ಸೋಮವಾರ, ಜೂನ್ 21, 2021
27 °C

ಡಿಜಿಟಲ್ ಭಾರತದ ವಸಾಹತೀಕರಣ

ಎನ್.ಎ.ಎಂ. ಇಸ್ಮಾಯಿಲ್ Updated:

ಅಕ್ಷರ ಗಾತ್ರ : | |

ಅಂತರ್ಜಾಲದಲ್ಲಿ ಮಾಹಿತಿ ಹಂಚಿಕೆಯನ್ನು ಸರಳಗೊಳಿಸಿದ ವರ್ಲ್ಡ್ ವೈಡ್ ವೆಬ್ ಅಥವಾ ನಾವೆಲ್ಲರೂ ಪ್ರತೀ ವೆಬ್ ಸೈಟಿನ ಜೊತೆಗೂ ಬಳಸುವ www ಎಂಬ ಮೂರಕ್ಷರಗಳ ಪರಿಕಲ್ಪನೆ ಇದೇ ಮಾರ್ಚ್ 12ಕ್ಕೆ ಇಪ್ಪತ್ತೊಂಬತ್ತಕ್ಕೆ ಕಾಲಿರಿಸುತ್ತಿದೆ. ವಿಶ್ವವ್ಯಾಪಿ ಜಾಲದ ಜನಕ ಟಿಮ್ ಬರ್ನರ್ಸ್ ಲೀ ತನ್ನ ಪರಿಕಲ್ಪನೆಯ ಹುಟ್ಟುಹಬ್ಬ ದಿನದ ಸಂದೇಶವೊಂದನ್ನು ಪ್ರಕಟಿಸಿದ್ದಾರೆ. ವಿಶ್ವದ ಅರ್ಧಭಾಗ ಇಂಟರ್ನೆಟ್‌ನೊಳಗೆ ಸೇರಿರುವುದಕ್ಕೆ ಸಂತೋಷ ಪಡುತ್ತಲೇ ಅವರು ಇಡೀ ಮಾಹಿತಿ ಹಂಚಿಕೆಯ ವ್ಯವಹಾರ ಕೆಲವೇ ಕೆಲವು ಕಂಪೆನಿಗಳ ಸೊತ್ತಾಗುತ್ತಿರುವುದರ ಬಗ್ಗೆ ಕಳವಳವನ್ನೂ ವ್ಯಕ್ತಪಡಿಸಿದ್ದಾರೆ.

ಈ ಸಂದೇಶ ಪ್ರಕಟಣೆಗೆ ಸರಿಯಾಗಿ ಮೂರು ದಿನಗಳ ಹಿಂದೆ ಈಗ ಅಂತರ್ಜಾಲ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಪತ್ರಕರ್ತ ಮತ್ತು ಉದ್ಯಮಿ ರಾಘವ್ ಬಾಹ್ಲ್ ಭಾರತೀಯ ಮಾಹಿತಿ ತಂತ್ರಜ್ಞಾನಾಧಾರಿತ ಉದ್ಯಮದ ಸದ್ಯದ ಸ್ಥಿತಿಯನ್ನು ವಿವರಿಸುವ ಹೊಸ acronym ಅಥವಾ ಸಂಕ್ಷೇಪಿತ ಪದವೊಂದನ್ನು ಹುಟ್ಟು ಹಾಕಿದ್ದಾರೆ. ಅದುವೇ DACOIT (Digital America/China (are) Colonising and Obliterating Indian Tech!). ಡಕಾಯಿತಿಯನ್ನು ನೆನಪಿಸುವ ಈ ಇಂಗ್ಲಿಷ್ ಸಂಕ್ಷೇಪಿತ ಪದವನ್ನು ವಿಸ್ತರಿಸಿದರೆ ಅದು ಅಮೆರಿಕ ಮತ್ತು ಚೀನಾಗಳು ನಡೆಸುತ್ತಿರುವ  ಡಿಜಿಟಲ್ ವಸಾಹತೀಕರಣ ಮತ್ತು ನಶಿಸುತ್ತಿರುವ ಭಾರತೀಯ ತಂತ್ರಜ್ಞಾನ ಎಂದಾಗುತ್ತದೆ.

ವಿಶ್ವಮಟ್ಟದಲ್ಲಿ ನಡೆಯುತ್ತಿರುವ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ತಲ್ಲಣಗಳನ್ನು ಟಿಮ್ ಬರ್ನರ್ಸ್ ಲೀ ಅವರ ಸಂದೇಶ ಹೇಳುತ್ತಿದ್ದರೆ ಅದನ್ನೇ ಭಾರತದ ಮಟ್ಟಕ್ಕೆ ಇಳಿಸಿ ಹೇಳುವ ಕೆಲಸವನ್ನು ಅವರಿಗಿಂತ ಮೂರು ದಿನ ಮೊದಲೇ ರಾಘವ್ ಬಾಹ್ಲ್ ಮಾಡಿದ್ದಾರೆ. ಸ್ಥೂಲದಲ್ಲಿ ಇಬ್ಬರೂ ಭಿನ್ನ ವಿಷಯಗಳನ್ನು ಮಾತನಾಡುತ್ತಿರುವಂತೆ ಕಾಣಿಸುತ್ತಿದ್ದರೂ ಸೂಕ್ಷ್ಮದಲ್ಲಿ ಇಬ್ಬರೂ ಒಂದೇ ವಿಚಾರವನ್ನು ಭಿನ್ನ ಕ್ಷೇತ್ರಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಹೇಳುತ್ತಿರುವುದು ಸ್ಪಷ್ಟ.

ಭಾರತಕ್ಕೆ ಇಂಟರ್ನೆಟ್ ಪ್ರವೇಶ ಪಡೆದದ್ದು ತೊಂಬತ್ತರ ದಶಕದ ಕೊನೆಯಲ್ಲಿ. ಮೊದಲ ಏಳೆಂಟು ವರ್ಷಗಳಲ್ಲಿ ಈ ಕ್ಷೇತ್ರದಲ್ಲಿ ನಡೆದ ಬೆಳವಣಿಗೆಗಳೆಲ್ಲವೂ ನಿಜಕ್ಕೂ ಪ್ರೋತ್ಸಾಹದಾಯಕವಾಗಿದ್ದವು. ಮಾಹಿತಿಯ ಹಂಚಿಕೆಯಲ್ಲಿದ್ದ ಏಕಸ್ವಾಮ್ಯವೊಂದು ಹೊರಟು ಹೋಗಿ ಅದರಲ್ಲೊಂದು ಪ್ರಜಾಪ್ರಭುತ್ವೀಕರಣ ಕಂಡುಬಂತು. ಕನ್ನಡದಲ್ಲಿಯೇ ಸಾವಿರಾರು ಬ್ಲಾಗುಗಳು ಹುಟ್ಟಿಕೊಂಡವು. ಅಭಿವ್ಯಕ್ತಿಯ ಹೊಸ ಮಾದರಿಗಳು ಜನ್ಮತಳೆದವು. ಆದರೆ ನಿಧಾನವಾಗಿ ಈ ಸ್ಥಿತಿ ಬದಲಾಗುತ್ತಾ ಬಂತು.

ಫೇಸ್‌ಬುಕ್ ಮತ್ತು ಟ್ವಿಟ್ಟರ್‌ನಂಥ ವೇದಿಕೆಗಳು ಪ್ರಬಲವಾಗುತ್ತಾ ಸಾಗಿದಂತೆ ಸ್ವತಂತ್ರ ಅಸ್ತಿತ್ವ ಹೊಂದಿದ್ದ ಬ್ಲಾಗ್ ಬರವಣಿಗೆ ಬಡವಾಗುತ್ತಾ ಹೋಯಿತು. ಗುಣಮಟ್ಟದ ಅಭಿವ್ಯಕ್ತಿಗಿಂತ ತಕ್ಷಣದ ಪ್ರತಿಕ್ರಿಯೆಗಳ ಮಹಾಪೂರವೇ ಆರಂಭವಾಯಿತು. ಆದರೆ ಇವ್ಯಾವೂ ಹೆದರಿಕೆ ಹುಟ್ಟಿಸಿರಲಿಲ್ಲ. ಏಕೆಂದರೆ ಸಾಮಾಜಿಕ ಜಾಲತಾಣದ ಬಹುರೂಪಗಳಿದ್ದವು. ಫೇಸ್‌ಬುಕ್ ನೆಲೆಯೂರುತ್ತಿದ್ದ ದಿನಗಳಲ್ಲಿ ಗೂಗಲ್‌ನ ಬಝ್ ಕೂಡಾ ಇತ್ತು. ಮೈಸ್ಪೇಸ್‌ನಂಥ ತಾಣಗಳು ತಮ್ಮದೇ ಆದ ಪಾಲು ಹೊಂದಿದ್ದವು. ನಿಧಾನವಾಗಿ ಒಂದೊಂದೇ ಕಾಣೆಯಾಗಿ ಫೇಸ್‌ಬುಕ್, ಟ್ವಿಟ್ಟರ್ ಎಂಬ ಎರಡೇ ಬಹುಮುಖ್ಯವಾಗಿ ಬಿಟ್ಟವು. ಇವುಗಳ ಮಧ್ಯೆಯೇ ಟಂಬ್ಲರ್, ರೆಡಿಟ್ ಇತ್ಯಾದಿಗಳೆಲ್ಲವೂ ಜೀವ ಉಳಿಸಿಕೊಂಡರೂ ಟ್ವೀಟ್ ಮಾಡುವುದು ಅಥವಾ ಫೇಸ್‌ಬುಕ್‌ನಲ್ಲಿ ಸ್ಟೇಟಸ್ ಹಾಕುವುದಷ್ಟೇ ಮುಖ್ಯ ಎಂಬಂತಾಯಿತು.

ಇದು ಒಂದೆರಡು ವೇದಿಕೆಗಳಷ್ಟೇ ಮುಖ್ಯವಾದ ಕಥೆಯಲ್ಲ. ಅಭಿವ್ಯಕ್ತಿಯನ್ನು ಕೆಲವೇ ಕಂಪೆನಿಗಳು ನಿಯಂತ್ರಿಸಬಹುದಾದ ಅವಕಾಶವೊಂದು ಸೃಷ್ಟಿಯಾದ ಕಥೆ. ಟಿಮ್ ಬರ್ನರ್ಸ್ ಲೀ ಅವರ ಕಾಳಜಿ ಇರುವುದು ಇದೇ ಸಂಗತಿಯ ಬಗ್ಗೆ. ಒಂದೆರಡು ವೇದಿಕೆಗಳಷ್ಟೇ ಬೃಹತ್ತಾಗಿ ಬೆಳೆದಾಗ ಅವು ಸೃಷ್ಟಿಸುವ ಸಮಸ್ಯೆಗಳೂ ಅಷ್ಟೇ ಸಂಕೀರ್ಣವಾಗಿರುತ್ತವೆ. ಇಂದು ಅಂತರ್ಜಾಲವನ್ನು ನಿಯಂತ್ರಿಸುವವರು ಯಾರು ಎಂಬ ಪ್ರಶ್ನೆ ಕೇಳಿಕೊಂಡರೆ ಇದು ಅರ್ಥವಾಗುತ್ತದೆ. ನಾಲ್ಕರಿಂದ ಐದು ಕಂಪೆನಿಗಳು ಈ ಕೆಲಸ ಮಾಡುತ್ತವೆ. ಸರ್ಚ್ ಎಂಜಿನ್ ಎಂದರೆ ಗೂಗಲ್. ಮೈಕ್ರೋಬ್ಲಾಗಿಂಗ್ ಎಂದರೆ ಟ್ವಿಟ್ಟರ್ ಎಂಬಂಥ ಸ್ಥಿತಿ ಇದು. ಗೂಗಲ್‌ನ ವ್ಯಾಪ್ತಿ ಕೇವಲ ಸರ್ಚ್ ಎಂಜಿನ್ ಆಗಿ ಉಳಿದಿಲ್ಲ. ಅದು ವಿಶ್ವದ ಬಹುತೇಕ ಫೋನುಗಳನ್ನು ನಿಯಂತ್ರಿಸುವ ಆಪರೇಟಿಂಗ್ ಸಿಸ್ಟಂನ ಮೇಲೆ ನಿಯಂತ್ರಣ ಹೊಂದಿರುವ ಕಂಪೆನಿಯೂ ಹೌದು.

ಯಾವ ಆನ್‌ಲೈನ್ ಪ್ರಕಟಣಾ ಸಂಸ್ಥೆಯೂ ಗೂಗಲ್, ಫೇಸ್‌ಬುಕ್, ಟ್ವಿಟ್ಟರ್ ಮತ್ತು ಅಮೆಜಾನ್‌ಗಳನ್ನು ಹೊರತಾದ ಜಗತ್ತೊಂದನ್ನು ಕಲ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಏನೇ ಮಾಡಿದರೂ ಈ ನಾಲ್ವರ ಜೊತೆಗೆ ಒಂದಲ್ಲಾ ಒಂದು ಬಗೆಯ ಸಂಪರ್ಕವನ್ನು ಇಟ್ಟುಕೊಂಡೇ ಇರಬೇಕಾಗುತ್ತದೆ. ಇದಕ್ಕಿಂತ ಹೆದರಿಕೆ ಹುಟ್ಟಿಸುವ ಮತ್ತೊಂದು ಸ್ಥಿತಿ ಇದೆ. ಟಿಮ್ ಬರ್ನರ್ಸ್ ಲೀ ಅವರ ಭಯ ವ್ಯಕ್ತವಾಗಿರುವುದು ಇದೇ ವಿಚಾರಕ್ಕೆ.

ಒಂದು ಕ್ಷೇತ್ರದ ಸಂಪೂರ್ಣ ನಿಯಂತ್ರಣವೇ ಕೆಲವೇ ಕಂಪೆನಿಗಳ ಕೈಯಲ್ಲಿದ್ದರೆ ಏನಾಗಬಹುದು. ಅಲ್ಲಿ ಹೊಸ ಆವಿಷ್ಕಾರಗಳು ನಡೆಯುವುದಿಲ್ಲ. ಒಂದು ವೇಳೆ ನಡೆದರೂ ಅದನ್ನು ಖರೀದಿಸಿ ತಮ್ಮ ತೆಕ್ಕೆಯೊಳಗೆ ಇಟ್ಟುಕೊಳ್ಳಲು ಈ ಕಂಪೆನಿಗಳು ಪ್ರಯತ್ನಿಸುತ್ತವೆ. ವಾಟ್ಸ್ ಆ್ಯಪ್ ಎಂಬ ಮೆಸೇಜಿಂಗ್ ತಂತ್ರಜ್ಞಾನ ಫೇಸ್‌ಬುಕ್ ಕೈ ಸೇರಿದ್ದು ಹೀಗೆಯೇ. ಯೂಟ್ಯೂಬ್ ಅನ್ನು ಗೂಗಲ್ ತನ್ನದಾಗಿಸಿಕೊಂಡಿತು. ಕೋಕಾಕೋಲಾ ಮತ್ತು ಪೆಪ್ಸಿಗಳು ಭಾರತದ ಎಲ್ಲಾ ಸಣ್ಣ ಪುಟ್ಟ ತಂಪು ಪಾನೀಯ ಕಂಪೆನಿಗಳನ್ನು ನುಂಗಿದಂಥ ಕಥೆಯಿದು.

ರಾಘವ್ ಬಾಹ್ಲ್ ಇದೇ ಕಥೆಯನ್ನು ಭಾರತದ ಸಂದರ್ಭದಲ್ಲಿ ವಿವರಿಸುತ್ತಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಡಿಜಿಟಲ್ ಇಂಡಿಯಾದ ಉತ್ಸಾಹದ ನೆರಳಿನಲ್ಲೇ ಚೀನಾ ಮತ್ತು ಅಮೆರಿಕಗಳು ಡಿಜಟಲ್ ಭಾರತವನ್ನು ವಸಾಹತೀಕರಿಸುತ್ತಿರುವ ಕಥನವಿದು. ವಿಶ್ವದ ಟ್ಯಾಕ್ಸಿ ಮಾರುಕಟ್ಟೆಯನ್ನು ಆಳುತ್ತೇನೆಂಬ ಅಹಂಕಾರದೊಂದಿಗೆ ಬಂದ ಉಬರ್‌ಗೆ ಪ್ರತಿಯಾಗಿ ಭಾರತದಲ್ಲೇ ಹುಟ್ಟಿದ ಓಲಾ ಇದೆ. ಅಮೆಜಾನ್‌ಗೆ ಪ್ರತಿಸ್ಪರ್ಧಿಯಾಗಿ ದೇಶೀ ಫ್ಲಿಪ್ ಕಾರ್ಟ್ ಇದೆ. ಪೇಟಿಎಂ ಅಂತೂ ನಮ್ಮದೇ ಎಂದೆಲ್ಲಾ ಬೀಗುವ ನಮ್ಮ ಜಂಬದ ಬೆಲೂನಿಗೆ ರಾಘವ್ ಸೂಜಿ ಚುಚ್ಚಿದ್ದಾರೆ.

ಫ್ಲಿಪ್ ಕಾರ್ಟ್‌ನ ಶೇಕಡಾ 70ರಷ್ಟು ಪಾಲು ಚೀನಾದ ಟೆನ್ಸೆಂಟ್ ಮತ್ತು ಇತರ ವಿದೇಶಿ ಹೂಡಿಕೆದಾರರ ಬಳಿ ಇದೆ. ಓಲಾದ ಶೇಕಡಾ ಅರವತ್ತರಷ್ಟು ಪಾಲು ಜಪಾನಿನ ಸಾಫ್ಟ್‌ಬ್ಯಾಂಕ್ ಹಾಗೂ ಇನ್ನಿತರ ವಿದೇಶಿ ಹೂಡಿಕೆದಾರರ ಕೈಯಲ್ಲಿದೆ. ಅಂದ ಹಾಗೆ ಈ ಸಾಫ್ಟ್‌ಬ್ಯಾಂಕ್ ಎಂಬ ಕಂಪೆನಿ ಚೀನಾ ಅಲಿಬಾಬ ಕಂಪೆನಿಯಲ್ಲೂ ಗಮನಾರ್ಹ ಪ್ರಮಾಣದ ಹೂಡಿಕೆಯನ್ನು ಹೊಂದಿದೆ.

ನೋಟು ಅಮಾನ್ಯೀಕರಣದ ಹಿಂದೆಯೇ ಹಲವು ಪಟ್ಟು ಬೆಳೆದ ನಿಂತ ಪೇಟಿಎಂನಲ್ಲಿ ಚೀನಾದ ಅಲಿಬಾಬದ ಹೂಡಿಕೆಯೇ ಶೇಕಡಾ ಅರವತ್ತರಷ್ಟಿದೆ. ಅತಿ ಮುಖ್ಯ ಎನಿಸುವಂಥ ಅಂದರೆ ಒಂದು ಬಿಲಿಯನ್ ಡಾಲರ್‌ಗಿಂತಲೂ ಹೆಚ್ಚು ಮೌಲ್ಯವುಳ್ಳ ಎಂಟು ಭಾರತೀಯ ಕಂಪೆನಿಗಳನ್ನು ಆರಿಸಿಕೊಂಡರೆ ಅವುಗಳಲ್ಲಿ ಏಳೂ ವಿದೇಶೀ ಹೂಡಿಕೆದಾರರ ಮರ್ಜಿಯಲ್ಲಿವೆ. ಅವುಗಳ ಭಾರತೀಯ ಸಂಸ್ಥಾಪಕ ಪ್ರವರ್ತಕರು ಕೇವಲ ಕಂಪೆನಿಯನ್ನು ನಡೆಸುವ ವ್ಯವಸ್ಥಾಪಕ ಸ್ಥಾನದಲ್ಲಷ್ಟೇ ಉಳಿದುಕೊಂಡಿದ್ದಾರೆ. ಇನ್ನುಳಿದಿರುವ ಬೆರಳೆಣಿಕೆಯ ಕಂಪೆನಿಗಳನ್ನು ನುಂಗುವುದಕ್ಕೆ ಇನ್ನಷ್ಟು ವಿದೇಶಿ ಕಂಪೆನಿಗಳು ಸಿದ್ಧವಾಗಿ ನಿಂತಿವೆ. ಹೈಕ್, ಬೈಜೂಸ್, ಮೇಕ್ ಮೈ ಟ್ರಿಪ್‌ಗಳ ಮೇಲೆ ನಿಯಂತ್ರಣ ಸಾಧಿಸುವುದಕ್ಕೆ ಟೆನ್ಸೆಂಟ್ ಸಿದ್ಧವಾಗಿದೆ. ಝೊಮ್ಯಾಟೋ ಈಗಾಗಲೇ ಚೀನಾದ ಅಲಿಬಾಬದ ನಿಯಂತ್ರಣಕ್ಕೆ ಸಿಲುಕಿದೆ.

ಮೊದಲ ತಲೆಮಾರಿನ ಭಾರತೀಯ ಮಾಹಿತಿ ತಂತ್ರಜ್ಞಾನ ಕಂಪೆನಿಗಳು ಇಲ್ಲಿನ ಸಿದ್ಧ ಉಡುಪು ತಯಾರಕರಂತೆ ಕಡಿಮೆ ಕೂಲಿಯ ಲಾಭ ಪಡೆಯುವುದಕ್ಕಷ್ಟೇ ಸೀಮಿತವಾಗಿದ್ದವು. ತಂತ್ರಜ್ಞಾನದ ಸಾಧ್ಯತೆಯನ್ನು ಬಳಸಿಕೊಂಡು ಹುಟ್ಟಿಕೊಂಡ ಎರಡನೇ ತಲೆಮಾರಿನ ಕಂಪೆನಿಗಳು ವಸಾಹತೀಕರಣಕ್ಕೆ ಗುರಿಯಾಗುತ್ತಿರುವ ದುರಂತವಿದು.

ಈ ವಸಾಹತೀಕರಣ ಪ್ರಕ್ರಿಯೆಯೂ ಈಸ್ಟ್ ಇಂಡಿಯಾ ಕಂಪೆನಿಯ ಅದೇ ತಂತ್ರಗಳನ್ನು ಒಳಗೊಂಡಿದೆ. ಆಗ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವ ಅನಿವಾರ್ಯತೆಯನ್ನು ಸೃಷ್ಟಿಸುವುದರ ಮೂಲಕ ನಡೆಯಿತು. ಈಗಿನದ್ದು ಬಂಡವಾಳದ ಆಮದನ್ನು ಅನಿವಾರ್ಯಗೊಳಿಸುವ ಮೂಲಕ ನಡೆಯುತ್ತಿದೆ. ಇದು ಸುಲಲಿತವಾಗಿ ನಡೆಯುವಂಥ ಸಾಂಸ್ಥಿಕ ವ್ಯವಸ್ಥೆಯನ್ನೂ ಅಮೆರಿಕ, ಚೀನಾ ಮತ್ತು ಜಪಾನ್‌ಗಳು ತಮ್ಮ ದೇಶದ ಕಂಪೆನಿಗಳಿಗೆ ಒದಗಿಸುತ್ತಿವೆ. ಆದರೆ ನಮ್ಮ ನೀತಿ ನಿರೂಪಕರು ವಿದೇಶೀ ಬಂಡವಾಳವನ್ನು ಬರಮಾಡಿಕೊಳ್ಳುವ ಉತ್ಸಾಹದಲ್ಲಿ ಇದನ್ನು ಮರೆತು ಕುಳಿತಿದ್ದಾರೆ.

ರಾಘವ್ ಮತ್ತು ಟಿಮ್ ಬರ್ನರ್ಸ್ ಲೀ ಅವರ ಕಾಳಜಿಯನ್ನು ಒಟ್ಟಂದದಲ್ಲಿ ಗ್ರಹಿಸಿದರೆ ನಮ್ಮೆದುರು ಇರುವ ಸವಾಲಿನ ಸ್ವರೂಪ ಅರ್ಥವಾಗುತ್ತದೆ. ಅಂತರ್ಜಾಲಾಧಾರಿತ ಉದ್ಯಮದಲ್ಲಿ ಏನನ್ನೂ ನಾವು ನಿರ್ಧರಿಸುವುದಕ್ಕೆ ಸಾಧ್ಯವಿಲ್ಲ ಎಂಬ ಸ್ಥಿತಿಗೆ ತಲುಪಿದ್ದೇವೆ. ಸರ್ಚ್ ಎಂಜಿನ್ ಎಂದರೆ ಅಮೆರಿಕ. ಕ್ಲೌಡ್ ಸೇವೆ ಎಂದರೆ ಅಮೆರಿಕ. ಆನ್‌ಲೈನ್ ಮಾರುಕಟ್ಟೆ ಎಂದರೆ ಅಮೆರಿಕ ಮತ್ತು ಚೀನಾ. ಈಗಂತೂ ಆನ್‌ಲೈನ್ ಪಾವತಿ ಎಂದರೂ ಚೀನಾ ಎಂಬಂಥ ಸ್ಥಿತಿ. ಹೊಸ ಆವಿಷ್ಕಾರಗಳು ನಡೆದರೂ ಈ ವಸಾಹತುಶಾಹಿಗಳ ನೆರಳಲ್ಲೇ ನಡೆಯಬೇಕು. ಸ್ವತಂತ್ರವಾಗಿ ನಡೆದರೆ ಅದನ್ನು ವಶಪಡಿಸಿಕೊಳ್ಳುವ ಶಕ್ತಿಯೂ ಈ ನವವಸಾಹತುಶಾಹಿಗಳ ಬಳಿ ಇದೆ.

ರಾಘವ್ ಬಾಹ್ಲ್ ಮತ್ತು ಟಿಮ್ ಬರ್ನರ್ಸ್ ಲೀ ಇಬ್ಬರೂ ಈ ಸುಳಿಯಿಂದ ಹೊರಬರುವ ಸಾಧ್ಯತೆಯ ಬಗ್ಗೆ ಆಶಾವಾದಿಗಳಾಗಿದ್ದಾರೆ. ಮಾಹಿತಿ ಮತ್ತು ಸಂವಹನ ಕ್ಷೇತ್ರದ ಶಕ್ತಿಯೂ ಅದುವೇ. ಅದನ್ನು ಶೋಧಿಸುವುದಕ್ಕೆ ಅನುವಾಗುವ ಔದ್ಯಮಿಕ ವಾತಾವರಣವೊಂದರ ಸೃಷ್ಟಿ ಮಾಡಬೇಕಾಗಿರುವ ನಮ್ಮನ್ನು ಆಳುವವರಿಗೆ ಈ ಸೂಕ್ಷ್ಮ ಅರ್ಥವಾಗುತ್ತಿದೆಯೇ ಎಂಬುದು ಈಗಿನ ಸಮಸ್ಯೆ!

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.