ಬುಧವಾರ, ಜೂನ್ 23, 2021
26 °C

ಡಿಜಿಟಲ್ ಹೆಜ್ಜೆ ಗುರುತಿನ ಜಾಡು ಹಿಡಿದು

ಎನ್.ಎ.ಎಂ. ಇಸ್ಮಾಯಿಲ್ Updated:

ಅಕ್ಷರ ಗಾತ್ರ : | |

ಡಿಜಿಟಲ್ ಹೆಜ್ಜೆ ಗುರುತಿನ ಜಾಡು ಹಿಡಿದು

ಹೆಜ್ಜೆ ಗುರುತು ಎಂದರೆ ಏನೆಂದು ಯಾರೂ ವಿವರಿಸಬೇಕಾಗಿಲ್ಲ. ನಾವು ಹೆಜ್ಜೆಯಿಟ್ಟ ನೆಲದ ಮೇಲೆ ಮೂಡಿರುವ ನಮ್ಮ ಪಾದದ ಗುರುತು. ಇಂಥದ್ದೇ ಪಾದದ ಗುರುತುಗಳು ಡಿಜಿಟಲ್ ಜಗತ್ತಿನಲ್ಲಿಯೂ ಇರುತ್ತವೆ. ಇವನ್ನು ಡಿಜಿಟಲ್ ಫೂಟ್ ಪ್ರಿಂಟ್ ಅಥವಾ ಡಿಜಿಟಲ್ ಹೆಜ್ಜೆ ಗುರುತುಗಳು ಎನ್ನುತ್ತಾರೆ. ನೆಲದ ಮೇಲೆ ಮೂಡಿರುವ ಹೆಜ್ಜೆ ಗುರುತುಗಳನ್ನು ನಿರ್ದಿಷ್ಟವಾಗಿ ಇಂಥದ್ದೇ ವ್ಯಕ್ತಿಯದ್ದೆಂದು ಗುರುತಿಸುವುದಕ್ಕೆ ಬಹಳ ಕಷ್ಟವಿದೆ. ಸ್ವಲ್ಪ ಪ್ರಯತ್ನ ಪಟ್ಟರೆ ಇದು ಅಸಾಧ್ಯವೇನೂ ಇಲ್ಲ. ಡಿಜಿಟಲ್ ಹೆಜ್ಜೆ ಗುರುತುಗಳ ಸ್ವರೂಪ ಸಾಮಾನ್ಯ ಹೆಜ್ಜೆ ಗುರುತುಗಳಿಗಿಂತ ಭಿನ್ನ. ನಾವು ಡಿಜಿಟಲ್ ಜಗತ್ತಿನಲ್ಲಿ ನಡೆಸುವ ಒಂದೊಂದು ಕ್ರಿಯೆಯೂ ಪ್ರತಿಯೊಬ್ಬನಿಗೂ ವಿಶಿಷ್ಟವಾದ ಗುರುತುಗಳನ್ನು ಉಳಿಸಿ ಹೋಗಿರುತ್ತದೆ. ಕಂಪ್ಯೂಟರ್ ಬಳಸಿದ್ದರೆ ಆ ಕಂಪ್ಯೂಟರಿನ ಗುರುತು, ಇಂಟರ್ನೆಟ್ ಸಂಪರ್ಕದ ಗುರುತು, ಸಂಪರ್ಕಿಸಿದ ಸಮಯವಂತೂ ಮಿಲಿ ಸೆಕೆಂಡುಗಳಷ್ಟು ನಿಖರತೆಯಲ್ಲಿ ದಾಖಲಾಗಿರುತ್ತದೆ. ತಂತ್ರಜ್ಞಾನದ ಅರಿವಿರುವವರು ಕ್ಷಣಾರ್ಧದಲ್ಲಿ ಈ ಹೆಜ್ಜೆ ಗುರುತು ಯಾರದ್ದೆಂದು ಪತ್ತೆ ಹಚ್ಚಬಹುದು.

ಡಿಜಿಟಲ್ ಹೆಜ್ಜೆ ಗುರುತುಗಳಿಗೆ ಸಂಬಂಧಿಸಿದ ಚರ್ಚೆಗಳಿಗೂ ಎರಡು ಆಯಾಮಗಳಿವೆ. ಮೊದಲನೆಯದ್ದು ಇವು ವ್ಯಕ್ತಿಯ ಖಾಸಗಿತನವನ್ನು ಕಿತ್ತು ಕೊಳ್ಳುವ ಅಪಾಯದ ಕುರಿತ ಚರ್ಚೆ. ಎರಡನೆಯದ್ದು ಈ ಹೆಜ್ಜೆ ಗುರುತುಗಳು ಬಳಕೆದಾರನನ್ನು ಅಪರಾಧ ಚಟುವಟಿಕೆಗಳಿಂದ ದೂರವಿಡುತ್ತದೆ ಎಂಬ ವಾದ. ಈ ಎರಡೂ ವಾದಗಳಲ್ಲಿ ಹುರುಳಿದೆ. ನಮ್ಮ ಚರ್ಚೆ ಯಾವ ಸಂದರ್ಭದಲ್ಲಿ ನಡೆಯುತ್ತಿದೆ ಎಂಬುದನ್ನು ಅನುಸರಿಸಿ ಇದರ ಮೌಲ್ಯ ನಿರ್ಣಯ ಮಾಡಬೇಕಾಗುತ್ತದೆ.

ಅಪರಾಧಿಯೊಬ್ಬ ತನ್ನ ಕೃತ್ಯಕ್ಕೆ ಯಾವ ತಂತ್ರಜ್ಞಾನವನ್ನು ಬಳಸಿದರೂ ತನ್ನ ಕೃತ್ಯದ ಬಗ್ಗೆ ಒಂದು ಸುಳಿವನ್ನು ಬಿಟ್ಟಿರುತ್ತಾನೆ ಎಂದರ್ಥ. ಅದರಿಂದಾಗಿಯೇ ಅಪಹರಣ ನಡೆಸಿ ಹಣಕ್ಕಾಗಿ ಬೇಡಿಕೆ ಇಡುವವರು ಬಹಳ ಸುಲಭದಲ್ಲಿ ಪೊಲೀಸರ ಕೈಗೆ ಸಿಕ್ಕಿಬೀಳುತ್ತಾರೆ. ಒತ್ತೆ ಹಣಕ್ಕಾಗಿ ಅಪಹರಣ ನಡೆಸುವವರು ತಮ್ಮ ಹಣದ ಬೇಡಿಕೆಯನ್ನು ಅಪಹೃತನ ಸಂಬಂಧಿಗಳಿಗೆ ತಿಳಿಸಲೇಬೇಕಾಗುತ್ತದೆ. ಇದಕ್ಕಾಗಿ ಅವರ ಯಾವುದಾದರೊಂದು ಸಂಪರ್ಕ ಸಾದನವನ್ನು ಬಳಬೇಕು. ಈ ಹಿಂದೆ ಸ್ಥಿರ ದೂರವಾಣಿಗಳಿದ್ದಾಗ ಸಾರ್ವಜನಿಕ ದೂರವಾಣಿಗಳಿಂದ ಕರೆ ಮಾಡಿ ತಮ್ಮ ಬೇಡಿಕೆಗಳನ್ನು ಮುಂದಿಡುತ್ತಿದ್ದರು. ಈಗ ಮೊಬೈಲ್ ಬಳಸುತ್ತಾರೆ. ತಾವೆಲ್ಲಿಂದ ಕರೆ ಮಾಡುತ್ತಿದ್ದೇವೆ ಎಂದು ತಿಳಿಯದಂತೆ ಇರಲು ವಾಟ್ಸ್ ಆ್ಯಪ್‌ನಂಥ ಮೆಸೆಂಜರ್‌ಗಳನ್ನು ಬಳಸುತ್ತಾರೆ. ಇಂಥ ಯಾವುದೇ ಸವಲತ್ತನ್ನು ಬಳಸಿದರೂ ಡಿಜಿಟಲ್ ಹೆಜ್ಜೆ ಗುರುತುಗಳು ಮೂಡುತ್ತವೆ. ಅದರ ಜಾಡು ಹಿಡಿದು ಅಪರಾಧಿಗಳ ಬಳಿಗೆ ಪೊಲೀಸರು ತಲುಪುತ್ತಾರೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಆದಾಯ ತೆರಿಗೆ ಅಧಿಕಾರಿಯೊಬ್ಬರ ಪುತ್ರ ಶರತ್ ಎಂಬ ಯುವಕನ ಅಪಹರಣ ಮತ್ತು ಕೊಲೆ ಪ್ರಕರಣವನ್ನು ಬೇಧಿಸಲು ಪೊಲೀಸರಿಗೆ ಸಹಾಯ ಮಾಡಿದ್ದು ಡಿಜಿಟಲ್ ಹೆಜ್ಜೆ ಗುರುತುಗಳು. ಅಪಹರಣಕಾರರು ಶರತ್‌ನನ್ನು ಕೊಲೆ ಮಾಡಿದ್ದೇ ಸಾಕ್ಷ್ಯ ನಾಶ ಮಾಡಲು. ಆದರೆ ಆ ಹೊತ್ತಿಗಾಗಲೇ ಅಪಹರಿಸಿದವರ ಸುಳಿವು ನೀಡುವ ಡಿಜಿಟಲ್ ಹೆಜ್ಜೆ ಗುರುತುಗಳು ಸೃಷ್ಟಿಯಾಗಿದ್ದವು. ಶರತ್ ಮೊಬೈಲ್ ಫೋನ್ ಬಳಸಿ ಆತನ ಮನೆಯವರಿಗೆ ಸಂದೇಶ ಕಳುಹಿಸಿದ್ದರಾದರೂ ಎಲ್ಲರ ಕಿಸೆಯಲ್ಲಿಯೂ ಮೊಬೈಲ್‌ಗಳಿದ್ದವು. ಅವರಲ್ಲೊಬ್ಬ ತನ್ನ ಮೊಬೈಲ್ ಬಳಸಿ ಶರತ್‌ನನ್ನು ಸಂಪರ್ಕಿಸಿಯೂ ಇದ್ದ. ಆ ಸಿಮ್ ಅನ್ನು ಕಿತ್ತೆಸೆದಿದ್ದನಾದರೂ ಅದರ ಮೂಲವನ್ನು ಪತ್ತೆ ಹಚ್ಚುವುದು ಪೊಲೀಸರಿಗೆ ಸ್ವಲ್ಪವೂ ಕಷ್ಟವಾಗಲಿಲ್ಲ. ಕಿಸೆಯಲ್ಲಿರುವ ಮೊಬೈಲ್ ನಾವು ಓಡಾಡಿದಲ್ಲೆಲ್ಲಾ ಹೆಜ್ಜೆ ಗುರುತನ್ನು ಮೂಡಿಸಿಯೇ ಇರುತ್ತದೆ.

ಒತ್ತೆ ಹಣಕ್ಕಾಗಿ ಅಪಹರಿಸುವ ಪ್ರಕರಣಗಳನ್ನು ಬೇಧಿಸುವುದರಲ್ಲಿ ಪೊಲೀಸರು ತಮ್ಮ ಕ್ಷಮತೆ ತೋರುವುದು ಇದೇ ಮೊದಲೇನೂ ಇಲ್ಲ. ಡಿಜಿಟಲ್ ಹೆಜ್ಜೆ ಗುರುತುಗಳಿಲ್ಲದ ಕಾಲಘಟ್ಟದಲ್ಲಿಯೂ ಅವುಗಳನ್ನು ಪತ್ತೆ ಹಚ್ಚುತ್ತಿದ್ದರು. ಅಪಹರಣಕಾರರು ಸಂದೇಶ ಕಳುಹಿಸುವುದಕ್ಕೆ ಬಳಸುವ ಮಾರ್ಗಗಳೇ ಅವರ ಸುಳಿವಾಗಿರುತ್ತಿದ್ದವು. ಈಗ ಸುಲಭ ಬಳಕೆಗೆ ಸಿಗುವ ಎಲ್ಲಾ ಸಂಪರ್ಕ ಸಾಧನಗಳೂ ಡಿಜಿಟಲ್ ಆಗಿರುವುದರಿಂದ ಹೆಜ್ಜೆ ಜಾಡು ಗುರುತಿಸುವುದು ಅವರಿಗೆ ಸ್ವಲ್ಪವೂ ಕಷ್ಟವಲ್ಲ. ಡಿಜಿಟಲ್ ತಂತ್ರಜ್ಞಾನದಿಂದ ಪೊಲೀಸರ ಕ್ಷಮತೆ ಹೆಚ್ಚಾಯಿತೇ ಎಂಬ ಪ್ರಶ್ನೆ ಕೇಳಿಕೊಂಡರೆ ದೊರೆಯುವ ಉತ್ತರ ಸರಳವಾದುದಲ್ಲ. ಡಿಜಿಟಲ್ ಹೆಜ್ಜೆ ಗುರುತುಗಳು ಪೊಲೀಸರ ಕೆಲಸವನ್ನು ಸುಲಭಗೊಳಿಸಿವೆ. ಆದರೆ ಪೊಲೀಸರು ಅಪರಾಧಿಗಳನ್ನು ಪತ್ತೆ ಹಚ್ಚುವ ಕ್ರಿಯೆಗೆ ಇದೊಂದೇ ತಂತ್ರವನ್ನು ಬಳಸುವುದರಿಂದ ಅಪರಾಧಿಕ ಪ್ರಕರಣಗಳ ತನಿಖೆ ಅನಗತ್ಯವಾಗಿ ವಿಳಂಬವಾಗುವುದೂ ಇದೆ. ಶರತ್ ಅಪಹರಣ ಮತ್ತು ಕೊಲೆಯಲ್ಲಿ ಪಾಲ್ಗೊಂಡಿದ್ದವರಲ್ಲಿ ಯಾರೂ ‘ವೃತ್ತಿಪರ ಅಪರಾಧಿ’ಗಳಿರಲಿಲ್ಲ. ಸಾಮಾನ್ಯವಾಗಿ ಅಪಹರಣ ಪ್ರಕರಣಗಳನ್ನು ಯೋಜಿಸುವವರೂ ಇಂಥವರೇ. ಇವರೆಲ್ಲಾ ಅಪಹರಿಸುವುದು,ಹಣ ಸಿಕ್ಕ ತಕ್ಷಣ ಬಿಟ್ಟುಬಿಡುವುದು ಎಂದು ಸರಳವಾಗಿ ಆಲೋಚಿಸುತ್ತಿರುತ್ತಾರೆ. ತಾವು ಕೇಳುವಷ್ಟು ದೊಡ್ಡ ಮೊತ್ತವನ್ನು ಹೊಂದಿಸಲು ಸಂಬಂಧಿಕರಿಗೆ ಸುಲಭ ಮಾರ್ಗಗಳಿವೆಯೇ? ಅವರ ಪೊಲೀಸರನ್ನು ಸಂಪರ್ಕಿಸಿದರೆ ಅದನ್ನು ಹೇಗೆ ನಿರ್ವಹಿಸುವುದು ಮುಂತಾದ ಸಂಕೀರ್ಣ ಸ್ಥಿತಿಗಳ ಬಗ್ಗೆ ಅವರು ಚಿಂತಿಸಿಯೇ ಇರುವುದಿಲ್ಲ. ಶರತ್‌ನ ಮನೆಯವರ ಜೊತೆಯಲ್ಲೇ ಇದ್ದ ಅಪರಾಧಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ತಕ್ಷಣ ತನ್ನ ಸಹಚರರಿಗೆ ಫೋನ್ ಮಾಡಿ ‘ಅವನನ್ನು ಮುಗಿಸಿಬಿಡಿ. ಇಲ್ಲವಾದರೆ ನಾವೆಲ್ಲಾ ಜೈಲಿಗೆ ಹೋಗಬೇಕಾಗುತ್ತದೆ’ ಎಂದು ಹೇಳಿದ್ದೇ ಇದಕ್ಕೆ ಸಾಕ್ಷಿ. ಹೀಗೆ ಮಾಡುವ ಮೂಲಕ ತಮ್ಮ ಅಪರಾಧದ ಹೆಜ್ಜೆ ಗುರುತುಗಳನ್ನೆಲ್ಲಾ ಅಳಿಸಿಬಿಡಬಹುದು ಅವರ ಯೋಜನೆಯಾಗಿತ್ತು.

ಡಿಜಿಟಲ್ ಹೆಜ್ಜೆ ಗುರುತುಗಳ ಬಗ್ಗೆ ಅರಿವಿರುವವರು ನಡೆಸಿದ ಅಪರಾಧ ಪ್ರಕರಣಗಳನ್ನು ಬೇಧಿಸುವಲ್ಲಿ ಪೊಲೀಸರು ಹೇಗೆ ಸೋಲುತ್ತಾರೆ ಎಂಬುದಕ್ಕೆ ಗೋವಿಂದ ಪನ್ಸಾರೆ, ಧಾಬೋಲ್ಕರ್, ಪ್ರೊ ಎಂ.ಎಂ.ಕಲಬುರ್ಗಿ ಪ್ರಕರಣಗಳೇ ಸಾಕ್ಷಿಯಾಗುತ್ತವೆ. ಲಕ್ಷಾಂತರ ಫೋನ್ ಕರೆಗಳು, ಆ ಪ್ರದೇಶದಲ್ಲಿದ್ದ ಮೊಬೈಲ್ ಫೋನ್‌ ಇತ್ಯಾದಿಗಳ ಮಾಹಿತಿಗಳನ್ನು ಸಂಗ್ರಹಿಸಿ ವಿಶ್ಲೇಷಿಸಿದ ನಂತರವೂ ಪೊಲೀಸರಿಗೆ ದೊಡ್ಡ ಪ್ರಮಾಣದ ಸುಳಿವುಗಳೇನೂ ಸಿಕ್ಕಂತೆ ಕಾಣಿಸುವುದಿಲ್ಲ. ಗೌರಿ ಲಂಕೇಶ್ ಅವರ ಪ್ರಕರಣದಲ್ಲಿಯೂ ಈ ಬಗೆಯ ಡಿಜಿಟಲ್ ಹೆಜ್ಜೆ ಗುರುತುಗಳನ್ನು ಹುಡುಕುವ ಪ್ರಯತ್ನಗಳೇ ಚಾಲನೆಯಲ್ಲಿವೆ.

ಜಾತ್ರೆ ನಡೆಯುವ ಸ್ಥಳದಲ್ಲಿರುವ ಹೆಜ್ಜೆ ಗುರುತುಗಳನ್ನು ಮುಂದಿಟ್ಟುಕೊಂಡು ನಿರ್ದಿಷ್ಟ ವ್ಯಕ್ತಿಯನ್ನು ಹುಡುಕುವ ಸಂಕಷ್ಟವೇ ಡಿಜಿಟಲ್ ಹೆಜ್ಜೆ ಗುರುತುಗಳ ಸಂದರ್ಭದಲ್ಲಿಯೂ ಎದುರಾಗುತ್ತದೆ. ಇದನ್ನು ಮೀರಬೇಕಾದರೆ ಅದಕ್ಕೆ ಬೇಕಿರುವ ತಂತ್ರಜ್ಞಾನದ ಸ್ವರೂಪವೂ ಸಂಕೀರ್ಣವಾಗುತ್ತದೆ. ದುರದೃಷ್ಟವಶಾತ್ ಅಷ್ಟು ಸಂಕೀರ್ಣವಾಗಿರುವ ತಾಂತ್ರಿಕ ಪರಿಣತಿ ನಮ್ಮ ಪೊಲೀಸರಿಗೆ ಇಲ್ಲ. ಸೈಬರ್ ಪೊಲೀಸ್ ಠಾಣೆಗಳೆಂಬ ದೊಡ್ಡ ಹೆಸರುಗಳನ್ನಿಟ್ಟುಕೊಂಡಿರುವ ವ್ಯವಸ್ಥೆಗಳೂ ಸಾಮಾನ್ಯ ಪೊಲೀಸ್ ಠಾಣೆಗಳಂತೆಯೇ ಕೆಲಸ ಮಾಡುತ್ತಿರುವುದು ವಾಸ್ತವ.

ಪೊಲೀಸರು ಅಪರಾಧಗಳ ಪತ್ತೆಗೆ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸುತ್ತಿರುವಾಗ ಅದೇ ತಂತ್ರಜ್ಞಾನವನ್ನು ಪೊಲೀಸರಿಂದ ತಪ್ಪಿಸಿಕೊಳ್ಳಲು ಹೇಗೆ ಬಳಸಿಕೊಳ್ಳಬಹುದೆಂಬ ಬಗ್ಗೆ ಅಪರಾಧಿಗಳೂ ಯೋಚಿಸುತ್ತಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ತೀರಾ ಸಾಮಾನ್ಯವಾಗಿರುವ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ವಂಚನೆಯ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ವಿಫಲರಾಗುತ್ತಿರುವುದೇ ಇದಕ್ಕೆ ಅತ್ಯುತ್ತಮ ಉದಾಹರಣೆ. ಇವರೇನು ದೂರದ ದೇಶಗಳಲ್ಲಿ ಕುಳಿತು ಈ ವಂಚನೆಗಳನ್ನು ನಡೆಸುತ್ತಿಲ್ಲ. ಉತ್ತರ ಭಾರತದ ಯಾವುದೋ ನಗರದಲ್ಲಿಯೋ ಅಥವಾ ಅಲ್ಲಿರುವಂತೆ ತೋರಿಸುತ್ತಾ ನಮ್ಮ ನಮ್ಮ ಊರಿನಲ್ಲೇ ಕುಳಿತು ನಡೆಸುವ ವಂಚನೆಗಳಿವು. ಇಲ್ಲಿ ಬಳಕೆಯಾಗುವುದು ಭಾರೀ ತಂತ್ರಜ್ಞಾನವೂ ಅಲ್ಲ. ಸಾಮಾನ್ಯರ ಅಜ್ಞಾನ ಮಾತ್ರ. ಈ ಅಪರಾಧಿಗಳು ಬಿಟ್ಟು ಹೋಗಿರುವ ಡಿಜಿಟಲ್ ಹೆಜ್ಜೆ ಗುರುತುಗಳು ಎಷ್ಟಿರುತ್ತವೆ ಎಂದರೆ ಜಾಡು ಹಿಡಿದರೆ ಒಂದೆರಡು ದಿನಗಳಲ್ಲಿ ಅಪರಾಧಿಗಳನ್ನು ಬಂಧಿಸಲೂ ಸಾಧ್ಯವಿದೆ. ಆದರೆ ಇವುಗಳನ್ನು ಪೊಲೀಸರು ಸಾಕಷ್ಟು ಗಂಭೀರವಾಗಿ ಪರಿಗಣಿಸಿ ಕಾರ್ಯಪ್ರವೃತ್ತರಾಗದೇ ಇರುವುದೇ ದೊಡ್ಡ ಸಮಸ್ಯೆ. ಇದನ್ನು ಸುಧಾರಿಸುವುದಕ್ಕೆ ತಂತ್ರಜ್ಞಾನವಷ್ಟೇ ಸಾಕಾಗುವುದಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.