ಸೋಮವಾರ, ಜುಲೈ 26, 2021
24 °C

ದೇವರು ಸ್ಥಾವರದಲ್ಲಿಲ್ಲ; ಸ್ಥಾವರದ ಬಿರುಕಿನಲ್ಲಿದ್ದಾನೆ

ಪ್ರಸನ್ನ Updated:

ಅಕ್ಷರ ಗಾತ್ರ : | |

ದೇವರು ಸ್ಥಾವರದಲ್ಲಿಲ್ಲ; ಸ್ಥಾವರದ ಬಿರುಕಿನಲ್ಲಿದ್ದಾನೆ

ಒಂದೊಮ್ಮೆ ಕಿಂಡಿಗಳು  ಇರಲೇಬಾರದೆಂದಾದರೆ ಗೋಡೆಗಳೂ ಇರಬಾರದು. ಕೆಡವಿಬಿಡಿ...ಪೂಜ್ಯ ಸ್ವಾಮೀಜಿ! ಹಿಂದೂ ಬುದ್ಧಿಜೀವಿಗಳು ಹಿಂದೂ ಧರ್ಮದ ಶತ್ರುಗಳು ಎಂದು, ‘ಉಡುಪಿ ಚಲೋ’ ಚಳವಳಿಯ ಸಂದರ್ಭದಲ್ಲಿ ‘ಪ್ರಜಾವಾಣಿ’ಗೆ ನೀಡಿರುವ ಸಂದರ್ಶನವೊಂದರಲ್ಲಿ ಪೇಜಾವರ ಶ್ರೀಗಳಾದ ತಾವು ದೂರಿದ್ದೀರಿ. ಸ್ವಾಮೀಜಿ! ‘ಉಡುಪಿ ಚಲೋ’ ಬುದ್ಧಿಜೀವಿಗಳ ಸಮಾವೇಶವಾಗಿರಲಿಲ್ಲ, ಅಸ್ಪೃಶ್ಯರ ಸಮಾವೇಶವಾಗಿತ್ತು.  ಬುದ್ಧಿಜೀವಿಗಳು ಅಸ್ಪೃಶ್ಯರಿಗೆ ಬೆಂಬಲ ನೀಡಿದ್ದರು ಅಷ್ಟೆ. ಹಿಂದೂ ಧರ್ಮದ ಸಮಸ್ಯೆಯಿರುವುದು ಬುದ್ಧಿಜೀವಿಗಳೊಟ್ಟಿಗೆ ಅಲ್ಲ, ಶ್ರಮಜೀವಿಗಳೊಟ್ಟಿಗೆ. ಇರಲಿ.ಈ ರೀತಿಯ ಆರೋಪಗಳು ಚಳವಳಿಗಳ ಸಂದರ್ಭದಲ್ಲಿ ಹೊಸತೇನಲ್ಲ ಅಥವಾ ಹಿಂದೂ ಧರ್ಮಕ್ಕೆ ಸೀಮಿತವಾದದ್ದೂ ಅಲ್ಲ.  ಇತರೆ ಧರ್ಮಗಳಲ್ಲಿಯೂ ಸಹ ಸಮಾಜ ಸುಧಾರಣೆಯ ಪ್ರಯತ್ನ ನಡೆದಾಗಲೆಲ್ಲ, ಸುಧಾರಕರ ತಲೆಗೆ ವಿವಿಧ ಬಗೆಯ ಆರೋಪಗಳನ್ನು ಕಟ್ಟಲಾಗುತ್ತದೆ.  ಕಟ್ಟಿ ಸುಧಾರಕರ ಹತ್ಯೆ ಮಾಡಲಾಗುತ್ತದೆ.  ಗ್ರೀಕ್ ತತ್ವಜ್ಞಾನಿ ಸಾಕ್ರೆಟಿಸ್, ಕನ್ನಡದ ವಚನಕಾರರು, ಗಾಂಧೀಜಿ, ನಂತರದಲ್ಲಿ ಕಲ್ಬುರ್ಗಿ, ದಾಭೋಲ್ಕರ್, ಪಾನ್ಸರೆ ಹೀಗೆ... ಸುಧಾರಣೆಯ ಪ್ರಯತ್ನದಲ್ಲಿ ಹತ್ಯೆಗೊಳಗಾದ ಬುದ್ಧಿಜೀವಿಗಳ ದೊಡ್ಡ ಪಟ್ಟಿಯೇ ನಮ್ಮ ಮುಂದಿದೆ.ಆದರೆ, ತಮ್ಮ ಮಾತಿನಲ್ಲಿ ಅರ್ಧ ಸತ್ಯ ಅಡಗಿದೆ ಎಂದು ನಾನು ಒಪ್ಪುತ್ತೇನೆ. ಇಂದಿನ ಬುದ್ಧಿಜೀವಿಗೆ ಸಮಾಜ ಸುಧಾರಕನಾಗುವ ಪೂರ್ಣ ಪ್ರಮಾಣದ ವ್ಯಕ್ತಿತ್ವ ಇನ್ನೂ ಸಾಧಿತವಾಗಿಲ್ಲ. ಬುದ್ಧಿಯನ್ನೇ ಜೀವನೋಪಾಯದ ಸಲಕರಣೆಯನ್ನಾಗಿ ಮಾಡಿಕೊಂಡು ಸುಲಭವಾಗಿ ಬದುಕುತ್ತಿದ್ದಾನೆ ಬುದ್ಧಿಜೀವಿ. ಸಮಾಜ ಸುಧಾರಕನಿಗಿರಬೇಕಾದ ಬದುಕಿನ ಶಿಸ್ತು ಅವನಿಗಿನ್ನೂ ಪ್ರಾಪ್ತವಾಗಿಲ್ಲ. ಆದರೆ ಈ ಮಾತು ಸಮಾಜದ ಎಲ್ಲರಿಗೂ ಸಲ್ಲುತ್ತದೆ, ಸ್ವಾಮೀಜಿ.

ಧರ್ಮವು ಶ್ರಮಸಹಿತವಾದ ಸರಳ ಬದುಕಿನಲ್ಲಿ ಅಡಗಿರುತ್ತದೆ. ಶ್ರಮಜೀವಿಯು ರೈತನಿರಲಿ ಅಸ್ಪೃಶ್ಯನಿರಲಿ ಅಥವಾ ಆಶ್ರಮವಾಸಿ ಸನ್ಯಾಸಿಯಿರಲಿ, ಅವನ ಅಥವಾ ಆಕೆಯ ಸರಳ ಬದುಕೇ ಅವರವರ ಧರ್ಮಕ್ಕೆ ಬುನಾದಿಯಾಗಿರುತ್ತದೆ.ತಾವು ಸರಳವಾಗಿ ಬದುಕುತ್ತಿದ್ದೀರಿ, ಆದರೆ ತಮ್ಮ ಹಿಂಬಾಲಕರು ಹಾಗೆ ಬದುಕುತ್ತಿಲ್ಲ. ನಮ್ಮಷ್ಟೇ ಸುಲಭಜೀವಿಗಳು ಅವರು. ಮಾತ್ರವಲ್ಲ, ಸಾಮಾಜಿಕ ಸುಧಾರಣೆಗಳನ್ನು ತಡೆಯಲು ಯತ್ನಿಸುತ್ತಿರುವ ಸುಲಭಜೀವಿಗಳು. ತಾವು ಅಹಿಂಸಾವಾದಿಗಳು, ಆದರೆ  ತಮ್ಮ ಹಿಂಬಾಲಕರ ಬಗ್ಗೆ ಇದೇ ಮಾತನ್ನು ಹೇಳಲು ಬರುವುದಿಲ್ಲ. ದಶಕಗಳಿಂದ ವಿಶ್ವ ಹಿಂದೂ ಪರಿಷತ್ತಿನ ಉಪಾಧ್ಯಕ್ಷರಾಗಿರುವ ತಮಗೆ ಇದು ತಿಳಿಯದ ವಿಷಯವೇನಲ್ಲ. ತೀವ್ರವಾದಿ ಹಿಂದೂಗಳ ದೊಡ್ಡದೊಂದು ಪಡೆಯೇ ತಮ್ಮ ಹಿಂದೆ ಇದೆ.  ಅವರ ನೇರ ಪರಿಚಯ ತಮಗಿರುವುದು ಸಾಧ್ಯವಿಲ್ಲ. ಆದರೆ, ತಮ್ಮ ಪರಿಚಯ ಅವರಿಗೆ ಇದೆ.  ಅವರು ಯಾರೂ ಅಹಿಂಸೆಯ ಮಾತು ಕೇಳುವ ಸ್ಥಿತಿಯಲ್ಲಿಲ್ಲ. ಗೋರಕ್ಷಣೆಯ ನೆಪ ಮಾಡಿಕೊಂಡು ಹಲವು ಅಮಾಯಕ ಮುಸಲ್ಮಾನರು ಹಾಗೂ ಅಮಾಯಕ ಅಸ್ಪೃಶ್ಯರ ಹತ್ಯೆ ಮಾಡಿದ ಅನುಭವ ಅವರಿಗಿದೆ.ಅವರು ತಮ್ಮ ಮಾತು ಕೇಳಿದ್ದಿದ್ದರೆ, ನಲವತ್ತು ವರ್ಷಗಳ ಅಸ್ಪೃಶ್ಯತೆ ನಿವಾರಣೆಯ ತಮ್ಮ ವ್ರತವನ್ನು, ಮಠದ ಆವರಣ ಶುದ್ಧೀಕರಣದ ಮೂಲಕ ಮಣ್ಣುಪಾಲು ಮಾಡುತ್ತಿರಲಿಲ್ಲ ಅವರು.  ಬಾಬರಿ ಮಸೀದಿ ಕೆಡವಿದ್ದಕ್ಕಿಂತ ಘೋರವಾದ ಅಪರಾಧ ಮಾಡಿದ್ದಾರೆ ಅವರು. ಹೇಗೆ ಗೊತ್ತೇ? ಶುದ್ಧೀಕರಣದ ಮೂಲಕ ಕೃಷ್ಣಮಠಕ್ಕಿದ್ದ ಶೂದ್ರ ಬುನಾದಿಯನ್ನೇ ಶಾಶ್ವತವಾಗಿ ಕೆಡವಿ ಹಾಕಿದ್ದಾರೆ. ಅಸ್ಪೃಶ್ಯರು ದೇಶದಾದ್ಯಂತ ಪ್ರತಿಭಟನಾ ಸಭೆಗಳನ್ನು ನಡೆಸುತ್ತಿದ್ದಾರೆ. ತಮ್ಮ ಮೇಲಾಗುತ್ತಿರುವ ಹಲ್ಲೆಗಳ ಕಾರಣದಿಂದಾಗಿ ಅವರು ಕುದಿಯುತ್ತಿದ್ದಾರೆ. ಹತಾಶ ಸ್ಥಿತಿಯಲ್ಲಿ ಅವರ ಬಾಯಿಂದ ಅಸಹನೆಯ ಮಾತುಗಳು ಕೇಳಿಬರುವುದು ಸಹಜ. ಆದರೆ ನಮ್ಮಗಳ ಬಾಯಿಂದಲ್ಲ. ಕರ್ನಾಟಕದಲ್ಲಿ ನಡೆಯಬೇಕಿದ್ದ ಸಭೆಗೆಂದು ಅಸ್ಪೃಶ್ಯರು ಉಡುಪಿಯನ್ನು ಆಯ್ಕೆ ಮಾಡಿಕೊಂಡರು. ಅದಕ್ಕೊಂದು ಗಟ್ಟಿ ಕಾರಣವಿದೆ.ಅಸ್ಪೃಶ್ಯತೆಯ ಆಚರಣೆಯ ವಿಷಯದಲ್ಲಿ ಉಡುಪಿ ಕ್ಷೇತ್ರಕ್ಕೆ ವಿಶೇಷವಾದ ಸ್ಥಾನಮಾನವಿದೆ, ಕುಖ್ಯಾತಿಯೂ ಇದೆ, ಪ್ರಖ್ಯಾತಿಯೂ ಇದೆ. ಪ್ರಖ್ಯಾತಿಯನ್ನೇ ಮೊದಲು ಎತ್ತಿಕೊಳ್ಳೋಣ. ಪ್ರಜ್ಞಾವಂತರ ಊರು ಉಡುಪಿ. ಕರ್ನಾಟಕದ ಹಲವು ಸಾಮಾಜಿಕ ಚಳವಳಿಗಳಿಗೆ ಕ್ಷೇತ್ರವಾದ ಹೆಮ್ಮೆಯ ಊರು. ಇನ್ನು ತಾವು! ಮಿಕ್ಕ ಬ್ರಾಹ್ಮಣ ಯತಿಗಳಿಗಿಂತ ಮಿಗಿಲಾಗಿ ಅಸ್ಪೃಶ್ಯರ ಕೇರಿಗಳಿಗೇ ತೆರಳಿ ಅಸ್ಪೃಶ್ಯರನ್ನು ಸಂದರ್ಶಿಸುತ್ತಾ ಬಂದಿದ್ದೀರಿ. ಕುಖ್ಯಾತಿ ಏನೆಂದರೆ, ಸುಧಾರಣೆಯ ಇಷ್ಟೆಲ್ಲ ಪ್ರಯತ್ನಗಳ ನಂತರವೂ ಕೃಷ್ಣಮಠವು ಜಾತಿ ಬ್ರಾಹ್ಮಣರ ಕೇಂದ್ರವಾಗಿ ಉಳಿದಿದೆ. ಇತರರೂ ಅಲ್ಲಿಗೆ ಬರುತ್ತಾರೆ ನಿಜ.  ಆದರೆ ಶ್ರೀಕೃಷ್ಣ ದರ್ಶನಕ್ಕೆ ಬರುವ ಲಕ್ಷ ಲಕ್ಷ ಇತರರಿಗೆ ಎರಡನೆಯ ದರ್ಜೆಯ ಭಕ್ತರು ತಾವು ಎಂದೆನ್ನಿಸುತ್ತದೆ. ಪಂಕ್ತಿಭೇದ ಇತ್ಯಾದಿ ಹಲವು ಹತ್ತು ಬಗೆಯ ಭೇದಭಾವಗಳು ಮಠದಲ್ಲಿ ಇಂದಿಗೂ ಮುಂದುವರೆದಿವೆ.ತಾವು ಮರೆತಿರಬಹುದು. ಉಡುಪಿಯ ಕೃಷ್ಣಮಠದೊಳಗೆ ಅಸ್ಪೃಶ್ಯರಿಗೆ ಪ್ರವೇಶ ನೀಡಿ ಎಂಬ ಬೇಡಿಕೆ ಇಂದಿನದ್ದಲ್ಲ, ಬುದ್ಧಿಜೀವಿಗಳದ್ದೂ ಅಲ್ಲ.  ಒಂದು ಶತಮಾನದಷ್ಟು ಮೊದಲೇ, ಗಾಂಧೀಜಿ ಉಡುಪಿಗೆ ಬಂದಿದ್ದಾಗ, ಅಸ್ಪೃಶ್ಯತೆಯ ಆಚರಣೆ ಮಾಡುವ ದೇವಲವೆಂಬ ಕಾರಣಕ್ಕಾಗಿ ಶ್ರೀಕೃಷ್ಣಮಠವನ್ನು ಪ್ರವೇಶಿಸಲು ನಿರಾಕರಿಸಿ ಮುಂದೆ ನಡೆದಿದ್ದರು ಅವರು. ನೂರು ವರ್ಷಗಳ ನಂತರವೂ ಉಡುಪಿಯ ಕೃಷ್ಣಮಠಕ್ಕೆ ಅಂಟಿಕೊಂಡಿರುವ ಕುಖ್ಯಾತಿಯನ್ನು ಪೂರ್ಣವಾಗಿ ತೊಡೆಯಲಿಕ್ಕೆ ನಿಮಗೆ ಸಾಧ್ಯವಾಗಿಲ್ಲ. ಬುದ್ಧಿಜೀವಿಗಳಿಗೂ ಸಾಧ್ಯವಾಗಿಲ್ಲ. ಈಗ, ಅಸ್ಪೃಶ್ಯರು ನಡೆದಾಡಿದ ಜಾಗವೆಂಬ ಕಾರಣಕ್ಕಾಗಿ ಶ್ರೀಕೃಷ್ಣಮಠದ ಸುತ್ತ ಸ್ವಚ್ಛತಾ ಕಾರ್ಯ ನಡೆಸಿ, ನಿಮ್ಮ ಹಿಂಬಾಲಕರು, ಮಠವನ್ನು ಮಧ್ಯಯುಗಕ್ಕೆ ಕೊಂಡೊಯ್ದು ನಿಲ್ಲಿಸಿದ್ದಾರೆ. ತಮ್ಮ ಈ ಕೃತ್ಯಕ್ಕೆ ಅವರು ಕನಕನ ಹೆಸರಿನ ದುರ್ಬಳಕೆ ಮಾಡಿದ್ದಾರೆ. ಆದರೆ ನಿಮ್ಮ ಅಸಹಾಯಕತೆಯನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ.ಅಸ್ಪೃಶ್ಯರ ಉಡುಪಿ ನಡೆ ಖಂಡಿತವಾಗಿ ರಾಜಕೀಯ ನಡೆ. ಮಾತ್ರವಲ್ಲ, ಇಂತಹ ನಡೆಗಳಲ್ಲಿ ಬಳಕೆಯಾಗುವ ಭಾಷೆ ಸಾಮಾನ್ಯವಾಗಿ ಉದ್ಧಟತನದ್ದಾಗಿರುತ್ತದೆ, ಆಗಿರಬಾರದು.  ಆದರೆ ಉದ್ಧಟತನ ಇಂದಿನ ರಾಜಕೀಯ ಶೈಲಿಯಾಗಿದೆ. ತೀವ್ರವಾದಿ ಹಿಂದೂಗಳ ತೀವ್ರ ಅಸಹಿಷ್ಣು ಭಾಷೆಯನ್ನು ಸ್ವೀಕರಿಸುವ ನೀವು ಶತ ಶತಮಾನಗಳಿಂದ ನೋವು ಅನುಭವಿಸುತ್ತಿರುವ ಅಸ್ಪೃಶ್ಯರ ಸಣ್ಣದೊಂದು ಉದ್ಧಟತನವನ್ನು ಸಹಿಸಲಾರಿರಾ?ಸ್ವಾಮೀಜಿ, ಅವರಿಗೆ ಸಲ್ಲಬೇಕಿರುವ, ಆದರೆ ಸಲ್ಲದೆ ಉಳಿದಿರುವ, ಆಧ್ಯಾತ್ಮಿಕ ಪ್ರೀತಿಯನ್ನು ನೀವು ಸಲ್ಲಿಸಿಬಿಡಿ. ಆಗ ನೋಡಿರಿ, ಅವರ ಭಾಷೆ ಹೇಗೆ ಮೃದುವಾಗುವುದೆಂದು! ಕುದಿಯುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ, ಎಲ್ಲರೂ ಸಹಿಷ್ಣುತೆಯ ಭಾಷೆ ಬಳಸಬೇಕೆಂಬ ತಮ್ಮ ವೈಯಕ್ತಿಕ ಕಳಕಳಿಯನ್ನು ನಾನು ಖಂಡಿತವಾಗಿ ಗೌರವಿಸುತ್ತೇನೆ. ನಲವತ್ತು ವರ್ಷಗಳಿಂದ ತಾವು ಅಸ್ಪೃಶ್ಯರ ಕೇರಿಗೆ ಹೋಗುತ್ತ ಬಂದಿದ್ದೀರಿ. ಈಗ, ಅವರೇ ನಿಮ್ಮ ಕೇರಿಗೆ ಬಂದಿದ್ದಾರೆ. ಕೇರಿಯನ್ನು ಸುತ್ತುವರೆದಿರುವ ಹಲವು ಸುತ್ತುಗಳ ಬೇಲಿಯನ್ನು ಕಿತ್ತೆಸೆಯಿರಿ. ತೆರೆದ ಹೃದಯದಿಂದ ಅಸ್ಪೃಶ್ಯರನ್ನು ಕೃಷ್ಣಮಠದೊಳಗೆ ಸ್ವಾಗತಿಸಿರಿ. ಶ್ರೀಕೃಷ್ಣನು ಖಂಡಿತವಾಗಿ ನಿಮ್ಮ ಬೆಂಬಲಕ್ಕೆ ನಿಲ್ಲುತ್ತಾನೆ.  ಏಕೆಂದರೆ, ಆತನೇ ಜಾತಿಯಿಂದ ಶೂದ್ರ!ಎಂತಹ ವಿಚಿತ್ರ ನೋಡಿ!  ಕೃಷ್ಣ ಶೂದ್ರ, ಆತನ ಪರಮಭಕ್ತ ಕನಕ ಶೂದ್ರ, ಆತನ ಗುಣಗಾನ ಮಾಡಿದ ವ್ಯಾಸ ಶೂದ್ರ, ಮೂಲರಾಮನ ಗುಣಗಾನ ಮಾಡಿದ ವಾಲ್ಮೀಕಿ ಶೂದ್ರ. ಅಷ್ಟೇ ಏಕೆ, ಮಧ್ವಾಚಾರ್ಯರ ಮೂಲ ಅವತಾರವಾದ ಆಂಜನೇಯ ಶೂದ್ರಾತಿಶೂದ್ರ! ಶೂದ್ರತ್ವವನ್ನು ಶೂದ್ರರಿಂದ ರಕ್ಷಿಸುತ್ತಿದೆ ಬ್ರಾಹ್ಮಣಿಕೆ!ನಾನು ಹುಟ್ಟಿನಿಂದ ಬ್ರಾಹ್ಮಣ, ಮಾಧ್ವಬ್ರಾಹ್ಮಣ. ನನ್ನ ಸಂಬಂಧಿಕರೆಲ್ಲ ತಮ್ಮ ಮಠದ ಭಕ್ತರು.  ಅವರೆಲ್ಲ ಒಳ್ಳೆಯ ಜನಗಳೇ ಹೌದು. ಆದರೆ ಅವರಾರೂ ಬ್ರಾಹ್ಮಣ ವೃತ್ತಿಗಳಲ್ಲಿ ಉಳಿದಿಲ್ಲ ಇಂದು. ಚಪ್ಪಲಿ ಮಾರಾಟದಿಂದ ಹಿಡಿದು ಮದ್ಯ ಮಾರಾಟದವರೆಗೆ, ದುಡ್ಡಿನ ದಂಧೆಯಿಂದ ಹಿಡಿದು ಶಸ್ತ್ರ ಉತ್ಪಾದನೆಯವರೆಗೆ, ವಿವಿಧ ವೃತ್ತಿಗಳಲ್ಲಿ ಚದುರಿ ಹೋಗಿದ್ದಾರೆ. ಮಾತ್ರವಲ್ಲ, ತಾವು ಹೋದಲ್ಲೆಲ್ಲಾ ಯಶಸ್ವಿಯಾಗಿದ್ದಾರೆ. ಇಷ್ಟೆಲ್ಲ ಬದಲಾವಣೆಯ ನಂತರವೂ ಬ್ರಾಹ್ಮಣಿಕೆಯೆಂಬ ಪೊಳ್ಳು ಕವಚ ಬೇಕೆ ಬ್ರಾಹ್ಮಣರಿಗೆ?ನನಗಿನ್ನೂ ನೆನಪಿದೆ! ಚಿಕ್ಕಂದಿನಲ್ಲಿ ನಾವು ಹುಡುಗರು ಕೇಳುತ್ತಿದ್ದ ನೀತಿಕತೆಗಳಲ್ಲೆಲ್ಲ ಬ್ರಾಹ್ಮಣ ರೂಪವು ಒಂದೇ ಆಗಿರುತ್ತಿತ್ತು, ಅದು ಬಡಬ್ರಾಹ್ಮಣ ರೂಪವಾಗಿರುತ್ತಿತ್ತು. ಸುದಾಮನಂತೆ ಬಡವನಾಗಿದ್ದಲ್ಲಿ ಮಾತ್ರ ಶ್ರೀಕೃಷ್ಣ ಪರಮಾತ್ಮನು ಬ್ರಾಹ್ಮಣನತ್ತ ಬಂದಾನು. ಆಗ ಮಾತ್ರ ಅವನು, ಇತರರಿಂದ ದಾನಧರ್ಮ ಸ್ವೀಕರಿಸಲಿಕ್ಕೆ, ಇತರರಿಗೆ ಬುದ್ಧಿವಾದ ಹೇಳಲಿಕ್ಕೆ ಅರ್ಹನಾಗುತ್ತಾನೆ. ಸ್ವಾಮೀಜಿ, ಬಡತನವೆಂಬುದು ಶೂದ್ರರಿಗೆ ಅಸಹ್ಯ ಅನಿವಾರ್ಯತೆಯಾದರೆ, ಬ್ರಾಹ್ಮಣರಿಗೆ ಸಹ್ಯವೂ ಸ್ವೀಕಾರಾರ್ಹವೂ ಆದ ಮೌಲ್ಯ. ಅಧಿಕಾರ, ಅಹಂಕಾರ ಹಾಗೂ ಉದ್ಧಟತನಗಳನ್ನು ಪ್ರತೀಕವಾಗಿಸಿಕೊಂಡ ಬ್ರಾಹ್ಮಣ ಒಬ್ಬನೇ, ಆತ ರಾವಣ!  ದೇವರು ತಾನೇ ಮುಂದೆ ನಿಂತು ಆತನನ್ನು ಸಂಹರಿಸಿದ.ನಮ್ಮದು ದುರಂತವೇ ಸರಿ! ಆರ್ಥಿಕ ಯಶಸ್ಸೇ ನಮಗೆ ಪಾರಮಾರ್ಥಿಕ ಕಂಟಕವಾಗಿ ಪರಿಣಮಿಸಿದೆ.  ಭಾರತದ ಪ್ರತಿಯೊಬ್ಬ ಜಾತಿವಾದಿಯೂ ಈ ದುರಂತಕ್ಕೆ ಬಲಿಯಾಗಿದ್ದಾನೆ. ಹಾಗಾಗಿಯೇ ನಾವು ಪ್ರತಿಯೊಬ್ಬರೂ ಪಾಪ ಪರಿಹಾರಾರ್ಥವಾಗಿ ಮಠಗಳಿಗೆ ದುಡ್ಡು ಸುರಿಯುತ್ತೇವೆ, ಇತರರ ಬಗ್ಗೆ ಅಸಹಿಷ್ಣುತೆಯ ಮಾತನ್ನಾಡುತ್ತೇವೆ, ಅಸಹಿಷ್ಣುತೆಯ ರಾಜಕಾರಣಕ್ಕೆ ಬೆಂಬಲ ನೀಡುತ್ತೇವೆ. ಈಗ ಕೆಳಜಾತಿಗಳಲ್ಲೂ ಶುರುವಾಗಿದೆ ದುಡ್ಡು ಸುರಿದು ಪಾಪದ ಮಠ ನಿರ್ಮಾಣ ಮಾಡುವ ಕೆಲಸ. ಮಠಗಳನ್ನು ಪಾಪದ ಮಠಗಳೆಂದು ಕರೆದೆ. ಮಠಮಾನ್ಯಗಳನ್ನು ಜರೆಯಲಿಕ್ಕಲ್ಲ ಹಾಗೆ ಮಾಡಿದ್ದು. ದುಡ್ಡೇ ಪಾಪವಲ್ಲವೆ ಸ್ವಾಮೀಜಿ! ಮಠಮಾನ್ಯಗಳು ಬೆಳೆಯಬೇಕಾದದ್ದು ಸಾಮಾಜಿಕ ಪರಿವರ್ತನೆಯ ಮೂಲಕ ಮಾತ್ರವಲ್ಲವೇ?ಜಾತಿ ಒಂದು ಆಧುನಿಕ ಪ್ರಕ್ರಿಯೆ. ನವಬ್ರಾಹ್ಮಣಿಕೆಯ ನಿರ್ಮಾಣ ಎಂದು ಕೂಡಾ ಈ ಪ್ರಕ್ರಿಯೆಯನ್ನು ಕರೆಯಲಾಗುತ್ತದೆ. ಇಡೀ ಸಮಾಜವೇ ಇಂದು ಬ್ರಾಹ್ಮಣವಾಗುತ್ತಿದೆ. ಹೀಗಿರುವಾಗ, ಸ್ವಂತಿಕೆ ಉಳಿಸಿಕೊಳ್ಳಬೇಕೆಂದರೆ ಬ್ರಾಹ್ಮಣರಿಗೆ ಬ್ರಾಹ್ಮಣ್ಯ ತ್ಯಜಿಸದೆ ಬೇರೆ ದಾರಿ ಉಳಿದಿಲ್ಲ ಸ್ವಾಮೀಜಿ.  ಬ್ರಾಹ್ಮಣ್ಯ ಕಳಚುವುದು, ಸರಳಜೀವನ ಹಾಗೂ ಸಮಾನತೆಯ ಆಶಯಗಳನ್ನು ಸ್ವೀಕರಿಸುವುದು ಮಾತ್ರವೇ ಅವರಿಗುಳಿದಿರುವ ದಾರಿ.  ಅವರಿಗೆ ಮಾತ್ರವಲ್ಲ, ಎಲ್ಲ ಮೇಲ್ಜಾತಿ ಮೇಲ್ವರ್ಗಗಳಿಗೆ ಉಳಿದಿರುವ ದಾರಿ.ಹಿಂದೆಲ್ಲ ಜಾತಿಪದ್ಧತಿ ಇದ್ದಿರಲಿಲ್ಲ, ಇದ್ದದ್ದು ವರ್ಣಾಶ್ರಮ ಪದ್ಧತಿ ಮಾತ್ರ. ಸ್ವಇಚ್ಛೆಯಿಂದ ಬಡತನ ಸ್ವೀಕರಿಸಲಿಕ್ಕೆ ಹಾಗೂ ಜ್ಞಾನಿಯಾಗಲಿಕ್ಕೆ ಜಾತಿಯ ಬಲವಂತವೇಕೆ ಬೇಕು ಹೇಳಿ? ಮಹಾನ್ ಋಷಿಗಳ ಸಾಲಿನಲ್ಲಿ ಎಣಿಸಿದರೆ ಹುಟ್ಟಿನಿಂದ ಬ್ರಾಹ್ಮಣರಾದ ಋಷಿಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಹುಟ್ಟಿನಿಂದ ಶೂದ್ರರಾದ ಋಷಿಗಳಿದ್ದಾರೆ.ಪೂಜ್ಯರೇ, ಉಡುಪಿಯ ಕೃಷ್ಣಮಠದ ಆಧ್ಯಾತ್ಮಿಕ ಮಹತ್ವವಿರುವುದು ಅದರ ಸ್ಥಾವರದಲ್ಲಲ್ಲ, ಸ್ಥಾವರದಲ್ಲಿರುವ ಕಿಂಡಿಯಲ್ಲಿ. ಸ್ಥಾವರದಲ್ಲಿ ಬಿರುಕು ಏಕೆ ಮೂಡಿತೆಂದು ತಮಗೆ ತಿಳಿದೇ ಇದೆ. ಜಾತಿ ವ್ಯವಸ್ಥೆಗೆ ಬೆನ್ನು ತಿರುಗಿಸಿ, ಸ್ಥಾವರದಲ್ಲಿ ಬಿರುಕುಂಟುಮಾಡಿ, ಜಾತಿ ವ್ಯವಸ್ಥೆಯ ಹಿತ್ತಲಿನಲ್ಲಿ ನಿಂತಿದ್ದ ಕನಕನಿಗೆ ದರ್ಶನ ಕೊಟ್ಟ ಕೃಷ್ಣ. ಒಂದೊಮ್ಮೆ ಕಿಂಡಿಗಳು, ಬಿರುಕುಗಳು ಇರಲೇಬಾರದೆಂದಾದರೆ ಗೋಡೆಗಳೂ ಸಹ ಇರಬಾರದು.  ಕೆಡವಿಬಿಡಿ, ಜಾತೀಯತೆಯ ಗೋಡೆಗಳನ್ನು. ತಾವು ಈ ಕೆಲಸ ಮಾಡಬಲ್ಲಿರಾದರೆ ನನ್ನಂತಹ ಸಾಮಾನ್ಯ ಬುದ್ಧಿಜೀವಿಗಳು ತಮ್ಮ ಬೆಂಬಲಕ್ಕೆ ನಿಲ್ಲುತ್ತೇವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.