ಬುಧವಾರ, ಮೇ 19, 2021
21 °C

ನಾಥೂರಾಮನನ್ನು ತಡೆದು ನಿಲ್ಲಿಸಬಹುದಿತ್ತು

ಡಿ. ಉಮಾಪತಿ Updated:

ಅಕ್ಷರ ಗಾತ್ರ : | |

ನಾಥೂರಾಮನನ್ನು ತಡೆದು ನಿಲ್ಲಿಸಬಹುದಿತ್ತು

ಮರಳಿ  ಬಂದಿದೆ ಹುತಾತ್ಮರ ದಿನ. ನಾಥೂರಾಮ ಗೋಡ್ಸೆಯ ಗುಂಡಿಗೆ ಮಹಾತ್ಮ ಗಾಂಧಿ ಬಲಿಯಾದ ಜನವರಿ ಮೂವತ್ತು. ಅದಾಗಲೇ ಎಂಬತ್ತು ಸಮೀಪಿಸಿದ್ದ ಗಾಂಧಿ ಇನ್ನಷ್ಟು ಕಾಲ ಜೀವಿಸಿದ್ದರೆ ದೇಶದ ಸಾಮಾಜಿಕ, ರಾಜಕೀಯ, ಆರ್ಥಿಕ ಗತಿ ಯಾವ್ಯಾವ ತಿರುವುಗಳನ್ನು ಪಡೆಯುತ್ತಿತ್ತೆಂದು ಕಲ್ಪಿಸುವುದು ಕಠಿಣ.

 

ನಾಥೂರಾಮ ಹುಟ್ಟುವ ಮುನ್ನ ಮೂವರು ಗಂಡುಮಕ್ಕಳನ್ನು ಕಳೆದುಕೊಂಡಿದ್ದರು ಆತನ ತಂದೆ ತಾಯಿ. ತಮ್ಮ ಹೊಟ್ಟೆಯ ಗಂಡು ಸಂತಾನ ಶಾಪಗ್ರಸ್ತವಿದ್ದೀತು ಎಂಬ ಶಂಕೆ ಅವರನ್ನು ಕಾಡಿತ್ತು. ಮುಂದೆ ಗಂಡು ಮಗು ಹುಟ್ಟಿದರೆ ಅದನ್ನು ಕೆಲ ವರ್ಷಗಳ ಕಾಲವಾದರೂ ಹೆಣ್ಣುಮಗುವಿನಂತೆ ಬೆಳೆಸುವುದಾಗಿ ಹರಕೆ ಹೊತ್ತರು. ಗಂಡುಕೂಸು ಹುಟ್ಟಿತು. ರಾಮಚಂದ್ರನೆಂದು ಹೆಸರಿಟ್ಟರು. ರಾಮ ಎಂದು ಕರೆದರು. ಮೂಗಿನ ಎಡಹೊಳ್ಳೆಯನ್ನು ಚುಚ್ಚಿ ‘ನಥ್’ (ನತ್ತು) ತೊಡಿಸಿದರು. ನಥ್ ತೊಟ್ಟ ಮಗುವಿಗೆ ನಾಥೂರಾಮ ಎಂಬ ಹೆಸರೇ ಅಂಟಿಕೊಂಡಿತು. ನಾಥೂ ನಂತರ ಹುಟ್ಟಿದ ಮೂವರು ಗಂಡು ಮಕ್ಕಳ ಪೈಕಿ ಗಾಂಧಿ ಹತ್ಯೆಯ ಸಂಚಿನಲ್ಲಿ ಕಾಣಿಸಿಕೊಂಡಾತನ ಹೆಸರು ಗೋಪಾಲ ಗೋಡ್ಸೆ.

 

ಗಾಂಧಿ ಹಂತಕ ನಾಥೂರಾಮನ ಚಿತಾಭಸ್ಮ ಇಂದಿಗೂ ಪುಣೆಯ ಹಳೆಯ ಶಿಥಿಲ ಕಟ್ಟಡವೊಂದರ ಕೋಣೆಯಲ್ಲಿ ವಿಸರ್ಜನೆಗಾಗಿ ಕಾಯುತ್ತಿದೆ. ಪ್ರತಿವರ್ಷ ನವೆಂಬರ್ 15ರಂದು ಗೋಡ್ಸೆ ಪರಿವಾರ ಆಚರಿಸುವ ‘ಬಲಿದಾನ ದಿವಸ’ದಂದು ಚಿತಾಭಸ್ಮ ತುಂಬಿದ ಕರಂಡಕವನ್ನು ಹೊರತೆಗೆಯಲಾಗುತ್ತದೆ. ಗಾಂಧಿ ಹತ್ಯೆ ಕುರಿತು ನಡೆದ ವಿಚಾರಣೆಯ ಸಂದರ್ಭದಲ್ಲಿ ನಾಥೂರಾಮ ನೀಡಿದ ಹೇಳಿಕೆಗಳ ಆಯ್ದ ಭಾಗಗಳನ್ನು ಗೋಪಾಲ ಗೋಡ್ಸೆಯ ಮಗ ನಾನಾ ಗೋಡ್ಸೆ ಮೊಮ್ಮಕ್ಕಳು ವಾಚಿಸುತ್ತಾರೆ. ಆತನ ನೆನಪನ್ನು ಹಸಿರಾಗಿ ಇರಿಸಲು ಬಲಿದಾನ ದಿನದಂದು ಮೂರು ಪೀಳಿಗೆಗಳು ಕಲೆಯುತ್ತವೆ. ‘ನಾಥೂರಾಮ ಎಂತಹ ಮಹಾನ್ ದೇಶಭಕ್ತನೆಂದು ಭಾರತ ದೇಶ ಗುರುತಿಸುವ ತನಕ ಈ ಆಚರಣೆ ನಿಲ್ಲದೆ ನಡೆಯುತ್ತದೆ’ ಎಂದಿದ್ದಾರೆ ನಾನಾ ಗೋಡ್ಸೆ.

 

ಪುಣೆಯ ಶಿವಾಜಿನಗರದ ಹಳೆಯ ಕಟ್ಟಡ. ಅದರಲ್ಲಿ ರಿಯಲ್ ಎಸ್ಟೇಟ್ ಏಜೆನ್ಸಿಗಳು, ವಕೀಲರ ಕಚೇರಿಗಳು, ವಿಮಾ ದಲ್ಲಾಳಿಗಳ ಮಳಿಗೆಯ ನಡುವೆ ಒಂದು ಕೊಠಡಿ ‘ಅಜಿಂಕ್ಯ ಡೆವೆಲಪರ್ಸ್’ ಕಂಪೆನಿಯದು. ಈ ರಿಯಲ್ ಎಸ್ಟೇಟ್ ಏಜೆನ್ಸಿಯ ಮಾಲೀಕನ ಹೆಸರು ಅಜಿಂಕ್ಯ ಗೋಡ್ಸೆ. ಈತ ಗೋಪಾಲ ಗೋಡ್ಸೆಯ ಮೊಮ್ಮಗ. ನಾನಾ ಗೋಡ್ಸೆಯ ಮಗ. ಭಾರತ– ಪಾಕಿಸ್ತಾನ ಒಂದಾಗಬೇಕೆನ್ನುವ  ನಾಥೂರಾಮನ ಅಖಂಡ ಭಾರತದ ಕನಸು ನನಸಾದ ದಿನ ಈ ಚಿತಾಭಸ್ಮವನ್ನು ಸಿಂಧೂ ನದಿಯಲ್ಲಿ ವಿಸರ್ಜಿಸಲಾಗುವುದು ಎಂಬುದು ಗೋಡ್ಸೆ ವಂಶಜರ ಪ್ರತಿಜ್ಞೆ.

 

ಅಂದಹಾಗೆ ಗಾಂಧಿ ಜೀವನಚರಿತ್ರೆ ದಾಖಲಾಗಿರುವಷ್ಟೇ ಸಮಗ್ರವಾಗಿ ಅವರ ಹತ್ಯೆಯನ್ನೂ ಪರಿಶೋಧಿಸಲಾಗಿದೆ. ನ್ಯಾಯಮೂರ್ತಿ ಜೀವನಲಾಲ್ ಕಪೂರ್ ಆಯೋಗವು ಮಹಾತ್ಮನ ಹತ್ಯೆಯ ಪ್ರಕರಣವನ್ನು ಸವಿವರವಾಗಿ ಶೋಧಿಸಿ ಆರು ಸಂಪುಟಗಳ ವರದಿಯಾಗಿ ದಾಖಲಿಸಿದೆ.

 

ಗಾಂಧಿ ಹತ್ಯೆ ಸಂಚಿನ ವಿವರಗಳು ಹತ್ಯೆಯ ಹತ್ತು ದಿನಗಳ ಮೊದಲೇ ಅಂದಿನ ಸರ್ಕಾರಕ್ಕೆ ತಿಳಿದಿತ್ತು. 1948ರ ಜನವರಿ 20ರಂದು ಗಾಂಧಿ ಹತ್ಯೆಯ ಯತ್ನ ವಿಫಲವಾಗಿತ್ತು. ಮಹಾತ್ಮನನ್ನು ಕೊಲ್ಲುವ ಐದನೆಯ ವಿಫಲ ಯತ್ನ ನಡೆದಿತ್ತು. 1934ರಲ್ಲಿ ಅಸ್ಪೃಶ್ಯತೆಯ ವಿರುದ್ಧ ದೇಶವ್ಯಾಪಿ ಪ್ರವಾಸದ ಅಂಗವಾಗಿ ಪುಣೆಗೆ ತೆರಳಿದ್ದರು ಗಾಂಧೀಜಿ. ಭಾಷಣ ಮಾಡುವ ಮುನ್ನ ಅವರ ಕಾರಿನತ್ತ ತೂರಿ ಬಂದಿತ್ತು ಬಾಂಬು. ಪೊಲೀಸ್ ಕಾನ್‌ಸ್ಟೆಬಲ್‌ಗಳಿಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಗಾಂಧಿ ಹತ್ಯೆಯ ಮೂಲ ಕಾರಣ ಎಂದು ಹೇಳಲಾಗುವ ದೇಶವಿಭಜನೆಯ ಪ್ರಶ್ನೆಯಾಗಲೀ, ಪಾಕಿಸ್ತಾನಕ್ಕೆ ₹ 55 ಕೋಟಿ ನೀಡುವ ವಿಚಾರವಾಗಲೀ ಆಗ ಇರಲಿಲ್ಲ.

 

ಮಾಥೆರನ್ ಎಂಬಲ್ಲಿ ನಾಥೂರಾಮ 1944ರಲ್ಲೇ ಗಾಂಧಿ ಹತ್ಯೆಗೆ ಪ್ರಯತ್ನಿಸಿದ್ದ. ಜೀವನಲಾಲ್  ಆಯೋಗದ ಮುಂದೆ ಪುಣೆಯ ಸುರ್ತಿ ಲಾಡ್ಜಿನ ಮಾಲೀಕ ಮಣಿಶಂಕರ ಪುರೋಹಿತ ನುಡಿದಿದ್ದ ಸಾಕ್ಷ್ಯದಲ್ಲಿ ಈ ಸಂಗತಿ ದಾಖಲಾಗಿದೆ. 1946ರಲ್ಲಿ ಗಾಂಧಿ ಪಯಣಿಸುತ್ತಿದ್ದ ಮುಂಬೈ- ಪುಣೆ ರೈಲುಗಾಡಿಯನ್ನು ಅಪಘಾತಕ್ಕೆ ಸಿಕ್ಕಿಸಲು ಹಳಿಗಳ ಮೇಲೆ ಭಾರೀ ಬಂಡೆಗಳನ್ನು ಇರಿಸಲಾಗಿತ್ತು. ಚಾಲಕನ ಮುಂಜಾಗರೂಕತೆ ಈ ಅಪಘಾತವನ್ನು ತಪ್ಪಿಸಿತ್ತು. ಈ ರೈಲು ಗಾಡಿಯ ಚಾಲಕ ಪರೇರ ಕಪೂರ್ ಆಯೋಗದ ಮುಂದೆ ಹೀಗೆಂದು ಸಾಕ್ಷ್ಯ ನುಡಿದಿದ್ದಾನೆ. ಈ ರೈಲುಗಾಡಿಯನ್ನು ಗಾಂಧಿ ಸ್ಪೆಷಲ್ ಎಂದೇ ಹೆಸರಿಸಲಾಗಿತ್ತು.

 

ಮರುದಿನ ಪ್ರಾರ್ಥನಾ ಸಭೆಯಲ್ಲಿ ಗಾಂಧೀಜಿ ಹೇಳಿದ್ದರು- ‘ದೇವರ ದಯೆಯಿಂದ ಸಾವಿನ ದವಡೆಯಿಂದ ಪಾರಾಗಿದ್ದೇನೆ. ಯಾರನ್ನೂ ನೋಯಿಸದ, ಯಾರೊಂದಿಗೂ ಹಗೆಯಿಲ್ಲದ ನನ್ನ ಮೇಲೆ ಇಷ್ಟೊಂದು ಹತ್ಯೆಯ ಪ್ರಯತ್ನಗಳು ನಡೆಯುವುದು ಯಾಕೆಂದು ನನಗೆ ಅರ್ಥವಾಗುತ್ತಿಲ್ಲ... ನಾನು ಸದ್ಯದಲ್ಲಿ ಸಾಯುವವನಲ್ಲ. ನೂರಾ ಇಪ್ಪತ್ತೈದು ವರ್ಷಗಳ ಕಾಲ ಬದುಕಿರುತ್ತೇನೆ’. ಅವರು ನಿಜವಾಗಲೂ 125 ವರ್ಷಗಳ ಕಾಲ ಬದುಕಿದ್ದರೆ ಅವರ ಆಯಸ್ಸು 1994ರಲ್ಲಿ ತೀರಬೇಕಿತ್ತು.

 

ಆದರೆ ಅವರು ಅಂದುಕೊಂಡದ್ದು ನಡೆಯಲಿಲ್ಲ. ನಾಥೂರಾಮ ಮತ್ತು ಆತನ ಹಿಂದಿದ್ದ ಸಂಚುಕೋರರು ಯಶಸ್ಸು ಗಳಿಸಲು ಬಹಳ ಕಾಲ ಕಾಯಬೇಕಾಗಲಿಲ್ಲ. ಆದರೆ ತಡೆಯಬಹುದಿದ್ದ ಹತ್ಯೆಯಿದು ಎಂಬ ಹಳಹಳಿಕೆ, ಪಶ್ಚಾತ್ತಾಪ ಎಲ್ಲ ಕಾಲಕ್ಕೂ ಕಾಡುತ್ತಿದೆ. ಪ್ರಧಾನಿ ನೆಹರೂ, ಗೃಹಮಂತ್ರಿ ಪಟೇಲ್, ಅಂದಿನ ಮುಂಬೈ ಮುಖ್ಯಮಂತ್ರಿ ಬಿ.ಜಿ.ಖೇರ್, ಒಳಾಡಳಿತ ಮಂತ್ರಿ ಮೊರಾಜಿ೯ ದೇಸಾಯಿ ಮುಂತಾದ ಮಹನೀಯರು, ದಿಲ್ಲಿ –ಮುಂಬೈ ಪೊಲೀಸರು ತುಸುವೇ ಎಚ್ಚರ ವಹಿಸಿದ್ದರೂ ನಾಥೂರಾಮ ಮತ್ತು ಆತನ ಬೆನ್ನಿಗೆ ನಿಂತಿದ್ದವರನ್ನು ತಡೆದು ನಿಲ್ಲಿಸಬಹುದಿತ್ತು.

 

ಮುಂಬೈ, ಪೀಕಿಂಗ್ ಹಾಗೂ ಜಮ೯ನಿಯ ಕೀಲ್ ವಿಶ್ವವಿದ್ಯಾಲಯಗಳಲ್ಲಿ ಬೋಧಿಸಿದ ಆದರೆ ಮುಂಬೈಯ ಗೌರವಾನ್ವಿತ ಪ್ರೊಫೆಸರ್ ಒಬ್ಬರಿಗೆ ಗಾಂಧಿ ಹತ್ಯೆಯ ಪಿತೂರಿಯ ನಿಚ್ಚಳ ಸುಳಿವುಗಳು ಹತ್ತು ದಿನ ಮುಂಚಿತವಾಗಿಯೇ  ದೊರೆತಿದ್ದವು. ಮುಂಬೈ, ಚೀನಾದ ಪೀಕಿಂಗ್ ಹಾಗೂ ಜರ್ಮನಿಯ ಕೀಲ್ ವಿ.ವಿಗಳಲ್ಲಿ ಬೋಧಿಸಿದ್ದವರು ಅವರು. ಸುಳಿವು ಸಿಕ್ಕ ನಂತರ ಅನ್ನ ನಿದ್ದೆಗಳಿಲ್ಲದೆ ಕಂಗೆಟ್ಟು ಸಕಾ೯ರಗಳ ಕಂಬ ಕಂಬ ಸುತ್ತುವ ಈ ಸಜ್ಜನನ ಆತಂಕಕ್ಕೆ ಅಂದಿನ ಅಧಿಕಾರವಲಯ ಕಿವುಡಾಗುತ್ತದೆ.

 

ಅತೀವ ಕಷ್ಟದಿಂದ ಮೊರಾರ್ಜಿ ದೇಸಾಯಿ ಅವರ ಭೇಟಿಯನ್ನು ಈ ಪ್ರೊಫೆಸರ್ ಗಿಟ್ಟಿಸುತ್ತಾರೆ. ‘ಗಾಂಧಿ ಹತ್ಯೆಯ ಸಂಚಿನಲ್ಲಿ ನೀವೂ ಭಾಗಿ... ನಿಮ್ಮನ್ನೂ ಜೈಲಿಗೆ ಕಳಿಸಬೇಕಾದೀತು’ ಎಂದು ಬೆದರಿಸುತ್ತಾರೆ ಮೊರಾರ್ಜಿ. ಅರವತ್ತು ಸೆಕೆಂಡುಗಳ ಚುಟುಕು ಭೇಟಿಯಲ್ಲಿ ಪ್ರೊಫೆಸರ್ ಮಾತುಗಳನ್ನು ಕೇಳಿಸಿಕೊಳ್ಳುವ ಸಹನೆಯನ್ನು ತೋರುವುದಿಲ್ಲ ಪ್ರಧಾನಿ ನೆಹರೂ.

 

ಹತ್ಯೆಯ ಪಕ್ಕಾ ವಿವರ ಗೊತ್ತಿದ್ದರೂ ಗಾಂಧಿಯವರನ್ನು ಉಳಿಸಲಾಗಲಿಲ್ಲವಲ್ಲ ಎಂದು ಬದುಕಿಡೀ ಕೊರಗಿ ದಶಕದ ಹಿಂದೆ ಕೊನೆಯುಸಿರೆಳೆದ ಆ ಸಜ್ಜನನ ಹೆಸರು ಪ್ರೊ. ಜಗದೀಶಚಂದ್ರ ಜೈನ್. ‘ಭಾರತ ಬಿಟ್ಟು ತೊಲಗಿ’ ಚಳವಳಿಯಲ್ಲಿ ಸೆರೆವಾಸ ಅನುಭವಿಸಿದ್ದವರು. ಗಾಂಧಿಯ ಆರಾಧಕ. ರವೀಂದ್ರನಾಥ ಟ್ಯಾಗೋರರ ನೇರ ಶಿಷ್ಯ. ಮೂವತ್ತರ ದಶಕದಲ್ಲೇ ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದವರು. ಎಂಬತ್ತು ಪುಸ್ತಕಗಳನ್ನು ರಚಿಸಿದ ಖ್ಯಾತ ವಿದ್ವಾಂಸ.

 

ದೇಶ ವಿಭಜನೆಯ ದಳ್ಳುರಿ ಹಿಂದೂ-ಮುಸ್ಲಿಮರನ್ನು ಜೀವಂತ ದಹಿಸಿದ್ದ ದುರ್ದಿನಗಳು ಅವು. ಮಾನಭಂಗ, ಮಾರಣಹೋಮದ ಹೆಣಗಳನ್ನು ರೈಲುಗಾಡಿಗಳು ಹೊತ್ತು ತರುತ್ತಿದ್ದ ಬೀಭತ್ಸ ಕವಿದಿದ್ದ ಕಾಲಮಾನ. 1947ರ ಅಕ್ಟೋಬರ್್ 26ರ ದಿನ. ವಿಭಜನೆಯ ಉರಿಯಲ್ಲಿ ಬೆಂದು ಪ್ರತೀಕಾರಕ್ಕಾಗಿ ತಹತಹಿಸುವ 22 ವಷ೯ದ ತರುಣನೊಬ್ಬ ಪಾಕಿಸ್ತಾನದಿಂದ ಮುಂಬೈಗೆ ಬಂದಿಳಿಯುತ್ತಾನೆ. ಆತನ ಹೆಸರು ಮದನ್‌ಲಾಲ್ ಪಹ್ವಾ. ಕಿಸೆಯಲ್ಲಿ ದಮ್ಮಡಿಕಾಸೂ ಇರುವುದಿಲ್ಲ. ಉಳಿತಾಯದ ಎಲ್ಲ ನಗದು, ಬಂಗಾರ, ಬಟ್ಟೆಬರೆ ಪಾಕ್ ಸೈನಿಕರ ಪಾಲಾಗಿರುತ್ತದೆ. ಆತನ ತಂದೆ ಕೂಡ ಕ್ರೂರ ಹತ್ಯೆಗೆ ಬಲಿಯಾಗಿರುತ್ತಾನೆ. ಮುಸಲ್ಮಾನರ ವಿರುದ್ಧ ಹಗೆ ತೀರಿಸುವ ಪ್ರತಿಜ್ಞೆಯೊಂದಿಗೆ ಹೊಸ ಉದ್ಯೋಗಕ್ಕಾಗಿ ಹುಡುಕಾಟ ನಡೆಸಿರುತ್ತಾನೆ. ಚೆಂಬೂರಿನ ನಿರಾಶ್ರಿತರ ಶಿಬಿರದಲ್ಲಿ ಆತನ ವಾಸ. ಜಗದೀಶಚಂದ್ರರು ಮುಂಬೈ ವಿಶ್ವವಿದ್ಯಾಲಯದ ಕಾಲೇಜೊಂದರಲ್ಲಿ ಪ್ರೊಫೆಸರ್. ವಿಶ್ವವಿದ್ಯಾಲಯ ಏಪ೯ಡಿಸುವ ಭೇಟಿಯ ಭಾಗವಾಗಿ ಜಗದೀಶಚಂದ್ರ ನಿರಾಶ್ರಿತರ ಶಿಬಿರಕ್ಕೆ ತೆರಳುತ್ತಾರೆ. ಶೇ 25ರ ಕಮಿಷನ್ನಿಗೆ ಪುಸ್ತಕ ಮಾರಾಟ ಮಾಡುವ ದುಡಿಮೆಯನ್ನು ಮದನಲಾಲ್‌ಗೆ ಏಪ೯ಡಿಸಿಕೊಡುತ್ತಾರೆ.

 

ಕೆಲವೇ ದಿನಗಳಲ್ಲಿ ಇಬ್ಬರೂ ಮತ್ತೊಮ್ಮೆ ಭೇಟಿಯಾಗುತ್ತಾರೆ. ಆಗ ಮದನಲಾಲ್, ಗಾಂಧಿ ಹತ್ಯೆಯ ಸಂಚಿನ ವಿವರಗಳನ್ನು ದುರ್ಬಲ ಗಳಿಗೆಯೊಂದರಲ್ಲಿ ಪ್ರೊಫೆಸರ್ ಜೊತೆ ಹಂಚಿಕೊಳ್ಳುತ್ತಾನೆ. ದೆಹಲಿಯ ಬಿಲಾ೯ ಸದನದಲ್ಲಿ ನಿತ್ಯ ಸಂಜೆ ನಡೆಯುವ ಬಾಪೂ ಪ್ರಾಥ೯ನಾ ಸಭೆಯ ಮೇಲೆ ತಾನು ಬಾಂಬು ಎಸೆದು ಕೋಲಾಹಲ ಉಂಟು ಮಾಡುವುದು ಮತ್ತು ಅದೇ ಕೋಲಾಹಲವನ್ನು ಬಳಸಿಕೊಂಡು ತನ್ನ ಇತರೆ ಯುವ  ಸಂಗಾತಿಗಳು ಗಾಂಧಿ ಮೇಲೆ ದಾಳಿ ನಡೆಸುವ ಸಂಚು ಅದು. ದಂಗು ಬಡಿದ ಪ್ರೊಫೆಸರ್, ಗಾಂಧಿ ಕೊಡುಗೆಯ ಮಹತ್ತನ್ನು ಮದನ್‌ಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸುತ್ತಾರೆ.  ಹಿಂದೆ ಸರಿಯಲು ಒಪ್ಪಿದಂತೆ ನಟಿಸುತ್ತಾನೆ ಮದನ್.

 

ಆದರೆ 1948ರ ಜನವರಿ 20ರಂದು ಅಂದುಕೊಂಡಂತೆ ಗಾಂಧಿ ಪ್ರಾಥ೯ನಾ ಸಭೆಯ ಮೇಲೆ ಬಾಂಬು ಹಾಕುತ್ತಾನೆ. ಆದರೆ ಹತ್ಯೆಯ ಉದ್ದೇಶ ಈಡೇರುವುದಿಲ್ಲ. ಮದನ್ ನೀಡಿದ್ದ ಸಂಚಿನ ವಿವರಗಳು- ಹೆಸರುಗಳನ್ನು ಜಗದೀಶಚಂದ್ರ ಸಕಾ೯ರಗಳಿಗೆ ತಲುಪಿಸುತ್ತಾರೆ. ಪರಿಣಾಮ ಮಾತ್ರ ಶೂನ್ಯ. ಬಂಧನದಲ್ಲಿ ಆತನ ಮನ ಒಲಿಸಿ ಸಂಚಿನ ಇತರೆ ವ್ಯಕ್ತಿಗಳು- ವಿವರಗಳ ಬಾಯಿ ಬಿಡಿಸಲು ಅವಕಾಶ ನೀಡಬೇಕೆಂದು ಪ್ರೊಫೆಸರ್್ ಪರಿ ಪರಿಯಾಗಿ ಬೇಡಿದರೂ ಪೊಲೀಸರು ಒಪ್ಪುವುದಿಲ್ಲ. ಈ ನಡುವೆ ಪ್ರಾಥ೯ನಾ ಸಭೆಗಳಿಗೆ ಪೊಲೀಸ್ ರಕ್ಷಣೆ ಒದಗಿಸುವ ಸದಾ೯ರ್್ ಪಟೇಲರ ಪ್ರಯತ್ನವನ್ನು ಹಟಮಾರಿ ಗಾಂಧೀಜಿ ಭಂಗಗೊಳಿಸುತ್ತಾರೆ. ಆದರೆ ಮದನಲಾಲ್ ಪಹ್ವಾನ ಸುದೀಘ೯ ಹೇಳಿಕೆಯ ನಂತರವೂ ಮುಂಬೈ ಪೊಲೀಸರು ನಾಥೂರಾಮ ಮತ್ತು ಸಂಗಡಿಗರನ್ನು ಬಂಧಿಸುವುದಿಲ್ಲ.

 

ಹತ್ತು ದಿನಗಳ ನಂತರ ಶತಮಾನದ ಬಹುದೊಡ್ಡ ಸಂಚನ್ನು ಕಾಯ೯ರೂಪಕ್ಕೆ ಇಳಿಸುತ್ತಾನೆ ನಾಥೂರಾಮ. ಅವನನ್ನು ಆಶೀವ೯ದಿಸಿ ಕಳಿಸಿದ್ದ ವ್ಯಕ್ತಿಗಳು- ಸಂಘಟನೆಗಳಿಗೆ ಪುಣೆಯಲ್ಲಿ ಸಾಂಗ್ಲಿಯಲ್ಲಿ ವಿಜಯದ ಸಡಗರ. ಸಿಹಿ ಹಂಚಲಾಗುತ್ತದೆ. ಸಾವಕ೯ರ್್ ಮತ್ತು ಅವರ ಗುಂಪಿನಿಂದಲೇ ಹತ್ಯೆಯ ಪಿತೂರಿ ನೆರವೇರಿದೆ ಎಂಬ ಅಂಶವನ್ನು 1965ರಲ್ಲಿ ನೇಮಕ ಆಗುವ ನ್ಯಾಯಮೂತಿ೯ ಜೀವನಲಾಲ್್ ಕಪೂರ್್ ವಿಚಾರಣಾ ಆಯೋಗ ಹೊರ ಹಾಕುತ್ತದೆ. 

 

ದೆಹಲಿಯ ಕೆಂಪುಕೋಟೆಯ ಆವರಣದ ವಿಶೇಷ ನ್ಯಾಯಾಲಯದಲ್ಲಿ ಪ್ರಾಸಿಕ್ಯೂಷನ್ನಿನ ಮುಖ್ಯ ಸಾಕ್ಷಿಯಾಗಿ ನಿಲ್ಲುತ್ತಾರೆ ಪ್ರೊ.ಜಗದೀಶಚಂದ್ರ. ಸಕಾ೯ರಗಳ ಅಕ್ಷಮ್ಯ ನಿಲ೯ಕ್ಷ್ಯವನ್ನು ಎಳೆ ಎಳೆಯಾಗಿ ಬಿಡಿಸಿ ಇಡುತ್ತಾರೆ. ಮದನ್‌ಲಾಲ್ ಬಾಂಬು ಎಸೆದ ಕೇಸಿನ ತನಿಖೆಯಲ್ಲಿ ಕೊಂಚವಾದರೂ ಆಸಕ್ತಿ ತೋರಿದ್ದಲ್ಲಿ,  ಹತ್ಯೆಯ ದುರಂತವನ್ನು ಪ್ರಾಯಶಃ ತಡೆಯಬಹುದಿತ್ತು ಎಂಬ ಅಂಶವನ್ನು ತೀರ್ಪಿನಲ್ಲಿ ದಾಖಲಿಸುತ್ತಾರೆ ನ್ಯಾಯಾಧೀಶ ಆತ್ಮಚರಣ್.

 

‘The Civil Servant in India’ ಪುಸ್ತಕದಲ್ಲಿ ಅಂದಿನ ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿ ಆರ್.ಎನ್. ಬ್ಯಾನರ್ಜಿ ಬರೆಯುತ್ತಾರೆ- ‘ಗೋಡ್ಸೆ ಮತ್ತು ಆಪ್ಟೆ ಇಬ್ಬರನ್ನೂ ಮುಂಬೈಯಲ್ಲಿ ಜನವರಿ 23ರಂದೇ (1948) ಬಂಧಿಸಬಹುದಿತ್ತು. ಆದರೆ ಮದನಲಾಲ್ ಪಹ್ವಾನ ಹೇಳಿಕೆ ಕುರಿತು ಯಾರೂ ಕ್ರಮ ಜರುಗಿಸಲಿಲ್ಲ...’ 

ಮುಂಬೈಯಲ್ಲಿನ ಪ್ರೊಫೆಸರ್ ಮನೆಯ ಮೇಲೆ ಕಲ್ಲೆಸೆತ ಮತ್ತು ದಾಳಿಯ ಹಲವು ಪ್ರಯತ್ನಗಳು ನಡೆಯುತ್ತವೆ. ಆತ್ಮರಕ್ಷಣೆಗೆಂದು ರಾಜ್ಯ ಸಕಾ೯ರ ಅವರಿಗೆ ಪಿಸ್ತೂಲು ಒದಗಿಸಿರುತ್ತದೆ. ಹತ್ಯೆಯ ಸಂಚು ಮತ್ತು ಸಕಾ೯ರಗಳ  ನಿಸ್ಸೀಮ ನಿಲ೯ಕ್ಷ್ಯದ ದಂಗು ಬಡಿಸುವ ವಿವರಗಳನ್ನು ಜಗದೀಶಚಂದ್ರ  ಬರೆದಿರುವ     ‘Untold Stories from a Witness's Diary- I Could Not Save Mahatma Gandhi’ ಎಂಬ ಪುಸ್ತಕ ದಾಖಲಿಸಿದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.