ವಿವಿಧ ಉಡುಗೆಯ ಹೆಂಡಂದಿರು ಮತ್ತು... ನೆರೆಗಳು, ಭೂಕಂಪಗಳು, ಬರಗಾಲ; ಮತ್ತೆ ಝುಂಯ್ಞ ಶತತಂತಿ ಸೌಂಡಿನ ಹಿನ್ನೆಲೆಯಲ್ಲಿ `ಫಿಲ್ಮ್‌ಸ್ ಡಿವಿಜನ್~ - ದಿ ಎಂಡ್.ಅಯ್ಯಬ್ಬ, ಅಂತೂ ಈಗ ಸಿನಿಮಾ ಸುರು, ಫಸ್ಟ್ ರೀಲ್. ಮುಗಿಯುತ್ತಿದ್ದಂತೆ, ಚಚ್ಚೌಕಫ್ರೇಮಿನಲ್ಲಿ ಊರುಬದಿಯ ಅಂಗಡಿಪಿಂಗಡಿಗಳ ಜಾಹೀರಾತು, ಕತೆ ಅರ್ಧಕ್ಕೇ ನಿಂತ ಚಡಪಡಿಕೆಯನ್ನೇ ತಿಳಿಯದೆ ಪಟಪಟನೆ ಅವು ಒಂದಾದ ಮೇಲೊಂದು ಬದಲಾಗುತ್ತ ಹೋಗುವವು. ಅಲ್ಲಿ ಹಿಂಗೋಡೆಯ ಮಾಳಿಗೆ ಕಿಂಡಿಯಿಂದ ತೂರಿಬರುವ ಬರಬರುತ್ತ ಅಗಲವಾಗುತ್ತ ಹೋಗುವ (ಟಾಕೀಸಿನ ದೂಳಿಗೆ ಹಿಡಿದ ಕನ್ನಡಿಯಂತೆಯೂ ಇರುವ) ಕರಿಬೆಳಕು. ಅದು ಛಳಕ್ಕೆಂದಂತೆ ತೆರೆಯ ಮೇಲಿನ ಚಿತ್ರವೂ ಫಳಕ್ಕನೆ ಬದಲಾಗುವ ಮಾಯಕ. ಅಂತೂ ಒಮ್ಮೆ ತೆರೆಯತ್ತ ಒಮ್ಮೆ ಬೆಳಕು ಹೊರಡುವ ಕಿಂಡಿಯತ್ತ ನೋಡುತ್ತ ಕತ್ತು ನೋಯಿಸಿಕೊಂಡದ್ದೇ ಬಂತು, ಏನದು? ಶ್ಶ್, ಅಲ್ಲಿಂದ ಫಿಲ್ಮ್ ಬಿಡುತಿದ್ದಾರೆ. . .ಕರಿಬೆಳಕಿನಲ್ಲಿ ಫಿಲ್ಮ್ ಎಲ್ಲಿದೆ? ಕೇಳಿದರೆ ತಿಳಿದವರಿಲ್ಲ. ಹ್ಞಂ! ಎರಡನೇ ರೀಲು ಸುರು ವಾಯಿತು. ನೋಡುತ್ತ ಮಗ್ನರಾಗಿದ್ದೇವೆ, ಕಟ್!ಏನು  ಏನಾಯಿತು?

ಕಟ್. ಕಟ್ಟಾಯಿತು.

(ಏನು, ಯಾವುದು?) ಹೇಗೆ, ಹೇಗದು?

ಹೋಗು ಜೋಯಿಸರ ಹತ್ತಿರ ಕೇಳಿ ಬಾ.

ಮತ್ತೆ ಸುರುವಾಯಿತು ಅಂತೂ `ಕಟ್ಟಾಗಿದ್ದು~ `ಜೋಂಯ್ಟಾಯಿತಲ್ಲ~. ಅದೂ ಮುಗಿಯಿತು. ವಿರಾಮ. `ನೆಲ್ಗಡ್ಲೆ ನೆಲ್ಗಡ್ಲೆ ನೆಲ್ಗಡ್ಲೆ... ಒಂದಾಣೆಗ್ ಒಂದ್ ಪೊಟ್ಣ ನೆಲ್ಗಡ್ಲೆ...ಇನ್ನು ಎರಡೇ ರೀಲು. ಅವು ಮುಗಿದರೆ ಸಿನಿಮವೇ ಮುಗಿಯುವುದು. ಅದು ಮುಗಿಯುವುದೇ ಬೇಡ ದೇವರೆ.

ವರ್ಷಕ್ಕೆ ಒಂದೆರಡು ಸಿನಿಮಾ ಮಾತ್ರ ನೋಡಲು ಅಪ್ಪಣೆ ಸಿಗುವ `ಶಾಲೆಮಕ್ಕಳ~ ಕಾಲ ಅದು. ನೋಡಿದ ಸಿನಿಮಾಗಳ ಕತೆಯನ್ನು ವಿವರಿಸುತ್ತ ನಟವರ್ಗ ಯಾರು, ಯಾರೆಲ್ಲ ಚೆನ್ನಾಗಿ ನಟಿಸಿದರು, ಯಾವೆಲ್ಲ ಹಾಡುಗಳನ್ನು ಕಲಿತೆವು, ಆ ಸಿನಿಮಾಗಳ ಪದ್ಯಪುಸ್ತಿಕೆಗಳನ್ನು ಕೊಂಡೆವೆ, ಇಲ್ಲ ಕೊಂಡವರ ಬಳಿಯಿಂದ ಕೇಳಿ ಬರಕೊಂಡೆವೆ?ಎಲ್ಲವನ್ನು ಸಂಬಂಧಿಕ ಗೆಳೆಯ ಗೆಳತಿಯರಿಗೆ ಪತ್ರ ಬರೆಯುವ ಕಾಲ. ಚಿತ್ರದ ನಟನಟಿಯರ ವಿವಿಧ ಭಂಗಿಗಳಿರುವ ಮುಖಪುಟದಲ್ಲಿ ಆಯಾ ಸಿನಿಮಾಹಾಡು ಅಚ್ಚಾದ ಪುಸ್ತಕಗಳು ಅಂದೆಲ್ಲ ಟಾಕೀಸಿನಲ್ಲೇ ಲಭ್ಯವಿದ್ದವು. ಅವುಗಳನ್ನು ಒಟ್ಟುಹಾಕಿ ಬುಕ್‌ಬೈಂಡ್ ಮಾಡಿಸಿ ಸಂಗ್ರಹದ ಝಾಪಿನಿಂದ ಮುಖವೆತ್ತಿ ನಡೆವವರು ಒಮ್ಮಮ್ಮೆ ಕೇಳಿದರೆ ಕೊಡುವರು, ಒಮ್ಮಮ್ಮೆ ಕೊಟ್ಟು ಕಳೆದುಹೋದರೆ ಎಂದು (ಚಿನ್ನ ಕಳಕೊಂಬಂತೆ) ಶಂಕೆತಾಳುವರು. ಅಂದೂ ಪರೀಕ್ಷೆ ಮುಗಿಯಿತೆಂದರೆ ಮೊದಲ ಸಂಭ್ರಮ ಸಿನಿಮಾ ವೀಕ್ಷಣೆಯೆ. ನನ್ನ ಕ್ಲಾಸ್‌ಮೇಟ್ ಸವಿತಾ ಎಂಬವಳು, ಸಿನಿಮಾದಲ್ಲಿ ದುಃಖ ಬಂತೆಂದರೆ ಸ್ವರತೆಗೆದು ಅಳುತ್ತಿದ್ದಳು ಹಾಗೆ ಹೀಗಲ್ಲ. ಒಮ್ಮೆ, ಬೆಳಿಗ್ಗೆಯೇ ಪರೀಕ್ಷೆ ಮುಗಿದಿದೆ, ಒಂದಷ್ಟು ಜನ ನಾವು ಸಿನಿಮಾ ನೋಡಲು ಬಂದಿದ್ದೇವೆ. ಸಿನಿಮಾ ಸುರುವಾಗಿ ಸ್ವಲ್ಪ ಹೊತ್ತು ಎಲ್ಲ ಸರಿಯೇ ಇತ್ತು. ಆದರೆ ಕಥೆ ಮುಂದರಿದಂತೆ ನಾಯಕಿಗೆ ಕಷ್ಟ ಬಂದಿದೆ. ಒಂದೇಸಮ ಅಳತೊಡಗಿದ್ದಾಳೆ. ಸರಿ, ಸವಿತಾಳ ಅಳುವೂ ಸುರುವಾಯಿತು. ಅಲ್ಲಿ ಏರಿದಂತೆ, ಇಲ್ಲಿಯೂ ಏರಿತು. ಕಡೆಕಡೆಗೆ ಕಂಟ್ರೋಲು ಮರೆತು `ಅಯ್ಯ್, ಅಯ್ಯಬ್ಯೇ...~ -ದನಿ ತೆಗೆದು ರೋದಿಸತೊಡಗಿದಳು. ಆಚೀಚಿನವರೆಲ್ಲ ಸದ್ದಿಲ್ಲದೆ ತಾವೂ ಅಳುತ್ತ ನೋಡುವುದರಲ್ಲಿ ಮುಳುಗಿದ್ದವರು ಏನಾಯಿತೆಂದು ಓಡೋಡಿ ಬಂದರು. ವಿಷಯ ತಿಳಿದು `ಹೆಣ್ಣಿನ್ ಹೈಲವೆ! ಕಾಂಬುಕಾಗ್ದೀರ್ ಕಣ್ಮುಚ್ಕೊ. ಈ ನಮುನಿ ಬೊಬ್ಬಿ ಹೊಡಿತ್ಯೆಂತಕೆ~. ಆ ತನ್ನನು ನೆನೆದರೆ ಈಗಂತೂ ಸವಿತಾಗೆ ನಗೆ ತಡೆಯದೇ ತಡೆಯದು. `ಕಳೆದ ನಮ್ಮನ್ನು~ ನೆನೆದು ನಾವೇ ನಗುವುವಂಥವಾದರೂ ಎಷ್ಟಿವೆಯಲ್ಲವೆ!ಅಂದಹಾಗೆ ಟಾಕೀಸಿನೊಳಗಣ ಹಬೆಯಲ್ಲಿ ಸೆಕೆಯಲ್ಲಿ ಬೆವರು ನೀರು ಹರಿದು ಮಿಂದ ಹಾಗಾದರೂ ಒಂದು ದಿನವೂ ನಮಗೆ ಸೆಕೆ ಅನಿಸಲಿಲ್ಲ ಯಾಕೆ?

     ***

1954ನೇ ಇಸವಿಯ ಒಂದು ದಿನ. ಮನೆಯೆದುರೇ ಚಪ್ಪರ ಎದ್ದು ಅಕ್ಕನ ಮದುವೆ ನಡೆದಿದೆ. `ಭರತ್ ಮಿಲಾಪ್~ ಚಿತ್ರದ್ದೆಂದು ಅವಳೆನ್ನುತ್ತಿದ್ದ `ಬೀನಾ ಮಧುರ ಮಧುರ ಕುಛು ಬೋಲ್~ ಗೀತೆಯನ್ನು ಮಧುರವಾಗಿ ಹಾಡುತ್ತ ಕೆಲಸ ಮಾಡುತ್ತಿದ್ದ ಅಕ್ಕ ಅವಳು. ಗಂಡನ ಮನೆಗೆ ಹೊರಟು ನಿಂತಿದ್ದಾಳೆ. ಯಾರೋ `ಮಕ್ಕಳೆ, ಒಂದು ಹಾಡು ಹೇಳಿ~ ಎಂದದ್ದೇ, ಈ ಗಳಿಗೆಗಾಗಿಯೇ ತನ್ನ ಬೀಳ್ಕೊಡುಗೆಯ ಹಾಡನ್ನು ಅವಳೇ ಅಭ್ಯಾಸಮಾಡಿಸಿ ತಯಾರು ಮಾಡಿದ್ದ (ಆಗ ಒಂದೇ ಹೈಟಿನಲ್ಲಿದ್ದ) ನಾವು ಮೂವರು ಅಕ್ಕತಂಗಿಯರು ಕೈಕೈ ಹಿಡಿದು ಒಬ್ಬರಿಗೊಬ್ಬರು ಅಂಟಿನಿಂತು ಬಾಯಿತೆರೆದು ಹಾಡತೊಡಗಿದೆವು. `ಪೋಗಿ ಬಾರಮ್ಮ ಪದುಮಾಕ್ಷಿ, ಪ್ರಾಣಸಖೀ ಒಳ್ಳೆ ಕೀರ್ತಿ ಪಡೆ, (ರಿಪೀಟ್), ನಿತ್ಯ ಪತಿಸೇವೆಯಲಿ ನೀ ಸುಖ ಸಾಧಿಸಿ ಸಾರಸಂಸಾರದಾ ಲಕ್ಷ್ಮಿ ನೀನೆನ್ನಿಸೆ ಆರ್ಯ ನಾರಿಯರೂ ಪೂಜ್ಯ ದೇವಿಯರೂ ಎಂಬ ಕೀರ್ತಿ ಪಡೆ ಅತ್ತೆಮಾವಂದಿರಾ ಮತ್ತೆ ಬಾಂಧವರಾ ಪ್ರೀತಿ ಸಂಪಾದಿಸು ಹುಟ್ಟಿದಾ ಮನೇಗೂ ಸೇರೀದಾ ಮನೇಗೂ ಬಲುಕೀರ್ತಿ ತಾರೇ (ರಿಪೀಟ್)~ ಹಾಡು ಮುಗಿಯುವಾಗ ಚಪ್ಪರದಲ್ಲಿ ಹೆಂಗಸರು ಗಂಡಸರಾದಿಯಾಗಿ ಕಣ್ಣೊರೆಸಿಕೊಳ್ಳುತ್ತಿದ್ದರು. `ಅಯ್ಯ್, ಈ ಮಕ್ಕಳು ಎಷ್ಟು ಚಂದ ಹಾಡಿ ಅಕ್ಕನನ್ನು ಕಳಿಸಿಕೊಡುತ್ತಿವೆಯಪ್ಪ!~ ಎಂದು ಮೆಚ್ಚುಗೆಯ ಮಳೆಗರೆದರು. ದೃಷ್ಟಿ ತೆಗೆದರು. ಶ್ರೀನಿವಾಸ ಕಲ್ಯಾಣದ ಈ ಹಾಡು ಅಂದು ಎಷ್ಟು ವಧುಗಳನ್ನು, ಪಾಪ, `ನಿತ್ಯ ಪತಿ ಸೇವೆಯಲಿ ಸುಖಸಾಧಿಸಲು~ `ಪೂಜ್ಯದೇವಿಯರು ಎಂಬ ಕೀರ್ತಿ ಪಡೆಯಲು~ ಹುರಿದುಂಬಿಸಿ ಕಳಿಸಿಕೊಟ್ಟಿತೊ. ನೆನೆದರೆ ಸಾಕು, ಅದಕ್ಕೇ ಕಾದವರಂತೆ ಅದು ಈಗಲೂ ಮನೆಯೆದುರಿನ ಚಪ್ಪರ, ಪತಿಗೃಹಕ್ಕೆ ಹೊರಟು ನಿಂತ ಅಕ್ಕನ ಸಮೇತ, ಅವಳನ್ನು ಕರೆದೊಯ್ಯಲು ಕಾದು ನಿಂತ ಮದುಮಗನ ದಿಬ್ಬಣ ಸಮೇತ ಆ ರಾಗದ ಸಮೇತ ಮನದಲ್ಲಿ ಗುನುಗಲಾರಂಭಿಸುತ್ತದೆ. ಇತ್ತೀಚೆಗಷ್ಟೆ ಹೊರಟೇಹೋದ ಆಕೆಯ ನೆನಪಲ್ಲಿ ತೇವವಾಗುತ್ತದೆ.

***

ಆಗ ಜಯಭೇರಿ ಹೊಡೆದ ಒಂದು ಸಿನಿಮಾ `ಗುಣಸಾಗರಿ~. ಪತಿಯಿಲ್ಲದಿರುವಾಗ ಗಂಡನ ಮನೆಯಿಂದ ಪರಿತ್ಯಕ್ತಳಾಗಿ ಕಾಡು ಸೇರಿದ ಪತ್ನಿ (ಪಂಢರೀಬಾಯಿ) ಒಂದು ಮರಕ್ಕೆ ಕಟ್ಟಿದ ಜೋಲಿಯಲ್ಲಿ ಮಗುವನ್ನಿಟ್ಟು ಜೋಗುಳ ಹಾಡುತ್ತಿದ್ದಾಳೆ. `ಜೋ ಜೋ ಜೋ, ಚಿನ್ನ, ಜೋ ರನ್ನ ಜೋ ಜೋಓಒ, ಜೇನು ಕಾರಂಜಿಯೇ ನಲುಮೆಯಾ ಚಿಲುಮೆಯೇ ಜೋಜೋಓ ಜೋ.~ ಕಾಡಿನಲ್ಲಿದ್ದಾಳೆ, ಆದರೆ ಅವಳ ಜೋಗುಳ `ಪಚ್ಚೆಯುಂಗುರ ಚಂದ್ರಹಾರ, ಚಿನ್ನದುಡಿದಾರ ಬೆಳ್ಳಿ ನೂಪುರ ತೊಡಿಪೆ ಚದುರ ಎನ್ನ ಕಯ್ಯೊರ~!

ಎನ್ನುತ್ತಿದೆ. ಅಂದಿನ ಸರಿಸುಮಾರು ಎಲ್ಲಾ ಮನೆಗಳ ಬಾಣಂತಿ ಕೋಣೆಯಲ್ಲಿ ರಾತ್ರಿಯ ನೀರವದಲ್ಲಿ ಮೆಲುವಾಗಿ ಕೇಳಿಬರುತಿದ್ದ ಜೋಗುಳವಾಗಿತ್ತಲ್ಲವೆ ಇದು? ಎಡೆಎಡೆಯಲ್ಲಿ ಕನ್ನಡ ಕನ್ನಡಾಂಬೆ ಎಂಬುದೆಲ್ಲ ಒಳಪ್ರವೇಶಿಸುತಿದ್ದ ಆ ಘಟ್ಟದಲ್ಲಿ ಕೊನೆಯದಂತೂ ಅಕ್ಕರೆಯ ಚರಣ `ಕನ್ನಡಾಂಬೆಯ ಹೊನ್ನ ಬಸಿರು ನಿನ್ನ ತವರೂರು ಪುಣ್ಯಕೆಣೆಯೆ ತಣ್ಣಗಿರಲಿ ನಿನ್ನ ಬಾಳುಸಿರು~ ಅವು ಸಿನಿಮಾಗಳಲ್ಲ. ವಾಸ್ತವ. ಹಾಗೆಂದೇ ನೋಡಿದೆವು ನಾವು ಮಿಡಿದೆವು. ಅನುಭವಿಸಿದೆವು. ಜನಪದ ತ್ರಿಪದಿಗಳೊಂದಿಗೆ ಆ ಹಾಡನ್ನೂ ಸೇರಿಸಿ ನಮ್ಮ ಮಕ್ಕಳನ್ನು ತೂಗಿದೆವು, ಮೊಮ್ಮಕ್ಕಳನ್ನೂ. ಹೀಗೆ ಅದನ್ನು ಪೀಳಿಗೆಯಿಂದ ಪೀಳಿಗೆಗೆ ದಾಟಿಸಿ ಅಮರವಾಗಿಸಿದೆವು. ಮೆಲುವಾಗಿ ಸ್ವಗತದ ದನಿಯಲ್ಲಿ ಹಾಡುತ್ತ ಮೃದುವಾಗಿ ತಟ್ಟುತ್ತ ಇದ್ದರೆ ಎಂತಹ ಹಟದ ಮಗುವೂ ಮಲಗಬೇಕು, ಹಾಗಿದೆ ಆ ಪದ್ಯದ ರಾಗ.ಯಾರು ಬರೆದರು, ಸಂಗೀತ ಸಂಯೋಜನೆ ಯಾರದು, ಯಾರು ಬಲ್ಲ? ಇಂದಿಗೂ ಪಂಢರೀಬಾಯಿ ಎಂದೊಡನೆ ಎಲ್ಲಕ್ಕಿಂತ ಮೊದಲು ಗುಣಸಾಗರಿಯ ಮುಖವೇ ತೇಲಿ ಬರುವುದು. ಸುಖಾಂತ್ಯದವರೆಗೂ ಬಿಡದೆ ಅವಳ ಮೇಲೆ ಮುಗಿಬಿದ್ದು ಬಳಲಿಸುವ ಅವಳ ಕಷ್ಟಕಾರ್ಪಣ್ಯಗಳೋ. ಅದು ಪಂಢರೀಬಾಯಿ ಅವರ ಎಲ್ಲ ಪಾತ್ರಗಳ ಸ್ಥಾಯೀ ಲಕ್ಷಣವೆ ಆಗಿಬಿಟ್ಟಿತಲ್ಲವೆ.

ನಟಿ ಹರಿಣಿ ನಟಿಸಿದ `ಕನ್ಯಾದಾನ~ವಂತೂ ಕಪ್ಪು ಹುಡುಗಿಗೆ ಬಿಳಿಯ ಬಣ್ಣ ಹಚ್ಚಿ ಮದುವೆಮಾಡಿ, ಕೊನೆಗೆ ಅದು ಬಯಲಾಗಿ; ಕತೆಯನ್ನು ರೆಪ್ಪೆ ಹೊಡೆಯದೆ ನೋಡಬೇಕು, ಹಾಗಿತ್ತು. ದುಷ್ಟನೆಂದು ನೋಡಿದೊಡನೆ ತಿಳಿಯುವಂತಿದ್ದ ದಲ್ಲಾಳಿ ಪಾತ್ರದ ಬಾಲಕೃಷ್ಣ, ರಟರಾಳಿ ರಮಾಬಾಯಿ, ದೊಡ್ಡ ಪಾತ್ರೆ ತುಂಬ ಇದ್ದ ಉಪ್ಪಿಟ್ಟು ತಿಂದು ಖಾಲಿಮಾಡಿ, `ಉಪ್ಪಿಟ್ಟು ಸೇರ‌್ಲೇ ಇಲ್ಲ~ ಎಂದು ಖಾಲಿಪಾತ್ರೆಯನ್ನು ಮಗುಚಿ ಹೇಳುವ ಅವಳ ಏಕಾದಶಿ ಉಪವಾಸ. ಇವತ್ತಿಗೂ ಹರಿಣಿಯವರನ್ನು ಟಿ.ವಿ ತೆರೆಯಲ್ಲಿ ನೋಡಿದರೆ ಅವರು ನಟಿಸಿದ ಹಳೆಯ ಸಿನಿಮಾಗಳ ನೆನಪುಗಳು ಮೇಲೆದ್ದವೆಂದೇ. ಅಂದಹಾಗೆ `ದಲ್ಲಾಳಿ~ ಅಂತಲೇ ಒಂದು ಸಿನಿಮಾ ಇತ್ತಲ್ಲವೆ, ಪ್ರಾಯಶಃ ಪ್ರತಿಮಾದೇವಿ ಅದರಲ್ಲಿ ನಾಯಕಿ. ಆಕೆ ಪ್ಯಾಂಟು ಹಾಕಿ ಬರುವ ಗತ್ತೇ ಗತ್ತು. ನಾಯಕನಟನಾಗಿ ನಟಿಸಿದ `ಇಂದುಶೇಖರ~ ಎಂಬ ನಟ, ಒಮ್ಮೆ ನೋಡುತ್ತೇವೆ, ನಮ್ಮ ಕುಂದಾಪುರದ ರಸ್ತೆಯ ಮೇಲೆ ಹೋಗುತ್ತಿದ್ದಾನೆ! ಅಕಅಕ ಇಂದುಶೇಖರ! ಎಲ್ಲರೂ ಓಡಿ ಇಣುಕಿ ನೋಡುತ್ತಿದ್ದರೆ ಆತ ಕಿಂಚಿತ್ತೂ ಗಲಿಬಿಲಿಗೊಳ್ಳದೆ ಅತ್ತಿತ್ತ ನೋಡದೆ ಸೀದ ಸಾವಧಾನವಾಗಿ ಮುಂದರಿಯುತ್ತಿದ್ದಾನೆ. ಕಡೆಗೆ ನೋಡಿದರೆ ಆತ ಆಗಷ್ಟೇ ನಮ್ಮಲ್ಲಿ ವರ್ಗವಾಗಿ ಬಂದಿದ್ದ ಅಧಿಕಾರಿಯೋರ್ವರ ಹೆಂಡತಿಯ ತಮ್ಮನಂತೆ. ಅಕ್ಕನ ಮನೆಗೆ ಬಂದವ ಸುಮ್ಮನೆ ಒಂದು ವಾಕಿಂಗ್ ಹೋಗಿಬರುವೆ ಎಂದು ಹೊರಟನಂತೆ. ಒಂದೇ ಪ್ರಧಾನಬೀದಿಯ ನಮ್ಮೂರಲ್ಲಿ ವಾಕಿಂಗ್ ಅಂದರೇನು? ಊರವರಿಗೆಲ್ಲ ಧರ್ಮದರ್ಶನ ಕೊಟ್ಟಂತೆಯೇ. ಒಟ್ಟು ಅಂದಿನಿಂದ ನಾಕುದಿನಗಡಿಯಾಗಿ ನಮಗೆ ಮಾತಿನುದ್ದಕ್ಕೂ ನಟ ಇಂದುಶೇಖರ ಇಂದುಶೇಖರ ಇಂದುಶೇಖರನೇ... `ನಾ ಕಂಡೆ~ `ನಾಕಂಡೆ~ `ನಾಕಂಡೆ~ ಎಂಬುದೇ.ಈಗ ಎಲ್ಲಿರುವರೋ ಅವರು, ಹೇಗಿರುವರೋ!

ನಮ್ಮ ಜಿಲ್ಲೆ ಆಗ ಮದ್ರಾಸ್ ಪ್ರೆಸಿಡೆನ್ಸಿಗೆ ಸೇರಿತ್ತಾಗಿ ಅಲ್ಲೊಂದು ಇಲ್ಲೊಂದು ಕನ್ನಡ ಸಿನಿಮಾದೊಂದಿಗೆ ತಮಿಳು ಸಿನಿಮಾಗಳೇ ಪುಂಖಾನುಪುಂಖವಾಗಿ ಬರುತ್ತಿದ್ದುದು. ಜಾನಪದ ಕತೆಗಳೋ ಅವು ಸಿನಿಮಾಗಳೋ. ಮಂಗಮ್ಮ ಶಪಧಂ, ಇರುಂಬುತಿರೈ, ಮಾಮನಮಗಳ್. ಕಣವನೇ ಕಣ್‌ಕಂಡ ದೈವಂ, ಹೇಮರೆಡ್ಡಿ ಮಲ್ಲಮ್ಮ ...

ಮುಂದೆ ಹೇಳುವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.