ಮಂಗಳವಾರ, ಮೇ 11, 2021
24 °C

ನೆಲದವ್ವನ ಬೆಚ್ಚಗಿನ ಮಡಿಲ ಮಾರಲಾರೆ

ವಸು ಮಳಲಿ Updated:

ಅಕ್ಷರ ಗಾತ್ರ : | |

ನೆಲದವ್ವನ ಬೆಚ್ಚಗಿನ ಮಡಿಲ ಮಾರಲಾರೆ

ನಿಮ್ಮಂತೆ ಮಾತು ಕಲಿಸಿದಿರಿ ನಮಗೆ

ಟೇಬಲ್‌ನಲ್ಲಿ ಕುಳಿತು ನಾಜೂಕಾಗಿ ಉಣ್ಣೋದು ತೋರಿಸಿದಿರಿ

ನಿಮ್ಮ ಹಾಗೆ ಬಟ್ಟೆ ತೊಡಿಸಿದಿರಿ

ಕೂದಲು ಕತ್ತರಿಸಿ ನಿಮ್ಮ ಚೆಂದಕ್ಕೆ ಮಾಡಿದಿರಿ

ಆದರೆ ಆದರೆ

ಅಕ್ಕತಂಗಿಯರ ಪ್ರೀತಿ ಮತ್ತೆಲ್ಲಿ ಕಾಣಲಿ

ತಾಯ ಬೆಚ್ಚನೆಯ ಮಡಿಲು ಮರಳಿ ಹೇಗೆ ಪಡೆಯಲಿ.ಹೀಗೆ ಹಾಡಿದವನೊಬ್ಬ ಆಸ್ಟ್ರೇಲಿಯಾದ ವಿದ್ಯಾವಂತ ಮೂಲನಿವಾಸಿ (ಆ್ಯಬಾರಿಜಿನಲ್). ಆತ ಹೀಗೆ ಹಾಡಿದಾಗ, ಸಿಡ್ನಿಯಲ್ಲಿ ನಡೆದ ಅಂತರರಾಷ್ಟ್ರೀಯ ಮೌಖಿಕ ಚರಿತ್ರೆ ಸಮ್ಮೇಳನದಲ್ಲಿ (2006) ಪಾಲ್ಗೊಳ್ಳಲು ಜಗತ್ತಿನ ವಿವಿಧ ಭಾಗಗಳಿಂದ ಬಂದಿದ್ದ ವಿದ್ವಾಂಸರೆಲ್ಲ ಎದ್ದುನಿಂತು ಚಪ್ಪಾಳೆ ತಟ್ಟಿ ಗೌರವಿಸಿದರು.ಕ್ರಿ.ಶ. 1800ರಲ್ಲಿ ಥಾಮಸ್ ಕುಕ್ ಆಸ್ಟ್ರೇಲಿಯಾ ಖಂಡಕ್ಕೆ ಬ್ರಿಟಿಷ್ ಬಾವುಟದೊಂದಿಗೆ ಮೊದಲು ಕಾಲಿಟ್ಟಾಗ ಅಲ್ಲಿ ಐನೂರಕ್ಕೂ ಹೆಚ್ಚು ಬುಡಕಟ್ಟು ರಾಜ್ಯಗಳಿದ್ದವು. ನೂರಾರು ಬುಡಕಟ್ಟುಗಳು ತಮ್ಮದೇ ಆದ ಆಚಾರ ವಿಚಾರಗಳೊಂದಿಗೆ ಬದುಕನ್ನು ಸಾಗಿಸಿದ್ದವು. ಬ್ರಿಟಿಷರು ಬಂದ ಕೆಲವೇ ವರ್ಷಗಳಲ್ಲಿ ಅವರ ಜೊತೆ ಬಂದ ರೋಗರುಜಿನಗಳಿಗೆ ಬುಡಕಟ್ಟು ಜನರು ತುತ್ತಾದರು. ಅವರು ಕೊಟ್ಟ ತಂಬಾಕಿನ ಚಟಕ್ಕೆ ದಾಸರಾದರು. ಕಡೆಗೆ ಅವರಿಗೇ ಗುಲಾಮರಾದರು.ಅಡಿಯಾಳಾದವರ ಹೆಂಗಸರನ್ನು ಸಂಪೂರ್ಣವಾಗಿ ಬಳಸಿಕೊಂಡರು. ಪ್ರತಿರೋಧ ಒಡ್ಡಿದವರನ್ನು ಬೇಟೆಯಾಡಿದರು. ವಸಾಹತು ಕಾಲದುದ್ದಕ್ಕೂ ಸ್ಥಳೀಯ ಜನರ ಬಗೆಗಾಗಲಿ ಅವರ ಸಂಸ್ಕೃತಿಯ ಕುರಿತಾಗಲಿ ಕಿಂಚಿತ್ತೂ ಗೌರವ ಕೊಡಲಿಲ್ಲ.ಆಸ್ಟ್ರೇಲಿಯಾ ಒಂದು ಸ್ವತಂತ್ರ ದೇಶವಾಗಿ ಬೆಳೆದಂತೆ ಜಗತ್ತಿನ ಮೂಲೆಮೂಲೆಗಳಿಂದ ಜನರು ಬಂದು ಅಲ್ಲಿ ನೆಲೆಸತೊಡಗಿದರು. ಪ್ರಜಾಪ್ರಭುತ್ವ ಮಾದರಿಯ ಸರ್ಕಾರ ಆರಂಭವಾಯಿತು. ಆಗ ಇದ್ದಕ್ಕಿದ್ದಂತೆ ಜ್ಞಾನೋದಯವಾಗಿ, ಆಸ್ಟ್ರೇಲಿಯಾದ ಬಿಳಿಯರು ಕರಿಯ ಮೂಲನಿವಾಸಿಗಳನ್ನು ನಾಗರಿಕರಾಗಿಸಲು ಹೊರಟರು. ಅಂದರೆ ಅವರನ್ನು ಇಂಗ್ಲಿಷರನ್ನಾಗಿಸುವುದು. ಅದಕ್ಕಾಗಿ ಮೂಲನಿವಾಸಿಗಳ ಮಕ್ಕಳಿಗಾಗಿ ಹಾಸ್ಟೆಲ್ ತೆರೆದು ಅವರನ್ನು ಶಾಲೆಗೆ ಸೇರಿಸಿದರು.ಕಳುಹಿಸದ ಮಕ್ಕಳನ್ನು ಬೇಟೆಯಾಡಿ ಹಿಡಿದು ತಂದರು. ಅವರ ಹೆಸರುಗಳು ಜಾನ್, ಜೋಸೆಫ್ ಆದವು. ಆ ಮಕ್ಕಳಿಗೆ ಮರಳಿ ಬುಡಕಟ್ಟು ಸೋಂಕು ತಗುಲದಂತೆ ಎಚ್ಚರ ವಹಿಸಿದರು. ಅವರ ಅಪ್ಪ, ಅಮ್ಮ, ಅಕ್ಕ ತಂಗಿಯರಿಂದ ಬೇರ್ಪಟ್ಟರು. ಅವರ ಭಾಷೆ, ಊಟ, ದೇವರು ಎಲ್ಲವೂ ಅಪರಿಚಿತವಾಯಿತು. ಕಳ್ಳುಬಳ್ಳಿ ಹರಿದುಬಿತ್ತು.ಬಲವಂತದ ನಾಗರಿಕತೆಯನ್ನು ಜನ ಖಂಡಿಸತೊಡಗಿದರು. ಜಗತ್ತಿನ ಮೂಲೆ ಮೂಲೆಗಳಿಂದ ಮೂಲನಿವಾಸಿಗಳ ಪರ ಎದ್ದ ವಾದಗಳು, ಮೂಲನಿವಾಸಿಗಳ ನಿರಂತರವಾದ ಪ್ರತಿಭಟನೆಗಳು ಆಸ್ಟ್ರೆಲಿಯನ್ನರ ಮೇಲೆ ಪರಿಣಾಮ ಬೀರಿತು. ಇದೆಲ್ಲಕ್ಕಿಂತ ಹೆಚ್ಚಿಗೆ ಅಳಿಸಲಾಗದ ಚಾರಿತ್ರಿಕ ಅಪರಾಧವನ್ನು ಮುಚ್ಚಿಕೊಳ್ಳಲು ಆಸ್ಟ್ರೇಲಿಯಾ ಸರ್ಕಾರ ಮೂಲವಾಸಿಗಳಿಗೆ ನ್ಯಾಯ ಒದಗಿಸಲು ಇಂದು ಹೊರಟಿದೆ. ಇಂಗ್ಲಿಷ್ ಹೆಸರುಗಳನ್ನು ಬಿಟ್ಟು ಸಾಧ್ಯವಾದಷ್ಟು ಮೂಲವಾಸಿಗಳ ಸ್ಥಳನಾಮಗಳನ್ನು ಉಳಿಸುತ್ತಿದೆ. ಕ್ಯಾನ್‌ಬೆರ‌್ರಾ, ಬೂಂಢಾ, ಕಾನ್‌ಜ್ರಾ, ನೆರಾಂಗ್, ಟುಂಗ್‌ಗುನ್, ಬಿಲ್ಲಿಂಗ್, ಹಿರ‌್ರಾ, ಟೂಲಾನ್‌ಗಟ್ರಾ... ಶತಮಾನಗಳಿಂದ ಆ್ಯಬಾರಿಜಿನಲ್ಸ್ ಬರೆಯುತ್ತಿದ್ದ ಕಾಂಗರೂ ಕನಸಿನ ಚಿತ್ರಗಳು ಜನಪ್ರಿಯಗೊಂಡಿವೆ. ಒಂದು ಕಾಲಕ್ಕೆ ಕಾಡಿನಲ್ಲಿ ಬೇಟೆಯಾಡುವಾಗ ಬಳಸುತ್ತಿದ್ದ ಬೂಮ್‌ರ‌್ಯಾಂಗ್ ಆಸ್ಟ್ರೇಲಿಯಾ ಸಂಕೇತವೇನೋ ಎಂಬಂತೆ ಮಾರಾಟವಾಗುತ್ತಿದೆ. ಮೂಲನಿವಾಸಿಗಳ ವಸ್ತು ಸಂಗ್ರಹಾಲಯಗಳು ಸ್ಥಾಪನೆಯಾಗಿವೆ.ಅಳಿದುಳಿದ ಬುಡಕಟ್ಟು ಜನರ ಭಾಷೆ, ಹಾಡುಗಳನ್ನು ಸಂಗ್ರಹಿಸಿ ಧ್ವನಿಸುರುಳಿಗಳನ್ನು ಮಾಡಿ `ಕೋಲ್ಡ್‌ಸ್ಟೋರೇಜ್'ನಲ್ಲಿ ಇರಿಸಿದ್ದಾರೆ. ಆದರೆ, ಆ ನ್ಯಾಷನಲ್ ಓರಲ್ ಆರ್ಕೈವ್ಸ್‌ನಲ್ಲಿ (ಧ್ವನಿಸುರುಳಿ ಸಂಗ್ರಹಾಲಯಗಳು) ಹೆಸರಿಗೂ ಒಬ್ಬ ಬುಡಕಟ್ಟಿನ ವ್ಯಕ್ತಿ ಕೆಲಸಕ್ಕೆ ನೇಮಕಗೊಂಡಿಲ್ಲ. ಬಹುಶಃ ಇದಕ್ಕೆ ಹೆಚ್ಚಿನ ವಿವರಣೆ ಬೇಕಿಲ್ಲ.ಸಮಾಜ ತನ್ನ ಉದಾರತೆಯನ್ನು ಹೇಗೆಹೇಗೋ ಮೆರೆಯುತ್ತಿದೆ. ಅಂತಹ ಒಂದು ಅವಕಾಶ 2000ದ ಸಿಡ್ನಿ ಒಲಿಂಪಿಕ್ಸ್‌ನಲ್ಲಿ ದೊರೆಯಿತು. ಒಲಿಂಪಿಕ್ಸ್ ಪಂಜನ್ನು ಮೊದಲು ಸ್ವೀಕರಿಸಿದವರು ಮೂಲವಾಸಿಗಳು. ದಾರಿಯುದ್ದಕ್ಕೂ ಅಲ್ಲಲ್ಲಿ ಮೂಲವಾಸಿಗಳ ಹಾಡುಗಳು ಕೇಳಿಬಂದವು. ಕಡೆಯದಾಗಿ ಕ್ಯಾಥಿ ಫ್ರೀಮನ್ ಒಲಿಂಪಿಕ್ ಪಂಜನ್ನು ಬೆಳಗಿದರು.ಆಕೆ ಆಸ್ಟ್ರೆಲಿಯಾದ ಮೂಲನಿವಾಸಿ. ಅದು ಕೊರತೆಯಲ್ಲವೆಂಬಂತೆ 400 ಮೀಟರ್ ಓಟದಲ್ಲಿ ಚಿನ್ನದ ಪದಕವನ್ನು ಸ್ವೀಕರಿಸಿ ಆಸ್ಟ್ರೆಲಿಯಾದ ಘನತೆಯನ್ನು ಎತ್ತಿಹಿಡಿದರು. ಹಲವು ಆ್ಯಬಾರಿಜಿನಲ್ ಹೋರಾಟಗಾರರು, ಒಲಿಂಪಿಕ್ ಕೂಟದಲ್ಲಿ ಮೂಲನಿವಾಸಿಗಳು ಭಾಗವಹಿಸಬಾರದೆಂದು ಕರೆ ಕೊಟ್ಟರು. ಆದರೆ ಆಕೆಯ ನಿಲುವು ಸಾಧಿಸಿ ತೋರಿಸುವುದಾಗಿತ್ತು.ಆಸ್ಟ್ರೆಲಿಯಾದ ಇಂದಿನ ಜನಸಂಖ್ಯೆಯಲ್ಲಿ ಬರಿ ಶೇ 2ರಷ್ಟು ಇರುವ ಈ ಮೂಲನಿವಾಸಿಗಳಲ್ಲಿ 90 ಭಾಗ ಬಿಳಿಯರಿಗೆ ಹುಟ್ಟಿದವರೇ ಆಗಿದ್ದಾರೆ. ನಾಗರಿಕತೆಯ ಹೆಸರಿನಲ್ಲಿ ನಡೆದ ಜನಾಂಗಹತ್ಯೆ ಅದರೊಳಗೂ ಕುಟುಕು ಜೀವ ತನ್ನ ಅಸ್ತಿತ್ವಕ್ಕಾಗಿ ಮಿಡಿಯುತ್ತಿದೆ.ಭೂಮಿ ತಾಯಿ ಅಪ್ಪಿಕೋ ನನ್ನ

ಮಡಿಲ ಕಂದನ ಹಾಗೆ

ನೀ ಕೊಟ್ಟ ಈ ಕರಿಯ ಬಣ್ಣ

ಒಪ್ಪಲಾರ ಆ ಬಿಳಿಯ

ಗಾಳಿಗೆ ಸಿಕ್ಕ ತರಗೆಲೆಯಂತೆ

ಹಾರಿ ಹೋಯಿತು ನಮ್ಮ ಬದುಕು

ದಿನವೂ ಬೆಳಕು ಹರಿಯುತ್ತದೆ

ಬಿಳಿಯರ ನಳಿಕೆಯಿಂದ ಹಾರಿದ

ಗುಂಡಿಗೆ ಸೀಳಿದ ಅಣ್ಣನ ರಕ್ತ

ಕೆಂಪಾಗಿಸುತ್ತದೆ ಉಷಾಕಾಲ ರಂಗೇರುತ್ತದೆ.

(ಭೂಮಿ ನನ್ನ ತಾಯಿ ಪದ್ಯದ ತುಣುಕು ಕವಿ ಫಿಲ್ ಮಾನ್ ಕ್ರಿಯಫ್)

                     *“ಆಕಾಶವನ್ನಾಗಲಿ, ಬೀಸುವ ಗಾಳಿಯ ತಂಪನ್ನಾಗಲಿ, ಹರಿಯುವ ನದಿಯ ಹೊಳಪನ್ನಾಗಲಿ ಯಾರು ತಾನೆ ಮಾರಲು ಸಾಧ್ಯ? ನೆಲದವ್ವನ ಬೆಚ್ಚಗಿನ ಮಡಿಲ ಮಾರಲಾರೆ. ಬಿಳಿಯರೆಂದೂ ನಮ್ಮ ಬದುಕಿನ ಕ್ರಮವನ್ನು ಅರ್ಥ ಮಾಡಿಕೊಳ್ಳಲಾರರು. ಭೂಮಿಯನ್ನು ಅವರು ಶತ್ರುವಿನ ಹಾಗೆ ಆಕ್ರಮಿಸಿ ಆಳುತ್ತಿದ್ದಾರೆ. ಆದ್ದರಿಂದ ಅವರಿಗೆ ಭೂಮಿಯ ಬಗೆಗೆ ಸೋದರತ್ವದ ಭಾವವಿಲ್ಲ.ಬಿಳಿಯರ ನಗರಗಳನ್ನು ನೋಡಿದರೆ ನಮ್ಮ ಮನಸ್ಸಿಗೆ ನೋವಾಗುತ್ತದೆ. ಅವರಿಗೆ ವಸಂತ ಋತುವಿನ ಎಲೆಯ ಸದ್ದನ್ನಾಗಲಿ, ದುಂಬಿಗಳ ಝೇಂಕಾರವನ್ನಾಗಲಿ ಕೇಳಲು ತಾಣವೇ ಇಲ್ಲ. ಬಹುಶಃ ನಾವು ಅನಾಗರಿಕರಾದುದರಿಂದ ತೊಯ್ದ ಮಳೆಗೆ ಬರುವ ಮಣ್ಣಿನ ವಾಸನೆ ನಮಗೆ ಆನಂದವನ್ನು ನೀಡುತ್ತದೆ.ಒಂದು ಷರತ್ತಿನ ಮೇಲೆ ಈ ಭೂಮಿಯನ್ನು ನಿಮಗೆ ಬಿಟ್ಟುಕೊಡಬಹುದು. ಎಲ್ಲಾ ಪ್ರಾಣಿಗಳನ್ನು ಸೋದರ ಭಾವದಿಂದ ನೀವು ನೋಡಲು ಸಾಧ್ಯವೆ? ಪ್ರೈರಿ ಹುಲ್ಲುಗಾವಲುಗಳಲ್ಲಿ ರೈಲಿನಿಂದ ಕಾಡೆಮ್ಮೆಗಳನ್ನು ಹೊಡೆದುರುಳಿಸಿದಾಗ ಓಡುವ ಕಬ್ಬಿಣದ ಕುದುರೆ ಮುಖ್ಯವಾಗಿತ್ತೇ ಹೊರತು ಕಾಡೆಮ್ಮೆಗಳಲ್ಲ.ನಿಮ್ಮ ಶಕ್ತಿಯನ್ನೆಲ್ಲಾ ಬಳಸಿ ಈ ಭೂಮಿಯನ್ನು ನಮ್ಮಿಂದ ಕಸಿದುಕೊಂಡಾಗ ನಮ್ಮ ಜನರ ಭೂಮಿ ಬಗೆಗಿನ ಪ್ರೀತಿಯಿಂದಾಗಿ ಅವರ ಚೈತನ್ಯ ಈ ಕಾಡಿನಲ್ಲಿ ಸಮುದ್ರ ತೀರದಲ್ಲಿ ಸದಾ ಕಾಲಕ್ಕೂ ಉಳಿದಿರುತ್ತದೆ”.

1851ರಲ್ಲಿ ಒಂದು ಲಕ್ಷದ ಐವತ್ತು ಸಾವಿರ ಡಾಲರ್‌ಗೆ ಎರಡು ದಶಲಕ್ಷ ಎಕರೆ ಭೂಮಿಯನ್ನು ಮಾರುವಂತೆ ವಾಷಿಂಗ್ಟನ್ ರಾಜ್ಯದ ಕಮಿಷನರ್ ಒತ್ತಾಯಿಸಿದಾಗ, ರೆಡ್ ಇಂಡಿಯನ್ ಬುಡಕಟ್ಟಿನ ಮುಖಂಡ ಅಮೆರಿಕದ ಅಧ್ಯಕ್ಷನಿಗೆ ಕೊಟ್ಟ ಉತ್ತರ ಇದಾಗಿತ್ತು.ಕೆಂಪು ಇಂಡಿಯನ್ನರು ಅಮೆರಿಕದ ಮೂಲ ನಿವಾಸಿಗಳು. ಭಾರತವನ್ನು ಹುಡುಕುತ್ತಾ ಹೊರಟ ಯೂರೋಪಿಯನ್ನರು ಅಮೆರಿಕ ಖಂಡವನ್ನು ತಲುಪಿದಾಗ ಅಲ್ಲಿ ಕಾಣಿಸಿದ ಜನರನ್ನು ಇಂಡಿಯನ್ನರೆಂದೇ ಕರೆದರು. ಭಾರತಕ್ಕೆ ದಾರಿ ಹುಡುಕಿದ ನಂತರ ಅಮೆರಿಕದ ಮೂಲನಿವಾಸಿಗಳನ್ನು `ರೆಡ್ ಇಂಡಿಯನ್' ಎಂದು ಕರೆಯತೊಡಗಿದರು. ಉತ್ತರ ಅಮೆರಿಕ ಖಂಡಕ್ಕೆ ಹೋದ ಬ್ರಿಟಿಷರು ಈ ಕೆಂಪು ಇಂಡಿಯನ್ನರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಬದಲು ಕ್ರೂರವಾಗಿ ಬೇಟೆಯಾಡಿ ಕೊಂದು ಅವರ ಜಾಗಗಳನ್ನೆಲ್ಲ ಆಕ್ರಮಿಸಿಕೊಂಡರು.ಸ್ವತಂತ್ರ ಮನೋಭಾವದ ಅಮೆರಿಕದ ಮೂಲನಿವಾಸಿ ಬುಡಕಟ್ಟಿನ ಜನರಿಗೆ ಬಿಳಿಯರ ಕಲ್ಪನೆಯ ಗುಲಾಮರಾಗುವುದು ಸಾಧ್ಯವಿರಲಿಲ್ಲ. ಅಷ್ಟು ವಿಸ್ತಾರವಾದ ಖಂಡವನ್ನೇ ಹಿಡಿದಿದ್ದರೂ ಅಲ್ಲಲ್ಲಿ ಕಾಡುಗಳಲ್ಲಿ ಹುಲ್ಲುಗಾವಲುಗಳಲ್ಲಿ ಪ್ರಕೃತಿ ಸಹಜವಾಗಿ ಬದುಕುತ್ತಿದ್ದ ಕೆಂಪು ಇಂಡಿಯನ್ನರ ನೆಲವನ್ನು ವಶಪಡಿಸಿಕೊಳ್ಳುವ ಬಿಳಿಯರ ದುರಾಸೆಗೆ ಮಿತಿಯೇ ಇರಲಿಲ್ಲ. ಆ ಹೊತ್ತಿನಲ್ಲಿ ನಾಗರಿಕತೆಯ ಅಹಂಗೆ ಬುಡಕಟ್ಟಿನ ನಾಯಕ ಕೊಟ್ಟ ಉತ್ತರ ಅದಾಗಿತ್ತು.ಇದು 1830ರಲ್ಲಿ ಅಮೆರಿಕ ಸರ್ಕಾರ ಹೊರಡಿಸಿದ ಕಾಯ್ದೆ `ಇಂಡಿಯನ್ ರಿಮೋವಲ್ ಆ್ಯಕ್ಟ್'ನ ಪರಿಣಾಮ. ಈ ಮೂಲನಿವಾಸಿಗಳು ನಾಮಾವಶೇಷವಾಗುತ್ತಾರೆಂಬುದು ಅಮೆರಿಕ ಸರ್ಕಾರಕ್ಕೂ ಅರಿವಿಗೆ ಬಂದಾಗ ಪ್ರಾಣಿಗಳ ರಿಸರ್ವ್ ಫಾರೆಸ್ಟ್‌ನಂತೆ ರೆಡ್ ಇಂಡಿಯನ್ನರಿಗೆ ಬೇಲಿ ಹಾಕಿ ಅದರಲ್ಲಿ ಬಿಡಲು ನಿರ್ಧರಿಸಿದರು.ಆಸ್ಟ್ರೇಲಿಯಾದಂತೆಯೇ ಅನಾಗರಿಕ ಮೂಲನಿವಾಸಿಗಳನ್ನು ನಾಗರಿಕರನ್ನಾಗಿಸುವ ಗುರುತರ ಜವಾಬ್ದಾರಿಯಿಂದ ಅಲ್ಲಿನ ಮಕ್ಕಳನ್ನೆಲ್ಲ ಕರೆದೋ, ಎಳೆದೋ ತಂದು ಮಿಷನರಿ ಶಾಲೆಗಳಿಗೆ ಸೇರಿಸಿದರು. ಈ ಶಾಲೆಗಳಲ್ಲೂ ಅವರು ಮಾಡಿದ ಮೊದಲ ಕೆಲಸವೆಂದರೆ ಸ್ಥಳೀಯರ ಭಾಷೆಯಲ್ಲಿದ್ದ ಹಕ್ಕಿ, ಮರ, ಭೂಮಿ, ಆಕಾಶ ಮೊದಲಾದವುಗಳ ಹೆಸರುಗಳನ್ನು ಬದಲಿಸಿದ್ದು.ಚೀಟಿ ಎತ್ತಿಸಿ ಅದರಲ್ಲಿ ಬಂದ ಹೊಸ ಹೆಸರುಗಳು ಜಾರ್ಜ್, ಜಾನ್, ಸೈಮನ್ ಎಂದು ಕರೆದು ಕ್ರೈಸ್ತರನ್ನಾಗಿಸಿದರು. ಉದ್ದಕ್ಕೆ ಸುರುಳಿ ಸುರುಳಿಯಾಗಿ ಇಳಿಬಿದ್ದಿದ್ದ ಕೂದಲನ್ನು ಕತ್ತರಿಸಿ ಹಾಕಿದರು. ಹೀಗೆ ನಾಗರಿಕ ಪ್ರಜೆಗಳನ್ನಾಗಿಸಲು ಕೆಂಪು ಇಂಡಿಯನ್ ಮಕ್ಕಳ ಬೋರ್ಡಿಂಗ್ ಶಾಲೆಗಳನ್ನು ತೆಗೆದು `ವೈಟ್‌ವಾಷ್' ಮಾಡಿದರು.ಪತ್ರದ ಕಡೆಯ ಸಾಲಿನಲ್ಲಿ ಡೂವಾಮಿಶ್ ಬುಡಕಟ್ಟಿನ ನಾಯಕ ಹೇಳುವ ಮಾತು ಇಂದಿಗೂ ಅರ್ಥಗರ್ಭಿತವಾಗಿದೆ. “ನಮಗೂ ನಿಮಗೂ ಇರುವ ದೇವರು ಒಬ್ಬನೇ. ನೀವು ಭೂಮಿಯನ್ನು ಆಳುವಂತೆ ದೇವರನ್ನು ಆಳುತ್ತಿದ್ದೀರಿ.” ರೆಡ್ ಇಂಡಿಯನ್ನರ ಈ ನಿರಂತರ ಹೋರಾಟದ ನಂತರವೂ ಅವರ ಭೂಮಿಯನ್ನು ಮರಳಿ ಪಡೆಯಲಾಗಲಿಲ್ಲ.ಆದರೆ ಈ ನೆಲವನ್ನು ನಾಗರಿಕ ಜಗತ್ತು ಉಗುಳುತ್ತಿರುವ ವಿಷದಿಂದ ಉಳಿಸಿಕೊಳ್ಳಬೇಕಾದರೆ ಮೂಲನಿವಾಸಿಗಳ ನಂಬಿಕೆಗಳಿಂದ ಮಾತ್ರ ಸಾಧ್ಯ. ನಾಗರಿಕ ನಶೆಯಲ್ಲಿರುವವರಿಗೆ ಈ ಅರಿವು ಬರುವ ಕಾಲಕ್ಕೆ ಹೊತ್ತುಮೀರದಿರಲಿ.

                   *ಆಫ್ರಿಕಾದ ಪ್ರಸಿದ್ಧ ಗಾಯಕ ಸೊಮಾಲಿಯಾ ದೇಶದ ಕ್ನಾನ್ ತನ್ನ ದೇಶವನ್ನು ಕುರಿತು ಹಾಡುವಾಗ ಎಂತಹವರ ಮನಸ್ಸೂ ಕಲಕುತ್ತದೆ. ಈ ಪೀಳಿಗೆಯ ಯುವಕನನ್ನು ಪಾಶ್ಚಿಮಾತ್ಯ ಸಂಸ್ಕೃತಿಯ ನಿರಂತರ ಆಕ್ರಮಣ ಉಸಿರುಕಟ್ಟಿಸಿದೆ.ಪುಟಿದೇಳಿಸುವ ರ‌್ಯಾಪ್ ಸಂಗೀತದೊಳಗೂ ಅಸಹಾಯಕತೆ, ಆಕ್ರೋಶ, ತೊಳಲಾಟವೇ ಉಕ್ಕಿಬರುತ್ತದೆ.

ಅವನ ಹಾಡಿನ ಸಾರಾಂಶ: ನಾನಿಲ್ಲಿ ಹುಟ್ಟಿದೆ, ಬೆಳೆದೆ, ಅದೇ ನನ್ನ ಹಾಡಿನ ಜೀವಾಳ. ಹೊಟ್ಟೆ ಕಟ್ಟಿದರೆ ತತ್ ನೋವೇ ನೀರಾಯಿತು. ಅವರು ಎಸೆದ್ರೆ ಹೈ ಮಿಕ್ಸಿಂಗ್ ಕೋಕ್ ಇಲ್ಲವಾದ್ರೆ ಗನ್ ಪೌಡರ್. ಮಾಡೆಲ್ ಆಗಬಹುದಾದ ಸ್ಟೆತಸ್ಕೋಪ್ ಹಿಡಿಯಬಲ್ಲ ಅವಳ ಕೈಗೆ ಇಟ್ಟವ್ರೆ ಗನ್.ಹಡಗುಗಳ್ಳರು ಸಾಗರಕ್ಕೆ ಬೆದರಿಕೆ ಹುಟ್ಟಿಸಿದ್ದಾರೆ, ರಾದ್ಧಾಂತವಾಗದ ದಿನವಿಲ್ಲ. ಕಣ್ಣು ಮುಚ್ಚಿದರೆ ಶವ ಪೆಟ್ಟಿಗೆಗಳು ಮುಚ್ಚುತ್ತಿರುವುದು ಕಾಣುತ್ತದೆ.ಈ ವೇದನೆ ಸೊಮಾಲಿಯಾದಿಂದ ಕೇಳಿ ಬಂದರೂ ಬಹುತೇಕ ಆಫ್ರಿಕಾ ದೇಶದ ಎಲ್ಲರ ನೋವು ಇದೇ ಆಗಿದೆ.

                       *ಇಂತಹ ಮಾಯದ ಸಂಸ್ಕೃತಿಯ ನಾಡಿನ ಮೂಲನಿವಾಸಿಗಳೇನಾದರು? ದಕ್ಷಿಣ ಅಮೆರಿಕ ಖಂಡಕ್ಕೆ ವಲಸೆ ಹೋದ ಪೋರ್ಚುಗೀಸರು, ಸ್ಪ್ಯಾನಿಷರು ಆ ಖಂಡವನ್ನೇ ತುಂಡು ಮಾಡಿಕೊಂಡರು. ಭೂಮಿ ಮೇಲೆ ವಾಸ ಮಾಡುವುದಕ್ಕೆ ಜಾಗ ಇದ್ದರೆ ಅದೆಲ್ಲಾ ಯೂರೋಪಿಯನ್ನರಿಗಾಗಿಯೇ ದೇವರು ಸೃಷ್ಟಿಸಿದ್ದು ಅಂತ ನಂಬಿದರು. ಯಾಕೆಂದರೆ ಹೋದಲ್ಲೆಲ್ಲ ಕಾಣುವ ಅನಾಗರಿಕರನ್ನು ನಾಗರಿಕರನ್ನಾಗಿಸುವ ಹೊರೆ ಹೊತ್ತಿದ್ದೇವೆಂದು ಸಾರಿದರು.  ಅದು ಬಿಳಿಯನ ಹೆಗಲ ಮೇಲೆ ಬಿದ್ದ ಹೊರೆ. ಲ್ಯಾಟಿನ್ ಮೂಲದ ಭಾಷೆಗಳನ್ನಾಡುವ ಜನ ಅಲ್ಲಿ ಹೋಗಿದ್ದರಿಂದ (ಪೋರ್ಚುಗೀಸ್ ಮತ್ತು ಸ್ಪ್ಯಾನಿಷ್) ಲ್ಯಾಟಿನ್ ಅಮೆರಿಕ ಎಂದೇ ಕರೆದರು.ಪ್ರಸಿದ್ಧ ಹಾಲಿವುಡ್ ನಿರ್ದೇಶಕ ಮೆಲ್ ಗಿಬ್ಸನ್, `ಅಪೊಕೊಲಿಪ್ಟೊ' ಎಂಬ ಸಿನಿಮಾ ತೆಗೆದು ದೊಡ್ಡ ಹೆಸರು ಮಾಡಿದ. ಸಿನಿಮಾದ ಜನ ಫಿಲಂ ಮೇಕಿಂಗ್ ಕಲಿಯಲು ಅದನ್ನು ಪಠ್ಯವೆಂಬಂತೆ ನೋಡಿದರು. ರಕ್ತ ಪ್ರಧಾನವಾದ ಆ ಚಿತ್ರದ ಬಗೆಗೂ ನೂರಾರು ಉತ್ತಮ ವಿಮರ್ಶೆಗಳು ಬಂದವು.ಅದರ ಕಥೆ ಇಷ್ಟೇ: ದಕ್ಷಿಣ ಅಮೆರಿಕದ ಮೂಲಬುಡಕಟ್ಟಿನಲ್ಲಿ ನರಬಲಿ ಆಚರಣೆಯಲ್ಲಿರುತ್ತದೆ. ಅದಕ್ಕಾಗಿ ಬೇರೆ ಬುಡಕಟ್ಟಿನ ಜನರನ್ನು ಬೇಟೆಯಾಡಿ ತಂದು ಎತ್ತರವಾದ ಬಲಿಪೀಠದಿಂದ ತಲೆಯನ್ನು ಕತ್ತರಿಸಿ ಉರುಳಿಸುವುದು ರೂಢಿ. ಮೆಟ್ಟಿಲ ಉದ್ದಕ್ಕೂ ರಕ್ತ ಹರಿದು ದೇವರನ್ನು ಸಂಪ್ರೀತಗೊಳಿಸುತ್ತದೆ. ಅಲ್ಲಿಂದ ತಪ್ಪಿಸಿಕೊಂಡ ನಾಯಕ ಹೇಗೋ ಜೀವ ಉಳಿಸಿಕೊಂಡಿದ್ದ ತನ್ನ ಹೆಂಡತಿಯೊಂದಿಗೆ ಸಮುದ್ರತೀರಕ್ಕೆ ಬರುತ್ತಾನೆ. ದೂರದಲ್ಲಿ ಪೋರ್ಚುಗೀಸ್ ಹಡಗು ಕಾಣುತ್ತದೆ, ಅದು ನಾಡಿಗೆ ಹೊಸ ಭರವಸೆಯನ್ನು ತರುತ್ತದೆ. ಇವರ ಮುಖದಲ್ಲಿ ಆಶಾಭಾವನೆ ಹೊರಹುಮ್ಮುತ್ತದೆ.ಕೋಟ್ಯಂತರ ಹಣ ಸುರಿದು ತೆಗೆದ ಈ ಸಿನಿಮಾ, ಪ್ರಪಂಚಕ್ಕೆ ಹೇಳಿದ ಸಂದೇಶವಾದರೂ ಏನು? ಯೂರೋಪಿಯನ್ನರಿಂದ ದಕ್ಷಿಣ ಅಮೆರಿಕದ ಜನ ನಾಶವಾಗಲಿಲ್ಲ. ಅವರು ಬರುವ ಹೊತ್ತಿಗೇ ನರಬಲಿಯಂತಹ ದುಷ್ಟ ಆಚರಣೆಗಳಿಂದ ಆ ಸಮಾಜ ಅಳಿವಿನಂಚಿನಲ್ಲಿತ್ತು. ನಾಶ ಹೊಂದುವ ಗುಣ ಮೂಲನಿವಾಸಿಗಳ ಸಂಸ್ಕೃತಿಯಲ್ಲಿ ಅಂತರ್ಗತವಾಗಿತ್ತು. ಆ ಹೊತ್ತಿಗೆ ಹೋದವರು ಬಿಳಿಯನಾಗರಿಕರು, ಉದ್ಧಾರಕರು.ವಸಾಹತುಶಾಹಿ ಬೆನ್ನಿಗೆ ಅಂಟಿಬಂದ ನಾಗರಿಕತೆಯ ಕುರುಡು ಅಹಂ, ಕಾಡುಗಳನ್ನು, ಪ್ರಾಣಿಪಕ್ಷಿಗಳನ್ನು ಮಾತ್ರವಲ್ಲ ಸಾವಿರಾರು ಮಾನವ ಸಂಸ್ಕೃತಿಗಳನ್ನು ಹೊಸಕಿಹಾಕಿತು. ನವನಾಗರಿಕತೆ ನವವಸಾಹತುಶಾಹಿಯ ಹೊಸ ಮುಖಗಳಲ್ಲಿ ತನ್ನ ರುದ್ರನರ್ತನವನ್ನು ಮುಂದುವರೆಸಿದೆ. ಜೀವಜಾಲವನ್ನೇ ಪ್ರೀತಿಸುವ ನೆಲಮೂಲದ ನಂಬಿಕೆಗಳನ್ನು ನಾವಿಂದು ಮತ್ತೆ ಅರಸಿಹೋಗಬೇಕಾಗಿದೆ.ನಿಮ್ಮ ಅನಿಸಿಕೆ ತಿಳಿಸಿ:  editpagefeedback@prajavani.co.in

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.