ಬುಧವಾರ, ಜೂಲೈ 8, 2020
23 °C

ನಿರ್ಮಾಣ: ನಿರಂತರ ಬದಲಾವಣೆ

ಡಾ. ಚಂದ್ರಶೇಖರ್ ಹರಿಹರನ್ Updated:

ಅಕ್ಷರ ಗಾತ್ರ : | |

ನಿರ್ಮಾಣ: ನಿರಂತರ ಬದಲಾವಣೆ

‘ಕಟ್ಟಡ ನಿರ್ಮಾಣಗಾರರ’ ಸಂಘದ ಮುಂದೆ ಸದ್ಯಕ್ಕೆ ಇರುವ ಸವಾಲುಗಳ ಬಗ್ಗೆ ನಾವು ಈ ಅಂಕಣದಲ್ಲಿ ಈಗಾಗಲೇ ಚರ್ಚಿಸಿದ್ದೇವೆ. ನಾವು ಈತನಕ ಎಂತಹ ಕಟ್ಟಡಗಳನ್ನು ನಿರ್ಮಾಣ ಮಾಡುತ್ತಿದ್ದೇವೇಯೋ ಅದೇ ಮಾದರಿಯನ್ನೇ ಭವಿಷ್ಯದಲ್ಲಿಯೂ ಮುಂದುವರೆಸಿಕೊಂಡು ಹೋಗಬಾರದು ಎನ್ನುವುದರ ಕುರಿತು ಮಾತನಾಡಿದ್ದೆವು.ಕಟ್ಟಡ ನಿರ್ಮಾಣಕ್ಕೆ ಇನ್ನೂ ಅನೇಕ ವಿಭಿನ್ನ ಮಾರ್ಗಗಳು ಇವೆ. ಉದಾಹರಣೆಗೆ ಬಿಸಿಐಎಲ್‌ನಲ್ಲಿ ನಾವು ಸಾಂಪ್ರದಾಯಿಕ ಕಟ್ಟಡಗಳಿಗೆ ಬಳಸುವ ಅನೇಕ ಸಾಮಗ್ರಿಗಳನ್ನು ಸಂಪೂರ್ಣವಾಗಿ ಕೈಬಿಟ್ಟಿದ್ದೇವೆ. ಅಂದರೆ ನಾವು ಅಲ್ಲಿ ಇಟ್ಟಿಗೆ, ಬಿಸಿ ನೀರು ಕಾಯಿಸಲು ವಿದ್ಯುತ್ ಗೀಸರ್, ಕಾಂಕ್ರೀಟ್ ಹಾಗೂ ಮಣ್ಣಿನಿಂದ ತಯಾರಿಸಿದ ತುಂಡು, ಟೈಲ್ಸ್,  ಈಜುಕೊಳದಲ್ಲಿ ನೀರು ಶುದ್ಧೀಕರಣಕ್ಕೆ ರಾಸಾಯನಿಕ ವಸ್ತುಗಳ ಬಳಕೆ, ವಿಷಕಾರಕ ಅಂಶಗಳುಳ್ಳ ಬಣ್ಣ, ಜಲನಿರೋಧಕಕ್ಕೆ ರಾಸಾಯನಿಕವನ್ನೊಳಗೊಂಡ ಲೇಪ...ಇವೇ ಮುಂತಾದ ವಸ್ತುಗಳನ್ನು ಬಳಸುವುದಿಲ್ಲ.ಅಲ್ಲದೇ, ಜನರೇಟರ್ ಸೆಟ್‌ಗೆ ಡೀಸೆಲ್ ಕೂಡ ಉಪಯೋಗಿಸುವುದಿಲ್ಲ. ಮನೆಯಲ್ಲಿ ಫ್ಲೋರೆಸೆಂಟ್ ಟ್ಯೂಬ್‌ಲೈಟ್ ಹಾಗೂ ಇನ್‌ಕ್ಯಾಂಡಿಸೆಂಟ್ ಬಲ್ಬ್‌ಗಳನ್ನೂ ಬಳಸುವುದಿಲ್ಲ.  75 ವಾಟ್‌ನ ಸಾಮಾನ್ಯ ಸೀಲಿಂಗ್ ಫ್ಯಾನ್ ಮತ್ತು ನೀರಿನ ಅಗತ್ಯಗಳಿಗಾಗಿ ಕೊಳವೆಬಾವಿಯನ್ನೂ ಉಪಯೋಗಿಸುವುದಿಲ್ಲ. ನಾವು ಈ ದಿಸೆಯಲ್ಲಿ ಇನ್ನಷ್ಟು ಮುಂದುವರೆದಿದ್ದೇವೆ.ಸುಮಾರು  ಹತ್ತುಲಕ್ಷ ಚದರ ಅಡಿ ವ್ಯಾಪ್ತಿಯ ವಸತಿ ಸಮುಚ್ಛಯ (ಬಿಸಿಐಎಲ್) ನಿರ್ಮಿಸುವ ನಮ್ಮ ಯೋಜನೆಯಲ್ಲಿ  ನಾವು ಗೋಡೆ ಹಾಗೂ ನೆಲಮಾಳಿಗೆ ನಿರ್ಮಾಣಕ್ಕೆ ಮರಳು ಬಳಸುವುದಿಲ್ಲ. ಕಟ್ಟಡ ನಿರ್ಮಾಣಕ್ಕೆ ಸಿಮೆಂಟ್ ಹೊರತಾದ ಪರ್ಯಾಯ ಸಾಮಗ್ರಿಗಳನ್ನು ನಾವು ಬಳಸುತ್ತಿದ್ದೇವೆ.‘ಪರಿಸರ ಸ್ನೇಹಿ’ ಕಟ್ಟಡ ನಿರ್ಮಾಣ ಕುರಿತಂತೆ ನಾವು ನಿರಂತರ ಹೊಸ ಬದಲಾವಣೆಗೆ ತೆರೆದುಕೊಳ್ಳುತ್ತಿದ್ದೇವೆ. ಕಟ್ಟಡಗಳು ಎಂದಿನ ಸಾಂಪ್ರದಾಯಿಕ ಮಾದರಿಯಲ್ಲೇ ಯಾಕಿರಬೇಕು ಎನ್ನುವುದನ್ನು ನಾವು ಈಗ ಪ್ರಶ್ನಿಸುತ್ತಿದ್ದೇವೆ.ಅತ್ಯಧಿಕ ಪ್ರಮಾಣದಲ್ಲಿ ಮರುಬಳಕೆ ಸಾಧ್ಯತೆ ಉಳ್ಳ ವಸ್ತುಗಳ ಬಳಕೆ ಹೆಚ್ಚಿಸುವಂತೆ ನಾವು ಕೇಳುತ್ತಿದ್ದೇವೆ.

ಪರಿಸರ ಸ್ನೇಹಿ ಕಟ್ಟಡ ನಿರ್ಮಾಣವು ಸಾಂಪ್ರದಾಯಿಕ ಕಟ್ಟಡ ನಿರ್ಮಾಣದ ವೆಚ್ಚಕ್ಕಿಂತಲೂ ದುಬಾರಿ ಇರಬಹುದು. ಆದರೆ ಭವಿಷ್ಯದ ದೃಷ್ಟಿಯಿಂದ ಹಾಗೂ ಪರಿಸರ ಕಾಳಜಿ ದೃಷ್ಟಿಯಿಂದ ಇದು ಒಳ್ಳೆಯ ಬೆಳವಣಿಗೆಯಾಗುತ್ತದೆ.ಸಾಂಪ್ರದಾಯಿಕ ಕಟ್ಟಡ ನಿರ್ಮಾಣಗಾರರು ಅಥವಾ ಉದ್ಯಮಿಗಳು ನಮ್ಮ ಈ ವಾದದಲ್ಲಿ ಹುರುಳಿಲ್ಲ ಎಂದು ಸುಲಭವಾಗಿ ತಳ್ಳಿಹಾಕಿಬಿಡುತ್ತಾರೆ.ಅಲ್ಲದೇ, ಇದೊಂದು ಹೊಸ ಬದಲಾವಣೆಯಾಗಿದ್ದು, ಈಗಲೇ ಇದಕ್ಕೆ ತೆರೆದುಕೊಳ್ಳಬೇಕಾದ ಅಗತ್ಯವಿಲ್ಲ ಎಂದೂ ಯಾರಾದರೂ ಸುಮ್ಮನೆ ಹೇಳಿಬಿಡಬಹುದು. ‘ಎಲ್ಲರೂ ಸಾಂಪ್ರದಾಯಿಕ ಮಾದರಿಯಲ್ಲಿಯೇ ಕಟ್ಟಡ ನಿರ್ಮಿಸುತ್ತಿರುವಾಗ ನಾನೇಕೆ ಹೊಸ ಮಾದರಿ ಅನುಸರಿಸಬೇಕು?’ ಎಂಬ ಪ್ರಶ್ನೆಯನ್ನೂ ಕೇಳಬಹುದು.‘ಪರಿಸರ ಸ್ನೇಹಿ’ ಕಟ್ಟಡಗಳ ರಚನೆ ಎಂದರೆ ಅದು ಸರಳ ಪರಿಹಾರಗಳನ್ನು ಒದಗಿಸುವ ಸೂತ್ರವಲ್ಲ, ಅಲ್ಲದೇ ಇದು ಸರ್ಕಾರ ನಿಮ್ಮ ಮೇಲೆ ಹೇರುವ ಕಡ್ಡಾಯ ನಿಯಮವೂ ಅಲ್ಲ. ಬದಲಿಗೆ ಇದು, ಒಂದು ಸಂಸ್ಥೆಯಾಗಿ, ಓರ್ವ ಎಂಜಿನಿಯರ್ ಅಥವಾ ವಿನ್ಯಾಸಕಾರರಾಗಿ ನಿಮ್ಮ ದೀರ್ಘಕಾಲೀನ ಸಾಮರ್ಥ್ಯದ ಪ್ರಶ್ನೆಯಾಗುತ್ತದೆ. ಅಲ್ಲದೇ, ಇದು ಸ್ವತಃ ನಿಮ್ಮನ್ನು ಹಾಗೂ ನಿಮ್ಮ ಕಂಪೆನಿಯನ್ನು ಮರುಶೋಧಿಸಿಕೊಳ್ಳುವ ಪ್ರಕ್ರಿಯೂ ಆಗಿರುತ್ತದೆ. ಭವಿಷ್ಯದಲ್ಲಿ ನಮ್ಮ ನಗರಗಳ ಅಭಿವೃದ್ಧಿಯ ದೃಷ್ಟಿಯಿಂದ ನಾವು ಈ  ಬದಲಾವಣೆಯನ್ನು ಸ್ವೀಕರಿಸಬೇಕಿದೆ. 50 ವರ್ಷಗಳ ಹಿಂದೆ ಲಭ್ಯವಿರುತ್ತಿದ್ದ ಸುಣ್ಣದಕಲ್ಲಿನ ಪ್ರಮಾಣಕ್ಕೂ, ಈಗ ಅದು ದೊರೆಯುವ ಪ್ರಮಾಣಕ್ಕೂ ತಾಳೆ ಹಾಕಿ ನೋಡಿ. ಆಗ ಗೊತ್ತಾಗುತ್ತದೆ ನಮ್ಮ ಮುಂದಿರುವ ಕಠೋರ ವಾಸ್ತವ.ನಾವು ಕಟ್ಟಡ ನಿರ್ಮಾಣಕ್ಕೆ ಬಳಸುವ ಪ್ರತಿಯೊಂದು ವಸ್ತು ಕೂಡ ಭೂಮಿಯ ಒಡಲಿನಿಂದ ತೆಗೆದದ್ದು. ನಮ್ಮ ಮುಂದಿನ ಪೀಳಿಗೆಗೆ ಇವು ಉಳಿಯಬೇಕೆಂದರೆ ನಾವು ಈಗ ಅತ್ಯಂತ ಎಚ್ಚರಿಕೆಯಿಂದ ಇವುಗಳನ್ನು ಬಳಕೆ ಮಾಡಬೇಕಾಗುತ್ತದೆ. ಹೀಗೆ, ಇಂಥ ಅನೇಕ ಅಂಶಗಳನ್ನು ಅರಿತುಕೊಳ್ಳುವುದೇ ‘ಪರಿಸರ ಸ್ನೇಹಿ’ ಕಟ್ಟಡ ನಿರ್ಮಾಣದ ಹಿಂದಿರುವ ಉದ್ದೇಶವಾಗಿದೆ.ಈ ಎಲ್ಲ ಹೊಸ ಬದಲಾವಣೆಗೆ ಸಾಂಘಿಕ ಪ್ರಯತ್ನ ಮಾಡಬೇಕಾಗುತ್ತದೆ. ನಮ್ಮ ಇಂದಿನ ನಗರಗಳ ತುರ್ತು ಅಗತ್ಯಗಳನ್ನು ಮನಗಂಡು ಕೇವಲ ಕಟ್ಟಡ ನಿರ್ಮಾಣ ಉದ್ದಿಮೆ ಮಾತ್ರವೇ ಮಾಡಬೇಕಾದ ಕೆಲಸ ಇದಲ್ಲ. ಸರ್ಕಾರ ಕೂಡ ಈ ದಿಸೆಯಲ್ಲಿ ಜಾಗೃತವಾಗಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.