ಸೋಮವಾರ, ಮಾರ್ಚ್ 1, 2021
31 °C

ದೇಶದ ಅರ್ಥ ವ್ಯವಸ್ಥೆಗೆ ಮೋದಿ ಶಕ್ತಿ ತುಂಬಲಿ

ಡಿ. ಮರಳೀಧರ Updated:

ಅಕ್ಷರ ಗಾತ್ರ : | |

ದೇಶದ ಅರ್ಥ ವ್ಯವಸ್ಥೆಗೆ ಮೋದಿ ಶಕ್ತಿ ತುಂಬಲಿ

ಬೆಂಗಳೂರು ಗಾಲ್ಫ್ ಕ್ಲಬ್‌ಗೆ ಪ್ರತಿ ದಿನ ಬೆಳಿಗ್ಗೆ ಬರುವ ಗಾಲ್ಫ್ ಆಟ­ಗಾರರು ಸಂಪ್ರದಾಯದಂತೆ ‘ಹೇಗಿದ್ದೀರಿ? ಹೇಗಿತ್ತು ಇಂದಿನ ಆಟ’ ಎಂದು  ಸ್ನೇಹಪೂರ್ವಕ­ವಾಗಿ ಉಭಯ ಕುಶಲೋಪರಿ ನಡೆಸುತ್ತಾರೆ. ಹೋದ ಭಾನುವಾರದ ಗಾಲ್ಫ್ ಕ್ಲಬ್ ಬೆಳಗು ಮಾತ್ರ ಎಂದಿನಂತಿರಲಿಲ್ಲ.ಉದ್ದಿಮೆ­ದಾರರು, ಕೈಗಾರಿಕೋದ್ಯ­ಮಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಗಾಲ್ಫ್ ಆಟ­ಗಾರರ ಮೊಗದಲ್ಲಿ ಸಂತಸ ತುಂಬಿ ತುಳುಕುತ್ತಿತ್ತು. ಅವರಲ್ಲಿ ಹೊಸ ಉತ್ಸಾಹ ಗರಿಗೆದರಿತ್ತು. ಬಿಜೆಪಿಯ ನರೇಂದ್ರ ಮೋದಿ ಅವರು ಪ್ರಧಾನಿ ಪಟ್ಟ ಅಲಂಕರಿಸ­ಲಿರುವುದರಿಂದ ಅವರ ನಿರೀಕ್ಷೆಗಳೆಲ್ಲ ಇನ್ನಷ್ಟು ಗರಿಗೆದರಿದ್ದವು, ಚುನಾವಣಾ ಫಲಿತಾಂಶವು ಬಹು­ತೇಕ ಉದ್ದಿಮೆ­ದಾರರಲ್ಲಿ ಹೊಸ ಉತ್ಸಾಹ ಮೂಡಿ­ಸಿದೆ. ಒಟ್ಟಾರೆ ಫಲಿ­ತಾಂಶದ ಬಗ್ಗೆ ಅವರೆಲ್ಲ ಅತ್ಯುತ್ಸಾ­ಹದಿಂದಲೇ ಮಾತನಾ­ಡುತ್ತಿದ್ದರು.ಈ ಉಲ್ಲಾಸಕರ ವಾತಾವರಣ ಬರೀ ಕೈಗಾರಿ­ಕೋದ್ಯಮಿಗಳಿಗೆ ಸೀಮಿತ­ವಾಗಿರ­ಲಿಲ್ಲ. ಚುನಾ­ವಣಾ ಫಲಿತಾಂಶದಿಂದ ಮುಂಬೈ ಷೇರುಪೇಟೆ­ಯಲ್ಲಿ ಖರೀದಿ ಭರಾಟೆ ಮತ್ತು ವಿದೇಶಿ ವಿನಿ­ಮಯ ಮಾರುಕಟ್ಟೆಯಲ್ಲಿ ಗಮನಿಸಬಹು­ದಾದ ಬದ­ಲಾವಣೆ ಕಂಡು ಬಂದಿದೆ. ಡಾಲರ್ ಎದುರಿಗಿನ ರೂಪಾಯಿ ಮೌಲ್ಯವು ಅತ್ಯಂತ ತ್ವರಿತವಾಗಿ ಚೇತರಿಸಿಕೊಂಡಿದೆ.ವಿದೇಶಿ ವಿನಿ­ಮಯದ ಗಳಿಕೆಯನ್ನೇ ಹೆಚ್ಚಾಗಿ ಅವಲಂಬಿ­ಸಿರುವ ತಂತ್ರಜ್ಞಾನ ಸಂಸ್ಥೆಗಳ ಲಾಭದ ಮೇಲೆ ಫಲಿತಾಂಶವು ಸಕಾರಾತ್ಮಕ ಪರಿಣಾಮ ಬೀರಲಿ­ರು­ವುದನ್ನು ಷೇರು ಮಾರುಕಟ್ಟೆ ಮನ­ಗಂಡಿದೆ. ಒಂದೆಡೆ ಚುನಾವಣಾ ಫಲಿತಾಂಶದ ಸಂಭ್ರಮ ಕ್ರಮೇಣ ಕಡಿಮೆಯಾಗು­ತ್ತಿದ್ದರೆ, ಇನ್ನೊಂದೆಡೆ ಜನರ ನಿರೀಕ್ಷೆಗಳು ಆಕಾಶದೆತ್ತರಕ್ಕೆ ಏರುತ್ತಿವೆ.ಸಾಂಪ್ರ­ದಾಯಿಕ ಸಿದ್ಧಾಂತಗಳ ಮುಸುಕು ಕಿತ್ತೊಗೆ­ದಿರುವುದು ಮತ್ತು ಮತ­ದಾನದ ಸ್ವರೂಪದಲ್ಲಿ ವ್ಯಾಪಕ ಬದಲಾವಣೆ ಆಗಿರುವುದು ಈ ಬಾರಿಯ ಚುನಾವಣಾ ಫಲಿತಾಂಶದ ವಿಶೇಷವಾಗಿದೆ. ಅಭಿವೃದ್ಧಿಯ (ವಿಕಾಸ್) ಸಂದೇಶವು ಜಾತಿ, - ಧರ್ಮ, ಪ್ರದೇಶ, ವಯಸ್ಸು ಹೊರ­ತಾದ ಎಲ್ಲ ವರ್ಗದ ಮತದಾರ­ರಲ್ಲಿ ಹೊಸ ಹುರುಪು ಮೂಡಿಸಿದೆ. ಸುಂದರ ಭವಿಷ್ಯದ ಆಕಾಂಕ್ಷೆಗಳು ಮತ್ತು ತಮ್ಮೆಲ್ಲ ಕನಸುಗಳು ನನಸಾಗುವ ಆಶಾವಾದದ ಫಲವಾಗಿ ಮತದಾರರು ಮೋದಿ ಅವರಿಗೆ ಅಸಾಮಾನ್ಯ ಸ್ವರೂ­ಪದ ಸ್ಪಷ್ಟ ಜನಾ­ದೇಶ ನೀಡಿದ್ದಾರೆ.  ಜನರು ನರೇಂದ್ರ ಮೋದಿ ಅವರ ಪ್ರಭಾವಿ ವ್ಯಕ್ತಿತ್ವಕ್ಕೆ ಮಾರು ಹೋಗಿರು­ವುದು ಫಲಿತಾಂಶದಿಂದ ಸಾಬೀತಾಗಿದೆ.ಇತರರಿಗೆ ಹೋಲಿಸಿದರೆ ಮೋದಿ ಅವರದ್ದು ವಿಭಿನ್ನ ಮತ್ತು ವಿಶಿಷ್ಟ ವ್ಯಕ್ತಿತ್ವ ಎನ್ನುವುದು ಚುನಾವಣೆ ಸಂದರ್ಭದಲ್ಲಿ ಸಾಬೀತಾಗಿದೆ.  ಮೋದಿ ಅವರು ಚುನಾ­ವಣಾ ಪ್ರಚಾರ ಹೊಣೆ­ಯನ್ನು ಏಕಾಂಗಿ­ಯಾಗಿ ನಿಭಾಯಿಸಿ, ಪಕ್ಷಕ್ಕೆ ಗೆಲುವು ತಂದುಕೊಡುವಲ್ಲಿ ಸಫಲರಾಗಿದ್ದಾರೆ.

ಕೆಲ ವರ್ಷಗಳ ಹಿಂದೆ ನಾನು ಮೋದಿ ಅವರ ಜತೆ ಕಳೆದ ಕೆಲ ಕ್ಷಣಗಳನ್ನು  ಇಲ್ಲಿ ನೆನಪಿಸಿ­ಕೊಳ್ಳಲು ಬಯಸುತ್ತೇನೆ.ಅವರ ಎದುರಿಗೆ ಕುಳಿತಿದ್ದ ನಾನು ಅವರ ವ್ಯಕ್ತಿತ್ವದಲ್ಲಿನ ತೇಜಸ್ಸಿಗೆ ಬೆರಗಾಗಿದ್ದೆ. ಇಲ್ಲಿಯವರೆಗಿನ  ನನ್ನ ಬದುಕಿನಲ್ಲಿ ನನ್ನ ಮೈಮೇಲಿನ ರೋಮಗಳು ಎದ್ದುನಿಲ್ಲು­ವಂತಹ ರೋಮಾಂಚಕಾರಿ ಅನುಭವ ನೀಡಿದ ಕೆಲವೇ ವ್ಯಕ್ತಿಗಳಲ್ಲಿ ಇವರೂ ಒಬ್ಬರಾಗಿದ್ದಾರೆ.ಬೇರೆ, ಬೇರೆ ವ್ಯಕ್ತಿಗಳ ದೃಷ್ಟಿಕೋನ­ದಲ್ಲಿ ವಿಕಾಸ ಅಥವಾ ಅಭಿವೃದ್ಧಿ ಅರ್ಥವು ವಿಭಿನ್ನ­ವಾಗಿರುತ್ತದೆ. ಆಸೆ–- ಆಕಾಂಕ್ಷೆಗಳು ಜನರ ಗ್ರಹಿಕೆಗೆ ತಳಕು ಹಾಕಿಕೊಂಡಿರುತ್ತವೆ. ವಿಭಿನ್ನ ಬಗೆಯ ಮತದಾರರಿಗೆ ಮೋದಿ  ಪ್ರತ್ಯೇಕ ಭರವಸೆ ನೀಡುವ ಮೂಲಕ ಅವರ ಮನಗೆಲ್ಲು­ವಲ್ಲಿ ಯಶಸ್ವಿಯಾಗಿದ್ದಾರೆ.ರಾಜಕೀಯ ವಿಶ್ಲೇಷಕರು ಮತ್ತು ಪರಿಣತರು ‘ವಿಕಾಸ’ ಶಬ್ದವನ್ನು ವಿಭಿನ್ನ ನೆಲೆಯಲ್ಲಿ ವ್ಯಾಖ್ಯಾನಿಸಿರುವುದು ಮತ್ತು ಮೋದಿ ಅವರು ಏನು ಮಾಡಬೇಕು ಎಂದು ತಮಗೆ ತೋಚಿದ ಬಗೆಯಲ್ಲಿ ಸಲಹೆ ನೀಡಿರುವುದು ದಿನ ಪತ್ರಿಕೆಗಳ ಮೇಲೆ ಕಣ್ಣಾಡಿಸಿದಾಗ ಓದುಗರ ಅನು­ಭವಕ್ಕೆ ಬರುತ್ತದೆ. ಈ ತಜ್ಞರ ದೃಷ್ಟಿಯ­ಲ್ಲಿನ ಅಭಿವೃದ್ಧಿ ಕಾರ್ಯಕ್ರಮ­ಗಳನ್ನು ಆರ್ಥಿಕ ಬೆಳವಣಿಗೆ, ಹಣದುಬ್ಬರ, ವಿದೇಶಾಂಗ ವ್ಯವಹಾರ, ಪಿಂಚಣಿ, ಸಿಬ್ಬಂದಿ  ವಗೈರೆಗಳನ್ನೆಲ್ಲ ಪಟ್ಟಿ ಮಾಡಿದರೆ ಅದೊಂದೇ ಹಲವು ಪುಟಗಳಷ್ಟು ದೀರ್ಘವಾಗಿರಲಿದೆ.ನರೇಂದ್ರ ಮೋದಿ, ಪ್ರಧಾನಿ ಪಟ್ಟ ಏರುವ ಮೊದಲೇ ಮತದಾರರು ಮತ್ತು ದೇಶದ ಅರ್ಥ ವ್ಯವಸ್ಥೆ ಮೇಲೆ ತಮ್ಮ ದೇ  ಆದ ವಿಶಿಷ್ಟ ಪ್ರಭಾವ ಬೀರಿದ್ದಾರೆ. ಜನರ ನಿರೀಕ್ಷೆಗಳನ್ನು ಬದಲಿಸಿದ್ದಾರೆ. ಅರ್ಥ ವ್ಯವಸ್ಥೆಯಲ್ಲಿ ಉತ್ಸಾಹ ಗರಿಗೆದರು­ವಂತೆ ಮಾಡಿದ್ದಾರೆ.

ಆದರೆ, ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ದರವನ್ನು ಮುಂದಿನ ಎರಡು ವರ್ಷಗಳಲ್ಲಿ ಶೇ 10ರ ಮಟ್ಟಕ್ಕೆ ಕೊಂಡೊ­­ಯ್ಯಲು ಅವರು ಸ್ಪಷ್ಟ ನೀತಿ ರೂಪಿಸ­ಬೇಕಾಗಿದೆ.ಯಾವುದೇ ಒಂದು ಅರ್ಥ ವ್ಯವಸ್ಥೆಯ ಜಿಡಿಪಿಯು ಕೃಷಿ, ಸರಕು ತಯಾರಿಕೆ ಮತ್ತು ಸೇವಾ ವಲಯಗಳನ್ನು ಒಳಗೊಂಡಿರುತ್ತದೆ. ನಮ್ಮ  ದೇಶದಲ್ಲಿ  ಕೃಷಿ ವಲಯವು ಶೇ 56ರಷ್ಟು ಜನರಿಗೆ ಜೀವನೋಪಾಯ ಒದಗಿಸಿದ್ದರೂ, ಅದರ ವೃದ್ಧಿ ದರ ತುಂಬ ಕಡಿಮೆ ಪ್ರಮಾಣದಲ್ಲಿ ಇದೆ.  ಕೃಷಿ ಉತ್ಪಾ­ದನೆಯು ಪ್ರಸಕ್ತ ಸಾಲಿನಲ್ಲಿ 216 ದಶಲಕ್ಷ ಟನ್‌ಗಳಷ್ಟಾಗಿದೆ. ಇದು ಇನ್ನಷ್ಟು ಹೆಚ್ಚಳ­ಗೊಳ್ಳುವ ಸ್ಪಷ್ಟ ಸೂಚನೆಗಳಿದ್ದರೂ, ಅದು ಸಾಲದು.ಉದ್ಯೋಗ ಸೃಷ್ಟಿಗೆ ನೆರವಾಗುವ ಮತ್ತು ಸರ್ಕಾರಕ್ಕೆ ವರಮಾನ ತಂದು­ಕೊಡುವ, ಒಟ್ಟು ಆಂತರಿಕ ಉತ್ಪಾದನೆಗೆ (ಜಿಡಿಪಿ) ಶೇ 85ರಷ್ಟು ಕೊಡುಗೆ ನೀಡುವ ಸೇವಾ ಮತ್ತು ಸರಕು ತಯಾ­ರಿಕಾ ವಲಯಗಳ ಬಗ್ಗೆ ಹೊಸ ಸರ್ಕಾರ ಮೊದಲ ಆದ್ಯತೆ ನೀಡಬೇಕಾಗಿದೆ. ಈ ವಲಯ­ಗಳಿಗೆ ಸ್ಪಷ್ಟ ಮತ್ತು ಸದೃಢ ಸ್ವರೂಪದ ಉತ್ತೇ­ಜನ ನೀಡಿ ಪ್ರವರ್ಧ­ಮಾನಕ್ಕೆ ಬರಲು ಅಗತ್ಯ­ವಾದ ಪೂರಕ ಕೈಗಾರಿಕಾ ವಾತಾವರಣ ಕಲ್ಪಿಸಲು ಮೋದಿ  ಆದ್ಯತೆ ನೀಡಬೇಕಾಗಿದೆ.ಉದ್ದಿಮೆಗಳ ಸ್ಥಾಪನೆಗೆ ಪೂರಕವಾದ ವಾತಾವರಣದ ಸೂಚ್ಯಂಕದಲ್ಲಿ ಭಾರತವು ವಿಶ್ವದಲ್ಲಿ 134ನೇ ಸ್ಥಾನದಲ್ಲಿ ಇದೆ.  ಉದ್ಯಮ ಸ್ಥಾಪಿಸಲು ನೆರವು ಕಲ್ಪಿಸುವುದರ ಬಗ್ಗೆ ನಮ್ಮ ಸರ್ಕಾರಗಳು, ರಾಜಕೀಯ ಮುಖಂಡರು ಅದೆಷ್ಟರ ಮಟ್ಟಿಗೆ ದಿವ್ಯ ನಿರ್ಲಕ್ಷ್ಯ ತಾಳಿರುವರು ಎನ್ನುವುದಕ್ಕೆ ಇದು ಕನ್ನಡಿ ಹಿಡಿಯು­ತ್ತದೆ. ಉದ್ದಿಮೆ ಸ್ಥಾಪನೆ ಮೇಲೆ ಪರಿಣಾಮ ಬೀರುವ ಕಾನೂನು, ಆಡಳಿತಾತ್ಮಕ, ತೆರಿಗೆ ಮತ್ತಿತರ ನೀತಿ –- ನಿಯಮಗಳನ್ನು ಆಮೂಲಾಗ್ರವಾಗಿ ಬದಲಾಯಿಸುವುದಕ್ಕೆ ಚಾಲನೆ ನೀಡುವ ತುರ್ತು ಅಗತ್ಯ ಇದೆ.ಆರ್ಥಿಕ ಅಭಿವೃದ್ಧಿಯ ಗುರಿ ಸಾಧನೆ­ಯಲ್ಲಿ ರಾಜ್ಯ ಸರ್ಕಾರಗಳೇ ಕೇಂದ್ರ ಬಿಂದು ಆಗಿರು­ವುದನ್ನು  ವಿಜಯೋತ್ಸ­ವದ ಸಂಭ್ರಮಾಚರ­ಣೆಯಲ್ಲಿ ಮುಳುಗಿ­ರುವ ಯಾರೊಬ್ಬರೂ ಮರೆಯ­ಬಾ­ರದು. ಬಿಹಾರ ಮತ್ತು ಗುಜರಾತ್ ರಾಜ್ಯ ಸರ್ಕಾರಗಳು ಎರಡಂಕಿ ಅಭಿವೃದ್ಧಿ ದರ ಸಾಧಿಸಿರುವುದಕ್ಕೆ ಅಲ್ಲಿನ ಅತ್ಯಂತ ಕ್ರಿಯಾಶೀಲ ಮುಖ್ಯಮಂತ್ರಿಗಳ ಸಮರ್ಥ ನಾಯಕತ್ವವೇ ಕಾರಣ.ನಮ್ಮ ದೇಶದ ಒಕ್ಕೂಟ ವ್ಯವಸ್ಥೆಯಲ್ಲಿನ ಈ ಸಂಕೀರ್ಣತೆ­ಯನ್ನು ಮೋದಿ ಅವರು ಸರಿಯಾಗಿ ಅರ್ಥಮಾಡಿಕೊಂಡಿದ್ದಾರೆ ಎಂದೂ  ನಾನು ಭಾವಿಸುವೆ. ಮೋದಿ ಅವರಿನ್ನೂ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿಲ್ಲ. ಆದಾಗ್ಯೂ,  ಅವರು ಕೈಗಾರಿಕಾ ರಂಗದ ಸಮಸ್ಯೆಗಳಿಗೆಲ್ಲ ಪರಿಹಾರ ಕಂಡು­ಕೊಳ್ಳುವ ಬಗ್ಗೆ ಈಗಾಗಲೇ ಅನೇಕರು ಕೊಂಕು ಮಾತುಗಳನ್ನಾಡುತ್ತಿದ್ದಾರೆ.2014ರ ಲೋಕಸಭಾ ಚುನಾವಣೆ­ಯಲ್ಲಿ ಬಿಜೆಪಿಯ ಗೆಲುವು ಪಕ್ಷದ ಚುನಾವಣಾ ಪ್ರಣಾಳಿಕೆಗಿಂತ ಮೋದಿ ಅವರ ವೈಯಕ್ತಿಕ ವರ್ಚಸ್ಸಿನಿಂದಾಗಿ ಇತಿಹಾಸದಲ್ಲಿ ವಿಶಿಷ್ಟವಾಗಿ ದಾಖಲಾ­ಗು­­ತ್ತದೆ. ತಾವು ಯಶಸ್ವಿ ನಾಯಕ ಎನ್ನುವುದನ್ನು ಮೋದಿ ಸಾಬೀತು­ಪಡಿಸಿದ್ದು, ಗುಜರಾತ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.ಚುನಾವಣೆಯ ಗೆಲುವಿನ ನಂತರ ಅಹ್ಮದಾ­ಬಾದ್‌ನಲ್ಲಿ ಅವರು ಮಾಡಿದ ಭಾಷಣದಲ್ಲಿ, ದೇಶದ 125 ಕೋಟಿ ಜನರ ಕಲ್ಯಾಣಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಳ್ಳುವ ಭರವಸೆ ನೀಡಿ­ದ್ದಾರೆ.ದೀರ್ಘ ಸಮಯದ ನಂತರ ಮೋದಿ ಅವರು, ‘ಸರ್ಕಾರಿ ಸೇವಕ’ ಪರಿಕಲ್ಪನೆ­ಯನ್ನು ಮತ್ತೆ ಚಾಲ್ತಿಗೆ ತಂದಿದ್ದಾರೆ. ತಾವು 125 ಕೋಟಿ ಜನರ ಸೇವಕನಾಗಿ ಕೆಲಸ ಮಾಡುವ ಭರವಸೆ­ಯನ್ನು  ಪುನರುಚ್ಚರಿಸಿದ್ದಾರೆ. ಅವರೊಬ್ಬ ಕನಸು­ಗಾರ. ಒಂದು ವೇಳೆ ಅವರ ಕನಸುಗಳು ನನಸಾದರೆ, ದೇಶದ ಅರ್ಥ ವ್ಯವಸ್ಥೆಯ ಸ್ವರೂಪವೇ ಬದಲಾಗುತ್ತದೆ. ಧಾರಾಳತ­ನದಿಂದ ಅವರಿಗೊಂದು ಅವಕಾಶ ಕೊಡೋಣ

ಮತ್ತು ಎಲ್ಲರೂ ಸೇರಿ ಅವರ ಜತೆಗೆ ಕೆಲಸ ಮಾಡೋಣ.ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.